5ಜಿ ಹರಾಜು: 1.45 ಲಕ್ಷ ಕೋಟಿ ಬಿಡ್‌

5ಜಿ ಹರಾಜು: 1.45 ಲಕ್ಷ ಕೋಟಿ ಬಿಡ್‌

Updated : 27.07.2022

ನವದೆಹಲಿ: ದೇಶದ ಅತಿದೊಡ್ಡ ತರಂಗಾಂತರ ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಮಂಗಳವಾರ ಒಟ್ಟು 1.45 ಲಕ್ಷ ಕೋಟಿ ಮೌಲ್ಯದ 5ಜಿ ತರಂಗಾಂತರಗಳಿಗೆ ಬಿಡ್‌ಗಳು ಸಲ್ಲಿಕೆಯಾಗಿವೆ.

ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೊ, ಸುನಿಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್‌, ವೊಡಾಫೋನ್ ಐಡಿಯಾ ಮತ್ತು ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಮೂಹದ ಒಂದು ಕಂಪನಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ‘ಸಕ್ರಿಯವಾಗಿ’ ‍ಪಾಲ್ಗೊಂಡಿವೆ.

5ಜಿ ಸೇವೆಗಳು ದೇಶದಲ್ಲಿ ಆರಂಭಗೊಂಡ ನಂತರದಲ್ಲಿ 4ಜಿ ಸೇವೆಗಳಲ್ಲಿ ಲಭ್ಯವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕ ಗ್ರಾಹಕರಿಗೆ ಲಭ್ಯವಾಗಲಿದೆ. ಅಲ್ಲದೆ, ಇಂಟರ್ನೆಟ್‌ ಜೊತೆ ಸಂಪರ್ಕಗೊಂಡಿರುವ ಎಲ್ಲ ಉಪಕರಣಗಳ ನಡುವೆ ದತ್ತಾಂಶ ಹಂಚಿಕೆ ಪ್ರಕ್ರಿಯೆಯು ಅತ್ಯಂತ ವೇಗವಾಗಿ ಆಗುತ್ತದೆ.

ಮಂಗಳವಾರದ ಹರಾಜಿನಲ್ಲಿ ಒಟ್ಟು 1.45 ಲಕ್ಷ ಕೋಟಿ ಮೌಲ್ಯದ ಬಿಡ್ ಸಲ್ಲಿಕೆಯಾಗಿದ್ದು, ಇದು ನಿರೀಕ್ಷೆಗಿಂತಲೂ ಹೆಚ್ಚು. 2015ರ ದಾಖಲೆಯನ್ನುಇದು ಮುರಿದಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಯಾವ ಕಂಪನಿಯು ಎಷ್ಟು ತರಂಗಾಂತರಗಳನ್ನು ಗೆದ್ದುಕೊಂಡಿದೆ ಎಂಬುದು ಪ್ರಕ್ರಿಯೆ ಪೂರ್ಣವಾಗುವವರೆಗೆ ಗೊತ್ತಾಗುವುದಿಲ್ಲ. ಮಂಗಳವಾರ ಒಟ್ಟು ನಾಲ್ಕು ಸುತ್ತು ಬಿಡ್ಡಿಂಗ್ ನಡೆದಿದೆ.

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಂಪನಿಗಳ ಪಾಲ್ಗೊಳ್ಳುವಿಕೆ ಆರೋಗ್ಯಕರವಾಗಿತ್ತು. ಕಂಪನಿಗಳ ಪಾಲ್ಗೊಳ್ಳುವಿಕೆ ಗಮನಿಸಿದರೆ ಉದ್ಯಮವು ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದಿದೆ ಅನ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. 5ಜಿ ತರಂಗಾಂತರಗಳನ್ನು ಆಗಸ್ಟ್‌ 14ಕ್ಕೆ ಮೊದಲು ಹಂಚಿಕೆ ಮಾಡಲಾಗುತ್ತದೆ. 5ಜಿ ಸೇವೆಗಳು ಸೆಪ್ಟೆಂಬರ್ ವೇಳೆಗೆ ಶುರುವಾಗುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದ್ದಾರೆ.


© Copyright 2022, All Rights Reserved Kannada One News