GR ಕಡೆಗೂ ಪರಿಚಿತರಾಗಲೇ ಇಲ್ಲ…: ರಾಜಾರಾಂ ತಲ್ಲೂರು ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

GR ಕಡೆಗೂ ಪರಿಚಿತರಾಗಲೇ ಇಲ್ಲ…: ರಾಜಾರಾಂ ತಲ್ಲೂರು ಅವರ ಲೇಖನ

Updated : 21.07.2022

ಹದಿನೈದು ವರ್ಷ ಹಿಂದೆ, ನಾನು ಉಡುಪಿಗೆ ಬಂದ, ಹೊಸದು. ಅಪರೂಪಕ್ಕೆ ಸಂಜೆ ಪತ್ನಿ ಕೋರ್ಟ್ ಮುಗಿಸಿ ಬರುವುದನ್ನು ಕಾದು, ಕೋರ್ಟಿನ ಎದುರು ರಸಗಂಗಾ ಹೊಟೇಲಿನಲ್ಲಿ ಸಂಜೆಯ ಚಹಾ ಕುಡಿದು ಬರುವುದಿತ್ತು. ಹಲವು ಬಾರಿ, ಆ ಹೊತ್ತಿಗೇ ಅಲ್ಲಿ ಜಿ. ರಾಜಶೇಖರ್ ಕೂಡಾ ದೋಸೆ ತಿಂದು ಚಹಾ ಕುಡಿದು ಹೋಗುತ್ತಿದರು.

ನನ್ನ ಪಕ್ಕದ ಟೇಬಲ್‌ನಲ್ಲೇ, ಹೆಚ್ಚಾಗಿ ಏಕಾಂಗಿಯಾಗಿ ಕುಳಿತಿರುತ್ತಿದ್ದರು. ನನ್ನ ಪತ್ನಿಗೆ ಅವರನ್ನು ತೋರಿಸಿ, “ಇವರು ಬಹಳ ದೊಡ್ಡ ಮನುಷ್ಯ. ನಮ್ಮ ಕಡೆಯವರು” ಎಂದಾಗಲೆಲ್ಲ, “ನಿಮ್ಮ ಕಡೆಯವರು ಅಂತಿ. ಅವರೂ ನಿನ್ನನ್ನು ನೋಡಿ ಮಾತಾಡೋದಿಲ್ಲ, ಪರಿಚಯವೂ ಇದ್ದಂಗಿಲ್ಲ, ನೀನೂ ಅವರನ್ನು ಮಾತನಾಡಿಸೋದಿಲ್ಲ” ಎಂದು ಅಚ್ಚರಿಪಡುತ್ತಿದ್ದಳು. ನಾನು ಪೆದ್ದುಪೆದ್ದಾಗಿ ನಕ್ಕು ಮಾತು ತೇಲಿಸುತ್ತಿದ್ದೆ.

“ನಮ್ಮ ಕಡೆಯವರೆಲ್ಲ ಹಾಗೇ” ಎಂದುಬಿಡುತ್ತಿದ್ದೆ…!
GR ಆಗಲೂ ನನಗೆ ಪರಿಚಿತರಾಗಿರಲಿಲ್ಲ.

GR ಅವರ ಮೊದಲ ಭೇಟಿಯ ವೇಳೆ, ನಾನಿನ್ನೂ ಪಿಯುಸಿಯಲ್ಲಿದ್ದೆ. ಹಿಂದೊಮ್ಮೆ ನಮ್ಮ ಕುಟುಂಬದ ಸ್ನೇಹಿತರೂ, ನನ್ನ ಮಾವನ ಕಾಲೇಜು ಸಹಪಾಠಿಯೂ ಆಗಿದ್ದ ಅಂದಿನ ಕುಂದಾಪುರದ ಉಪನ್ಯಾಸಕ ವಸಂತ ಬನ್ನಾಡಿ ಅವರು ಬೆಂಗಳೂರಿಂದ ರಜೆಗೆ ಬಂದಿದ್ದ ನನ್ನ ಮಾವ ಸದಾನಂದ ತಲ್ಲೂರು ಅವರನ್ನು, ಸಮಾನ ಸಾಹಿತ್ಯಾಸಕ್ತಿಗಳ ಕಾರಣಕ್ಕೆ GR ಮನೆಗೆ ಕರೆದೊಯ್ದಿದ್ದರು. ಅವರೊಂದಿಗೆ ನಾನೂ ಹೋಗಿದ್ದೆ. ಏನೋ ಗಹನವಾದ ಚರ್ಚೆಗಳು ನಡೆದಿದ್ದವು.

ನನಗೆ ಏನೂ ಸಂಬಂಧ ಇಲ್ಲ ಅನ್ನಿಸಿದ್ದ ಕಾರಣಕ್ಕೆ ಒಂದೋ ಅವರೆಲ್ಲರ ಗೆಶ್ಚರ್‌ಗಳನ್ನು ನೋಡುತ್ತಲೋ ಅಥವಾ ಅಲ್ಲಿದ್ದ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಲೋ ಎರಡು-ಮೂರು ತಾಸು ಕಳೆದಿದ್ದೆ. ಅಲ್ಲಿದ್ದ ಅಷ್ಟು ಹೊತ್ತಲ್ಲೂ ನನ್ನನ್ನು ಅವರು ಯಾರೂ ಮಾತನಾಡಿಸಿರಲಿಲ್ಲ.

ಆಗಲೂ GR ಪರಿಚಿತರಾಗಲಿಲ್ಲ.
ಕೇವಲ ನಾಲ್ಕೈದು ವರ್ಷ ಕೆಳಗೆ, ಗೆಳೆಯ ಸಂವರ್ತನ ಬಾಳ್ಕಟ್ಟೆ ಪುಸ್ತಕ ಬಿಡುಗಡೆ ಇತ್ತು. ನಾನು ಪುಸ್ತಕ ಬಿಡುಗಡೆ ಮಾಡಿ, GR ಅವರು ಪುಸ್ತಕದ ಬಗ್ಗೆ ಮಾತನಾಡಬೇಕಿತ್ತು. ಕಾರ್ಯಕ್ರಮದ ಆರಂಭಕ್ಕೆ ಮುನ್ನ ನನ್ನನ್ನು ಕಂಡ GR, ನನ್ನ “ಕಲಾಕೃತಿಗಳ” ಬಗ್ಗೆ ಮಾತನಾಡಿದರು (ನನ್ನ ತಮ್ಮನ ಜೊತೆ ಅವರಿಗೆ ನನಗಿಂತ ಹೆಚ್ಚು ನಿಕಟ ಸಂಪರ್ಕ-ಸಂವಹನ ಇತ್ತು). ನಾನು, “ನಾನವನಲ್ಲ ಅವನ ಅಣ್ಣ” ಎಂದೆ. “ಓಹೋ…ಗೊತ್ತಾಗಲಿಲ್ಲ” ಅಂದರು. ಅದಾಗಿ, ಒಂದೆರಡು ಗಂಟೆಗಳ ಕಾಲ ವೇದಿಕೆಯಲ್ಲಿ ಒಟ್ಟಿಗಿದ್ದೆವು. ಆದರೆ ಮಾತುಕತೆಗಳೇನೂ ಇರಲಿಲ್ಲ; ಆಗಲೇ ಅವರ ಆರೋಗ್ಯವೂ ಕೆಡತೊಡಗಿತ್ತು.

ಅಲ್ಲೂ GR ಪರಿಚಿತರಾಗಲಿಲ್ಲ.
ಮೊನ್ನೆ, ಇದೇ ಎಪ್ರಿಲ್ ತಿಂಗಳಲ್ಲಿ ಉಡುಪಿಯಲ್ಲಿ ನಮ್ಮ ಟ್ರಸ್ಟ್, “ಕರಾವಳಿ ಕಟ್ಟು” ಉಪನ್ಯಾಸ ಏರ್ಪಡಿಸಿದ್ದಾಗ, ರೆಹಮತ್ ತರೀಕೆರೆ, ನಾಗರಾಜ್ ಮಂಜುಳೆ ಬಂದಿದ್ದರು. ಆ ದಿನ, ನಾವು ಯಾರೂ ಊಹಿಸಲೂ ಸಾಧ್ಯವಾಗದಂತಹ ರೀತಿಯಲ್ಲಿ GR ಸಭಾಂಗಣಕ್ಕೆ ಒಂದು ಕ್ಷಿಪ್ರ ಭೇಟಿ ಕೊಟ್ಟು ಹೋಗಿದ್ದರು. ಒಟ್ಟಿಗಿದ್ದ ಎಲ್ಲರಿಗೂ ಭಾವನಾತ್ಮಕವಾದ ಸನ್ನಿವೇಶ ಅದಾಗಿತ್ತು.

ಆ ಹೊತ್ತಿಗೂ GR ಪರಿಚಿತರಾಗಲಿಲ್ಲ.
ನನ್ನ ವೃತ್ತಿಯ ಕುರಿತು ನನಗೆ ಇರುವ ಬದ್ಧತೆ ಮತ್ತು ಕಲ್ಪನೆಗಳ ಕಾರಣಕ್ಕಾಗಿ ಯಾವತ್ತೂ ಆಕ್ಟಿವಿಸಂನ ಪ್ರಖರತೆಯಿಂದ ಉದ್ದೇಶಪೂರ್ವಕವಾಗಿಯೇ ದೂರ ಉಳಿದವನು ನಾನು. ಒಂದೇ ನಗರದಲ್ಲಿದ್ದೂ, ಹಲವಾರು ಅವಕಾಶಗಳಿದ್ದೂ, ಪ್ರಖರ ಆಕ್ಟಿವಿಸ್ಟ್ GR ನನಗೆ ಅಪರಿಚಿತರಾಗಿಯೇ ಉಳಿಯಲು ಇದು ಮುಖ್ಯ ಕಾರಣ ಅನ್ನಿಸುತ್ತದೆ.

ನಿಷ್ಠುರವಾದಿ ನಿಲುವುಗಳು ನನಗೆ ಭಯ ಹುಟ್ಟಿಸುವುದಕ್ಕೆ ದೊಡ್ಡ ಕಾರಣ, ಶಿವರಾಮ ಕಾರಂತರ ಬಗ್ಗೆ ನಾನು ಕೇಳಿರುವ ಒಂದು ಸಂಗತಿ. ಯಾರೋ ಅವರ ಮನೆ ಬಾಗಿಲು ತಟ್ಟಿ, ಕಾರಂತರೇ ಬಾಗಿಲು ತೆರೆದಾಗ “ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮನ್ನು ನೋಡಿಹೋಗಲು ಬಂದೆ” ಎಂದರಂತೆ. ಅಪವೇಳೆಯಲ್ಲಿ ಬಂದಿದ್ದ ವ್ಯಕ್ತಿಯ ಮೇಲೆ ಮೊದಲೇ ವ್ಯಗ್ರರಾಗಿದ್ದ ಕಾರಂತರು “ನೋಡಿಯಾಯಿತಲ್ಲ, ಹೋಗಿ ಈಗ” ಎಂದು ದಢಾರನೆ ಬಾಗಿಲು ಮುಚ್ಚಿದರಂತೆ! ಈ ಕಥೆ ಕೇಳಿದ ಬಳಿಕ, ಬಿಗುಮುಖದ ನಿಷ್ಠುರವಾದಿ GR ಅವರನ್ನು (ಅವರೂ ಅಂತಲ್ಲ, ಯಾರನ್ನೂ ಕೂಡ ಸಕಾರಣ ಇಲ್ಲದೆ) ಸುಮ್ಮನೇ ಹೋಗಿ ಲೋಕಾಭಿರಾಮವಾಗಿ ಮಾತನಾಡಿಸುವ ಧೈರ್ಯವೂ ನನಗಿರಲಿಲ್ಲ.

ಈ ಎಲ್ಲ ಕಾರಣಗಳಿಗಾಗಿ GR ನನಗೆ ಕಡೆಗೂ ಪರಿಚಿತರಾಗಲೇ ಇಲ್ಲ. ಇನ್ನು ಅಂತಹ ಅವಕಾಶವೂ ಇಲ್ಲ.

ಆದರೆ, ಅವರ ನಿಲುವುಗಳು, ಬರಹಗಳು ಗೊತ್ತಿವೆ. ಅದಕ್ಕಾಗಿ ಈಗಲೂ ಅವರು ನಮ್ಮವರೇ,
ಅದರಲ್ಲಿ ಯಾವ ಅನುಮಾನವೂ ಇಲ್ಲ.

-ರಾಜಾರಾಂ ತಲ್ಲೂರು

© Copyright 2022, All Rights Reserved Kannada One News