67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Updated : 31.10.2022

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ನಿರ್ದೇಶಕ ಶಿವನ್‌, ಸಾಹಿತಿ ಅ.ರಾ. ಮಿತ್ರ, ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌, ನಿವೃತ್ತ ಐಎಎಸ್‌ ಅಧಿಕಾರಿ ಎಂ. ಮದನ್‌ ಗೋಪಾಲ್‌ ಸೇರಿದಂತೆ 67 ಮಂದಿಯನ್ನು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಭಾನುವಾರ ಸಂಜೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರನಟರಾದ ದತ್ತಾತ್ರೇಯ (ದತ್ತಣ್ಣ), ಅವಿನಾಶ್‌, ಸಿಹಿಕಹಿ ಚಂದ್ರು, ಸೋಲಿಗರಲ್ಲಿ ಸಹಕಾರ ಸಂಸ್ಥೆಗಳ ಕುರಿತು ಅರಿವು ಮೂಡಿಸಿದ ಸೋಲಿಗರ ಮಾದಮ್ಮ, ರಾಮನಗರದ ಸಾಲುಮರದ ನಿಂಗಣ್ಣ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ, ಯಕ್ಷಗಾನ ಕಲಾವಿದರಾದ ಎಂ. ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತರಾದ ಎಚ್‌.ಆರ್‌. ಶ್ರೀಶ, ಜಿ.ಎಂ. ಶಿರಹಟ್ಟಿ ಪುರಸ್ಕೃತರಲ್ಲಿ ಸೇರಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.

‘ಪುರಸ್ಕೃತರಿಗೆ ತಲಾ ₹ 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು’ ಎಂದು ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

© Copyright 2022, All Rights Reserved Kannada One News