ಪತಂಜಲಿಯ 5 ಔಷಧ ಉತ್ಪಾದನೆ ನಿಲ್ಲಿಸುವಂತೆ ಉತ್ತರಾಖಂಡ ಸೂಚನೆ

ಪತಂಜಲಿಯ 5 ಔಷಧ ಉತ್ಪಾದನೆ ನಿಲ್ಲಿಸುವಂತೆ ಉತ್ತರಾಖಂಡ ಸೂಚನೆ

Updated : 12.11.2022

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ಇಲ್ಲಿನ ದಿವ್ಯ ಫಾರ್ಮಸಿಗೆ ಐದು ಪತಂಜಲಿ ಸಂಸ್ಥೆಗೆ ಸೇರಿದ ಔಷಧಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದೆ. ಅಲ್ಲದೆ  ಮರು ಅನುಮೋದನೆ ಪಡೆಯಲು ಪರಿಷ್ಕೃತ ಸೂತ್ರೀಕರಣ ವಿವರ ಸಲ್ಲಿಸುವಂತೆ ತಿಳಿಸಿದೆ.

ದಿವ್ಯ ಫಾರ್ಮಸಿಯು ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಕೇರಳದ ವೈದ್ಯ ಕೆ.ವಿ.ಬಾಬು ಅವರು, ದಿವ್ಯ ಫಾರ್ಮಸಿಯು ಔಷಧಿ ಮತ್ತು ಸೌಂದರ್ಯವರ್ಧಕ ಕಾಯ್ದೆಯನ್ನು ಉಲ್ಲಂಘಿಸಿ ಔಷಧ ಉತ್ಪಾದಿಸುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಪ್ರಾಧಿಕಾರ ದಿವ್ಯ ಫಾರ್ಮಸಿಗೆ ನೋಟಿಸ್‌ ಜಾರಿ ಮಾಡಿದೆ.

‘ಬಿಪಿಗ್ರಿಟ್‌, ಮಧುಗ್ರಿಟ್, ಥೈರೋಗ್ರಿಟ್‌, ಲಿಪಿಡೋಮ್‌ ಮಾತ್ರೆಗಳು ಮತ್ತು ಐಗ್ರಿಟ್‌ ಗೋಲ್ಡ್‌ ಮಾತ್ರೆಗಳನ್ನು ರಕ್ತದೊತ್ತಡ, ಮಧುಮೇಹ, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ ಕಾಯಿಲೆಗೆ ಔಷಧವೆಂದು ಬಿಂಬಿಸಲಾಗುತ್ತಿದೆ. ಕಂಪನಿಯು ಈ ಔಷಧಗಳ ಪರಿಷ್ಕೃತ ಸೂತ್ರೀಕರಣ ವಿವರವನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರವಷ್ಟೇ ಇವುಗಳ ಉತ್ಪಾದನೆಯನ್ನು ಮರು ಆರಂಭಿಸಬಹುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಹಾಗೆಯೇ, ದೂರಿನ ಬಗ್ಗೆ ಒಂದು ವಾರದ ಒಳಗಾಗಿ ಪ್ರತಿಕ್ರಿಯೆ ನೀಡಬೇಕು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ‘ದಾರಿ ತಪ್ಪಿಸುವ’ ಮತ್ತು ‘ಆಕ್ಷೇಪಾರ್ಹ’ ಜಾಹೀರಾತುಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿದೆ.

ಆದರೆ ಪತಂಜಲಿ ವಕ್ತಾರ ಎಸ್‌.ಕೆ.ತಿಜರವಾಲಾ ಅವರು, ಸಂಸ್ಥೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.

© Copyright 2022, All Rights Reserved Kannada One News