Flash News:
ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

Updated : 03.10.2022

ನಮೋ ಅರಹತೋ ಭಗವತೋ ಸಮ್ಮಾ ಸಂಬುದ್ಧಸ್ಸ
ಎಲ್ಲ ವಿಜ್ಞಾನಿಗಳ  ವಿಜ್ಞಾನಿ,  ತಥಾಗತ ಬುದ್ಧರು.

“ ಸ್ವಾಕ್ಖಾತೋ ಭಗವತಾ ಧಮ್ಮೋ ಸಂಧಿಟ್ಟಿಕೋ ಅಕಾಲಿಕೋ
ಏಹಿಪಸ್ಸಿಕೋ ಓಪನಯಿಕೋ ಪಚ್ಚತ್ತಂ ವೇದಿತಬ್ಬೋ ವಿಙ್ಙೂಹೀತಿ II
ಭಗವಾನರಿಂದ ಸುಸ್ಪಷ್ಠವಾಗಿ ಭೋದಿತವಾದ ಈ ಧರ್ಮವು  ಸಮ್ಯಕ್‌ ದೃಷ್ಠಿಯುಳ್ಲದಾಗಿದ್ದು ಅದು ಈಗಲೇ ಇಲ್ಲಿಯೇ ಫಲ ಕೊಡುವಂಥದ್ದು, ಪ್ರತಿಯೊಬ್ಬರೂ ಬಂದು ʼಪರೀಕ್ಷಿಸಿ ನೋಡಿʼ ಎಂದು ಆಹ್ವಾನಿಸುತ್ತದೆ. ಕಲ್ಯಾಣದ ಕಡೆಗೆ ನಮ್ಮನ್ನೊಯ್ಯುವಂತಹದ್ದು ಮತ್ತು ಎಲ್ಲರೂ ಸಂವೇದನೆಗಳ ಮೂಲಕ ಅರಿಯುವಂಥಹದ್ದು ಆಗಿದೆ.”
ಇಲ್ಲಿ ಭಗವಾನರು ʼಏಹಿಪಸ್ಸಿಕೋ ʼ ಅಂದರೆ ಬಂದು ಪರೀಕ್ಷಿಸಿ ನೋಡಿ ಎಂದು ಹೇಳುತ್ತಾರೆ. ನಾವು ಪರೀಕ್ಷಿಸಿ ನೋಡಿ ನಮ್ಮ ಅನುಭವಕ್ಕೆ ಬಂದಾಗ ಮಾತ್ರ ಅದನ್ನು ನಮ್ಮದಾಗಿಸಿಕೊಳ್ಳಬೇಕು. ಯಾವುದನ್ನೂ ಹಿರಿಯರು ಹೇಳಿದರೆಂದಾಗಲಿ, ಶಾಸ್ತ್ರಗಳಲ್ಲಿ ಬರೆದಿದೆಯೆಂದಾಗಲಿ, ಸಂಪ್ರದಾಯಗಳಲ್ಲಿ ಹೇಳಿದೆಯೆಂದಾಗಲಿ ನಾವು ನಂಬಬಾರದು. ನಾವೇ ಅದನ್ನು ಒರೆ ಹಚ್ಚಿ ಯಾವುದೇ ಪೂರ್ವಾಗ್ರಹಗಳಿಲ್ಲದ ಮನಸ್ಸಿನಿಂದ ನೋಡಿ ಅದನ್ನು ನಂಬಬೇಕು. ಹೀಗೆ ಬುದ್ಧರು ಹೇಳಿದರು. ಅವರು ತಮ್ಮ ಶಿಷ್ಯರಲ್ಲಿ ಮತ್ತು ಜನರಲ್ಲಿ ಅತ್ಯಂತ ಸ್ವತಂತ್ರವಾದ ವೈಜ್ಞಾನಿಕವಾದ ಮನೋಭಾವವನ್ನು ಬಿತ್ತಲು ಪ್ರಯತ್ನಿಸಿದರು. ಆರು ಇಂದ್ರಿಯಗಳಾದ ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯಾ,  ಮತ್ತು ಮನಸ್ಸು ಗಳಿಂದ ಸಿಕ್ಕುವ ಸ್ಪರ್ಶಾದಿ ಅನುಭವಗಳು ನಮ್ಮಲ್ಲಿ ಸಂಖಾರ ಕಾರಣದಿಂದ ಸಂವೇದನೆಗಳನ್ನುಂಟು ಮಾಡುತ್ತವೆ. ಮನಸ್ಸಿನಲ್ಲಿ ಉಂಟಾದ ಸಂವೇದನೆಗಳು ನಮ್ಮ ದೇಹದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ನಮ್ಮಲ್ಲಿರುವ ರಾಗ ದ್ವೇಷಾದಿಗಳು , ಸುಖ ದುಃಖದ ಭಾವನೆಗಳು ಈ ದೇಹದ ಮೇಲೆ ಒಂದಿಲ್ಲೊಂದು ಪರಿಣಾಮವನ್ನು ಖಂಡಿತ ಬೀರುತ್ತವೆ. ಅವಗಳನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸಿದಾಗ ಮನಸ್ಸಿನ ಆಸವಗಳನ್ನು ಕಳೆಯಬಹುದು. ಇದನ್ನೇ ಸಂವೇದನೆಗಳ ಮೂಲಕ ಅರಿಯುವದು ಎನ್ನುತ್ತಾರೆ.
ಇಡಿಯ ಧಮ್ಮದ ಬುನಾದಿ ನಾಲ್ಕು ಆರ್ಯ ಸತ್ಯಗಳ ಮೇಲೆ ನಿಂತಿದೆ. ದುಃಖ, ದುಃಖ ಸಮುದಯ, ದುಃಖ ನಿರೋಧ, ದುಃಖ ನಿರೋಧದ ಮಾರ್ಗ. ವೈದ್ಯಕೀಯದ ಪರಿಭಾಷೆಯಲ್ಲಿ ಕೂಡ ಹೀಗೆಯೇ ನಾಲ್ಕು ಸತ್ಯದ ಸ್ಥಿತಿಗಳಿವೆ . ಒಬ್ಬ ವ್ಯಕ್ತಿ/ಜೀವಿ ದುಃಖ ಅಥವಾ ಯಾತನೆಯಲ್ಲಿದ್ದಾಗ ಲಕ್ಷಣಗಳ ಮೇಲಿಂದ ರೋಗವಿದೆ ಎಂದು ಹೇಳುತ್ತಾರೆ. ನಂತರ  ರೋಗನಿಧಾನ (Pಚಿಣhoಟogಥಿ) ಅದರ ಕಾರಣವನ್ನು ಕಂಡುಹಿಡಿಯುತ್ತಾರೆ. ಈಗ ರೋಗ ಪರಿಹಾರ ಮತ್ತು ಅದಕ್ಕೆ ಬೇಕಾದ ಚಿಕಿತ್ಸೆ, ಹೀಗೆ ನಾಲ್ಕು ಹಂತಗಳಿವೆ. ಅದೇ ಕ್ರಮವನ್ನು ಇಲ್ಲಿಯೂ ಕಾಣಬಹುದು. ಇಲ್ಲಿ ದುಃಖ ಎಂದರೆ ಯಾವುದೋ ಒಂದು ಸಂದರ್ಭದಲ್ಲಿ ಮಾತ್ರ ಉಂಟಾಗುವದಲ್ಲ, ಅತೃಪ್ತಿದಾಯಕವಾದದ್ದೆಲ್ಲ ದುಃಖವೇ.  ಅದರ ಕಾರಣಗಳ ನಿರೋಧದಿಂದ ಮಾತ್ರ ದುಃಖದ ಬಿಡುಗಡೆ ಸಾಧ್ಯ. ಈ ಬಿಡುಗಡೆಯ ದಾರಿಯೇ ಅಷ್ಠಾಂಗ ಮಾರ್ಗ. ಈ ಅಷ್ಠಾಂಗ ಮಾರ್ಗವನ್ನು ಶೀಲ, ಸಮಾಧಿ ಮತ್ತು ಪಞ್ಞಾ ಎಂದು ಮೂರು ಗುಂಪುಗಳಾಗಿ ನೋಡಬಹುದು. ಶೀಲವೇ ಧರ್ಮಕ್ಕೆ ಆಧಾರವಾದದ್ದು. ಅದು ನಮ್ಮ ಪ್ರಜ್ಞೆಯಲ್ಲಿ ಸ್ಥಿತವಾಗಬೇಕಾದರೆ ನಿರಂತರ ಪ್ರಯತ್ನ (ಸಮಾಧಿ) ಅಗತ್ಯ.
ಇನ್ನೊಬ್ಬರು ಹೇಗೆ ನನ್ನನ್ನು ಗೌರವಿಸಬೇಕೆಂದು ಬಯಸುತ್ತೇನೆಯೋ, ಹಾಗೆಯೇ ನಾನೂ ಇನ್ನೊಬ್ಬರನ್ನು ಗೌರವಿಸಬೇಕು.ಇನ್ನೊಬ್ಬರು ನನ್ನನ್ನು ನೋಯಿಸಬಾರದು, ಕೊಲ್ಲಬಾರದು ಎಂದು ಬಯಸಿದರೆ ನಾನೂ ಹಾಗೆ ಮಾಡಬಾರದು .ಹೀಗೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಬುದ್ಧರು ಇದನ್ನೂ ಹೇಳಿ ಶೀಲವನ್ನು ಇನ್ನೂ ಎತ್ತರಕ್ಕೊಯ್ದು ಅದನ್ನು ನಿಸರ್ಗದ ನಿಯಮವನ್ನಾಗಿ ತೋರಿಸುತ್ತಾರೆ. ಒಬ್ಬನು ತನಗಾಗಿ ಶೀಲವನ್ನು ರಕ್ಷಿಸಿಕೊಳ್ಳಬೇಕೆಂದು ಹೇಳುತ್ತಾರೆ. ವೈರದಿಂದ ವೈರ ಶಮನವಾಗುವದಿಲ್ಲ. ಅವೈರ ಮತ್ತು ಪ್ರೀತಿಯಿಂದ ಮಾತ್ರ ವೈರವನ್ನು ಶಾಂತಗೊಳಿಸಲು ಸಾಧ್ಯ. ನಾವು ಯಾರನ್ನಾದರೂ ದ್ವೇ಼ಷಿಸಿದರೆ ನಾವು ದ್ವೇಷ ಮಾಡುವ ವ್ಯಕ್ತಿಗಿಂತ ನಮಗೇ ಹೆಚ್ಚು ಹಾನಿಯಾಗುತ್ತದೆ. ಯಾಕೆಂದರೆ ನಾವು ದ್ವೇಷಿಸುವ ವ್ಯಕ್ತಿಯನ್ನು ನಮ್ಮ ಮೆದುಳು , ಮನಸ್ಸುಗಳಲ್ಲಿ ತುಂಬಿಕೊಂಡು ಅದಕ್ಕೆ ನಿರಂತರವಾಗಿ ಘಾಸಿ ಮಾಡುತ್ತಿರುತ್ತೇವೆ, ಆ ಮೂಲಕ ನಮ್ಮನ್ನೇ ಘಾಸಿ ಮಾಡಿಕೊಳ್ಳುತ್ತೇವೆ. ಮೈತ್ರಿ, ಕರುಣೆ, ಪ್ರೀತಿಗಳು ನಮ್ಮ ಹೃದಯದ ಸಹಜ ಭಾವಗಳಾಗಿದ್ದು ಇನ್ನೊಬ್ಬರೂ ಸುಖವಾಗಿದ್ದಾಗ ನಾವೂ ಸುಖವಾಗಿರಬಲ್ಲೆವು. ಇದೇ ಮೈತ್ರಿ. ಇದು ಜಗತ್ತಿನ ಎಲ್ಲ ಜೀವಿಗಳನ್ನೂ ಒಳಗೊಳ್ಳಬಲ್ಲುದು. ಇದನ್ನೇ ಅಲ್ಲಮ ಪ್ರಭುಗಳು  ʼ ಕೆಂಡದ ಮಳೆಗರೆವಲ್ಲಿ ಉದಕವಾಗಿರಬೇಕುʼ ಎಂದು ಹೇಳಿದ್ದು. ಇನ್ನು ಕೆಲ ಧರ್ಮ ರಕ್ಷಣೆಯ ಗುತ್ತಿಗೆ ಹೊತ್ತವರು ಹೇಳುವ ಮಾತು ʼ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆʼ ಎಂದು. ಧರ್ಮ ಎಂದರೆ ಅದು ವಿಶ್ವಸ್ತ ನಿಯಮ.

ಅದು ತನ್ನ ಪಾಡಿಗೆ ತಾನಿರುತ್ತದೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು, ನಿಮ್ಮ ಶೀಲಪಾಲನೆಯಿಂದ. ಉದಾಹರಣೆಗೆ ಎದುರು ಮನೆಯ ಕಿಟಕಿಗೆ ಕಲ್ಲೆಸೆದರೆ ಕಿಟಕಿಯ ಗಾಜು ಒಡೆಯುತ್ತದೆ. ಎಸೆಯುವದು ಬಿಡುವದು ವ್ಯಕ್ತಿಯ ಇಚ್ಚೆಗೆ ಬಿಟ್ಟದ್ದು. ಅವನೇ ಅದರ ನೈತಿಕ ಹೊಣೆ ಹೊರಬೇಕು. ಕಲ್ಲು ಎಸೆದರೂ, ಎಸೆಯದಿದ್ದರೂ , ಎಸೆದರೆ ಗಾಜು ಒಡೆಯುತ್ತದೆಂಬ ನಿಯಮ ಬದಲಾಗುವದಿಲ್ಲ. ಧರ್ಮ ರಕ್ಷಣೆಯ ಮಾತು ಅಹಂಕಾರದ್ದು.
 ಪಟಿಚ್ಚ ಸಮುಪ್ಪಾದ ಎಂದರೆ ಕಾರ್ಯ-ಕಾರಣ ಸಂಬಂಧ ( ಆeಠಿeಟಿಜeಟಿಣ ಔಡಿigiಟಿಚಿಣioಟಿ) ಇದು ಬೌದ್ಧ ದರ್ಶನದ ಮಹತ್ವದ ನಿಯಮವಾಗಿದ್ದು ಅತ್ಯಂತ ವೈಜ್ಞಾನಿಕ ನಿಯಮವಾಗಿದೆ. ಇದನ್ನು ಅರ್ಥ ಮಾಡಿಕೊಂಡರೆ ಭವ ಬಂಧನದ ಅಜ್ಞಾನ ಮೂಲವಾದ ಸರಪಳಿಗಳು, ಅದರ ಪ್ರತಿಲೋಮ ಅಂದರೆ ಬಿಡುಗಡೆಯ ದಾರಿ, ಅನಿತ್ಯ, ಶೂನ್ಯತಾ ಎಲ್ಲವೂ ಅರ್ಥವಾಗುತ್ತವೆ. ಪ್ರತೀ ಕಾರ್ಯಕ್ಕೂ ಕಾರಣ ಅಥವಾ ಕಾರಣಗಳು ಇವೆ. ಪ್ರತೀ ಕಾರಣವೂ ಮತ್ತೆ ಕಾರ್ಯವಾಗಿ ಅದಕ್ಕೆ ಮತ್ತೇ ಕಾರಣಗಳಿವೆ. ಹೀಗೆ ವಸ್ತು, ಘಟನೆ, ಜೀವಿಗಳು ಎಲ್ಲವೂ ಕಾರಣಗಳ ಸರಮಾಲೆಯಾಗಿವೆ. ಇದೊಂದು ಅನಂತ ಸರಪಳಿಯಾಗಿದೆ.

ಅದ್ವೈತದಂತಹ ಕೆಲ  ದರ್ಶನಗಳು ಈ ಕಾರ್ಯ-ಕಾರಣ ಸರಪಳಿಯನ್ನು ಮಧ್ಯದಲ್ಲಿಯೇ ಕತ್ತರಿಸಿ ಇದು ಬ್ರಹ್ಮ, ಇದೇ ಕೊನೆ, ಇನ್ನು ಮುಂದೆ ಕಾರಣಗಳಿಲ್ಲ ಎನ್ನುತ್ತವೆ. ಅತಾರ್ಕಿಕತೆಗೆ ಮೂಢತೆಗೆ ಜೋತುಬೀಳುತ್ತವೆ. ಅದಕ್ಕೆಂದೆ ಭಗವಾನರು ಧ್ಯಾನದ ಹಂತಗಳಲ್ಲಿ ಯಾವುದೇ ಭ್ರಮೆಗಳಿಗೆ ಎಡೆಕೊಡದೆ ಎಲ್ಲ ರೂಪ ಅರೂಪಗಳನ್ನು ಕತ್ತರಿಸುತ್ತಾ, ಆಕಾಸಾನಂಚಾಯತನವನ್ನೂ ಮೀರಿ ವಿಞ್ಞಾಣಂಚಾಯತನವನ್ನೂ ಮೀರಿ ಅಕಿಂಚನಾಯತವನ್ನೂ ಮೀರಿ ನೇವಸಞ್ಞಾನಾಸಞ್ಞಾಯತನವನ್ನೂ ಮೀರಿ ಅರಿವು, ವೇದನೆ ಎರಡೂ ಇಲ್ಲದ ಸ್ಥಿತಿಯ ಕಡೆಗೆ ತೋರುತ್ತಾರೆ. ಇದು ಮನಸ್ಸು ಶುದ್ಧವಾಗುತ್ತ ಆಗುತ್ತ ಅಮನಸ್ಕ ಸ್ಥಿತಿಯೆಡೆಗೆ ಚಲಿಸುತ್ತದೆ. ಅದಕ್ಕೇ  ಧರ್ಮ ಎಂದರೆ ಚಿತ್ತಶುದ್ಧಿಯ ಮಾರ್ಗ ಎನ್ನುವದು.
ಕಮ್ಮ ನಿಯಮವೂ ಪಟಿಚ್ಚ ಸಮುಪ್ಪಾದದ ಭಾಗವೇ ಆಗಿದ್ದು ಇಚ್ಚಾಪೂರ್ವಕವಾಗಿ ಮಾಡುವ ಕ್ರಿಯೆಗಳು ಕಾರಣಗಳೇ ಆಗಿ ತಕ್ಕ ಕರ್ಮ ಫಲಗಳನ್ನು ಕೊಡುತ್ತವೆ. ಯಾವುದೇ ಘಟನೆಗೆ ಬರೀ ನಮ್ಮ ಹಿಂದಿನ ಕರ್ಮಗಳೇ ಕಾರಣವಾಗದೇ ಉತು ನಿಯಮ, ಬೀಜ ನಿಯಮ, ಧಮ್ಮ ನಿಯಮ ಮತ್ತು ಚಿತ್ತ ನಿಯಮಗಳೂ ಕಾರಣವಾಗುತ್ತವೆ. ನಮ್ಮ ನಿರ್ಧಾರಗಳು ರಾಗ ದ್ವೇಷ ಪೂರಿತವಾದ ಹಳೆಯ ಸಂಖಾರಗಳಿಂದ ಪ್ರೇರಿತವಾಗಿದ್ದರೆ ನಮ್ಮ ಕರ್ಮಫಲಗಳು ದುಃಖವನ್ನೇ ಕೊಡುತ್ತವೆ. ಈ ನಾಮರೂಪವಾದ ಈ ವೈಕ್ತಿತ್ವವು ಒಂದು ಯಂತ್ರದ ಹಾಗೆ. ಯಂತ್ರ ದೋಷಪೂರಿತವಾದಾಗ ಅದು ದುರಸ್ತಿಯಾಗುವತನಕವೂ ಅದರಿಂದ ಸಿಗುವ ಫಲ (ಔuಣಠಿuಣ) ತಪ್ಪಾಗಿಯೇ ಇರುತ್ತದೆ. ಹಾಗೆಯೇ ನಮ್ಮಲ್ಲಿನ ಕಶ್ಮಲಗಳು ಹೋಗುವವರೆಗೂ ದುಃಖ ತಪ್ಪಿದ್ದಲ್ಲ. ಚಿತ್ತಶುದ್ಧಿಯೇ ಧರ್ಮವಾಗಿದೆ.
 ಮಧ್ಯಮ ಮಾರ್ಗ ಒಂದು ವೈಜ್ಞಾನಿಕ ತತ್ವ.ಅದು ಜೀವ-ನಿರ್ಜೀವ ಮತ್ತು ಐಚ್ಛಿಕ –ಅನೈಚ್ಛಿಕ ಎಲ್ಲಾ ಸ್ತಿತಿಯಲ್ಲಿಯೂ ಕೆಲಸ ಮಾಡುತ್ತದೆ. ಹುಟ್ಟು-ಸಾವುಗಳ ಚಕ್ರವನ್ನು ಈ ಮಧ್ಯಮ ಮಾರ್ಗ ಮತ್ತು ಪಟಿಚ್ಚ ಸಮುಪ್ಪಾದದ ಮೂಲಕ ಅರಿಯಬಹುದು. ಅದರ ಮೂಲ ಕಾರಣವಾದ ತೃಷ್ಣೆಯನ್ನು ಅರಿತು ಅದರ ನಿರೋಧವನ್ನು ಸಾಧಿಸಬೇಕು. ಆಗ ಎಲ್ಲ ಜೀವಿಗಳಲ್ಲಿ ಮೈತ್ರಿ ಕರುಣೆ ಸಾಧ್ಯವಾಗುತ್ತದೆ.
ಮಧ್ಯಮ ಮಾರ್ಗವನ್ನು ಸರಳ ವಿಜ್ಞಾನದ ಭಾಷೆಯಲ್ಲಿ ಹೀಗೆ ವಿವರಿಸಬಹುದು. ಇದು ನಾನು ಅರ್ಥ ಮಾಡಿಕೊಂಡಂತೆ.
ಈ ವಿಶ್ವದಲ್ಲಿ ಶಕ್ತಿಯು ನಿರಂತರವಾಗಿ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುತ್ತಲೇ ಇರುತ್ತದೆ,. ಬೆಳಕು, ಧ್ವನಿ, ಉಷ್ಣತೆ , ಚಲನೆ ಹೀಗೆ. ಪ್ರತಿಯೊಂದು ನಮ್ಮ ದೇಹದ ಒಂದೊಂದು ಅಂಗಾಂಗದಿಂದ ಮನಸ್ಸಿನ ಸಂಯೋಜನೆಯೊಂದಿಗೆ ಗ್ರಹಿಸಲ್ಪಡುತ್ತದೆ. ಆದರೆ ನಾವು ನೋಡುವ ಬೆಳಕಿನಲ್ಲಿ ಕೂಡ ನಾವು ಎಲ್ಲವನ್ನು ನೋಡಲಾರೆವು. ಸೂರ್ಯನ ಬೆಳಕನ್ನು ಪ್ರಿಜಮ್ ನಲ್ಲಿ ಹಾಯಿಸಿದಾಗ ವಕ್ರೀಭವನದ ಮೂಲಕ  ಬಣ್ಣಗಳ ಬೆಳಕಿನ ಪಟ್ಟಿಯನ್ನು ಕಾಣುತ್ತೇವೆ.

ವರ್ಣಪಟ್ಟಕದ ಮೇಲಿನ ಬಣ್ಣ ನೇರಳೆ ಅದರಾಚೆಗೂ ಅದಕ್ಕಿಂತ ಹೆಚ್ಚಿನ ಆವರ್ತನಗಳ ಶಕ್ತಿ(Uಟಣಡಿಚಿvioಟeಣ) ಇದೆ, ಕೆಳಗಿನ ಕೆಂಪು ವರ್ಣದ ಕೆಳಗೂ ಅದಕ್ಕಿಂತ ಕಡಿಮೆ ಆವರ್ತನಗಳ ಶಕ್ತಿ(Iಟಿಜಿಡಿಚಿಡಿeಜ) ಇದೆ. ಅವು ನಮ್ಮ ಸಂವೇದನೆಗೆ ಸಿಗಲಾರವು. ಈ ಬಣ್ಣ ಅನ್ನುವದು ಕೂಡ ತನ್ನ ಅಸ್ತಿತ್ವದಿಂದ ನಮ್ಮಲ್ಲಿ ಉಂಟುಮಾಡುವ ಸಂವೇದನೆ ಮಾತ್ರ. ಉದಾಹರಣೆಗೆ ಒಂದು ಹಳದಿ ಹೂವನ್ನು ನೋಡಿದೆವೆಂದಿಟ್ಟುಕೊಳ್ಳೋಣ. ಆ ಒಂದು ಪ್ರತ್ಯೇಕವಾದ ಆವರ್ತನದ ಬೆಳಕಿನ ಶಕ್ತಿ ನಮ್ಮ ಕಣ್ಣು ಮತ್ತು ಅರಿವಿನ ಮುಖಾಂತರ ನಮ್ಮಲ್ಲಿ ಉಂಟುಮಾಡುವ ಸಂವೇದನೆಯನ್ನೇ ಹಳದಿ ಎನ್ನುತ್ತೇವೆ. ಇಲ್ಲಿ ಹಳದಿ ಎನ್ನುವದು ಕೂಡ ಸ್ವಂತ ಸ್ವಭಾವ ಅಲ್ಲ. ಅದು ಉಳಿದ ಪ್ರತ್ಯಯಗಳ ಪರಿಣಾಮವಾಗಿದೆ. ಇದನ್ನೇ ಬುದ್ಧರು ಶೂನ್ಯತಾ ಎಂದು ಕರೆಯುತ್ತಾರೆ.  ಇದೇ ರೀತಿ ಶಕ್ತಿಯ ಉಳಿದ ಪ್ರಕಾರಗಳು ಕೂಡ ನಮ್ಮಲ್ಲಿ ಒಂದು ಮಿತಿಯಲ್ಲಿ ಸಂವೇದನೆಗಳನ್ನುಂಟು ಮಾಡಬಲ್ಲವು.
ನಮ್ಮ ಐದು ಗ್ರಹಣಾಂಗಗಳಾದ ಕಣ್ಣು ,ಕಿವಿ, ಮೂಗು, ನಾಲಗೆ, ಚರ್ಮ ಮತ್ತು ಮನಸ್ಸುಇವುಗಳ ಮೂಲಕವಾಗಿಯೇ ನಾವು ಹೊರಗಿನ ವಸ್ತು, ಸಂಗತಿಗಳನ್ನು ಅರಿಯುತ್ತೇವೆ. ಇವು ಕಿಟಕಿಗಳಿದ್ದಂತೆ. ಇವುಗಳಿಗೆ ಆಯತನಗಳು (ಜimeಟಿsioಟಿ) ಎನ್ನುತ್ತಾರೆ. ಒಂದು  ವಸ್ತು ಅಥವಾ ಘಟನೆಯನ್ನು ಎಲ್ಲ ಆಯತನಗಳಿಂದ ಗ್ರಹಿಸಿದಾಗ್ಯೂ ಅದು ಸಾಪೇಕ್ಷವಾದದ್ದರಿಂದ ಅದು ಶೂನ್ಯತಾವೇ.
ಇನ್ನು ಎಂಜಿನೀಯರಿಂಗ್ ನಲ್ಲಿ ಒಂದು ಯಂತ್ರದ ದಕ್ಷತೆಯನ್ನು ಪರಿಶೀಲಿಸುವಾಗ ಯಾವ ಸ್ತಿತಿಯಲ್ಲಿ ಅದು ಅತ್ಯುತ್ತಮ ಕೆಲಸ ಮಾಡಬಲ್ಲುದು (ಔಠಿಣimisಚಿಣioಟಿ) ಎಂದು ವಿವಿಧ ಮಾನದಂಡಗಳಿಂದ ತಿಳಿಯುತ್ತಾರೆ. ಉದಾಹರಣೆಗೆ ಒಂದು ಮೋಟಾರಿಗೆ ಹೆಚ್ಚಿಗೆ ಇಂಧನ ಬಳಸಿದರೂ ಅಥವಾ ಕಡಿಮೆ ಬಳಸಿದರೂ ಅದರ ದಕ್ಷತೆ ಕಡಿಮೆಯಾಗುತ್ತದೆ. ಇಂಧನದ ಒಂದು ವಿಶಿಷ್ಟ ಮಾಪನ ಮಾತ್ರ ಯಂತ್ರದ ಗರಿಷ್ಟ ದಕ್ಷತೆ ಒದಗಿಸುತ್ತದೆ. ಹಾಗೇ ಈ ದೇಹ ಮತ್ತು ಮನಸ್ಸುಗಳು ಕೂಡ. ಅದಕ್ಕೇ ಭಗವಂತರು ಈ ಎರಡು ಅತಿರೇಕಗಳನ್ನು ತ್ಯಜಿಸಲು  ಹೇಳುತ್ತಾರೆ.
ಒಮ್ಮೆ ಬಾಹಿಯಾ ಎನ್ನುವ ಒಂದು ಪಂಥದ ಪಾರಿವ್ರಾಜಕ ಸಾವತ್ತಿಯಲ್ಲಿದ್ದ ಭಗವಾನರಲ್ಲಿ ಬಂದು ಧಮ್ಮ ದೇಸನವನ್ನು ಕೇಳುತ್ತಾನೆ. ಆಗ ಬುದ್ಧರು ಉಪದೇಶಿಸುತ್ತಾರೆ, “ ನೋಡಲ್ಪಡುವದರಲ್ಲಿ ಬರೀ ನೋಡಲ್ಪಡುವದೇ ಇರುತ್ತದೆ; ಕೇಳಿದುದರಲ್ಲಿ ಬರೀ ಕೇಳಿದ್ದೇ ಇರುತ್ತದೆ; ಮೂಸಿದ್ದರಲ್ಲಿ, ರುಚಿ ನೋಡಿದ್ದರಲ್ಲಿ, ಮುಟ್ಟಿದ್ದರಲ್ಲಿ ಬರೀ ಮೂಸಿದುದೇ, ರುಚಿ ನೋಡಿದುದೇ ಮತ್ತು ಮುಟ್ಟಿದುದೇ ಇರುತ್ತದೆ. ಅರಿವಾದುದರಲ್ಲಿ ಬರೀ ಅರಿವೇ ಇರುತ್ತದೆ.
ಈ ಗ್ರಹಿಕೆಗಳಲ್ಲಿರದೇ ಈ ಗ್ರಹಿಕೆಗಳಿಗೆ  ಅಂಟಿಕೊಳ್ಳದೇ ಇರುವದರಿಂದ ನಿಬ್ಬಾಣವನ್ನು ಸಾಧಿಸಬಹುದು”
ಮಧ್ಯಮ ಮಾರ್ಗ ಮತ್ತು ಶೂನ್ಯತೆಯನ್ನು ವಿವರಿಸುವ  ಶೇಷ್ಟ ಉಪದೇಶವಿದು.

ನಾವು ನೋಡುತ್ತಲೇ, ಅನುಭವಿಸುತ್ತಲೇ ಇರುತ್ತೇವೆ. ಈ ಜಗತ್ತಿನಲ್ಲಿ ಎಲ್ಲವೂ ಪ್ರತಿ ಕ್ಷಣ ಬದಲಾಗುತ್ತಲೇ ಇರುತ್ತದೆ. ಈ ದೇಹದಲ್ಲಿ ಕೂಡ ಹಳೆಯ ಜೀವಕೋಶಗಳು ಸತ್ತು ಹೊಸವು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹೊಸ ಜೀವಕೋಶಗಳಿಗೆ ತಮ್ಮ ಗುಣಗಳನ್ನು ವರ್ಗಾಯಿಸುತ್ತಲೇ ಇರುತ್ತವೆ.  ಗಿಡ, ಮರ , ಕಾಡು ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಇದು ಎಷ್ಟು ಸೂಕ್ಷ್ಮವಾಗಿ ತೀವ್ರವಾಗಿ ನಡೆಯುತ್ತದೆಂದರೆ ಬದಲಾವಣೆ ನಮಗೆ ಕಾಣುವದೇ ಇಲ್ಲ. ನಾವು ಇವುಗಳನ್ನು ಶಾಶ್ವತ ಎಂದುಕೊಳ್ಳುತ್ತೇವೆ. ಅಣು, ಪರಮಾಣುಗಳ ಮಟ್ಟದಲ್ಲಿಯೂ ನಿರಂತರವಾದ ಬದಲಾವಣೆ ನಡೆಯುತ್ತಲೇ ಇರುತ್ತದೆ. ಹೀಗೆ ಅನಿತ್ಯ ಒಂದು ವಿಶ್ವಸ್ಥ ನಿಯಮ. ನಾಮ-ರೂಪ ಎನ್ನುವ ಜೀವಿಯು ಅನೇಕ ಪ್ರಕ್ರಿಯೆಗಳ ಒಟ್ಟಾರೆಯ ಸಮೂಹ. ಆ ಯಾವುದರಲ್ಲಿಯೂ ಆತ್ಮ ಎನ್ನುವದು ಸಿಕ್ಕುವದಿಲ್ಲ. ಆತ್ಮವೂ ಇಲ್ಲ, ಪರಮಾತ್ಮವೂ ಇಲ್ಲ. ಹೀಗಾಗಿ ಅನಾತ್ಮವು ಒಂದು ವಿಶ್ವಸ್ಥ ನಿಯಮ. ದುಃಖ ಒಂದು ಅನಿವಾರ್ಯ ಸತ್ಯ.
ಮಾರ ಒಮ್ಮೆ ಆಮಿಷ ಒಡ್ಡಿದಾಗ ಉಪಚಾಲ ಎಂಬ ಬಿಕ್ಖುಣಿ ಮಾರನಿಗೆ ಉತ್ತರಿಸುತ್ತಾಳೆ:
“ಸಬ್ಬೋ ಆದೀಪಿತೋ ಲೋಕೋ ಸಬ್ಬೋ ಲೋಕೋ ಪಧೂಪಿತೋI
ಸಬ್ಬೊ ಪಜ್ಜಲಿತೊ ಲೋಕೋ ಸಬ್ಬೊ ಲೋಕೋ ಪಕಂಪಿತೋII
ಅಕಂಪಿತಂ ಅಪಜ್ಜಲಿತಂ ಅಪುತುಜ್ಜಾನ ಸೇವಿತಂI
ಅಗತಯತ ಮಾರಸ್ಸ ತತಮೆ ನಿರತೋ ಮನೋII
ಇಡೀ ಲೋಕವು ಉರಿಯುತ್ತಿದೆ, ಇಡೀ ಲೋಕವು ಹೊಗೆಯಿಂದ ತುಂಬಿದೆ, ಇಡೀ ಲೋಕವು ಪ್ರಜ್ವಲಿಸುತ್ತಿದೆ, ಇಡೀ ಲೋಕವು ಕಂಪಿಸುತ್ತಿದೆ. ಯಾವುದು ಕಂಪಿಸುವದಿಲ್ಲವೋ, ಯಾವುದು ಉರಿಯುವದಿಲ್ಲವೋ , ಯಾವುದನ್ನು ಘನತೆವೆತ್ತವರು ಅರಿಯುವರೋ ಮತ್ತು ಎಲ್ಲಿ ಮಾರನ ಪ್ರವೇಶವಿಲ್ಲವೋ ಅಲ್ಲಿ ನನ್ನ ಮನಸ್ಸು ರಮಿಸುತ್ತದೆ. “   --ಉಪಚಾಲ ಸುತ್ತ , ಸಂಯುತ್ತ ನಿಕಾಯ
ಇವತ್ತಿನ ವೈಜ್ಞಾನಿಕ ಸಂಶೋಧನೆಗಳ ಹಿನ್ನೆಲೆಯಲ್ಲಿ ಮೇಲಿನ ಸಾಲುಗಳನ್ನು ಅರ್ಥಮಾಡಿಕೊಂಡಾಗ ಎಷ್ಟು ಸತ್ಯ ಎನಿಸುತ್ತದೆ. ಜಗತ್ತಿನ ಎಲ್ಲ ವಸ್ತು, ಜೀವಿಗಳಲ್ಲಿ ಶಕ್ತಿ ಪಲ್ಲಟದ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಜೀವಿಗಳ ಪ್ರತೀ ಜೀವಕೋಶಗಳಲ್ಲಿಯೂ ಪ್ರಾಣವಾಯುವಿನ ಮೂಲಕ ಶಕ್ತಿ ಬಿಡುಗಡೆಯಾಗುತ್ತಲೇ ಇರುತ್ತದೆ. ಪರಮಾಣು ಮಟ್ಟದಲ್ಲಿ ನಡೆಯುವ ಈ ಶಕ್ತಿಪಲ್ಲಟದ ಪ್ರಕ್ರಿಯೆ ನಿರಂತರ ಕಂಪನಗಳಿಗೂ ವಸ್ತುಗಳಲ್ಲಿನ ಉಷ್ಣಶಕ್ತಿಗೂ ಕಾರಣವಾಗುತ್ತದೆ. ಇದನ್ನು ಭಗವಂತರು ರಾಗ ದ್ವೇಷಗಳಿಂದ ಕೂಡಿದ ಸಂಸಾರದ ಬಗ್ಗೆಯೂ ಅನ್ವಯಿಸಿ ಹೇಳುತ್ತಾರೆ.
ಮೇಲಿನ ತತ್ವದ ಹಿನ್ನೆಲೆಯಲ್ಲಿಯೇ ಕೆಲ ಆತ್ಮವಾದಿ ಯೋಗಿಗಳು ಬ್ರಹ್ಮವನ್ನು ಕಂಪನವಿಲ್ಲದ ಅನಂತ ಚೈತನ್ಯವೆಂತಲೂ ಈ ಸಂಸಾರವನ್ನು ಬೇರೆ ಬೇರೆ ಕಂಪನಗಳಲ್ಲಿ ಸುತ್ತುವ ಶಕ್ತಿಯ ರೂಪಗಳೆಂತಲೂ ( ಏiಟಿeಣiಛಿ eಟಿeಡಿgಥಿ) ಭಾವಿಸುತ್ತಾರೆ. ಬೌದ್ಧ ಧರ್ಮದಿಂದ ಪ್ರಭಾವಿತವಾದ ಕಾಶ್ಮೀರ ಶೈವವು  ಶಿವ-ಶಕ್ತಿಯರ ಕಲ್ಪನೆಯನ್ನು ಈ ಹಿನ್ನೆಲೆಯಲ್ಲಿಯೇ ಮಾಡಿದೆ.  ಶಿವನು ರೂಪರಹಿತನಾದ ನಿರ್ಗುಣನಾದ ಅನಂತ ಚೈತನ್ಯವಾಗಿದ್ದು ಶಕ್ತಿಯು ಆ ಚೈತನ್ಯದ ಭಾಗವನ್ನು ಅನೇಕ ವಿಧವಾದ ಲೋಕ ಸಂಸಾರಗಳಾಗಿ ಅಭಿವ್ಯಕ್ತಿಸುತ್ತಾಳೆ. ಶಕ್ತಿಯಿಲ್ಲದೇ ಶಿವನಿಗೆ ಅಭಿವ್ಯಕ್ತಿಯೇ ಇಲ್ಲ.. ಹೀಗೆ ಆತ್ಮವಾದಿ ಪರಂಪರೆಗಳು ಕೂಡ ಬೌದ್ಧ ತತ್ವಗಳಿಂದ ಸಾಕಷ್ಠು ಪ್ರಭಾವಿತಗೊಂಡಿವೆ.
ಅಭಿಧಮ್ಮವು  ಮನಸ್ಸು ಮತ್ತು ಮಾನಸಿಕ ಪ್ರತ್ಯಯಗಳ ವೈಜ್ಞಾನಿಕ ವಿಶ್ಲೇಷಣೆಯಾಗಿದೆ. ಎಲ್ಲ ಘಟನೆ  ಕಾರ್ಯವಿಧಾನಗಳ ಹೇತು ಮತ್ತು ಪಚ್ಚಯಗಳನ್ನು ವಿವರಿಸುತ್ತದೆ. ಚಿಂತನಾ ಕ್ಷಣಗಳನ್ನು (ಖಿhoughಣ momeಟಿಣs) ಕರಾರುವಾಕ್ಕಾಗಿ ವಿವರಿಸುತ್ತದೆ.
ಧರ್ಮ ಒಂದು ವಿಶ್ವಸ್ಥ ನಿಯಮವಾಗಿದೆ. ಅದು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಲೇ ಇರುತ್ತದೆ. ನಾವು ನಮಗಾಗಿ ಮತ್ತು ಸುತ್ತಲಿನ ಸಮಾಜದ ಹಿತಕ್ಕಾಗಿ ಶೀಲ , ಸಮಾಧಿ ಮತ್ತು ಪಞ್ಞಾಗಳನ್ನು ಪಾಲಿಸುತ್ತ ಮೈತ್ರಿ ಮತ್ತು ಕರುಣೆಗಳನ್ನು ನಮ್ಮದಾಗಿಸಿಕೊಂಡು ಬಾಳುವದು ಹಿತವಲ್ಲವೇ ?
ಭಗವಂತರ ಅಪಾರ ಕರುಣೆ ನಮ್ಮ ಮೇಲಿರಲಿ.

        ಭವತು ಸಬ್ಬ ಮಂಗಲಂ ರಕ್ಖಂತು ಸಬ್ಬ ದೇವತಾ


© Copyright 2022, All Rights Reserved Kannada One News