ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

Updated : 26.09.2022

(ಹಿಂದಿನ ಸಂಚಿಕೆಯಿಂದ ಮುಂದುವರೆದುದು)
ಧಮ್ಮವು ಎಂಟರಿಂದ ಆಗಿದೆ. ಯಾವವು ಆ ಎಂಟು ?
ಮಿಥ್ಯೆಗಳು ಎಂಟು- ಮಿಚ್ಚಾ ದಿಟ್ಠಿ, ಮಿಚ್ಚಾ ಸಂಕಪ್ಪ, ಮಿಚ್ಚಾ ವಾಚಾ, ಮಿಚ್ಚಾ ಕಮ್ಮಾಂತ, ಮಿಚ್ಚಾ ಆಜೀವ, ಮಿಚ್ಚಾ ವಾಯಾಮ, ಮಿಚ್ಚಾ ಸತಿ ಮತ್ತು ಮಿಚ್ಚಾ ಸಮಾಧಿ.
ಸಂಯಕ್‌ ಅಂಗಗಳು ಎಂಟು (ಅಟ್ಠಾಂಗ ಮಗ್ಗ)-  ಸಮ್ಮಾ ದಿಟ್ಠಿ, ಸಮ್ಮಾ ಸಂಕಪ್ಪ, ಸಮ್ಮಾ ವಾಚಾ, ಸಮ್ಮಾ ಕಮ್ಮಾಂತ, ಸಮ್ಮಾ ಆಜೀವ, ಸಮ್ಮಾ ವಾಯಾಮ, ಸಮ್ಮಾ ಸತಿ ಮತ್ತು ಸಮ್ಮಾ ಸಮಾಧಿ.
ದಕ್ಷಿಣೆಗೆ ಅರ್ಹರಾದವರು ಎಂಟು ಬಗೆಯ ಜನ--   ಯಾರು ಸಚ್ಚಾರಿತ್ರವುಳ್ಳವರಾಗಿ ಪ್ರಾಮಾಣಿಕವಾಗಿ ಸನ್ಮಾರ್ಗದಲ್ಲಿ ನಡೆಯುವವರಾಗಿ ಸತ್ಯಮಾರ್ಗದಲ್ಲಿ ನಡೆಯುವವರಾಗಿ ಪ್ರಜ್ಞೆಯಿಂದ ಕೂಡಿದ ಉಚಿತ ಮಾರ್ಗದಲ್ಲಿ ನಡೆಯುವವರಾಗಿದ್ದಾರೆಯೋ ಅಂಥವರು ಭಗವಾನರ ಶ್ರಾವಕ ಸಂಘವೆನಿಸುತ್ತಾರೆ. ಸಾಧನೆ ಮತ್ತು ಫಲಪ್ರಾಪ್ತಿ ಮಾಡಿಕೊಳ್ಳುವ ಸೋತಾಪನ್ನ, ಸಕದಾಗಾಮಿ, ಅನಾಗಾಮಿ ಮತ್ತು ಅರಹಂತೆಂಬ ಎಂಟು ಬಗೆಯ ಸಾಧಕರಿರುತ್ತಾರೆ. ಇಂಥವರು ಸತ್ಕಾರ್ಯಕ್ಕೆ, ಆದರಾತಿಥ್ಯಕ್ಕೆ, ದಕ್ಷಿಣೆ ಸಮರ್ಪಣೆಗೆ, ಅಭಿನಂದನೆಗೆ ಅರ್ಹರಾಗಿದ್ದಾರೆ. ಲೋಕದಲ್ಲಿ ಅಸಮಾನವಾದ ಪುಣ್ಯಕ್ಷೇತ್ರವೆನಿಸುತ್ತಾರೆ. (ಅನುತ್ತರಂ ಪುಣ್ಯಖ್ಖೇತ್ತಂ ಲೋಕಸ್ಸಾʼತಿ)
ದಾನದ ರೀತಿಗಳು ಎಂಟು—1) ಕೇಳಿದಾಗ ಕೊಡುವದು 2) ಭಯದಿಂದ ಕೊಡುವದು 3) ʼನನಗೆ ಕೊಟ್ಟಿದ್ದಾನೆʼ ಎಂದುಕೊಂಡು ಹಿಂತಿರುಗಿ ಕೊಡುವದು 4) ʼದಾನ ಮಾಡುವದುʼ ಒಳ್ಳೆಯದು ಎಂದುಕೊಂಡು ಕೊಡುವದು 5) ಅಡಿಗೆ ಮಾಡಿದವನು ಅಡಿಗೆ ಮಾಡದವನಿಗೆ ದಾನ ಮಾಡುವದು 6) ಉಚಿತವಾದುದು ಎಂದುಕೊಂಡು ದಾನ ಮಾಡುವದು  7) ದಾನ ಮಾಡುವದರಿಂದ ಕೀರ್ತಿ ಸಿಗುತ್ತದೆ ಎಂದು ದಾನ ಮಾಡುವದು  8) ʼ ಚಿತ್ತವು ಸಂತೋಷಗೊಳ್ಳುತ್ತದೆ. ತೃಪ್ತಿಪಡುತ್ತದೆ ʼ ಎಂದು ದಾನ ಮಾಡುವದು
ಲೋಕ ಧರ್ಮಗಳು ಎಂಟು—ಲೋಭ ಮತ್ತು ಅಲೋಭ, ಯಶಸ್ಸು ಮತ್ತು ಅಪಯಶಸ್ಸು, ನಿಂದೆ ಮತ್ತು ಪ್ರಶಂಸೆ, ಸುಖ ಮತ್ತು ದುಃಖ.
ವಿಮೋಕ್ಖಗಳು ಎಂಟು—1) ರೂಪಿಯು ಹೊರಗಿನ ರೂಪವನ್ನು ನೋಡುತ್ತಾನೆ. ಇದು ಪ್ರಥಮ ವಿಮೋಕ್ಖ.  2) ಅರೂಪಸಞ್ಞಯಾದವನು ಹೊರಗಿನ ರೂಪಗಳನ್ನು ನೋಡುತ್ತಾನೆ. ಇದು ದ್ವಿತಿಯ ವಿಮೋಕ್ಖ 3) ರೂಪಸಞ್ಞೆಯು ʼಇದು ಶುಭವಾಗಿದೆ ಎನ್ನುತ್ತಾನೆ. ಇದು ತೃತಿಯ ವಿಮೋಕ್ಖ 4) ರೂಪ ಸಞ್ಞೆಯ ಪಾತಳಿಯನ್ನು ಮೀರಿ ಇಂದ್ರಿಯಗಳಿಂದಾಗುವ ಪ್ರತಿಕ್ರಿಯೆಗಳನ್ನು ನಾಶಮಾಡಿಕೊಂಡು ಅರಿವನ್ನೂ ಮೀರಿ ಆಕಾಶವು ಅನಂತವಾಗಿದೆ ಎಂದು ಆಕಾಸಾನಂಚಾಯತನದಲ್ಲಿ ಇರುತ್ತಾನೆ. ಇದು ಚತುರ್ಥ ವಿಮೋಕ್ಖ. 5)  ಆಕಾಸಾನಂಚಾಯತನವನ್ನೂ ಮೀರಿ ವಿಞ್ಞಾಣವು ಅನಂತವಾಗಿದೆ ಎಂಬ   ವಿಞ್ಞಾಣಂಚಾಯತನದಲ್ಲಿ ಇರುತ್ತಾನೆ . ಇದು ಐದನೆಯ ವಿಮೋಕ್ಖ. 6) ವಿಞ್ಞಾಣಂಚಾಯತನವನ್ನೂ ಮೀರಿ ಏನೂ ಇಲ್ಲ ಎಂಬ ಅಕಿಂಚನಾಯತದಲ್ಲಿ ಇರುತ್ತಾನೆ . ಇದು ಆರನೆಯ ವಿಮೋಕ್ಖ. 7)  ಅಕಿಂಚನಾಯತವನ್ನೂ ಮೀರಿ ʼ ಅರಿವು ಇಲ್ಲ, ಅರಿವು ಇಲ್ಲದೆಯೂ ಇಲ್ಲʼ ಎಂಬ ನೇವಸಞ್ಞಾನಾಸಞ್ಞಾಯತನದಲ್ಲಿ ಇರುತ್ತಾನೆ. ಇದು ಏಳನೆಯ ವಿಮೋಕ್ಖ. 8) ಇದನ್ನೂ ಮೀರಿ ಅರಿವು, ವೇದನೆ ಎರಡೂ ಇಲ್ಲದ ಸ್ಥಿತಿಯಲ್ಲಿರುತ್ತಾನೆ. ಇದು ಎಂಟನೆಯ ವಿಮೋಕ್ಖ.
ಹೀಗೆ ಧರ್ಮವು ಎಂಟರಿಂದಾಗಿದೆ ಅನ್ನುವದನ್ನು ಸಮ್ಮಾಸಂಬುದ್ಧರು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಅದನ್ನು ಸ್ಪಷ್ಠಪಡಿಸಿದ್ದಾರೆ.
ಧರ್ಮವು ಒಂಬತ್ತರಿಂದ ಆಗಿದೆ. ಯಾವವು ಆ ಒಂಬತ್ತು ?
ಕಲಹದ ಆಧಾರಗಳು ಒಂಬತ್ತು—1) ʼನನಗೆ ಅನರ್ಥವನ್ನು ಮಾಡಿದ್ದಾನೆʼ ಎನ್ನುವದು ಕಲಹವನ್ನು ಮಾಡುತ್ತದೆ.  2) ನನಗೆ ಅನರ್ಥವನ್ನು ಮಾಡುತ್ತಾನೆ  3) ಮುಂದೆ ನನಗೆ ಅನರ್ಥವನ್ನು ಮಾಡುತ್ತಾನೆ 4) ನನ್ನ ಪ್ರೀಯರಾದವರಿಗೆ ಅನರ್ಥ ಮಾಡಿದ್ದಾನೆ 5) ನನ್ನ ಪ್ರೀಯರಾದವರಿಗೆ ಅನರ್ಥ ಮಾಡುತ್ತಾನೆ 6) ಮುಂದೆ ನನ್ನ ಪ್ರೀಯರಾದವರಿಗೆ ಅನರ್ಥ ಮಾಡುತ್ತಾನೆ  7) ನನ್ನ ಅಪ್ರೀಯರಾದವರಿಗೆ ಓಳ್ಳೆಯದನ್ನು ಮಾಡಿದ್ದಾನೆ  8) ನನ್ನ ಅಪ್ರೀಯರಾದವರಿಗೆ ಓಳ್ಳೆಯದನ್ನು ಮಾಡುತ್ತಾನೆ 9) ಮುಂದೆ ನನ್ನ ಅಪ್ರೀಯರಾದವರಿಗೆ ಓಳ್ಳೆಯದನ್ನು ಮಾಡುತ್ತಾನೆ . ಈ ಕಾರಣಗಳು ಕಲಹವನ್ನುಂಟು ಮಾಡುತ್ತವೆ.
ಕಲಹವನ್ನು ತಪ್ಪಿಸುವ ರೀತಿಗಳು ಒಂಬತ್ತು—ಮೇಲಿನ ಕಾರಣಗಳಿಂದ ಕಲಹವಾಡಿದರೆ ನನಗಾಗಲಿ ಅವನಿಗಾಗಲಿ ಯಾವ ಲಾಭವೂ ಇಲ್ಲ ಎಂಬ ಭಾವನೆಯನ್ನು ಹೊಂದಿದರೆ ಮೇಲಿನ ಒಂಬತ್ತು ವಿದಧ ಕಲಹಗಳನ್ನು ತಪ್ಪಿಸಬಹುದು.
ಜೀವಿಗಳ ನಿವಾಸಗಳು ಒಂಬತ್ತು—1) ನಾನಾ ಕಾಯಗಳನ್ನು , ನಾನಾ ಅರಿವನ್ನೂ ಹೊಂದಿರುವ ಜೀವಿಗಳು. ಮನುಷ್ಯರು, ದೇವತೆಗಳು, ನಿಪಾತಕ್ಕೆ ಹೋಗಿರುವ ಜೀವಿಗಳ ನಿವಾಸ. 2) ನಾನಾ ಕಾಯಗಳು, ಒಂದೇ ಬಗೆಯ ಅರಿವನ್ನು ಹೊಂದಿರುವ ಜೀವಿಗಳು. ದೇವತೆಗಳು, ಬ್ರಹ್ಮಕಾಯಕರು, ಪ್ರಥಮಧ್ಯಾನದ ಫಲವಾಗಿ ಹುಟ್ಟಿದವರ ನಿವಾಸ.  3) ಒಂದೇ ಬಗೆಯ ಕಾಯವನ್ನೂ ನಾನಾ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳು. ಅಭಿಸ್ಸಾರ ದೇವತೆಗಳ ನಿವಾಸ. ( ಸೃಷ್ಠಿಯ ಪ್ರಾರಂಭ ಈ ಅಭಿಸ್ಸಾರ ದೇವತೆಗಳಿಂದ  ಎಂದು ಅಗ್ಗಯ್ಯ ಸುತ್ತದಲ್ಲಿ ಹೇಳುತ್ತಾರೆ. ಅಭಿಸ್ಸಾರ ದೇವತೆಗಳು ತುಂಬಾ ಸೂಕ್ಷ್ಮ ಜೀವಿಗಳು, ಆಧುನಿಕ ವಿಕಾಸವಾದದಲ್ಲಿ ಸೃಷ್ಠಿಯ ಮೊದಲಲ್ಲಿ ಏಕಾಣುಜೀವಿಗಳ ಉಗಮವನ್ನು ಹೇಳುತ್ತಾರೆ) 4) ಒಂದೇ ಬಗೆಯ ಕಾಯವನ್ನು ಒಂದೇ ಬಗೆಯ ಅರಿವನ್ನೂ ಪಡೆದ ಸುಭಕ್ಖಿಣ್ಹದೇವತೆಗಳ ನಿವಾಸ.. 5) ಅರಿವನ್ನೂ ವೇದನೆಯನ್ನೂ ಮೀರಿದ ಜೀವಿಗಳ ನಿವಾಸ, ಅಸಞ್ಞಾಸತ್ತಗಳು. 6) ಎಲ್ಲ ರೂಪದ ಅರಿವನ್ನೂ ಮೀರಿ, ಕ್ರೋಧಭಾವನೆಯನ್ನು ನಾಶಮಾಡಿ , ವಿವಿಧ ಜೀವಿಗಳ ಅರಿವನ್ನೂ ಮೀರಿ ಆಕಾಶವು ಅನಂತವಾಗಿದೆ ಎಂದು ಆಕಾಸಾನಂಚಾಯತನದಲ್ಲಿರುವವರ ನಿವಾಸ.  7) ವಿಞ್ಞಾಣಂಚಾಯತನದಲ್ಲಿರುವವರ ನಿವಾಸ  8) ಅಕಿಂಚಞ್ಞಾಯತನದಲ್ಲಿರುವವರ ನಿವಾಸ 9) ನೇವಸಞ್ಞಾನಾಸಞ್ಞಾಯತನದಲ್ಲಿರುವವರ ನಿವಾಸ
ಅನುಕ್ರಮವಾಗಿ ಬರುವ ಸ್ಥಿತಿಗಳು ಒಂಬತ್ತು— 1) ಕಾಮ, ಅಕುಶಲ ಭಾವನೆಗಳನ್ನು ದೂರಮಾಡಿ ತರ್ಕ ವಿಚಾರಗಳಿಂದ ಕೂಡಿ ವಿವೇಕದಿಂದ ಕೂಡಿದ ಪ್ರೀತಿ ಸುಖದಲ್ಲಿ ವಿಹರಿಸುವವನು ಪ್ರಥಮ ಧ್ಯಾನದಲ್ಲಿರುತ್ತಾನೆ.  2) ತರ್ಕವನ್ನು, ವಿಚಾರವನ್ನು ಉಪಶಮನ ಮಾಡಿದಾಗ ದ್ವಿತಿಯ ಝಾನದಲ್ಲಿರುತ್ತಾನೆ. 3) ವೈರಾಗ್ಯದಿಂದ ಕೂಡಿದ ಪ್ರೀತಿ ಸುಖದಲ್ಲಿ ವಿಹರಿಸುತ್ತಾ ಮೂರನೆಯ ಝಾನದಲ್ಲಿರುತ್ತಾನೆ. 4) ಸುಖವನ್ನು ವರ್ಜಿಸಿದಾಗ ನಾಲ್ಕನೆಯ ಝಾನದಲ್ಲಿರುತ್ತಾನೆ.  5) ಎಲ್ಲ ಬಗೆಯ ರೂಪದ ಅರಿವುಗಳನ್ನು ದಾಟಿ ಆಕಾಸನಂಚಾಯತನದಲ್ಲಿ ವಿಹರಿಸುತ್ತಾನೆ. 6) ವಿಞ್ಞಾಣಂಚಾಯತನದಲ್ಲಿ ವಿಹರಿಸುತ್ತಾನೆ  7) ಅಕಿಂಚಿಞ್ಞಾಯತನದಲ್ಲಿ ವಿಹರಿಸುತ್ತಾನೆ. 8)  ನೇವಸಞ್ಞಾನಾಸಞ್ಞಾಯತನದಲ್ಲಿವಿಹರಿಸುತ್ತಾನೆ. 9) ಅದನ್ನೂ ದಾಟಿ ಅರಿವು, ವೇದನೆಗಳಿಲ್ಲದ ಸ್ಥಿತಿಯಲ್ಲಿರುತ್ತಾನೆ.
ಧ್ಯಾನಗಳಿಂದ ಆಗುವ ನಿರೋಧಗಳು ಒಂಬತ್ತು—1) ಪ್ರಥಮ ಧ್ಯಾನದಿಂದ ಕಾಮದ ಅರಿವು ನಾಶವಾಗಿತ್ತದೆ 2) ದ್ವಿತಿಯ ಧ್ಯಾನದಿಂದ ತರ್ಕ ವಿಚಾರಗಳು ನಾಶವಾಗುತ್ತದೆ. 3) ಮೂರನೆಯ ಧ್ಯಾನದಲ್ಲಿ ಪೀತಿನಿರೋಧವಾಗುತ್ತದೆ. 4) ನಾಲ್ಕನೇ ಧ್ಯಾನದಲ್ಲಿ ಉಸಿರಾಟ ನಿರೋಧವಾಗುತ್ತದೆ. 5)  ಆಕಾಸನಂಚಾಯತನದಲ್ಲಿ ರೂಪದ ಅರಿವು ಅಳಿಸಿ ಹೋಗುತ್ತದೆ. 6) ವಿಞ್ಞಾಣಂಚಾಯತನದಲ್ಲಿರುವದರಿಂದ  ಆಕಾಸನಂಚಾಯತನದ ಅರಿವು ಅಳಿಸಿ ಹೋಗುತ್ತದೆ. 7) ಅಕಿಂಚಿಞ್ಞಾಯತನದಲ್ಲಿರುವದರಿಂದ  ವಿಞ್ಞಾಣಂಚಾಯತನದ ಅರಿವು ಅಳಿಯುತ್ತದೆ. 8) ನೇವಸಞ್ಞಾನಾಸಞ್ಞಾಯತನದಲ್ಲಿ ಅಕಿಂಚಿಞ್ಞಾಯತನದ ಅರಿವು ನಾಶವಾಗುತ್ತದೆ. 9) ಅರಿವು ಮತ್ತು ವೇದನೆಗಳಿಲ್ಲದ ಸ್ಥಿತಿಯನ್ನು ಮುಟ್ಟಿ ಅರಿವು ಮತ್ತು ವೇದನೆಗಳ ಅಡ್ಡಿಗಳೂ ನಾಶವಾಗುತ್ತವೆ.
ಧರ್ಮವು ಒಂಬತ್ತರಿಂದ ಆಗಿದೆ ಏಂಬುದನ್ನು ಭಗವಂತರು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ.
ಧರ್ಮವು ಹತ್ತರಿಂದ ಆಗಿದೆ ಯಾವವು ಆ ಹತ್ತು ?
ರಕ್ಷಿಸಬಲ್ಲ ಧರ್ಮಗಳು ಹತ್ತು—1) ಬಿಕ್ಖುವು ಶೀಲವಂತನಾಗಿ ಸಂಯಮಶಾಲಿಯಾಗಿರುತ್ತಾನೆ. ಬಿಡಬೇಕಾದುದು ಸ್ವಲ್ಪವಿದ್ದರೂ ಭಯಪಡುತ್ತಾನೆ. ಶೀಲವಂತನಾದ ಅವನನ್ನು ಧಮ್ಮವು ರಕ್ಷಿಸುತ್ತದೆ.  2) ಬಿಕ್ಖುವು ಬಹುಶ್ರುತನಾಗಿದ್ದು ಕೇಳಿದ್ದನ್ನು ಗ್ರಹಿಸಿ ನೆನಪಿನಲ್ಲಿಟ್ಟುಕೊಂಡಿರುತ್ತಾನೆ. ಯಾವ ಧಮ್ಮವು ಆದಿಯಲ್ಲಿ , ಮಧ್ಯದಲ್ಲಿ ಮತ್ತು ಅಂತ್ಯದಲ್ಲೂ ಕಲ್ಯಾಣಕರವಾಗಿದೆಯೋ ಅದನ್ನು ಚನ್ನಾಗು ತಿಳಿದು ಸಮ್ಯಕ್ ದೃಷ್ಠಯಿಂದ ಅದನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.  3) ಬಿಕ್ಖುವು ಒಳ್ಳೆಯವರಿಗೆ ಮಿತ್ರನಾಗಿಯೂ ಆತ್ಮೀಯನಾಗಿಯೂ ಇರುತ್ತಾನೆ. 4) ಬಿಕ್ಖುವು ಒಳ್ಳೆಯ ಮಾತನಾಡುವವನೂ ವಿನಯವಂತನೂ ಪ್ರೀತಿ  ಮತ್ತು ತಾಳ್ಮೆಯುಳ್ಳವನು ಧಮ್ಮವನ್ನು ಮೀರಿದಾಗ ಬುದ್ಧಿವಾದವನ್ನು ಸ್ವೀಕರಿಸುವವನೂ ಆಗಿರುತ್ತಾನೆ.  5) ಜೊತೆಯ ಸಾಧಕರಲ್ಲಿ, ಹಿರಿಯರಲ್ಲಿ ಆಲಸ್ಯವಿಲ್ಲದೆ ಸೇವೆಯನ್ನೂ, ಮಾಡಬೇಕಾದ ಕರ್ತವ್ಯವನ್ನೂ ಪೂರ್ಣಗೊಳಿಸುತ್ತಾನೆ.  6) ಉನ್ನತ ಧರ್ಮವನ್ನು (ಅಭಿಧಮ್ಮ) ಅರ್ಥ ಮಾಡಿಕೊಳ್ಳುತ್ತಾನೆ. ಧರ್ಮವನ್ನು ಪ್ರೀತಿಸುತ್ತಾನೆ. 7) ಬಿಕ್ಖುವು ತನ್ನಲ್ಲಿರುವ ಪರಿಕರಗಳಿಂದಲೇ ಸಂತುಷ್ಠಿ ಹೊಂದುತ್ತಾನೆ. 8) ಸ್ಮೃತಿವಂತನಾಗಿದ್ದಾನೆ. 9)     ಬಿಕ್ಖುವು ತನ್ನ ಪ್ರಯತ್ನದಿಂದ ಅಕುಶಲವಾದದ್ದನ್ನು ವಿಸರ್ಜಿಸಿ ಕುಶಲವಾದದ್ದನ್ನು ಪಡೆಯುತ್ತಾನೆ ಮತ್ತು ಅದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಾನೆ  10) ಉದಯವ್ಯಯಗಳನ್ನು ಪ್ರಜ್ಞೆಯಿಂದ ನೋಡಬಲ್ಲವನಾಗಿ ದುಃಖಕ್ಷಯದ ಮಾರ್ಗವನ್ನು ಅರಿತಿದ್ದಾನೆ.   ಹೀಗೆ ಬಿಕ್ಖುವು ಪಾಲಿಸುವ ಧರ್ಮವು ಅವನನ್ನು ರಕ್ಷಿಸುತ್ತದೆ. ( ಅಯಂ ಪಿ ಧಮ್ಮೋ ನಾಥಕರಣೋ)
ಕಸೀಣಾ ಆಯತನಗಳು ಹತ್ತು—ಏಕಾಗ್ರತೆಯನ್ನು ಸಾಧಿಸುವಾಗ ಸಾಧಕರ ಮಾನಸಿಕ ಸ್ಥಿತಿಯನ್ನು ಅವಲಂಬಿಸಿ ಹತ್ತು ತರಹದ ಏಕಾಗ್ರತಾ ವಸ್ತುಗಳನ್ನು ಹೇಳುತ್ತಾರೆ. ಏಕಾಗ್ರತೆಯ ಸಾಧನೆ ಕಷ್ಟ ಎನ್ನಿಸಿದರೆ ಮೊದಲು ಘನ ವಸ್ತುಗಳನ್ನು  (ಪೃಥ್ವಿ) ಏಕಾಗ್ರತೆಯ ಗುರಿಯನ್ನಾಗಿಸಿ ಪ್ರಾರಂಭಿಸುತ್ತಾರೆ. ಹತ್ತು ಕಸೀಣಾಗಳಿವೆ. ಪೃಥ್ವಿ, ಆಪಸ್, ತೇಜಸ್, ವಾಯು , ನೀಲಿ, ಹಳದಿ , ಕೆಂಪು, ಬಿಳಿ, ಆಕಾಶ, ವಿಞ್ಞಾಣ. ಇವುಗಳ ವಿವರಣೆ ಬುದ್ಧಘೋಶರ ವಿಶುದ್ಧಿ ಮಗ್ಗದಲ್ಲಿದೆ.
ಅಕುಶಲ ಕರ್ಮ ಪಥಗಳು ಹತ್ತು— ಪ್ರಾಣಿ ಹಿಂಸೆ, ಕಳವು  (ತನಗೆ ಸೇರದುದನ್ನು ತಗೆದುಕೊಳ್ಳುವದು), ವ್ಯಭಿಚಾರ, ಸುಳ್ಳು ಹೇಳುವದು, ಚಾಡಿ ಹೇಳುವದು, ಕಠಿಣವಾಗಿ ಮಾತನಾಡುವದು, ಕಾಡುಹರಟೆಯಲ್ಲಿ ತೊಡಗುವದು,  ಕಾಮಗಳಲ್ಲಿಯೇ ಲೀನನಾಗಿರುವದು, ವೈರಭಾವನೆಯಿಂದ ಕೂಡಿರುವದು, ಮಿಥ್ಯಾ ದೃಷ್ಠಿಯನ್ನು ಹೊಂದಿರುವದು.
ಮೇಲಿನ ಹತ್ತರಿಂದ ದೂರವಿರುವದೇ ಹತ್ತು ಕುಶಲ ಕರ್ಮಪಥಗಳು.
ಶ್ರೇಷ್ಠವಾದ ನಡತೆಗಳು ಹತ್ತು—1) ಐದು ಅಂಶಗಳನ್ನು ವರ್ಜಿಸುವದು. (ಕಾಮ ಭಾವನೆ, ವೈರಭಾವನೆ, ಆಲಸ್ಯ ಜಡತೆ, ಚಿಂತೆ ಕಳವಳ, ಸಂದೇಹಗಳು)  2) ಆರು ಅಂಶಗಳನ್ನು ಪಡೆಯುವದು. ( ಪಂಚೇಂದ್ರಿಯ ಮತ್ತು ಮನಸ್ಸಿನಿಂದ ಸಿಕ್ಕುವ ಸ್ಪರ್ಶ ಮತ್ತು ಭಾವನೆಗಳನ್ನು ತಿಳಿದು ಸಂತೋಷ ಮತ್ತು ಹತಾಶನಾಗದೆ ಉಪೇಕ್ಖಾ ಭಾವನೆ ಮತ್ತು ಎಚ್ಚರಿಕೆಯಿಂದ ಕೂಡಿರುವದು) 3) ಒಂದರಿಂದ ರಕ್ಷಿತನಾಗುವದು-ಸ್ಮೃತಿ ಚಿತ್ತದಿಂದ. 4)  ನಾಲ್ಕನ್ನು ಪಾಲಿಸುವದು ( ಯಾವುದನ್ನು ಅನುಸರಿಸಬೇಕು, ಯಾವುದನ್ನು ಸಹಿಸಬೇಕು, ಯಾವುದನ್ನು ಬಿಡಬೇಕು, ಯಾವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂಬುದರ ಅರಿವು)  5)  ಬೇರೆ ನಂಬಿಕೆಗಳನ್ನು ಬಿಟ್ಟು ಒಂದೇ ಸತ್ಯವನ್ನು ಪಾಲಿಸುವದು (ಎಲ್ಲ ಅಂಧ ವಿಶ್ವಾಸಗಳನ್ನು ಮನಸ್ಸಿನಿಂದ ಇಲ್ಲವಾಗಿಸುವದು, ಬಿಡುವದು, ಸಂಪೂರ್ಣವಾಗಿ ಬಿಡುವದು)  6) ಹಂಬಲಗಳನ್ನು ದೂರ ಮಾಡುವದು ( ಕಾಮ, ಭವ ಮತು ಒಳ್ಳೆಯ ಜೀವನಕ್ಕಾಗಿ ಹಂಬಲಿಸುವದು) 7) ಸ್ಪಷ್ಠವಾಗಿ ವಿಚಾರ ಮಾಡುವದು (ಕಾಮ, ವೈರ ಮತ್ತು ಹಿಂಸೆಗಳಿಂದ ಬಿಡುಗಡೆಯಾದ ಚಿತ್ತ ಮಾಡುವ ವಿಚಾರ)  8) ಕ್ರಿಯಾಶೀಲ ಶರೀರವನ್ನು ಹೊಂದಿರುವದು  9) ವಿಮುತ್ತವಾದ ಚಿತ್ತವನ್ನು ಹೊಂದಿರುವದು  ವಿಮುತ್ತವಾದ ಪಞ್ಞಾವನ್ನು ಹೊಂದಿರುವದು.
 ಒಬ್ಬ ನಿಪುಣ ಸಾಧಕನ ಮನೋಧರ್ಮಗಳು ಹತ್ತು-  ಸಮ್ಮಾದಿಟ್ಟಿ, ಸಮ್ಮಾಸಂಕಪ್ಪ, ಸಮ್ಮಾ ವಾಚಾ, ಸಮ್ಮ ಕಮ್ಮಾಂತ, ಸಮ್ಮಾ ಆಜೀವ, ಸಮ್ಮಾ ವಾಯಾಮ , ಸಮ್ಮಾ ಸತಿ ಗಳನ್ನು ಪಾಲಿಸುತ್ತ  ಸಮ್ಮಾ ಸಮಾಧಿಯನ್ನು ಸಾಧಿಸಿದವನೂ ಆಗಿರುತ್ತಾನೆ.  ಜೊತೆಗೆ ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ವಿಮುಕ್ತಿಯನ್ನು ಪಡೆದಿರುತ್ತಾನೆ.
ಧರ್ಮವು ಹತ್ತರಿಂದ ಆಗಿದೆ ಏಂಬುದನ್ನು ಭಗವಂತರು, ಅರಹಂತರು ಮತ್ತು ಸಮ್ಮಾಸಂಬುದ್ಧರು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ. ವಿವಾದಾತೀತವಾದ ಶ್ರೇಷ್ಠವಾದ ಜೀವನವು ಬಹಳಕಾಲ ಉಳಿಯಲು ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನುಕಂಪಾಯ ಭಗವಾನರು ಬೋಧಿಸಿದ ಈ ಧರ್ಮವನ್ನು ಎಲ್ಲರೂ ಪಠಿಸಬೇಕು. ಹೀಗೆ  ಸಾರಿಪುತ್ತರ  ಮಾತುಗಳಿಗೆ ಎಲ್ಲ ಬಿಕ್ಖುಗಳು ಸಂತೋಷಪಟ್ಟರು.
“ಸಬ್ಬ ಪಾಪಸ್ಸ ಆಕರಣಂ ಕುಸಲಸ್ಸ ಉಪಸಂಪದಾI
ಸಚಿತ್ತ ಪರಿಯೋದಪನಂ ಏತಂ ಬುದ್ಧಾನುಸಾಸನಂ II
ಯಾವ ಪಾಪವನ್ನೂ ಮಾಡದಿರುವದು, ಕುಶಲ ಕರ್ಮಗಳನ್ನು ಮಾಡುವದು, ಚಿತ್ತವನ್ನು ಪರಿಶುದ್ಧಗೊಳಿಸುವದು ಇವಿಷ್ಟೇ ಬುದ್ಧರ ಅನುಶಾಸನ.  

   - ಧಮ್ಮಪದ –ಘಿIಗಿ-5 “
        ಭವತು ಸಬ್ಬ ಮಂಗಲಂ, ರಕ್ಖಂತು ಸಬ್ಬ ದೇವತಾ
    


© Copyright 2022, All Rights Reserved Kannada One News