ತಂದೆಯೂ-ತಾಯಿಯೂ ಅವಳಾಗಿರುವಾಗ : ಒಂಟಿ ತಾಯಂದಿರ ಹಕ್ಕನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್- ವಕೀಲರಾದ ಮೈತ್ರೇಯಿ ಹೆಗಡೆ ವಿಶೇಷ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ತಂದೆಯೂ-ತಾಯಿಯೂ ಅವಳಾಗಿರುವಾಗ : ಒಂಟಿ ತಾಯಂದಿರ ಹಕ್ಕನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್- ವಕೀಲರಾದ ಮೈತ್ರೇಯಿ ಹೆಗಡೆ ವಿಶೇಷ ಲೇಖನ

Updated : 27.07.2022

ಕತ್ತರಿಸಿದರೂ ಹರಿಯದ ಹೊಕ್ಕುಳ ಬಳ್ಳಿಯ ಬಂಧ ತಾಯಿಯ ಜೊತೆಗಿಂದಾದರೆ, ತಂದೆ ಇವನೆಂದು ತಾಯಿ ತೋರಿಸಿದರೇ ಅಥವಾ ತಂದೆ ನಾನೆಂದು ಅವನು ಮುಂದೆ ಬಂದರೇ ತಿಳಿಯುವುದು. ಆದರೂ ಪಿತೃ ಪ್ರಧಾನ ವ್ಯವಸ್ಥೆಯಾಗಿದ್ದ ಸಮಾಜದಲ್ಲಿ ತಂದೆಯ ಸ್ಥಾನಕ್ಕೆ ಎಲ್ಲಿಲ್ಲದ ಮನ್ನಣೆ. ಆ ಮನ್ನಣೆ ವ್ಯವಸ್ಥೆಯ ಭಾಗವಾಗಿ ಶತಮಾನಗಳ ಕಾಲ ನಡೆದು ಬಂದಿದ್ದರೂ, ಕಳೆದೊಂದು ಶತಮಾನದಲ್ಲಿ ಮಾನವ ಹಕ್ಕುಗಳ ಜಾಗೃತಿಯ ಬೆಳವಣಿಗೆಯಿಂದಾಗಿ ನಮ್ಮ ಪರಿಕಲ್ಪನೆಗಳು ಬದಲಾಗುತ್ತಾ ಬಂದಿವೆ. ಹಾಗೆಯೇ ವ್ಯವಸ್ಥೆಯೂ ಬದಲಾಗಲೇಬೇಕಾದ ಸ್ಥಿತಿ ಇದೆ. ಅಂತಹದೊಂದು ಬದಲಾವಣೆಯ ಗಾಳಿ ಬೀಸುತ್ತಿರುವ ಸೂಚನೆ ಇತ್ತೀಚಿಗೆ ಒಂಟಿ ತಾಯಂದಿರ ಬಗ್ಗೆ ಹೊರಡಿಸಿದ ಕೇರಳ ಹೈಕೋರ್ಟಿನ ತೀರ್ಪು.

ಕೇರಳ ಹೈಕೋರ್ಟ್ ಇತ್ತೀಚಿಗೆ ಕೇಸೊಂದರಲ್ಲಿ ಒಂಟಿ ತಾಯಂದರಿಗೆ ತಮ್ಮ ಮಕ್ಕಳನ್ನು ತಂದೆಯ ಗುರುತು ಹೊರಗೆಡುಹದೇ ಬೆಳೆಸುವ ಹಕ್ಕಿದೆ ಎಂದು ಅವರ ಗುರುತು ಪತ್ರಗಳಲ್ಲಿ ತಂದೆಯ ಹೆಸರು ಕಾಣಿಸುವ ಅಗತ್ಯವಿಲ್ಲವೆಂದು ಹೇಳಿದೆ. ಆ ಕೇಸಿನಲ್ಲಿ, ಬೇರೆ ಬೇರೆ ಗುರುತು ದಾಖಲೆಗಳಲ್ಲಿ ಬೇರೆ ಬೇರೆ ಹೆಸರುಗಳನ್ನ ತಂದೆಯ ಕಾಲಮ್ಮಿನಲ್ಲಿ ತೋರಿಸಿದ್ದು, ಜನನ ಪ್ರಮಾಣ ಪತ್ರದಲ್ಲಿ ಅದನ್ನು ಸರಿಪಡಿಸಲಾಗದೆ ಕೋರ್ಟ್ ಮೆಟ್ಟಿಲೇರಿದ್ದರು ಅರ್ಜಿ ಸಲ್ಲಿಸಿದಾಕೆ. ಕೇರಳ ಹುಟ್ಟು ಮತ್ತು ಸಾವಿನ ನೋಂದಣಿ ನಿಯಮಗಳು 1999 ರನ್ನು ಪರಿಶೀಲಿಸಿದ ಕೋರ್ಟ್ ತಂದೆಯ ಕಾಲಮ್ಮನ್ನು ಖಾಲಿ ಬಿಡುವ ಹಕ್ಕು ತಾಯಿಗೆ ಮತ್ತು ಹುಟ್ಟಿದ ಮಗುವಿಗೆ ಇದೆ ಎಂಬುದನ್ನು ಹೇಳಿತು ಗೌಪ್ಯತೆಯ ಹಕ್ಕು ಮೂಲಭೂತವೆಂಬುದು ಪುಟ್ಟಸ್ವಾಮಿ ತೀರ್ಪಿನಲ್ಲಿ ಘೋಷಿಸಿದ್ದನ್ನೂ ಕೋರ್ಟ್ ನೆನಪಿಸಿತು.

ಹೀಗೆ ಜನನ ಪ್ರಮಾಣ ಪಾತ್ರದಲ್ಲಿ ತಂದೆಯ ಹೆಸರು ತೋರಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಮೊದಲ ಬಾರಿ ಈ ತೀರ್ಪಿನಲ್ಲಿ ಹೇಳಿದ್ದಲ್ಲ. ಕಳೆದ ವರ್ಷ ಕೃತಕ ಗರ್ಭಧಾರಣೆಯ ಮೂಲಕ ತಾಯಾಗಲಿದ್ದ ಮಹಿಳೆಯೊಬ್ಬಳು ಹುಟ್ಟುವ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರಿನ ಕಾಲಮ್ಮಿನಲ್ಲಿ ಏನನ್ನೂ ತುಂಬದೇ ಇರಲು ಆಗಿರುವ ಹಕ್ಕನ್ನು ಪ್ರತಿಪಾದಿಸಿ ಅರ್ಜಿ ಸಲ್ಲಿಸಿದ್ದರು. ಕೋರಿಕೆಯನ್ನು ಮನ್ನಿಸಿದ್ದ ಹೈಕೋರ್ಟ್, ಅದಕ್ಕೆ ತೊಡಕಾಗಿದ್ದ ನೋಂದಣಿ ನಿಯಮಗಳು, 1999 ನ್ನು ಹೊಡೆದು ಹಾಕಿ ಹೊಸ ರೀತಿಯ ಪಾರಮ್ಮುಗಳನ್ನು ಹೊರಡಿಸಲು ಸರಕಾರಕ್ಕೆ ಆದೇಶ ನೀಡಿತ್ತು. ಈ ತೀರ್ಪು ಕೂಡ ಗೌಪ್ಯತೆಯ ಹಕ್ಕು ಮತ್ತು ಇತರೆ ಸಾಂವಿಧಾನಿಕ ಹಕ್ಕುಗಳ ಬಲದ ಮೇಲೆ ಅರ್ಜಿಯನ್ನು ಪರಿಗಣಿಸಿತ್ತು. ಅಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್ ಮತ್ತು ಹಲವು ಹೈಕೋರ್ಟುಗಳ ತೀರ್ಪುಗಳ ಬೆಂಬಲವನ್ನೂ ಆ ತೀರ್ಪು ತೆಗೆದುಕೊಂಡಿತ್ತು.

2015ರ ABC ಎಂಬ ಮೊಕದ್ದಮೆಯ ಮೂಲಕ ಒಂಟಿ ತಾಯ್ತನದ ಹಕ್ಕುಗಳಿಗೆ ಸುಪ್ರೀಂ ಕೋರ್ಟ್ ಭಾಷ್ಯ ಬರೆಯಿತು. ನಂತರ ಆ ತೀರ್ಪಿನ ಹೆಜ್ಜೆಯಲ್ಲಿಯೇ ಹೆಜ್ಜೆಯಿಟ್ಟದ್ದು 2016 ರ ಮಮತಾ ಸ್ವಾಮಿ ಕೇಸಿನಲ್ಲಿ ರಾಜಸ್ಥಾನ ಹೈಕೋರ್ಟಿನ ತೀರ್ಪು, 2018 ರ ಮದ್ರಾಸ್ ಉಚ್ಚ ನ್ಯಾಯಾಲಯದ ಮಥುಮಿತಾ ಕೇಸು ಮತ್ತು ತದನಂತರದಲ್ಲಿ ಕೇರಳ ಹೈಕೋರ್ಟ್ ಕಳೆದ ವರ್ಷ ಹೊರಡಿಸಿದ ತೀರ್ಪು. ಆದರೆ ಇತ್ತೀಚಿಗೆ ಹೊರಡಿಸಿರುವ ತೀರ್ಪಿನ ಪ್ರಕಾರ ಈಗಾಗಲೇ ತಂದೆಯ ಹೆಸರನ್ನು ನಮೂದಿಸಿದ್ದರೂ, ಅದನ್ನು ತೆಗೆದು ಹಾಕಿ ತಂದೆಯ ಹೆಸರೇ ಇಲ್ಲದ ಜನನ ಪ್ರಮಾಣ ಪತ್ರವನ್ನೂ ಒಂಟಿ ತಾಯಂದಿರು ಪಡೆಯಬಹುದು. ಅಂತಹ ಅರ್ಜಿಯನ್ನು ರಿಜಿಸ್ಟ್ರಾರ್ ಮುಂದೆ ಕಾರಣಗಳ ಸಮೇತ, ಪ್ರಮಾಣಪತ್ರದ ತಿದ್ದುಪಡಿಯ ನಿಯಮದಡಿಯಲ್ಲಿ ಸಲ್ಲಿಸಬಹುದು.

ಕುಟುಂಬ ಎನ್ನುವುದು ಈಗ ಹಳೆಯ ಚೌಕಟ್ಟಿನ ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ಒಂಟಿ ತಾಯಿ, ಇಬ್ಬರು ತಾಯಂದಿರು, ಇಬ್ಬರು ತಂದೆಯರು, ಒಂಟಿ ತಂದೆ ಹೀಗೆ ಹಲವು ರೀತಿಯಲ್ಲಿ ಸಮಾಜ ವ್ಯಕ್ತಿಗಳು ಕುಟುಂಬವಾಗುವುದುನ್ನು ನೋಡುತ್ತಿದೆ. ಪ್ರೀತಿ, ಮದುವೆ ಮತ್ತು ಮನೆ ಎಂಬ ವಿಚಾರಗಳು ಹೊಸ ವ್ಯವಸ್ಥೆಗಳಿಗೆ, ಹೊಸ ಕಾನೂನುಗಳಿಗೆ ದಾರಿಯಾಗುತ್ತಿವೆ. ವೈಯಕ್ತಿಕ ಹಕ್ಕುಗಳನ್ನು ಗುರುತಿಸಿ, ಗೌರವಿಸುವ ಸಾಂವಿಧಾನಿಕ ದೇಶವಾದ ಭಾರತ ಈ ಬದಲಾವಣೆಗಳನ್ನು ತುಂಬು ತೋಳಿನಿಂದ ಸ್ವಾಗತಿಸುವುದು ಇಂದಿನ ಅಗತ್ಯವಾಗಿದೆ.

ಮೈತ್ರೇಯಿ ಹೆಗಡೆ,
ವಕೀಲರು, ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್,
ಸಂಸ್ಥಾಪಕರು, ನ್ಯಾಯನಿಷ್ಠ (ಕಾನೂನು ನಿಯತಕಾಲಿಕೆ)

© Copyright 2022, All Rights Reserved Kannada One News