ನಿಶ್ಶಬ್ದ ನಿಲ್ಲುತ್ತಲೇ ಇಲ್ಲ: ಚಾಂದ್ ಪಾಷ ಎನ್.ಎಸ್ ಅವರ ಕವಿತೆ

ನಿಶ್ಶಬ್ದ ನಿಲ್ಲುತ್ತಲೇ ಇಲ್ಲ: ಚಾಂದ್ ಪಾಷ ಎನ್.ಎಸ್ ಅವರ ಕವಿತೆ

Updated : 28.08.2022

ಸಂತೆಯ ಬೀದಿಯಲ್ಲಿ ಗಾಯಾಳು ಗಲಾಟೆ ಸತ್ತು ಮಲಗಿದೆ
ನಗರದಲ್ಲೆಲ್ಲ ನೋವಿನ ನಗಾರಿ
ಯಾರೂ ಅಳುತ್ತಿಲ್ಲ
ಇಲ್ಲಿ ಅತ್ತವರು ಕಣ್ಣೀರಿಗೆ ಪ್ರತ್ಯೇಕ ಸುಂಕ ಕಟ್ಟಬೇಕು

ವೀರಗಾಸೆಯ ವೇದಿಕೆಯಲ್ಲಿ ನೀರವ ಮೌನ
ಮೈಕುಗಳಂತು ಮುದುಡಿ ಕೂತಿವೆ ಮಳೆಗಾಲ ಮರೆತ ಕೊಡೆಯಂತೆ,
ಕಿವಿಗಳು ಕೆಪ್ಪಾಗದಿದ್ದರೂ, ಯಾರೂ ಮಾತಾಡುತ್ತಿಲ್ಲ
ಇಲ್ಲಿ ಮಾತುಗಳ ಮುಸುಡಿಗೆ ಬಂದೂಕಿನ ಹೊಲಿಗೆ

ಬಣ್ಣ ಬದಲಿಸುವ ಗೊಸುಂಬೆಯಂಥ ನೋಟಿಗೆ
ಖಜಾನೆಯಲ್ಲೆ ಕೊಳೆಯುವ ಕೆಟ್ಟ ಚಟವಿದೆ
ದೇವರ ಹುಂಡಿಗೆ ಬಿದ್ದ ಬಡವನ ನೋಟು
ಅವನ ಅಂಗಿಯಷ್ಟೇ ಹರಿದಿದ್ದರೂ,
ಸೂಜಿ ಗಾತ್ರದ ದೊರೆಗೆ ದರ್ಜಿಯಾಗುವ ದರ್ದಿಲ್ಲ!

ಕಾಲು ಮುರಿದುಕೊಂಡು ಬಿದ್ದ ರಸ್ತೆಯ ತುಂಬಾ
ನೆತ್ತರದ ಪುಟಾಣಿ ಪಾದಗಳ ಗುರುತು
ಅರೆಬರೆಯಾಗಿ ಸುಟ್ಟ ಹಕ್ಕಿಯ ರೆಕ್ಕೆ
ಬೇಟೆಯಾಡುವುದು ಬೇನಾಮಿಯಾದರೂ ಕೂಡ ಬಂದೂಕಿನ ಟ್ರಿಗರ್ ಒತ್ತುವ ಬೆರಳು ಮಾತ್ರ ಧರ್ಮದಲ್ಲ!?

'ಕ್ರಾಂತಿಯಾಗಲಿ' ಎನ್ನುವ ಗೋಡೆ ಬರಹವನ್ನು ಮೊನ್ನೆಯಷ್ಟೇ ಬಂಧಿಸಿದ್ದಾರೆ!
ಬೇಡಿ ಬೀಗಿಸಿಕೊಂಡ ಕವಿತೆ ಈಗಲೂ ಲಾಕಪ್ಪಿನಲ್ಲಿದೆ
ಸತ್ತವರ ಹೆಸರಿನ ಮೌನಾಚರಣೆಗಳ ಲೆಕ್ಕ ತಪ್ಪಿದೆ
ಸರಿ ದಾಖಲೆ ನೀಡಲು ನೆನ್ನೆ ರಾತ್ರಿಯಿಂದಲೇ ಆದೇಶ ಹೊರಟಿದೆಯಂತೆ!

ಮಾತಿನ ಮಹಲುಗಳ ಎಷ್ಟು ಕಟ್ಟಿದರೂ
ಮೌನದ ಗುದ್ದಲಿ ಮುಗಿಸಿ ಬಿಡುತ್ತಿದೆ
ಅರಚುವ ಅರಸನೆದುರು ನಿಶ್ಶಬ್ದ ನಿಂತ್ತು ನ್ಯಾಯ ಕೇಳುತ್ತಲೇ ಇದೆ
ಈ ನಿಶ್ಶಬ್ದ ನಿಲ್ಲಿಸಲು ನಗರದಲ್ಲಿ ಕರ್ಫ್ಯೂ ಹಾಕಲಾಗಿದೆ

# ಚಾಂದ್ ಪಾಷ ಎನ್ ಎಸ್
  ( ಕವಿಚಂದ್ರ )

© Copyright 2022, All Rights Reserved Kannada One News