ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ: ರಮಾಕಾಂತ ಪುರಾಣಿಕ ಅವರ 24ನೇ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ: ರಮಾಕಾಂತ ಪುರಾಣಿಕ ಅವರ 24ನೇ ಅಂಕಣ

Updated : 12.09.2022

“ಖೀಣಂ ಪುರಾಣಂ ನವಂ ನತ್ತಿ ಸಂಭವಂ ವಿರತ್ತ ಚಿತ್ತ ಆಯತಿಕೆ ಭವಸ್ಮಿಮ್I
ತೇ ಖೀಣ ಬೀಜ ಅವಿರೂಲ್ಹಿ ಚಂದಾ ನಿಬ್ಬಂತಿ ಧೀರಾ ಯತಾಯಂ ಪದೀಪೋ II
ಹಳೆಯ ಸಂಸ್ಕರಗಳೆಲ್ಲ ನಿರ್ಮೂಲವಾಗಿ ಹೊಸತು ಯಾವಾಗ ಉತ್ಪತ್ತಿಯಾಗುವದಿಲ್ಲವೋ ಮನಸ್ಸು ಮುಂದಿನ ಭವವನ್ನು ಬಯಸುವದಿಲ್ಲ. ಬೀಜವು ನಾಶವಾಗಿ ಹೊಸ ರಾಗಗಳು ಉತ್ಪತ್ತಿಯಾಗುವದಿಲ್ಲ. ಇಂತಹ ಮನಸ್ಸುಳ್ಳ ವಿವೇಕಿಗಳು ದೀಪದ ಜ್ವಾಲೆಯಂತೆ ಆರಿಹೋಗುತ್ತಾರೆ.”  ---- ರತನ ಸುತ್ತ
            
ದೀಘನಿಕಾಯದ ಸಂಗೀತಿ ಸುತ್ತ ಮತ್ತು ದಸುತ್ತರ ಸುತ್ತಗಳು ನಿರೂಪಣಾ ವಿಧಾನದಲ್ಲಿ ಭಿನ್ನವಾಗಿವೆ. ಅದು ಅಂಗುತ್ತರ ನಿಕಾಯದಲ್ಲಿಯಂತೆ ಒಂದು ವಿಷಯದ ಪ್ರಶ್ನೆಯನ್ನು ಒಂದಾಗಿ, ಎರಡಾಗಿ, ಮೂರಾಗಿ .... ಹೀಗೆ ನೋಡುತ್ತದೆ. ಬೌದ್ಧ ಧಮ್ಮದ ಸಾರವನ್ನು ತುಂಬಿಕೊಂಡಿರುವ ಈ ಸುತ್ತಗಳು ಅನೇಕ ಪಾರಿಭಾಷಿಕ ಶಬ್ಧಗಳು ಮತ್ತು ಅವುಗಳ ವಿವರಣೆಗಳಿಂದ ತುಂಬಿವೆ. ಒಂದು ದೃಷ್ಠಿಯಿಂದ ಇವು ಅಭಿಧಮ್ಮಕ್ಕೆ ಪ್ರಸ್ತಾವನೆಯಂತಿವೆ. ಮತ್ತು ಅಭಿಧಮ್ಮವನ್ನು ಈ ಜಗತ್ತಿಗೆ ತಿಳಿಸಿದ ಪೂಜ್ಯ ಸಾರಿಪುತ್ತರೇ ಬುದ್ಧರ ಅದೇಶದಂತೆ ಈ ಎರಡೂ ಸುತ್ತಗಳನ್ನು  ಬಿಕ್ಖುಗಳಿಗೆ ಉಪದೇಶಿಸಿದರು. ಸಂಗೀತಿ ಸುತ್ತವನ್ನು ಸಂಕ್ಷೇಪವಾಗಿ ನೋಡೋಣ.
ಇದನ್ನು ಪಾವಾ ನಗರದ ಆಮ್ರವನದಲ್ಲಿ ಪೂಜ್ಯ ಸಾರಿಪುತ್ತರು ಬಿಕ್ಖುಗಳಿಗೆ ಉಪದೇಶಿಸಿದರು.
“ ಬಹುಜನ ಹಿತಾಯ ಬಹುಜನ ಸುಖಾಯ ಲೋಕದ ಮೇಲಿನ ಅನುಕಂಪೆಯಿಂದ ಸಮ್ಮಾಸಂಬುದ್ಧರು ಅರುಹಿದ ಈ ಧಮ್ಮವನ್ನು ಎಲ್ಲರೂ ಒಟ್ಟಿಗೆ ಪಠಿಸಬೇಕು.
ಧರ್ಮವು ಒಂದು ಅಂಶದಿಂದ ಕೂಡಿದೆ ಎಂದು ಹೇಳುತ್ತಾರೆ. ಆ ಒಂದಂಶ ಯಾವುದು ?
ಎಲ್ಲ ಜೀವಿಗಳೂ ಆಹಾರವನ್ನೇ ಅವಲಂಬಿಸಿವೆ. ಎಲ್ಲ ಜೀವಿಗಳೂ ಸಂಖಾರದಿಂದ ಕೂಡಿವೆ. ಈ ಧರ್ಮವನ್ನು ಭಗವಾನರು ಅರಿತಿದ್ದಾರೆ.
ಧರ್ಮವು ಎರಡರಿಂದಾಗಿದೆ. ಆ ಎರಡು ಯಾವವು ?
ನಾಮ ಮತ್ತು ರೂಪ,  ಅಜ್ಞಾನ ಮತ್ತು ಭವತಣ್ಣಾ, ಭವದಿಟ್ಠಿ ಮತ್ತು ವಿಭವ ದಿಟ್ಠಿ( ಅಸ್ತಿತ್ವ ಇದೆ ಎಂದು ತಿಳಿಯುವದು ಮತ್ತು ಇಲ್ಲ ಎಂದು ತಿಳಿಯುವದು),  ವಿವೇಕ ಮತ್ತು ವಿವೇಚನೆ,  ಅವಿಧೆಯತೆ ಮತ್ತು ದುರ್ಜನ ಸಂಗ,  ವಿಧೇಯತೆ ಮತ್ತು ಒಳ್ಳೆಯ ಸ್ನೇಹಿತರ ಸಂಗ, ಮಾಡಬೇಕಾದುದು, ಮಾಡಬಾರದ್ದುದರ ಬಗ್ಗೆ ಕೌಶಲ್ಯ, ಧಾತುಗಳ ಬಗೆಗಿನ ಜ್ಞಾನ, ಅವುಗಳನ್ನು ತಿಳಿದುಕೊಳ್ಳುವ ಕೌಶಲ, ಆಯತನಗಳ ಜ್ಞಾನ ಮತ್ತು ಪಟಿಚ್ಚಸಮುಪ್ಪಾದದ ಬಗೆಗಿನ ಜ್ಞಾನ,  ಕಾರಣಗಳ ಬಗೆಗಿನ ಜ್ಞಾನ, ಕಾರಣಾತೀತವಾದದ್ದರ ಬಗೆಗಿನ ಜ್ಞಾನ,  ಸಮಗ್ರತೆ ಮತ್ತು ಲಜ್ಜೆ, ಸಹಿಷ್ಟ್ನುತೆ ಮತ್ತು ವಿನಯ,  ಮಾರ್ದವತೆ ಮತ್ತು ನಮ್ರತೆ, ಹಿಂಸಾಭಾವನೆ ಇಲ್ಲದಿರುವದು ಮತ್ತು ಪ್ರೇಮದಿಂದ ಕೂಡಿರುವದು, ಮರೆವು ಮತ್ತು ದಡ್ಡತನ, ಸೃತಿ ಮತ್ತು ವಿವೇಕ, ಇಂದ್ರಿಯ ಲೋಲುಪತೆ ಮತ್ತು ಹೊಟ್ಟೆಬಾಕತನ, ಇಂದ್ರಿಯ ರಕ್ಷಣೆ ಮತ್ತು ಆಹಾರ ಮಿತಿ, ವಿವೇಚನಾ ಸಾಮರ್ಥ್ಯ ಮತ್ತು ಬೆಳೆಯಬಲ್ಲ ಸಾಮರ್ಥ್ಯ, ಸ್ಮೃತಿ ಮತ್ತು ಸಮಾಧಿ ಬಲಗಳು, ಸಮತೆ ಮತ್ತು ವಿಪಸ್ಸನ,  ಗ್ರಹಣ ಶಕ್ತಿ ಮತ್ತು ಸಮಸ್ಥಿತಿ,  ಶೀಲಭ್ರಷ್ಠತೆ ಮತ್ತು ತಪ್ಪು ದೃಷ್ಠಿ, ಶೀಲ ಶುದ್ಧಿ ಮತ್ತು ದೃಷ್ಠಿ ಶುದ್ಧಿ, ನಂಬಿಕೆಯಂತೆ ನಡೆಯಬೇಕಾದಹೋರಾಟ, ತಳಮಳಗೊಳ್ಳುತ್ತಿರುವ ಕಾರಣಗಳ ಉಪಶಮನಕ್ಕೆ ಮಾಡಬೇಕಾದ ಪ್ರಯತ್ನ ಮತ್ತು ಸಾಧನೆ,
ಸಾಧಿಸಿದ್ದರ ಬಗ್ಗೆ ಅಸಂತುಷ್ಠಿ ಮತ್ತು ಸಾಧಿಸಿದ್ದನ್ನು ಎಚ್ಚರಿಕೆಯಿಂದ ಉಳಿಸಿಕೊಳ್ಳುವ ಕೌಶಲ,  ವಿದ್ಯೆ ಮತ್ತು ವಿಮುಕ್ತಿ, ನಿರ್ಮೂಲಗೊಳಿಸಬೇಕಾದುದರ ಜ್ಞಾನ ಮತ್ತು ಅವುಗಳ ಅನುತ್ಪತ್ತಿಯ ಜ್ಞಾನ.
ಈ ಎರಡು ಅಂಶಗಳಿಂದ ಕೂಡಿದ ಧರ್ಮವನ್ನು ಭಗವಾನರು ಸ್ಪಷ್ಟವಾಗಿ ತಿಳಿದು ಬೋಧಿಸಿದ್ದಾರೆ.
ಗೆಳೆಯರೆ, ಧರ್ಮವು ಮೂರರಿಂದಾಗಿದೆ. ಆ ಮೂರು ಯಾವವು ?
ಅಕುಶಲದ ಮೂಲಗಳು ಮೂರು,  ಲೋಭ, ದ್ವೇಷ ಮತ್ತು ಮೋಹ. ಕುಶಲದ ಮೂಲಗಳು ಮೂರು, ಅಲೋಭ, ಅದ್ವೇಷ, ಅಮೋಹ. ಕೆಟ್ಟದ್ದು ಆಗುವದು ಮೂರರಿಂದ, ಕಾಯಾ, ವಾಚಾ ಮತ್ತು ಮನಸ್ಸಿನಿಂದ. ಒಳ್ಳೆಯ ನಡುವಳಿಕೆಗಳು ಮೂರರಿಂದ ಕಾಯಾ, ವಾಚಾ ಮತ್ತು ಮನಸ್ಸಿನಿಂದ. ಕೆಟ್ಟ ಭಾವನೆಗಳು ಮೂರು ಕಾಮ ಭಾವನೆ, ದ್ವೇಷ ಭಾವನೆ ಮತ್ತು ಹಿಂಸಾ ಭಾವನೆ. ಒಳ್ಳೆಯ ಭಾವನೆಗಳು ಮೂರು ,ನೆಕ್ಖಮ್ಮ (ವೈರಾಗ್ಯ-ತಣ್ಣಾದಿಂದ ಬಿಡುಗಡೆಗೊಳ್ಳುವದು) , ಮೈತ್ರಿ ಮತ್ತು ಅಹಿಂಸಾ ಭಾವನೆ. ಇದೇ ರೀತಿ ಕೆಟ್ಟ ಮತ್ತು ಒಳ್ಳೆಯ ಸಂಕಲ್ಪಗಳು ಮೂರು ಮೂರು. ಇದೇ ರೀತಿ ಅಕುಶಲವಾದ  ಕಾಮ, ದ್ವೇಷ ಮತ್ತು ಹಿಂಸೆಯಿಂದ ಕೂಡಿದ ತಿಳುವಳಿಕೆಗಳು, ನೆಕ್ಖಮ್ಮ, ಮೈತ್ರಿ ಮತ್ತು ಅಹಿಂಸೆಯಿಂದ ಕೂಡಿದ ಒಳ್ಳೆಯ ತಿಳುವಳಿಕೆಗಳು ಇವೆ.  ಅಕುಶಲ ಧಾತುಗಳು ಮೂರು, ಕಾಮ,ದ್ವೇಷ , ಹಿಂಸಾ ಧಾತುಗಳು. ಕುಶಲ ಧಾತುಗಳು ಮೂರು, ನೆಕ್ಖಮ್ಮ, ಮೈತ್ರಿ ಮತ್ತು ಅಹಿಂಸೆಯಿಂದ ಕೂಡಿದ ಧಾತುಗಳು, ಮತ್ತೆ ಮೂರು ಧಾತುಗಳು, ಕಾಮಧಾತು, ರೂಪಧಾತು ಮತ್ತು ಅರೂಪ ಧಾತು.. ತಣ್ಣಾಗಳು ಮೂರು, ಕಾಮ ತಣ್ಣಾ, ಭವತಣ್ಣಾ, ವಿಭವ ತಣ್ಣಾ, ಇನ್ನೂ ಮೂರು, ಕಾಮ, ರೂಪ ಮತ್ತು ಅರೂಪ ತಣ್ಣಾ., ಮತ್ತೂ ಮೂರು, ರೂಪ, ಅರೂಪ ಮತ್ತು ನಿರೋಧ ತಣ್ಣಾ.   ಮೂರು ಸಂಕೋಲೆಗಳು, ಸಕ್ಕಾಯ ದಿಟ್ಟಿ (ದೇಹವೇ ನಿಜ ಎಂಬ ನಂಬಿಕೆ) , ವಿಚಿಕಿಚ್ಚ (ಸಂಶಯ) , ಪೂಜೆ ಆಚರಣೆಗಳಿಂದ ಸಾಕ್ಷಾತ್ಕಾರವಾಗುತ್ತದೆ ಎಂಬ ನಂಬಿಕೆ. ಆಸವಗಳು ಮೂರು, ಕಾಮಾಸವ, ಭವಾಸವ, ಅವಿಜ್ಜಾಸವ. ಭವಗಳು ಮೂರು, ಕಾಮ, ರೂಪ ಮತ್ತು ಅರೂಪ ಭವ. ಹಂಬಲಗಳು ಮೂರು, ಇಂದ್ರಿಯ ಸುಖದ ಹಂಬಲ, ಬದುಕಬೇಕೆಂಬ ಹಂಬಲ,ಶ್ರೇಷ್ಠ ಜೀವನ ನಡೆಸಬೆಕೆಂಬ ಹಂಬಲ. ಮೂರು ವಿಧದ ಜನರು , ನಾನು ಉತ್ತಮನೆಂಬುದು, ನಾನು ನಿನಗೆ ಸಮನೆಂಬುದು, ನಾನು ಹೀನನೆಂಬುದು. ಮೂರು ಕಾಲಗಳು, ಹಿಂದೆ ಆಗಿದ್ದು, ಮುಂದೆ ಆಗುವದು ಮತ್ತು ಇಂದಿನದು. ಮೂರು ವೇದನೆಗಳು, ಸುಖವೇದನೆ, ದುಃಖವೇದನೆ, ಸುಖವೂ ಅಲ್ಲದ ದುಃಖವು ಅಲ್ಲದ ವೇದನೆ.

 ರಾಶಿಗಳು ಮೂರು, ಮಿಥ್ಯಾ ಕರ್ಮಗಳಿಂದ ಬರುವ ಫಲಗಳು, ಸಮ್ಯಕ್ ಕರ್ಮಗಳಿಂದ ಉಂಟಾಗುವ ಫಲಗಳು, ಯಾವ ಫಲಗಳೂ ಉಂಟಾಗದಂಥ ಕರ್ಮಗಳು.  ತಥಾಗತನಾದವನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇರದ ಮೂರು ಆಚರಣೆಗಳಿವೆ. ತಥಾಗತರಿಂದ ಕಾಯ ದುಷ್ಕರ್ಮಗಳು ಎಂದೂ ಆಗವು. ಬೇರಾರೂ ಇದನ್ನು ತಿಳಿಯಬಾರದು ಎಂಬ ಭಾವನೆ ಅವರಿಗೆ ಇರುವದಿಲ್ಲ. ತಥಾಗತರ ಪರಿಶುದ್ಧವಾದ ವಾಚಾದಿಂದ , ಮನಸ್ಸಿನಿಂದ ನಡೆಯುವ ಕರ್ಮಗಳು ಎಂದೂ ದುಷ್ಕರ್ಮಗಳಾಗುವದಿಲ್ಲ. ಮೂರು ಬಗೆಯ ಅಡ್ಡಿಗಳು, ರಾಗ, ದ್ವೇಷ ಮತ್ತು ಮೋಹದಿಂದಾಗುವ ಅಡ್ಡಿಗಳು. 

ಮೂರು ಬಗೆಯ ರೂಪ ಸಂಗ್ರಹಗಳು, ಪ್ರತಿಭಂಧಿಸುವ ರೂಪ, ಪ್ರತಿಬಂಧಿಸುವ ಆದರೆ ಕಾಣದಿರುವ ರೂಪ, ಪ್ರತಿಬಂಧನವನ್ನು ಮಾಡದ ಆದರೆ ಕಾಣದಿರುವ ರೂಪ.  ಮೂರು  ಬಗೆಯ ಸಂಖಾರಗಳು, ಪುಣ್ಯಗಳ ಸಂಖಾರ, ಅಪುಣ್ಯಗಳ ಸಂಖಾರ, ಯಾವ ಬದಲಾವಣೆಗಳನ್ನುಂಟು ಮಾಡದ ಸಂಖಾರಗಳು.  ಮೂರು ಬಗೆಯ ಮನುಷ್ಯರು, ಕಲಿಯುತ್ತಿರುವವನು, ಕಲಿತವನು, ಕಲಿಯುವವನೂ ಅಲ್ಲದ ಕಲಿತವನೂ ಅಲ್ಲದ ಮನುಷ್ಯ.  ಮೂರು ಬಗೆಯ ಹಿರಿಯರು, ಹುಟ್ಟಿನಿಂದ ಹಿರಿಯನಾಗಿರುವವನು, ಧರ್ಮಾಚರಣೆಯಿಂದ ಹಿರಿಯನಾಗಿರುವವನು, ಜನರ ಒಪ್ಪಿಗೆಯಿಂದ ಹಿರಿಯನಾಗಿರುವವನು. ಪುಣ್ಯ ಕಾರ್ಯದ ಆಧಾರಗಳು  ಮೂರು, ದಾನ, ಶೀಲ ಮತ್ತು ಧ್ಯಾನದ ಆಧಾರಗಳು.  ಚ್ಯುತಿಯ ಕಾರಣಗಳು ಮೂರು, ಕೆಟ್ಟದ್ದನ್ನು ನೋಡುವದು, ಕೆಟ್ಟದ್ದನ್ನು ಕೇಳುವದು, ಸಂದೇಹಪೂರಿತವಾದವು. ಒಳ್ಳೆಯ ಪುನರ್ಜನ್ಮಗಳು ಮೂರು, ಬ್ರಹ್ಮಕಾಯಕರು (ತಾವೇ ಉತ್ಪತ್ತಿ ಮಾಡಿದ ಲೋಕದಲ್ಲಿದ್ದವರು) , ಅಭಿಸ್ಸಾರ ದೇವತೆಗಳು, ಸುಭಕಿಣ್ಹ ದೇವತೆಗಳು.  ಮೂರು ಬಗೆಯ ಪಞ್ಞಾಗಳು, ಕಲಿಯುತ್ತಿರುವವನು ಹೊಂದಿದ ಪಞ್ಞಾ, ಕಲಿತವನು ಹೊಂದಿದ ಪಞ್ಞಾ, ಕಲಿಯದವನೂ ಈಗಲೂ ಕಲಿಯುತ್ತಿಲ್ಲದವನೂ ಹೊಂದಿದ ಪಞ್ಞಾ.

ಮತ್ತೆ ಮೂರು ಪಞ್ಞಾಗಳು, ಚಿಂತನೆಯಿಂದ ಬರುವ ಪಞ್ಞಾ, ಕೇಳಿ ತಿಳಿಯುವದರಿಂದ ಬರುವ ಪಞ್ಞಾ, ಮತ್ತು ಧ್ಯಾನದಿಂದ ಬರುವ ಪಞ್ಞಾ. ಮೂರು ಬಗೆಯ ಚಕ್ಷುಗಳಿವೆ. ಮಾಂಸ ಚಕ್ಷು, ದಿವ್ಯ ಚಕ್ಷು ಮತ್ತು ಪಞ್ಞಾ ಚಕ್ಷು. ಮೂರು ಬಗೆಯ ಶಿಕ್ಷಣಗಳು, ಉನ್ನತ ಶೀಲ, ಉನ್ನತವಾದ ಚಿತ್ತ, ಉನ್ನತವಾದ ಪಞ್ಞಾಗಳ ಶಿಕ್ಷಣ. ಧ್ಯಾನಗಳು ಮೂರು, ಕಾಯವನ್ನು ಕುರಿತ, ಚಿತ್ತವನ್ನು ಕುರಿತ ಮತ್ತು ಪಞ್ಞಾವನ್ನು ಕುರಿತ ಧ್ಯಾನ. ಉತ್ಕೃಷ್ಠವಾದದ್ದು ಮೂರು , ಅನುತ್ತರ ದರ್ಶನ, ಅನುತ್ತರ ಮಾರ್ಗ, ಅನುತ್ತರ ವಿಮುಕ್ತಿ. ಸಮಾಧಿಗಳು ಮೂರು, ತರ್ಕ ವಿಚಾರದಿಂದ ಕೂಡಿದ ಸಮಾಧಿ, ತರ್ಕವಿಲ್ಲದ ಆದರೆ ವಿಚಾರದಿಂದ ಕೂಡಿದ ಸಮಾಧಿ, ತರ್ಕ ಮತ್ತು ವಿಚಾರಗಳನ್ನು ಮೀರಿದ ಸಮಾಧಿ. ಮತ್ತೆ ಮೂರು ಸಮಾಧಿಗಳು, ಶೂನ್ಯವನ್ನು ತಿಳಿಯಬಲ್ಲ ಸಮಾಧಿ, ಅನಿಮಿತ್ತ ಸಮಾಧಿ, ದುರಾಶೆಗಳನ್ನು ನಾಶಮಾಡುವ ಸಮಾಧಿ. ಶುಚಿಗಳು ಮೂರು, ಕಾಯಾ, ವಾಚಾ ಮತ್ತು ಮನೋ ಶುಚಿತ್ವಗಳು. ಮೂರು ಮೌನಗಳು, ಕಾಯಾ, ವಾಚಾ ಮತ್ತು ಮನಸಾ. ಕೌಶಲ್ಯಗಳು ಮೂರು, ಮುಂದೆ ಹೋಗುವ ಕೌಶಲ, ಅಪಾಯದಿಂದ ತಪ್ಪಿಸಿಕೊಳ್ಳುವ ಕೌಶಲ, ಉಪಾಯ ಕೌಶಲ.

ಮೂರು ಮದಗಳು, ಆರೋಗ್ಯ, ಯೌವನ ಮತ್ತು ಸ್ಥಾನ ಮದ. ಮೂರು ಅಧಿಪತ್ಯಗಳು, ತನ್ನನ್ನು ತಾನೇ ಆಳಿಕೊಳ್ಳುವದು, ಲೋಕವನ್ನಾಳುವದು, ಧರ್ಮವನ್ನು ತಿಳಿದು ಪಾಲಿಸುವದು.  ಮೂರು ವಿದ್ಯೆಗಳು, ಹಿಂದಿನ ಜನ್ಮದ ವಿದ್ಯೆ, ಜೀವಿಗಳ ಹುಟ್ಟು ಸಾವುಗಳ ವಿದ್ಯೆ, ಆಸವಗಳನ್ನು ನಾಶಮಾಡುವ ವಿದ್ಯೆ. ಮೂರು ವಿಹಾರಗಳು, ದಿವ್ಯ ವಿಹಾರ, ಬ್ರಹ್ಮ ವಿಹಾರ ಮತ್ತು ಆರ್ಯ ವಿಹಾರ. ಮೂರು ಬಗೆಯ ಪವಾಡಗಳು, ಇದ್ಧಿ ಶಕ್ತಿಯಿಂದಾಗುವ ಪವಾಡಗಳು, ಮನಸ್ಸಿನಲ್ಲಿರುವದನ್ನು ತಿಳಿಯುವ ಪವಾಡ, ಅನುಶಾಸನವೆಂಬ ಪವಾಡ.
ಈ ಮೂರರಿಂದ ಆದ ಧರ್ಮಗಳನ್ನು ಅರಹಂತರು, ಸಮ್ಮಾಸಂಬುದ್ಧರು ಅರಿತಿದ್ದಾರೆ, ಕಂಡಿದ್ದಾರೆ.
ಧರ್ಮವು ನಾಲ್ಕರಿಂದ ಆಗಿದೆ. ಯಾವ ನಾಲ್ಕು.
ಸತಿ ಪಟ್ಠಾಣಗಳು ನಾಲ್ಕು( ಜಾಗೃತತೆ ಮತ್ತು ಅರಿವನ್ನು ಪ್ರಜ್ಞೆಯಲ್ಲಿ ಪ್ರತಿಷ್ಠಾಪಿಸಿಕೊಳ್ಳುವದು). ದೋಮನಸ್ಸನ್ನು ವರ್ಜಿಸಿ ಸದಾ ಎಚ್ಚರದಿಂದಿದ್ದು ಕಾಯವನ್ನು ಹೇಗಿದೆಯೋ ಹಾಗೆ ನೋಡುವದು. ವೇದನೆಯನ್ನು ಹೇಗಿದೆಯೋ ಹಾಗೆ ನೋಡುವದು, ಚಿತ್ತವನ್ನು ಹೇಗಿದೆಯೋ ಹಾಗೆ ನೋಡುವದು, ಧಮ್ಮವನ್ನು ಅದರ ನಿಜಸ್ವರೂಪದಲ್ಲಿ ನೋಡುವದು.
ಇದ್ದಿಪದಾನಗಳು ನಾಲ್ಕು. (ಸಮ್ಮಾ ವಾಯಾಮ)  ಅಕುಶಲ ಭಾವನೆಗಳು ಹುಟ್ಟದಿರುವಾಗ ಅವು ಹುಟ್ಟದಂತೆ ಮಾಡುವ ಪ್ರಯತ್ನ, ಹುಟ್ಟಿದಾಗ ಅವುಗಳನ್ನು ನಿರ್ಮೂಲ ಮಾಡುವ ಪ್ರಯತ್ನ, ಕುಶಲ ಭಾವನೆಗಳು ಹುಟ್ಟದಿರುವಾಗ ಹುಟ್ಟುವಂತೆ ಮಾಡುವ ಪ್ರಯತ್ನ, ಹುಟ್ಟಿದ ಕುಶಲ ಭಾವನೆಗಳು ಉಳಿಯುವಂತೆ ಮತ್ತು ಬೆಳೆಯುವಂತೆ ಮಾಡುವ ಪ್ರಯತ್ನ.
ಝಾನಗಳು ನಾಲ್ಕು, ಕಾಮದಿಂದ ಕೂಡಿದ ಅಕುಶಲ ಭಾವನೆಗಳನ್ನು ದೂರ ಮಾಡಿ ತರ್ಕವಿಚಾರಗಳಿಂದ ಕೂಡಿದ ಪೀತಿ ಸುಖಸಹಿತವಾದದ್ದು ಮೊದಲ ಝಾನ. ತರ್ಕ ವಿಚಾರಗಳನ್ನು ಮೀರಿ ಚಿತ್ತೈಕಾಗ್ರತೆಯನ್ನು ಹೊಂದಿ ಪೀತಿಸುಖಸಹಿತ ಸಮಾಧಿ ಎರಡನೆ ಝಾನ. ಪ್ರೀತಿ ವೈರಾಗ್ಯಗಳಲ್ಲಿ ಉಪೇಕ್ಖಾ ಭಾವನೆ ಹೊಂದಿ ಸ್ಮೃತಿಯಲ್ಲಿರುವದು ಮೂರನೆಯ ಝಾನ ಎನಿಸುತ್ತದೆ. ಸುಖದೂಃಖಗಳಿಂದ ದೂರವಾಗಿ, ಸೋಮನಸ್ಸು, ದೋಮನಸ್ಸುಗಳಿಲ್ಲದೆ ಅಸುಖ,ಅದುಃಖಗಳ ಉಪೇಕ್ಖಾ ಭಾವನೆಯಿಂದ ಪರಿಶುದ್ಧವಾದ ಎಚ್ಚರದ (ಸ್ಮೃತಿ) ಸ್ಥಿತಿಯು ಚತುರ್ಥ ಝಾನ ಎನಿಸುತ್ತದೆ.
ಸಮಾಧಿ ಭಾವನೆಗಳು ನಾಲ್ಕು, ಸುಖದ ಸ್ಥಿತಿಯಲ್ಲಿಡುವ ಸಮಾಧಿ ಭಾವನೆ, ಜ್ಞಾನ ದರ್ಶನವನ್ನು ನೀಡಬಲ್ಲ ಸಮಾಧಿ ಭಾವನೆ, ಸ್ಮೃತಿಯನ್ನೂ,ಎಚ್ಚರಿಕೆಯನ್ನೂ ಕೊಡಬಲ್ಲ ಸಮಾಧಿ ಮತ್ತು ಆಸವಗಳ ಕ್ಷಯಯನ್ನು ಸಾಧಿಸಬಲ್ಲ ಸಮಾಧಿ ಭಾವನೆ.
ಬ್ರಹ್ಮವಿಹಾರಗಳು ನಾಲ್ಕು.  ಎಲ್ಲ ದಿಕ್ಕುಗಳಲ್ಲಿ, ಎಲ್ಲ ಲೋಕಗಳಲ್ಲಿ, ಎಲ್ಲ ಜೀವಿಗಳ ಬಗ್ಗೆ ಲವಲೇಶವೂ ಹಿಂಸಾಭಾವನೆ, ವೈರಭಾವನೆಯಿಂದ ಕಲುಷಿತವಾಗದ ಮೈತ್ರಿ,  ಕರುಣೆ, ಮುದಿತಾ ಮತ್ತು ಉಪೇಕ್ಖಾ ಇವು ನಾಲ್ಕು ಬ್ರಹ್ಮ ವಿಹಾರಗಳು.
ಅರೂಪಗಳು ನಾಲ್ಕು. ರೂಪಗಳನ್ನು ತಿಳಿಯಬಲ್ಲ ಸ್ಥಿತಿಗಳನ್ನು ಆಕಾಶವು ಅನಂತವಾಗಿದೆ ಎಂಬ ಭಾವನೆ  ʼಆಕಾಸಾನಂಚಾಯತನʼ , ವಿಞ್ಞಾಣವು ಅನಂತವಾಗಿದೆ ಎಂಬ ಭಾವನೆ ʼ ವಿಞ್ಞಾಣಂಚಾಯತನʼ, ಅದನ್ನೂ ದಾಟಿ ಏನೂ ಇಲ್ಲ ಎಂಬ ಭಾವನೆ ʼಅಕಿಂಚಞ್ಞಾಯತನ”, ಅದನ್ನೂ ದಾಟಿ ಇಲ್ಲ,ಇಲ್ಲದೆಯೂ ಇಲ್ಲ ಎಂಬಂತಹ ಸ್ಥಿತಿ   ʼನೇವಸಞ್ಞಾನಾಸಞ್ಞಾಯತನʼ.
ಪ್ರಯತ್ನಗಳು ನಾಲ್ಕು, ಸಂಯಮ, ವರ್ಜನ, ಧ್ಯಾನ ಮತ್ತು ರಕ್ಷಣೆ. ಜ್ಞಾನಗಳು ನಾಲ್ಕು, ಧಮ್ಮದ ಜ್ಞಾನ, ಅದನ್ನು ಪಾಲಿಸುವದರ ಬಗೆಗಿನ ಜ್ಞಾನ, ಇತರರ ಮನಸ್ಸಿನಲ್ಲಿರುವದನ್ನು ತಿಳಿಯುವ  ಸಾಮರ್ಥ್ಯದ ಜ್ಞಾನ ಮತ್ತು ವ್ಯವಹಾರಿಕ ಜ್ಞಾನ.
ಮತ್ತೂ ನಾಲ್ಕು ಬಗೆಯ ಜ್ಞಾನಗಳಿವೆ, ದುಃಖ, ದುಃಖ ಸಮುದಯ, ದುಃಖನಿರೋಧ ಮತ್ತು ದುಃಖ ನಿರೋಧಕ್ಕೆ ಒಯ್ಯುವ ಮಾರ್ಗ.
ಸೋತಾಪನ್ನತೆಯ ಅಂಶಗಳು ನಾಲ್ಕು, ಸತ್ಪುರುಷರ ಸಂಗ, ಸದ್ಧರ್ಮ ಶ್ರವಣ, ಧರ್ಮದ ಮನನ ಮತ್ತು ಧರ್ಮ,ಅನುಧರ್ಮಗಳ ಪಾಲನೆ.
ಸೋತಾಪನ್ನನಿಗೆ ಇರಬೇಕಾದ ಅಂಶಗಳು ನಾಲ್ಕು, ಭಗವಾನ್ ಬುದ್ಧರಲ್ಲಿ ಶ್ರದ್ಧೆ, ಧಮ್ಮದ ಬಗ್ಗೆ ಅಚಲ ವಿಶ್ವಾಸ, ಸಂಘದ ಬಗೆಗೆ ವಿಶ್ವಾಸ ಮತ್ತು ಶೀಲಗಳನ್ನು ಹೊಂದಿರುವವನು ಆಗಿರುತ್ತಾನೆ.
ಸಮಣತನದಿಂದ ಬರುವ ಫಲಗಳು ನಾಲ್ಕು, ಸೋತಾಪನ್ನ, ಸಕದಾಗಾಮಿ, ಅನಾಗಾಮಿ ಮತ್ತು ಅರಹಂತನಾಗುವ ಫಲಗಳು.
ಧಾತುಗಳು ನಾಲ್ಕು, ಪೃಥ್ವಿ, ಆಪಸ್, ತೇಜಸ್ ಮತ್ತು ವಾಯು ಆಹಾರಗಳು ನಾಲ್ಕು, ದೇಹಕ್ಕೆ ಬೇಕಾಗುವ ಸ್ಥೂಲ ಮತ್ತು ಸೂಕ್ಷ್ಮ ಆಹಾರ, ಎರಡನೆಯದು ಸ್ಪರ್ಶ, ಮೂರನೆಯದು ಮನಸ್ಸಿನ ಚೇತನ, ನಾಲ್ಕನೆಯದು ವಿಞ್ಞಾಣ.
ವಿಞ್ಞಾಣದ ಸ್ಥಿತಿಗಳು ನಾಲ್ಕು. ರೂಪವು ಒಂದು ಸ್ಥಿತಿಯನ್ನು ಮುಟ್ಟಿ ಅದೇ ಸ್ಥಿತಿಯಲ್ಲೇ ಉಳಿಯುವ ಸ್ವಭಾವವನ್ನು ಹೊಂದಿರುತ್ತದೆ.ಅದು ವಿಚಾರಕ್ಕೆ ವಸ್ತುವಾಗಿ ಅದಕ್ಕೆ ಆಧಾರವಾಗಿ ಬೆಳೆಯುತ್ತದೆ. ವೃದ್ಧಿ ಹೊಂದುತ್ತದೆ.ಇದೇ ರೀತಿ ವೇದನಾ, ಪಞ್ಞಾ ಮತ್ತು ಸಂಖಾರಗಳು.
ತಪ್ಪು ದಾರಿಗಳು ನಾಲ್ಕು, ರಾಗ, ದ್ವೇಷ , ಮೋಹ ಮತ್ತು ಭಯಗಳಿಂದ ತುಂಬಿರುವಂಥದ್ದು.
ನಾಲ್ಕು ಪ್ರಗತಿಯ ಹಾದಿಗಳು. 1)  ಪ್ರಗತಿಯು ಕಷ್ಟದಾಯಕವಾಗಿರುವದು ಮತ್ತು ಉನ್ನತ ಜ್ಞಾನವು ಕಡಿಮೆ ಮಟ್ಟದಲ್ಲಿರುವದು.2)  ಪ್ರಗತಿಯು ಕಷ್ಟವಾಗಿರುವದು ಮತ್ತು ಉನ್ನತ ಜ್ಞಾನವು ತೀಷ್ಣವಾಗಿರುವದು  3) ಪ್ರಗತಿಯು ಸುಲಭವಾಗಿರುವದು ಮತ್ತು ಉನ್ನತ ಜ್ಞಾನವು ಕಡಿಮೆಯಾಗಿರುವದು  4) ಪ್ರಗತಿಯು ಸುಲಭವಾಗಿರುವದು ಮತ್ತು ಉನ್ನತ ಜ್ಞಾನವು ತೀಷ್ಣವಾಗಿರುವದು.
ಪ್ರಗತಿಯ ಮಾರ್ಗಗಳು ಇನ್ನೂ ನಾಲ್ಕು. ತಾಳ್ಮೆ ಇಲ್ಲದೆ ಮಾಡುವ ಸಾಧನೆ, ತಾಳ್ಮೆಯಿಂದ ಮಾಡುವ ಸಾಧನೆ , ದಯೆಯ ಮೂಲಕ ಮಾಡುವ ಸಾಧನೆ ಮತ್ತು ಕ್ಷಮೆಯ ಮೂಲಕ ಮಾಡುವ ಸಾಧನೆ.
ಧಮ್ಮದ ದಾರಿಗಳು ನಾಲ್ಕು. ಕಾಮಗಳಿಂದ ದೂರವಾಗಿರುವದು, ವೈರವಿಲ್ಲದಿರುವದು, ಸೃತಿಯಿಂದ ಕೂಡಿರುವದು ಮತ್ತು ಸಮಾಧಿಯನ್ನು ಸಾಧಿಸುವದು. ಧಮ್ಮಕ್ಖಂದಗಳು ನಾಲ್ಕು.- ಶೀಲಕ್ಖಂದ, ಸಮಾಧಿಕ್ಖಂದ, ಪಞ್ಞಾಕ್ಖಂದ ಮತ್ತು ವಿಮುತ್ತಿಕ್ಖಂದ.
ಬಲಗಳು ನಾಲ್ಕು. ವಿರಿಯ, ಸತಿ, ಸಮಾಧಿ ಮತ್ತು ಪಞ್ಞಾ ಬಲಗಳು.
ಪ್ರಶ್ನೆಗೆ ಕೊಡುವ ಉತ್ತರಗಳು ನಾಲ್ಕು- ಸ್ಪಷ್ಠವಾದ ಉತ್ತರ, ವಿಚಾರಪೂರಿತವಾದ ಉತ್ತರ, ಪ್ರತಿ ಪ್ರಶ್ನೆಯ ರೂಪಕವಾಗಿ ಕೊಡುವ ಉತ್ತರ ಮತ್ತು ತಕ್ಷಣವೇ ನೀಡದ ಉತ್ತರ.
ಕರ್ಮಗಳು ನಾಲ್ಕು. ವಿಪಾಕ ಹೊಂದಿ ಕೆಟ್ಟ ಫಲ ಕೊಡುವ ದುಷ್ಕರ್ಮ, ವಿಪಾಕ ಹೊಂದಿ ಒಳ್ಳೆಯ ಫಲವನ್ನು ಕೊಡುವ ಸತ್ಕರ್ಮ, ವಿಪಾಕ ಹೊಂದಿ ಒಳ್ಳೆಯ ಮತ್ತು ಕೆಟ್ಟ ಫಲ ಕೊಡುವ ಸತ್ಕರ್ಮ ದುಷ್ಕರ್ಮಗಳು, ವಿಪಾಕ ಹೊಂದಿ ಕೆಟ್ಟದೂ ಅಲ್ಲದ ಒಳ್ಳೆಯದೂ ಅಲ್ಲದ ಫಲ ಕೊಡುವ ಕೆಟ್ಟದೂ ಅಲ್ಲದ ಒಳ್ಳೆಯದೂ ಅಲ್ಲದ ಕರ್ಮಗಳು. ಪ್ರವಾಹಗಳು/ಬಂಧನಗಳು ನಾಲ್ಕು- ಕಾಮ, ಭವ , ದಿಟ್ಟಿ, ಅವಿಜ್ಜಾ ಮತ್ತೆ ಇವುಗಳಿಂದ ಬಿಡುಗಡೆಗಳು ನಾಲ್ಕು.
ಗಂಟುಗಳು ನಾಲ್ಕು-ಕಾಮದಿಂದ ಕೂಡಿರುವದು, ವೈರ ಭಾವನೆ, ವೃತನಿಯಮಗಳಲ್ಲಿ ನಂಬಿಕೆಯನ್ನಿಡುವದು, ಅಂಧವಿಶ್ವಾಸಗಳನ್ನು ಸಮರ್ಥಿಸಿಕೊಳ್ಳುವದು.
ಉಪಾದಾನಗಳು ನಾಲ್ಕು. ಇಂದ್ರಯ ಸುಖಕ್ಕೆ ಅಂಟಿಕೊಳ್ಳುವದು, ದಿಟ್ಟಿಗೆ ಅಂಟಿಕೊಳ್ಳುವದು, ಶೀಲಪಾಲನೆಗೆ ಅಂಟಿಕೊಳ್ಳುವದು, ಆತ್ಮವಾದಕ್ಕೆ ಅಂಟಿಕೊಳ್ಳುವದು.
ಹುಟ್ಟುವಿಕೆ ನಾಲ್ಕು ರೀತಿಯದು. ಮೊಟ್ಟೆಯಿಂದ ಹುಟ್ಟುವದು , ಗರ್ಭದಲ್ಲಿ ಬೆಳೆದು ಹುಟ್ಟುವದು, ಜೌಗಿನಲ್ಲಿ ಹುಟ್ಟುವದು ಮತ್ತು ತಕ್ಷಣದಲ್ಲಿ ಹುಟ್ಟುವದು.
ದಕ್ಷಿಣೆಯ ವಿಧಗಳು ನಾಲ್ಕು. 1) ಕೊಡುವವನ ಮನಸ್ಸು ಶುದ್ಧವಾಗಿರುತ್ತದೆ ಆದರೆ ತಗೆದುಕೊಳ್ಳುವವನ ಮನಸ್ಸು ಶುದ್ಧವಾಗಿರುವದಿಲ್ಲ.2) ಕೊಡುವವನ ಮನಸ್ಸು ಶುದ್ಧವಾಗಿರುವದಿಲ್ಲ  ಆದರೆ ದಕ್ಷಿಣೆ ತಗೆದುಕೊಳ್ಳುವವನ ಮನಸ್ಸು ಶುದ್ಧವಾಗಿರುತ್ತದೆ.  3)ಕೊಡುವವನ ಮನಸ್ಸು ಶುದ್ಧವಾಗಿರುವದಿಲ್ಲ ಮತ್ತು  ದಕ್ಷಿಣೆಯನ್ನು  ತಗೆದುಕೊಳ್ಳುವವನ ಮನಸ್ಸೂ ಶುದ್ಧವಾಗಿರುವದಿಲ್ಲ  4)ದಕ್ಷಿಣೆಯನ್ನು ಕೊಡುವವನ ಮನಸ್ಸೂ ಶುದ್ಧವಾಗಿರುತ್ತದೆ ಮತ್ತು  ದಕ್ಷಿಣೆಯನ್ನು ತಗೆದುಕೊಳ್ಳುವವನ ಮನಸ್ಸೂ ಶುದ್ಧವಾಗಿರುತ್ತದೆ.
ಪುಣ್ಯಸಂಗ್ರಹದ ಆಧಾರಗಳು ನಾಲ್ಕು. ದಾನ, ಪ್ರಿಯ ವಚನ, ಉತ್ತಮವಾದ ನಡತೆ ಮತ್ತು ಸಮಾನ ಭಾವನೆ.
ಅನಾರ್ಯವಾದ ಮಾತುಗಳು ನಾಲ್ಕು. ಸುಳ್ಳು ಹೇಳುವದು, ಚಾಡಿ ಹೇಳುವದು, ಮನ ನೋಯಿಸುವಂತೆ ಮಾತಾಡುವದು, ಕಾಡುಹರಟೆಯಲ್ಲಿರುವದು.
ಮೇಲಿನ ನಾಲ್ಕೂ ಅನಾರ್ಯ ಮಾತುಗಳಿಂದ ದೂರವಿರುವದು ಆರ್ಯರಿಗೆ ತಕ್ಕುದಾದ  ನಾಲ್ಕು ಮಾತುಗಳು.
ನಾಲ್ಕು ವಿಧದ ಮನುಷ್ಯರಿದ್ದಾರೆ. 1) ಕೆಲವರು ತಮ್ಮನ್ನೇ ದಂಡಿಸಿಕೊಂಡುತನ್ನ ದಂಡನೆಯಲ್ಲಿಯೇ ಅನುರಕ್ತನಾಗಿರುತ್ತಾನೆ.2) ಕೆಲವರು ಪರರನ್ನು ದಂಡಿಸುತ್ತಾರೆ. ಪರರನ್ನು ಹಿಂಸಿಸುವದರಲ್ಲೇ ಸಂತೋಷಪಡುತ್ತಾರೆ. 3) ಕೆಲವರು ತಮ್ಮನ್ನು ದಂಡಿಸಿಕೊಳ್ಳುತ್ತಾರೆ, ಪರರನ್ನೂ ದಂಡಿಸುತ್ತಾರೆ. 4) ಕೆಲವರು ತಮ್ಮನ್ನೂ ದಂಡಿಸಿಕೊಳ್ಳದೆ ಪರರನ್ನೂ ದಂಡಿಸದೆ ಇವೆರಡರಲ್ಲೂ ಅನುರಕ್ತರಾಗದೆ ಇರುತ್ತಾರೆ. ಇವರು ಎಲ್ಲ ಬಯಕೆಗಳಿಂದ , ಪಾಪಗಳಿಂದ ನಿವೃತ್ತರಾಗಿ ಶಾಂತವಾದ ಸುಖವನ್ನನುಭವಿಸುತ್ತಾರೆ.
ಮತ್ತೆ ನಾಲ್ಕು ವಿಧದ ಜನರಿದ್ದಾರೆ. ಕೆಲವರು ತಮ್ಮ ಹಿತಕ್ಕಾಗಿಯೇ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ. ಕೆಲವರು ಪರಹಿತಕ್ಕಾಗಿಯೇ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ. ಕೆಲವರು ತಮ್ಮ ಹಿತಕ್ಕಾಗಿಯೂ ಪರಹಿತಕ್ಕಾಗಿಯೂ ಏನನ್ನೂ ಮಾಡುವದಿಲ್ಲ. ಕೆಲವರು ತಮ್ಮ ಹಿತಕ್ಕಾಗಿಯೂ ಪರಹಿತಕ್ಕಾಗಿಯೂ ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ.
ಇನ್ನೂ ನಾಲ್ಕು ಬಗೆಯ ಜನರಿದ್ದಾರೆ. ಕತ್ತಲಲ್ಲಿಯೆ ಇದ್ದು ಕತ್ತಲಲ್ಲಿಯೇ ಉಳಿಯುವವರು. ಕತ್ತಲಿನಲ್ಲಿದ್ದರೂ ಬೆಳಕಿನ ಕಡೆಗೆ ಹೋಗುವವರು, ಬೆಳಕಿನಲ್ಲಿದ್ದು ಕತ್ತಲಿನ ಕಡೆಗೆ ಹೋಗುವವರು ಮತ್ತು ಬೆಳಕಿನಲ್ಲಿದ್ದು ಬೆಳಕಿನ ಕಡೆಗೆ ಹೋಗುವವರು.
ಹೀಗೆ ಧರ್ಮವು ನಾಲ್ಕರಿಂದ ಆಗಿದೆ ಎನ್ನುವದನ್ನು ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ.

         ………………ಮುಂದುವರೆಯುವದು
        ಭವತು ಸಬ್ಬ ಮಂಗಲಂ, ರಕ್ಖಂತು ಸಬ್ಬ ದೇವತಾ


© Copyright 2022, All Rights Reserved Kannada One News