ಹೆಚ್ಚುತ್ತಿರುವ ಸರ್ಕಾರಿ ಸಾಲ, ಬಡ್ಡಿಹೊರೆ: ಸಿಎಜಿ ಆತಂಕ

ಹೆಚ್ಚುತ್ತಿರುವ ಸರ್ಕಾರಿ ಸಾಲ, ಬಡ್ಡಿಹೊರೆ: ಸಿಎಜಿ ಆತಂಕ

Updated : 13.08.2022

ಹೊಸದಿಲ್ಲಿ: ದೇಶದಲ್ಲಿ 2015-16ರಿಂದೀಚೆಗೆ ಹೆಚ್ಚುತ್ತಿರುವ ಸರ್ಕಾರಿ ಸಾಲ ಮತ್ತು ಬಡ್ಡಿ ಹೊರೆಯ ಬಗ್ಗೆ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿರುವ ಸಿಎಜಿ ವರದಿಯಲ್ಲಿ ಈ ಅಂಶವನ್ನು ವ್ಯಕ್ತಪಡಿಸಲಾಗಿದೆ. ಸಾಲ ಹಾಗೂ ಜಿಡಿಪಿ ಅನುಪಾತ, ಆದಾಯ ಸ್ವೀಕೃತಿಗೆ ಹೋಲಿಸಿದರೆ ಬಡ್ಡಿ ಪಾವತಿಯಂಥ ಅಂಶಗಳನ್ನು ಪರಿಗಣಿಸಿ, 2015-16ರಿಂದ 2019-20ರ ಅವಧಿಯಲ್ಲಿ ಸಾಲ ಹಾಗೂ ಬಡ್ಡಿಹೊರೆ ಅನನುಕೂಲಕರವಾಗಿ ಪರಿಣಮಿಸುತ್ತಿದೆ ಎಂದು ವರದಿ ಹೇಳಿದೆ.

ಕೇಂದ್ರ ಸರ್ಕಾರದ ಸಾಲ ಹಾಗೂ ಜಿಡಿಪಿ ಅನುಪಾತ 2015-16ರಲ್ಲಿ 50.5% ಇದ್ದುದು 2019-20ರಲ್ಲಿ 52.3%ಗೆ ಹೆಚ್ಚಿದೆ. ಸರ್ಕಾರದ ಗಳಿಕೆಯ ಶೇ.34ರಷ್ಟು ಪಾಲು ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ. ಈ ಪ್ರಮಾಣ 2015-16ರಲ್ಲಿ 32% ಆಗಿತ್ತು.

ಬಡ್ಡಿವೆಚ್ಚ 2016ನೇ ಹಣಕಾಸು ವರ್ಷದಲ್ಲಿ ಇದ್ದ 6.91ರಿಂದ 2020ನೇ ಹಣಕಾಸು ವರ್ಷದಲ್ಲಿ 6.61ಕ್ಕೆ ಇಳಿದಿದ್ದರೂ, ಒಟ್ಟು ಪಾವತಿಸುತ್ತಿರುವ ಬಡ್ಡಿ ಏರಿಕೆಯಾಗುತ್ತಲೇ ಇದೆ. 2015-16ರಲ್ಲಿ ಇದ್ದ ಒಟ್ಟು ಬಡ್ಡಿ ಪಾವತಿ 4.57 ಲಕ್ಷ ಕೋಟಿಯಿಂದ 2020ರ ವೇಳೆಗೆ 6.55 ಲಕ್ಷ ಕೋಟಿಗೆ ಏರಿದೆ ಎಂದು ವರದಿ ವಿವರಿಸಿದೆ.

© Copyright 2022, All Rights Reserved Kannada One News