ಪೊಲೀಸ್ ತರಬೇತಿಯ ಅಮಾನವೀಯತೆ, ಕ್ರೂರತೆಯನ್ನು ಬಿಚ್ಚಿಡುವ ಸಿನಿಮಾ - ತಾನಕ್ಕಾರನ್-ಚಂದ್ರಪ್ರಭ ಕಠಾರಿ ಅವರ ಅಂಕಣ

ಪೊಲೀಸ್ ತರಬೇತಿಯ ಅಮಾನವೀಯತೆ, ಕ್ರೂರತೆಯನ್ನು ಬಿಚ್ಚಿಡುವ ಸಿನಿಮಾ - ತಾನಕ್ಕಾರನ್-ಚಂದ್ರಪ್ರಭ ಕಠಾರಿ ಅವರ ಅಂಕಣ

Updated : 10.08.2022

ಸಾರ್ವಜನಿಕರ ಆತ್ಮಗೌರವ, ಪ್ರಾಣ, ಆಸ್ತಿಪಾಸ್ತಿ - ಎಲ್ಲವನ್ನೂ ಕಾಪಾಡುವ ಪಣವೊತ್ತಿರುವುದು ಸಂವಿಧಾನತ್ಮಾಕವಾಗಿ ರಚಿತಗೊಂಡಿರುವ ಪೊಲೀಸ್ ವ್ಯವಸ್ಥೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಶುಭಗಳಿಗೆಯಲ್ಲಿ ಅಂಥ ಪೊಲೀಸ್ ವ್ಯವಸ್ಥೆ, ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆಯಾದರೂ, ಅದು ಈಗಲೂ ನೂರಕ್ಕೆ ನೂರು ಜನಸ್ನೇಹಿಯಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲವೆಂದೇ ಹೇಳಬೇಕಾದೀತು. ಯಾವುದೇ ಅನ್ಯಾಯದ ವಿರುದ್ಧ ಠಾಣೆಯ ಮೆಟ್ಟಿಲೇರುವುದು ಕೊನೆಯ ಆಯ್ಕೆಯಾಗಿರುವುದು – ಅಲ್ಲಿಯ ಭ್ರಷ್ಟ ವ್ಯವಸ್ಥೆ, ಪಟ್ಟಭದ್ರ ಹಿತಾಸಕ್ತಿ, ದೂರಗಳನ್ನು ನಿಷ್ಪಕ್ಷಪಾತಿಯಾಗಿ ದಾಖಲಿಸಿ, ತನಿಖೆ ನಡೆಸುವಲ್ಲಿ ತೋರುವ ಅನಾದರಗಳು ಮುಖ್ಯ ಕಾರಣಗಳಾಗಿರುತ್ತವೆ. ಇದು ಪೊಲೀಸ್ ವ್ಯವಸ್ಥೆಯ ಹೊರ ಮುಖವಾದರೆ, ಒಬ್ಬ ಸಾಮಾನ್ಯ ವ್ಯಕ್ತಿ ಗಡಸುತನವನ್ನೇ ಹಾಸು ಹೊದ್ದು ಪೊಲೀಸ್ ಆಗಿ ಪರಿವರ್ತನೆಯಾಗುವ ಕಠಿಣ ತರಬೇತಿಯದು ಮತ್ತೊಂದು ಮುಖ.

ಜನಸಾಮಾನ್ಯರಿಗೆ ಅಷ್ಟಾಗಿ ತಿಳಿದಿಲ್ಲದ ಕಠಿಣ, ಅಮಾನವೀಯ ಪೊಲೀಸ್ ತರಬೇತಿಯ ಹಿನ್ನೆಲೆಯುಳ್ಳ 2022ರಲ್ಲಿ ತಯಾರಾದ ತಮಿಳು ಸಿನಿಮಾ ತಾನಕ್ಕಾರನ್ – ಅದರ ವಸ್ತು ವಿಷಯವಾಗಿ ಗಮನ ಸೆಳೆಯುವಂತಾದ್ದು. ಈ ಚಿತ್ರವು ತಮಿಝ ಅವರ ನಿರ್ದೇಶನದಲ್ಲಿದ್ದೆ.

ಚಿತ್ರ ಸ್ವಾತ್ರಂತ್ರ್ಯ ಮೊದಲ ಸಂಗ್ರಾಮವೆಂದೇ ಗುರುತಿಸಲ್ಪಡುವ ಸಿಪಾಯಿ ದಂಗೆಯ ಉಲ್ಲೇಖದೊಂದಿಗೆ ಆರಂಭವಾಗುತ್ತದೆ. ವಸಾಹತುಶಾಹಿ ಸಾಮ್ರಾಜ್ಯದ ಮೇಲೆ ದಂಗೆ ಏಳುತ್ತಿದ್ದ ಜನರನ್ನು ಪ್ರತಿಬಾರಿ ಹತ್ತಿಕ್ಕಲು ಸೈನ್ಯವನ್ನೇ ಅವಲಂಬಿಸ ಬೇಕಾದ ಅನಿವಾರ್ಯತೆ ಬ್ರಿಟಿಷರಿಗೆ ಎದುರಾಗುತ್ತದೆ. ಅದನ್ನು ನೀಗಿಕೊಳ್ಳಲು ಬ್ರಿಟಿಷರು ಬಲವಂತವಾಗಿ ಸ್ಥಳೀಯ ಯುವಕರನ್ನು, ಕಠಿಣ ತರಬೇತಿ ಕೊಟ್ಟು ಪೊಲೀಸರನ್ನಾಗಿ ನೇಮಿಸಿಕೊಳ್ಳತ್ತಾರೆ. ಅದರಿಂದ ಅವರಿಗೆ ಆಗುತ್ತಿದ್ದ ಲಾಭವೆಂದರೆ, ದೇಶದ ಜನರನ್ನು ಹತ್ತಿಕ್ಕಲು ನೆಲದ ಜನರನ್ನೇ ಖಾಕಿ ತೊಡಿಸಿ ಅವರ ಮೇಲೆ ಎತ್ತಿಕಟ್ಟಿ ಸದೆ ಬಡೆಯುವುದು. ಮತ್ತು ಅಂಥ ಪೊಲೀಸ್ ವ್ಯವಸ್ಥೆಯಲ್ಲಿ ಯಾವತ್ತೂ ಸ್ವಾತಂತ್ರ್ಯದ ಭಾವ ಮೂಡದಂತೆ ಪೆರೇಡ್ ಹೆಸರಲ್ಲಿ ಸ್ಪರ್ಧೆ ಏರ್ಪಡಿಸಿ, ಅದರಲ್ಲೇ ತನ್ಮಯರಾಗುವಂತೆ ಮಾಡುವುದು. ಗೆದ್ದವರಿಗೆ ಬಹುಮಾನ ಕೊಟ್ಟು ಪ್ರೋತ್ಸಾಹಿಸಿ, ಸೋತವರಿಗೆ ಇಡೀ ಹೆಸರಲ್ಲಿ ತರಬೇತಿಯನ್ನು ಮತ್ತಷ್ಟು ಕಠಿಣಗೊಳಿಸಿ ಅವರ ತರಬೇತಿ ಅವಧಿಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡುವುದು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಬ್ರಿಟಿಷರ ಈ ತರಬೇತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೂ, ಬ್ರಿಟಿಷರ ಅಮಾನವೀಯ, ಕ್ರೂರ ಮನಸ್ಥಿತಿಯ ತರಬೇತಿ ಈಗಲೂ ಬದಲಾಗದಿರುವುದನ್ನು ಚಿತ್ರ ಗುರುತಿಸುತ್ತದೆ. 1998ರಲ್ಲಿ ನಡೆಯುವ ಈ ಚಿತ್ರದ ಇಡೀ ಕತೆಯು ತಿರುನವೇಲಿ ಜಿಲ್ಲೆಯ ಪೊಜಿಲಾರು ಊರಿನಲ್ಲಿರುವ ತಮಿಳುನಾಡು ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಾಗುತ್ತದೆ.

ಅರಿವಜಗನ್ ಎಂಬ ಯುವಕ ಕ್ರಿಮಿನಾಲಜಿಯಲ್ಲಿ ಪದವೀಧರ. ಆದರೂ ತಾನೊಬ್ಬ ನಿಷ್ಟಾವಂತ ಪೊಲೀಸ್ ಆಗಬೇಕೆಂಬ ಆಸೆ ಹೊತ್ತು ತರಬೇತಿಗೆ ಬಂದಿದ್ದಾನೆ. ಅವನ ಹಾಗೆ ಹಲವು ಉತ್ಸಾಹಿ ಯುವಕರು ಭವಿಷ್ಯದಲ್ಲಿ ಖಾಕಿ ತೊಟ್ಟು ಪೊಲೀಸರಾಗಿ ಅಧಿಕಾರ ಚಲಾಯಿಸುವ ಆಸೆ ಹೊತ್ತು ಬಂದಿದ್ದಾರೆ. ಆಶ್ಚರ್ಯವೆಂಬಂತೆ ಯುವಕರ ಆ ದಂಡಲ್ಲಿ ಕೆಲ ಮಧ್ಯವಯಸ್ಸಿಗೆ ಸರಿಯುತ್ತಿರುವ ವಯಸ್ಕರು ಬಂದಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಯಾವುದೋ ಕಾರಣಕ್ಕಾಗಿ ಅವರಿಗೆ ತರಬೇತಿಯನ್ನು ನಿರಾಕರಿಸಿದಾಗ, ಅದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿ ಜಯಗಳಿಸಿ ಮತ್ತೆ ತರಬೇತಿಗೆ ಸೇರಿದ್ದಾರೆ.  

ಪೊಲೀಸ್ ತರಬೇತಿ ಕೇಂದ್ರಕ್ಕೆ ಬಹಳ ಹೆಮ್ಮೆಯಿಂದ ಅಭ್ಯರ್ಥಿಗಳಿಗೆ ಅದೊಂದು ಅಘೋಷಿತ ಬಂಧೀಖಾನೆಯೆಂದು ತಿಳಿಯುವುದಕ್ಕೆ ಬಹಳ ಸಮಯ ಹಿಡಿಯುವುದಿಲ್ಲ. ಸರಿಸುಮಾರು ಮುನ್ನೂರು ಜನರಿರುವ ಅಭ್ಯರ್ಥಿಗಳಿಗೆ ಅಲ್ಲಿರುವುದು ಕೇವಲ ಆರು ಕೊಳಕು  ಪಾಯಿಖಾನೆಗಳು. ಮುಂಜಾನೆ ಹರಿಯುವುದಕ್ಕೆ ಮುಂಚೆ ಎದ್ದು, ಅಷ್ಟು ಜನರು ದೇಹಭಾದೆ ತೀರಿಸಿಕೊಳ್ಳಲು ಪಾಯಿಖಾನೆಯ ಮುಂದೆ ಸರದಿಯಲ್ಲಿ ನಿಲ್ಲಬೇಕು. ಸ್ನಾನ ಮಾಡಿ ಸಿದ್ಧರಾಗಿ 5.15ಕ್ಕೆ ಸರಿಯಾಗಿ ಪೆರೇಡ್ ಮೈದಾನದಲ್ಲಿ ನಿಂತಿರಬೇಕು. ಒಂದೇ ಒಂದು ನಿಮಿಷ ತಪ್ಪಿದವರನ್ನು ಲಾಠಿಯಿಂದ ಶಿಕ್ಷಿಸಲು ರಾಕ್ಷಸತನವನ್ನೇ ಮೈಗೂಡಿಸಿಕೊಂಡ ಈಶ್ವರಮೂರ್ತಿಯೆಂಬ ತರಬೇತಿದಾರ ಮತ್ತು ಅವನ ಮೇಲಾಧಿಕಾರಿ ಇನ್ಸ್ ಪೆಕ್ಟರ್ ಮುತುಪಾಂಡಿ ಅಲ್ಲಿ ಸಿದ್ದರಿದ್ದಾರೆ.

ಪ್ರಶ್ನಿಸುವುದು ತರಬೇತಿಯಲ್ಲಿ ನಿಷಿದ್ಧ. ಪ್ರಶ್ನಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಇಡೀ ಹೆಸರಲ್ಲಿ – ಲೈಫ್ಟ್ ರೈಟೆಂದು ಪೆರೇಡ್ ಮೈದಾನದಲ್ಲಿ ಓಡು ಅಂದಾಗ ಓಡಿ, ದಂಡ ಹೊಡಿ ಎಂದಾಗ ದಂಡ ಹೊಡೆದು, ಕಪ್ಪೆಯಂತೆ ಕುಪ್ಪಳಿಸು ಎಂದಾಗ ಕುಪ್ಪಳಿಸಿ ನಿರಂತರ ಒಂದು ಗಂಟೆ ದೇಹವನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಬೇಕು. ಅವಧಿಯನ್ನು ಪೂರೈಸಲಾಗದೆ ನೆಲಕ್ಕೆ ಕುಸಿದರೆ, ಮತ್ತೆ ಇಂಥಹ ಇಡೀಯ ಶಿಕ್ಷೆಯನ್ನು ಪ್ರತಿವಾರ ಸಹಿಸಲು ಸಿದ್ಧರಾಗಬೇಕು.

ಇಂಥ ಕಠಿಣ ತರಬೇತಿಯನ್ನು ತಾಳಲಾರದೆ ಎಷ್ಟೊ ಜನ ಆತ್ಮಹತ್ಯೆಗೆ ಮೊರೆ ಹೋದವರ ಉದಾಹರಣೆ ಚಿತ್ರದಲ್ಲಿದೆ. ಅತ್ತ ಸರ್ಕಾರಿ ನೌಕರಿಯ ಸುಖವನ್ನು ಕಾಣುತ್ತ ಬಂದವರಿಗೆ ಇತ್ತ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಕುಟುಂಬಕ್ಕೆ ಮರಳಲಾಗದೆ ನರಕ ಹಿಂಸೆಯನ್ನು ಅನುಭವಿಸುವ ದಾರುಣ ಚಿತ್ರವನ್ನು ನಿರ್ದೇಶಕರು ಮನಮಿಡಿಯುವಂತೆ ಕಟ್ಟಿದ್ದಾರೆ.

ಮೊದಲೇ ಹೇಳಿದಂತೆ ತರಬೇತಿಯಿಂದ ಉತ್ತೀರ್ಣರಾಗಬೇಕಾದರೆ ಪರೇಡ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲಬೇಕು. ಅಂದರೆ ಗೆಲುವು ಏಕವ್ಯಕ್ತಿಯಿಂದ ಸಾಧ್ಯವಿಲ್ಲ. ಬದಲಿಗೆ ಇಡೀ ಸೂಚಿತ ತಂಡ ಒಂದಾಗಿ ಕರಾರುವಕ್ಕಾಗಿ ಲೈಫ್ಟ್ ರೈಟುಗಳಿಗೆ ಕೋವಿಯನ್ನು ಹಿಡಿದು ಹೆಜ್ಜೆಹಾಕಬೇಕು ಮತ್ತು ದೇಹವನ್ನು ರೊಬೊಟಿನಂತೆ ಮಣಿಸಬೇಕು. ಅದರಲ್ಲಿ ಒಬ್ಬನೇ ಒಬ್ಬ ತಾಳ ತಪ್ಪಿದರೂ ಆ ತಂಡಕ್ಕೆ ಸೋಲು. ಮತ್ತೆ ಗೆಲ್ಲಲ್ಲು ಮತ್ತೊಂದು ಅವಧಿಗೆ ಕಾಯಬೇಕು. ಗೆಲ್ಲುವವರೆಗೂ ತರಬೇತಿಯಿಂದ ಮುಕ್ತಿಯಿಲ್ಲ.

ಮುಖ್ಯಪಾತ್ರವಾದ ಅರಿವಜಗನ್ ಆಗಿ ವಿಕ್ರಮ್ ಪ್ರಭು ಸಂಯಮದ ನಟನೆ ತೋರಿದ್ದಾರೆ. ಹಾಗೆ ಚಿತ್ರದಲ್ಲಿ ಕ್ರೂರಿ ತರಬೇತುದಾರ ಈಶ್ವರಮೂರ್ತಿ ಪಾತ್ರದಲ್ಲಿ ಲಾಲ್ ಮುಖದಲ್ಲಿಯೇ ರಾಕ್ಷಸತನವನ್ನು ಸಮರ್ಥವಾಗಿ ಬಿಂಬಿಸುತ್ತಾರೆ. ವ್ಯವಸ್ಥೆಯ ವಿರುದ್ಧ ಪ್ರಶ್ನಿಸಿ ನಿವೃತ್ತಿಯಾಗುವ ವಯಸ್ಸಾಗುತ್ತಿದ್ದರೂ ಕಾನ್ಸ್ ಸ್ಟೇಬಲ್ ಆಗಿಯೇ ಉಳಿದಿರುವ ಸೆಲ್ಲಕನ್ನು ಎಂಬ ಮಾನವೀಯ ಪಾತ್ರವನ್ನು ಭಾಸ್ಕರ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ಅಚ್ಚುಕಟ್ಟಾದ ಚಿತ್ರಕತೆಯನ್ನು ನಿರ್ದೇಶಕ ತಮಿಝ ಅವರೇ ರಚಿಸಿದ್ದಾರೆ. ಗಿಬ್ರಾನ್ ಅವರ ಸಂಗೀತ ಚಿತ್ರಕ್ಕಿದೆ. ಸಮರ್ಪಕವಾದ ಛಾಯಾಗ್ರಹಣ ಮತ್ತು ಸಂಕಲನದಿಂದ ತಾನಕ್ಕಾರನ್ ಸಿನಿಮಾ ಗಮನ ಸೆಳೆಯುತ್ತದೆ.

ಚಿತ್ರ ನೋಡಿ ಮುಗಿದ ಮೇಲೆ, ಬ್ರಿಟಿಷರ ಪೊಲೀಸ್ ತರಬೇತಿಯ ವ್ಯವಸ್ಥೆಯ ಪಳೆಯುಳಿಕೆಗಳು – ಭ್ರಷ್ಟತೆಯಿಂದಾಗಿ, ದರ್ಪಗಳಾಗಿ, ಕ್ರೌರ್ಯಗಳಾಗಿ, ಅಮಾನವೀಯ ಹಿಂಸೆಯಿಂದಾಗಿ ಇನ್ನೂ ಸ್ವಾತ್ರಂತ್ರ್ಯೋತ್ತರ ಭಾರತದಲ್ಲಿ ಕಾನೂನು ಪಾಲನೆಯ ಆರಕ್ಷಣ ವ್ಯವಸ್ಥೆಯಲ್ಲಿ ಉಳಿರುವುದು ಒಮ್ಮೆ ಮನದಲ್ಲಿ ಹಾದು ಹೋಗಿ ಖಿನ್ನತೆ ಉಂಟು ಮಾಡುತ್ತದೆ. ಚಿತ್ರ ಡಿಸ್ನಿ ಹಾಟ್ ಸ್ಟಾರ್ ಒಟಿಟಿಯಲ್ಲಿದೆ.

ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News