ವಿಶ್ವ ಹಿಂದೂ ಪರಿಷತ್ತಿನ ಧರ್ಮಪ್ರೇಮ ಮತ್ತು ಬೂಟಾಟಿಕೆ: ಉಮರ್ ಫಾರೂಕ್ ಅವರ ವಾರದ ಅಂಕಣ

ವಿಶ್ವ ಹಿಂದೂ ಪರಿಷತ್ತಿನ ಧರ್ಮಪ್ರೇಮ ಮತ್ತು ಬೂಟಾಟಿಕೆ: ಉಮರ್ ಫಾರೂಕ್ ಅವರ ವಾರದ ಅಂಕಣ

Updated : 23.07.2022

ವಿಶ್ವ ಹಿಂದೂ ಪರಿಷತ್‌ನವರೇ ನಿಮಗೆ ನಿಮ್ಮ ಧರ್ಮದ ಮೇಲಿನ ಪ್ರೇಮಕ್ಕಿಂತ, ದೇವರ ಮೇಲಿನ ಭಕ್ತಿಗಿಂತ, ಮುಸ್ಲಿಮರ ಮೇಲಿನ ದ್ವೇಷವೇ ಹೆಚ್ಚಾಯಿತಾ? ಹಾಗಾದಲ್ಲಿ ನಿಮ್ಮ ಧರ್ಮರಕ್ಷಣೆಯ ಮಾತುಗಳೆಲ್ಲವೂ ಕೇವಲ ಬೂಟಾಟಿಕೆಯಲ್ಲದೇ ಮತ್ತಿನ್ನೇನು? ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕನೊಬ್ಬ ಕಾವೇರಿ ಮಾತೆಯನ್ನು, ಕೊಡವ ಮಹಿಳೆಯರನ್ನು ತೀರಾ ತುಚ್ಛವಾಗಿ ಅವಹೇಳನ ಮಾಡಿದ್ದಾನೆ ಎಂಬ ಕಪೋಲ ಕಲ್ಪಿತ ಸುದ್ದಿ ಬಿರುಗಾಳಿಯಂತೆ ಹರಡಿದ್ದೇ ತಡ, ಸದಾ ಜೇಬಿನಲ್ಲೊಂದು ಬೆಂಕಿ ಪೊಟ್ಟಣ ಇಟ್ಟುಕೊಂಡು ತಿರುಗುವ ವಿಶ್ವ ಹಿಂದೂ ಪರಿಷತ್‌ ಕಡ್ಡಿ ಗೀರುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿತ್ತು. ಕೊಡಗು ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿತ್ತು.

ಅದೃಷ್ಟವಶಾತ್‌, ಕೊಡಗಿನ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ದಿವಿನ್‌ ದೇವಯ್ಯ ಎಂಬ ಐನಾತಿ ಯುವಕನ ಮುಸ್ಲಿಂ ಯುವಕನ ಹೆಸರಲ್ಲಿ, ತಾನೇ ಖಾತೆಯೊಂದನ್ನು ತೆರೆದು ಕೊಡವ ಮಹಿಳೆಯರ, ಕಾವೇರಿ ಮಾತೆಯ ಕುರಿತು ತೀರಾ ಅವಹೇಳನ ಮಾಡಿದ್ದಾನೆ ಎಂಬ ಸತ್ಯ ಹೊರಬಂದಿತು. ಅಕಸ್ಮಾತ್‌ ಪೊಲೀಸರು ತಮ್ಮ ಕರ್ತವ್ಯವನ್ನು ಯಾರ ಮುಲಾಜಿಗೂ ಒಳಗಾಗದೇ ನಿರ್ವಹಿಸದಿದ್ದಿದ್ದರೆ? ಆಗುತ್ತಿದ್ದ ಕೊಡಗಿನ ಪರಿಸ್ಥಿತಿಯನ್ನು ನೆನೆಸಿಕೊಂಡರೇನೆ ಎದೆ ಝಲ್ಲೆನ್ನುತ್ತದೆ. ಈಗೆಲ್ಲಿ ಹೋಯಿತು ವಿಶ್ವ ಹಿಂದೂ ಪರಿಷತ್ತಿನವರ ಕೊಡಗನ್ನು ಬಂದ್‌ ಮಾಡುವ ಧೈರ್ಯ, ಶೌರ್ಯ, ಸ್ಥೈರ್ಯ? ಮಡಿಕೇರಿಯಲ್ಲಾಗುತ್ತಿರುವ ಮಹಾಮಳೆಯಲ್ಲಿ ಬತ್ತಿ ಹೋಯಿತೇ? ನಿಮಗೆ ಧರ್ಮದ ಮೇಲಿನ ಪ್ರೇಮಕ್ಕಿಂತ, ದೇವರ ಮೇಲಿನ ಭಕ್ತಿಗಿಂತ ಮುಸ್ಲಿಮರ ಮೇಲಿನ ದ್ವೇಷವೇ ಹೆಚ್ಚಾಯಿತಲ್ಲ - ಇದು ನಿಮ್ಮ ಭಂಡತನಕ್ಕೆ ಸಾಕ್ಷಿ.

ಬಾಂಬ್‌ ಹಾಕಿದವನು ಮಾತ್ರ ಭಯೋತ್ಪಾದಕನಲ್ಲ, ಇನ್ನೊಬ್ಬರ ಮನೆಯನ್ನು ಸುಡಲೆಂದು ಜೇಬಿನಲ್ಲೊಂದು ಬೆಂಕಿಪೊಟ್ಟಣವನ್ನು ಇಟ್ಟುಕೊಂಡವನು ಸಹ ಭಯೋತ್ಪಾದಕನೇ! ವಿಶ್ವ ಹಿಂದೂ ಪರಿಷತ್ತಿನ ವಿಧ್ವಂಸಕ ಕೃತ್ಯಗಳು ದೇಶಕ್ಕೆ ಇದೆ ಮೊದಲೇನೂ ಅಲ್ಲವಲ್ಲ? ಈ ಹಿಂದೆಯೂ ಬಿಹಾರದ ಭಾಗಲ್ಪುರ್‌ ಜಿಲ್ಲೆಯಲ್ಲಿ 200 ಹಿಂದೂ ಸಂಸ್ಕೃತ ವಿದ್ಯಾರ್ಥಿಗಳನ್ನು ಮುಸ್ಲಿಮರು ಕೊಂದು ಬಾವಿಯಲ್ಲಿ ಮುಚ್ಚಿ ಹಾಕಿದ್ದಾರೆ ಎಂದು, ಇದೇ ದುರುಳ ವಿಶ್ವ ಹಿಂದೂ ಪರಿಷತ್‌ ಸುಳ್ಳು ಸುದ್ದಿ ಹರಡಿತ್ತು. ಪತ್ರಿಕೆಗಳಲ್ಲಿ ಇದು ಸುಳ್ಳು ಸುದ್ದಿ. ಮುಸಲ್ಮಾನರು ಯಾರನ್ನೂ ಕೊಂದಿಲ್ಲʼ ಎಂದು ಪ್ರಕಟವಾಯಿತಾದರೂ, ಅದಾಗಲೇ ಹಿಂದೂ ಫೆನೆಟಿಕ್‌ ಗುಂಪುಗಳು ಬಹಳ ಸಬಲವಾಗಿ ಹರಡಿದ್ದ ಸುಳ್ಳು ಸುದ್ದಿಯಿಂದ ಭಾಗಲ್ಪುರ ಹಿಂಸಾತ್ಮಾಕ ವಾತಾವರಣಕ್ಕೆ ಸಜ್ಜಾಗಿತ್ತು. ಪರಿಣಾಮ 2 ತಿಂಗಳುಗಳ ಕಾಲ ನಡೆದ ಹತ್ಯಾಕಾಂಡದಲ್ಲಿ ಸಾವಿರಕ್ಕೂ ಹೆಚ್ಚು ಮುಸ್ಲಿಮರ ಮಾರಣಹೋಮವೇ ನಡೆಯಿತು. ಅಸಂಖ್ಯಾತ ಮುಸ್ಲಿಮ್‌ ಮಹಿಳೆಯರನ್ನು ಅತ್ಯಾಚಾರ ಮಾಡಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವೇ ಕೋಮುಗಲಭೆಯ ಕಿಚ್ಚೆಬ್ಬಿಸುವುದು. ಘಳಿಗೆಯಲ್ಲೇ ಶಮನವಾಗುವ ಘಟನೆಯನ್ನು ಭೂತಕಾರವಾಗಿ ಬೆಳೆಸುವುದು. ಉರಿಯುವ ಬೆಂಕಿಗೆ ತುಪ್ಪ ಸುರಿದು, ಜನ ಜೀವನಕ್ಕೆ ಬೆಂಕಿ ಇಟ್ಟು, ನೆಮ್ಮದಿಯನ್ನು ಭಸ್ಮ ಮಾಡುವುದು. ಬಹುಷಃ ಇದೇ ಕಾರಣಕ್ಕಾಗಿಯೇ ಈ ಸಂಘಟನೆ ಜನ್ಮ ತಾಳಿರಬೇಕು. ಇವರಿಗೆ ಪರಮತ ಸಹಿಷ್ಣುತೆಯ ವಿಚಾರ ಬಿಡಿ, ಸ್ವಧರ್ಮ ಪ್ರೇಮವೂ ಗೊತ್ತಿಲ್ಲ, ದೇವರ ಮೇಲೂ ಭಕ್ತಿ ಇಲ್ಲ. ಸ್ವತಃ ತಮ್ಮ ಮಹಿಳೆಯರ ಮೇಲೆಯೇ ಗೌರವ ಇಲ್ಲ. ಈ ಲಜ್ಜೆಗೆಟ್ಟವರಿಗೆ ಗೊತ್ತಿರುವುದು ಮುಸ್ಲಿಂ ದ್ವೇಷ ಮಾತ್ರ.

© Copyright 2022, All Rights Reserved Kannada One News