Flash News:
ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 04.10.2022

“ಈ ದಿನ ಯಾಕಾದರೂ ಬರುತ್ತದೊ?” ಸಾಮ್ರಾಟ ಸಿಡಿಮಿಡಿ ಅನ್ನುತ್ತಿದ್ದ.

ಪ್ರತಿ ವರ್ಷ ಇದೇ ದಿನ ರಾಜಘಾಟಿಗೆ ತೆರಳಿ, ರಾಷ್ಟ್ರಪಿತ ಗಾಂಧೀಜಿಯ ಸಮಾಧಿಗೆ ಹೂಗುಚ್ಚವಿರಿಸಿ, ಸ್ವಲ್ಪ ಹೊತ್ತು ಧ್ಯಾನಸ್ಥನಾಗಿ ಪ್ರಾರ್ಥಿಸಿದಂತೆ ನಟಿಸಿ ಬರುವುದು ನಡೆದಿದೆಯಷ್ಟೆ. “ಎಷ್ಟೂಂತ ನಾಟಕವಾಡೋದು. ಗೋಡ್ಸೆಯೇ ನಮಗೆ ಯಾವತ್ತೂ ರಾಷ್ಟ್ರಪಿತ. ಈ ಬಾರಿ ಅಲ್ಲಿಗೆ ಹೋಗೋಲ್ಲ” ಎಂದ ಸಾಮ್ರಾಟನ ಮಾತಿಗೆ ಚಡ್ಡಿಗೆಳೆಯ ಅಪರಿಮಿತ ಕುತಂತ್ರಿ ಗಹಗಹಿಸಿ ನಕ್ಕ.

“ಅಲ್ಲಪ…ನೀನು ಜಗತ್ತಿನ ಎಲ್ಲಾ ನಟರನ್ನು ಮೀರಿಸೊ ಅಪ್ರತಿಮ, ಪ್ರತಿಭಾವಂತ ನಟ. ಸಿನಿಮಾದಲ್ಲಿ ನೀನೇನಾದರೂ ನಟಿಸಿದ್ದರೆ ಇಷ್ಟೊತ್ತಿಗೆ ಅದೆಂಥದೊ ಫೇಮಸ್ ಅವಾರ್ಡ್ ಇದೆಯಲ್ಲ…” ಎಂದು ನೆನಪಿಸಿಕೊಳ್ಳುವಂತೆ ಹಣೆ ಮುಟ್ಟಿಕೊಳ್ಳುವಾಗ, ಸಂಪ್ರೀತನಾದ ಸಾಮ್ರಾಟ “ಒಸ್ಕರ್ ಅವಾರ್ಡಾ?” ಅಂದ. “ಹ…ಅದೇ..ಒಸ್ಕರ್ ಅವಾರ್ಡ್ ಸಿಗ್ತಿತ್ತು. ನಟ ಯಾವತ್ತು ಪಾತ್ರವನ್ನು ಆವಾಹಿಸಿಕೊಳ್ಳಬೇಕೆ ಹೊರತು ಪಾತ್ರದೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸಬಾರದು. ಅದು ಅಲ್ಲದೆ – ಮಹಾತ್ಮ ಎಂದರೆ ಸತ್ಯ, ಅಹಿಂಸೆ, ಸತ್ಯಾಗ್ರಹ, ಅಸಹಕಾರ, ಸರ್ವೋದಯ ಎಂಬ ನೆನಪನ್ನು ದೇಶದಲ್ಲಿ ಅಳಿಸಿಹಾಕಲು ನಾವು ಎಷ್ಟೆಲ್ಲ ಸರ್ಕಸ್ ಮಾಡಿದ್ದೇವೆ. ತಾವೇ ಚರಕಾಸನ ಹಾಕಿ ಚರಕದಲ್ಲಿ ನೂಲು ತೆಗೆಯುವ ಪೋಸು ಕೊಟ್ಟು, ಫೋಟೊ ಸೆಶೆನ್ ಮಾಡಿ, ಅದಕ್ಕೆ ಭಾರೀ ಪ್ರಚಾರನೂ ಮಾಡಿದ್ವಿ. ಆಮೇಲೆ, ಮಹಾತ್ಮನ ಕನ್ನಡಕವನ್ನು ಕಿತ್ತು, ಅದರಲ್ಲಿ ಸ್ವಚ್ಚ್ - ಭಾರತ್ ಎಂದು ಬರೆದು ಪೋಸ್ಟರ್ ಹಾಕಿ, ಅದು ಕಸ ಗುಡಿಸೋದಕ್ಕೆ ಮಾತ್ರ ಇರುವುದು ಎಂದು ಹೇಳಿದ್ದಾಯ್ತು. ಬಂದ ಭಾಗ್ಯವೇನು? ನಮ್ಮ ಭಕ್ತಗಣಗಳು ಉಧೋ ಅಂದರೆ ಹೊರತು,  ಜನರು “ಸಾಮ್ರಾಟನ ತೆವಲುಗಳು ಒಂದೇ..ಎರಡೇ…ದಿನಕ್ಕೊಂದು ಪ್ರಕಟವಾಗುತ್ತೆ. ಚರಕದಲ್ಲಿ ನೂಲು ತೆಗೆದಂತೆ ನಟಿಸಿದರೆ ಸಾಮ್ರಾಟ ರಾಷ್ಟ್ರಪಿತ ನಾಗುತ್ತಾನೆಯೇ? ಸಾಮ್ರಾಟ ಆ ಮಹಾತ್ಮನ ಪಾದಧೂಳಿಗೂ ಸಮನಲ್ಲ” ಎಂದು ಅಪಹಾಸ್ಯ ಮಾಡಿ ಕುಹಕವಾಡಿದರು. ಆ ಮಾತಿಗೆ ತಾವು ಸಿಟ್ಟು ಮಾಡಿಕೊಂಡು, ಸಾಮಂತರಾಜನೊಬ್ಬನ ಕಿವಿಕಚ್ಚಿ ಅವನು ನಿಮ್ಮನ್ನು ರಾಷ್ಟ್ರಪಿತ ಎಂದು ಕರೆಯುವಂತೆ ಮಾಡಿದೀರಿ!. ಏನಾಯ್ತು….ಜನರು ಮತ್ತೆ ಸಾಮ್ರಾಟ ರಾಷ್ಟ್ರಪಿತ ಅಲ್ಲ ರಾಷ್ಟ್ರಪಿತ್ತ ಎಂದು ಆಡಿಕೊಂಡರು....” ಎಂದು ಅಪರಿಮಿತ ಕುತಂತ್ರಿ ಮತ್ತೂ ಹೇಳುವವನಿದ್ದ.

ಸಾಮ್ರಾಟ ಮೊದಲಿಗೆ ಕುತಂತ್ರಿ ತನ್ನನ್ನು ಹೊಗಳುತ್ತಿದ್ದಾನೆಂದು ಕೊಂಡರೆ, ಇವನೂ ತನ್ನನ್ನು ಗೇಲಿ ಮಾಡುತ್ತಿದ್ದಾನೆನಿಸಿ  “ಸಾಕು..ನಿಲ್ಲಿಸಪ್ಪ ನಿನ್ನ ಉಪದೇಶ….ಏನ್ ಮಾಡ್ಬೇಕ್ ಅದನ್ನು ಮೊದಲು ಹೇಳು” ಅಂದ. “ಬಕೆಟ್ ಸ್ವಾಮಿ ಆಗ್ಲಿಂದ ಕಾಯ್ತಿದ್ದಾನೆ. ಮೊದ್ಲು ಬೆಳಗಿನ ಕಾರ್ಯವನ್ನು ಮುಗಿಸಿ, ಸಮಾಧಿಗೆ ಹೋಗಿ ಹೂಗುಚ್ಚ ಇರಿಸಿ ಬನ್ನಿ…ಗೋಡ್ಸೆ ನಮ್ಮ ದೇವರು ಅಂತ ಪಬ್ಲಿಕ್ಕಲ್ಲಿ ಏನಾದ್ರು ಬಾಯ್ಬಿಟ್ಟೀರ…ಜೋಕೆ…ದೇಶವಿದೇಶದ ಜನರು ಕ್ಯಾಕರಿಸಿ ಉಗಿದು ಉಪ್ಪಿನಕಾಯಿ ಹಾಕ್ತಾರೆ “ ಎಂದ. ಮತ್ತೇನೊ ನೆನಪಿಸಿಕೊಂಡವನಂತೆ “ ಹ..ಮರೆತ್ತಿದ್ದೆ. ಇವತ್ತೇ ವಾಟ್ಸಾಪ್ ಯೂನಿವರ್ಸಿಟಿಯ ಘಟಿಕೋತ್ಸವವಿದೆ. ಮರೀ ಬೇಡಿ” ಎಂದವನು,  “ಯಾವುದನ್ನು ನಾವು ಮಾಡಬೇಕು. ಯಾವುದನ್ನು ಭಕ್ತರಿಂದ ಮಾಡಿಸಬೇಕು ಎಂಬ ಸಾಮಾನ್ಯಜ್ಞಾನ ಕೂಡ ಈ ದಡ್ಡನಿಗೆ ಇಲ್ಲ. ಬರೀ ನವಿಲಿಗೆ ಕಾಳು ಹಾಕೋದೊಂದು ಗೊತ್ತು “ ಎಂದು ಗೊಣಗಿಕೊಂಡ.

ಮಹಾತ್ಮನ ಸಮಾಧಿಗೆ ಹೂಗುಚ್ಚವಿರಿಸಿದ ಸಾಮ್ರಾಟ, ಸಂದರ್ಭಕ್ಕೆ ಕಳೆಗಟ್ಟಲಿ ಎಂದು, ಬಕೆಟ್ ಹಿಡಿಯಲು ಸದಾ ಸಾಲುಗಟ್ಟಿ ಕಾತರಿಸುವ ಪತ್ರಕರ್ತರ ಕ್ಯಾಮೆರಾಗಳತ್ತ ತಿರುಗಿ ಒಂದಷ್ಟು ಮೊಸಳೆ ಕಣ್ಣೀರನ್ನು ಹಾಕಿದ.   

ವಾಟ್ಸಾಪ್ ಯೂನಿವರ್ಸಿಟಿಯ ಘಟಿಕೋತ್ಸವದ ಕಾರಣವಾಗಿ ಎಲ್ಲೆಲ್ಲೂ ಕೇಸರಿಧ್ವಜಗಳು ಹಾರಾಡುತ್ತಿದ್ದವು. ಭಕ್ತಗಣಗಳು ಕೇಸರಿ ಗೌನ್, ತಲೆಗೆ ಕೇಸರಿ ಟೊಪ್ಪಿಗೆ ಇರಿಸಿ, ಕೈಯಲ್ಲಿ ಮೊಬೈಲ್  ಐಪಾಡ್ ಹಿಡಿದುಕೊಂಡು ಪದವಿ ಪಡೆವ ಖುಷಿಯಲ್ಲಿ ಅಪಾರ ಸಂಖ್ಯೆಯಲ್ಲಿ  ಸಭಾಂಗಣದಲ್ಲಿ ನೆರೆದಿದ್ದರು. ಸಾಮ್ರಾಟ ಬರುವುದನ್ನೇ ಕಾಯುತ್ತ ಎಲ್ಲರೂ ತದೇಕಚಿತ್ತದಿಂದ ದೊಡ್ಡ ಎಲ್ ಇಡಿ ಪರದೆಯತ್ತ ನೋಡುತ್ತಿದ್ದರು. ಹಠಾತ್ತನೇ ಸಾಮ್ರಾಟ ಪರದೆಯಲ್ಲಿ ಮೂಡಿ ಬಂದಾಗ ಭಕ್ತರು ತಟ್ಟೆ, ಜಾಗಟೆ ಬಡಿಯುತ್ತ ಕುಣಿದಾಡಿದರೆ, ವೇದಿಕೆಯಲ್ಲಿ ಶಂಖ, ಮಂಗಳವಾದ್ಯ ಮೊಳಗಿದವು. “ಸಾಮ್ರಾಟನಿಗೆ ಜಯವಾಗಲಿ….ಸಾಮ್ರಾಟ ಚಿರಂಜೀವಿಯಾಗಲಿ…ದೇಶದೊಳಗಿನ ಶತ್ರು ದೇಶವಾಸಿಗಳು ನಿರ್ನಾಮವಾಗಲಿ. ಸನಾತನ ಧರ್ಮ ಉಳಿಯಲಿ…ವೈರಿ ಧರ್ಮ ಬರ್ಬಾದಾಗಲಿ” ಎಂಬಿತ್ಯಾದಿ ಘೋಷಣೆಗಳು ಸಭಾಂಗಣದ ತಾರಸಿ ಹಾರಿ ಹೋಗುವಂತೆ ಅಬ್ಬರಿಸಿದವು.

“ಮೇರ ಪ್ಯಾರೆ ವಿದ್ಯಾರ್ಥಿಯೊ…ಭಕ್ತಗಣೊ…ನಾವು ಪಟ್ಟಾಭಿಷಕ್ತರಾಗುವುದಕ್ಕೂ ಮುಂಚೆ ಈ ದೇಶದಲ್ಲಿದ್ದ ವಿಶ್ವವಿದ್ಯಾಲಯದಲ್ಲಿ ಬುದ್ಧಿಜೀವಿಗಳೆನಿಕೊಂಡವರು, ಇತಿಹಾಸಕಾರರು ನಮ್ಮ ವೈರಿಗಳಿಗೆ ಬೇಕಾದಂತೆ ಇತಿಹಾಸವನ್ನು ರಚಿಸಿದ್ದಾರೆ. ಅವೆಲ್ಲಾ ಸುಳ್ಳಿನ ಕಂತೆಗಳು. ಈ ನಾಡಿನ ಮಣ್ಣನ್ನು ಅಗೆದು, ಬಗೆದು ಸತ್ಯವನ್ನು, ಅಸಲೀ ಇತಿಹಾಸವನ್ನು ಕಂಡುಹಿಡಿಯುವುದಕ್ಕಾಗಿ ನಮ್ಮ ಅಧಿಕಾರದಲ್ಲಿ ವಾಟ್ಸಾಪ್ ಯೂನಿವರ್ಸಿಟಿಯನ್ನು ಸ್ಥಾಪಿಸಿದೆವು. ನಿಮಗೆಲ್ಲ ತಿಳಿದಂತೆ ಈ ಯೂನಿವರ್ಸಿಟಿಯ ಪ್ರವೇಶಕ್ಕೆ ಯಾವುದೇ ಪದವಿ ಬೇಕಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಾಲೆಯ ಮುಖ ನೋಡದ ನಿರಕ್ಷರಕುಕ್ಷಿಗಳು, ಅಬ್ಬೇಪಾರಿಯಿಂದಿಡಿದು ಅಡ್ಡಕಸುಬಿಗಳು, ಮನೆಯಲ್ಲೇ ಕೂತು ನಮ್ಮ ಭಜನೆ ಮಾಡುವ ಗೃಹಿಣಿಯರು, ನಿರುದ್ಯೋಗಿ  ದೇಶಭಕ್ತರು, ಧರ್ಮರಕ್ಷಕರು...ಹೀಗೆ ಯಾರೂ ಬೇಕಾದರೂ ಇತಿಹಾಸ ಬರೆಯಬಹುದು. ಆದರೆ – ಅಂಥವರಿಗೆ ಎರಡು ಅರ್ಹತೆಗಳು ಇರಲೇಬೇಕು. ಮೊದಲಿಗೆ ಅವರು ನಮ್ಮ ಅಖಂಡ ಭಕ್ತರಾಗಿರಬೇಕು…ಮತ್ತು ಕೈಲೊಂದು ಮೊಬೈಲ್ ಇರಬೇಕು.

ನೀವೆಲ್ಲ ನಮ್ಮ ಐಟಿ ಸೆಲ್ ಕಳುಹಿಸಿದ ಪಠ್ಯಗಳನ್ನು ಚೆನ್ನಾಗಿ ಅರೆದು ಕುಡಿದು, ಕಷ್ಟಪಟ್ಟು ಯೂನಿವರ್ಸಿಟಿಯ ಪದವೀಧರರಾಗಿದ್ದೀರ…ನಿಮಗೆಲ್ಲ ಅಭಿನಂದನೆಗಳು. ಮುಂದೆ ನೀವುಗಳು ಇಷ್ಟಕ್ಕೆ ತೃಪ್ತರಾಗದೆ, ಇಲ್ಲಿರುವ ಅನೇಕರಂತೆ ಅಧ್ಯಯನವನ್ನು ಮುಂದುವರೆಸಿ ಪಿ ಎಚ್ ಡಿಯನ್ನು ಪಡೆದು ಪಂಡಿತರಾಗಬೇಕು” ಎಂದು ಸಾಮ್ರಾಟ ಹೇಳುತ್ತಲೇ ವಿದ್ಯಾರ್ಥಿಗಳು ಮತ್ತೆ ಸಾಮ್ರಾಟನಿಗೆ ಜಯಕಾರ ಹಾಕಿದರು.

ಸಮಾರಂಭದ ಮುಂದುವರೆದ ಭಾಗವಾಗಿ ವೇದಿಕೆಯ ಮೇಲೆ ಒಬ್ಬೊಬ್ಬರನ್ನು ಕರೆದು ಕೇಸರಿ ಶಾಲನ್ನು ಹೊದೆಸಿ, ಪದವೀಧರರಿಗೆ ವಾಟ್ಸಾಪ್ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಹಾಗೆ ಪ್ರಮಾಣ ಪತ್ರವನ್ನು ಪಡೆದವರು ಎಲ್ ಇಡಿ ಪರದೆಯಲ್ಲಿದ್ದ ಸಾಮ್ರಾಟನಿಗೆ ಸಾಷ್ಟಾಂಗ ನಮಸ್ಕರಿಸಿದರೆ, ತಥಾಸ್ತು ಎಂಬಂತೆ ಸಾಮ್ರಾಟ ಆಶೀರ್ವಾದ ಮಾಡುತ್ತಿದ್ದ.

ಈಗ ವಾಟ್ಸಾಪ್ ಪಿ ಎಚ್ ಡಿ ಅಧ್ಯಯನ ಮಾಡಿದವರಿಗೆ ‘ಪಂಡಿತ’ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಹಾಗೆ ಸನ್ಮಾನಿಸುವಾಗ ಅವರು ಅಧ್ಯಯನದ ವಿಷಯಗಳನ್ನು ಮೈಕಿನಲ್ಲಿ ಕೂಗಿ ಹೇಳಲಾಯಿತು. ಅವುಗಳಲ್ಲಿ ಕೆಲವು ಹೀಗಿದ್ದವು –ಮಹಾತ್ಮರನ್ನು ಕೊಂದ ಗೋಡ್ಸೆ ಒಬ್ಬ ದೇಶಭಕ್ತ – ಒಂದು ಚಿಂತನೆ : ಹವಾನಿಯಂತ್ರಿತ ಜೈಲಿನಲ್ಲಿ ನೆಹರೂರ ವಿಲಾಸಿ ಜೀವನ ಮತ್ತು  ಸ್ವಾತಂತ್ರ್ಯಹೋರಾಟ : ಕಾಲಾಪಾನಿಯನ್ನು ಅಮೃತವಾಗಿಸಿಕೊಂಡ ಬುಲ್ ಬುಲ್ ಹಕ್ಕಿ ಸವಾರ ಸರ್ವಾಕರ್ – ವೀರ ಆದದ್ದು : ಗೋವಾಳ್ಕರ್ ಕಲ್ಪನೆಯ ಸನಾತನ ಅಸಮಾನತೆಯ ಸುವರ್ಣ ಭಾರತ : ಸಾವರ್ಕರರ ಆರ್ಭಟಕ್ಕೆ ಕಾಲ್ಕಿತ್ತ ಬ್ರಿಟಿಷರು – ದೇಶದ ವಿಮೋಚನೆ.

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವದ ಸುದ್ಧಿಯನ್ನು ದಿನಪತ್ರಿಕೆಯಲ್ಲಿ ಓದುತ್ತಿದ್ದ ಇತಿಹಾಸದ ಮೇಷ್ಟ್ರು ವರದಿ ನೋಡಿ ಹೌಹಾರಿದ. “ಈ ಸಾಮ್ರಾಟನಿಗೇನು ತಲೆ ಕೆಟ್ಟಿದೇಯ! ಪಠ್ಯಪುಸ್ತಕದಲ್ಲಿರುವ ಪಾಠ ಓದಿಕೊಂಡ ಮಕ್ಕಳು, ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳು ಸಂಶೋಧನೆಗಳನ್ನು ನೋಡಿದರೆ ಗೊಂದಲಗೊಳ್ಳುವುದಿಲ್ಲವೇ?” ಎಂದರೆ, ಗೂಡಂಗಡಿಯಲ್ಲಿ ಜರ್ದಾ ಪಾನ್ ಬೀಡವನ್ನು ಖರೀದಿ ಮಾಡುತ್ತಿದ್ದ ಭಕ್ತನೊಬ್ಬ “ಯೋಚ್ನೆ ಮಾಡಬೇಡಿ…ಮೇಷ್ಟ್ರೆ! ಇನ್ಮೇಲೆ ವಾಟ್ಸಾಪ್ ಯೂನಿವರ್ಸಿಟಿ ಸಿಲಬಸ್ಸನ್ನೇ ಸ್ಕೂಲು ಕಾಲೇಜುಗಳ ಪಾಠಗಳಲ್ಲಿ ಹಾಕೋ ಯೋಜನೆ ಸಾಮ್ರಾಟರು ಮಾಡುತ್ತಿದ್ದಾರೆ” ಎಂದ. ಇತಿಹಾಸ ಮೇಷ್ಟ್ರು “ಆಗಲಿ ಬಿಡಪ್ಪ…ಗೋಡ್ಸೆ ಸ್ವಾತಂತ್ರ್ಯ ಹೋರಾಟಗಾರ…ಸಾವರ್ಕರ್ ರಾಷ್ಟ್ರಪಿತ….ಸಾಮ್ರಾಟ ಮೊದಲ ಪ್ರಧಾನಮಂತ್ರಿ... ಹಾಗಾದ್ರೆ…ಭಕ್ತರು ಕುಣಿದಾಡಬಹುದು…ಆದ್ರೆ ಜಗತ್ತಿನಲ್ಲೆಡೆ ಸಾಮ್ರಾಟನ ಮುಖಕ್ಕೆ ಚೆನ್ನಾಗಿ ಉಗಿಯೋದಂತು ಗ್ಯಾರಂಟಿ!” ಎಂದ.

ಇಡೀ ಜೀವನದುದ್ದಕ್ಕೂ ಸತ್ಯ, ಸತ್ಯವೆಂದು ಹಂಬಲಿಸಿದ ಬಾಪುವಿನ ಜನ್ಮದಿನವೇ ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿದ ಇತಿಹಾಸದ, ದಿಟದ ವೇಷ ತೊಟ್ಟ ಸುಳ್ಳುಗಳು ಎಗ್ಗಿಲ್ಲದೆ ಹರಿದಾಡಿ ಸಂಭ್ರಮಿಸುವುದು ದೇಶವೇ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು.  

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News