Flash News:
ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Updated : 04.10.2022

ತಮ್ಮ ಮಗಳು ಪರಿಶಿಷ್ಟ ಜಾತಿಯ ಯುವಕನೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು  ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳು ಗ್ರಾಮದ ಯುವತಿಯ ತಂದೆ ಶ್ರೀರಾಮಪ್ಪ (63), ತಾಯಿ ಸರೋಜಮ್ಮ (60) ಮತ್ತು ಸಹೋದರ ಮನೋಜ್ (24) ಆತ್ಮಹತ್ಯೆ ಮಾಡಿಕೊಂಡವರು. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿ ನಾಪತ್ತೆ ಆಗಿದ್ದಾಗ ಶ್ರೀರಾಮಪ್ಪ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಘಟನೆ ಸಂಬಂಧ ಸುದ್ದಿಗಾರಿಗೆ ಪ್ರತಿಕ್ರಿಯೆ ನೀಡಿದ್ದು, “ಮಗಳು ಕಾಣೆಯಾಗಿದ್ದಾಗ ಆಕೆಯ ತಂದೆ ಶ್ರೀರಾಮಪ್ಪ ದೂರು ನೀಡಿದ್ದರು. ಸಿಸಿ ಟಿವಿ ದೃಶ್ಯಾವಳಿ ಪಡೆದು ತನಿಖೆ ನಡೆಸಲು ನಾವು ಸನ್ನದ್ಧವಾಗಿದ್ದೆವು. ಆದರೆ, ಯುವತಿ ತಂದೆ, ತಾಯಿ, ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮಗಳು ಗ್ರಾಮದ ಅನ್ಯ ಜಾತಿಯ ನಾರಾಯಣಸ್ವಾಮಿ ಜತೆಗೆ ಹೋಗಿರುವ ಶಂಕೆ ಇದೆ” ಎಂದು ತಿಳಿಸಿದ್ದಾರೆ.

ಹಂಡಿಗನಾಳು ಗ್ರಾಮದ ನಾರಾಯಣಸ್ವಾಮಿ ಪರಿಶಿಷ್ಟ ಜಾತಿಗೆ ಸೇರಿದ್ದು, ಚಾಲಕ ವೃತ್ತಿ ಮಾಡುತ್ತಿದ್ದ. ಒಕ್ಕಲಿಗೆ ಸಮುದಾಯದ ಯುವತಿ ಮತ್ತು ಯುವಕ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 

ಮನೆ ಬಿಟ್ಟು ಹೋಗಿರುವ ಮಗಳಿಗೆ ಆಸ್ತಿ ನೀಡದಂತೆ ಮತ್ತು ತಮ್ಮ ಸಾವಿಗೆ ಮಗಳ ನಿರ್ಧಾರವೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಲೆಟರ್‌ಹೆಡ್‌ನಲ್ಲಿ ಆತ್ಮಹತ್ಯೆಗೂ ಮುನ್ನ ಶ್ರೀರಾಮಪ್ಪ ಡೆತ್ ನೋಟ್ ಬರೆದಿಟ್ಟಿದ್ದಾರೆ. ಶ್ರೀರಾಮಪ್ಪನ ದೊಡ್ಡ ಮಗ ರಂಜತ್ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಹೊರಗೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

© Copyright 2022, All Rights Reserved Kannada One News