Flash News:
ಅವಳು ಬಿಲ್ ಕಿಸ್: ಸಿಕಂದರ್ ಅಲಿ ಅವರ ಕವಿತೆ

ಅವಳು ಬಿಲ್ ಕಿಸ್: ಸಿಕಂದರ್ ಅಲಿ ಅವರ ಕವಿತೆ

Updated : 20.08.2022

ಅವಳು ಬಿಲ್ ಕಿಸ್

ಅವಳು ಬಿಲ್ಕಿಸ್ ಇರುವಷ್ಟು ದಿನ
ನಕಾಬಿನಲಿದ್ದವಳು
ವಸುದೈವ ಕುಟುಂಬವಿದ್ದಂತೆ
ಗಾಂಧೀಯ ತವರೆಂದು
ಹೊರ ಬಂದಿದ್ದಳು

ಅಂದೇಕೊ ಸೂರ್ಯನೂ
ಓರೆಗಣ್ಣು ನೋಟವ ಬೀರಿ
ಧಗ ಧಗನೇ ಉರಿಯುತ್ತಿದ್ದ

ಎಲ್ಲಿ ನೋಡಿದರಲ್ಲಿ
ಕೇಕೆ ಹಾಕಿ ಕೂಗುತ್ತಿರುವ
ಕೊಳಕು ಜಗತ್ತೇ ಕಣ್ಣ ಮುಂದಿತ್ತು

ಗಲ್ಲಕ್ಕೆ ಶಲ್ಯೆ ಸುತ್ತಿದ್ದ ಗೂಡ್ಸೆಯ ಸಂತತಿ
ಖಡ್ಗ ತ್ರಿಶೂಲವ ಹಿಡಿದು
ನಡು ಬೀದಿಯಲಿ ಭಯಂಕರ
ಕವಾಯತು ನಡೆಸುತ್ತಿದ್ದವು

ಏನೆಂದು ತಿಳಿಯುವಷ್ಟರಲ್ಲಿ
ಆಕೆಯ ಭಾರ ಹೊತ್ತಿದ್ದ
ಬೇರುಗಳ ನೆತ್ತರ ಕೋಡಿಯಲ್ಲಿ
ನೋಣಗಳ ಗುಂಪೊಂದು
ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದವು

ಅದು ನಿಸ್ಸಹಾಯಕಳಾದ
ನಿರ್ಭಯಾ ನಿದ್ದೆಯಲ್ಲಿದ್ದ ಕಾಲ
ದ್ವೇಷದ ದಾಹಕ್ಕೆ
ಸಾಮೂಹಿಕ ಅತ್ಯಾಚಾರವಾಗಿದ್ದಳು

ಭ್ರೂಣಾವಸ್ಥೆಯಲ್ಲಿದ್ದ ಆಕೆಯ
ಪ್ರತಿರೂಪ ಲೋಕದ
ಅಸಹಿಷ್ಣುತೆ ತಿಳಿದು
ಹೊರ ಬರಲು ನಿರಾಕರಿಸುತ್ತಿತ್ತು

ಕಲಿಯುಗದಲ್ಲಿ “ಸತಿ”ಗೆ
ಚಿತೆಯ ಅವಶ್ಯಕತೆಯಿಲ್ಲದೇ
ಬೆಂಕಿಯ ಜ್ವಾಲೆಯಲ್ಲಿ ಬೆಂದು
ಬಲಿಯಾಗಿದ್ದಳು ಬಿಲ್ಕಿಸ್

ನ್ಯಾಯಕ್ಕಾಗಿ ಬೇಡಿಕೆ ಇಟ್ಟವಳಿಗೆ
ತೀರ್ಪು ಕೊಡುಗೆಯಾಗಿ ಕೊಟ್ಟರೆ
ಇಲ್ಲಿ ದೌರ್ಜನ್ಯ ಎಸಗಿದ
ಅತ್ಯಾಚಾರಿಗಳು ಸಂಸ್ಕಾರವಂತರಾಗುತ್ತಿದ್ದಾರೆ

ಇನ್ನು ವಿಕಾಸದ ಸಾಬೂನಿನಿಂದ
ದಂಗೆಗಳ ಕಲೆ ಅಳಿಸಲು
ಹೊರಟ‌ ಮನೆಯ ಯಜಮಾನ
ಮಹಿಳಾ ಸಬಲೀಕರಣದ ಮಾತಾಡಿ
ಈಗ ಮತ್ತೇ ಅವಳನು ಕಂಡು
ಮುಖ ತಿರುವಿದ್ದಾನೆ.

-ಸಿಕಂದರ್ ಅಲಿ

© Copyright 2022, All Rights Reserved Kannada One News