ಪ್ರೇಮದ ಭಾಷೆ ಅರ್ಥವಾಗದವಳು: ಸಿಹಾನ ಬಿ.ಎಂ. ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಪ್ರೇಮದ ಭಾಷೆ ಅರ್ಥವಾಗದವಳು: ಸಿಹಾನ ಬಿ.ಎಂ. ಅವರ ವಾರದ ಅಂಕಣ

Updated : 31.10.2022

ಮೊದಲ ಬಾರಿಗೆ ಮದುಮಗಳಾಗಿ ಸಿಂಗರಿಸಿಕೊಂಡವಳಿಗೆ ಗೆಳತಿಯರ ಜೊತೆಗೂಡಿ ಆಡುತ್ತಿದ್ದ ಮದುವೆಯಾಟಕ್ಕೂ ಈ ನೈಜ ಬದುಕಿಗೂ ಅಜಗಜಾಂತರ ವ್ಯತ್ಯಾಸ ಗೋಚರಿಸತೊಡಗಿತು. ಕೂಡಮಂಡೂಕದಂತಿದ್ದ ಮನದಲ್ಲಿ ಸಾವಿರ ಪ್ರಶ್ನೆಗಳು. ಪ್ರೇಮದ ಭಾಷೆ ಅರ್ಥವಾಗುವ, ವ್ಯಕ್ತಪಡಿಸುವ ವಯಸ್ಸು ಅವಳದಲ್ಲ. " ಪುದಿಯೆಪೆಣ್ಣ್, ಪುದಿಯಾಂಪುಲೆ, ದೊಂಪ, ಚೋರು..."(ಮದುಮಗಳು, ಮದುಮಗ, ಚಪ್ಪರ, ಮದುವೆಯೂಟ..) ಇದು ಬಿಟ್ಟು ಬೇರೆ ಯಾವ ಶಬ್ದಗಳು ಆಕೆಗೆ ಕೇಳಿಸುತ್ತಲೂ ಇಲ್ಲ. ಇನ್ನೂ ಬಲಿತಿಲ್ಲದ ಅವಳೆರಡು ರಟ್ಟೆಗಳು ನೋಯುತ್ತಿದ್ದವು. ಅತಿಯಾದ ಭಾರದಿಂದ ಬೆನ್ನು ಬಾಗಿತ್ತು. ಕಾಲುಗಳೆರಡು ನೋವಿನಿಂದ ಎಳೆಯುತ್ತಿದ್ದುವು. ಪಾದದಡಿಯಲ್ಲಿ ಸಹಿಸಲಾಗದ ಸೆಳೆತ. ಸಂಸಾರದ ನೊಗವನ್ನು ಹೊರಬೇಕಾದ ಕತ್ತಿನ ಮೇಲೆ ತೂಗುಕತ್ತಿ ನೇತಾಡುತ್ತಿದ್ದಂತೆ ಭಾಸವಾಗುತ್ತಿತ್ತು. ತಲೆಯ ತುಂಬಾ ಒಂದರ ಹಿಂದೆ ಒಂದರಂತೆ ಚಿಂತೆಗಳು ವಕ್ಕರಿಸಿ ಬೋರ್ಗೆರೆಯುವ ಕಡಲಿನಂತಾಯಿತು. ಅತ್ತ ಸಾರಾಳ ಮಾತುಗಳು ಇತ್ತ ಅಪ್ಪ ಮತ್ತು ಅಜ್ಜಿಯ ದರ್ಪದ ಆಜ್ಞೆಗಳು ಜೊತೆಯಾಗಿ ಅಬ್ಬರಿಸುವಂತಾಗುತ್ತಿತ್ತು.

ತಿಂಗಳ ಹಿಂದೆಯೇ ಮದುವೆಯ ಸಿದ್ಧತೆ ಭರದಿಂದ ನಡೆಯುತ್ತಿತ್ತು. ನೆಂಟರು, ಬಂಧುಗಳು ವಾರದ ಮೊದಲೇ ಮದುವೆ ಮನೆಗೆ ದಿಂಡು ದಿಂಡಾಗಿ ಬಂದಾಯಿತು. ಅಕ್ಕಿ, ತರಕಾರಿಗಳನ್ನು, ಅಡುಗೆ ಸಾಮಾಗ್ರಿಗಳನ್ನು ಒಣಗಿಸಿ ಶುಚಿಗೊಳಿಸುವುದು, ಸಕ್ಕರೆ, ಬೆಲ್ಲಗಳನ್ನು ಇರುವೆ ಹತ್ತದಂತೆ ಭದ್ರವಾಗಿ ಡಬ್ಬಗಳಲ್ಲಿ ತುಂಬಿಸಿಡುವುದು, ತುಪ್ಪ, ಎಣ್ಣೆಯ ಬಾಲ್ಡಿಗಳನ್ನು ತೆಗೆದಿರಿಸುವುದು, ತೆಂಗಿನ ಕಾಯಿಯನ್ನು ತುರಿದು ಒಣಗಿಸಿ, ಒಲೆಯ ಮೇಲಿಟ್ಟು ಹುರಿದು ಅರೆದು ಡಬ್ಬಗಳಲ್ಲಿ ತುಂಬಿಸಿಡುವುದು, ವಾರದ ಹಿಂದೆಯೇ ಹಲ್ವಾ ಪಾಕ ಮಾಡಿ ತಯಾರಿಸುವುದು, ಮದುಮಗಳ ಬಟ್ಟೆಬರೆ, ಒಡವೆಗಳ ಖರೀದಿಯ ಸಿದ್ಧತೆ ನಡೆಸುವುದು, ಮನೆಯವರಿಗೆ ಬಟ್ಟೆ ಖರೀದಿಸುವುದು...ಹೀಗೆ ಮದುವೆಯೆಂದರೆ ಒಂದೆರಡು ಕೆಲಸಗಳೇ ? ಮದುವೆ ದಿನದವರೆಗೂ ಮುಗಿಯದ ಕೆಲಸದ ಭಾರಗಳು. ಅದರ ನಡುವೆ ಏನಾದರು ಮರೆತು ಹೋದರೆ ಅದನ್ನು ನೆನಪಿಸುತ್ತಾ ಪುನಃ ಅದರ ತಯಾರಿಯಲ್ಲಿ ತೊಡಗಿಸಿಕೊಳ್ಳುವುದು. ಮನೆಯ ಮುಂದೆ ದೊಡ್ಡ ಅಂಗಳದ ತುಂಬಾ ಗಂಡಸರಿಗಾಗಿ ಕಟ್ಟಿದ ಚಪ್ಪರ, ಮನೆಯ ಇಕ್ಕೆಲ ಹಾಗು ಹಿಂದಿನ ಭಾಗದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಚಪ್ಪರದ ವ್ಯವಸ್ಥೆ, ಅಡುಗೆ ಮನೆಯ ಸಿದ್ಧತೆ, ಕೇಜಿಗಟ್ಟಲೆ ಅನ್ನ ಬೇಯಿಸಲು ಬಾಂಡ್ಲಿಗಳ ಜೋಡಿಸುವಿಕೆ, ಅಡುಗೆ ತಯಾರಿಸಲು ಊರಿನಲ್ಲಿ ಹೆಸರುವಾಸಿಯಾದ ನಳಪಾಕರ ಹುಡುಕುವಿಕೆ, ಜೊತೆಗೆ ಗಂಡಿನ ಕಡೆಯವರ ಬೇಡಿಕೆಯ ಪಟ್ಟಿಗಳನ್ನು ಪೂರೈಸುವ ತುರಾತುರಿ, ವರದಕ್ಷಿಣೆಯ ಚಿನ್ನ, ಹಣವನ್ನು ಹೊಂದಿಸುವುದು. ಇದೆಲ್ಲದರ ಹಿಂದೆ ಓಡಾಡಿ ಸುಸ್ತಾಗಿ ಬಳಲಿದ ಅಪ್ಪನೊಂದಿಗೆ ಮಾತೆತ್ತಿದರೆ ಬೈಗುಳಗಳ ಸುರಿಮಳೆ ತಪ್ಪಿದಲ್ಲ. ಅಪ್ಪನ ಆಜ್ಞೆಗೆ ಇದುವರೆಗೆ ಎದುರುತ್ತರಿಸದ ಈಕೆ ಪ್ರತಿಯೊಂದಕ್ಕೂ ಮೌನದೊಂದಿಗೆ ರಾಜಿಯಾಗುತ್ತಿದ್ದಳು. ಅದರ ಮೇಲೆ ಅಜ್ಜಿಯ ಜೋರುಧ್ವನಿಗೆ ಮದುವೆ ಎಂದರೇನು ಗೊತ್ತಿಲ್ಲದವಳು ಮದುವೆಯೆಂಬ ಪದ ಕೇಳಿದೊಡನೆ ಕಂಪಿಸತೊಡಗಿದಳು.

ಆ ಪುಟ್ಟ ಹೃದಯಕ್ಕೆ ತನ್ನ ಗೆಳತಿಯರೊಂದಿಗೆ ಸೇರಿ ಆಡುತ್ತಿದ್ದ ಪುಟ್ಟ ಪ್ರಪಂಚ ಮಾತ್ರ ಗೊತ್ತು. ಆ ದಿನಗಳಲ್ಲಿ ಅನುಭವಿಸುತ್ತಿದ್ದ ಉತ್ಸಾಹ, ತುಡಿತ ಇದೀಗ ಭ್ರಮೆಯೆನಿಸತೊಡಗಿತು. ಮದುವೆಯೆಂದರೆ ಎರಡು ಮನಸ್ಸುಗಳು ಜೊತೆಯಾಗುವುದು, ದೇಹ ಮತ್ತು ಮನಸ್ಸು ಮಿಲನವಾಗಬೇಕಾಗಿದ್ದ ಮಧುರ ಸಂಬಂಧ. ಪ್ರತಿಯೊಂದರಲ್ಲೂ ಸಂತೃಪ್ತಿಯನ್ನು ಹುಡುಕುತ್ತಾ ಹೊಂದಿ ಬಾಳುವುದು, ಪರಸ್ಪರ ಮನಸ್ಸುಗಳನ್ನು ತೆರೆದು ಯಾವುದೇ ಮುಚ್ಚುಮರೆಯಿಲ್ಲದೆ ತಪ್ಪಾದಾಗ ಕ್ಷಮಿಸುವುದು, ಬರೀ ಆರೋಪ- ಪ್ರತ್ಯಾರೋಪಗಳಲ್ಲಿ ಕಳೆಯದೆ ತೃಪ್ತಿಯಾದಾಗ ಪ್ರೇಮವನ್ನು ಪ್ರಕಟಿಸುವುದು, ಪರಸ್ಪರರ ನಡುವೆ ಅನುರಾಗ, ಅನುಕಂಪ, ಪ್ರೇಮವನ್ನು ವ್ಯಕ್ತಪಡಿಸುತ್ತಾ ಬಾಳುವುದು ಎಂಬ ಮದುವೆಯ ಪರಿಕಲ್ಪನೆಯನ್ನು ಅರ್ಥ ಮಾಡಿಸಿದರೂ ಅರ್ಥವಾಗದ ಪುಟ್ಟ ಹೃದಯವದು. ಪ್ರೀತಿ, ಪ್ರೇಮದ ಅರಿವಿಲ್ಲದ ಆಕೆಯನ್ನು ಮದುಮಗಳಾಗಿ ಸಿಂಗರಿಸುವವರೆಗೂ ಯಾವುದೇ ಬದಲಾವಣೆಗಳಾಗಲಿ, ಆಕರ್ಷಣೆಯಾಗಲಿ, ಆಸಕ್ತಿಯಾಗಲಿ ಕಾಣಲೇ ಇಲ್ಲ. ಕನಸು ಕಾಣುವ ಕಣ್ಣುಗಳಲ್ಲಿ ಆತಂಕದ ಛಾಯೆ ಕವಿದಿತ್ತು. ಸ್ವಪ್ನ ಲೋಕದಲ್ಲಿ ವಿಹರಿಸಬೇಕಾದ ಮನಸ್ಸಿನಲ್ಲಿ ಭಯದ ಕಾರ್ಮೋಡ ಎದ್ದಿತ್ತು.

ವಧುಪರೀಕ್ಷೆಗೆ ಬಂದಿದ್ದ ತನಗಿಂತ ಅದೆಷ್ಟೋ ವರ್ಷ ಹಿರಿಯವನಾದ ಮದುಮಗನನ್ನು ನೋಡಿ ಆಕೆಗೆ ಗೌರವಭಾವ ಮೂಡಿತೇ ಹೊರತು ಅದರ ಜೊತೆಯಲ್ಲಿ ಪ್ರೇಮಭಾವ ಅರಳಲಿಲ್ಲ. ಆಟ ಆಡುತ್ತಿದ್ದವಳನ್ನು ಎಳೆದು ತಂದು ವಧುಪರೀಕ್ಷೆಗೆ ನಿಲ್ಲಿಸಿದಾಗ ಅವಳ ಮನಸ್ಸು ಪೂರ್ತಿ ಇನ್ನೂ ಮುಗಿಯದ ಆಟದ ಮೇಲೆ ಇತ್ತು. ಆ ಗುಂಗಿನಿಂದ ಅವಳಿನ್ನೂ ಹೊರ ಬಂದಿಲ್ಲ. ಇದೀಗ ಮತ್ತೊಮ್ಮೆ ಕೈಗೊಂಬೆಯಾಗಿಸುತ್ತಾ, ಪ್ರತಿಯೊಂದಕ್ಕೂ ಕೋಲೆ ಬಸವನಂತೆ ತಲೆಯಾಡಿಸುತ್ತಾ, ನಿರಾಕರಣೆ ಎಂಬ ಪದ ಸುಳಿಯದಂತೆ ಪ್ರತಿಯೊಂದನ್ನು ಧರಿಸುತ್ತಾ ದೇಹ, ಮನಸ್ಸನ್ನು ಭಾರವಾಗಿಸುತ್ತಾ ಕಟ್ಟಿ ಹಾಕುತ್ತಿದ್ದ ಈ ಮದುವೆ ಮುಗಿದರೆ ಸಾಕಿತ್ತು ಎಂದು ಆಗಾಗ ಪ್ರಾರ್ಥಿಸುತ್ತಿದ್ದಳು. ಉತ್ಸಾಹ, ಹುರುಪುಗಳನ್ನು ಕಳೆದುಕೊಂಡ ನೋವನ್ನು ವ್ಯಕ್ತಪಡಿಸಲು ಅವಳ ಬಳಿ ಯಾರೂ ಇಲ್ಲ. ಕಣ್ಣೀರು ಅವಳ ಕೆನ್ನೆಯನ್ನು ತೋಯಿಸುತ್ತಲೇ ಇತ್ತು. ಯಾರಾದರು ಸಮಾಧಾನಿಸುವವರು ಇರುವವರೇನೋ ಎಂದು ಅತ್ತಿತ್ತ ಕತ್ತೆತ್ತಿ ನೋಡಿದರೂ ಇವಳ ನೋವನ್ನು ಅರ್ಥ ಮಾಡುವವರಾರೂ ಇರಲಿಲ್ಲ.

ಅಷ್ಟರಲ್ಲೇ ನಿಕಾಹ್ ಮುಗಿಸಿ ಗಂಡಿನ ಮನೆಯಿಂದ ಬಂದ ಗಂಡಸರ ಗುಂಪು "ಅಲ್ಲಾಹು ಅಕ್ಬರ್" ತಕ್ಬೀರ್ ಮೊಳಗಿಸುತ್ತಾ ಚಪ್ಪರದೊಳಗೆ ನುಗ್ಗಿದರು. ಹಾಡು, ದಫ್, ಕೋಲಾಟದ ಕಲರವ ಅಂಗಳದಲ್ಲೆಲ್ಲಾ ತುಂಬಿತು. ಬಿಳಿ ಬಣ್ಣದೊಂದಿಗೆ ಬಂಗಾರದ ಬಣ್ಣದ ಪಟ್ಟಿಯಿರುವ ಉದ್ದ ಪೈಜಾಮು, ಬಿಳಿ ಪಂಚೆಯ  ತುದಿಯ ಸುತ್ತ ಬಂಗಾರದ ಬಣ್ಣದ ಪಟ್ಟಿ, ಬಿಳಿ ಮಿಶ್ರಿತ ಬಂಗಾರದ ಬಣ್ಣದ ಕಸೂತಿಯ ಪೇಟ, ಕೈ ಬೆರಳಿಗೆ ಎರಡು ಪಚ್ಚೆ ಹರಳಿನ ಉಂಗುರ, ಕೊರಳಿಗೊಂದು ಹೂವಿನ ಹಾರ ಧರಿಸಿದ ಮದುಮಗ  ತುಸುಕಪ್ಪಾಗಿದ್ದರೂ ನೋಡಲು ಸುಂದರವಾಗಿದ್ದ. ಅಗಲವಾದ ಎದೆ, ಹೆಚ್ಚು ನೀಳವೂ ಅಲ್ಲದ ಹೆಚ್ಚು ಗಿಡ್ಡವೂ ಅಲ್ಲದ ದೇಹದ ಹುಡುಗನದ್ದು ಹರೆಯ ತುಂಬಿದ್ದ ವಯಸ್ಸು. ಮದುಮಗಳ ಸುತ್ತ ತುಂಬಿದ್ದ ಹೆಂಗಸರು ಮದುಮಗ ಬಂದ ಸೂಚನೆ ಸಿಕ್ಕಿದ ಕೂಡಲೇ ಮದುಮಗ, ದಫ್, ಹಾಡು, ಕುಣಿತವನ್ನು ನೋಡಲು ಕಿಟಕಿ, ಬಾಗಿಲುಗಳಿಗೆ ತೂಗು ಹಾಕಿದ್ದ ಕರ್ಟನಿನ ಎಡೆಯಿಂದ ಹರಸಾಹಸ ನಡೆಸುತ್ತಿದ್ದರು.

ತನ್ನ ಗೆಳತಿಯರ, ಸಂಬಂಧಿಕರ ಮದುವೆಯಲ್ಲಿ ಇವಳು ಈ ಸಂಭ್ರಮವನ್ನು ನೋಡಲು ಎಲ್ಲರಿಗಿಂತ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದಳು. ಆವಾಗಲೆಲ್ಲ ಮದುವೆಯೆಂದರೆ ಇದಿಷ್ಟೇ ಎಂದು ಮನಸ್ಸಿನಲ್ಲಿ ತುಂಬಿಸಿದ್ದಳು. ಸಾರಾ ಸಿಕ್ಕ ಮೇಲೆಯೇ ಮದುವೆಯ ನಂತರದ ಬದುಕಿನ ಬಗ್ಗೆ ಅಷ್ಟಿಷ್ಟು ವಿಷಯಗಳನ್ನು ತಿಳಿದಿದ್ದಳು. ತನ್ನ ಅಕ್ಕಂದಿರರ, ಗೆಳತಿಯರ ಮದುವೆ ನಂತರದ ಬದಲಾವಣೆಗಳು ಒಂದೊಂದಾಗಿ ಮನದೊಳಗೆ ತಂದು ಒಬ್ಬಳೇ ಏಕಾಂಗಿಯಾಗಿ ಚಿಂತಿಸುತ್ತಿದ್ದಳು. ತನ್ನ ಬದುಕು ಹಾಗಾಗದಿರಲೆಂದು ಆ ಕ್ಷಣ ಪ್ರಾರ್ಥಿಸುತ್ತಿದ್ದಳು. ಅಂದು ತನ್ನವರ ಮದುವೆ ದಿನಗಳಲ್ಲಿ ಈ ಹಾಡು, ಕುಣಿತದ ಸಂಭ್ರಮವನ್ನು ನೋಡಿ ಕಣ್ಣು ತುಂಬಿಸುತ್ತಿದ್ದವಳು ಇಂದು ಅದರ ಶಬ್ದಕ್ಕೆ ಭೂಮಿ ಒಮ್ಮೆ ಬಾಯಿ ತೆರೆದು ನುಂಗಬಾರದೇ ಎಂದು ಬಯಸುತ್ತಿದ್ದಳು. ಅಷ್ಟು ಗಜಿಬಿಜಿ ಗದ್ದಲದ ನಡುವೆಯೂ ಅವಳ ಮನಸ್ಸು ಅವಳಿಗೆ ಮಾತ್ರ ಕೇಳುವಂತಹ ಆರ್ತನಾದವನ್ನು ಕೂಗುತ್ತಲೇ ಇತ್ತು. ಕಿಕ್ಕಿರಿದ ಜನರಿಂದ ತುಂಬಿದ ಗಾಳಿಯಾಡದ ಕೋಣೆಯ ಕತ್ತಲು ಉಸಿರುಗಟ್ಟಿಸುವಂತಿತ್ತು. ಬೆವರಿನಿಂದ ತೊಯ್ದ ದೇಹ, ಕೈ, ಕಾಲುಗಳು ಸಣ್ಣಗೆ ನಡುಗುತ್ತಲಿದ್ದುವು.

 'ಇನ್ನೇನು ಮದುಮಗ ಒಳ ಬರುತ್ತಾನೆ...ಬಂದು ನನ್ನ ಪಕ್ಕ ಕೂರುತ್ತಾನೆ... ಎಲ್ಲರೂ ಜೋರಾಗಿ ಕೇಕೆ ಹಾಕುತ್ತಾರೆ...ಹಾರ ಬದಲಾಯಿಸುತ್ತಾನೆ...ಹಾಲಿನ ಲೋಟ ಬಾಯಿಗಿಡುತ್ತಾನೆ...' ಮದುವೆ ಮನೆಯಲ್ಲಿ ಅವಳು ಕಂಡ ಒಂದೊಂದೇ ದೃಶ್ಯಗಳು ಕಣ್ಣ ಮುಂದೆ ಸುಳಿದು ಅವಳ ಅಂತರಾಳದಲ್ಲಿ ಉಬ್ಬರವಿಳಿತ ಏರ್ಪಡದ ತೊಡಗಿದುವು. ಕೈ, ಕಾಲುಗಳ ನಡುಕ ಹೆಚ್ಚಾಗತೊಡಗಿತು. ದಿಗಿಲು ಹುಟ್ಟಿಸುವ ವಾತಾವರಣ. ಕಣ್ಣೀರು ಹರಿಯುತ್ತಲೇ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಇದುವರೆಗೆ ನೋಡಿಯೂ ಇಲ್ಲದ, ಮಾತನಾಡಿಯೂ ಗೊತ್ತಿಲ್ಲದವನ ಜೊತೆ ಇನ್ನು ಉಳಿದ ಬಾಳು ಬದುಕಬೇಕೆಂಬ ಆತಂಕ. ಈಗಷ್ಟೇ ನುಗ್ಗಿದ ಗಂಡಿನ ಕಡೆಯ ಹೊಸ ಮುಖಗಳ ಹೆಂಗಸರ ದಿಂಡು, ಬಂದ ಕೂಡಲೇ  ಹಿರಿಯಕ್ಕ ಕಿವಿಯೋಲೆ ಚುಚ್ಚಿದ ನೋವು, ಮದುಮಗನ ತಾಯಿ, ಸಹೋದರಿಯರ ದರ್ಪದ ಮುಖದ ಮುಂದೆ ಬೆವೆತು ನೀರಾದಳು. ಎಲ್ಲರ ಕಣ್ಣು ತಪ್ಪಿಸಿ ಒಮ್ಮೆ ಈ ಜಂಜಾಟದಿಂದ ಬಹುದೂರ ಓಡಿ ಹೋಗಬೇಕೆಂಬ ಆಲೋಚನೆ ಆಕೆಯ ಮನದಲ್ಲಿ ಮೆಲ್ಲಮೆಲ್ಲನೆ ಏಳ ತೊಡಗಿದುವು.

- ಸಿಹಾನ ಬಿ.ಎಂ.

© Copyright 2022, All Rights Reserved Kannada One News