ಬಡ್ಡಿ ದರ ಹೆಚ್ಚಳದಿಂದ 2023ಕ್ಕೆ ಆರ್ಥಿಕ ಹಿಂಜರಿತ: ವಿಶ್ವ ಬ್ಯಾಂಕ್ ಎಚ್ಚರಿಕೆ

ಬಡ್ಡಿ ದರ ಹೆಚ್ಚಳದಿಂದ 2023ಕ್ಕೆ ಆರ್ಥಿಕ ಹಿಂಜರಿತ: ವಿಶ್ವ ಬ್ಯಾಂಕ್ ಎಚ್ಚರಿಕೆ

Updated : 17.09.2022

ವಾಷಿಂಗ್ಟನ್: ಕೇಂದ್ರೀಯ ಬ್ಯಾಂಕ್‌ಗಳು ಹಣದುಬ್ಬರ ತಗ್ಗಿಸಲು ಬಡ್ಡಿ ದರ ಹೆಚ್ಚಿಸುತ್ತಿರುವ ಕಾರಣ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯು ತೀವ್ರಗೊಳ್ಳುತ್ತಿದೆ ಎಂದು ವಿಶ್ವ ಬ್ಯಾಂಕ್‌ ಎಚ್ಚರಿಕೆ ನೀಡಿದೆ.

ಬೆಲೆ ಏರಿಕೆಗೆ ಕಾರಣವಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರಗಳು ಪೂರೈಕೆಯನ್ನು ಹೆಚ್ಚಿಸಬೇಕು ಎಂದು ಅದು ಕರೆ ನೀಡಿದೆ.

ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಪೂರೈಕೆ ಸರಿಯಾಗಿ ಇಲ್ಲದಿರುವ ಕಾರಣ ಜಗತ್ತಿನ ಎಲ್ಲೆಡೆ ಹಣದುಬ್ಬರ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತಿದೆ. ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸಿದ ಆಕ್ರಮಣ ಹಾಗೂ ಚೀನಾದಲ್ಲಿನ ಲಾಕ್‌ಡೌನ್‌ ನಂತರದಲ್ಲಿ ಹಣದುಬ್ಬರದ ಸಮಸ್ಯೆಯು ತೀವ್ರಗೊಂಡಿದೆ.

ಜಗತ್ತಿನ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಹೆಚ್ಚಿಸಿವೆ. ಆದರೆ, ಹಣದುಬ್ಬರವನ್ನು ತಗ್ಗಿಸಲು ಈ ಕ್ರಮ ಸಾಕಾಗಲಿಕ್ಕಿಲ್ಲ ಎಂದು ವಿಶ್ವ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕ ಹಿಂಜರಿತ ಎದುರಾಗದಂತೆ ನೋಡಿಕೊಳ್ಳಲು, ಬಿಗಿಯಾದ ಹಣಕಾಸಿನ ನೀತಿಗಳಿಂದ ತಪ್ಪಿಸಿಕೊಳ್ಳಲು ಹಲವು ದೇಶಗಳಿಗೆ ಆಗಲಿಕ್ಕಿಲ್ಲ. ಇದರಿಂದಾಗಿ ಹಣಕಾಸಿನ ಒತ್ತಡ ಜಾಸ್ತಿಯಾಗಬಹುದು. 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗಬಹುದು ಎಂದು ವಿಶ್ವ ಬ್ಯಾಂಕ್‌ನ ವರದಿಯು ಹೇಳಿದೆ. ಈ ರೀತಿ ಆದರಲ್ಲಿ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ದರವು ಶೇ 0.5ಕ್ಕೆ ಇಳಿಕೆ ಆಗಲಿದೆ.

‘ಜಾಗತಿಕ ಬೆಳವಳಿಗೆ ದರವು ತೀವ್ರಗತಿಯಲ್ಲಿ ಕುಸಿಯುತ್ತಿದೆ. ಹೆಚ್ಚಿನ ದೇಶಗಳು ಹಿಂಜರಿತಕ್ಕೆ ಸಿಲುಕಿದಾಗ ಜಾಗತಿಕ ಬೆಳವಣಿಗೆ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ’ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್‌ ಮಾಲ್ಪಾಸ್‌ ಹೇಳಿಕೆ ನೀಡಿದ್ದಾರೆ. ‘ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿನ ಜನರ ಮೇಲೆ ದೀರ್ಘಾವಧಿವರೆಗೆ ವಿನಾಶಕಾರಿ ಪರಿಣಾಮಗಳು ಇರುತ್ತವೆ. ಇದು ನನ್ನಲ್ಲಿ ಕಳವಳ ಉಂಟುಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ಬೇಡಿಕೆ ತಗ್ಗಿಸುವುದರ ಮೇಲೆ ಗಮನ ನೀಡುವುದಕ್ಕಿಂತಲೂ ಉತ್ಪಾದನೆಯನ್ನು ಹೆಚ್ಚಿಸುವತ್ತ ನೀತಿ ನಿರೂ‍ಪಕರು ಗಮನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತೀರಾ ಕೆಟ್ಟ ಸಂದರ್ಭದಲ್ಲಿ, ಮುಂದುವರಿದ ಅರ್ಥ ವ್ಯವಸ್ಥೆಗಳಲ್ಲಿ ಹಿಂಜರಿತ ಇರಲಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಬೆಳವಣಿಗೆ ತೀವ್ರ ಇಳಿಕೆ ಕಾಣಲಿದೆ ಎಂದು ವರದಿ ಹೇಳಿದೆ.

© Copyright 2022, All Rights Reserved Kannada One News