' ದಿ ಪ್ರೊಪೆಟ್ ' ಪೊಯಟ್ರಿ ಇಸ್ ಖಲೀಲ್ ಜಿಬ್ರಾನ್ಸ್ ವಿಂಗ್ಸ್ ಆಫ್ ಸ್ಪಿರಿಟ್! ಕಲೆ ಭಾಗ-6: ಫೀನಿಕ್ಸ್ ರವಿ ಅವರ ವಾರದ ಅಂಕಣ

' ದಿ ಪ್ರೊಪೆಟ್ ' ಪೊಯಟ್ರಿ ಇಸ್ ಖಲೀಲ್ ಜಿಬ್ರಾನ್ಸ್ ವಿಂಗ್ಸ್ ಆಫ್ ಸ್ಪಿರಿಟ್! ಕಲೆ ಭಾಗ-6: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 12.08.2022

ಮನುಷ್ಯನ  ನಾಗರಿಕತೆಯ  ನಡುವೆ  ಮನುಷ್ಯ ಕಲ್ಪಿಸಿ ಕಟ್ಟಿಕೊಂಡ ವಿಷಯಗಳಲ್ಲಿ ಬರೀ  ಮೂರು ಕಲ್ಪನೆಗಳು ಅತ್ಯಂತ  ಅದ್ಭುತ ಕಲ್ಪನೆಗಳಾಗಿವೆ!!!. ಅವುಗಳಲ್ಲಿ  ಮೊದಲನೆಯದ್ದು  ಪ್ರೇಮವೆಂಬ ಕಲ್ಪನೆ, ಎರಡನೆಯದ್ದು ಧ್ಯಾನವೆಂಬ ಕಲ್ಪನೆ, ಮೂರನೇಯದ್ದು  ಕಲೆ ಎಂಬ ಕಲ್ಪನೆ.

ಈಗ ಬರೆಯುತ್ತಿರುವ ವಿಷಯ ಕಲೆಯ ವಿಷಯವಾದ್ದರಿಂದ ಮುಂದಿನ ವಿಷಯಯವಾಗಿ ಧ್ಯಾನದ  ಬಗ್ಗೆ ಮುಂದಿನ ಅಂಕಣಗಳಲ್ಲಿ  ಬರೆಯುತ್ತೇನೆ.

ಮನುಷ್ಯನ  ನಾಗರಿಕತೆಯಲ್ಲಿ ಕಲೆ ಎಂಬ  ಕಲ್ಪನೆ ಇಲ್ಲದಿದ್ದರೆ ಮನುಷ್ಯನ  ನಾಗರಿಕತೆ ಎಂದೋ ನಾಶವಾಗಿ  ಹೋಗುತ್ತಿತ್ತು!!.

ಜಗತ್ತಿನ ಅತ್ಯಂತ ಪ್ರಖ್ಯಾತಿಯ  ಕವಿಗಳಲ್ಲಿ ಕವಿ, ಕಲಾವಿದ  ಖಲೀಲ್  ಜಿಬ್ರಾನ್ ಕೂಡ  ಒಬ್ಬ. ಖಲೀಲ್  ಜಿಬ್ರಾನ್ ಗೆ ಕಲೆ  ಅಥವಾ ಕಾವ್ಯದ  ಪರಿಚಯವಿಲ್ಲದಿದ್ದಲ್ಲಿ ಆತನ  ತಾಯಿ, ಅಣ್ಣ, ತಂಗಿಯರಂತೆ  ಅತ್ಯಂತ ಕಿರಿ ವಯಸ್ಸಿನಲ್ಲೇ  ಸತ್ತು ಹೋಗಿಬಿಡುತ್ತಿದ್ದ!!. ಕಾರಣ, ಅವರ ಮನೆಯ  ಸದಾ ಕಿತ್ತು ತಿನ್ನುವ ಬಡತನ. ಆ ಬಡತನದಿಂದಾಗಿ ಅಣ್ಣ, ತಂಗಿಯರು ಹಾಗೂ  ಖಲೀಲ್  ಜಿಬ್ರಾನ್ ಕೂಡ ವಿದ್ಯಾಭ್ಯಾಸ ಕಲಿಯಲು  ಸಾಧ್ಯವೇ ಆಗಿರಲಿಲ್ಲ. ಜಿಬ್ರಾನ್ ನ ವಿದ್ಯಾಭ್ಯಾಸವು ಶಾಲೆಗೆ ಹೋಗದ,  ಅವರಿವರು  ವಿದ್ಯಾವಂತರು  ಹೇಳಿಕೊಟ್ಟ ವಿದ್ಯಾಭ್ಯಾಸವೆ  ಆಗಿತ್ತು. ಸದಾ ಕಿತ್ತು ತಿನ್ನುವ ಬಡತನ ಮತ್ತು ಸಮಾಜದಲ್ಲಿ ಹೇರಲ್ಪಟ್ಟ  ಬಡವ ಮತ್ತು ಶ್ರೀಮಂತ ವರ್ಗ ವಿಂಗಡಣೆ ತಂದೊಡ್ಡಿದ  ಕೀಳಿರಿಮೆಗಳು, ಅವರಿಡೀ  ಕುಟುಂಬವನ್ನು ಸದಾ ಮಾನಸಿಕವಾಗಿ  ತುಳಿದು ಹಾಕುತ್ತಲಿದ್ದವು.

ಜಿಬ್ರಾನ್ ನ ಬದುಕಿನ ಪಯಣ  ಹೀಗಿತ್ತು; ತಾಯಿ ಮದುವೆಯಾದ  ಎರಡನೆಯ  ಗಂಡ ಅಂದರೆ, ಜಿಬ್ರಾನ್ ನ  ಅಪ್ಪ ಮಹಾ  ಜೂಜುಕೊರನಾಗಿದ್ದ. ಅಪ್ಪನ  ಜೂಜುಕೊರತನ ಇವರ  ಬದುಕನ್ನು ಎಂತಹ  ವಿಪತ್ತಿಗೆ ತಂದು ಬಿಟ್ಟಿತೆಂದರೆ, ಅಪ್ಪನ  ತೆರಿಗೆ ವಂಚನೆ ಕಾರಣಕ್ಕೆ ಲೆಬನಾನ್ ಸರಕಾರವು ಆತನಿಗೆ ಜೈಲು  ಶಿಕ್ಷೆ ವಿಧಿಸಿ, ಅವನ ಆಸ್ತಿಯನ್ನು ಮುಟುಗೋಲು ಹಾಕಿಕೊಂಡಿದ್ದರಿಂದ ಅವರಿಡೀ  ಕುಟುಂಬವು ಬೀದಿ ಪಾಲಾಯಿತು!!. ಅಂತಹ  ದುರಂತ ಕಾಲದಲ್ಲಿ, ಜಿಬ್ರಾನ್ ಕುಟುಂಬ ಸ್ವಲ್ಪ ಕಾಲ ಸಂಬಂಧಿಕರ  ಆಶ್ರಯದಲ್ಲಿತ್ತು. ನಂತರ ಅಮೇರಿಕಾಕ್ಕೆ ವಲಸೆ  ಹೋಯಿತು. ಅದಕ್ಕೆ ಹಿಂದಿನ ವರ್ಷವೇ ಅವನ ತಂದೆ ಜೈಲ್ ನಿಂದ  ಬಿಡುಗಡೆ ಹೊಂದಿದ್ದನಾದರೂ, ಆತ ತನ್ನ ದೇಶ  ಲೆಬನಾನ್ ಬಿಟ್ಟು ಅಮೇರಿಕಾಕ್ಕೆ ಹೋಗಲು  ಇಚ್ಛೆಪಡದೆ  ಲೆಬನಾನ್ ನಲ್ಲಿಯೇ ಉಳಿದ!. ಹೀಗೆ, ಚುಕಾಣಿ ಇಲ್ಲದ  ಹಡಗಿನಂತೆ  ಜಿಬ್ರಾನ್ ಕುಟುಂಬ ಅಮೇರಿಕಾ ತಲುಪಿತು!!.

ಅಮೇರಿಕಾದಲ್ಲಿ ಈ ಕುಟುಂಬವನ್ನು ಅರೇಬಿಯಾದ ಕುಟುಂಬ ಎಂಬ ಕಾರಣಕ್ಕಾಗಿ ಎರಡನೇ ದರ್ಜೆಯವರಂತೆ  ನಡೆಸಿಕೊಳ್ಳುತ್ತಿದ್ದರು. ಜಿಬ್ರಾನ್ ತಾಯಿ  ಕಮಿಲಾ, ಬೂಸ್ಟನ್ ನ  ಬೀದಿಗಳಲ್ಲಿ ಸಣ್ಣ ಪುಟ್ಟ ವಸ್ತುಗಳ ವ್ಯಾಪಾರ ಮಾಡುತ್ತಾ  ಕುಟುಂಬವನ್ನು ಸಲಹುತಿದ್ದಳು.  

ಖಲೀಲ್ ಜಿಬ್ರಾನ್ ನನ  ಬದುಕು ತಾನೇ  ತಳ್ಳುವ  ಗಾಡಿಗಿಂತ,  ಅವರಿವರು  ಕೀಳೀರಿಮೆ ಎಂಬ ಚರಂಡಿಗೆ ತಳ್ಳಿದ ಬದುಕೇ  ಆಗಿತ್ತು!!. ಆತನ  ತಾಯಿ  ಮೊದಲ  ಗಂಡನ ತೊರೆದು ಮತ್ತೊಬ್ಬನನ್ನು ಮದುವೆಯಾಗಿದ್ದಳು. ಆಕೆಗಾಗಲೇ  ಮೊದಲ  ಗಂಡನಿಂದ  ಮಗನೊಬ್ಬ  ಇದ್ದ. ಆಕೆಯ ಎರಡನೇ ಮದುವೆಯ  ನಂತರ ಹುಟ್ಟಿದವರೇ  ಜಿಬ್ರಾನ್ ಮತ್ತು  ಆತನ  ಇಬ್ಬರು ತಂಗಿಯರು.

ಕವಿ ಕಲಾವಿದ ಖಲೀಲ್  ಜಿಬ್ರಾನ್ ತನ್ನ ಜೀವನದ   ನಡುವೆ  ಸದಾ ಅನ್ಯ ಮನಸ್ಕನಾಗಿರುತ್ತಿದ್ದ. ಜಿಬ್ರಾನ್ ನ  ಅನ್ಯ ಮನಸ್ಕತೆ ಅರಿತವರು  ಮಾತ್ರ ಆತನ  ಕಾವ್ಯದ, ಕಲೆಯ  ನಿಜವಾದ ಅರ್ಥಗಳನ್ನು  ಅರಿಯಲು  ಸಾಧ್ಯ!. ಹೌದು, ಖಲೀಲ್  ಜಿಬ್ರಾನ್ ನನ  ಜೀವನದಲ್ಲಿ ನಡೆದ  ದುರಂತಗಳ ಸರಮಾಲೆಗಳು  ಎಂತಹ  ಗಂಡೆದೆಯು ನಡುಗಿ ಆ  ಆಘಾತಗಳಲ್ಲಿ ಹೃದಯ ತನ್ನ ಕೆಲಸ ನಿಲ್ಲಿಸುವುದು ಖಂಡಿತ !!.  ಕಾರಣ, ಬರೀ  2 ವರ್ಷಗಳ ನಡುವಿನ ಅಂತರದಲ್ಲಿ  ಅವನ  ತಾಯಿ, ಇಬ್ಬರು ತಂಗಿಯರು,  ಮತ್ತು ಒಬ್ಬ ಅಣ್ಣ, ಕ್ಷಯ  ಮತ್ತು ಕ್ಯಾನ್ಸರ್ ನಿಂದಾಗಿ  ತೀರಿಕೊಂಡರು!!. ಆ ದುರಂತ ಸಾವುಗಳು  ಸರಣಿಯಂತೆ  ಸಂಭವಿಸಿದವು!!. ಜಿಬ್ರಾನ್ ಗೆ ಕಲೆ  ಕಾವ್ಯ  ಗೊತ್ತಿಲ್ಲದ್ದಿದ್ದರೆ, ಆತನ  ಸಾವು ಕೂಡ  ಆ ಸರಣಿ ಸಾವುಗಳಲ್ಲಿ  ಒಂದಾಗುತ್ತಿತ್ತು!!. 

ಮನುಷ್ಯನ  ನಾಗರಿಕತೆಯ ನಡುವೆ,  ದುರಂತಕೊಳಗಾದ ಮನುಷ್ಯನನ್ನು ಯಾವ  ಕನಸುಗಳು ಆ ದುರಂತವೆಂಬ  ಬಿರುಕಿನಿಂದ  ಮೇಲೆತ್ತಬಲ್ಲವೂ  ಅವು ಯುಟೋಪಿಯಾ ಕನಸುಗಳು!! ಅಥವಾ ಆದರ್ಶದ ಕನಸುಗಳು.  ಖಲೀಲ್ ಜಿಬ್ರಾನ್  ' ದಿ  ಪ್ರೊಪೆಟ್ ' ಕಾವ್ಯದಲ್ಲಿ ಬರೆದ  ಬರಹಗಳು ಅಂತಹ  ಬರಹಗಳಾಗಿದ್ದವು. ಅವು ಸಮಾಜಕೆಂದು  ಬರೆದ  ಬರಹಗಳಿಗಿಂತ  ಹೆಚ್ಚಾಗಿ, ತನ್ನನ್ನು ತಾನು  ತನ್ನ  ದುರಂತಗಳಿಂದ  ಪಾರು  ಮಾಡಿಕೊಳ್ಳುವ ಮಾನಸಿಕ  ತಯಾರಿಯೇ  ಖಲೀಲ್ ಜಿಬ್ರಾನ್ ನನ  ' ದಿ  ಪ್ರೊಪೆಟ್ '  ಬರಹಗಳಲ್ಲಿ ದಟ್ಟವಾಗಿ  ಮೂಡಿಬಂದಿವೆ. ಹಾಗೂ  ಆ  ಕನಸುಗಳು ಸಮಾಜದಲ್ಲಿ ಸಾಕಾರಗೊಂಡರೆ  ತಮ್ಮ ಕುಟುಂಬಕ್ಕೆ ಬಂದಂತ  ದುರಂತಗಳು ಮುಂದಿನ ತಲೆಮಾರಿನ ಕುಟುಂಬಗಳಿಗೆ  ಬರಲು  ಸಾಧ್ಯವೇ ಇಲ್ಲ ಎಂದು ಖುದ್ದಾಗಿ ಜಿಬ್ರಾನ್ ನಂಬಿಕೊಂಡಿದ್ದ!!. ಆ ನಂಬಿಕೆಯ  ಫಲವೇ  ಜಿಬ್ರಾನ್ ನ ' ದಿ ಪ್ರೊಪೆಟ್ '.

ಕಲೆಯ  ಮಹತ್ವವಿರುವುದೇ ಇಲ್ಲಿ!. ಕಲೆ  ಮನುಷ್ಯನನ್ನು ಅವನ್ನೆಲ್ಲ ನೋವಿನಿಂದ ಆಚೆಗೆ, ಅವನ್ನೆಲ್ಲ ದುಃಖದಿಂದಾಚೆಗೆ , ಅವನ್ನೆಲ್ಲ ರೋಗದಿಂದಾಚೆಗೆ ಅಥವಾ ಮನುಷ್ಯನ  ಮಾನಸಿಕ ಮತ್ತು ದೈಹಿಕ ವೈಕಲ್ಯಗಳಾಚೆಗೆ  ಚಲಿಸುವ ಮಹತ್ವದ  ದೋಣಿ!!.

ಖಲೀಲ್ ಜಿಬ್ರಾನ್ ತನ್ನ  ಬದುಕಿನ ನಡುವೆ  ಎಷ್ಟು ಛಿದ್ರಗೊಂಡಿದ್ದನೆಂದರೆ  ಅವನೆಂದೋ ಸಾಯಬಹುದಿತ್ತು!!. ಆದರೂ   ಅವನು  ನಂಬಿಕೆಯಿಟ್ಟ ಕಲೆ  ಅವನನ್ನು , ಅವನ ಬದುಕೆಂಬ  ದೋಣಿಯನ್ನು ಒಂದೊಷ್ಟು  ದೂರ ತಳ್ಳುತ್ತಾ ಮುನ್ನೆಡೆಸಿತು!!. ಆದರೂ ಆತ  ತನ್ನ ಬದುಕಿನಲ್ಲಿ ನಡೆದ  ದುರಂತಗಳ ದಟ್ಟ ಅನುಭವಗಳಿಂದ  ಹೊರ ಬರಲಾರದೇ  ಅವನು  ಹುಟ್ಟಿ ಬರೀ  48 ವರ್ಷಗಳಲ್ಲೇ ಕ್ಯಾನ್ಸರ್ ನಿಂದಾಗಿ  ತೀರಿಕೊಂಡ!!.

ಜಿಬ್ರಾನ್ ಬೈಬಲ್ ನ ಓದಿನ  ಮೂಲಕ ಅದರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದ.  ಆತನ  ದಿ ಪ್ರೊಪೆಟ್ ಕಾವ್ಯದಲ್ಲಿ  ಬೈಬಲ್ ನ ದಟ್ಟ  ಪ್ರಭಾವವನ್ನು ಗುರುತಿಸಬಹುದು.

ಜಿಬ್ರಾನ್ ಬೈಬಲ್ ಓದಿನ ಮೂಲಕ ಏನನ್ನು ಕಲಿತ? ಅದು ಅವನ ದುರಂತತೆಯ ನೋವನ್ನು ಇಲ್ಲವಾಗಿಸುವ  ದಿವ್ಯ ಮದ್ದಾಯಿತೇ?!  ಜಿಬ್ರಾನ್ ಬೈಬಲ್ ಓದಿನ ಮೂಲಕ ತನ್ನ ಮನಸೊಳಗೊಬ್ಬ ಪ್ರವಾದಿಯ  ಹುಟ್ಟಿಸಿಕೊಂಡ!.  ಆ  ಪ್ರವಾದಿಯೇ  ಜಿಬ್ರಾನ್ ನ  ವಾಸ್ತವದ  ದುರಂತದ  ಕಡಲಿನಲ್ಲಿ  ತಾನೊಂದು  ಹಡಗಾಗಿ  ಜಿಬ್ರಾನ್ ನನ್ನು ಆ  ಹಡಗಿನೊಳಗೆ  ಹತ್ತಿಸಿಕೊಂಡವನು!!.  ಜಿಬ್ರಾನ್ ಜಗತ್ತಿನೆಲ್ಲ ಕವಿ ಕಲಾವಿದರಿಗಿಂತ ಅನ್ಯ ಸ್ಥಾನದಲ್ಲಿ ನಿಲ್ಲುವುದು ಈ ಗುಣದಿಂದಾಗಿಯೇ.

 ಜಿಬ್ರಾನ್ ಮನುಷ್ಯನ  ಬದುಕಿನ ಎಲ್ಲ ವಿಷಯಗಳ ಬಗ್ಗೆ ಸ್ವತಂತ್ರವಾದ  ತನದ್ದೇ ಆದ  ಗಟ್ಟಿ ನಿರ್ಧಾರಗಳನ್ನು ಹೊಂದಿದ್ದ. ಆ ಗಟ್ಟಿ ನಿರ್ಧಾರಗಳನ್ನು ಜಗತ್ತಿಗೆ  ಪ್ರಕಟಿಸುವ ರೂಪವೇ

' ದಿ  ಪ್ರೊಪೆಟ್ ' ಕಾವ್ಯವಾಗಿ  ಅವನೊಳಗಿನಿಂದ  ಹೊರಗೆ ಪ್ರಕಟಗೊಂಡಿತು!!.


                -ಫೀನಿಕ್ಸ್ ರವಿ

© Copyright 2022, All Rights Reserved Kannada One News