ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ!

ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ!

Updated : 15.11.2022

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಸ್ವಲ್ಪ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು  ಶೇ. 6.77ಕ್ಕೆ ಇಳಿಕೆಯಾಗಿದೆ. ಇದು ಕಳೆದ ಮೂರು ತಿಂಗಳಲ್ಲೇ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.7.4 ರಷ್ಟಿತ್ತು ಮತ್ತು ಆಗಸ್ಟ್ ನಲ್ಲಿ ಇದು ಶೇಕಡಾ 7.01 ರಷ್ಟಿತ್ತು.

ಗ್ರಾಹಕ ಬೆಲೆ ಸೂಚ್ಯಂಕ(CPI) ಆಧಾರಿತ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ಶೇ. 6.77ಕ್ಕೆ ಇಳಿದರೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಗುರಿಯಾದ ಶೇ.6.7ರ ಮಿತಿಯನ್ನು ಮೀರಿದೆ.

ಅಕಾಲಿಕ ಮಳೆಯ ಪ್ರಭಾವದ ಹೊರತಾಗಿಯೂ ತರಕಾರಿಗಳ ಬೆಲೆ ಇಳಿಕೆ, ಹಣ್ಣುಗಳು, ಎಣ್ಣೆ ಹಾಗೂ ಇತರೆ ಆಹಾರ ವಸ್ತುಗಳ ಬೆಲೆ ಇಳಿಕೆ ಹಣದುಬ್ಬರವನ್ನು ತಗ್ಗಿಸಲು ಸಹಾಯ ಮಾಡಿದೆ" ಎಂದು ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಅವರು ಹೇಳಿದ್ದಾರೆ.

ಕಚ್ಚಾ ತೈಲ, ಕಬ್ಬಿಣದ ಅದಿರು ಮತ್ತು ಉಕ್ಕಿನ ಬೆಲೆ ಜಾಗತಿಕ ಮಾರುಕಟ್ಟೆಗಳಲ್ಲಿ ತಗ್ಗಿದೆ. ದೇಶಿ ಮಾರುಕಟ್ಟೆಗಳಲ್ಲಿ ವಸ್ತುಗಳ ಪೂರೈಕೆ ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮಗಳು ಹಣದುಬ್ಬರ ಹೆಚ್ಚಳವನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

© Copyright 2022, All Rights Reserved Kannada One News