ಸೀಬೆ ಹಣ್ಣಿನಲ್ಲಿರುವ 10 ಔಷಧೀಯ ಗುಣಗಳು

ಸೀಬೆ ಹಣ್ಣಿನಲ್ಲಿರುವ 10 ಔಷಧೀಯ ಗುಣಗಳು

Updated : 25.08.2022

ಅರೇ, ಸೀಬೆ ಹಣ್ಣಿನಲ್ಲಿ ಔಷಧೀಯ ಗುಣಗಳಿರುತ್ತಾ ಅಂತಾ ಕನ್‌ಫ್ಯೂಸ್‌ಆಗ್ತಾಯಿದಿಯಾ? ಹೌದು ನಮಗೆ ಪರಿಸರದಿಂದ ಸಿಗುವಂತಹ ಎಲ್ಲಾ ರೀತಿಯ ಹಣ್ಣುಗಳು ವಸ್ತುಗಳು ಎಲ್ಲವೂ ನಮಗೆ ಆರೋಗ್ಯಕ್ಕೆ ಉಪಕಾರಿಯಾಗಿರುತ್ತೆ, ಹಾಗೆಯೇ ಸೀಬೆ ಹಣ್ಣು ಅಧಿಕ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣಾಗಿದೆ. ಇದರ ಸಿಪ್ಪೆ, ತಿರುಳು, ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ ಬಳಸುತ್ತಾರೆ. ಇದನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದು ಆಪಲ್‌ಗಿಂತಲೂ ಅಧಿಕ ಪೋಶಕಾಂಶ ಹೊಂದಿರುವ ಹಣ್ಣು ಕೂಡಾ... ಹೇಗೆ ಅಂತೀರಾ? ಇಲ್ಲಿದೆ ನೋಡಿ..

1. ಹಲ್ಲಿನ ಆರೋಗ್ಯಕ್ಕೆ
ಸೀಬೆಕಾಯಿಯನ್ನು ಕೆಲವರು ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಅದನ್ನು ಸಿಪ್ಪೆ ಸಹಿತ ತಿಂದರೆ ಹೆಚ್ಚು ಆರೋಗ್ಯಕರ. ಇದನ್ನು ಹಲ್ಲಿನಿಂದ ಕಚ್ಚಿ ತಿಂದರೆ ದಂತಕ್ಷಯ ಬಾಧೆ ಕಾಣಿಸುವುದಿಲ್ಲ. ಆದ್ದರಿಂದ ಹಲ್ಲುಗಳ ಆರೋಗ್ಯಕ್ಕೆ ಸಿಬೆಕಾಯಿ ತಿನ್ನೋದು ಒಳ್ಳೆಯದು

2. ತೂಕ ಇಳಿಸುವಲ್ಲಿ ಸಹಕಾರ

ತೆಳ್ಳಗಾಗಬೇಕು ಎಂದು ಬಯಸುವವರು ತಮ್ಮ ಆಹಾರಕ್ರಮದಲ್ಲಿ ಸೀಬೆಹಣ್ಣು ಬಳಸುವುದು ಒಳ್ಳೆಯದು. ಸೀಬೆಕಾಯಿಯಲ್ಲಿ ಕಾರ್ಬೊಹೈಡ್ರೇಡ್ ಮತ್ತು ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಬೊಜ್ಜನ್ನು ನಿಯಂತ್ರಿಸುತ್ತದೆ. ಇನ್ನು ಈ ಹಣ್ಣಿನಲ್ಲಿ ನಾರಿನಂಶ ಹಾಗೂ ಖನಿಜಾಂಶಗಳು ಅಧಿಕವಿದ್ದು, ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುವುದಲ್ಲದೆ, ಹೊಟ್ಟೆಯೂ ತುಂಬುತ್ತದೆ. ಆದ್ದರಿಂದ ತೂಕ ಕಡಿಮೆಯಾಗಲು ಬಯಸುವವರು ಇದನ್ನು ತಿಂದು ಮೈಬೊಜ್ಜು ಕರಗಿಸಿ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

3. ಚರ್ಮದ ಕಾಂತಿಗೆ

ದಿನಾ ಒಂದು ಸೀಬೆಕಾಯಿ ತಿಂದು ನೋಡಿ, ನಿಮ್ಮ ತ್ವಚೆಯಲ್ಲಿ ಅಕಾಲಿಕ ನೆರಿಗೆ ಸಮಸ್ಯೆ ಕಾಣಿಸುವುದೇ ಇಲ್ಲ. ಇನ್ನು ಇದನ್ನು ತಿನ್ನುವ ಮೂಲಕ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ. ಸೀಬೆಕಾಯಿಯಲ್ಲಿ ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ನಾರಿನಂಶ, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವೂ ಇರುವುದರಿಂದ ತ್ವಚೆ ರಕ್ಷಣೆಯನ್ನು ಮಾಡುತ್ತದೆ.

4. ಮೊಡವೆ ಸಮಸ್ಯೆ

ಎಲ್ಲರಿಗೂ ಹೆಚ್ಚಾಗಿ ಕಾಡುವ ಸಮಸ್ಯೆಯೆ ಮೊಡವೆ. ಮೊಡವೆ ಬಂದರೆ ಇದು ಆತ್ಮವಿಶ್ವಾಸವನ್ನು ಕೂಡ ಕಡಿಮೆ ಮಾಡುವುದು. ಎಣ್ಣೆ ತ್ವಚೆಯವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ, ಇನ್ನು ಹಾರ್ಮೋನ್‌ಗಳ ವ್ಯತ್ಯಾಸದಿಂದ ಕೂಡ ಮೊಡವೆ ಸಮಸ್ಯೆ ಕಂಡು ಬರುವುದು. ಈ ಸಮಸ್ಯೆ ಇಲ್ಲವಾಗಿಸಲು ಸೀಬೆಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಇನ್ನು ಸೀಬೆಕಾಯಿ ಎಲೆಯನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಮುಖ ಕಾಂತಿಯುತವಾಗುವುದಲ್ಲದೆ, ಮೊಡವೆಗಳೂ ಮಾಯವಾಗುತ್ತವೆ.

5. ರೋಗ ನಿರೋಧಕ ಶಕ್ತಿಗೆ
ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್ಸ್‌ಅಂದರೆ ಮರೆವಿನ ಕಾಯಿಲೆ, ಸಂಧಿವಾತ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರವಾಗಿಸುತ್ತದೆ.

6. ಮಧುಮೇಹಕ್ಕೆ

ಸೀಬೆಕಾಯಿಯಲ್ಲಿ ಬೆಟಾ ಕೆರಾಟಿನ್, ಪೊಟಾಷ್ಯಿಯಂ ಹಾಗೂ ನಾರಿನಂಶ ಹೆಚ್ಚಾಗಿದ್ದು, ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿ. ಇನ್ನು ಇದಕ್ಕೆ ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣವಿರುವುದರಿಂದ ಹೃದಯದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.

7. ಕಾಮಾಲೆ
ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ. ಮೂರು ದಿನಗಳ ಕಾಲ ಸೀಬೆ ಎಲೆಯಿಂದ ಕಷಾಯ ಮಾಡಿ ಕುಡಿದರೆ ಕಾಮಾಲೆ ಮಾಯವಾಗುತ್ತದೆ. ಸೀಬೆ ಮರದ ಎಲೆಯಿಂದ ತಯಾರಿಸುವ ಔಷಧ ಯಕೃತ್ತು ಹಾನಿ ತಡೆಯುತ್ತದೆ. ಇದು ಕಾಮಾಲೆ ರೋಗಕ್ಕೆ ಅತ್ಯಂತ ಕಡಿಮೆ ಖರ್ಚಿನ ಔಷಧ ಕೂಡ ಆಗಿದೆ.

8. ಶೀತಕ್ಕೆ
ಸೀಬೆಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ಶೀತ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ಇದರಲ್ಲಿ ಕಬ್ಬಿಣದಂಶ ಅಧಿಕ ಇರುವುದರಿಂದ ದೇಹಕ್ಕೂ ಶಕ್ತಿ ದೊರೆಯುತ್ತದೆ.

9. ಮಲಬದ್ಧತೆ ನಿವಾರಣೆ
ಮಲಬದ್ಧತೆ ಸಮಸ್ಯೆ ಇರುವವರು ನಿಮ್ಮ ಆಹಾರ ಕ್ರಮದಲ್ಲಿ ಸೀಬೆಹಣ್ಣು ಸೇರಿಸಿ. ಸೀಬೆ ಹಣ್ಣಿನಲ್ಲಿ ಅಧಿಕವಾಗಿ ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇಷ್ಟೇ ಅಲ್ಲ, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.

10. ಒತ್ತಡ ನಿವಾರಣೆ

ಸೀಬೆ ಹಣ್ಣಿನಲ್ಲಿ ಇರವಂತಹ ಮೆಗ್ನಿಶಿಯಂ ಅಂಶವು ದೇಹದಲ್ಲಿನ ನರ ಮತ್ತು ಸ್ನಾಯುಗಳಿಗೆ ಆರಾಮ ನೀಡುತ್ತದೆ. ಇದು ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ಮೆಗ್ನಿಶಿಯಂ ಅಂಶ ಇರುವುದರಿಂದ ಒತ್ತಡ ನಿವಾರಣೆ ಮಾಡುತ್ತದೆ.

ಸೀಬೆ ಹಣ್ಣಿನಲ್ಲಿರುವ 10 ಔಷಧೀಯ ಗುಣಗಳನ್ನು. ಆದಷ್ಟೂ ನಾವು ಸೇವಿಸುವ ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ... ಯಾಕೆಂದರೆ, ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ, ನಾವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಎಷ್ಟೆಲ್ಲಾ ದುಡ್ಡು ವ್ಯಯ ಮಾಡುತ್ತೇವೆ ಆದ್ದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವೇ ದಾರಿ ಹುಡುಕಿಕೊಳ್ಳಬೇಕು ಆದಷ್ಟೂ ದಿನನಿತ್ಯ ಸೇವಿಸುವ ಊಟದಲ್ಲಿ ತಾಜಾ ಹಣ್ಣುಗಳು ತರಕಾರಿಗಳು ಸೇವೆಸಿ ಆರೋಗ್ಯ ವೃದ್ಧಿಸಿಕೊಳ್ಳಿ.

-ಕನ್ನಡ ಒನ್‌ ನ್ಯೂಸ್‌ ಬಳಗ
© Copyright 2022, All Rights Reserved Kannada One News