ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

Updated : 05.09.2022

ಆವ ಭಯವು ಇನ್ನೇನವಗ

ಮರಣವೇ ಮಹಾನವಮಿ ಆದವಗ

ಹುಟ್ಟೂದು ಸಾವುದು ಜೀವ ಭಾವದ ಭ್ರಮಿ ಸಾವೇ ಸಾವೇನವಗ ನೋವೇ ನೋವೇನನಗ?

-ಕಡಕೋಳ ಮಡಿವಾಳಪ್ಪ

5ನೇ ಸೆಪ್ಟೆಂಬರ್‌ರಂದು ನಾನು ಸೌಹಾರ್ದ ಕರ್ನಾಟಕ ಸಮಾವೇಶಕ್ಕೆ ಹಾಜರಾಗಿದ್ದೆ. ಇನ್ನೆರಡು ದಿನಗಳ ಕಾಲ ಸಂಘಟನೆಯ ಸಭೆಯ ಕಾರಣದಿಂದ ನಾನು ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವ ಯೋಜನೆ ಮಾಡಿಕೊಂಡಿದ್ದೆ. ಅದರಲ್ಲಿ ಒಂದು ದಿನದ ಕೆಲವು ಗಂಟೆಗಳ ಕಾಲ ನಾನು ಮತ್ತು ಗೌರಿ I ಭೇಟಿಯಾಗಲಿಟ್ಟಿತ್ತು. ಕಾರಣವಿಷ್ಟೆ, ಕರ್ನಾಟಕದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಹುದೊಡ್ಡ ಶಕ್ತಿಯಾಗಿ ವಚನಗಳು ನಮ್ಮ ಕೈಯಲ್ಲಿವೆ. ಅವುಗಳನ್ನು ಜನತೆಯ ಮನಕ್ಕೆ ತಲುಪಿಸುವುದು ಹೇಗೆ ಎಂಬುದಾಗಿತ್ತು. ಸೌಹಾರ್ದ ಕರ್ನಾಟಕ ಸಮಾವೇಶ ಮುಗಿಸಿಕೊಂಡು ಗೆಳತಿಯ ಮನೆಗೆ ಹೋಗಿ ತಲುಪಿದ ಕೆಲವು ನಿಮಿಷಗಳಲ್ಲಿಯೇ ಗೌರಿ ಗುಂಡಿಗೆ ಬಲಿಯಾದ ಸುದ್ದಿಗಳು ನನ್ನನ್ನು ತಲ್ಲಣಗೊಳಿಸಿದವು. ಅಕ್ಷರಲೋಕದ ದನಿಯೊಂದು (ಡಾ.ಎಂ.ಎಂ.ಕಲಬುರ್ಗಿ) ಹೀಗೆ ಗುಂಡಿಗೆ ಬಲಿಯಾಗಿದ್ದರೆ ಎರಡು ವರ್ಷಗಳ ಹಿಂದಿನ ಸಂಕಟದ ಗಾಯ ಇನ್ನೂ ಆರೇ ಇಲ್ಲ. ಅಷ್ಟರಲ್ಲಿ ಇನ್ನೊಂದು ಕೊಲೆಯು ಎದೆ ನಡುಗಿಸುವಂತಹದ್ದಾಗಿದ್ದು ಹೌದು.

ಜೀವಪರ ಮನಸುಗಳು ಖಂಡಿತ ಯಾರ ಸಾವುಗಳನ್ನೂ ಬಯಸುವುದಿಲ್ಲ. ಸಂಭ್ರಮವಂತೂ ಸಾಧ್ಯವೇಯಿಲ್ಲ, ಈ ಭೂಮಿ ಮೇಲೆ ಸಕಲ ಜೀವರಿಗೆ ಲೇಸು ಬಯಸುವುದೊಂದು ಬಹು ದೊಡ್ಡ ಸಾಂಸ್ಕೃತಿಕ ಪರಂಪರೆ, ಈ ಪರಂಪರೆಯನ್ನು ಎದೆಯ ಗೂಡಲ್ಲಿ ಕಾಪಿಟ್ಟುಕೊಂಡು ಸಮತೆಗಾಗಿ ಶ್ರಮಿಸುವ ಜೀವಗಳು ಹೀಗೆ ಗುಂಡಿಗೆ ಬಲಿಯಾಗುವುದೆಂದರೆ ಕರುಳಿನಲ್ಲಿ ಕತ್ತರಿಯಾಡಿಸಿದಂತಲ್ಲದೆ ಮತ್ತೇನು? ಹಾಗೆ ನೋಡಿದರೆ ಶರಣರು ಸೂಫಿಗಳು ಸಂತರು ಮತ್ತೆಲ್ಲ ಜೀವಪರ ಮನಸುಗಳು ಮರಣಕ್ಕೆ ಹೆದರದೆ ಬದುಕಿ ಬಾಳಿದ ನಾಡು ಕರ್ನಾಟಕ, 'ಆವ ಭಯವು ಇನ್ನೇನವಗ ಮರಣವೇ ಮಹಾನವಮಿ ಆದವಗ' ಎಂಬ ತತ್ವಪದವು ಸತ್ಯ ನ್ಯಾಯ ಸಮತೆಗಾಗಿ ಅಚಲವಾಗಿ ದನಿಯೆತ್ತುವುದನ್ನು ಧ್ವನಿಸುತ್ತದೆ.

ಗೌರಿ ಮತ್ತು ಎಂ.ಎಂ.ಕಲಬುರ್ಗಿಯವರ ಸಾವುಗಳು ಅಕ್ಷರಲೋಕವನ್ನು ಇನ್ನಿಲ್ಲದಂತೆ ಚಿಂತೆಗೆ ಮತ್ತು ಚಿಂತನೆಗೆ ದೂಡಿವೆ. ಗೌರಿ ಏನನ್ನು ಪ್ರತಿನಿಧಿಸುತ್ತಿದ್ದಳು? ಯಾಕೆ ಗೌರಿಯ ಕೊಲೆ ನಡೆಯಿತು? ಯಾರಿಗಾದರೂ ಕಾಡುವ ಪ್ರಶ್ನೆಗಳಿವು. ಕಲಬುರ್ಗಿಯವರ ಹತ್ಯೆಯ ನಂತರ ಪೊಲೀಸ್ ಇಲಾಖೆಯು, ಈ ಕೊಲೆ ವೈಚಾರಿಕೆ ಭಿನ್ನಾಭಿಪ್ರಾಯಕ್ಕಾಗಿ ನಡೆದಿದೆ ಎಂಬುದನ್ನು ಸ್ಪಷ್ಟಗೊಳಿಸಿತು. ಹಾಗೆಯೇ ಗೌರಿಯ ಕೊಲೆಯೂ ವೈಚಾರಿಕ ಭಿನ್ನಾಭಿಪ್ರಾಯಕ್ಕಾಗಿಯೇ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಯಾಕೆಂದರೆ ಗೌರಿಗೆ ವೈಯಕ್ತಿಕ ಬದುಕೆಂದರೆ ಪತ್ರಿಕೆ ಮತ್ತು ಸೌಹಾರ್ದತೆಗಾಗಿ ನಿರಂತರ ಕೆಲಸ ಮಾಡುವ ತಹತಹ ಮಾತ್ರ ಅವಳ ತಾಯಿಯು ನಮ್ಮೊಂದಿಗೆ ಮಾತಾಡುವಾಗ ಹೇಳಿದ ಸಂಗತಿಗಳು ನನ್ನನ್ನು ಮೂಕಳಾಗಿಸಿದವು; ಅವಳು ಬೆಳಗಿನ ತಿಂಡಿಯೇ ತಿನ್ನುತ್ತಿದ್ದಿಲ್ಲ.. ಅವಸರ ಅವಸರ. ಮಧ್ಯಾಹ್ನ ಒಂದು ಚಪಾತಿ. ಅದಕ್ಕೂ ಪುರುಸೊತ್ತಿಲ್ಲ. ಊಟವೇ ಇಲ್ಲದೆ ಅದ್ದೆಂಗೆ? ಉಣ್ಣು ಮಗಳೇ.. ನನ್ನ ದನಿ ಅವಳಿಗೆ ಕೇಳಿಸುತ್ತಿತ್ತೋ ಇಲ್ಲವೊ.. ಬರೀ ಓಡಾಟ ಬರವಣಿಗೆ, ಯಾರೋ ಕಷ್ಟದಲ್ಲಿದ್ದಾರೆ ಅವರಿಗೆ ನೆರವಾಗಬೇಕು, ಅದು ಬರಿಬೇಕು ಇದು ಬರಿಬೇಕು.. ನನ್ನ ಗೌರಿಗೆ ಹಳೆ ಹೊಸ ಬಟ್ಟೆಗಳ ಬಗ್ಗೆಯೂ ಗಮನವಿರುತ್ತಿರಲಿಲ್ಲ. ನನ್ನ ಗೌರಿ ಈ ನಾಡಿಗೆ ಶಾಂತಿ ಸೌಹಾರ್ದತೆ ಬಯಸಿದಳು.. ಅವಳದ್ದೇ ಪ್ರತಿರೂಪದಂತೆ ಈಗ ಲಕ್ಷ ಲಕ್ಷ ಜನ ಗೌರಿಯರು.. ಇವರೆಲ್ಲ ನನ್ನದೇ ಗೌರಿಯರು.. ನನ್ನ ಗೌರಿ ಸತ್ತಿಲ್ಲ..' ಅವರ ಕಣ್ಣಲ್ಲಿ ಮಗಳನ್ನು ಕಳೆದುಕೊಂಡ ಆಗಾಧ ನೋವಿತ್ತು ಮತ್ತು ಮಗಳ ನಿಲುವಿನ ಬಗ್ಗೆ ಹೆಮ್ಮೆಯೂ ಇತ್ತು.

ಗೌರಿಗೆ ಗುಂಡು ಹೊಡೆದ ಕ್ಷಣದಿಂದಲೂ ನಮ್ಮೊಳಗೆ ದು:ಖದ ಸಾಗರವೊಂದರ ಅಲೆಗಳು ರೋಧಿಸುತ್ತಲೇ ಅಪ್ಪಳಿಸುತ್ತಿದ್ದವು. ಕೂಡಲೇ ನಾವು ರಾತ್ರಿ ಒಂಬತ್ತುವರೆಗೆ ಕಾರ್ಪೊರೇಷನ್‌ ಸರ್ಕಲ್ ತಲುಪಿದೆವು. ಅದಾಗಲೇ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಡಿವೈಎಫೈ (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್), ಸಿಐಟಿಯು, ಜನವಾದಿ ಮಹಿಳಾ ಸಂಘಟನೆ ಅಲ್ಲದೆ ಇನ್ನು ಅನೇಕ ಸಾಹಿತಿಗಳು ಚಳುವಳಿಗಾರರು ಅಲ್ಲಿ ನೆರೆದು ಪ್ರತಿಭಟನೆ ಮಾಡುತ್ತಿದ್ದರು. ಮಾಧ್ಯಮದವರು ಸಹ ಒಬ್ಬೊಬ್ಬರೆ ಬರತೊಡಗಿದರು.

ಎಲ್ಲರ ಎದೆಯಂಗಳದಲ್ಲಿ ಗೌರಿಯ ಕೊಲೆಯು ಇನ್ನಿಲ್ಲದ ಸಂಕಟ, ದುಃಖ, ಆಕ್ರೋಶ ಧುಮ್ಮಿಕ್ಕುತ್ತಿತ್ತು. ನಿಡುಮಾಮಿಡಿ ಚನ್ನಮಲ್ಲಸ್ವಾಮಿಜಿ ಮತ್ತು ಇನ್ನಿತರ ಪ್ರಗತಿಪರ ಸ್ವಾಮಿಯವರೆಲ್ಲರೂ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ನಿಡುಮಾಮಿಡಿ ಚೆನ್ನಮಲ್ಲಸ್ವಾಮಿಜಿಯವರು ಮಾತನಾಡುತ್ತ “ಕೊಲೆಗಾರರ ಪ್ರಾಯೋಜಕರನ್ನು ಹಿಡಿಯಿರಿ, ಕೋಮುವಾದವೆಂಬುದು ಫ್ಯಾಸಿಸ್ಟ್ ಸ್ವರೂಪದ ಪಡೆಯುತ್ತಿದೆ. ಶತೃಗಳನ್ನು ಗುರುತಿಸುವಲ್ಲಿ ಸೋಲಬಾರದು. ಕಲಬುರ್ಗಿಯವರನ್ನು ಕಳೆದುಕೊಂಡು ಎರಡು ವರ್ಷಗಳು ಗತಿಸಿವೆ. ಕೊಲೆಗಾರರನ್ನು ಹಿಡಿಯುವುದಾಗಲಿ ಮತ್ತು ಕೊಲೆಯ ಪ್ರಾಯೋಜಕರನ್ನು ಹಿಮ್ಮೆಟ್ಟಿಸುವುದಾಗಲಿ ಈ ಸರಕಾರವು ಮಾಡಲಿಲ್ಲ. ಇದೊಂದು ಸವಾಲಾಗಿದೆ. ಜನತೆ ಒಗ್ಗೂಡಿ ಚಳುವಳಿ ನಡೆಸುವುದು ಜರೂರಿ ಇದೆ' ಎಂದು ಹೇಳಿದರು.

ಕ್ರಮೇಣ ಹೋರಾಟವು ಬೀದಿಗಿಳಿಯಿತು. ಹೋರಾಟಗಾರರ ಆಕ್ರೋಶಕ್ಕೆ ಕಾರಣವೆಂದರೆ ಫೇಸ್‌ಬುಕ್ಕಿನಲ್ಲಿ ಅನೇಕ ಸಂಘಿಗಳು ಗೌರಿ ಲಂಕೇಶ್ ಸಾವನ್ನು ಸಂಭ್ರಮಿಸುವ ವಿಕಾರ ಮೆರೆಯುತ್ತಿದ್ದರು. ಹೀಗಾಗಿ ನಾವು ರಾಸ್ತಾ ರೋಕೊ ಮಾಡಲು ತೀರ್ಮಾನಿಸಿದೆವು. ಕೆಲವು ನಿಮಿಷಗಳ ತರುವಾಯ ಜನತೆ ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ, ಹೋರಾಟ ವಾಪಸ್‌ ಪಡೆಯಿರಿ ಎಂದು ಪೋಲಿಸರು ಒತ್ತಾಯಿಸತೊಡಗಿದರು. ಆದರೆ ನಮ್ಮ ಸಿಟ್ಟು ಶಾಂತವಾಗುತ್ತಿರಲಿಲ್ಲ. ಏಕೆಂದರೆ ಫೇಸುಕ್ಕಿನ ವಿಕಾರಿಗಳಿಗೆ ನಿಯಂತ್ರಿಸುವ ಯಾವುದೇ ಕ್ರಮ ಕೈಗೊಳ್ಳದ ಸರಕಾರದ ಧೋರಣೆ ಕಾರಣವಾಗಿತ್ತು. ಹೀಗಾಗಿ ಅವರ ಫೇಸ್ಟುಕ್ ಸ್ಟೀನ್‌ಶಾಟ್‌ಗಳನ್ನು ತೆಗೆದು ಪೊಲೀಸ್ ಕಮಿಷನರ್ ಕಳುಹಿಸಿ ಅವರ ಮೇಲೆ ಕ್ರಮ ಕೈಗೊಳ್ಳದ ಹೊರತು ರಸ್ತೆ ಬಿಟ್ಟು ಎದ್ದೇಳುವ ಪ್ರಶ್ನೆಯೇ ಇಲ್ಲವೆಂದು ಪಟ್ಟು ಹಿಡಿದು ರಸ್ತೆಯ ಮೇಲೆ ಕುಳಿತವು. ಆಗ ರಾತ್ರಿ ಒಂದು ದಾಟಿತ್ತು. ಮಳೆಯು ಸಹ ಸುರಿಯತೊಡಗಿತು. ಹೋರಾಟಗಾರರೊಳಗಿನ ಸಂಕಟ ಹೆಚ್ಚತೊಡಗಿತು. ಕಡೆಗೆ ಪೊಲೀಸ್‌ ಅಧಿಕಾರಿಗಳಿಂದ ಕ್ರಮ ಕೈಗೊಳ್ಳುವ ಭರವಸೆ ಪಡೆವ ಹೊತ್ತಿಗೆ ಗಂಟೆ ಎರಡಾಗಿರಬಹುದು. ಸುರಿವ ಮಳೆಯಲ್ಲಿ ಮನೆ ಸೇರುವ ಹೊತ್ತಿಗೆ ಎಲ್ಲರಿಗೂ ನಸುಕಿನ ಜಾವವೇ ಆಗಿದ್ದು ಸಹಜವಾಗಿತ್ತು. ಬೆಂಗಳೂರೆಂದರೆ ಕೈಯಳತೆಯ ಊರೇ? ಎಷ್ಟೊಂದು ದೂರ ದೂರದಿಂದ ನೋವು ಹೊತ್ತು ಬಂದಿದ್ದರು ಜನರು... ಗುಂಡು ಹೊಡೆದಿದ್ದು ಗೌರಿಗೆ ತಾಕಿದ್ದು ನಮ್ಮೆದೆಗ ಎಂಬಂತಾಗಿತ್ತು ಎಲ್ಲರ ಸ್ಥಿತಿ.

ಕೊಲೆಯಾದ ದಿನದ ರಾತ್ರಿಯೇ ರಾಜ್ಯದ ದೇಶದ ಬಹಳಷ್ಟು ಕಡೆ ಹೋರಾಟಗಳು ನಡೆದವು. ಅನೇಕ ಭಾಗದಲ್ಲಿ ಕುಟುಂಬಗಳ ಎಲ್ಲ ಸದಸ್ಯರು ರಸ್ತೆಗೆ ಬಂದು ಪ್ರತಿಭಟನೆ ನಡೆಸಿದ್ದು ಗೌರಿಯ ಕೊಲೆಯಿಂದಾದ ಆಳದ ಗಾಯದ ಪ್ರತೀಕವಾಗಿದ್ದವು.

ಮರುದಿನಕ್ಕೆ ಅಂದರೆ 6.9.2017ರಂದು ಅತ್ತ ಗೌರಿಯ ದೇಹವು ರವೀಂದ್ರ ಕಲಾಕ್ಷೇತ್ರಕ್ಕೆ ಬಂತು. ಇತ್ತ ಬೆಳಿಗ್ಗೆ ಒಂಬತ್ತು ಗಂಟೆಯಿಂದಲೇ ಟೌನ್ ಹಾಲ್ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ಸುರುವಾಯಿತು. ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಎಲ್ಲ ಹಿರಿಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಮತ್ತೆಲ್ಲ ಜೀವಪರ ವ್ಯಕ್ತಿ ಶಕ್ತಿಗಳೆಲ್ಲ ಬಂದು ನೆರೆಯತೊಡಗಿದರು. ಎಲ್ಲರೂ ಮಾತಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾತ್ರವಲ್ಲ ನಾಶದತ್ತ ನುಗ್ಗಿದ ಫ್ಯಾಸಿಸ್ಟ್ ಕ್ರೌರ್ಯವನ್ನು ಹಿಮ್ಮೆಟ್ಟಿಸಬೇಕಾದ ಹೊಣೆಗಾರಿಕೆ ಬಗ್ಗೆ ಮಾತನಾಡಿದರು. ಕಳೆದ ಹದಿನೇಳು ವರ್ಷಗಳಿಂದ ಗೌರಿಯು ಅಕ್ಷರಗಳೊಂದಿಗೆ ಬೀದಿ ಮೇಲೆ ನಿಂತು ಸೌಹಾರ್ದಕ್ಕಾಗಿ ಸಮತೆಗಾಗಿ ಎತ್ತಿದ ದನಿಯು ಅಲ್ಲಿ ಮೊರೆಯುತ್ತಿತ್ತು. ಸಂಜೆಹೊತ್ತಿಗೆ ಗೌರಿಯು ಮಣ್ಣಲ್ಲಿದ್ದಳು ಮತ್ತು ಅವಳ ಚಿಂತನೆಗಳು ಎಲ್ಲರ ಎದೆಯಲ್ಲಿ. ಇತ್ತೀಚೆಗಿನ ದಿನಮಾನಗಳಲ್ಲಿ ಗೌರಿಯು ಸಂತಳಂತಾಗುತ್ತಿದ್ದಳು. ಅವಳು ಕ್ರಾಂತಿಕಾರಿ ಮಕ್ಕಳಿಗೆಲ್ಲ ತಾಯಿಯಾಗಿ ಮಮತೆಯ ಸ್ಪರ್ಶ ನೀಡಿದಳು. ಚಳುವಳಿಗಳು ತೀವ್ರ ತಾಯ್ತದನದ ಸ್ಪರ್ಶದೊಂದಿಗೆ ಪ್ರಖರಗೊಳ್ಳಬೇಕಾದ ಜರೂರಿ ಯಾವತ್ತೂ ಇದೆ.

ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆಯೊಂದು ಅಸ್ತಿತ್ವಕ್ಕೆ ಪಡೆದಿದ್ದು ಕಣ್ಣೀರಿನೊಂದಿಗೆ ಮತ್ತು ಹೋರಾಟದ ಛಲದೊಂದಿಗೆ, ದಿನಾಂಕ 12 ಸೆಪ್ಟೆಂಬರ್ 2017ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆಟದ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಬಹಳ ಕಡಿಮೆ ಸಮಯವೆಂಬ ಚಿಂತೆಯಿರಲಿಲ್ಲ. ಏಕೆಂದರೆ ಎಲ್ಲರೂ ಸಮಯದ ಗಡಿ ದಾಟಿದೆವು. ಸಮಯದ ಪರಿವೆಯಿರಲಿಲ್ಲ. ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿ, ಕಾನೂನು ಸಮಿತಿ ಹೀಗೆ ಕೆಲಸದ ಹಂಚಿಕೆ ಮಾಡಿಕೊಂಡೆವು. 7ನೇ ತಾರೀಕಿನಿಂದ 12ರವರೆಗೆ ಎಲ್ಲರೂ ನಿರಂತರ ಕೆಲಸ ಮಾಡಿದರು. ಪತ್ರಿಕಾ ಗೋಷ್ಠಿಗಳು, ಸಭೆಗಳು, ಬರಹಗಳು ಚಿತ್ರಗಳು, ಹಾಡುಗಳು ಒಂದೇ ಎರಡೇ ಪ್ರತಿಯೊಬ್ಬರೂ ಈ ಕಗ್ಗೋಲೆಯನ್ನು ಖಂಡಿಸತೊಡಗಿದರು.

ದಿನಾಂಕ 12.9.2017ರಂದು ಬೆಳಿಗ್ಗೆಯೇ ಜನರು ನಾಡಿನಿಂದ ಹರಿದು ಬರತೊಡಗಿದರು. ಮಹಾರಾಷ್ಟ್ರ, ತೆಲಂಗಾಣಾ, ಗುಜರಾತ್, ಆಂಧ್ರಪ್ರದೇಶ, ದೆಹಲಿ, ಹೀಗೆ ಅನೇಕ ರಾಜ್ಯಗಳಿಂದ ಜನರು ಬಂದರು. ಕರ್ನಾಟಕದಿಂದಲೂ ಉತ್ತರ ಕರ್ನಾಟಕದ ಕಲಬುರಗಿ ರಾಯಚೂರು ಮತ್ತಿತರ ಜಿಲ್ಲೆಗಳಿಂದ ಜನರು ಗೌರಿ ಹತ್ಯೆ ಖಂಡಿಸಿ ಬೆಂಗಳೂರು ಚಲೊ ನಡೆಸಿದರು. ಹೀಗೆ ಬಂದ ಜನಸಾಗರವು ಹದಿನೈದರಿಂದ ಇಪ್ಪತ್ತು ಸಾವಿರವಾಗಿತ್ತು. ಟೇಸ್ಟಾ ಸೆಟಲವಾಡ್, ಸೀತಾರಾಮ್ ಯೇಚೂರಿ, ಜಿಗ್ಗೇಶ್ ಮೇವಾನಿ, ಕವಿತಾ ಕೃಷ್ಣನ್, ಮೇಧಾ ಫಾಟ್ಕರ್, ರಾಕೇಶ್ ಶರ್ಮ, ಅನಂದ ಪಟವರ್ಧನ್, ಗಣೇಶ ದೇವಿ, ದೇವನೂರು ಮಹಾದೇವ, ರಾಜೇಂದ್ರ ಚನ್ನಿ, ನಿಡುಮಾಮಿಡಿ ಚನ್ನಮಲ್ಲ ಸ್ವಾಮಿಜಿ,  ಶರಣರು, ನಿಜಗುಣಾನಂದ ಸ್ವಾಮಿ, ಮರಿಯಂ ಧಾವಳೆ ಹೀಗೆ ನೂರಾರು ಜನರು ಭಾಗವಹಿಸಿದರು. ಗೌರಿಯ ತಾಯಿ ಇಂದಿರಾ ತಂಗಿ ಕವಿತಾ ತಂಗಿಯ ಮಗಳು ಇಶಾ ಸಹ ಸಮಾವೇಶದಲ್ಲಿ ಭಾಗವಹಿಸಿದರು. ಸಮಾವೇಶದಲ್ಲಿ ಗೌರಿ ಲಂಕೇಶ ಕುರಿತು ವಿಶೇಷಾಂಕ ಬಿಡುಗಡೆ ಮಾಡಲಾಯಿತು. ಸಾಂಸ್ಕೃತಿಕ ಪ್ರತಿಭಟನಾ ಪ್ರದರ್ಶನಕ್ಕೂ ವೇದಿಕೆ ಸಾಕ್ಷಿಯಾಯಿತು.

ಸಮಾವೇಶ ನಡೆದ ದಿನವೇ ಸಂಜೆಗೆ ರಾಷ್ಟ್ರ ಮಟ್ಟದಲ್ಲಿ ಹೋರಾಟ ವಿಸ್ತರಿಸುವ ಕುರಿತು ತೀರ್ಮಾನ ಮಾಡಲಾಯಿತು. ಹಾಗೂ ದೆಹಲಿಯಲ್ಲಿ ಅಕ್ಟೋಬರ್ 5ರಂದು ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ರೂಪಿಸಿಕೊಂಡು ಪ್ರತಿಭಟನಾ ಸಮಾವೇಶ ನಡೆಸುವ ಸೂಚನೆ ಮಾಡಲಾಯಿತು. ಹಾಗೂ ಅಕ್ಟೋಬರ್ 2ರಂದು ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದರು' ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಡಲಾಯಿತು. ಇದೇ ಹಿನ್ನೆಲೆಯಲ್ಲಿ ಎಲ್ಲ ಜೀವಪರ ಸೌಹಾರ್ದತೆಯ ಶಕ್ತಿಗಳನ್ನು ಒಗ್ಗೂಡಿಸಿ ಹೋರಾಟ ಬಲಗೊಳಿಸಲು ತೀರ್ಮಾನಿಸಲಾಯಿತು.

ಗಾಂಧಿಯನ್ನು ಕೊಂದ ಶಕ್ತಿಯು ಕೇಂದ್ರದಲ್ಲಿ ಕೋಮುಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ನಿರ್ಭಯವಾಗಿ ಬಾರ್ಬರಿಕ ಕೋಮುವಾದಿ ಚಟುವಟಿಕೆ ನಡೆಸುತ್ತಿದೆ. ದೇಶದಾದ್ಯಂತ ಕೋಮುವಾದಿಗಳು ನಿರ್ಭಯದಿಂದ ಭಯೋತ್ಪಾದನೆ ಕೆಲಸ ಮಾಡುತ್ತಿದ್ದಾರೆ. ಅಂದರೆ ದಾಬೋಲ್ಕರ್, ಪಾನ್ಸಾರೆ, ಕಲಬುರ್ಗಿ ಮತ್ತು ಗೌರಿ ಲಂಕೇಶ್, ಅಂಥ ಚಳುವಳಿ-ಚಿಂತಕರ ಕೊಲೆ ನಡೆಸುವ ಮೂಲಕ ಚಿಂತನಾ ವಲಯದಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದಾರೆ. ಪೆಹ್ಲುಖಾನ್, ಮೊಹಮ್ಮದ್ ಎಬ್ಲಾಕ್, ರೋಹಿತ ವೇಮುಲ, ಹಾಫೀಜ್‌ ಜುನೈದ್ ಖಾನ್, ಅಲ್ಲದೆ ಅಸಂಖ್ಯ ಮುಸ್ಲಿಂ, ಕ್ರೈಸ್ತರು, ದಲಿತರು, ಆದಿವಾಸಿಗಳು ಇಂತಹ ಕೋಮುಹಿಂಸೆಗೆ ಬಲಿಯಾಗಿದ್ದಾರೆ. ಇಂತಹ ಹಿಂಸೆಯನ್ನು ಹುಟ್ಟುಹಾಕುವ ಮೂಲಕ ಸಾರ್ವಜನಿಕ ಸಾಮಾನ್ಯ ಜನತೆಯ ವಲಯದಲ್ಲಿ ವಿಪರೀತ ಭಯವನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಭಯದ ಸಮಾಜದಲ್ಲಿನ ಮಕ್ಕಳು, ಯುವಕರು, ವೃದ್ಧರು ತಲ್ಲಣದ ಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂದರೆ ಭಾರತದಲ್ಲಿ ಸಂಘ ಪರಿವಾರದ ಸೇವಕ ನರೇಂದ್ರ ಮೋದಿಯು ಅಧಿಕಾರಕ್ಕೆ ಬಂದ ಮೇಲೆಯಂತೂ ಕೋಮುವಾದಿಗಳು ಅತ್ಯಂತ ನಿರ್ಭಯದಿಂದ ಕೊಲೆಗಳನ್ನು ಹಿಂಸೆಗಳನ್ನು ನಡೆಸುತ್ತಿದ್ದು ಭಾರತವನ್ನು ಭಯದ ಭಾರತವಾಗಿ ಮಾರ್ಪಡಿಸುತ್ತಿದ್ದಾರೆ. ಆದ್ದರಿಂದಲೇ ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು. ಗೌರಿಯ ಈ ಗುರಿಯನ್ನು ತಲುಪುವುದಕ್ಕಾಗಿ ಐಕ್ಯ ಹೋರಾಟವು ಬಲಗೊಳ್ಳುವ ದಿಕ್ಕಿನಲ್ಲಿ ಶ್ರಮಿಸಬೇಕಾದದ್ದು ಎಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ.


© Copyright 2022, All Rights Reserved Kannada One News