Flash News:
ಬೆಳಗಾವಿ: ಪಿಎಫ್‌ಐ, ಎಸ್‌ಡಿಪಿಐನ ಏಳು ಮುಖಂಡರಿಗೆ ಜಾಮೀನು

ಬೆಳಗಾವಿ: ಪಿಎಫ್‌ಐ, ಎಸ್‌ಡಿಪಿಐನ ಏಳು ಮುಖಂಡರಿಗೆ ಜಾಮೀನು

Updated : 04.10.2022

ಸೆ.27ರಂದು ಬೆಳಗಾವಿ ಪೊಲೀಸರು ಬಂಧಿಸಿದ್ದ ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಯ ಏಳು ಮುಖಂಡರಿಗೆ ಷರತ್ತುಬದ್ಧ ಜಾಮೀನು ದೊರೆತಿದೆ.

ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾಡಿಯವರು ಆರೋಪಿತರಿಂದ ತಲಾ 50 ಸಾವಿರ ರೂಪಾಯಿಯ ಬಾಂಡ್ ಪಡೆದುಕೊಂಡು ಜಾಮೀನು ಮಂಜೂರು ಮಾಡಿದ್ದಾರೆ.

ಬಂಧನಕ್ಕೊಳಗಾಗಿದ್ದ ಬೆಳಗಾವಿ ಪಿಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಆಜಂ ನಗರ ನಿವಾಸಿ ಝಕೀವುಲ್ಲಾ ಫೈಜಿ, ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಶಿವಾಜಿ ನಗರದ ಪಿಎಫ್‌ಐ ಕಾರ್ಯಕರ್ತ ಸಲಾವುದ್ದೀನ್ ಖಿಲ್ಲೇವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಎಂಬ ಏಳು ಮಂದಿಗೆ ಮಂಗಳವಾರ ಜಾಮೀನು ಮಂಜೂರಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡವು ದೇಶಾದ್ಯಂತ ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆ ಕಚೇರಿ ಮತ್ತು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿ, ಹಲವರನ್ನು ಬಂಧಿಸಿತ್ತು. ಎನ್ಐಎ ದಾಳಿಯನ್ನು ಖಂಡಿಸಿ, ಪಿಎಫ್ಐ ಕಾರ್ಯಕರ್ತರು ಬೆಳಗಾವಿಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರು.

ಆ ವೇಳೆಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಾರೆಂಬ ಆರೋಪದ ಮೇಲೆ ಮುನ್ನೆಚ್ಚರಿಕಾ ಕ್ರಮವಾಗಿ ಸೆ. 27ರಂದು ಏಳು ಮಂದಿಯನ್ನು ಬಂಧಿಸಿ, ಸಿಆರ್‌ಪಿಸಿ 110 ಕಲಂ ಅಡಿ ಪ್ರಕರಣ ದಾಖಲಿಸಲಾಗಿತ್ತು.

ದಾಳಿ ನಡೆಸಿದ ವೇಳೆ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ನವೀದ್ ಕಟಗಿ ಪರಾರಿಯಾಗಿದ್ದರು. ಆದರೆ, ಇದುವರೆಗೂ ಆತನ ಸುಳಿವು ಸಿಕ್ಕಿಲ್ಲ. ಇವನ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

© Copyright 2022, All Rights Reserved Kannada One News