Flash News:
ಉರಿದ ಊರಿನ ಪ್ರೇಮಪತ್ರ: ಫೈಝ್ ವಿಟ್ಲ ಅವರ ಕವಿತೆ

ಉರಿದ ಊರಿನ ಪ್ರೇಮಪತ್ರ: ಫೈಝ್ ವಿಟ್ಲ ಅವರ ಕವಿತೆ

Updated : 31.07.2022

ಅವಳ ಮುಂಗೋಪವನ್ನು,
ಶುದ್ಧ ಮಗುತನದ ಆಸೆಗಳನ್ನು
ಎಷ್ಟು ಉತ್ಕಟವಾಗಿ ಹಚ್ಚಿಕೊಂಡಿದ್ದೇನೆ
ಎಂಬುದನ್ನು
ತೀವ್ರವಾಗಿ ಬರೆಯಬೇಕೆಂದಷ್ಟೇ
ನಾನು ಕೂರುತ್ತೇನೆ.
 
ಆರ್ದ್ರವಾಗಿ ನನ್ನೆಲ್ಲಾ ಭಾವನೆಗಳನ್ನು
ಬರೆದು ಅವಳ ವಿಳಾಸದ ಅಂಚೆ ಡಬ್ಬಿಗೆ
ಹಾಕಿ ಬಂದು ಮುಗ್ಧವಾಗಿ ಉತ್ತರಕ್ಕೆ
ಕಾಯಬೇಕು ಎಂದುಕೊಳ್ಳುತ್ತೇನೆ
ಎಷ್ಟೋ ಬಾರಿ.
 
ಆದರೆ,
ಚರಿತ್ರೆಯ ಪಾಠಗಳು ನನ್ನನ್ನು ಸುಮ್ಮನೆ
ಕನಸಲು ಬಿಡುವುದಿಲ್ಲ.
ಡಿಟೆನ್ಶನ್ ಕ್ಯಾಂಪಿನಲ್ಲಿ ಉಸಿರುಗಟ್ಟಿದವರಿಂದ
ಗುಜರಾತಿನ ಗಲ್ಲಿಯವರೆಗಿನ
ಅಮ್ಮಂದಿರ ಕೂಗು ನನ್ನ
ರಾತ್ರಿಗಳನ್ನು ಕಸಿದುಕೊಳ್ಳುತ್ತವೆ
ಅಮಾನುಷವಾಗಿ.
 
ಅವಳ ವಿಳಾಸಕ್ಕೆ ಕಳುಹಿಸಿದ ಪತ್ರ
ಅಂಚೆಡಬ್ಬಿಯೊಂದಿಗೆ ಹೊತ್ತಿಯುರಿದಂತೆ,
ಅವಳ ವಿಳಾಸದಲ್ಲಿ; ಆಗಷ್ಟೇ ಸುಟ್ಟ-
ಗೋಡೆಯಲ್ಲಿ ಸುರುಳಿ ಸುರುಳಿಯಾಗಿ
ಹೊಗೆ ಏಳುವಂತೆ..
ಅಥವಾ..
ಅಥವಾ..
ಇನ್ನೂ ಸ್ಟಾಂಪಿಸದ ಅರ್ಧ ಸುಟ್ಟ ಪತ್ರ
ನನ್ನೊಂದಿಗೆ ದಫನಗೊಂಡ
ಹಾಗೆ ಕನಸುಗಳು ಬೀಳುತ್ತವೆ.
 
ಧ್ವೇಷ ತುಂಬಿಕೊಂಡು
ಹೊತ್ತಿ ಉರಿಯಲು ಸಿದ್ಧವಾಗಿಬಿಟ್ಟ
ಊರಿನ ಬಾಗಿಲಲ್ಲಿ ಪ್ರೇಮಪತ್ರ
ಬರೆದವರ ಕತೆಯಿದ್ದರೆ ಹೇಳಿ;
ಅವಳ ವಿಳಾಸದ ಅಂಚೆಡಬ್ಬಿಗೆ
ಪತ್ರ ಹಾಕಲು ನನ್ನ ಬಳಿಯೂ
ವಿಷಯಗಳಿವೆ.

-ಫೈಝ್ ವಿಟ್ಲ
 


© Copyright 2022, All Rights Reserved Kannada One News