Flash News:
ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

Updated : 25.09.2022

ಕೋಲಾರ: ‘ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಬಾಲಕ ದೇವರ ಗುಜ್ಜಕೋಲು ಮುಟ್ಟಿದನೆಂದು ಗ್ರಾಮದ ಕೆಲವರು ದಂಡ ವಿಧಿಸಿದ್ದಾರೆ. ನಿಮಗೆ ದಂಡ ತಾನೇ ಬೇಕು? ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ಘಟಕದಿಂದ ದಂಡ ಕಟ್ಟಲು ನಾವು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್‌.ಧರ್ಮಸೇನ ಸವಾಲು ಹಾಕಿದ್ದಾರೆ.

ಶನಿವಾರ ಉಳ್ಳೇರಹಳ್ಳಿಗೆ ಭೇಟಿ ನೀಡಿ ಸಂತ್ರಸ್ತ ಬಾಲಕನ ಕುಟುಂಬವನ್ನು ಭೇಟಿಯಾದ ಬಳಿಕ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ. ದಲಿತರ ರಕ್ಷಣೆಗೆ ಮುಂದಾಗದಿದ್ದರೆ ಈ ಸರ್ಕಾರ ಹೆಚ್ಚು ದಿನ ಇರಲ್ಲ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಇದೂವರೆಗೂ ಒಬ್ಬ ಸಚಿವನೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ದಲಿತರ ಹೆಸರಿನಲ್ಲಿ ಸ್ಥಾನಮಾನ ಪಡೆದಿರುವ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಬಂದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಉಳ್ಳೇರಹಳ್ಳಿ ಘಟನೆ ನಂತರ ಬಾಲಕನ ತಾಯಿ ಶೋಭಾ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಏನಾದರೂ ಅನಾಹುತವಾದರೆ ಬಿಜೆಪಿ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

© Copyright 2022, All Rights Reserved Kannada One News