ಟಿಪ್ಪು ಇತಿಹಾಸವನ್ನು ಅಡ್ಡಡ್ಡ ತಿರುಚಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ಟಿಪ್ಪು ಇತಿಹಾಸವನ್ನು ಅಡ್ಡಡ್ಡ ತಿರುಚಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

Updated : 17.11.2022

ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮತ್ತೆ ಟಿಪ್ಪು ಸುಲ್ತಾನ್ ಕುರಿತ ಚರ್ಚೆಯನ್ನ ಮುನ್ನೆಲೆಗೆ ತರುತ್ತಿದೆ. ಇದರ ಭಾಗವಾಗಿ ಬಿಜೆಪಿ ನಾಯಕರು ಮೇಲಿಂದ ಮೇಲೆ ಟಿಪ್ಪು ವಿರೋಧಿ ಹೇಳಿಕೆಗಳನ್ನ ಕೊಡ್ತಿದ್ದಾರೆ. ಟಿಪ್ಪು ದೇಶದ್ರೋಹಿ, ಧರ್ಮಾಂಧ ಅನ್ನುವಂತ ಹೇಳಿಕೆಗಳ ಮೂಲಕ ಮುಂದಿನ ಚುನಾವಣೆಗೆ ವೇದಿಕೆ ಸೃಷ್ಟಿಸಿಕೊಳ್ತಿದೆ ಇದರ ಮುಂದುವರೆದ ಭಾಗವಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ʼಟಿಪ್ಪುವಿನ ನಿಜ ಕನಸುಗಳುʼ ಎಂಬ ನಾಟಕ ಕೃತಿಯನ್ನು ರಚಿಸಿಸಿದ್ದಾರೆ. ನವೆಂಬರ್ 13 ರಂದು ಮೈಸೂರಿನಲ್ಲಿ ಈ ಕೃತಿಯನ್ನು ಅನಾವರಣಗೊಳಿಸಿದ್ದು, ಎಸ್. ಎಲ್. ಭೈರಪ್ಪ, ಸಂಸದ ಪ್ರತಾಪ ಸಿಂಹ, ರೋಹಿತ್ ಚಕ್ರತೀರ್ಥ ಸೇರಿದಂತೆ ಬಲಪಂಥೀಯ ಬರಹಗಾರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಟಿಪ್ಪು ಧರ್ಮಾಂಧ ಎಂಬಂತಹ ಹಲವು ಮಾತುಗಳನ್ನಾಡಿದ್ದರು. 


ಈ ಕೃತಿಯಲ್ಲಿ ಟಿಪ್ಪು ಸಾವಿನ ಕುರಿತು ವಿವಾದಾತ್ಮಕ ಇತಿಹಾಸವನ್ನು ಸೃಷ್ಟಿಸಿದ್ದು,  ಟಿಪ್ಪುವನ್ನು ಕೊಂದದ್ದು ಬ್ರಿಟೀಷರಲ್ಲ, ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಗೌಡರು ಎಂದು ಉಲ್ಲೇಖಿಸಿದ್ದಾರೆ. ಈ ಸುಳ್ಳು ಇತಿಹಾಸ ಈಗ ಚರ್ಚೆಗೆ ಕಾರಣವಾಗಿದ್ದು ಈ ಹೋರಾಟಗಾರರ ಚರಿತ್ರೆ ಬೇರೆ ಕೃತಿಯಿಂದ ಕದ್ದದ್ದು ಎಂಬುದನ್ನು ಹಲವು ಲೇಖಕರು, ಪ್ರಜ್ಞಾವಂತರು ಸಾಕ್ಷಿಸಮೇತ ವಿವರಿಸಿದ್ದಾರೆ. 


ಇನ್ನು ಇಲ್ಲಿ ಸೃಷ್ಠಿಸಿರುವ ಎರಡು ಕಾಲ್ಪನಿಕ ಪಾತ್ರಗಳು ಈ ಹಿಂದೆ ಪ್ರಕಟವಾದ ಲೇಖನವೊಂದರಲ್ಲಿ ಉಲ್ಲೇಖಿಸಿದ್ದ ನಾಯಕರನ್ನು ಹೊಲುತ್ತಿದ್ದು. ತಮಿಳು ನಾಡಿನ ಶಿವಗಂಗೆ ಎಂಬಲ್ಲಿ ಜನಿಸಿದ ಪೆರಿಯ ಮರುದು ಮತ್ತು ಚಿಣ್ಣ ಮರುದು ಎಂಬ ಹೆಸರಿನ ಸಹೋದರರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಹೋರಾಟ ನಡೆಸಿದ ಧೀರರ ಬಗ್ಗೆ ಡಾ.ಪುರುಷೋತ್ತಮ ಬಿಳಿಮನೆ ಅವರ ಅಮರ ಸುಳ್ಯದ ರೈತ ಹೋರಾಟ ಕೃತಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ. ಅವರ ಚಿತ್ರಗಳನ್ನೇ ಆಧರಿಸಿ ಉರಿಗೌಡ ಮತ್ತು ನಂಜೇಗೌಡ ಪಾತ್ರವನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ. 


ಅಲ್ಲದೇ ಚರ್ಚೆಯ ಕುರಿತು ಪ್ರತಿಕ್ರಿಯಿಸುವ ಮೈಸೂರಿನ ಪತ್ರಕರ್ತ ಗುರುರಾಜ್ ಅವರು ಈ ಕೃತಿಯಲ್ಲಿ ಟಿಪ್ಪುವನ್ನು ಕೊಂದದ್ದು ಬ್ರಿಟೀಷರಲ್ಲ, ಉರಿಗೌಡ ಮತ್ತು ನಂಜೇಗೌಡ ಎಂಬ ಇಬ್ಬರು ಗೌಡರು ಎಂದು ದಾಖಲಾಗಿರುವುದನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಇದನ್ನು ದಾಖಲೆ ಸಮೇತ ಸಾಬೀತು ಪಡಿಸಿದರೆ ನಾನು ಜೀವನ ಪೂರ್ತಿ ನಿಮ್ಮ ದಾಸನಾಗಿ ದುಡಿಯಲು ಸಿದ್ಧ ಎಂದು ಸವಾಲು ಎಸೆದಿದ್ದಾರೆ. ಈ ವಿಚಾರವನ್ನು ಖ್ಯಾತ ಲೇಖಕ ಜಗದೀಶ ಕೊಪ್ಪ ಪ್ರಸ್ತಾಪಿಸಿದ್ದು, ಗುರುರಾಜ್ ಅವರ ಮಾತಿಗೆ ಪೂರಕವಾಗಿ ನಾನು ಇಲ್ಲಿ ಟಿಪ್ಪು ನಿಧನನಾದ 1799 ರ ಮೇ ತಿಂಗಳ 4 ನೇ ದಿನದ ಹಾಗೂ 5 ನೇ ತಾರೀಕು ಆತನ ಮೃತದೇಹ ಸಿಕ್ಕ ದಾಖಲೆಗಳನ್ನು ಚಿತ್ರ ಸಹಿತ ಇಲ್ಲಿ ಒದಗಿಸುತ್ತಿದ್ದೇನೆ. 


ಇವು ವಾಟ್ಸ್ ಅಪ್ ಯೂನಿರ್ವಸಿಟಿಯ ದಾಖಲೆಗಳಲ್ಲ. ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಅಮೇರಿಕಾದ ಕೊಲಂಬಿಯಾ ಯೂನಿರ್ವಸಿಟಿ ಬ್ರಿಟೀಷ್ ಸರ್ಕಾರದಿಂದ ಕಲೆ ಹಾಕಿದ ಐತಿಹಾಸಿಕ ಮಾಹಿತಿಗಳು. ಶ್ರೀರಂಗಪಟ್ಟಣದಿಂದ ಈಸ್ಟ್ ಇಂಡಿಯಾ ಕಂಪನಿಗೆ ಪತ್ರ ಬರೆದ ಸೈನಿಕ ಅಧಿಕಾರಿಯ ಪತ್ರದಲ್ಲಿ ಸಂಪೂರ್ಣ ವಿವರಗಳಿವೆ. ಜೊತೆಗೆ ಬ್ರಿಟೀಷ್ ಲೈಬ್ರರಿಯ ಸಂಗ್ರಹದಲ್ಲಿ ಇರುವ ಆ ಕಾಲಘಟ್ಟದ ಚಿತ್ರಗಳು ಸಹ ಇಲ್ಲಿವೆ. ಟಿಪ್ಪುವಿನ ಮೃತ ದೇಹದ ಬಳಿ ದೊರೆತ ಮುರಿದ ಖಡ್ಗದ ಚಿತ್ರವೂ ಕೂಡ ಇದೆ ಎಂದು ಹಲವು ದಾಖಲೆಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 


ಜೊತೆಗೆ 2018 ರ ಫೆಬ್ರವರಿ ತಿಂಗಳಿನಲ್ಲಿ ಕೊಡಗಿನ ಮೂಲದವರಾದ ಹಾಗೂ ನನ್ನ ಆತ್ಮೀಯ ಮಿತ್ರರಾದ ಹಂಪಿ ಕನ್ನಡ ವಿ.ವಿ.ಯಲ್ಲಿ ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ.ವಿಜಯ್ ಪೂಣಚ್ಚ ಅವರು ಹೊಸತು ಪತ್ರಿಕೆಗಾಗಿ ಒಂದು ಲೇಖನ ಬರೆದು ಕೊಡವರ ಹತ್ಯೆ ಮತ್ತು ಮಹಿಳೆಯರ ಮೇಲೆ ಟಿಪ್ಪು ಅತ್ಯಾಚಾರ ಮಾಡಿದ ಎಂಬ ಅಂಶ ಶುದ್ಧ ಸುಳ್ಳು ಎಂದು ಅಲ್ಲಿನ ದಾಖಲೆಗಳ ಸಮೇತ ವಿವರಿಸಿದ್ದಾರೆ. ಪ್ರತ್ಯೇಕ ಕೊಡಗಿಗೆ ಒತ್ತಾಯ ಹೇರುವ ನಿಟ್ಟಿನಲ್ಲಿ ಕೊಡವ ರಾಷ್ಟ್ರೀಯ ಸಮಿತಿ ಎಂಬುದು ಇತ್ತೀಚಿನ ವರ್ಷಗಳಲ್ಲಿ ಹೆಣೆದ ಸುಳ್ಳಿನ ಕಂತೆ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ.


ಇನ್ನು, ಉರಿಗೌಡ ಮತ್ತು ನಂಜೇಗೌಡ ಎಂಬುವರು ಇದ್ದರು ಎಂಬುವುದನ್ನು ಸಾಬೀತು ಪಡಿಸುವುದು ವಾಟ್ಸ್ ಅಪ್ ಯೂನಿರ್ವಸಿಟಿಯ ಪದವೀಧರ ಅಡ್ಡಂಡ ಕಾರ್ಯಪ್ಪ ಮತ್ತು ಪ್ರೊಫೆಸರ್ ಭೈರಪ್ಪನವರ ಮೇಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತ ಚರ್ಚೆ ಮತ್ತಷ್ಟು ಕಾವೇರುತ್ತಿದ್ದು ಹಲವರು ಟಿಪ್ಪು ಸಾವಿನ ಬಗ್ಗೆ ಹಾಗೇ ಕಾರ್ಯಪ್ಪ ಬರೆದಿರುವ ನಾಟಕಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ.


© Copyright 2022, All Rights Reserved Kannada One News