ತಥಾಗತನೂ ಭೂಗತನಾಗಬೇಕಾದೀತು: ಮೋಹನ ವೀ ಹೊಸೂರ ಅವರ ಕವಿತೆ

ತಥಾಗತನೂ ಭೂಗತನಾಗಬೇಕಾದೀತು: ಮೋಹನ ವೀ ಹೊಸೂರ ಅವರ ಕವಿತೆ

Updated : 07.08.2022

ಸತ್ಯ ಅಪಥ್ಯವಾಗುವ ಕಾಲವೀಗ..
ಜನಮನ ಜೀವನವೆಲ್ಲ ರೋಗ ರುಜಿನ
ಸತ್ಯ ಅಹಿಂಸೆ ಬೋಧಿಸಿದ್ದ ಬುದ್ಧ
ಮತ್ತೆ ಜಗದೋದ್ದಾರಕ್ಕೆ ಎದ್ದು
ಬರಬೇಕಾಗಿದೆ ಎಂದು ಎನ್ನುವಿರಾ ?

ಈಗೊಂದು ವೇಳೆ ಹುಟ್ಟಿ ಬಂದದ್ದಾದರೆ
ತಥಾಗತನೂ ಭೂಗತನಾಗಬೇಕಾದೀತು
ಹೀಗೆ ಹಿಂದೊಮ್ಮೆ ಈ ಜಗತ್ತಿನಲ್ಲಿ
ಎಲ್ಲ ಮಕಾಡೆ ಮಲಗಿದ್ದ ಕಾಲದಲ್ಲಿಯೇ
ಇದೇ ಜಾಗದಲ್ಲಿ ಹುಟ್ಟಿದ್ದ ಬುದ್ಧ ತಾನೆದ್ದು
ಎಲ್ಲರನ್ನೂ ಎಬ್ಬಿಸಿದ್ದು ನಿಜವಾಗಿದ್ದರೂ ಕೂಡ

ಆಗಿದನ್ನು ಸಹಿಸದೆ ಮೌಢ್ಯವನ್ನೇ ಬಿತ್ತಿ ಬೆಳೆದು
ಮತಿ ಮಸಳಿಸಿ ಮಂಕು ಬೂದಿ ಎರಚಿ
ಸಾಮಾನ್ಯ ಜನರ ಮುಗ್ಧತೆಯನ್ನೆ ಕದ್ದು
ಕಿತ್ತು ತಿಂದ ಪಟ್ಟ ಭದ್ರ ಹಿತಾಸಕ್ತಿಗಳು
ಸ್ವಂತಿಕೆ ಇಲ್ಲದ ಪರಾವಲಂಬಿ ಕ್ರೌರ್ಯಗಳು

ಮನದಲ್ಲೇ ಕುದ್ದು ಬಿಕ್ಕುಗಳನ್ನೆಲ್ಲ ಒದ್ದು ಕೊಂದು
ಅಳಿದುಳಿದವರೆಲ್ಲರೂ ದೇಶ ಬಿಟ್ಟು ಎದ್ದು ಓಡಿ
ಎಕ್ಕುಟ್ಟು ಪರದೇಶಕ್ಕೆ ಹೋಗುವಂತೆ ಮಾಡಿ
ಇದ್ದ ಬದ್ದ ವಿಹಾರ ಸ್ತೂಪಗಳನ್ನೆಲ್ಲ ಗುಡಿಸಿ
ಗುಡಿ ಗುಂಡಾರವಾಗಿಸಿದ್ದೂ ಕೂಡ ನಿಜವಲ್ಲವೇ?

ಬುದ್ಧನ ಸಾರಸ್ವತ ಸತ್ವವನ್ನೆಲ್ಲಾ ಬಿಡದೆ ಕದ್ದು
ಬುದ್ಧಿ ಬೋಧನೆ ತತ್ವಾದರ್ಶಗಳನ್ನು ಕೂಡ
ಖುದ್ದಾಗಿ ಕದ್ದು ತಮ್ಮದೆಂಬಂತೆ ಬಿಂಬಿಸಿ
ಪುರಾತನ ಪುರಾಣ ಪುಣ್ಯ ಕಥೆಗಳನ್ನಾಗಿಸಿದ್ದವರು

ಸುಮ್ಮನಿದ್ದಾರೆಯೇ?
ಬುದ್ಧನನ್ನಿಲ್ಲಿ ಇರಲು ಬಿಟ್ಟಾರೆಯೆ?

-ಮೋಹನ ವೀ ಹೊಸೂರ

© Copyright 2022, All Rights Reserved Kannada One News