‘ಚಲಿಸುವ ಕಾಲವನ್ನೂ ಒಂದು ಕ್ಷಣ ಸ್ಥಿರವಾಗಿ ಸೆರೆಹಿಡಿಯುವ ಶಕ್ತಿ ಫೋಟೋಗ್ರಫಿಗಿದೆ’: ವಿ.ಕೆ. ವಿನೋದ್‌ ಕುಮಾರ್‌

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

‘ಚಲಿಸುವ ಕಾಲವನ್ನೂ ಒಂದು ಕ್ಷಣ ಸ್ಥಿರವಾಗಿ ಸೆರೆಹಿಡಿಯುವ ಶಕ್ತಿ ಫೋಟೋಗ್ರಫಿಗಿದೆ’: ವಿ.ಕೆ. ವಿನೋದ್‌ ಕುಮಾರ್‌

Updated : 19.08.2022

ಚಲಿಸುವ ಕಾಲದ ಪ್ರತೀ ಕ್ಷಣಗಳನ್ನೂ ಇವತ್ತು ಸೆರೆಹಿಡಿದು ವಿಶ್ವದಾದ್ಯಂತ ಜನರಿಗೆ ಹಂಚುವ ಸಾಧ್ಯತೆಯನ್ನು ಡಿಜಿಟಲ್‌ ಫೋಟೋಗ್ರಫಿ ಸಾಧ್ಯವಾಗಿಸಿದೆ ಎನ್ನುತ್ತಾರೆ ಖ್ಯಾತ ಛಾಯಾಗ್ರಾಹಕ ವಿ.ಕೆ. ವಿನೋದ್ ಕುಮಾರ್. ವಿಶ್ವ ಛಾಯಾಗ್ರಹಣ ದಿನದ ಹಿನ್ನೆಲೆಯಲ್ಲಿ ಅವರು ಬರೆದ ವಿಶೇಷ ಲೇಖನ ನಿಮ್ಮ ಓದಿಗಾಗಿ.

ಮನುಷ್ಯ ತನ್ನನ್ನು ತಾನು ಅಭಿವ್ಯಕ್ತಿ ಪಡಿಸಲು ಆಯ್ದುಕೊಂಡ ವಿವಿಧ ಕಲಾಪ್ರಾಕಾರಗಳಲ್ಲಿ ಫೋಟೋಗ್ರಫಿ ಕೂಡಾ ಒಂದು. ದೃಶ್ಯ ಮಾದ್ಯಮದ ಬಹು ಮುಖ್ಯ ಅಂಗ ಫೋಟೋಗ್ರಫಿ. ಚಲಿಸುವ ಕಾಲವನ್ನೂ ಒಂದು ಕ್ಷಣದ ಮಟ್ಟಿಗೆ ಸ್ಥಿರವಾಗಿಸಿ ಸೆರೆಹಿಡಿಯುವ ಶಕ್ತಿ ಫೋಟೋಗ್ರಫಿ ಎಂಬ ಮಾಧ್ಯಮಕ್ಕಿದೆ.

ಸರಿ ಸುಮಾರು 1826-1827 ರಲ್ಲಿ ಮೊಟ್ಟ ಮೊದಲನೇ ಛಾಯಾಚಿತ್ರ ಸೆರೆಹಿಡಿಯಲಾಯ್ತು ಎಂಬ ಮಾಹಿತಿಯಿದೆ. ಅಲ್ಲಿಂದ ಕಾಲಕಾಲಕ್ಕೆ ವಿವಿಧ ಆವಿಷ್ಕಾರಕ್ಕೆ ಒಳಪಟ್ಟು ಇದೀಗ ಪ್ರತೀ ವ್ಯಕ್ತಿಯನ್ನೂ ಒಬ್ಬ ಫೋಟೋಗ್ರಾಪರ್‌ ನನ್ನಾಗಿ ಮಾಡಿರುವ ಹಿರಿಮೆ ವಿಜ್ಞಾನ-ತಂತ್ರಜ್ಞಾನಕ್ಕಿದೆ.

ಇಂದು, ಆಗಸ್ಟ್‌ 19, ವಿಶ್ವ ಛಾಯಾಗ್ರಹಣ ದಿನ. ಕಲೆ, ವಿಜ್ಞಾನ ಮತ್ತು ಛಾಯಾಗ್ರಹಣದ ಇತಿಹಾಸದ ಬಗ್ಗೆ ಅರಿಯುವ, ಅರಿವು ಮೂಡಿಸುವ ಪ್ರಯುಕ್ತ ಸಂಭ್ರಮಿಸುವ ದಿನ.
ತಂತ್ರಜಾನವನ್ನೇ ಉಸಿರಾಡುತ್ತಿರುವ ಯುವಜನರು ತುಂಬಿರುವ ಈ ಕಾಲಘಟ್ಟದಲ್ಲಿ ಛಾಯಾಗ್ರಹಣ ಮೊದಲಿನಂತೆ ಕಬ್ಬಿಣದ ಕಡಲೆಯೇನಲ್ಲ, ಹಾಗಂತ ಬಾಳೆ ಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭವೂ ಅಲ್ಲ.! ಯಾವುದೇ ಕಲೆಯನ್ನು ಒಲಿಸಿಕೊಳ್ಳಲು ಅತ್ಯಗತ್ಯವಾಗಿ ಬೇಕಾದ ತಾಳ್ಮೆ ಶ್ರದ್ದೆ ಈ ಫೋಟೋಗ್ರಫಿಗೆ ತುಸು ಹೆಚ್ಚೇ ಬೇಕು. ನೆರಳು ಬೆಳಕನ್ನು ಅರಿತು ಅದರ ಸ್ವರೂಪವನ್ನೇ ಚಿತ್ರವಾಗಿಸುವ ಕಲಾನೈಪುಣ್ಯತೆ ಅಷ್ಟು ಸುಲಭವೇನಲ್ಲ. ಆದರೆ ಬದಲಾಗುತ್ತಿರುವ ಕಾಲದಲ್ಲಿ ನೂತನ ತಂತ್ರಜ್ಞಾನ ಪೋಟೋಗ್ರಫಿಯನ್ನು ಸ್ವಲ್ಪ ಮಟ್ಟಿಗೆ ಸುಲಭ ಮಾಡಿಸಿದ್ದು ಮಾತ್ರವಲ್ಲ, ಹೆಚ್ಚೆಚ್ಚು ಜನರನ್ನು ಫೋಟೋಗ್ರಫಿ ಕಡೆಗೆ ಸೆಳೆದಿರುವದು ಸುಳ್ಳಲ್ಲ.
    
ಪ್ರಕೃತಿ ಸೌಂದರ್ಯಕ್ಕೆ ಸೋಲದ ಮನುಷ್ಯರೇ ಇಲ್ಲ. ಪ್ರತೀ ಕ್ಷಣ ಒಂದಲ್ಲ ಒಂದು ಆಶ್ಚರ್ಯಕರ ಘಟನೆಗೆ ಸಾಕ್ಷಿಯಾಗುವ ಪ್ರಕೃತಿಯ ವಿಶ್ಮಯಗಳನ್ನು ಜನರಿಗೆ ತಲುಪಿಸುವಲ್ಲಿ ಫೋಟೋಗ್ರಫಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಡಿಜಿಟಲ್‌ ಫೋಟೋಗ್ರಫಿಯಂತೂ ಇವತ್ತು ಪ್ರತೀ ವ್ಯಕ್ತಿಯೊಳಗಿನ ಸುಪ್ತ ಕಲಾವಿದನನ್ನು ಹೊರ ತರುತ್ತಿದೆ. ದೈನಂದಿನ ಬದುಕಿನ ಅನಿವಾರ್ಯ ವಿಷಯ ಅನ್ನುವಂತ ಮೊಬೈಲ್‌ ಫೋನ್‌ ಕ್ಯಾಮರಾಗಳೇ ಇವತ್ತು ಜಗತ್ತಿಗೆ ಸುದ್ದಿಯನ್ನು ಚಿತ್ರಗಳ ಸಮೇತ ಪ್ರಸರಿಸುವ ಬಹುಮುಖ್ಯ ಮಾಧ್ಯಮವಾಗಿದೆ. ಚಲಿಸುವ ಕಾಲದ ಪ್ರತೀ ಕ್ಷಣಗಳನ್ನೂ ಇವತ್ತು ಸೆರೆಹಿಡಿದು ವಿಶ್ವದಾದ್ಯಂತ ಜನರಿಗೆ ಹಂಚುವ ಸಾಧ್ಯತೆಯನ್ನು ಡಿಜಿಟಲ್‌ ಫೋಟೋಗ್ರಫಿ ಸಾಧ್ಯವಾಗಿಸಿದೆ.
 
ಮನುಷ್ಯನ ವೈಯುಕ್ತಿಕ ಬದುಕಿನ ಪ್ರತೀ ಹಂತದಲ್ಲಿಯೂ ಇಂದು ಫೋಟೋಗ್ರಫಿಯ ಪಾತ್ರ ದೊಡ್ಡದಿದೆ. ಪ್ರತೀ ಘಟನೆಯನ್ನೂ ಸಾಕ್ಷೀಕರಿಸಿಕೊಳ್ಳುವ, ಆ ಮೂಲಕ ನಿನ್ನೆಯನ್ನು ನಾಳೆಗಳಿಗೂ ಕೊಂಡುಹೋಗುವ ಅವಕಾಶ ಕಲ್ಪಿಸಿಕೊಟ್ಟಿದ್ದು ಫೋಟೋಗ್ರಫಿ ಎಂಬ ಮಾಯೆಯೇ ಹೌದು!
    
ನಾನು ಕಳೆದ 11 ವರ್ಷಗಳಿಂದ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿದ್ದು ಪ್ರಕೃತಿ, ಹಕ್ಕಿ ಮತ್ತು ಕೀಟಗಳ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಪ್ರಯತ್ನದ ಮೂಲಕ ನನ್ನನ್ನು ನಾನು ಪ್ರಕೃತಿಯೊಂದಿಗೆ ಸಮೀಕರಿಸಿಕೊಂಡು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಫೋಟೋಗ್ರಫಿಯ ಮೂಲಕ ನಾನು ಕಂಡ ಪ್ರಕೃತಿ ಮತ್ತು ಅದರ ವಿಸ್ಮಯಗಳು ನನಗೆ ಹೊಸಾ ಬದುಕನ್ನೇ ಕಾಣಿಸಿದೆ. ಪ್ರಕೃತಿಯ ಅಗಾಧತೆಯನ್ನು ನನ್ನ ಪುಟ್ಟ ಕ್ಯಾಮರಾದ ಮೂಲಕ ಸೆರೆ ಹಿಡಿಯುವ ವ್ಯರ್ಥ ಪ್ರಯತ್ನಗಳಲ್ಲೇ ನನ್ನ ಬದುಕಿನ ಅಗಾಧತೆಯನ್ನು ಕಂಡುಕೊಳ್ಳುತ್ತಾ ಪ್ರಕೃತಿಯ ಮುಂದೆ ಮಾನವ ಅದೆಷ್ಟು ಕುಬ್ಜ ಅನ್ನಿಸುವ ಸತ್ಯವನ್ನೂ ಕಂಡುಕೊಂಡಿದ್ದೇನೆ. ಮನುಷ್ಯನ ಬರೀಗಣ್ಣಿಗೆ ಕಾಣದಂತ ಅತ್ಯಂತ ಸಣ್ಣ ಜೀವಿಗಳಲ್ಲಿಯೂ ಇರುವ ಅಗಾಧ ಶಕ್ತಿ ಪ್ರಕೃತಿಯ ಅಗಾಧತೆಗೆ ಒಂದು ಸಾಕ್ಷಿ!
    
ಹೀಗೇ, ಚಲಿಸುವ ಕಾಲದ ಪ್ರತೀ ಗಳಿಗೆಯನ್ನು ಫೋಟೋಗ್ರಫಿ ಮೂಲಕ ಸೆರೆಹಿಡಿದು ವಿಶ್ವದ ಮೂಲೆ ಮೂಲೆಗೂ ತಲುಪಿಸುವ, ಆ ಮೂಲಕ ಜನರನ್ನು ಸದಾ ಸಂಪರ್ಕದಲ್ಲಿರುವಂತೆ ಮಾಡುವ, ಪರಸ್ಪರ ಕಂಡುಕೊಳ್ಳಲು ಸಹಕರಿಸುವ ಫೋಟೋಗ್ರಫಿ ಎಂಬ ಈ ಮಾಯಾಜಾಲದಲ್ಲಿ ತೊಡಗಿಕೊಂಡಿರುವ  ಜಗತ್ತಿನ ಎಲ್ಲಾ ಫೋಟೋಗ್ರಫರ್‌ಗಳಿಗೂ, ಫೋಟೋಗ್ರಫಿಯನ್ನು ಪ್ರೀತಿಸುವ ಪ್ರತೀ ವ್ಯಕ್ತಿಗೂ ವಿಶ್ವ ಫೋಟೋಗ್ರಫಿ ದಿನದ ಪ್ರೀತಿಯ ಶುಭಾಶಯಗಳು.

ವಿ.ಕೆ. ವಿನೋದ್‌ ಕುಮಾರ್‌
ಕುಶಾಲನಗರ, ಕೊಡಗು ಜಿಲ್ಲೆ
9448710058
ವಿ.ಕೆ. ವಿನೋದ್ ಕುಮಾರ್ ಅವರ ಕೆಲವು ಛಾಯಾಚಿತ್ರಗಳು: