ಭಾರತವನ್ನು ಯಾಮಾರಿಸಿದ ಮೋದಿ ಮಾಧ್ಯಮಗಳು!: ಉಮರ್‌ ಫಾರೂಕ್‌ ಅವರ ವಾರದ ಅಂಕಣ

ಭಾರತವನ್ನು ಯಾಮಾರಿಸಿದ ಮೋದಿ ಮಾಧ್ಯಮಗಳು!: ಉಮರ್‌ ಫಾರೂಕ್‌ ಅವರ ವಾರದ ಅಂಕಣ

Updated : 10.09.2022

ದೇಶದ ಪ್ರಗತಿಯಲ್ಲಿ ತನ್ನದೇ ರೀತಿಯಲ್ಲಿ ಮಾಹಿತಿ ಕ್ರಾಂತಿಯ ಮೂಲಕ ಅಭೂತಪೂರ್ವ ಸೇವೆ ಮಾಡಬೇಕಿರುವ ಮಾಧ್ಯಮಗಳಿಗೆ, ಜವಾಬ್ದಾರಿ ಅನ್ನೋದು ಸ್ವಲ್ಪ ಜಾಸ್ತಿಯೇ ಇರುತ್ತದೆ. ಆರಂಭದಲ್ಲಿ ಆ ಜವಾಬ್ದಾರಿಯನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರುತ್ತಿದ್ದ ಸುದ್ದಿ ಮಾಧ್ಯಮಗಳು, ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಬೇಜವಾಬ್ದಾರಿತನದ ವರ್ತನೆ ತೋರುತ್ತಿರುವುದಕ್ಕೆ ದೇಶ ಅಧಃಪತನದತ್ತ ತಲುಪುತ್ತಿದೆ. ಆ ಜವಾಬ್ದಾರಿಗಳನ್ನು ಮಾಧ್ಯಮಗಳಿಗೆ ನೆನಪಿಸಿಕೊಡಬೇಕಾಗಿ ಬಂದದ್ದೂ ನಿಜಕ್ಕೂ ಭಾರತೀಯರ ದುರ್ದೈವವೇ ಸರಿ.

ಅದರಲ್ಲೂ ಕೆಲ ಮಾಧ್ಯಮಗಳಿವೆ – ಅವು ಬಿಜೆಪಿ, ಆರೆಸ್ಸೆಸ್ ಮತ್ತು ನರೇಂದ್ರ ಮೋದಿಯವರ ಮುಖವಾಣಿಯಾಗಿಯೇ ಕೆಲಸ ಮಾಡ್ತಿವೆ. ಅವರಿಗೆ ತಮ್ಮ ಕರ್ತವ್ಯದ ಬಗ್ಗೆಯಾಗಲಿ, ಸಾಮಾಜಿಕ ನ್ಯಾಯ, ಪ್ರಜ್ಞೆಯ ಬಗ್ಗೆಯಾಗಲೀ ಕಿಂಚಿತ್ತೂ ಗೊತ್ತಿಲ್ಲ. ಮೋದಿಗೆ ಮನಬಂದಂತೆ ಹೊಗಳಿ ಹೊಗಳಿ ಅಟ್ಟಕ್ಕೇರಿಸಬೇಕು ಅಷ್ಟೇ. ಒಬ್ಬ ವ್ಯಕ್ತಿಯಿಂದ ಈ ದೇಶ ಎಕ್ಕುಟ್ಟೋದ್ರು ಅವರಿಗೆ ಚಿಂತೆ ಇಲ್ಲ. ಮಾನ್ಯ ಪ್ರಧಾನಮಂತ್ರಿಗಳಾದ ಮೋದಿಯವರು, ದೇಶದ ಚುಕ್ಕಾಣಿ ಹಿಡಿದ ದಿನದಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ, ವಾಕ್ ಸ್ವಾತಂತ್ರ್ಯವನ್ನ ದಮನಿಸುವ ಪ್ರಯತ್ನ ಮಾಡುತ್ತಿದ್ದಾರೆ, ಹಿಟ್ಲರನನ್ನೂ ಮೀರಿಸುವಂತೆ ಒಂದೆಜ್ಜೆ ಮುಂದೆ ಹೋಗಿ ಅಘೋಷಿತ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದಾರೆ, ಅವರಿಗೆ ಹೇಳೋರಿಲ್ಲ, ಕೇಳೋರಿಲ್ಲ ಅಂತ ಈ ನೆಲದ ಸಾಕ್ಷಿಪ್ರಜ್ಞೆಗಳಾದ ಬುದ್ದಿಜೀವಿಗಳು, ಪ್ರಗತಿಪರರು ನಿರಂತರವಾಗಿ ಮೋದಿಯವರ ಮೇಲೆ ಆರೋಪ ಮಾಡುತ್ತಾ ಈ ದೇಶದ ಶೋಷಿತರ ಪರವಾಗಿ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಬುದ್ದಿಜೀವಿಗಳು, ಪ್ರಗತಿಪರರು ಮಾಡುತ್ತಿರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿತ್ತು. ಒಂದು ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಿದ್ದ ಪತ್ರಕರ್ತರು ಸರ್ಕಾರಗಳ ಒಳ್ಳೇ ಕೆಲಸಕ್ಕೆ ಶಹಬ್ಬಾಸ್ಗಿರಿ ಕೊಟ್ಟು, ತಪ್ಪು ಮಾಡಿದಾಗ ಕಿವಿ ಹಿಂಡಿ ಬುದ್ದಿ ಹೇಳಬೇಕಿತ್ತು. ಆದ್ರೆ ಈಗ ಆಗ್ತಿರೋದೇನು? ಇದುವರೆಗೆ ಅಂದ್ರೆ ಮೋದಿಯವರು ತಾವು ಪ್ರಧಾನಿಯಾದ ಈ ಎಂಟು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಮಾಡಿಲ್ಲ, ಪತ್ರಕರ್ತರೊಂದಿಗೆ ಸಂವಾದ ಮಾಡಿಲ್ಲ. ದೇಶದಲ್ಲಾಗುತ್ತಿರುವ ಅನ್ಯಾಯ ಅತ್ಯಾಚಾರಗಳ ಬಗ್ಗೆ ಕನಿಷ್ಠ ಕನಿಕರವನ್ನೂ ವ್ಯಕ್ತಪಡಿಸಿಲ್ಲ. ಆದರೂ ಅವರಿಗೆ ತಮ್ಮ ಅಕ್ಷರಗಳನ್ನು, ಮಾತುಗಳನ್ನು ಅಡವಿಟ್ಟಿರುವ ಈ ಗೋದಿ ಮೀಡಿಯಾಗಳು ಪ್ರಧಾನಿಯವರಿಗೆ ಪರಾಕು ಹೇಳುವುದನ್ನೇ ತಮ್ಮ ದಿನನಿತ್ಯದ ಕಾಯಕವನ್ನಾಗಿ ಮಾಡಿಕೊಂಡು ಬಿಟ್ಟಿವೆ. ಏನ್ ದುರಂತ ರೀ ಈ ದೇಶದ್ದು? ಭಾರತವನ್ನು ಹಾಳು ಮಾಡುವ ಕೆಲಸದಲ್ಲಿ ಆರೆಸ್ಸೆಸ್ ಮತ್ತು ಸಂಘ ಪರಿವಾರದೊಂದಿಗೆ ಈ ಮಾಧ್ಯಮಗಳು ಸಹ ಪೈಪೋಟಿಗಿಳಿದು ಬಿಟ್ಟಿವೆ.

ಮೋದಿಯವರ ಈ ಎಂಟು ವರ್ಷದ ಈ ಆಡಳಿತದ ಚಲನವಲನಗಳನ್ನು ನೋಡುವಾಗ ಅವರು ಅಕ್ಷರಶಃ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಅನ್ನುವ ಬುದ್ಧಿಜೀವಿಗಳ ಆರೋಪದಲ್ಲಿ ಯಾವುದೇ ತಪ್ಪಿಲ್ಲ ಅನ್ಸುತ್ತೆ. ಯಾಕಂದ್ರೆ ಮೋದಿ ಎಮ್ಮೆ ಚರ್ಮದವರಾಗಿ ವರ್ತಿಸುತ್ತಿರುವುದು ಒಂದರ್ಥದಲ್ಲಿ ನಿಜವೇ ಆಗಿದೆ. ಯಾಕಂದ್ರೆ ಈ ದೇಶದಲ್ಲಿ ಮೋದಿಯವರು ಮಾಡಿದ ಕಾನೂನೇ ಅಂತಿಮ ಸತ್ಯ ಎನ್ನುವಂತೆ ಹೇಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಳ್ಳಿ ಇಡುವ ಕೆಲಸವನ್ನು ಮಾನಗೆಟ್ಟ ಮಾಧ್ಯಮಗಳು ಮಾಡುತ್ತಿವೆ. ಯಾಕಂದ್ರೆ ಇಲ್ಲಿಯವರೆಗೆ ಮೋದಿಯವರಿಂದ ಹಲವು ಜೀವ ವಿರೋಧಿ ಕಾನೂನು ಕಾಯ್ದೆಗಳು ಜಾರಿಗೊಂಡಿವೆ. ಅವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಹೋರಾಟಗಾರರಿಗೆ ಬೆಂಬಲಿಸಬೇಕಿದ್ದ ಮಾಧ್ಯಮಗಳು, ತಮ್ಮ ಪತ್ರಿಕಾ ಧರ್ಮವನ್ನು ಅಡವಿಟ್ಟು ಅದೇ ಹೋರಾಟಗಾರರನ್ನು ದೇಶದ್ರೋಹಿಗಳಂತ ಬಿಂಬಿಸಿ, ಮೋದಿಯವರ ಅಮೇಧ್ಯವನ್ನ ಗಂಟಲಿಗೂ ತಾಗದಂತೆ ನುಂಗಿ ತಾವೆಷ್ಟು ನಿಷ್ಠರಾಗಿದ್ದೇವೆ ಅನ್ನೋದನ್ನ ಸಾಬೀತು ಪಡಿಸಿದ್ದರು.

ಉದಾಹರಣೆಗೆ ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನ ಗಾಳಿಗೆ ತೂರಿ ಓP̧ಖ ಓಖ̧̧ಅ & ಅಂಂ ಯಂತಹ ಮಾರಕ ಕಾಯ್ದೆಗಳು ಮತ್ತು ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳು ಚಲಾವಣೆಗೆ ಬಂದಿದ್ದವು. ಇವನ್ನು ವಿರೋಧಿಸಿ ಇಡೀ ಜಗತ್ತೇ ಬೆಚ್ಚಿ ಬೆರಗಾಗುವಂತ ಉನ್ನತ ಮಟ್ಟದ ಪ್ರತಿಭಟನೆಗಳು ನಡೆದವು. ಅಸಲಿಗೆ ಈ ಕಾಯ್ದೆಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಬರೆದ ಮರಣಶಾಸನಗಳಾಗಿದ್ದವು. ಆದ್ರೆ ಇವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಹೋರಾಟಗಾರರಿಗೆ ಬೆಂಬಲಿಸಬೇಕಿದ್ದ ಅಥವಾ ಇದ್ದದ್ದನ್ನ ಇದ್ದಂಗೆ ತೋರಿಸಬೇಕಿದ್ದ ಮಾಧ್ಯಮಗಳು, ಆ ಹೋರಾಟಗಾರರನ್ನೇ ದೇಶದ್ರೋಹಿಗಳಂತ ಬಿಂಬಿಸುವ ಪ್ರಯತ್ನವನ್ನ ಮಾಡಿದವು. ಪೌರತ್ವ ತಿದ್ದುಪಡಿ ಕಾಯ್ದೆಗಳ ವಿರೋಧಿ ಹೋರಾಟಗಾರರನ್ನು ಪಾಕಿಸ್ತಾನಿ ಬೆಂಬಲಿತ ಹೋರಾಟಗಾರರು ಅಂತ ಬಿಂಬಿಸಿದರೆ, ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನ ಖಲಿಸ್ತಾನಿಗಳೆಂದು ಬಿಂಬಿಸಿದರು. ಈ ಮೂಲಕ ಮೋದಿಯವರ ಮಾರಕ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕಾಗಿ ಬಿಜೆಪಿಗಿಂತ ಮಾಧ್ಯಮಗಳೇ ಹೆಚ್ಚು ಶ್ರಮ ವಹಿಸಿದವು.

ಅಸಲಿಗೆ ಮಾಧ್ಯಮಗಳ ಅಜೆಂಡಾವೇ ಬೇರೆ ಇದೆ. ಈ ದೇಶವನ್ನು ಸದಾ ದ್ವೇಷದ ಬೆಂಕಿಯಲ್ಲಿ ಬೇಯುವಂತೆ ಮಾಡಿ, ಅಭಿವೃದ್ದಿ ಕುರಿತು ಜನರು ಚಿಂತಿಸದೇ ಇರುವಷ್ಟರ ಮಟ್ಟಿಗೆ ಅವರನ್ನು ಆಳವಾಗಿ ಪ್ರಭಾವಿಸುವುದೇ ಆರೆಸ್ಸೆಸ್ ಮತ್ತು ಬಿಜೆಪಿಯ ಉದ್ದೇಶ. ಮತ್ತು ಅವರ ತಾಳದಂತೆ ಮಾಧ್ಯಮಗಳು ಸಹ ಕುಣಿಯುತ್ತಿವೆ. ಸುಮಾರು 32 ಲಕ್ಷ ಚದರ ಕಿಲೋ ಮೀಟರ್ಗೂ ಹೆಚ್ಚು ವಿಸ್ತೀರ್ಣ ಮತ್ತು 135 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಎಲ್ಲೋ ಒಂದು ಕಡೆ, ಯಾರೋ ನಾಲ್ಕಾರು ಜನ ನಿರುದ್ಯೋಗಿ ಪುಂಡರು ಹಲಾಲ್ ವಿರುದ್ಧ, ಆಜಾನ್ ವಿರುದ್ಧ ಮಾತಾನಾಡಿದರೆ, ಅದನ್ನು ಇಡೀ ದೇಶವೇ ಮಾತನಾಡಿದೆ ಅಂತ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೊಟ್ಟು, ಈ ದೇಶದ ಅಂತಸತ್ವಃವಾದ ಸೌಹಾರ್ದತೆಯನ್ನು ಭೇದಿಸಿ, ಜನಜೀವನಕ್ಕೆ ಕೊಳ್ಳಿ ಇಡುವ ಕೆಲಸವನ್ನ ಮಾಧ್ಯಮಗಳು ಮಾಡ್ತಿವೆ ಅಂದ್ರೆ ಇದಕ್ಕಿಂತ ದುರಾದೃಷ್ಟದ ಕೆಲಸ ಬೇರೆ ಇನ್ನೇನಿದೆ?

ಭಾರತದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿ ಬಿಟ್ಟಿದೆ. ನಾ ಖಾವುಂಗಾ, ನಾ ಖಾನೇದೂಂಗಾ ಎನ್ನುತ್ತಲೇ 40% ಭ್ರಷ್ಟಚಾರ ಈಗೀಗ 50% ಗಿಂತಲೂ ಹೆಚ್ಚಾಗಿದೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಹಿಂದಿನ ಸರ್ಕಾರಗಳು ಶ್ರಮವಹಿಸಿ ನಿರ್ಮಿಸಿದ್ದ ದೇಶದ ಪ್ರತಿಷ್ಠಿತ ಸಾರ್ವಜನಿಕ ಆಸ್ತಿಗಳು, ಯಾರೋ ಒಂದಿಬ್ಬರು ಉದ್ಯಮಿಗಳ ಪಾಲಾಗುತ್ತಿವೆ, ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ, ನಿನ್ನೆ ರಿಬ್ಬನ್ ಕಟ್ ಮಾಡಿ ಲೋಕಾರ್ಪಣೆ ಮಾಡಿದ ಬ್ರಿಡ್ಜ್ಗಳು ಇವತ್ತು ಬಿದ್ದೋಗುತ್ತಿವೆ. ದೇಶದ ಮಹಾನಗರಗಳೆಲ್ಲಾ ಮಳೆಗೆ ನೀರಿಗೆ ಮುಳುಗಿ, ಜನರು ಪರದಾಡುತ್ತಿದ್ದಾರೆ. ಇಷ್ಟೆಲ್ಲಾ ಆಗಿದ್ದು ಸಾಲದು ಅಂತ, ಹತ್ತಿಪ್ಪತ್ತು ವರ್ಷ ಕಷ್ಟ ಪಟ್ಟು ದುಡಿದು, ಮನೆ ಕಟ್ಟೋಕೆ, ಮಕ್ಕಳ ಮದುವೆ ಮಾಡಿಸೋಕೆ ಬ್ಯಾಂಕ್ನಲ್ಲಿ ಹಣ ಇಟ್ಟರೆ ಸೇಫ್ ಆಗಿರ್ತದೆ ಅಂತ ಇಟ್ರೆ, ಆ ದುಡ್ಡನ್ನು ಬಾಚಿ ಬಡಿದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಗ್ರಾಹಕರು ತಿಂಗಳಲ್ಲಿ 5 ಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದ್ರೆ 5ರ ನಂತರದ ಪ್ರತಿ ವಿತ್ಡ್ರಾಗೂ ಜಿಎಸ್ಟಿ ಸೇರಿ 118 ರೂ ಶುಲ್ಕ ಕಟ್ಟಬೇಕು. ಒಂದು ತಿಂಗಳಲ್ಲಿ ಹತ್ತು ಬಾರಿ ಹಣ ಡ್ರಾ ಮಾಡಿದ್ರೆ 590 ರೂ ಶುಲ್ಕ ಕಡಿತವಾಗುತ್ತದೆ. ಚೆಕ್ ಬುಕ್ ಬೇಕಾದ್ರೂ, ಜಿಎಸ್ಟಿ ಶುಲ್ಕ ಸೇರಿ 148 ರೂ ಕೊಡ್ಲೇಬೇಕು.

ಮೊಬೈಲ್ ಸಂಖ್ಯೆ, ಪಾಸ್ಬುಕ್ ಬದಲಾಯಿಸಿದರೂ, 50 ರಿಂದ 100 ಶುಲ್ಕ ಕಟ್ಟಬೇಕು. ಸರ್ಕಾರದಿಂದ ಜನರ ಮೇಲೆ ಇಷ್ಟಲ್ಲಾ ಬರೆ ಬೀಳುತ್ತಿದ್ದರೂ ಮಾಧ್ಯಮಗಳು ಇದ್ಯಾವುದನ್ನು ಪ್ರಶ್ನೆ ಮಾಡುತ್ತಲೇ ಇಲ್ಲ. ಆದ್ರೆ ಆರ್ಥಿಕತೆಯಲ್ಲಿ ಬ್ರಿಟನ್ ದೇಶವನ್ನೇ ಹಿಂದಿಕ್ಕಿದ ಭಾರತ ಅಂತ ವಿಜೃಂಭಣೆ ಸುದ್ದಿಯನ್ನು ಮಾತ್ರ ನಾಚಿಕೆ ಇಲ್ಲದೇ ಮಾಡುತ್ತವೆ. ಅಸಲಿಗೆ ಸತ್ಯ ಏನಂದ್ರೆ ತಲಾವಾರು ಆದಾಯದ ಲೆಕ್ಕದಲ್ಲಿ ಭಾರತವು ಜಾಗತಿಕವಾಗಿ 142 ನೇ ಸ್ಥಾನದಲ್ಲಿದೆ ಅನ್ನೋದನ್ನ ಮರೆ ಮಾಚುತ್ತವೆ. ಇದೇ ಅಜೆಂಡಾ ಈ ಮಾಧ್ಯಮಗಳದ್ದು. ಜನರಿಂದ ಅಭಿವೃದ್ದಿ ಕುರಿತ ವಿಚಾರಗಳನ್ನು ಮರೆಮಾಚುವಂತೆ ಮಾಡಿ, ಅವರ ತಲೆಗೆ ಕೋಮುದ್ವೇಷದ ನಂಜನ್ನು ತುಂಬುವ ಕೆಲಸವನ್ನು ಆರೆಸ್ಸೆಸ್ಸನ್ನೂ ಮೀರಿಸುವಂತೆ ಮಾಡುತ್ತಿವೆ.

ನಿಜಕ್ಕೂ ಈ ಮಾರಿಕೊಂಡ ಮಾಧ್ಯಮಗಳು ದೇಶವನ್ನ ಏನು ಮಾಡಬೇಕು ಅಂದುಕೊಂಡಿದ್ದಾವೋ ಏನೋ? ಜವಾಬ್ದಾರಿಯುತ ಸ್ಥಾನದಲ್ಲಿದ್ದು, ದೇಶವನ್ನು ತಪ್ಪು ದಾರಿಗೆ ಹೋಗದಂತೆ ನೋಡಿಕೊಳ್ಳಬೇಕಿದ್ದ ಇವರುಗಳೇ, ದೇಶದ ಜನತೆಯ ಮೆದುಳಿಗೆ ವಿಷ ಉಣ್ಣಿಸಿದರೆ ಹೇಗೆ? ಸಾಕು, ಈಗಾಗಲೇ, ಈ ಎಂಟು ವರ್ಷದಲ್ಲಿ ದೇಶ ಅಭಿವೃದ್ದಿಯ ಪಥದಿಂದ ಸಾಕಷ್ಟು ಹಿಂದಕ್ಕೆ ಹೋಗಿ ಬಿಟ್ಟಿದೆ. ಅಚ್ಛೆ ದಿನ್ ಬರುತ್ತೆ ಅಂದವರು ಕೊಚ್ಚೆ ದಿನಗಳನ್ನು ತೋರಿಸಿ, ನರಕದಲ್ಲಿ ಬೆಂದು ಹೋಗುವಂತೆ ಮಾಡಿ ಹಾಕಿದ್ದಾರೆ. ಇಷ್ಟೆಲ್ಲಾ ಅನಾಹುತಗಳನ್ನು ನೋಡಿಕೊಂಡು ಸುಮ್ಮನಿರುವ ಈ ಸಮಾಜದ ನಿರ್ಲಜ್ಜತನವನ್ನ ಕಂಡು ಹೇಸಿಗೆಯಾಗುತ್ತದೆ, ಅವರಿಗೆ ಬುದ್ಧಿ ಹೇಳಿ, ಆಡಳಿತ ಜನಪರವಾಗಿರುವಂತೆ ಸರ್ಕಾರದ ಕಿವಿ ಹಿಂಡಬೇಕಿದ್ದ ಮಾಧ್ಯಮಗಳ ಎಡಬಿಡಂಗಿತನವನ್ನು ಕಂಡು ಹೇವರಿಕೆಯಾಗುತ್ತಿದೆ.

ಸಾಕು ಮಾಧ್ಯಮದವರೇ ಇನ್ನಾದರೂ ಪ್ರಭುತ್ವಕ್ಕೆ ಬಕೆಟ್ ಹಿಡಿಯುವದನ್ನು ಬಿಟ್ಟು, ಪತ್ರಿಕಾ ಧರ್ಮವನ್ನು ಪಾಲಿಸಿ. ಆಗ ತಿಂದ ಅನ್ನ ಕರಗಬಹುದು, ಕಣ್ತುಂಬಾ ನಿದ್ದೆ ಬರಬಹುದು. ಇಲ್ಲದಿದ್ದರೆ ಮೋದಿಯವರಿಗೆ ಬಕೆಟ್ ಹಿಡಿಯುವ ನಿಮ್ಮ ಪ್ರವೃತ್ತಿಯನ್ನು ಹೀಗೆಯೇ ಮುಂದುವರೆಸಿದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ, ಬದಲಿಗೆ ಹಿಡಿಶಾಪ ಹಾಕಬಹುದು. ಅಷ್ಟು ದೂರ ಯಾಕೆ, ಒಂದಲ್ಲ ಒಂದು ದಿನ ಇದೇ ಜನರು ದುರಾಡಳಿತದಿಂದ ಬೇಸತ್ತು ಶ್ರೀಲಂಕಾ ಮಾದರಿಯಲ್ಲಿ ರೊಚ್ಚಿಗೇಳಬಹುದು. ಮಾಧ್ಯಮದವರನ್ನೂ ಸಹ ಅಟ್ಟಾಡಿಸಿ ಹೊಡೆಯಬಹುದು. ಆದ್ದರಿಂದ ಮೊದಲು ಮಾನವರಾಗಿ, ಪತ್ರಿಕಾ ಧರ್ಮವನ್ನು ಪಾಲಿಸಿ.

-ಉಮರ್‌ ಫಾರೂಕ್‌

© Copyright 2022, All Rights Reserved Kannada One News