ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ ಯೋಜನೆಯ ಪ್ರಯೋಜನ: ಎಸ್‌ಬಿಐ ಸಂಶೋಧನಾ ವರದಿ ಪ್ರಕಟ

ಎನ್‌ಪಿಎ ಅಲ್ಲದ ಖಾತೆಗೂ ಸಾಲ ಮನ್ನಾ ಯೋಜನೆಯ ಪ್ರಯೋಜನ: ಎಸ್‌ಬಿಐ ಸಂಶೋಧನಾ ವರದಿ ಪ್ರಕಟ

Updated : 19.07.2022

ಬೆಂಗಳೂರು: 2018ರಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆಯ ಪ್ರಯೋಜನವು ಶೇಕಡ 38ರಷ್ಟು ರೈತರಿಗೆ ಮಾತ್ರ ಲಭಿಸಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಸಂಶೋಧನಾ ವರದಿಯೊಂದು ಹೇಳಿದೆ.

ರಾಜ್ಯ ಸರ್ಕಾರವು 2018ರಲ್ಲಿ ₹ 44 ಸಾವಿರ ಕೋಟಿ ಮೊತ್ತದ ಸಾಲ ಮನ್ನಾ ಯೋಜನೆ ಪ್ರಕಟಿಸಿತು. ಈ ಯೋಜನೆಯ ಪ್ರಯೋಜನ ಪಡೆಯಲು ಒಟ್ಟು 50 ಲಕ್ಷ ರೈತರು ಅರ್ಹರಾಗಿದ್ದರು. ದೇಶದಲ್ಲಿ 2014ರ ನಂತರ ಬೇರೆ ಬೇರೆ ಸಂದರ್ಭಗಳಲ್ಲಿ ಘೋಷಣೆಯಾದ ಕೃಷಿ ಸಾಲ ಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಅರ್ಹವಾಗಿದ್ದ ಸಾಲದ ಖಾತೆಗಳ ಪೈಕಿ ಹೆಚ್ಚಿನವು ‘ಎನ್‌ಪಿಎ’ (ವಸೂಲಾಗದ) ಎಂದು ವರ್ಗೀಕೃತವಾಗಿರಲಿಲ್ಲ.

ಕರ್ನಾಟಕದಲ್ಲಿ ಈ ಯೋಜನೆಗೆ ಅರ್ಹವೆಂದು ಗುರುತಿಸಲಾಗಿದ್ದ 50 ಲಕ್ಷ ರೈತರ ಖಾತೆಗಳ ಪೈಕಿ ಶೇ 46ರಷ್ಟು ಖಾತೆಗಳು ಎನ್‌ಪಿಎ ಆಗಿರಲಿಲ್ಲ ಎಂದು ಎಸ್‌ಬಿಐ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯಲ್ಲಿ ವಿವರಿಸಲಾಗಿದೆ. ಅಂದರೆ, ಎನ್‌ಪಿಎ ಅಲ್ಲದ, ಸಕಾಲದಲ್ಲಿ ಮರುಪಾವತಿ ಆಗುತ್ತಿದ್ದ ಸಾಲದ ಖಾತೆಗಳಿಗೂ ಮನ್ನಾ ಪ್ರಯೋಜನ ಸಿಕ್ಕಿದೆ.

‘ಮತ್ತೆ ಮತ್ತೆ ಘೋಷಣೆಯಾಗುವ ಸಾಲ ಮನ್ನಾ ಯೋಜನೆಗಳು ಯಾರ ಹಿತಾಸಕ್ತಿಗೆ ಪೂರಕವಾಗಿವೆ ಎಂಬ ಪ್ರಶ್ನೆ ಇದೆ. ಸಾಲ ಮನ್ನಾ ಯೋಜನೆಗಳು ವಾಸ್ತವದಲ್ಲಿ ಆತ್ಮಘಾತುಕ’ ಎಂದು ವರದಿಯಲ್ಲಿ ಹೇಳಲಾಗಿದೆ. ಬೇರೆ ಬೇರೆ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವುದು 2014ರ ನಂತರದಲ್ಲಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

2014ರ ನಂತರದಲ್ಲಿ ರಾಜ್ಯ ಸರ್ಕಾರಗಳು ಒಟ್ಟು ₹ 2.52 ಲಕ್ಷ ಕೋಟಿ ಮೊತ್ತದ ಕೃಷಿ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.ವರದಿಯು ಕೃಷಿ ಸಾಲ ಮನ್ನಾಕ್ಕೆ ಸಂಬಂಧಿಸಿದ ಒಟ್ಟು ಹತ್ತು ಯೋಜನೆಗಳನ್ನು ವಿಶ್ಲೇಷಣೆಗೆ ಆಯ್ಕೆ ಮಾಡಿಕೊಂಡಿತ್ತು.

ಸಾಲ ಮನ್ನಾ ಯೋಜನೆಯ ಪ್ರಯೋಜನಕ್ಕೆ ಅರ್ಹರಾಗಿದ್ದ ಒಟ್ಟು 3.7 ಕೋಟಿ ರೈತರ ಪೈಕಿ ಶೇ 50ರಷ್ಟು ಮಂದಿಗೆ ಮಾತ್ರ ಪ್ರಯೋಜನ ಸಿಕ್ಕಿದೆ. ಕೃಷಿ ಸಾಲ ಮನ್ನಾ ಯೋಜನೆಗಳು ಸಾಲ ಮರುಪಾವತಿಯ ಶಿಸ್ತನ್ನು ಕೆಲವು ಕಡೆಗಳಲ್ಲಿ ಹಾಳು ಮಾಡಿವೆ. ಇದರಿಂದಾಗಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮತ್ತೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

© Copyright 2022, All Rights Reserved Kannada One News