ತಬಸ್ಸುಮ್: ರಾಮಕೃಷ್ಣ ಸುಗತ ಅವರ ಕಥೆ

ತಬಸ್ಸುಮ್: ರಾಮಕೃಷ್ಣ ಸುಗತ ಅವರ ಕಥೆ

Updated : 14.08.2022

 : ನಿಮ್ಮ ಹೆಸರೆನು ?
 : ಸೊಹೈಲ್
 : ಅವರದು
 : ತಬಸ್ಸುಮ್
 : ಅವರು ನಿಮಗೆ ಏನಾಗಬೇಕು ?
 : ನನ್ನ ಹೆಂಡತಿ

ಎಲ್ಲಾ ವಿವರಗಳನ್ನು ಬರೆಸಿದ ಸೊಹೈಲ್ ಅವರಿಂದ ರೂಮ್ ಕೀ ಪಡೆದು ಮುಂದೆ ನಡೆದ. ತನ್ನ ಹೆಸರನ್ನು ತಬಸ್ಸುಮ್ ಎಂದು ಬರೆಸಿದ್ದಕ್ಕೆ ಕಾರಣ ಯೋಚಿಸುತ್ತಾ ತನು ಅವನನ್ನು ಅನುಕರಿಸಿದಳು.

ರೂಮ್ ಒಳಗೆ ಬಂದು ಕೂತ ಇಬ್ಬರು ಸ್ವಲ್ಪಹೊತ್ತು ಏನನ್ನೂ ಮಾತಾಡಲಿಲ್ಲ. ಆದರೆ ಕಿವಿಗಳು ಮಾತ್ರ ಪರಸ್ಪರರ ಧ್ವನಿಕೇಳಲು ಕಾಯುತ್ತಿದ್ದವು. ಸ್ವಲ್ಪ ಸಮಯದ ಬಳಿಕ ಏನನ್ನೋ ನೆನಸಿಕೊಂಡವನಂತೆ ಎದ್ದ ಸೊಹೈಲ್ “ನಾಳೆ ಮುಂಜಾನೆಯೆ ನಾವು ಇಲ್ಲಿಂದ ಬಿಟ್ಟರೆ ಒಳ್ಳೆಯದು. ಏನಾದರೂ ವ್ಯವಸ್ತೆ ಮಾಡಿಕೊಂಡು ಬರುತ್ತೇನೆ. ನೀನು ಇಲ್ಲಿಯೇ ಇರು. ಯಾರಾದರೂ ಕೇಳಿದರೆ ನಿನ್ನ ಹೆಸರನ್ನು ತಬಸ್ಸುಮ್ ಎಂದು ಹೇಳು” ಎಂದವನೇ ಅವಳು ಹೂಂ ಅನ್ನುತ್ತಿದ್ದಂತೆ ರೂಮಿಂದ ಹೊರಬಿದ್ದ.
    
‘ತಬಸ್ಸುಮ್’ ಎನ್ನುವ ಪದ ತನುವನ್ನು ಕಾಡತೊಡಗಿತು. ಇವನೇನು ಬದಲಾಗಿಬಿಟ್ಟನೇ ಎನ್ನುವ ಅನುಮಾನ ಬರತೊಡಗಿತು. ‘ಇಲ್ಲ, ಸೊಹೈಲ್ ಒಳ್ಳೆಯವನು’ ಒಳಗಿನ ಮನಸ್ಸು ಹೇಳುತ್ತಿತ್ತು. ಮನಸ್ಸು ಬದಲಾಗಬಾರದು ಎಂದೇನು ಇಲ್ಲವಲ್ಲ ಎಂಬ ಯೋಚನೆಯೂ ಒಳ ಮನಸ್ಸಿನಿಂದಲೇ ಬರುತ್ತಿತ್ತು. ಹೀಗೆ ಯೋಚಿಸುತ್ತಿದ್ದವಳಿಗೆ ಫೋನ್ ರಿಂಗಾಗಿದ್ದು ಕೇಳಿಸಿತು.
ಆ ಕಡೆಯಿಂದ ಸೋಹೈಲ್
: ನೀನು ಊಟ ಮಾಡು, ನಾನು ಬರುವುದು ತಡವಾಗಬಹುದು
ಇವಳೆಂದಳು
: ಪರವಾಗಿಲ್ಲ ಕಾಯ್ತಿನಿ, ನೀನು ಬಂದಮೇಲೆ ಇಬ್ಬರೂ ಮಾಡಿದರಾಯ್ತು.
*        *       *
    ತನುಮಿತ್ರ, ಸಣ್ಣವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದವಳು. ಚಿಕ್ಕಪ್ಪನ ಆಶ್ರಯದಲ್ಲಿ ಎನ್ನುವುದಕ್ಕಿಂತ ಹಾಸ್ಟೆಲ್‍ನಲ್ಲಿ ಬೆಳೆದವಳು ಎಂದರೆ ಸರಿಹೋಗಬಹುದು. ಯಾವಾಗಲೋ ವರ್ಷಕ್ಕೊಮ್ಮೆ ಮಾತ್ರವೇ ಚಿಕ್ಕಪ್ಪನ ಮನೆಗೆ ಹೋಗಿ ಬರುತ್ತಿದ್ದಳು. ಅವರೂ ಬಾ ಎಂದು ಕರೆಯುತ್ತಿದ್ದಿಲ್ಲ. ತಂದೆಯ ತಮ್ಮ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ಸಂಬಂದವನ್ನು ಇವಳು ಅವರೊಡನೆ ಹೊಂದಿರಲಿಲ್ಲ. ಅವರೂ ಸಹ.
    
ತನು ಪ್ರತಿ ಭಾನುವಾರ ತಪ್ಪದೆ ಬುದ್ದಮಂದಿರಕ್ಕೆ ಹೋಗಿಬರುತ್ತಿದ್ದಳು. ಅಲ್ಲಿಯೇ ಪರಿಚಯವಾದವನು ಈ ಸೊಹೈಲ್. ಪ್ರತಿವಾರವಲ್ಲದ್ದಿದ್ದರೂ ಅಗಾಗ್ಗೆ ಬರುತ್ತಿದ್ದ. ಬಂದಾಗಲೆಲ್ಲಾ ಬುದ್ದನ ಮೂರ್ತಿಯ ಮುಂದೆ ಕೂತು ಗಂಟೆಗಟ್ಟಲೆ ಧ್ಯಾನಮಾಡುತ್ತಿದ್ದ. ಇವನನ್ನು ನೋಡುವುದೆ ತನುವಿಗೆ ಒಂದುರೀತಿಯ ಸೊಗಸು. ತಾನು ಅವನಂತೆ ಧೀರ್ಘಧ್ಯಾನ ಕೂಡಲು ಯತ್ನಿಸುತ್ತಿದ್ದಳಾದರೂ  ಕೂಡಲಾಗುತ್ತಿರಲಿಲ್ಲ. ಸೊಹೈಲ್ ಈಕೆಯನ್ನು ಗಮನಿಸುತ್ತಿದ್ದನಾದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. ಆಕೆಗೂ ಧೈರ್ಯ ಬರದೇ ಸುಮ್ಮನಿದ್ದಳು. ಒಂದು ದಿನ ಇಬ್ಬರು ಮಾತನಾಡುವ ಸಮಯ ಅಕಸ್ಮಾತ್ತಾಗಿ ಬಂದುಬಿಟ್ಟಿತು. ಮಂದಿರಕ್ಕೆ ಬಂದಾಗಲೆಲ್ಲಾ “ ಹೇ ರಮಣ ” ಎನ್ನುವ ಬುದ್ದನ ಪ್ರಾರ್ಥನಾಗೀತೆಯನ್ನು ಇಬ್ಬರೂ ಕೇಳುತ್ತಿದ್ದರು. ಗೀತೆಗಿಂತ ಹೆಚ್ಚಾಗಿ ಅದನ್ನು ಹಾಡಿದ ಅಶ್ವತ್‍ರ ಧ್ವನಿ ಅವರನ್ನು ಕಾಡುತ್ತಿತ್ತು. ಮಂದಿರದ ಮುಂದೆ ಈ ಹಾಡುಗಳನ್ನು ಮಾರುವ ಅಂಗಡಿ ಇತ್ತಾದರೂ , “ಹೇ ರಮಣ ” ಯೊಂದು ಯಾವಾಗಲೋ ಖಾಲಿಯಾಗಿ ಹೋಗಿತ್ತು. ಬಂದಾಗಲೆಲ್ಲಾ ಸಿಡಿ ಯಾವಾಗ ಬರುತ್ತದೆಂದು ಇವರು ಅಂಗಡಿಯವನನ್ನು ಕೇಳುತ್ತಿದ್ದರು. ಇವರ ಕಾಟವನ್ನು ನೋಡಿದ ಅಂಗಡಿಯವನು ಹೇಗೋ ಒಂದು ಸಿಡಿಯನ್ನು ತರಿಸಿ, ಮೊದಲು ಬಂದ ತನುವಿಗೆ ಅದನ್ನು ಕೊಟ್ಟುಬಿಟ್ಟ. ಈ ಸಿಡಿಯನ್ನು ಕಾಫಿ ಮಾಡಿಕೊಳ್ಳುವ ನೆಪದಲ್ಲಿ ಸೊಹೈಲ್ ಅವಳಿಗೆ ಪರಿಚಯವಾಗಿಬಿಟ್ಟ.

             *        *        *
ಬೆಳಗ್ಗೆಯಿಂದ ಊಟ ಮಾಡಿರಲಿಲ್ಲವಾಗಿ ತನುವಿಗೆ ತುಂಬಾ ಹಸಿವಾಗತೊಡಗಿತ್ತು. ಆಗಲೇ ಗಡಿಯಾರ 9 ಗಂಟೆ ತೋರಿಸುತ್ತಿತ್ತು. ರೂಮಿನಲ್ಲಿ ಒಬ್ಬಳೇ ಇದ್ದುದಕ್ಕೊ ಇಲ್ಲಾ ಆ ರೂಮಿನ ಕಿಟಕಿಯೊಂದು ಮುಚ್ಚಲು ಏನೂ ಇಲ್ಲದೆ ತೆರೆದ ಸ್ತಿತಿಯಲ್ಲಿ ಇದ್ದುದಕ್ಕೋ ಅವಳಿಗೆ ಸಣ್ಣಗೆ ಭಯ ಕೂಡ ಆಗುತ್ತಿತ್ತು. ಅಷ್ಟರಲ್ಲಿ ಯಾರೋ ಬಾಗಿಲು ಬಡಿದ ಸದ್ದು ಕೇಳಿ, ಸೊಹೈಲ್ ಬಂದನೆಂದು ಎಣಿಸಿ ಬಾಗಿಲು ತೆರೆದಳು. ಇವಳ ಊಹೆ ತಪ್ಪಾಗಿತ್ತು. ಬಾಗಿಲು ತೆಗೆಯುತ್ತಿದ್ದಂತೆ ಒಳಬಂದ ಮೇರಜ್‍ನು ಇವಳ ಬಾಯನ್ನು ಗಟ್ಟಿಯಾಗಿ ಹಿಡಿದು, ತನ್ನ ಜೊತೆ ಬಂದವನಿಗೆ ಬಾಗಿಲು ಹಾಕಲು ಸನ್ನೆ ಮಾಡಿ ಒಳನುಗ್ಗಿದ. ಇಬ್ಬರೂ ಸೇರಿಕೊಂಡು ಅವಳನ್ನು ಮಂಚಕ್ಕೆ ಬಿಗಿಯಾಗಿ ಕಟ್ಟಿದರು. ಮೇರಜ್‍ನ ಕಣ್ಣುಗಳು ಕೋಪದಿಂದ ಕೂಡಿದ್ದವು. ಜೊತೆಯಲ್ಲಿ ಬಂದವನ ಮುಖದಲ್ಲಿ ಅದ್ಯಾವುದು ಇರಲಿಲ್ಲ.

“ಈಗಲಾದರೂ ನನ್ನ ಮಾತು ಕೇಳು , ಅವನನ್ನು ಬಿಟ್ಟು ಇಲ್ಲಿಂದ ಹೊರಟುಹೋಗು, ಇಲ್ಲವಾದರೆ ನಮ್ಮ ಧರ್ಮಕ್ಕೆ ಸೇರಿ ಅವನೊಂದಿಗೆ ಸಂಸಾರ ಮಾಡು. ಎರಡು ಇಲ್ಲವೆಂದರೆ ನಿನ್ನನ್ನು ಜೀವಂತವಾಗಿಯಂತೂ ನಾನು ಬಿಡುವುದಿಲ್ಲ” ಮೇರಜ್ ಹೇಳಿದ.  ಇವಳಿಗೆ ಏನು ಉತ್ತರ ಕೊಡಬೇಕೆಂಬುದೆ ತಿಳಿಯದೆ ಸುಮ್ಮನೆ ಅವನನ್ನು ನೋಡುತ್ತಿದ್ದಳು. ಮತ್ತೆ ಅವನೆಂದ “ಬೇಗ ಹೇಳು, ಇಲ್ಲಾ ನಿನ್ನ ಮಾನವನ್ನು ಕಳೆದು, ಅವನಾಗಿಯೇ ನಿನ್ನನ್ನು ಬಿಟ್ಟು ಹೋಗುವಂತೆ ಮಾಡುತ್ತೇನೆ ಎಂದನು.
    
ಅವನು ಹೇಳಿದ ಯಾವುದಕ್ಕೂ ಇವಳು ಒಪ್ಪಲು ತಯಾರಿದ್ದಿಲ್ಲ. ಅವನ ಎಲ್ಲಾ ಪ್ರಶ್ನೆಗಳಿಗೂ ಇಲ್ಲವೆಂದೆ ತಲೆ ಆಡಿಸುತ್ತಿದ್ದಳು. ಇನ್ನು ಮಾತನಾಡಿ ಪ್ರಯೋಜನವಿಲ್ಲ ಎಂದು ಅರಿತ ಮೇರಜ್ ತನ್ನ ಜೊತೆಯಲ್ಲಿ ಬಂದವನಿಗೆ ನೀನಿನ್ನು ನಿನ್ನ ಕೆಲಸ ಮಾಡು ಎಂಬಂತೆ ಸನ್ನೆ ಮಾಡಿದ. ಇದಕ್ಕಾಗಿಯೆ ಕಾಯುತ್ತಿದ್ದ ಅವನು ಇವಳ ಬಟ್ಟೆಗಳನ್ನು ಒಂದೊಂದಾಗಿಯೆ ತೆಗೆಯತೊಡಗಿದ. ಅಸಹಾಯಕಳಾಗಿ ಅರೆ ನಗ್ನವಾಗಿದ್ದ ಅವಳನ್ನು ನೋಡಿ ಮೇರಜ್‍ಗೆ ಎನೋ ಅನ್ನಿಸಿ, ಅವನನ್ನು ತಡೆದ. ಮತ್ತೊಮ್ಮೆ ಹೇಳಿದ “ಈಗಲಾದರೂ ನನ್ನ ಮಾತು ಕೇಳು” .ಅವಳು ಊಹೂಂ ಎನ್ನುವಂತೆ ತಲೆ ಆಡಿಸಿದಳು. ಕೋಪದಿಂದ ಅವಳ ಕನ್ನೆಗೆ ಬಾರಿಸಿದ ಮೇರಜ್ ತಾನು ಹೊರಗಿರುವುದಾಗಿ ಜೊತೆಯಲ್ಲಿದ್ದವನಿಗೆ ಹೇಳಿ ಹೋದ. ಹೋದವನೆ ಅವಸರದಿಂದ ಒಳಬಂದು ಬಾಗಿಲು ಚಿಲಕ ಹಾಕಿ, ಜೊತೆ ಬಂದವನನ್ನು ಕರೆದುಕೊಂಡು, ಕಿಟಕಿಯಿಂದ ಹೊರಜಿಗಿದ.
*        *        *
ಇಬ್ಬರಿಗೂ ಬುದ್ದನೆಂದರೆ ತುಂಬಾ ಇಷ್ಟ. ಅವನ ಉಪದೇಶಗಳು ಅವರ ಮೇಲೆ ತುಂಬಾ ಪ್ರಭಾವವನ್ನು ಬೀರಿದ್ದವು. ಪರಿಚಯವಾದ ಮೊದಮೊದಲ ದಿನಗಳಲ್ಲಿ ಬುದ್ದಮಂದಿರವೇ ಅವರು ಸೇರುವ ಖಾಯಂ ಸ್ಥಳವಾಗಿತ್ತು. ವಾರಕ್ಕೆರೆಡು ಮೂರು ದಿನದಂತೆ ಅವರು ಅಲ್ಲಿ ಸೇರತೊಡಗಿದರು. ಚಿಕ್ಕವಯಸ್ಸಿನಿಂದಲೂ ಯೋಗ, ಧ್ಯಾನಗಳನ್ನು ಕಲಿತಿದ್ದ ಸೊಹೈಲ್, ತನುವಿಗೂ ಅವುಗಳನ್ನು ಹೇಳಿಕೊಟ್ಟ. ಈಗ ಇಬ್ಬರೂ ಕೂಡಿ ಗಂಟೆಗಟ್ಟಲೇ ಧ್ಯಾನ ಮಾಡುತ್ತಿದ್ದರು. ಅವರ ಪರಿಚಯವು ಸ್ನೇಹದಿಂದ ಪ್ರೀತಿಗೆ ತಿರುಗಿದ ಮೇಲೂ ಸಹ ಅವರು ಬೇರೆಡೆಗಳಿಗಿಂತ ಇಲ್ಲಿಯೇ ಹೆಚ್ಚು ಸೇರುತ್ತಿದ್ದರು. ಬುದ್ದನು ತನ್ನ ಆರಂಭದ ದಿನಗಳಲ್ಲಿ ಮಹಿಳೆಯರನ್ನು ಸಂಘದಿಂದ ದೂರವಿಟ್ಟದಕ್ಕೆ ಅವನ ಮೇಲೆ ತನುವಿಗೆ ಸಣ್ಣ ಸಿಟ್ಟಿತ್ತು. ಅದರ ವಾಸ್ತವವನ್ನು ತಿಳಿಸಿ, ಅವನ ಮೇಲಿನ ಇವಳ ಸಿಟ್ಟನ್ನು ಕಡಿಮೆ ಮಾಡುವುದೇ ಸೊಹೈಲ್‍ಗೆ ಆರಂಭದ ದಿನಗಳ ಕೆಲಸವಾಗಿತ್ತು. ತನ್ನ ಧರ್ಮವಲ್ಲದಿದ್ದರೂ ಕೂಡ ಬುದ್ದನ ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದಾನಲ್ಲ ಎಂಬುದೇ ಸೊಹೈಲ್ ಮೇಲೆ ಅವಳ ಪ್ರೀತಿಯನ್ನು ಹೆಚ್ಚಿಸಿತ್ತು.
    
ತನುವನ್ನು ಸೊಹೈಲ್ ಇಷ್ಟಪಡುವುದು ಮೇರಜ್‍ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅವನನ್ನು ಅವಳಿಂದ ದೂರಮಾಡುವ ಬಗ್ಗೆಯೆ ಯಾವಾಗಲೂ ಯೋಚಿಸುತ್ತಿದ್ದ. ಸೊಹೈಲ್‍ಗೆ ಮೇರಜ್ ಹತ್ತಿರದ ಸ್ನೇಹಿತನೂ ದೂರದ ಸಂಬಂದಿಯೂ ಆಗಿದ್ದ. ಈ ಕಾರಣಕ್ಕಾಗಿ ಮತ್ತು ಸೊಹೈಲ್‍ನ ಒತ್ತಾಯಕ್ಕೆ ಮಣಿದು ಇವರ ಪ್ರೀತಿಗೆ ಸಹಾಯ ಮಾಡುತ್ತಿದ್ದ ಮತ್ತು ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಸಂಪ್ರದಾಯನಿಷ್ಟನಾಗಿದ್ದ ಮೇರಜ್‍ಗೆ ಒಂದು ಸಮಾಧಾನದ ವಿಷಯವೆಂದರೆ, ಮದುವೆಯ ನಂತರ ಅವಳನ್ನು ತನ್ನ ಧರ್ಮದವಳನ್ನಾಗಿ ಮಾಡಿಕೊಳ್ಳುವುದಾಗಿ ಸೊಹೈಲ್ ಹೇಳಿದ್ದ. ಆದರೂ ಈ ವಿಷಯದಲ್ಲಿ ಸೊಹೈಲ್‍ನ ಮೇಲೆ ಇವನಿಗೆ ಅಷ್ಟೊಂದು ನಂಬಿಕೆ ಇರಲಿಲ್ಲ.

ಸೋಹೈಲ್‍ನ ಮನೆಯಲ್ಲಿ ಇದ್ದದ್ದು ನಾಲ್ಕೇಜನ. ಅವನ ತಂದೆ ತಾಯಿ ಮತ್ತು ಅಣ್ಣ. ತಂದೆ ಕಾಲೇಜೊಂದರಲ್ಲಿ ಇತಿಹಾಸ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಧರ್ಮದ ವಿಷಯದಲ್ಲಿ ತುಂಬಾ ಉದಾರ ಸ್ವಭಾವದವರಾಗಿದ್ದರು. ಬುದ್ದನ ಮೇಲೆ ಸೊಹೈಲ್‍ಗೆ ಅಷ್ಟೊಂದು ಒಲವು ಬರುವಲ್ಲಿ ಇವರ ಪಾತ್ರವೂ ದೊಡ್ಡದಿತ್ತು. ತಾಯಿ ತನ್ನ ಪಾಡಿಗೆ ತಾನು ಸಂಸಾರ ನೋಡಿಕೊಂಡು ಇರುತ್ತಿದ್ದಳು. ಸೋಹೈಲ್‍ನ ಅಣ್ಣ ಇಂಜಿನಿಯರಿಂಗ್ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ. ತನುವಿನ ವಿಷಯವನ್ನು ಮನೆಯಲ್ಲಿ ಹೇಳಿ ಒಪ್ಪಿಸುವುದು ಸೊಹೈಲ್‍ಗೆ ಅಷ್ಟೊಂದು ಕಷ್ಟದ ಕೆಲಸವೆನೂ ಆಗಿರಲಿಲ್ಲ. ಆದರೂ ತಾಯಿಯ ಕಡೆಯವರದು ಸ್ವಲ್ಪ ಕಿರಿಕಿರಿಯಿತ್ತು. ಅವರ ಮನೆಯಲ್ಲಿ ಸುಮಾರು ಮುರ್ನಾಲ್ಕು ಜನ ಹೆಣ್ಣುಮಕ್ಕಳಿದ್ದರು. ಅವರಲ್ಲಿ ಇಬ್ಬರನ್ನು, ಈ ಇಬ್ಬರಿಗೆ ಕೊಡುವುದು ಎಂದು ಯಾವತ್ತೋ ತಿರ್ಮಾನಿಸಿಯಾಗಿತ್ತು. ಮೇರಜ್ ಬರುವುದು ಸಹ ತಾಯಿಯ ಕುಟುಂಬದ ಕಡೆಗೆನೆ. ಅದಕ್ಕೆ ಅವನಿಗೆ ಇವರ ಪ್ರೀತಿ ಇಷ್ಟ ಇರಲಿಲ್ಲ.
*        *        *
    ಎಷ್ಟು ಬಡಿದರೂ ಬಾಗಿಲು ತೆರೆಯಲೇ ಇಲ್ಲ. ಬಂದಿರುವುದು ಸೊಹೈಲ್ ಎಂದು ಇವಳಿಗೆ ತಿಳಿಯಿತಾದರೂ, ಅವನಿಗೆ ಕೇಳಿಸದಷ್ಟು ಇವಳ ಕೂಗು ನಿತ್ರಾಣವಾಗಿತ್ತು. ತೆರೆದ ಕಿಟಕಿಯ ಬಗ್ಗೆ ಅವನು ಗಮನಿಸಿದ್ದಿಲ್ಲವಾದ್ದರಿಂದ, ಚಿಲಕ ಕಿತ್ತುಹೋಗುವಂತೆ ಬಾಗಿಲು ದಬ್ಬಿ ಒಳಬಂದ. ಒಳಗೆ ಬಂದವನಿಗೆ ಅವಳ ಸ್ಥಿತಿಯನ್ನು ನೋಡಿ ಒಂದುಕ್ಷಣ ಅಲುಗಾಡಲು ಆಗಲಿಲ್ಲ. ಅವಳನ್ನು ಅರೆಬಟ್ಟೆಯಲ್ಲಿ ನೋಡಿದ ಅವನಿಗೆ, ಅವಳನ್ನು ಬಿಡಿಸಬೇಕೆಂಬ ಅರಿವು ಬಂದದ್ದು ಅವಳಾಗಿಯೆ ಎಚ್ಚರಿಸಿದಾಗ. ಅವನು ಬರುವುದು ಸ್ವಲ್ಪ ತಡವಾಗಿದ್ದರೂ ತಾನು ಏನಾಗುತ್ತಿದ್ದೆ ಎಂಬ ಭಯ ಅವಳಲ್ಲಿ ಇನ್ನು ಇತ್ತು. ಆ ಭಯದ ನಡುವೆಯೂ ಅವಳೆಂದಳು “ ಒಂದುವೇಳೆ ನೀನು ಬರುವುದು ತಡವಾಗಿದ್ದರೆ, ಆಮೇಲೆ ನನ್ನ ಒಪ್ಪಿಕೊಳ್ಳುತ್ತಿದ್ದೆಯಾ ?”...
ಸೊಹೈಲ್ ಅವಳನ್ನು ಸುಮ್ಮನೆ ತಬ್ಬಿಕೊಂಡ.

ಸೊಹೈಲ್‍ಗೆ ಅವರು ತಮ್ಮನ್ನು ಹುಡುಕಿಕೊಂಡು ಬರಬಹುದೆಂದು ಗೊತ್ತಿತ್ತು .ಆದರೆ ಈ ತರದ ಕೆಲಸಕ್ಕಿಳಿಯುವರು ಎಂದು ಅವನು ಭಾವಿಸಿರಲಿಲ್ಲ.
ಅವನೆಂದ
: ಬಂದವರಲ್ಲಿ ಯಾರಿದ್ದರು
: ಮೇರಜ್ ಜೊತೆ ಇನ್ನೊಬ್ಬ
: ಮೇರಜ್ ನಿನ್ನ ಸೀರೆಗೆ ಕೈ ಹಾಕಿದನೇ
: ಇಲ್ಲ, ನಾನು ಅವನಿಗೆ ಒಂದು ರೀತಿಯಲ್ಲಿ ಸಂಬಂಧಿಕಳೆಂದು ಸ್ವಲ್ಪವಾದರೂ ನಂಬಿದ್ದನ್ನಲ್ಲಾ.
    
ಹೌದು, ಮೇರಜ್ ಅಂತಹವನಲ್ಲ. ಸೊಹೈಲ್ ತನ್ನ ಮಾತು ಕೇಳಲಿಲ್ಲವಲ್ಲ ಎಂಬ ಕೋಪವಿತ್ತೇ ಹೊರತು, ಇಂತಹ ಕೆಲಸಕ್ಕೆ ಕೈ ಹಾಕುವವನಲ್ಲ. ಅವನ ಜೊತೆಗೆ ಬಂದಿದ್ದನ್ನಲ್ಲ ಇನ್ನೊಬ್ಬ ಅವನು ಕೊಟ್ಟ ವಿಚಾರವಿರಬಹುದೆಂದು ತನು ಊಹಿಸಿದಳು. ಅವನ ಗುರುತು ಅವಳಿಗೆ ಚನ್ನಾಗಿಯೇ ಇತ್ತು. ಅವನ ಹೆಸರು ಅಂಜನೀಶ್. ತನು ಓದುತ್ತಿದ್ದ ಕಾಲೇಜಿನಲ್ಲಿಯೇ ಓದುತ್ತಿದ್ದವನು. ಅವಳ ಸೀನಿಯರ್. ಕಳೆದ 2 ವರ್ಷದಿಂದ ಅವನು ತನುವನ್ನು ಇಷ್ಟಪಡುತ್ತಿದ್ದ. ಅದನ್ನು ಇವಳಿಗೆ ಹೇಳಿದ್ದನೂ ಕೂಡ. ಅದಾಗಲೇ ತನು - ಸೊಹೈಲ್‍ನನ್ನು  ಪ್ರೀತಿಸುತ್ತಿದ್ದರಿಂದ ಅವಳು ಅವನ ಕೋರಿಕೆಯನ್ನು ನಿರಾಕರಿಸಿದ್ದಳು. ಅವಳು ಯಾರನ್ನೂ ಪ್ರೀತಿಸದಿದ್ಯಾಗೂ ಕೂಡ ಇವನನ್ನು ಒಪ್ಪುವುದು ಕಷ್ಟವಿತ್ತು. ಕಾರಣ ಕಾಲೇಜಿನಲ್ಲಿ ಇವನ ಹೆಸರಿಗೆ ಅಷ್ಟೊಂದು ಒಳ್ಳೆಯ ಬಣ್ಣವಿರಲಿಲ್ಲ. ಆದರೂ ಅವನು ಪ್ರೀತಿಸದಿದ್ದರೂ ಪರವಾಯಿಲ್ಲ ಒಂದು ದಿನವಾದರೂ ತನ್ನೊಂದಿಗೆ ಕಳೆಯಬೇಕೆಂದು ಇವಳನ್ನು ದಿನವೂ ಪೀಡಿಸುತ್ತಿದ್ದ.
    
ಏನಾದರೂ ದಾರಿ ಹುಡುಕಲೆಂದು ಹೋಗಿದ್ದ ಸೊಹೈಲ್, ಯಾವ ದಾರಿಯು ಕಾಣದೇ ಹಿಂತಿರುಗಿದ್ದ. ಇಲ್ಲಿ ಬಂದು ನೋಡಿದರೆ ಇಷ್ಟೆಲ್ಲಾ ನಡೆದಿತ್ತು. ತನುವನ್ನು ನೋಡಿದ ಪಾಪ ಎನ್ನಿಸಿತು. ನನ್ನಿದಾಗಿ ಇವಳಿಗೆ ಇಷ್ಟು ಕಷ್ಟ ಬಂತಲ್ಲ ಎಂದು ಇವನು ಯೋಚಿಸುತ್ತಿದ್ದರೆ, ಅವರು ಹೇಳಿದಂತೆ ಕೇಳಿದ್ದರೆ ಚನ್ನಾಗಿರುತ್ತಿತ್ತೆನೋ ಎಂದು ತನು ಯೋಚಿಸುತ್ತಿದ್ದಳು. ಈಗಲಾದರೂ ಏನಾಗಿದೆ, ಇನ್ನೂ ಸಮಯವಿದೆಯಲ್ಲಾ ಎಂದು ಅನ್ನಿಸಿದರೂ, ಸೊಹೈಲ್‍ಗೆ ಏನು ಹೇಳುವುದು ಎಂದು ತಿಳಿಯದೇ ಸುಮ್ಮನಾದಳು. ಆದರೂ ಹೇಳುವ ತಿರ್ಮಾನ ಮಾಡುತ್ತಿದ್ದಳು.
     ಅವನು ಹೇಳಿದ
    : ಬೆಳಿಗ್ಗೆಯೆ ಇಲ್ಲಿಂದ ಹೊರಟುಬಿಡೋಣ
    : ನನ್ನ ಹೆಸರನ್ನು ತಬಸ್ಸುಮ್ ಎಂದು ಬರೆಸಿದೆಯಲ್ಲಾ ಯಾಕೆ
    : ಈಗ ಆಯಿತಲ್ಲ, ಇಂತದ್ದು ಬೇರೇನೂ ನಡೆಯಬಾರದೆಂದು
    : ಅವರು ಹೇಳಿದಂತೆ ಕೇಳೊಣವೇ ಸುಮ್ಮನೆ
    : ಇವಾಗ ಮಲಗು, ಬೆಳಗ್ಗೆ ಏನು ಮಾಡುವುದೆಂದು ನೋಡಿದರಾಯಿತು
    : ಬೆಳಗ್ಗೆ ಎನ್ನುವುದು ಆಗದಿದ್ದರೆ .....

    ....ಸೊಹೈಲ್ ಅವಳನ್ನು ಸುಮ್ಮನೆ ತಬ್ಬಿಕೊಂಡ.
*
ನಿನ್ನೆ ನಾನು ಏನು ಓದಿದೆ ಗೊತ್ತಾ, ತನು ಕೇಳಿದಳು
:ಹ್ಞೂ  ಗೊತ್ತು
: ಗೊತ್ತಾ !! ಏನ್ ಹೇಳು
:ಅದೇ
:ಅದೇ ಅಂದ್ರೆ
:ಅದೇ ಅಂದ್ರೆ ಅದೆ ಅಷ್ಟೆ...
   ನೀನು ಹೇಳಿದ್ರೆ ತಾನೆ ಗೊತ್ತಾಗೊಕೆ
: ‘ಮಂತ್ರ ಮಾಂಗಲ್ಯ’ ಅಂತ, ಕುವೆಂಪು ಬರೆದಿರೊದು. ನಮ್ಮ ಪುರಾತನ ಋಷಿ ಮುನಿಗಳು, ವೇದ ಉಪನಿಷದ್‍ಗಳು, ಎಲ್ಲಾ ತತ್ವಗಳನ್ನು ಸಾರಮಾಡಿ, ಮದುವೆ ಎಂದರೇನೆಂದು ಹೇಳಿದ್ದಾರೆ. ನಾವೂ ಹೀಗೆಯೆ ಮದುವೆ ಆಗೋಣ ಅಂತ ಆಸೆ
:ಮದುವೆ ಎನ್ನುವುದು ಅನಿವಾರ್ಯ ಅಂತಲೇ ನಿನ್ನ ಅರ್ಥ, ಯಾರು ಏನು ಹೇಳಿದರೇನು, ಮದುವೆ ಎಂದರೆ ಮದುವೆ ಅಷ್ಟೇ ಅಲ್ಲವೇ
:ಮದುವೆ ಅನಿವಾರ್ಯ ಅಂತಲ್ಲ, ನಿರಾಕಾರ ಪ್ರೀತಿಗೆ ಒಂದು ಆಕಾರ ಕೊಟ್ಟಂತೆ ಅಷ್ಟೆ. ಮದುವೆ ತನ್ನ ಅರ್ಥವನ್ನೇ ಕಳೆದುಕೊಂಡಿರೋ ಈ ಅದ್ದೂರಿ ಕಾಲದಲ್ಲಿ, ಕುವೆಂಪು ಹೇಳುವ ಈ ವಿಷಯ ಸರಳವೂ ಸತ್ವವೂ ಆಗಿದೆ. ನೀನು ಒಮ್ಮೆ ಓದು , ಇಷ್ಟವಾಗುತ್ತದೆ.
ಹ್ಞೂ ಕೊಡು, ನೋಡುವ.. ಎನ್ನುತ್ತಾ ಸೊಹೈಲ್ ಪುಸ್ತಕದೊಂದಿಗೆ ಅವಳ ಕೈಯನ್ನು ಹಿಡಿದು ತನ್ನೆಡೆಗೆ ಎಳೆದುಕೊಂಡನು.
    
ಅಂತೂ ಅವರು ಮದುವೆಯಾಗುವುದೆಂದು ತಿರ್ಮಾನಿಸಿಯಾಗಿತ್ತು. ಹೇಗೆ ಎಂಬುದೇ ತಿಳಿಯದಾಗಿತ್ತು. ತನು ಮನೆಯಲ್ಲಿಯಂತೂ ಕೇಳುವುದು ಅನಿವಾರ್ಯವೇನೂ ಆಗಿದ್ದಿಲ್ಲ. ಸೊಹೈಲ್ ಮನೆಯಲ್ಲಿ ಕೇಳುವುದು ಸ್ವಲ್ಪ ಅನಿವಾರ್ಯವಾದರೂ, ಕಷ್ಟವೇನೂ ಇರಲಿಲ್ಲ. ಆದರೆ ಅವರ ಸಂಭಂದಿಕರದ್ದೆ ಚಿಂತೆ. ಅವರು ಮದುವೆಗೆ ಒಪ್ಪುವ ಮಾತು ಅಂತಿರಲಿ, ತನುಗೆ ಏನಾದರೂ ಮಾಡಿಯಾರು ಎನ್ನುವ ಚಿಂತೆಯೆ ಸೊಹೈಲ್‍ನನ್ನು ಕಾಡುತ್ತಿತ್ತು. ಯಾರಿಗೂ ಹೇಳದಂತೆ ಮದುವೆಯಾಗಿ ಬಿಡುವುದು, ಆಮೆಲೆ ಮನೆಯಲ್ಲಿ ಹೇಳುವುದು ಎಂದು ಅನ್ನಿಸಿದರೂ, ಆಗಲೂ ಅವರು ತನುವಿಗೆ ಏನಾದರೂ ಮಾಡಿದರೆ ಎಂಬ ಭಯ. ಈ ವಿಷಯವಾಗಿ ಮೇರಜ್‍ನ ಸಹಾಯ ಕೇಳುವುದೆಂದು ನಿಶ್ಚಯವಾಯಿತು.
    
ಮೇರಜ್ ಇವರಿಗೆ ಕೆಲವೊಂದು ಷರತ್ತುಗಳನ್ನು ಹಾಕಿದ. ಮದುವೆಗೆ ಮುಂಚೆಯೆ ಅವಳನ್ನು ನಮ್ಮ ಧರ್ಮಕ್ಕೆ ಮತಾಂತರಿಸುವುದು. ಅವಳ ಮೂಲಧರ್ಮವನ್ನು ಯಾರಿಗೂ ಹೇಳದಿರುವುದು. ಇದಾದ ನಂತರ ಮನೆಯಲ್ಲಿ ತಾನು ಹೇಗಾದರೂ ಮಾಡಿ ಒಪ್ಪಿಸುವೆನು ಎಂದು ಹೇಳಿದ. ಸೊಹೈಲ್‍ಗೆ ಇದರ ಬಗ್ಗೆ ಸಮ್ಮತಿ ಇರಲಿಲ್ಲ. ಅವಳು ಅವಳಾಗಿರುವಂತೆಯೆ ಅವಳನ್ನು ಜೊತೆಯಾಗುವುದು ಅವನ ಉದ್ದೇಶ. ತನುವಿಗೂ ಇದು ಇಷ್ಟವಿಲ್ಲವಾದರೂ ಸುಮ್ಮನೆ ಒಪ್ಪಿಕೊಂಡಿದ್ದಳು. ಕೊನೆಗೂ ಈ ದಾರಿಯಲ್ಲಿ ಮದುವೆಯಾಗುವುದೆಂದು ನಿಶ್ಚಯವಾಯಿತು. ಗೊತ್ತಿರುವ ಪರಿಚಯಸ್ತರ ಬಳಿ ತೆರಳಿ ಅವಳ ಧರ್ಮ ತಿದ್ದುವುದೆಂದು ನಿಶ್ಚಯವಾಯಿತು.
    
ಆ ದಿನ ಮೇರಜ್ ಗೊತ್ತಾದ ಜಾಗದಲ್ಲಿ ಕಾಯುತ್ತಲೇ ಇದ್ದ. ಸಮಯ ಮದ್ಯಾನದ ಮೇಲಾದರೂ ಇವರು ಬರಲೇ ಇಲ್ಲ. ಅವನಿಗೂ ಕಾದು ಸಾಕಾಗಿ ಮನೆಗೆ ಹೋದ. ಸಾಯಾಂಕಾಲ ಅನ್ನೋ ವೇಳೆಗೆ ಸೊಹೈಲ್‍ನಿಂದ ಅವನಿಗೆ ಫೋನ್‍ಕರೆ ಬಂತು. ತಾವು ಬರುವುದಿಲ್ಲವೆಂದು, ಈ ರೀತಿಯ ಮದುವೆ ತನಗೆ ಇಷ್ಟವಿಲ್ಲವೆಂದು ಹೇಳಿದ. ನಾವು ಬೇರೆ ಯಾವುದಾದರೂ ದಾರಿ ಇದ್ದರೆ ನೋಡುತ್ತೇವೆ, ನಮಗೆ ಸಹಾಯ ಮಾಡಲು ಒಪ್ಪಿದ್ದಕ್ಕೆ ನಿನಗೆ ಧನ್ಯವಾದ ಎಂದು ಹೇಳಿ ತನ್ನ ಮಾತನ್ನು ಮುಗಿಸಿದ್ದ. ಸೊಹೈಲ್‍ನ ಮಾತುಗಳನ್ನು ಕೇಳಿ ಮೇರಜ್ ಒಳಗೆ ಕುದ್ದುಹೋದ. ಅವಳಿಂದಲೇ ಇವನು ಹೀಗೆಲ್ಲಾ ಆಡುತ್ತಿರುವುದು. ಅವಳಿಗೆ ಶಾಸ್ತಿ ಮಾಡಿದರೆ ಇವನು ತಾನಾಗಿಯೆ ದಾರಿಗೆ ಬರುತ್ತಾನೆ. ಹೇಗಾದರೂ ಇವರ ಮದುವೆ ನಡೆಯದಂತೆ ಮಾಡಬೇಕು ಎಂದು ಯೋಚಿಸಿದ.
    
ಮುಂದೆ ಏನು ಮಾಡುವುದೆಂದು ಇಬ್ಬರಿಗೂ ಗೊತ್ತಿರಲಿಲ್ಲ. ಸೊಹೈಲ್‍ಗೆ ಬೇಕಿದ್ದದು ಬುದ್ದನ ಸಂಗಾತಿಯಾದ ಆ ತನುಮಿತ್ರಳೇ. ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಅವನ ಮನಸಲ್ಲಿ ಕುಂತಾಗಿತ್ತು. ಅವಳನ್ನು ನಮಗೆ ಬೇಕಾದಂತೆ ಬದಲಿಸುವುದಾದರೆ ಪ್ರೀತಿಗೆ ಅರ್ಥವಿಲ್ಲ ಎಂದು ಅವನು ಭಾವಿಸಿದ್ದ. ತನುವಿಗೂ ಕೂಡ ಇದೇ ಯೋಚನೆಯಿತ್ತು. ಸದ್ಯಕ್ಕೆ ಈ ಊರು ಬಿಡುವುದೆಂದು ನಿಶ್ಚಯಮಾಡಿದರು. ಹೋಗುವುದೆಲ್ಲಿಗೆ ಅದು ಇಬ್ಬರಿಗೂ ಗೊತ್ತಿರಲಿಲ್ಲ. ಮೇರಜ್ ಮನೆಯಲ್ಲಿ ಹೇಳಿ ತನ್ನನ್ನು ಹುಡುಕುವ ಪ್ರಯತ್ನ ಮಾಡಬಹುದೆಂದು ಸೊಹೈಲ್ ಯೋಚಿಸಿದ. ಅವನು ಯೋಚಿಸಿದ್ದು ನಿಜವೇ ಆಗಿತ್ತು. ಮೇರಜ್ ಇವರನ್ನು ಹುಡುಕಲು ಶುರುಮಾಡಿದ್ದ. ತನುವನ್ನೂ ಹುಡುಕಿಕೊಂಡು ಹಾಸ್ಟೆಲ್‍ಗೆ ಬಂದಿದ್ದ. ಅಷ್ಟರಲ್ಲಿ ಅವಳು ಅಲ್ಲಿಂದ ಹೋಗಿದ್ದಳು.ಇವನು ತನುವನ್ನು ಹುಡುಕುವ ಸುದ್ದಿ ಅಂಜನೀಶ್‍ಗೂ ತಿಳಿಯಿತು.ಆಗಲೇ ಇವರಿಬ್ಬರೂ ಭೇಟಿಯಾದದ್ದು. ತನುವನ್ನು ಸುಮ್ಮನೆ ಬಿಡುವುದಿಲ್ಲವೆಂದು ಮೇರಜ್ ಕೂಗಾಡುತ್ತಿದ್ದ. ಅಂಜನೀಶ್‍ನು ತನ್ನ ಕತೆಯನ್ನೆಲ್ಲಾ ಹೇಳಿ, ತಾನು ಅದಕ್ಕೆ ಕಾಯುತ್ತಿರುವುದಾಗಿ ಹೇಳಿದ. ಆಗಲೇ ಹುಟ್ಟಿದ್ದು ತನುವಿನ ಮಾನ ಕಳೆಯುವ ಉಪಾಯ. ಆಮೆಲೆ ಬೇರೆ ಗತಿಯಿಲ್ಲದೆ ಅವಳು ಅಂಜನೀಶ್‍ನನ್ನು ಒಪ್ಪಿಕೊಳ್ಳುತ್ತಾಳೆ. ಸೊಹೈಲ್‍ನನ್ನು ಮೇರಜ್ ಸುಲಭವಾಗಿ ಕರೆದುಕೊಂಡು ಹೋಗಬಹುದೆಂದು ನಿಶ್ಚಯವಾಯಿತು.

ಆಗಲೇ ರಾತ್ರಿಯಾದ್ದರಿಂದ ಇವತ್ತು ಒಂದುದಿನ ಇದೇ ಊರಲ್ಲಿ ಇರುವುದೆಂದು ನಿಶ್ಚಯವಾಯಿತು. ರಾತ್ರಿ ಹೊಟೇಲೊಂದರಲ್ಲಿ ಇದ್ದು, ಬೆಳಗ್ಗೆ ಈ ಊರು ಬಿಡುವುದೆಂದು ನಿಶ್ಚಯವಾಯಿತು. ಇಷ್ಟೆಲ್ಲಾ ತೀರ್ಮಾನಿಸಿದ ಮೇಲೂ ಹೊಟೆಲ್ ಎಂಟ್ರಿಯಲ್ಲಿ ತನ್ನ ಹೆಸರನ್ನು ತಬಸ್ಸುಮ್ ಎಂದು ಬರೆಸಿದ್ದು ತನುಗೆ ಸ್ವಲ್ಪ ಬೇಸರವಾದರೂ , ಸುಮ್ಮನಾಗಿದ್ದಳು. ಇಬ್ಬರೂ ಹುಟ್ಟಿಬೆಳೆದದ್ದು ಅಲ್ಲಿಯೇ ಆದ್ದರಿಂದ, ಇಬ್ಬರಿಗೂ ಬೇಕಾದಷ್ಟ ಜನ ಅನುಕೂಲದವರಿದ್ದರು. ಆದರೂ ಯಾರ ಸಹಾಯವನ್ನೂ ಪಡೆಯಬಾರದೆಂದು ಇಬ್ಬರೂ ನಿಶ್ಚಯಿಸಿದ್ದರು. ಸುಮ್ಮನೆ ಸುದ್ದಿ ಹರಡುವುದು ಯಾಕೆಂದು ಅವರ ಯೋಚನೆ. ಇಷ್ಟಾಗ್ಯು ಇವರ ಜಾಡನ್ನು ಮೇರಜ್ ಮತ್ತು ಅಂಜನೀಶ್‍ರು ಕಂಡುಹಿಡಿದುಬಿಟ್ಟಿದ್ದರು. ಇವರನ್ನು ಹಿಂಬಾಲಿಸಿ ಹೋಟೆಲ್‍ವರೆಗೂ ಬಂದಿದ್ದರು. ತಾನು ಇಷ್ಟಪಟ್ಟ ಹುಡುಗಿಯನ್ನು ಹೊಡೆದುಕೊಂಡುಬಿಟ್ಟನಲ್ಲ ಎಂದು ಸೊಹೈಲ್‍ಗೂ ಪಾಠ ಕಲಿಸುವ ಇರಾದೆ ಅಂಜನೀಶ್‍ಗೆ ಇತ್ತು. ಇದಕ್ಕೆ ಮೇರಜ್ ಒಪ್ಪುವುದಿಲ್ಲ ಎಂದು ತಿಳಿದು ಸುಮ್ಮನಿದ್ದ. ಈ ಕಾರಣಕ್ಕಾಗಿಯೇ ಸೊಹೈಲ್ ರೂಮಿಂದ ಹೊರ ಹೋಗುವುದನ್ನು ಇಬ್ಬರೂ ಕಾದಿದ್ದು, ಅವನು ಹೋದಮೇಲೆ ಬಾಗಿಲು ತಟ್ಟಿದ್ದರು.
*        *        *
ಬೆಳಗ್ಗೆ 5 ಗಂಟೆಯಾಗಿತ್ತು. ದೂರದಲ್ಲಿ ಪ್ರಾರ್ಥನೆಗಳು ಕೇಳಿಬರುತ್ತಿದ್ದವು. ಇಬ್ಬರೂ ರಾತ್ರಿಯೆಲ್ಲಾ ಮಲಗಿರಲಿಲ್ಲವಾದರೂ ಒಬ್ಬರನೊಬ್ಬರು ಎಚ್ಚರಿಸಿಕೊಂಡರು. ಇನ್ನೂ ಬೆಳಗು ಹರಿದಿರಲಿಲ್ಲ. ಇಬ್ಬರು ಆ ಕತ್ತಲಲ್ಲಿಯೇ ರೂಮಿಂದ ಹೊರಬಿದ್ದರು, ಬೆಳಕನ್ನು ಹುಡುಕಲು.
‘ಎಲ್ಲಿಗೆ’ ಅವಳೆಂದಳು
‘ಎಲ್ಲಿಗೆ’ ಇವನೆಂದ
ಎಲ್ಲಿಗೆ ಎಂಬುದು ಇಬ್ಬರಿಗೂ ಗೊತ್ತಿರಲಿಲ್ಲ. ಮುಸುಕು ದಾರಿಯಲ್ಲಿ ಸುಮ್ಮನೆ ಹೆಜ್ಜೆ ಹಾಕುತ್ತಿದ್ದರು. ದೂರದ ಧ್ವನಿಯು ಸ್ವಲ್ಪ ಸ್ವಲ್ಪವೇ ದೂರಾಗುತ್ತಿತ್ತು.
ಧರ್ಮವಿಲ್ಲದಿದ್ದರೂ ನಾವು ಬದುಕಬಹುದೆಂದು ನಿನಗೆ ಅನ್ನಿಸುತ್ತಿಲ್ಲವೇ, ಅವನೆಂದ, ಅದು ಇಲ್ಲದಿದ್ದರೇನೆ ನಾವು ಬದುಕುತ್ತೇವೆಂದು ನನಗೆ ಅನ್ನಿಸುತ್ತಿದೆ, ಇವಳೆಂದಳು ಅವನ ಮುಖ ನೋಡುತ್ತಾ. ಇನ್ನು ಮಂದಬೆಳಕು ಇತ್ತಾದರಿಂದ ದಾರಿಯಲ್ಲಿ ತಗ್ಗು ಕಾಣದೆ ತನು ಸ್ವಲ್ಪ ಎಡವಿದಳು.
‘ತನು ಹುಷಾರು’ ಸೊಹೈಲ್ ಹೇಳಿದ.
ಅವನು ಮತ್ತೆ ತನು ಎಂದಿದ್ದಕ್ಕೆ ಭಾವುಕಳಾದ ಅವಳು, ಸುಮ್ಮನೆ ಅವನನ್ನು ತಬ್ಬಿಕೊಂಡಳು.
***         *        ***

© Copyright 2022, All Rights Reserved Kannada One News