ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

Updated : 05.09.2022

ಆ ದಿನ ಮುಂಜಾನೆ ರವೀಂದ್ರ ಕಲಾಕ್ಷೇತ್ರದ ಬಲಭಾಗದಲ್ಲಿರುವ ಪ್ರಾಂಗಣದಲ್ಲಿ ಒಂದು ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾಷಣ ಮಾಡಿದ ಗೌರಿ ಲಂಕೇಶ್ ಎಂಬ ಬೆಂಕಿ ಚೆಂಡನ್ನು ಮೊಟ್ಟ ಮೊದಲ ಬಾರಿಗೆ ನಾನು ನೋಡಿದ್ದು. ಅವರ ಭಾಷಣ ಕೇಳಿಸಿಕೊಂಡ ಕಾರಣಕ್ಕೆ ಎಂತದ್ದೋ ಒಂದು ಧನ್ಯತಾ ಭಾವದಲ್ಲಿ ಸ್ವಲ್ಪ ಹೊತ್ತು ಮುಳುಗಿ ಹೋಗಿದೆ. ವರ್ಷದಿಂದೀಚೆಗೆ ಸಾಮಾಜಿಕ ಜಾಲತಾಣ ಫೇಸ್ಟುಕ್‌ನಲ್ಲಿ ಸ್ನೇಹಿತನಾಗಿದ್ದ ನಾನು ಅವರಿಗೆ ನೆನಪಿಗೆ ಸಿಕ್ಕಬಲ್ಲ ವ್ಯಕ್ತಿಯೇನೂ ಆಗಿರಲಿಲ್ಲ. ಆದರೂ ಮಾತನಾಡಿಸೋಣ ಅಂತ ಖುಷಿಯಿಂದ ಮುಂದಾದ, ಕಾರ್ಯಕ್ರಮ ಮುಗಿಸಿ ಎಲ್ಲರನ್ನೂ ಮಾತನಾಡಿಸಿ ಹೊರಟ ಗೌರಿ ಲಂಕೇಶ್ ಅವರು ತಮ್ಮ ಕಾರಿನತ್ತ ಧಾವಿಸುತ್ತಿದ್ದಂತೆಯೇ ನಾನು ಎದುರುಗೊಂಡು ಅಕ್ಕ ನಮಸ್ತೆ, ನಾನು ಅಪ್ಪಗೆರೆ ಲಂಕೇಶ್ ಅಂತ, ಫೇಸ್ಟುಕ್‌ನಲ್ಲಿ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಅಂತ ಹೇಳಿ ಪರಿಚಯಿಸಿಕೊಂಡ. ಅತ್ಯಂತ ಆತ್ಮೀಯ ಭಾವದಿಂದಲೇ ಕೈಕುಲುಕಿ ಓಹ್ ನೀನೂ ಕೂಡ ಅಪ್ಪನ ಹೆಸರು ಇಟ್ಟುಕೊಂಡಿದ್ದೀಯ ಅಂತ ನಗುಮೊಗದಿ ವೆರಿ ಗುಡ್ ಮರಿ ಎಂದು ಹೇಳಿದಾಗ, ನಾನು ನನಗೆ ಈ ಹೆಸರು ಇಟ್ಟಿದ್ದು ನನ್ನ ಅಪ್ಪ ತಿಮ್ಮರಾಜು ಅವರು, ನನ್ನಪ್ಪ ಪಿ.ಲಂಕೇಶ್ ಅವರ ದೊಡ್ಡ ಅಭಿಮಾನಿ ಹಾಗಾಗಿ ನಾನು ಕೂಡ ಅವರಂತೆ ದೊಡ್ಡ ಮನುಷ್ಯ ಆಗಲಿ ಎಂಬ ಹಂಬಲದಿಂದ ಈ ಹೆಸರು ಇಟ್ಟಿರುವುದಾಗಿ ಹೇಳಿದಾಗ, ಅಪ್ಪ ಒಂದಷ್ಟು ತಲೆಮಾರುಗಳನ್ನ ಬಹಳವಾಗಿ ಪ್ರಭಾವಿಸಿದ್ದು ನಿಜ ಅಂತ ಹೇಳಿ ಗೌರಿ ಲಂಕೇಶರು ತಮ್ಮ ತಂದೆಯನ್ನು ಕ್ಷಣ ನೆನೆದು ಸಲ ಮತ್ತೊಮ್ಮೆ ಸಿಗೋಣ ಅಂತ ಹೇಳಿ ಕಾರು ಹತ್ತಿ ಸ್ವತಃ ಚಾಲನೆ ಮಾಡಿಕೊಂಡು ಹೊರಟರು.

ಅಂದಿನಿಂದ ನಾನು ನನ್ನ ಹೆಸರು ಕೂಡ ಲಂಕೇಶ್ ಅಂತ ಇದ್ದ ಕಾರಣ ಏನೋ ಅವರು ನನ್ನ ಒಡಹುಟ್ಟಿದ ಅಕ್ಕ ಎಂಬ ಭಾವನೆಯಿಂದಲೇ ಅವರಿಗೆ ಹತ್ತಿರವಾದೆ. ತದನಂತರದಲ್ಲಿ ಅವರ ಬಹುತೇಕ ಸ್ಟೇಟಸ್‌ಗಳಲ್ಲಿ ನಾನು ಚರ್ಚೆ ಮಾಡುತ್ತಿದ್ದೆ. ಈ ದೇಶಕ್ಕೆ ಮಾರಕವಾದ ವಿಚಾರಗಳನ್ನು ಧೈರ್ಯವಾಗಿ ಪ್ರಶ್ನೆ ಮಾಡುತ್ತಲೇ ಪ್ರಗತಿಪರ, ಎಡಪಂಥೀಯ ಚಿಂತನೆಗಳನ್ನು ಅನುಸರಿಸುತ್ತಿದ್ದ ಗೌರಿ ಲಂಕೇಶರ ಯಾವುದೇ ಸ್ಟೇಟಸ್‌ಗಳಿಗೆ ನಾನು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮುಂದುಮಾಡಿಕೊಂಡು ಅದೇ ದೃಷ್ಟಿಕೋನದಿಂದಲೇ ಆರೋಗ್ಯಕರ ಚರ್ಚೆ ಮಾಡುತ್ತಲಿದ್ದೆವು. ಹೀಗೆ ಮುಂದುವರೆದು ಅವರು ನನ್ನನ್ನು ಅಪ್ಪಗೆರೆ, ಅಪ್ಪಗೆರೆ ಅಂತಲೇ ಕರೆಯುವುದನ್ನು ರೂಢಿ ಮಾಡಿಕೊಂಡರು. ಗಾಂಧಿ ಮತ್ತು ಅಂಬೇಡ್ಕರ್, ಎಡಪಂಥೀಯ ಚಿಂತನೆ ಮತ್ತು ಅಂಬೇಡ್ಕರ್‌ವಾದ, ಈ ರೀತಿಯ ವಿಚಾರಗಳ ಮೇಲೆ ಏರ್ಪಟ್ಟ ಚರ್ಚೆಗಳಲ್ಲಿ ನಾನು ಯಾವಾಗಲೂ ಅಕ್ಕ ಗೌರಿಯೊಂದಿಗೆ ವೈಚಾರಿಕ ಸಂಘರ್ಷಕ್ಕೆ ಇಳಿಯುತ್ತಲೇ ಇದ್ದು ಎರಡು ಮೂರು ದಿನಗಳವರೆಗೂ ಚರ್ಚೆ ಮಾಡುತ್ತಲೇ ಇದ್ದೆವು.

ದೆಹಲಿಯ ಜೆ.ಎನ್.ಯು ವಿಶ್ವವಿದ್ಯಾನಿಲಯದಲ್ಲಿ ಕನ್ನಯ್ಯ ಕುಮಾರ್ ಪ್ರಕರಣ ಹೆಚ್ಚು ಚರ್ಚೆ ಆಗುತ್ತಿದ್ದಂತೆಯೇ ಆತ ಬಳಸಿದ 'ಜೈಭೀಮ್‌, ಲಾಲ್ ಸಲಾಂ' ಎಂಬ ಘೋಷಣೆ ಬಗ್ಗೆ ನಾನು ಮತ್ತು ಸಹೋದರ ಹೊ.ಬ.ರಘೋತ್ತಮ್ ಆಕ್ಷೇಪದ ದನಿಯೆತ್ತಿದ ಕಾರಣಕ್ಕೆ ಗೌರಿ ಲಂಕೇಶ್ ಅವರಿಗೆ ಮತ್ತು ನಮಗೂ ಒಂದು ದೊಡ್ಡ ಚರ್ಚಾ ಸರಣಿಯೇ ಮುಂದುವರೆಯಿತು ಮತ್ತು ಬಹಳಷ್ಟು ಕಾಲ ಚರ್ಚೆ ಆಗುತ್ತಲೇ “ಕನ್ನಯ್ಯ' ನನ್ನ ಮಗ, ಆತ ಹೇಳಿದ್ದು ಸರಿ ಅಂತ ಅಕ್ಕ ವಾದ ಮಾಡುತ್ತಲೇ ಇದ್ದರೂ ನಾವು ಒಪ್ಪುತ್ತಿರಲಿಲ್ಲ. ತದನಂತರದಲ್ಲಿ ಬಹುಜನ ಚಳುವಳಿಯವನಾದ ನಾನು ನೀಲಿಯನ್ನು ಅಸ್ಮಿತೆಯ ಪ್ರತೀಕ ಅಂತ ಹೇಳುತ್ತಿರುವಾಗಲೆಲ್ಲ ಅಕ್ಕ ಗೌರಿ ಕೆಂಪು ನನ್ನ ಇಪ್ಪದ ಬಣ್ಣ, ಕ್ರಾಂತಿಯ ಸಂಕೇತ ಅಂತ ಹೇಳುತ್ತಲೇ ಇದ್ದರು. ಈ ರೀತಿಯಲ್ಲಿ ಒಂದು ತರದ ನೀಲಿ ಮತ್ತು ಕೆಂಪು ಕುರಿತಾಗಿ ನಮ್ಮ ನಡುವೆ ಜುಗಲ್‌ ಬಂದಿ ಮಾದರಿಯಲ್ಲಿ ಆರೋಗ್ಯಕರ ಚರ್ಚೆ ಸಾಗುತ್ತಲೇ ಇತ್ತು. ನಮ್ಮ ನಡುವೆ ಅದೆಷ್ಟೇ ಸೈದ್ಧಾಂತಿಕ, ವೈಚಾರಿಕ ಭಿನ್ನಾಭಿಪ್ರಾಯಗಳಾಚೆಗೂ ಅಪ್ಪಗೆರೆ, ಅಪ್ಪಗೆರೆ ಅಂತಲೇ ಅತ್ಯಂತ ಮಮಕಾರವನ್ನು ನನಗೆ ತೋರಿಸುತ್ತಲೇ ಇದ್ದರು.

ಕರ್ನಾಟಕದ ನೆಲದಲ್ಲಿ ಸುಮಾರು ಒಂದೂವರೆ ದಶಕದಿಂದೀಚೆಗೆ ಬೆಳೆದು ಬಂದ ಬಹುಜನ ಚಳುವಳಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಗೌರಿ ಲಂಕೇಶ್ ಅವರು ನಮ್ಮನ್ನು ಅತಿರೇಕದ ಅಂಬೇಡ್ಕರ್‌ವಾದಿಗಳು ಅಂತ ಬಗೆಯುತ್ತಿದ್ದರು ಮತ್ತು ಆರಂಭದಲ್ಲಿ ಬಹುಜನ ಚಳುವಳಿಯನ್ನು ಪೂರ್ವಗ್ರಹಪೀಡಿತರಾಗಿ ನೋಡುತ್ತಲಿದ್ದರು. ಆದರೆ ಅವರ ಅಭಿಪ್ರಾಯ ಒಂದೇ ಒಂದು ಕಾರ್ಯಕ್ರಮದಲ್ಲಿ ಬದಲಾಯಿತು. ಬೆಂಗಳೂರಿನಲ್ಲಿ ಒಂದು ದಿನ ವಸಂತನಗರದಲ್ಲಿರುವ 'ಅಂಬೇಡ್ಕರ್ ಭವನ'ದಲ್ಲಿ ಬಹುಜನ ವಿದ್ಯಾರ್ಥಿ ಸಂಘ, ಬೆಂಗಳೂರು ವಿಭಾಗ ಏರ್ಪಡಿಸಿದ್ದ 'ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ಉಳಿಸಿ' (Save Democracy to Save India) ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ ಬಹುಜನ ವಿದ್ಯಾರ್ಥಿ ಸಂಘದ ಕಾರ್ಯ, ಸಂಘಟನೆ, ಚಟುವಟಿಕೆಗಳನ್ನು ಮನಸಾರೆ ಮೆಚ್ಚಿ ಹೊಗಳಿದರು. ಮಾತ್ರವಲ್ಲದೆ ಒಂದು ವಾರದ ನಂತರ ಮೈಸೂರು ವಿಭಾಗದಲ್ಲಿ ನಡೆದ ಅದೇ ಕಾರ್ಯಕ್ರಮದಲ್ಲಿ ಕೂಡ ಅಕ್ಕ ಪ್ರೀತಿಯಿಂದಲೇ ಪಾಲ್ಗೊಂಡು ಬಹುಜನ ಚಳುವಳಿಯನ್ನು ಮೆಚ್ಚಿ ಕೊಂಡಾಡಿದರು.

ನಾವೆಲ್ಲರೂ ಒಂದು ಮಾಧ್ಯಮವಾಗಿ ಶೋಷಿತ ಸಮುದಾಯದ ಧ್ವನಿಯಾಗಿ ಗೌರಿ ಲಂಕೇಶ್ ಪತ್ರಿಕೆ ನಿಂತ ಸಂದರ್ಭಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಇದೆಲ್ಲದರ ಹೊರತಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿದು ಕೂತಿರುವ ಫ್ಯಾಸಿಸ್ಟ್ ಶಕ್ತಿಗಳ ದಮನ ಮಾಡಲು ಎಲ್ಲಾ ಪ್ರಗತಿಪರ, ಜಾತ್ಯಾತೀತ ಶಕ್ತಿಗಳೂ ಜೊತೆಯಾಗಲೇಬೇಕು ಅಂತಲೇ ಅಕ್ಕ ಹೇಳುತ್ತಿದ್ದರು. ಆ ವರ್ಷ ಏಪ್ರಿಲ್ ತಿಂಗಳು ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ವಿಶೇಷ ಸಂಚಿಕೆ ತರುತ್ತಿದ್ದು ಅದಕ್ಕಾಗಿ ನೀನು ಬೆಳಿಗ್ಗೆ ಅಷ್ಟರಲ್ಲಿ ಒಂದು ಲೇಖನ ಬರೆದು ಕೊಡು "ಅಪ್ಪಗೆರೆ ಅಂತ ನನಗೆ ಖುದ್ದು ಫೋನಾಯಿಸಿ ಕೇಳಿದಾಗ, ಅಕ್ಕನ ಮಾತಿಗೆ ಮರುಮಾತನಾಡದೆ ಸರಿ ಅಂತ ಹೇಳಿ 'ಅಂಬೇಡ್ಕರ್ ಅಂದರೆ...' ಎಂಬ ಲೇಖನ ಬರೆದು ಬೆಳಿಗ್ಗೆಯೇ ಕಳುಹಿಸಿದ್ದೆ. ಅಕ್ಕ ಗೌರಿ ಲಂಕೇಶ್ ಆ ವಿಶೇಷ ಸಂಚಿಕೆಯಲ್ಲಿ ನನ್ನ ಲೇಖನ ಪ್ರಕಟಿಸಿ ನನ್ನ ಹೆಸರನ್ನು ಪತ್ರಿಕೆಯ ಮುಖಪುಟದಲ್ಲಿ ಕೂಡ ಪ್ರಕಟಿಸಿದ್ದುದು ಮಾತ್ರ ಯಾವತ್ತಿಗೂ ನನ್ನನ್ನು ಹಿಗ್ಗುವಷ್ಟು ಸಂಭ್ರಮಕ್ಕೆ ಶರಣಾಗಿಸಿತ್ತು. ನಂತರದಲ್ಲಿ ನನ್ನ ಹೆಸರು ಕೇಳಿದ ಯಾರೇ ಆದರೂ ನೀವು ಲಂಕೇಶ್ ಪತ್ರಿಕೆಯ ಗೌರಿ ಲಂಕೇಶ್ ಅವರ ಸಂಬಂಧಿಗಳ ಅಂತ ಕೇಳಿದಾಗಲೆಲ್ಲಾ ನಾನು ಅತ್ಯಂತ ಖುಷಿಯಿಂದ ಹೌದು ಗೌರಿ ಲಂಕೇಶ್ ನನ್ನ ಅಕ್ಕ ಅಂತ ಹೇಳಿಕೊಳ್ಳುತ್ತಲಿದ್ದೆ. ನಂತರ ಎಲ್ಲಾ ವಿವರಣೆ ನೀಡಿ, ಗೌರಿ ಲಂಕೇಶನ್ನು ಅವರಿಗೆ ಪರಿಚಯ ಮಾಡಿಸುತ್ತಲಿದ್ದೆ.

ಒಂದು ದಿನ ಸ್ನೇಹಿತರೊಬ್ಬರ ಕೆಲಸದ ನಿಮಿತ್ತ ಅವರಿಗೆ ಗೌರಿ ಲಂಕೇಶರನ್ನು ಭೇಟಿ ಮಾಡಿಸಬೇಕಿದ್ದ ಕಾರಣಕ್ಕೆ ಅಕ್ಕ ಗೌರಿಗೆ ಫೋನ್ ಮಾಡಿ ಬರುವುದಾಗಿ ಹೇಳಿ, ಪತ್ರಿಕಾ ಕಛೇರಿಯ ವಿಳಾಸ ಪಡೆದು ಹೋದೆ. ನಾನು ಕಛೇರಿಯನ್ನು ತಲುಪುವವರೆಗೂ ಸಹ ಐದಾರು ಸಲ ಫೋನ್ ಮಾಡಿ ಎಲ್ಲಿ ಬರ್ತಾ ಇದ್ದೀಯ ಮರಿ, ವಿಳಾಸ ಗೊತ್ತಾಯಿತ ಅಂತ ಬಹಳ ಮುತುವರ್ಜಿ ವಹಿಸಿದರು. ಕಛೇರಿ ತಲುಪಿದ ನಂತರ ಅಲ್ಲಿ ಅವರೊಡನೆ ಮಾತನಾಡಿದ ಸುಮಾರು ಒಂದೂವರೆ ಗಂಟೆಯ ಮಾತುಗಳು ಇವತ್ತಿಗೂ ನನ್ನ ಕಣ್ಣಮುಂದಿವೆ. ಆ ದಿನ ಅಕ್ಕ ಇಡೀ ಕಛೇರಿಯನ್ನು ಅಪ್ಪನ ಖುರ್ಚಿಯಿಂದ ಪ್ರಾರಂಭ ಮಾಡಿ ಅಲ್ಲಿದ್ದ ಪ್ರತಿ ವಸ್ತುಗಳನ್ನೂ ಪರಿಚಯಿಸಿ ಅಪ್ಪನ ಕಾಲದ ರಾಜಕೀಯ, ಸಾಮಾಜಿಕ, ಸಾಹಿತ್ಯವಲಯದ ವಿಚಾರಗಳನ್ನು ಮತ್ತು ಪತ್ರಿಕಾ ಕಛೇರಿಯ ಗತವೈಭವದ ದಿನಗಳ ಬಗ್ಗೆ ಜ್ಞಾಪಿಸಿಕೊಂಡು ನಮಗೆ ಕಥೆಯ ರೂಪದಲ್ಲಿ ಹೇಳಿದ್ದರು. ನಾನಂತೂ ವೈಯಕ್ತಿಕವಾಗಿ ಪಿ.ಲಂಕೇಶರನ್ನು ಕಾಣದವನಾಗಿದ್ದರೂ ಸಹ ಅವರನ್ನ ಕಂಡು, ಅವರ ಒಡನಾಟದ ಕುರಿತು ಹಿರಿಯರಾದ ಸಿ.ಎಸ್‌.ದ್ವಾರಕನಾಥ್, ಟಿ.ಕೆ.ತ್ಯಾಗರಾಜ್ ಅವರುಗಳ ಬರಹಗಳು ಮತ್ತು ಚಂದ್ರಶೇಖರ್ ಐಜೂರು ಅವರ ಬರಹಗಳಿಂದಲೇ ಪಿ.ಲಂಕೇಶ್' ಎಂಬ ವ್ಯಕ್ತಿತ್ವವನ್ನು ಗ್ರಹಿಸಿಕೊಂಡಿದ್ದೆ. ಆದರೆ ಕಛೇರಿಯ ಭೇಟಿ, ಪಿ.ಲಂಕೇಶ್ ಅವರ ಖುರ್ಚಿ, ಅವರಿದ್ದ ಆ ಸ್ಥಳದಲ್ಲಿ ಗೌರಿ ಲಂಕೇಶ್ ಎಂಬ ಅಪ್ರತಿಮ ವ್ಯಕ್ತಿತ್ವದೊಳಗೆ ಪಿ.ಲಂಕೇಶರ ದರ್ಶನವಾಯಿತು. ನಂತರ ಅಕ್ಕ ಗೌರಿಯೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಖುಷಿಯಿಂದ ಅಲ್ಲಿಂದ ಹೊರಟು ಮನೆ ತಲುಪಿ ಸಂಭ್ರಮ ಪಟ್ಟಿದ್ದೆ.

ಈ ರೀತಿಯಲ್ಲಿ ಸತ್ಯ ಹೇಳುವಲ್ಲಿ, ಬರೆಯುವಲ್ಲಿ ದಿಟ್ಟ ದನಿಯಾಗಿದ್ದ ಗೌರಿ ಲಂಕೇಶರು ದುಷ್ಕರ್ಮಿಗಳ ಬಂದೂಕಿನ ಗುಂಡಿಗೆ ಹತ್ಯೆಯಾದದ್ದು ಮಾತ್ರ ಈ ನೆಲದ ಪತ್ರಿಕಾರಂಗದ ಶತಮಾನದ ದುರಂತ' ಅಂತ ಹೇಳಲೇಬೇಕಾಗಿದೆ.

ಚಾರ್ವಾಕನ ಕಾಲದಿಂದಲೂ ಸಹ ವಿಚಾರವಾದವನ್ನು ಹತ್ತಿಕ್ಕಿಕೊಂಡು ಬರುತ್ತಲೇ ಇರುವ ಕ್ಷುದ್ರ ಶಕ್ತಿಗಳು ಕಾಲಕಾಲಕ್ಕೆ ಇಂತಹ ಬಲಿಗಳನ್ನು ಪಡೆದು ವಿಜೃಂಭಿಸಿವೆ. ಅಕ್ಕನ ಒಡಲ ಸೀಳಿ ನೆಲಕ್ಕುರುಳಿಸಿ ಜೀವ ತೆಗೆದುಕೊಂಡು ಹೋದ ಆ ಗುಂಡುಗಳನ್ನು ಹುಡುಕಿ ಹಲ್ಲುಗಳಲ್ಲಿ ಕಟಕಟನೆ ಕಡಿದು ಈ ಕ್ರೂರ ಸಮಾಜದ ಮುಖಕ್ಕೆ ಉಗಿಯುವಷ್ಟು ಕೋಪ ಕುದಿಯುತ್ತಲೇ ಇರುತ್ತದೆ. ನಮ್ಮೆಲ್ಲರ ಅಕ್ಕ ಗೌರಿ ಇವತ್ತು ಇಲ್ಲವಾಗಿ ಕೆಲವರಂತೂ ತಾಯಿಯನ್ನು ಕಳೆದುಕೊಂಡ ಮಕ್ಕಳಂತೆ, ಕೆಲವರು ಒಡಹುಟ್ಟಿದ ಸಹೋದರಿಯನ್ನು ಕಳೆದುಕೊಂಡ ತಮ್ಮಂದಿರಂತೆ, ಮತ್ತೂ ಕೆಲವರು ತಮ್ಮನ್ನು ಮುನ್ನಡೆಸಿದ ನಾಯಕಿಯನ್ನು ಕಳೆದುಕೊಂಡವರಾಗಿ ಅಕ್ಷರಶಃ ತಬ್ಬಲಿಗಳಂತಾಗಿದ್ದಾರೆ. ವೈಯಕ್ತಿಕವಾಗಿ ನಾನು ನನ್ನ ಅಕ್ಕನನ್ನು ಕಳೆದುಕೊಂಡಿದ್ದೇನೆ. ಹಲವಾರು ವೈರುಧ್ಯಗಳ ನಡುವೆ ವೈಚಾರಿಕ ಕದನದಲ್ಲಿ ಮುಖಾಮುಖಿಯಾಗುತ್ತಿದ್ದ ಅಕ್ಕ ಗೌರಿ ಎಂಬ ಪ್ರಬಲ ಶಕ್ತಿಯೊಂದರ ಗೈರುಹಾಜರಿ ನನ್ನನ್ನು ಇಂದಿಗೂ ಬಹಳವಾಗಿ ಕಾಡುತ್ತಲೇ ಇದೆ. ನಾನು ಅಕ್ಕನನ್ನು ಮೊದಲ ಬಾರಿ ಕಂಡು ಮಾತನಾಡಿಸಿದ ಕಲಾಕ್ಷೇತ್ರದ ಅಂಗಳ ಆ ದಿನ ಉಸಿರು ನಿಂತ ಅಕ್ಕನ ಕಳೇಬರವನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಬಿಕ್ಕಳಿಸಿ ಅತ್ತಂತೆ ಕಾಣುತ್ತಿತ್ತು.

ಇವತ್ತಿಗೂ ಕಲಾಕ್ಷೇತ್ರ ಒಂದು ರೀತಿಯಲ್ಲಿ ನನ್ನ ಪಾಲಿಗೆ ಕರಾಳಕ್ಷೇತ್ರವಾಗಿ ಉಳಿದು ಬಿದ್ದಿದೆ. ಅಕ್ಕ ಸಿಕ್ಕ ನೆನಪು ಮತ್ತು ಅಕ್ಕ ಹೋದ ನೆನಪು ಎಲ್ಲದಕ್ಕೂ ಒಂದೇ ನಲ ಸಾಕ್ಷಿಯಾದದ್ದು ಮಾತ್ರ ನನ್ನ ಬದುಕಿನ ದುರಂತಗಳಲ್ಲೊಂದು, ವ್ಯಕ್ತಿಗಳ ಕೊಲ್ಲಬಹುದಷ್ಟೆ, ವಿಚಾರವಾದಕ್ಕೆ ಸಾವೆಂಬುದಲ್ಲಿದೆ? ಅಕ್ಕನ ನೆನಪು ಹತ್ತಿದಾಗಲೆಲ್ಲಾ ನನ್ನನ್ನು ತುಸುವೇ ಸಂತೈಸಲು ಆಕೆಯೊಂದಿಗೆ ತೆಗೆಸಿಕೊಂಡ ಭಾವಚಿತ್ರ ಮಾತ್ರ ನನ್ನೊಡನಿದೆ. ಅಕ್ಕ ನನ್ನೊಡನೆ ನಿಂತು ನಗುತ್ತಲಿದ್ದಾಳೆ, ಭಾವಚಿತ್ರದೊಳಗೂ ಮತ್ತು ನನ್ನೊಳಗೂ...,

- ಅಪ್ಪಗೆರೆ ಲಂಕೇಶ್

ಕನ್ನಡ ಮಣ್ಣಿನ ಅಸ್ಮಿತೆ ಗೌರಿ ಲಂಕೇಶ್ ಪುಸ್ತಕದಿಂದ
ಸಂಪಾದಕರು: ವಿ.ಆರ್. ಕಾರ್ಪೆಂಟರ್

© Copyright 2022, All Rights Reserved Kannada One News