ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಮೂರು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಮೂರು: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 16.09.2022

ಮಾತನ್ನು ಬಿಟ್ಟು ಮೌನಕ್ಕೆ ಶರಣಾದ ಬುದ್ಧನ ಸುತ್ತ ಇದ್ದ ಬುದ್ಧನ ಆ ಅತೀತ ಆನಂದದ ಸ್ಥಿತಿಯ ಅಭಿಮಾನಿಗಳು, ಆ ಸ್ಥಿತಿಯ ತಲುಪಲು ಯಾವ ಯಾವ ತಂತ್ರ ಬಳಸಬೇಕು, ಯಾವ ತಂತ್ರ ಬಳಸಬಾರದು ಎಂಬೆಲ್ಲ ಶೋಧನೆಗಿಳಿದ್ದಿದ್ದರ ಫಲವೇ  ಮಹಾಯಾನ ಮತ್ತು ಹೀನಾಯಾನ ಎಂಬೆರಡು  ಬೌದ್ಧ ಪಂಥಗಳು!!.

ಮಹಾಯಾನ ಮತ್ತು ಹೀನಾಯಾನ. ಮಹಾಯಾನ ಬೌದ್ಧ ಪಂಥವು ಬುದ್ಧ ಯಾವು ಯಾವುದನ್ನು  ತನ್ನೊಳಗಿನಿಂದ  ಬೇರು ಸಮೇತ ಕಿತ್ತು ಎಸೆದ್ದಿದ್ದನೋ ಆ ಬೇರಿನಿಂದಲೇ  ಚಿಗುರೊಡೆದು  ಮರವಾಗಿ ಹೂ ಬಿಟ್ಟು ನಿಂತ ಒಂದು ಬೃಹತ್ ವೃಕ್ಷ!!.  ಈ ಬೌದ್ಧ ಪಂಥದ ಎಲ್ಲ ಸಾಧಕರು ಬುದ್ಧನನ್ನು ದೇವರೆಂದೆ ಪೂಜಿಸುವವರಾಗಿದ್ದಾರೆ!!. ಈ ಪಂಥದ  ಅಡಿಪಾಯವಿರುವುದು ಈ ಪಂಥದ ಬೈಬಲ್ ಎಂದೇ ಕರೆಯಬಹುದಾದ  ' ಬುದ್ಧ ಚರಿತೆ ' ಯಲ್ಲಿ. ಈ ಬುದ್ಧ ಚರಿತೆ ಬರೆದವನು ಒಬ್ಬ ವಿದ್ವಾಂಸ, ಆತನ  ಹೆಸರು ಅಶ್ವಘೋಷನೆಂದು. ಆತ ಬುದ್ಧ ಸತ್ತು ನಾನೂರು  ವರ್ಷಗಳ ನಂತರ ಈ ಕೃತಿ ಅಶ್ವಘೋಷನಿಂದ  ಬರೆಯಲ್ಪಟ್ಟಿತು. ಆ ಕೃತಿಯಲ್ಲಿ ನೀವು ಬುದ್ಧನ ಹುಡುಕಲು ಸಾಧ್ಯವೇ ಇಲ್ಲ!!  ಕಾರಣ, ಅದರೊಳಗೆ ಅಶ್ವಘೋಷನ ಬುದ್ಧ ಮಾತ್ರ ಇರಲು ಸಾಧ್ಯ!!. ಅಶ್ವಘೋಷನ ಬುದ್ಧ ಚರಿತೆಯನ್ನು ನಾನು ಇದು ಒಂದು ಐಡಿಯಾಲಾಜಿ ಮೆಥಡ್ ಎಂದು ಕರೆಯುತ್ತೇನೆ. ಆ ಐಡಿಯಾಲಾಜಿ ಮೆಥಡ್ ಮೂಲಕ ನಾವು ಬುದ್ಧನನ್ನು ಕಾಣಲು, ಅರಿಯಲು ಸಾಧ್ಯವೆಂದು ಮಹಾಯಾನಿಗಳ  ನಂಬಿಕೆಯಾಗಿದೆ!!.

ಇಂತಹ ಮೆಥಡ್ ಗಳು  ಭಾರತದಾದ್ಯಂತ  ಲಕ್ಷಾಂತರ  ಇವೆ!!. ಅವುಗಳಲ್ಲಿ ಅಶ್ವಘೋಷನ ಮೆಥಡ್ ಕೂಡ ಒಂದು. ದೇವರನ್ನು ಪೂಜಿಸಿ ದೇವರನ್ನು  ಕಾಣುವ ಅಂತಹ ಲಕ್ಷಾಂತರ ವಿಧಾನಗಳನ್ನು  ಬಿಟ್ಟು  ಬುದ್ಧನನ್ನೇ ಯಾಕೆ ಅಶ್ವಘೋಷ ಆಯ್ಕೆ ಮಾಡಿಕೊಂಡ  ಎಂಬ ವಿಷಯವಿದೆಯಲ್ಲ ಅದು ಅತ್ಯಂತ  ನಾಜೂಕಿನ ಕಿಲಾಡಿತನವನ್ನು ಕಾಣಿಸುವಂತದ್ದು!!.

ಮನುಷ್ಯನ ನಾಗರಿಕತೆಯ ವಿಷಯದಲ್ಲಿ ಮನುಷ್ಯನ
 ಐಡೆಂಟಿಟಿ ಸಮಸ್ಯೆ ಎಂತಹ  ಭೀಕರವಾದದ್ದು ಎಂದರೇ, ನಾನು ಮಿಕ್ಕೆಲ್ಲರಿಗಿಂತ ಭಿನ್ನ ಎಂದು ಕಾಣಿಸುವ, ಕಾಣಿಸಿಕೊಳ್ಳುವ  ಮನುಷ್ಯನ ಹಂಬಲ  ಇಂದು ನೆನ್ನೆಯದಲ್ಲ,  ಅದೇ ಮನುಷ್ಯನ ನಾಗರಿಕತೆ ಮುಂದುವರಿಯಲು  ಕಾಲುಗಳಿದ್ದಂತೆ!!. ಆ  ವಾಂಚೆ ವೈಯಕ್ತಿಕವಾಗಿದ್ದಲ್ಲಿ ಅದು ಅವರವರ ಸಮಸ್ಯೆಯಾಗುವುದಾರಿಂದ ಬೇರೆಯವರಿಗೆ ಆಗುವ ತೊಂದರೆ ಕಮ್ಮಿ. ಆದರೆ, ಅದು ಸಾಮಾಜಿಕ, ರಾಜಕೀಯ, ಧಾರ್ಮಿಕವಾದಲ್ಲಿ  ಅದರಿಂದ ಆಗುವ ತೊಂದರೆ ಭೀಕರವಾದದ್ದು!!. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ತನ್ನ ಜನಾಂಗವೇ ಶ್ರೇಷ್ಠ ಎಂದು ನಂಬಿಕೊಂಡಿದ್ದ ಹಿಟ್ಲರ್, ಲಕ್ಷಾಂತರ  ಯಹೂದಿಗಳನ್ನು, ಹಲವು ಲಕ್ಷ ಮಿಕ್ಕ ಧರ್ಮಿಯರನ್ನು  ಹತ್ಯೆ ಮಾಡಿದ  ಆ ಕ್ರೂರ ಕೃತ್ಯವನ್ನು ಇತಿಹಾಸ ಮರೆಯಲು ಸಾಧ್ಯವಿಲ್ಲ!!. ಹಿಟ್ಲರ್ ನ ಐಡೆಂಟಿಟಿ ಸಮಸ್ಯೆಯು ಅದು ಅವನ ಜನಾಂಗಕ್ಕೆ ಕಪ್ಪು ಚುಕ್ಕೆಯನ್ನು ಇಟ್ಟುಬಿಟ್ಟಿತು!!.

ಅಶ್ವಘೋಷನ  ವಿಚಾರದಲ್ಲಿ ಈ ಸಮಸ್ಯೆಯ  ಬಗ್ಗೆ ಹೇಳುವುದಾದರೆ, ತಾನು ನಂಬಿಕೊಂಡ ನಂಬಿಕೆಗಳು ಮತ್ತು ಲೋಕಕ್ಕೆ ಪವಾಡವೆನ್ನಿಸುವ ನಂಬಿಕೆಗಳನ್ನು  ಬುದ್ಧನ ಸುತ್ತ ಹೆಣೆದು ಲೋಕಕ್ಕೆ ಲೋಕವೇ ಬೆರಗಿನಿಂದ ಬಾಯಿಯ ಮೇಲೆ ಬೆರಳಿಟ್ಟು ಕೊಳ್ಳುವಂತೆ ಬುದ್ಧ ಚರಿತೆ ಬರೆದ!!. ಆ ಮೂಲಕ ತಾನು ಜಗತ್ ಪ್ರಸಿದ್ದಿಯೇನೋ ಆದ. ಆದರೆ ಬುದ್ಧ ಸತ್ತು ನಾನೂರು ವರ್ಷಗಳ ನಂತರ ರಚನೆಯಾದ ಆ ಕೃತಿಯಲ್ಲಿ ಬುದ್ಧನಿಗೊಂದು ಐಡೆಂಟಿಟಿ ಕೊಡುವ ಪ್ರಯತ್ನಗಳು ನೆಡೆದಿದೆ. ಹಾಗೂ ಆ ಮೂಲಕ ಅಶ್ವಘೋಷ ತನ್ನ ಐಡೆಂಟಿಟಿ ಸ್ಥಾಪಿಸಿಕೊಳ್ಳುವ ಪ್ರಯತ್ನವು ಸೇರಿದೆ!!. ಯಾಕೆಂದರೆ, ಬುದ್ಧ ಯಾವು ಯಾವುದನ್ನು ವಿರೋಧಿಸಿದ್ದನೋ ಅವೆಲ್ಲವೂ  ಒಳಗೊಂಡಂತೆ  ಬುದ್ಧನ ಸುತ್ತ ಆ ಚರಿತೆ  ಬೆಳೆದಿದೆ. ಬುದ್ಧ ಮನುಷ್ಯನ ಮಾನಸಿಕ  ಆಳ ಅಗಲ ಬಲ್ಲವನಾಗಿದ್ದು, ಮನುಷ್ಯನ  ದೇವರು ಎಂಬ ಕಲ್ಪನಯು ಹೇಗೆ ಮನುಷ್ಯರನ್ನು ಆಳಬಲ್ಲದು  ಎಂಬ ಅರಿವಿದ್ದೆ ಬುದ್ಧ ದೇವರು ಮತ್ತು ಅಧಿಕಾರವನ್ನು ವಿರೋಧಿಸಿದ!!. ಆದರೆ ಆ ಕೃತಿಯಲ್ಲಿ ಬುದ್ಧನನ್ನೇ ಒಬ್ಬ ದೇವರಾಗಿಸಿ  ಪೂಜಿಸುವ ಕ್ರಮ ಅದು ಬುದ್ಧನಿಗೆ ಅಪಚಾರ ಮಾಡಿದಂತೆ!!. ಅಶ್ವಘೋಷ ಆ ಕಾಲದ  ಜನಪ್ರಿಯ ನಂಬಿಕೆಗಳನ್ನು ಬುದ್ಧನ ನಂಬಿಕೆಗಳಂತೆ ಕಾಣಿಸಿದ್ದು  ಬುದ್ಧನನ್ನು ಅತ್ಯಂತ ಸಾಮಾನ್ಯಕರಿಸಿದ ದುರಂತ ಕ್ರಮವದು!!. ಯಾವುದೇ ಒಬ್ಬ ಮಹಾನ್ ವ್ಯಕ್ತಿಯ  ಸುತ್ತಮುತ್ತ ಸಾವಿರಾರು ದಂತ ಕಥೆಗಳು ಹಬ್ಬುವುದು  ಮನುಷ್ಯ ಸಹಜ ವಾಂಚೆಯಾಗಿದೆ. ಆ ವಾಂಚೆಯನ್ನೇ ನಂಬಿ ಒಂದು ಕೃತಿ ರಚಿಸುವುದು ಮತ್ತೊಂದು ವಾಂಚೆ ಅಲ್ಲದೇ ಮತ್ತಿನೇನು!!.

ಆ ಕೃತಿಯ ಕಥೆಯನ್ನು ಆಧರಿಸಿ  ಹೇಳುವುದಾದರೆ, ಒಬ್ಬ ಮನುಷ್ಯನನ್ನು ಗ್ರೇಟ್ ಎಂದು ಕಾಣಿಸಲು ಈ ಕೃತಿಯು ಸರ್ವ ಪ್ರಯತ್ನವನ್ನು ಮಾಡಿದೆ!!. ಆ ಕೃತಿಯಲ್ಲಿ, ಬುದ್ಧನ ತಾಯಿಯ ಕನಸಲ್ಲಿ ಬಿಳಿಯ ಗಜವೊಂದು ಹೊಕ್ಕ ಕನಸು ಬಿದ್ದು, ನಂತರ ಆಕೆ ಗರ್ಭಿಣಿಯಾಗುತ್ತಾಳೆ!!, ನಂತರ ಯಾವ ನೋವು ಇಲ್ಲದೆ ತನ್ನ ಪಾರ್ಶ್ವದಿಂದಲೇ  ಬುದ್ಧನನ್ನು ಹಡೆಯುತ್ತಾಳೆ!!. ಆ ಮಗು ಜನಿಸಿದ ಕೂಡಲೇ ಎರಡು ಹೆಜ್ಜೆ ಮುನ್ನೆಡೆದು ತಾನು ಮುಂದೆ ಏನು ಆಗುತ್ತೇನೆ ಎಂದು ಭವಿಷ್ಯ ನುಡಿಯುತ್ತದೆ!!.
ಈ ಕಥೆಯ  ಮತ್ತೊಂದು ಆಯಾಮವೆಂದರೆ, ಆ  ತಾಯಿ ಸಾಮಾನ್ಯಳಲ್ಲ,  ಆಕೆ ಒಬ್ಬ ರಾಜನ ಮಹಾರಾಣಿ!!. ಮನುಷ್ಯನಲ್ಲಿ ಕಥೆಯೊಂದು ಅತ್ಯಂತ ವಿಸ್ಮಯವಾಗಿ ಉಳಿಯಲು  ಮತ್ತು ಆ ಕಥೆಯನ್ನು ಮನುಷ್ಯರು ಬಾಯಿ ಚಪ್ಪರಿಸುತ್ತ ಆರಾಧಿಸಲು  ಬೇರೇನು ಬೇಕು?  ಇಷ್ಟಿದ್ದರೆ ಸಾಕು!!. ಅದು ಮನುಷ್ಯನೊಳಗೆ ಅವನ್ನೆಲ್ಲ ವಾಂಚೆಗಳಿಗೆ  ಆಹಾರವಾಗಿ ಅತಿರತಿಯ  ಸುಖದಲ್ಲಿ ಹಗಲು ಕನಸು ಕಾಣುತ್ತ ಮನುಷ್ಯ ಸಂತೃಪ್ತಿ ಹೊಂದಲು!!. ಸಹಜವಾಗಿ ಯೋಚಿಸುವ ಯಾವುದೇ ಮನುಷ್ಯ ಮೇಲಿನ ಕಥೆಯನ್ನು ನಂಬಲು ಸಾಧ್ಯವೇ ಇಲ್ಲ!!.

ಅಶ್ವಘೋಷ ಆ ಕಾಲದ  ಜನಪ್ರಿಯ ಪುರಾಣಗಳ ಮಾದರಿಯನ್ನು  ತನ್ನ ಆ ಕೃತಿಯ  ಬೆನ್ನು ಮೂಳೆಯಾಗಿಸಿ,  ಆಸೆಯೇ ದುಃಖಕ್ಕೆ ಮೂಲ ಎಂಬ ಜನಪ್ರಿಯ ನುಡಿಯ ರಕ್ತ ಮಾಂಸ, ಉಸಿರಾಗಿಸಿ ತನ್ನ ನಂಬಿಕೆಯ ಬುದ್ಧನಿಗೆ ಜೀವ ಕೊಡುತ್ತಾನೆ!!.

ನಾನು ಈ ತರಹದ ಕೃತಿಗಳನ್ನ  ತನ್ನ ಜೀವನಾಧಾರಕ್ಕಾಗಿ ಮತ್ತೊಬ್ಬರ ಹೆಣಕ್ಕೆ ಜೀವ ಕೊಟ್ಟು ಅದರ ನೆರಳಲ್ಲಿ  ಬದುಕುವ ಬದುಕಿನ ಕ್ರಮ ಎನ್ನುತ್ತೇನೆ!!. ಈ ಕೃತಿಯು ಮತ್ತೊಂದು ಬಗೆಯಲ್ಲಿ ಭಾರತದ ನೆಲದಲ್ಲಿ ಬುದ್ಧನನ್ನು ಕೊಂದ ಕೃತಿಯು ಹೌದು!!. ಆ ಕೃತಿಯಲ್ಲಿ  ಹೆಂಡತಿ ಮಗನನ್ನು ಬಿಟ್ಟು  ಪಾಲಯನಗೈದ ಸಿದ್ದಾರ್ಥ್ ಅಥವಾ ಬುದ್ಧ ಇದ್ದಾನಲ್ಲ ಅವನಲ್ಲ ಬುದ್ಧ!!. ಸಂಸಾರ ನೆಡೆಸಲು ಅಸಮರ್ಥ ಯಜಮಾನನಂತೆ  ಬುದ್ಧನನ್ನು  ಕಟ್ಟಿಕೊಡುವ ಮೂಲಕ ಆ  ಕೃತಿಯು, ಬುದ್ಧನ್ನೆಲ್ಲ ಜೀವನ ಸಾರವನ್ನು  ಮನುಷ್ಯರ  ವ್ಯಂಗ್ಯದ  ನೆಲೆಗೆ ಇಳಿಸುತ್ತದೆ!!.  ಬುದ್ಧ ಅಥವಾ ಅವನ ದರ್ಶನ ಭಾರತ ಬಿಟ್ಟು ಚೀನಾ, ಜಪಾನ್ ಮತ್ತಿತರರ ದೇಶಗಳಲ್ಲಿ  ಯಾಕಷ್ಟು ಪ್ರಸಿದ್ದಿ ಹೊಂದಿತು??!!. ಎಂಬ ಪ್ರಶ್ನೆಯ  ಹಿಂದೆ ಆ ಕಾಲದ  ಧಾರ್ಮಿಕ ಸಂಘರ್ಷ ಯಾವ ರೂಪದಲ್ಲಿತ್ತು  ಮತ್ತು ಪ್ರಸಿದ್ಧ ದರ್ಶಕರನ್ನು, ದರ್ಶನಗಳನ್ನು  ಹೇಗೆಲ್ಲ ನಯ ನಾಜೊಕಿನಿಂದ ಮುಗಿಸಲಾಗುತ್ತಿತ್ತು ಎಂಬುದರ  ಇತಿಹಾಸ  ಉಸಿರಾಡುತ್ತದೆ!!.

                               - ಫೀನಿಕ್ಸ್ ರವಿ

© Copyright 2022, All Rights Reserved Kannada One News