ಸಾಮ ಜಾತಕ- ತಂದೆ ತಾಯಿಯರ ಸೇವೆಯಲ್ಲಿ ಬದುಕು ಕಳೆದ ತರುಣನ ಕಥೆ: ರಮಾಕಾಂತ ಪುರಾಣಿಕರ 21ನೇ ಅಂಕಣ

ಸಾಮ ಜಾತಕ- ತಂದೆ ತಾಯಿಯರ ಸೇವೆಯಲ್ಲಿ ಬದುಕು ಕಳೆದ ತರುಣನ ಕಥೆ: ರಮಾಕಾಂತ ಪುರಾಣಿಕರ 21ನೇ ಅಂಕಣ

Updated : 03.08.2022

ನಮೋ ಅರಹತೋ ಭಗವತೋ ಸಮ್ಮಾ ಸಂಬುದ್ಧಸ್ಸ
ಸಾಮ ಜಾತಕ- ತಂದೆ ತಾಯಿಯರ ಸೇವೆಯಲ್ಲಿ ಬದುಕು ಕಳೆದ ತರುಣನ ಕಥೆ.
ಹಿಂದಿನ ಕಾಲದಲ್ಲಿ ವಾರಣಾಸಿಯ ಹತ್ತಿರದಲ್ಲಿ ಹರಿಯುವ ನದಿಯ ಎರಡೂ ದಂಡೆಗಳಲ್ಲಿ ಎರಡು ಬೇಡರ ಹಳ್ಳಿಗಳಿದ್ದವು. ಎರಡೂ ಹಳ್ಳಿಯ ಇಬ್ಬರೂ ಮುಖಂಡರು ಪರಸ್ಪರ ಸ್ನೇಹಿತರಾಗಿದ್ದರು.. ಕಾಲಾನಂತರದಲ್ಲಿ ಒಬ್ಬ ಗೆಳೆಯನಿಗೆ ಮಗನೂ ಇನ್ನೊಬ್ಬನಿಗೆ ಮಗಳೂ ಹುಟ್ಟಿದರು. ಒಬ್ಬನು ಮಗನಿಗೆ ದುಕೂಲಕನೆಂದೂ,  ಇನ್ನೊಬ್ಬನು ತನ್ನ ಮಗಳಿಗೆ ಪಾರಿಕಾ ಎಂದೂ ಹೆಸರನ್ನಿಟ್ಟರು. ಮಕ್ಕಳು ದೊಡ್ಡವರಾದ ಮೇಲೆ ಅವರಿಬ್ಬರಿಗೂ ಮದುವೆ ಮಾಡುವದೆಂದೂ ಸ್ನೇಹಿತರು ನಿರ್ಧರಿಸಿದರು.


ದುಕೂಲ ಮತ್ತು ಪಾರಿಕಾ ಇಬ್ಬರೂ ಸುಂದರ ತರುಣ ತರುಣಿಯರಾಗಿ ಬೆಳೆಯುತ್ತಿರಲು ಅವರಿಬ್ಬರ ತಾಯಿ ತಂದೆಯರು ಅವರಿಗೆ ಮದುವೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಆದರೆ ಅವರ ಮಕ್ಕಳು  ಇಬ್ಬರೂ ಬ್ರಹ್ಮಚರ್ಯೆಯ ಸಾಧನೆಯಲ್ಲಿ ಆಸಕ್ತಿ ಹೊಂದಿದ್ದು ಇಬ್ಬರೂ ಮದುವೆಯನ್ನು ನಿರಾಕರಿಸಿದರು. ಆದರೆ ತಂದೆ ತಾಯಿಗಳು ಬಿಡದೇ ಒತ್ತಾಯದಿಂದ ಅವರ ಮದುವೆ ಮಾಡಿಬಿಡುತ್ತಾರೆ. ಮತ್ತೀಗ ಅವರು ಒಟ್ಟಿಗಿದ್ದರೂ ಬ್ರಹ್ಮಚರ್ಯದ ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳ ನಂತರ ಅವರಿಬ್ಬರೂ ಅವರ ತಂದೆ ತಾಯಿಯರ ಅಪ್ಪಣೆ ಪಡೆದು ಹಿಮಾಲಯದ ಕಡೆಗೆ ಹೊರಟರು. ಅಲ್ಲಿಂದ ಅವರು ಗಂಗಾ ನದಿ ಮತ್ತು ಮ್ಯಗ ಅನ್ನುವ ನದಿ ಸೇರುವ ಸ್ಥಳದಿಂದ ಸ್ವಲ್ಪ ಮುಂದೆ ಮ್ಯಗ ನದಿಯ ದಂಡೆಯಲ್ಲಿ ಪಕ್ಕ ಪಕ್ಕದಲ್ಲಿ ಪರ್ಣಕುಟಿರಗಳನ್ನು ಕಟ್ಟಿಕೊಂಡು ಮೈತ್ರಿಭಾವನೆಯಿಂದ ಸನ್ಯಾಸ ಜೀವನವನ್ನು ಪ್ರಾರಂಭ ಮಾಡಿದರು.

ಅವರ ಮೈತ್ರಿಯ ಪ್ರಭಾವದಿಂದ ಪಶು ಪಕ್ಷಿಗಳೆಲ್ಲ ಯಾರಿಗೂ ತೊಂದರೆ ಕೊಡದೆ ಮಿತ್ರರಾಗಿರುತ್ತಿದ್ದವು. ಶಕ್ರನು (ಇಂದ್ರ ದೇವತೆ) ಇವರನ್ನು ನೋಡಿ ಇವರಿಗೆ ಎಲ್ಲ ಅನುಕೂಲಗಳು ಸಿಗುವಂತೆ ಮಾಡುತ್ತಿದ್ದನು. ಒಂದು ದಿನ ಶಕ್ರನು ಮುಂದಿನ ಅವರ ಭವಿಷ್ಯವನ್ನು ಯೋಚನೆ ಮಾಡಿ ಇಬ್ಬರಿಗೂ ಕುರುಡುತನ ಬರುತ್ತದೆಂದು ತಿಳಿದನು. ಹಾಗಾಗಿ ಆ ಸಮಣ ದಂಪತಿಗಳನ್ನು ಬೆಟ್ಟಿಯಾಗಿ “ ನಿಮಗೆ ಮುಂದೆ ಕಷ್ಟಗಳು ಬರಲಿರುವದರಿಂದ ಸಂಸಾರ ಧರ್ಮವನ್ನು ಪಾಲಿಸಿ ನಿಮ್ಮ ಸೇವೆಗಾಗಿ ಒಬ್ಬ ಮಗನನ್ನು ಪಡೆದುಕೊಳ್ಳಿ “ ಎಂದು ಹೇಳಿದನು. ಅದಕ್ಕವರು ಒಪ್ಪದೇ ಇದ್ದಾಗ ದುಕೂಲಕನಿಗೆ ಕೇವಲ ಪತ್ನಿಯ ಹೊಕ್ಕುಳನ್ನು ಮುಟ್ಟಲು ಹೇಳುತ್ತಾನೆ. ದುಕೂಲಕನು ಅದಕ್ಕೆ ಒಪ್ಪಿ ಹಾಗೇ ಮಾಢುತ್ತಾನೆ. ಬೋಧಿಸತ್ವರು ಪಾರಿಕಾಳ ಗರ್ಭವನ್ನು ಸೇರಿ ಹತ್ತು ತಿಂಗಳ ನಂತರ ಅವರಿಗೆ ಬಂಗಾರದಂತೆ ಹೊಳೆಯುವ ಮಗ ಹುಟ್ಟುತ್ತಾನೆ ಅವನಿಗೆ ಸ್ವರ್ಣಸಾಮನೆಂಬ ಹೆಸರಿಡುತ್ತಾರೆ. ಬೋಧಿಸತ್ವನಾದ ಬಾಲಕನಿಗೆ  ಹದಿನಾರು ವರ್ಷ ತುಂಬುತ್ತವೆ.
    ಒಮ್ಮೆ ದಂಪತಿಗಳಿಬ್ಬರು ಕಂದಮೂಲಗಳನ್ನು ಹುಡುಕಿಕೊಂಡು ತರುತ್ತಾ ಇರುವಾಗ ಮಳೆ ಬಂದು ಅವರು ಒಂದು ಹುತ್ತದ ಆಸರೆಗೆ ನಿಲ್ಲುತ್ತಾರೆ. ಅವರ ಬೆಮರಿನ ಹನಿಯೊಂದು ಅಲ್ಲಿದ್ದ ಹಾವಿನ ಮೂಗಿನ ಮೇಲೆ ಬಿದ್ದು ಅದು ವಿಷವನ್ನು ಫೂತ್ಕರಿಸಿದಾಗ ಅದು ಅವರಿಬ್ಬರ ಕಣ್ಣಿಗೆ ಸಿಡಿದು ಅವರಿಬ್ಬರೂ ಕುರುಡರಾಗುತ್ತಾರೆ. ಇದು ಅವರಿಗೆ ಗೊತ್ತಾಗಿ ಮನೆಯ ದಾರಿ ಸಿಗದೇ ಅಳುತ್ತಾ ಸುತ್ತಾಡತೊಡಗುತ್ತಾರೆ. ಈ ಕಡೆಗೆ ಅವರ ಮಗನು ಹೊತ್ತಾದರೂ ಅವರು ಬರದೇ ಇದ್ದಾಗ ಹುಡುಕಾಡುತ್ತ ಬಂದು ಅವರ ತಂದೆ ತಾಯಿಯರನ್ನು ಕುರುಡಾದ ಸ್ಥಿತಿಯಲ್ಲಿ ನೋಡಿ ಅವರನ್ನು ಸಮಾಧಾನ ಮಾಡಿ ಮನೆಗೆ ಕರೆತರುತ್ತಾನೆ. ಮುಂದೆ ಪರ್ಣಶಾಲೆಯಲ್ಲಿ ಅವರು ದಾರಿತಪ್ಪದಂತೆ ಅವರು ತಿರುಗಾಡುವಲ್ಲೆಲ್ಲ ಹಗ್ಗವನ್ನು ಕಟ್ಟಿ ಸುರಕ್ಷಿತವಾಗಿ ತಿರುಗಾಡುವಂತೆ ಮಾಡುತ್ತಾನೆ ಮತ್ತು ಅವರ ಎಲ್ಲ ಯೋಗಕ್ಷೇಮವನ್ನು ನೋಡಿಕೊಳ್ಳಲಾರಂಭಿಸುತ್ತಾನೆ..ಬೆಳಿಗ್ಗೇಯೇ ಎದ್ದು ಅವರಿರುವ ಸ್ಥಳವನ್ನು ಶುಚಿಮಾಡಿ ನಂತರ ಮ್ಯಗ ನದಿಯಿಂದ ನೀರನ್ನು ಕುಡಿಯಲು ಮತ್ತು ತಂದೆತಾಯಿಯರ ಸ್ನಾನಕ್ಕೆ ಬೇಕಾದ ನೀರು ತರುತ್ತಿದ್ದನು.ಅದಕ್ಕಾಗಿ ಅಲ್ಲಿನ ಜಿಂಕೆಗಳು ಅವನ ಜೊತೆಯಲ್ಲಿ ಬರುತ್ತಿದ್ದವು.
ಆ ಕಾಲದಲ್ಲಿ ವಾರಣಾಸಿಯಲ್ಲಿ ಪಿಲಿಯಕ್ಖನೆಂಬ ರಾಜನಿದ್ದನು. ಅವನಿಗೊಮ್ಮೆ ಜಿಂಕೆಗಳ ಬೇಟೆಯಾಡಬೇಕೆನ್ನಿಸಿ ಅಯುಧ ಸಹಿತನಾಗಿ ಈ ಮ್ಯಗ ನದಿಯ ದಂಡೆಗೆ ಬರುತ್ತಾನೆ.ಆ ಸಮಯದಲ್ಲಿ ಸಾಮನು  ನೀರಿನ ಕೊಡಗಳನ್ನು ತಗೆದುಕೊಂಡು ನದಿಯಲ್ಲಿ ಸ್ನಾನ ಮಾಡಿ ನೀರು ತುಂಬಿಕೊಂಡು ಎರಡೂ ಜಿಂಕೆಗಳ ಮೇಲೆ ಹೊರೆಸಿ ಅವುಗಳ ಮಧ್ಯದಲ್ಲಿ ತಾನೂ ಹೊರಟು ನದಿಯಿಂದ ಮೇಲೆ ಬರುತ್ತಾನೆ. ರಾಜ ಜಿಂಕೆಗಳೊಂದಿಗೆ ಬರುವ ಆ ಬಂಗಾರ ಬಣ್ಣದ ಸುಂದರ ಯುವಕನನ್ನು ನೋಡುತ್ತಾನೆ.. ಇವನು ಯಾವುದೋ ದೇವಲೋಕದವನೋ ಅಥವಾ ನಾಗಲೋಕದವನೋ ಇರಬೇಕು, ತಪ್ಪಿಸಿಕೊಳ್ಳದಂತೆ ಘಾಯ ಮಾಡಿ ಅವನನ್ನು ಹಿಡಿಯಬೇಕೆನ್ನುವ ವಿಚಿತ್ರ ಆಶೆಗೆ ಬಿದ್ದ ರಾಜನು ಅವನು ಬರುತ್ತಿದ್ದಂತೆ ತನ್ನ ಬಿಲ್ಲಿನಿಂದ ವಿಷಪೂರಿತ ಬಾಣವನ್ನು ಬಿಡುತ್ತಾನೆ.

ಬಾಣದಿಂದ ಗಾಯಗೊಂಡ ಸಾಮನು ನೀರಿನ ಕೊಡವನ್ನು ಬೀಳಿಸದೇ ಪ್ರಜ್ಞೆಯಿಟ್ಟುಕೊಂಡು ಕೊಡವನ್ನು ಕೆಳಗಿಟ್ಟು ರಕ್ತಕಾರುತ್ತ ಮಲಗಿಬಿಡುತ್ತಾನೆ. ತನ್ನ ಮನಸ್ಸಿನಲ್ಲಿ ಗಾಯ ಮಾಡಿದವನ ಬಗ್ಗೆ ಯಾವುದೇ ದ್ವೇಷವಿಲ್ಲದೆ  ರಾಜನನ್ನು ನೋಡದೆಯೇ ಕೇಳುತ್ತಾನೆ. “ಯಾರು ಹೀಗೆ ನನ್ನನ್ನು ಚುಚ್ಚಿದವರು ? ನನ್ನ ದೇಹದ ಮಾಂಸ ತಿನ್ನಲೂ ಪ್ರಯೋಜನಕ್ಕೆ ಬಾರದು.ಹೀಗಾಗಿ ನನ್ನನ್ನು ವಧಿಸಲು ಕಾರಣವೇನು? ನನ್ನನ್ನು ಹೊಡೆದು ಯಾಕೆ ಬಚ್ಚಿಟ್ಟುಕೊಂಡಿದ್ದೀರಿ? “
ರಾಜನಿಗೆ ಆಶ್ಚರ್ಯವಾಗುತ್ತದೆ. ಇಂಥ ಸ್ಥಿತಿಯಲ್ಲೂ ಈ ತರುಣನಲ್ಲಿ ತನ್ನ ಬಗ್ಗೆ ಯಾವ ದ್ವೇಷವೂ ಇಲ್ಲ. ಹೀಗೆಂದು ತರುಣ ಸಾಮನೆದುರು ಬಂದು  ತನ್ನನ್ನು ವಾರಣಾಸಿಯ ರಾಜನೆಂದೂ ಪರಿಚಯಿಸಿಕೊಳ್ಳುತ್ತಾನೆ. ಬೇಟೆಗೆ ಬಂದಿದ್ದು ತನ್ನಿಂದ ಈ ಘೋರ ಅಫರಾಧವಾಯಿತೆಂದು ಒಪ್ಪಿಕೊಳ್ಳುತ್ತಾನೆ. ಅಂಥ ಸ್ಥಿತಿಯಲ್ಲಿಯೂ ಸಾಮನು ತನ್ನನ್ನು ಪರಿಚಯಿಸಿಕೊಂಡು ಹೇಳುತ್ತಾನೆ.” ನನ್ನ ತಾಯ್ತಂದೆಯರು ಕುರುಡರು.ನಾನು ಹಣ್ಣು, ಕಂದಮೂಲಗಳನ್ನು ತಂದು ಅವರನ್ನು ಕಾಪಾಡುತ್ತಿದ್ದೇನೆ.  ಅವರಿಗಾಗಿಯೇ ನೀರನ್ನು  ತರಲು ಬಂದದ್ದು. ಇನ್ನು ನನ್ನ ತಾಯಿತಂದೆಯರನ್ನು ನೋಡಿಕೊಳ್ಳುವವರು ಯಾರು? ನಾನಿನ್ನು ನನ್ನ ತಾಯಿತಂದೆಯರನ್ನು ನೋಡಿಕೊಳ್ಳಲಾರೆನಲ್ಲಾʼ ಎಂದು ಸಾಮನು ಅಳುತ್ತಾನೆ.

ರಾಜನಿಗೆ ತನ್ನ ತಪ್ಪಿನ ಅರಿವಾಗಿ ಹೃದಯ ಕಲಕಿದಂತಾಗುತ್ತದೆ. ಇದಕ್ಕಾಗಿ ತಾನು ಅವನ ತಾಯಿತಂದೆಗಳ ಸೇವೆ ಮಾಡಿ ತನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ನಿರ್ಧರಿಸಿ  ಸಾಮನಿಗೆ ಚಿಂತೆಮಾಡದಿರುವಂತೆ ಮತ್ತು ತಾನು ಅವನ ತಾಯಿತಂದೆಯರನ್ನು ನೋಡಿಕೊಳ್ಳುವದಾಗಿ ಹೇಳುತ್ತಾನೆ.  ಆಗ ಸಾಮನು ತಾಯಿತಂದೆಗಳಿರುವ ಮನೆಯ ದಿಕ್ಕನ್ನು ತೋರಿಸುತ್ತಾನೆ. “ ಕಾಶಿರಾಜನೇ, ಈ ಘೋರವಾದ ಕಾಡಿನಲ್ಲಿ ನನ್ನ ತಾಯಿ-ತಂದೆಗಳ ಸೇವೆ ಮಾಡು.. ನಿನಗೆ ನಮಸ್ಕಾರ, ನನ್ನ ತಾಯಿ-ತಂದೆಯರಿಗೆ ನನ್ನ ನಮಸ್ಕಾರಗಳನ್ನು ತಿಳಿಸು” ಹೀಗೆಂದು ಸಾಮನು ಮೂರ್ಚಿತನಾಗುತ್ತಾನೆ. ಅಳುತ್ತಾ ಕರೆಯುತ್ತಾ ರಾಜನು ಬಹಳ ಕರುಣಾಜನಕ ಸ್ಥಿತಿಯಲ್ಲಿ ಸಾಮನ ತಾಯಿ-ತಂದೆಗಳಿದ್ದಲ್ಲಿಗೆ ಬರುತ್ತಾನೆ.
ತಂದೆಯಾದ ದುಕೂಲಕನಿಗೆ ಬೇರೆ ಯಾರದೋ ಹೆಜ್ಜೆಸದ್ದು ಕೇಳಿದಂತೆನಿಸಿ “ಯಾರ ಹೆಜ್ಜೆ ಸದ್ದು, ಇದು ಸಾಮನ ನಡಿಗೆ ಸದ್ದಲ್ಲ. ಸಾಮನು ಶಾಂತವಾಗಿ ನಡೆಯುತ್ತಾನೆ. ಮಿತ್ರನೇ, ನೀನಾರು?”.ಎಂದು ಕೇಳುತ್ತಾನೆ.  ರಾಜನು ತಂದ ಹಣ್ಣು ನೀರನ್ನು ಅವರ ಮುಂದಿಟ್ಟು ತನ್ನ ಪರಿಚಯ ಮಾಡಿಕೊಳ್ಲುತ್ತಾನೆ. ಮುಂದೆ ಅನಿವಾರ್ಯವಾಗಿ ತಾನು ತನ್ನ ಬಾಣದಿಂದ ಸ್ವರ್ಣಸಾಮನನ್ನು ಕೊಂದ ವಿಷಯ ಹೇಳುತ್ತಾನೆ. ಪಂಡಿತನ ಕುಟಿರದಿಂದ ಸ್ವಲ್ಪವೇ ದೂರದಲ್ಲಿದ್ದ ಪಾರಿಕಾ ರಾಜನ ಮಾತನ್ನು ಕೇಳಿ ಹಗ್ಗವನ್ನು ಆಧಾರವಾಗಿ  ಹಿಡಿದುಕೊಂಡು ಹತ್ತಿರ ಬಂದು “ ಇವರು ಯಾವ ಸಾಮನ ಬಗ್ಗೆ ಹೇಳುತ್ತಿದ್ದಾರೆ, ದುಕೂಲ, ನನ್ನ ಎದೆ ಕಂಪಿಸುತ್ತಿದೆ , ಹೇಳು ದುಕೂಲ” ಎಂದು ಕೇಳುತ್ತಾಳೆ. ದುಕೂಲನು ಪಾರಿಕೆಗೆ ಹೇಳುತ್ತಾನೆ “ ಎಲೈ ಪಾರಿಕೆಯೇ, ಇವನು ಕಾಶಿಯ ರಾಜನು, ನದಿಯ ದಂಡೆಯಲ್ಲಿ ಕೋಪಕ್ಕೆ ವಶನಾಗಿ ಕೊಂದನಂತೆ.

ನಾವು ಇವನಿಗೆ ಕೇಡನ್ನು ಬಯಸುವದು ಬೇಡ”.ತಂದೆ-ತಾಯಿಗಳಿಬ್ಬರೂ ಎದೆ ಎದೆ ಬಡಿದುಕೊಂಡು ಸಾಮನ ಗುಣಗಾನ ಮಾಡುತ್ತ ಬಹಳವಾಗಿ ಅತ್ತರು. ರಾಜನು ಅವರಿಗೆ ಕೈಮುಗಿದು ಕೇಳಿದನು “ ತುಂಬಾ ದುಃಖಿಸಬೇಡಿರಿ.. ಈ ಕಾಡಿನಲ್ಲಿ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಾನು ಒಳ್ಳೆಯ ಬೇಟೆಗಾರ. ನಿಮಗೆ ಜಿಂಕೆಯ ಮಾಂಸ , ಹಣ್ಣುಗಳನ್ನು ತಂದು ನಿಮ್ಮನ್ನು ಕಾಪಾಡುತ್ತೇನೆ. ನನಗೆ ರಾಜ್ಯ ಬೇಡ. ನಿಮ್ಮ ಸೇವೆ ಸಾಕು” ಆಗ ದುಕೂಲ ಹೇಳಿದನು “ ಬೇಡ ಮಹಾರಾಜ, ಇದು ಧರ್ಮವಲ್ಲ. ನಿಮ್ಮ ರಾಜ್ಯವನ್ನು ನೀವು ನೋಡಿಕೊಳ್ಳಿ. ಈಗ ನಮ್ಮನ್ನು ಮಗನ ಹತ್ತಿರ ಕರೆದೊಯ್ಯಿರಿ “
ರಾಜನು ಅವರ ಕೋಲಿನ ಕೊನೆಯನ್ನು ಹಿಡಿದುಕೊಂಡು ಅವರ ಮಗ ಗಾಯಗೊಂಡು ಮಲಗಿದಲ್ಲಿಗೆ ಕರೆತರುತ್ತಾನೆ. ಅಲ್ಲಿ ಗಾಯಗೊಂಡ ಚಂದ್ರನಂತೆ ಬಿದ್ದಿದ್ದ ಮಗನ ದೇಹವನ್ನೆತ್ತಿಕೊಂಡು ಇಬ್ಬರೂ ತುಂಬಾ ಹೊತ್ತು ಅತ್ತರು.

ಅವನ ತಾಯಿಯು ಅವನ ಎದೆಯ ಮೇಲೆ ಕೈಯಿಟ್ಟು ಅವನ ದೇಹ ಇನ್ನೂ ಬಿಸಿಯಾಗಿರುವದನ್ನು ತಿಳಿದಳು.ಆಗ ಅವಳು ವಿಷವನ್ನು ಇಳಿಸಲು ಸತ್ಯಕ್ರಿಯೆಯನ್ನು ಮಾಡಿದಳು.  “ ಯಾವ ಸತ್ಯದಿಂದ ಸಾಮನು ಬ್ರಹ್ಮಚಾರಿಯಾಗಿದ್ದನೋ, ಸತ್ಯವಾದಿಯಾಗಿದ್ದನೋ, ತಂದೆ-ತಾಯಿಗಳ ಸೇವೆಯನ್ನು ಮಾಡುತ್ತಿದ್ದನೋ , ದೊಡ್ಡವರಿಗೆ ಗೌರವ ಸಲ್ಲಿಸುತ್ತಿದ್ದನೋ ಆ ಬಲದಿಂದ ಅವನ ದೇಹದಲ್ಲಿನ ವಿಷವು ನಾಶವಾಗಲಿ. ನಾನು ಮತ್ತು ನನ್ನ ಗಂಡ ಏನಾದರೂ ಪುಣ್ಯವನ್ನು ಮಾಡಿದ್ದರೆ ಆ ಬಲದಿಂದ ವಿಷವು ನಾಶವಾಗಲಿ.” ಆಗ ಸಾಮನು ಒಂದು ಮಗ್ಗಲು ಹೊರಳಿದನು. ಅದನ್ನು ನೋಡಿ ಸಾಮನ ತಂದೆಯೂ ಸತ್ಯಕ್ರಿಯೆಯನ್ನು ಮಾಡಿದನು.  ಆಗ ಗಂಧಮಾದನ ಪರ್ವತದಲ್ಲಿ ಅದೃ ಶ್ಯವಾಗಿ ವಾಸಿಸುತ್ತಿದ್ದ ದೇವತೆಯೂ ಮಗನಂತಿದ್ದ ಸಾಮನ ಬಗ್ಗೆ ಅನುಕಂಪದಿಂದ ಸತ್ಯಕ್ರಿಯೆಯನ್ನು  ಮಾಡಿದಳು. ಹೀಗೆ ಎಲ್ಲರ ಸತ್ಯದ ಬಲದಿಂದ ಸಾಮನು  ಆರೋಗ್ಯವಾಗಿ ಎದ್ದು ನಿಂತನು.
ಮಹಾರಾಜನಿಗೆ ಆಶ್ಚರ್ಯವಾಗುತ್ತದೆ. . ಸತ್ತವನು ಹೇಗೆ ಎದ್ದು ಜೀವಂತವಾಗಲು ಸಾಧ್ಯ ಎಂದು !  ಆಗ ಸಾಮನು ಹೇಳುತ್ತಾನೆ “  ಮಹಾರಾಜಾ, ಅತ್ಯಂತ ವೇದನೆ ಪಡುತ್ತಿರುವ ವ್ಯಕ್ತಿಯೂ ಕೂಡ ಭವಂಗ ಸ್ಥಿತಿಯಲ್ಲಿ ಬದುಕಿದ್ದರೂ ಸತ್ತಂತೆ ತೋರುತ್ತದೆ. ಈ ಪ್ರಕಾರವಾಗಿ ನಾನು ಬದುಕಿದ್ದರೂ ಸತ್ತಿರುವನೆಂದೇ ತಿಳಿದಿದ್ದರು.”    “ಎಂತಹ ಆಶ್ಚರ್ಯ! ಮಾತಾಪಿತರಿಗೆ ಸೇವೆ ಮಾಡುವವನಿಗೆ ದೇವತೆಗಳೂ ಚಿಕಿತ್ಸೆ ನೀಡುತ್ತಾರೆ.ಅದನ್ನು ಇವತ್ತು ಕಂಡೆ” ಎಂದು  ರಾಜನು ಸಾಮನಿಗೆ ನಮಸ್ಕರಿಸಿ ತನ್ನನ್ನು ಉದ್ಧರಿಸಲು ಕೇಳಿಕೊಳ್ಳುತ್ತಾನೆ.  ಆಗ ಸ್ವರ್ಣಸಾಮನು ರಾಜನಿಗೆ ಹತ್ತು ರಾಜಧರ್ಮಗಳನ್ನು ಉಪದೇಶಿಸುತ್ತಾನೆ.
1) ಎಲೈ ಕ್ಷತ್ರಿಯ ರಾಜನೇ, ತಂದೆ-ತಾಯಿಗಳ ಬಗ್ಗೆ ಧರ್ಮಾಚರಣೆ ಮಾಡು.ಇಲ್ಲಿ ಮಾಡುವ ಧರ್ಮಾಚರಣೆಯಿಂದ ಸ್ವರ್ಗ ಪ್ರಾಪ್ತವಾಗುತ್ತದೆ.
2) ಹೆಂಡತಿ ಮಕ್ಕಳ ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
3) ಮಿತ್ರರು ಮಂತ್ರಿಗಳ  ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
4) ವಾಹನ ಮತ್ತು ಸೇನೆಗಳ ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
5) ಗ್ರಾಮ ಮತ್ತು ನಿಗಮಗಳ  ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
6) ರಾಷ್ಟ್ರ ಮತ್ತು ಜನಪದಗಳ ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
7) ಶ್ರಮಣ ಬ್ರಾಹ್ಮಣರ  ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……
8) ಪಶು ಪಕ್ಷಿಗಳ  ವಿಷಯದಲ್ಲಿ ಧರ್ಮಾಚರಣೆ ಮಾಡು. ಇಲ್ಲಿ ಮಾಡುವ……..
9) ಧರ್ಮಾಚರಣೆ ಮಾಡು. ಧರ್ಮಾಚರಣೆ ಸುಖಕರವಾಗಿರುತ್ತದೆ.
10) ಧರ್ಮಾಚರಣೆ ಮಾಡು. ಧರ್ಮಾಚರಣೆಯಿಂದಲೇ ಇಂದ್ರಾದಿ ದೇವತೆಗಳು ದೇವಲೋಕವನ್ನು   ಪಡೆದರು.
ಹೀಗೆ ಬೋಧಿಸತ್ವರು ರಾಜಧರ್ಮಗಳನ್ನು ಉಪದೇಸಿಸಿ ಪಂಚಶೀಲಗಳನ್ನು ಕೊಟ್ಟರು.ರಾಜನು ರಾಜಧಾನಿಗೆ ತೆರಳಿ ಧರ್ಮದಿಂದ ಬಹುಕಾಲದವರೆಗೆ ರಾಜ್ಯವನ್ನಾಳಿದನು.

“ ಮಾತಾಪಿತು ಉಪಟ್ಠಾಣಂ ಪುತ್ತದಾರಸ್ಸ ಸಂಗಹೋ I
ಅನಾಕುಲಾಚ ಕಮ್ಮಂತಾ ಏತಂ ಮಂಗಲಮುತ್ತಮಂ II
ತಾಯಿ-ತಂದೆಯರನ್ನು ನೋಡಿಕೊಳ್ಳುವದು ಹೆಂಡತಿ ಮಕ್ಕಳನ್ನು ಸಂತೋಷವಾಗಿಡುವದು , ಶಾಂತವಾದ ಮತ್ತು ಕುಶಲವಾದ ಕೆಲಸಗಳನ್ನು ಮಾಡುವದು  ಇದು ಮಂಗಲಮಯವಾಗಿದೆ.”,  
                                ---ಮಂಗಲ ಸುತ್ತ
ಆಧಾರ:  ಜಾತಕ ಮತ್ತು ಜಾತಕ ಕಥೆಗಳು, ಸಂಪುಟ 6, ಬುದ್ಧ ವಚನ ಟ್ರಸ್ಟ್, ಬೆಂಗಳೂರು


© Copyright 2022, All Rights Reserved Kannada One News