ಪಶು ಸಂಗೋಪನೆಯನ್ನೆ ನಂಬಿ ಬದುಕಿದವರು: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪಶು ಸಂಗೋಪನೆಯನ್ನೆ ನಂಬಿ ಬದುಕಿದವರು: ಬಿ.ಶ್ರೀನಿವಾಸ ಅವರ ವಾರದ ಅಂಕಣ

Updated : 12.08.2022

ಒಂದು ಜಿಲ್ಲೆಯೆಂದರೆ, ಕೃಷಿಗೆ, ನೀರಾವರಿಗೆ, ಗೋಮಾಳಕ್ಕಿಷ್ಟೆಂದು ಹಸಿರು ವಲಯದ ಭೂಮಿಯನ್ನು, ಉದ್ಯೋಗ ಕೊಡುವ ಕೈಗಾರಿಕೆಗಳ ಸ್ಥಾಪನೆಗೆಂದು ಒಂದಿಷ್ಟು ಪ್ರಮಾಣದ ಕೆಂಪು ವಲಯವೆಂದು ಮತ್ತು ಜನವಸತಿಗಾಗಿ ಹಳದಿ ವಲಯವೆಂದು ವಿಂಗಡಿಸಲಾಗುತ್ತದೆ. ದೂರದೃಷ್ಟಿಯುಳ್ಳ ಪ್ರಜಾಪ್ರಭುತ್ವ ಸರಕಾರಗಳು ನಿಯಮಗಳನ್ನು ಅನುಸರಿಸಬಹುದು. ಆದರೆ ಅಭಿವೃದ್ಧಿಯೆಂದರೆ ಕೇವಲ ನೋಟುಗಳ ಹರಿದಾಡುವಿಕೆಯಲ್ಲವೆಂದು ಬಳ್ಳಾರಿ ಸೀಮೆಗೆ ಹೇಳುವವರಾರಿದ್ದರು?

ಕರ್ನಾಟಕ ಅರಣ್ಯ ಕಾಯಿದೆ- 1969ರ ಪ್ರಕಾರ ಯಾವುದೇ ಕಾಡಿನ ಉತ್ಪನ್ನಗಳನ್ನು ಸರಕಾರದ ಅನುಮತಿಯಿಲ್ಲದೆ ರೈಲು ಇಲ್ಲವೇ ಸಮುದ್ರದ ಮೂಲಕ ಸಾಗಿಸುವಂತಿಲ್ಲ. ಆದರೆ ಆಗ ಸಾಗಿಸಲಾದ ಅದಿರು ಟನ್ನಿಗೆ ಕೇವಲ ರೂ.16 ರಿಂದ ಗರಿಷ್ಠ ರೂ.27 ಮಾತ್ರ ಆಗಿತ್ತು. ಇದು ಸರ್ಕಾರವೆ ನಿಗದಿಪಡಿಸಿದ ಮೊತ್ತ. ಎಂ.ವೈ.ಘೋರ್ಪಡೆಯವರ ಮೈನಿಂಗ್ ನ ಅವಧಿಯಲ್ಲಿ ಒಂದು ಟ್ರಕ್ ಲೋಡು ಕಬ್ಬಿಣದ ಅದಿರಿನ ಬೆಲೆ ರೂ.1200/ ಆಗಿತ್ತು. ಇದು ಆಗಿನ ಒಂದು ಲೋಡು ಮರಳಿಗಿಂತಲೂ ಕಡಿಮೆಯಾಗಿತ್ತು!  ಆದರೆ 2003 ರಷ್ಟೊತ್ತಿಗೆ ಇದೇ ಪ್ರಮಾಣದ ಅದಿರು ರೂ.7000/ಮುಟ್ಟಿ ಬಿಡುತ್ತದೆ.

2001ರ ಜನಗಣತಿಯ ಪ್ರಕಾರ ಹೊಸಪೇಟೆಯ ಜನಸಂಖ್ಯೆಯ ಶೇ .5/,ರಷ್ಟು ಜನರು ಮಾತ್ರ ಗಣಿಕೆಲಸಗಳಲ್ಲಿ, ಸ್ಟೀಲ್ ಉದ್ಯಮಗಳಲ್ಲಿ ನೇರವಾಗಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡರು.

2000ನೇ ಇಸವಿಯಲ್ಲಿ ಇಲ್ಲಿನ ಐರನ್ ಅದಿರಿನ ಉತ್ಪಾದನಾ ಪ್ರಮಾಣವು 1.2 ಮಿಲಿಯನ್ ಟನ್ನುಗಳಾಗಿದ್ದುದು 2010 ರಷ್ಟೊತ್ತಿಗೆ 42 ಮಿಲಿಯನ್ ಟನ್ನಿಗೇರಿತು! ಅಂದರೆ ಹತ್ತು ವರುಷಗಳ ಅವಧಿಯಲ್ಲಿ ಗಣಿಗಾರಿಕೆಯ ಪ್ರಮಾಣವು ಮೂವತ್ತೈದು ಪಟ್ಟು ಏರಿದಂತಾಯಿತು.

ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಡ್ಯಾಮಿನ ನೀರಿನಿಂದ ಕರ್ನಾಟಕ ಮತ್ತು ಆಂಧ್ರವೂ ಸೇರಿದಂತೆ ಒಟ್ಟು ಎರಡು ಮಿಲಿಯನ್ ಹೆಕ್ಟೇರು ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ಆದರೆ ನಿರಂತರ ಗಣಿಗಾರಿಕೆಯಿಂದಾಗಿ ಡ್ಯಾಮಿನಲ್ಲಿ ತುಂಬಿದ ಮೈನಿಂಗ್ ವೇಸ್ಟ್ ನಿಂದಾಗಿ ನೀರು ಸಂಗ್ರಹ ಪ್ರಮಾಣವೂ ಕಡಿಮೆಯಾಗಿಬಿಟ್ಟಿತು.

ಗಣಿಗಾರಿಕೆಯ ಸುತ್ತಲಿನ ಊರುಗಳಾದ ಕುರೇಕುಪ್ಪೆ, ಭುಜಂಗನಗರ, ತೋರಣಗಲ್ಲುಗಳ ಫಲವತ್ತಾದ ಅರಣ್ಯವನ್ನೂ ಹಾಳು ಮಾಡಲಾಯಿತು.

ಇಪ್ಪತ್ತು ಇಪ್ಪತ್ತೈದು ವರ್ಷದ ತರುಣರು ಏನಿಲ್ಲವೆಂದರೂ ಎರಡು ಇಲ್ಲವೇ ಮೂರು ಟ್ರಕ್ಕುಗಳ ಓನರುಗಳಾದರು. ಕೃಷಿಕರಾಗಿದ್ದವರು, ಕೃಷಿ ಕೂಲಿಯನ್ನೆ ನಂಬಿದ್ದವರೂ ಸಹ ದಿನವೊಂದಕ್ಕೆ ಐನೂರರಿಂದ ಸಾವಿರ ರೂಪಾಯಿಗಳವರೆಗೆ ದುಡಿಯಲುತೊಡಗಿದರು. ಹಣವೇನೋ ಎಲ್ಲರ ಕೈಗಳಲ್ಲೂ ಓಡಾಡತೊಡಗಿತು. ಆದರೆ ನೈಜ ಅಭಿವೃದ್ಧಿ ಎನ್ನುವುದು ಮಾತ್ರ ಮರೀಚಿಕೆಯಾಗಿಯೇ ಉಳಿದುಬಿಟ್ಟಿತು.

ಗಣಿ ನಿಷೇಧದಿಂದಾಗಿ ನೇರವಾಗಿ 50000 ಜನರಿಗೆ ಹೊಡೆತ ಬಿದ್ದರೆ, ಸುಮಾರು 7000 ರಷ್ಟು ಟ್ರಕ್ಕುಗಳು ತುಕ್ಕುಹಿಡಿಯತೊಡಗಿದವು. ಒಂದು ಟ್ರಕ್ಕಿಗೆ ಕನಿಷ್ಟ ಮೂರುಜನರಾದರೂ ಕೆಲಸ ಮಾಡಬೇಕಿತ್ತು. ಹೀಗಾಗಿ ಒಟ್ಟಾರೆ ಒಂದೇ ಬಾರಿಗೆ ಲಕ್ಷಕ್ಕೂ ಹೆಚ್ಚು ಜನರು ಒಂದೆ ಜಿಲ್ಲೆಯಲ್ಲಿ ಹೀಗೆ ದುಡಿಮೆಯಿಲ್ಲದೆ ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಬಳ್ಳಾರಿಜಿಲ್ಲೆಯೊಂದರಲ್ಲಿಯೇ 138000 ಹೆಕ್ಟೇರು ವಿಸ್ತೀರ್ಣದಷ್ಟು ಅರಣ್ಯ ಭೂಮಿ ಇತ್ತು.  ಅದು 2009 ರಷ್ಟೊತ್ತಿಗೆ ಅರಣ್ಯ ಪ್ರಮಾಣವು 77200 ಹೆಕ್ಟೇರಿಗೆ ಇಳಿದಿತ್ತು. ಅದರಲ್ಲು 11000 ಹೆಕ್ಟೇರಿನಷ್ಟು ವಿಸ್ತೀರ್ಣದ ಭೂಮಿಯು ದಟ್ಟ ಅರಣ್ಯದಿಂದ ಕೂಡಿತ್ತು.

ಸೊಂಡೂರಿನ ಸುಬ್ಬರಾಯನಹಳ್ಳಿ, ನವಲೂಟಿ, ದೇವಗಿರಿ, ನಂದಿಹಳ್ಳಿ, ನರಸಾಪುರಗಳಂತಹ ಹಳ್ಳಿಗಳ ಜನರು ಪಶುಸಂಗೋಪನೆಯನ್ನೆ ಜೀವನಾಧಾರವಾಗಿಸಿಕೊಂಡಿದ್ದರು. ಹಸು, ಎಮ್ಮೆಗಳು ಮೇಯಲು ಸಾಕಷ್ಟು ಪುಷ್ಟಿ ದಾಯಕ ಮೇವು ಇಲ್ಲಿನ ಗುಡ್ಡಗಾಡುಗಳಲ್ಲಿತ್ತು. ಅವುಗಳನ್ನು ಯಾರೂ ಕೂಡ ಮೇಯಿಸಿಕೊಂಡು ಬರುತ್ತಿರಲಿಲ್ಲ. ಮುಂಜಾನೆ ಮನೆ ಬಿಟ್ಟು ಈ ಜಾನುವಾರುಗಳು ಸ್ವಚ್ಛಂದವಾಗಿ ಮೇಯ್ದು, ಕಾಡಿನ ನೆರಳಲ್ಲಿ ಹೊರಳಾಡಿ, ಸಂಗಾತಿಗಳ ಜೊತೆ ಒಡನಾಡಿ, ಸೂರ್ಯಾಸ್ತದ ಸೂಚನೆ ಸಿಗುತ್ತಲೇ ತನ್ನ ಕರುವನ್ನು ನೆನೆದೋ, ಇಲ್ಲವೇ ತನ್ನ ಮಾಲೀಕರನ್ನು ನೆನೆಸಿಕೊಂಡೋ ಊರುಗಳ ಕಡೆಗೆ ಪಯಣ ಬೆಳೆಸುತ್ತಿದ್ದವು. ಊರ ಹತ್ತಿರ ಬಂದು ಯಾರು ಯಾವ ಮನೆಯವರು ಎನ್ನುವ ಬೇಧವಿಲ್ಲದೆ ಯಾರೇ ತಂಬಿಗಿ ಹಿಡಿದು ಹಾಲು ಕರೆದರೂ ತುಂಬಿಗಿ ತುಂಬಾ ಹಾಲು ಕೊಟ್ಟು ಸಾಗುತ್ತಿದ್ದವು. ಹಾಲು, ಮೊಸರು ಮಜ್ಜಿಗೆ, ಬೆಣ್ಣೆಗಳಂತಹ ಹೈನು ಮನೆ ತುಂಬಿರುತ್ತಿತ್ತು. ಅಂತಹ ಕಾಡು, ದನಕರುಗಳೂ ಈಗ ಇಲ್ಲ. ಪಶು ಸಂಗೋಪನೆಯನ್ನೆ ಮುಖ್ಯಕಸುಬನ್ನಾಗಿ ಮಾಡಿಕೊಂಡಿದ್ದ ಕುಟುಂಬಗಳೂ ಸಹ ಗಣಿ ಕೆಲಸಕ್ಕೆ ತೊಡಗಿದವು. ಗಣಿಗಾರಿಕೆಯ ಮೌನದೊಂದಿಗೆ...ಅವರೂ ಕೂಡ ಕಡು ಮೌನಿಗಳಾಗಿ ಹೋದರು.

- ಬಿ.ಶ್ರೀನಿವಾಸ
ಅಂಕಿ-ಅಂಶಗಳ ಕೃಪೆ: ಜಸ್ಟೀಸ್ ಸಂತೋಷ್ ಹೆಗ್ಡೆ ವರದಿ.


© Copyright 2022, All Rights Reserved Kannada One News