ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

Updated : 05.09.2022

ಅದು 2011ನೇ ಇಸವಿಯ ಮೇ ತಿಂಗಳು. ಆಕಸ್ಮಿಕವಾಗಿ ಶಿವಸುಂದರ್ ಅವರನ್ನು ಭೇಟಿಯಾದಾಗ ಅವರು ನನ್ನನ್ನು ಗೌರಿ ಲಂಕೇಶ್ ಕಛೇರಿಗೆ ಕರೆದುಕೊಂಡು ಹೋಗಿದ್ದರು. ಮೊದಲ ಬಾರಿ ಗೌರಿ ಲಂಕೇಶರನ್ನು ಮುಖತಃ ಭೇಟಿಯಾಗಿದ್ದೆ. ಪರಿಚಯವಾದೊಡನೆ 'ನಿಮ್ಮ ಲೇಖನಗಳು ಚೆನ್ನಾಗಿದೆ. ಮುಂದುವರೆಸಿ' ಎಂದು ಹಾರೈಸಿದ್ದರು.

ಮುಂದೆ ಗೌರಿ ಲಂಕೇಶರು ಇಷ್ಟು ಹತ್ತಿರವಾಗುತ್ತಾರೆ ಎಂದು ಕನಸು ಮನಸಿನಲ್ಲಿಯೂ ಅನಿಸಿರಲಿಲ್ಲ. ಅವರ ತಾಯಿ ವಾತ್ಸಲ್ಯ ನನ್ನನ್ನು ಅವರ ಮಗನಾಗಿಸದೆ ಬಿಡಲಿಲ್ಲ. ಗೌರಮ್ಮ ಇದ್ದದ್ದೇ ಹಾಗೆ ಸುಮಾರು 8 ವರ್ಷಗಳಿಂದ ಕಳೆದ ವಾರದವರೆಗೂ ನಾನು ಕಳಿಸಿದ್ದ ಲೇಖನ, ಕವನ ಹಾಗೂ ಕಥೆಗಳಲ್ಲಿ ಒಂದನ್ನೂ ಬಿಡದೇ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ಇಂದು ನಾನು ಒಬ್ಬ ಬರಹಗಾರನಾಗಿ ಗುರುತಿಸಿಕೊಂಡಿರುವುದಕ್ಕೆ ಪ್ರಮುಖ ಕಾರಣ ಗೌರಿ ಲಂಕೇಶ್, ಅದೆಷ್ಟರ ಮಟ್ಟಿಗೆ ಗುರುತಿಸಿದರೆಂದರೆ ಅವರಿಲ್ಲದ ಈ ಹೊತ್ತಿನಲ್ಲಿಯೂ ಅವರ ಬಗ್ಗೆಯೇ ಬರೆಯುವಷ್ಟು.

ಗೌರಿ ಲಂಕೇಶ ಎಂದೊಡನೆ ನನಗೆ ನೆನಪಾಗುವುದು ಜನಪರ ಕಾಳಜಿ. ನೊಂದವರ ಪರವಾದ ದನಿ. ನೂರಾರು ಉದಾಹರಣೆಗಳನ್ನು ಹೇಳಬಹುದು. ಎರಡು ವರ್ಷಗಳ ಹಿಂದೆ ಚಿತ್ರದುರ್ಗದ ಚಳ್ಳಕೆರ ತಾಲೂಕಿನ ಕೋನಿಗರಹಳ್ಳಿ ಎಂಬಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ್ದರು. ದಲಿತರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿಗೆ ಭೇಟಿ ನೀಡಿದ್ದ ನಾನು ಸುದೀರ್ಘವಾದ ವರದಿ ಮಾಡಿಕೊಂಡು ಬಂದಿದ್ದೆ. ಗೌರಮ್ಮನಿಗೆ ಇದನ್ನು ತಿಳಿಸಿದಾಗ ಇನ್ನೇನು ಪತ್ರಿಕೆ ಪ್ರಿಂಟಿಗೆ ಹೋಗುತ್ತಿತ್ತು. ಆದರೂ ತಮ್ಮ ಕಾಲಂ ಕಡಿಮೆ ಮಾಡಿ ಅದರ ಕೆಳಗೆ ಅದನ್ನ ಪ್ರಕಟಿಸೋಣ ಎಂದರು. ನಾನು 'ವರದಿ 1000 ಪದಗಳನ್ನ ಮೀರತ್ತೆ' ಎಂದೆ. “ಮರಿ, ನೀನು ಕಳಿಸು. ನಾನು ನೋಡುತ್ತೇನೆ' ಎಂದಿದ್ದರು. ಪತ್ರಿಕೆ ಪ್ರಕಟವಾದಾಗ `ವರದಿ ಸಂಪೂರ್ಣ ಪ್ರಕಟವಾಗಿತ್ತು. ಕರೆ ಮಾಡಿ 'ಥ್ಯಾಂಕ್ಸ್ ಎಂದೆ. ಅಮ್ಮ 'ಥ್ಯಾಂಕ್ಸ್ ಹೇಳಿ ದಲಿತರಿಂದ ನನ್ನನ್ನ ದೂರ ಮಾಡ್ತಾ ಇದಿಯಾ ಅಂದ್ರು. ನನಗೆ ನನ್ನ ತಪ್ಪು ಅರಿವಾಗಿತ್ತು.

ಅದು ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ದಿನ. ಸ್ನೇಹಿತರೆಲ್ಲ ದುಃಖತಪ್ತರಾಗಿ ತಡರಾತ್ರಿಯಲ್ಲಿ ನಿದ್ದೆ ಬಾರದೆ ಕುಳಿತಿದ್ದೆವು. ಗೌರಮ್ಮ ಕರೆ ಮಾಡಿದರು “ನೀನು ಮಲಗಿರಲ್ಲ ಅಂತ ಗೊತ್ತು. ನನಗೆ ಅಳು ತಡೆಯಲಾಗಲಿಲ್ಲ. ಅವರೂ ಆ ಕಡೆಯಿಂದ ಮಾತಾಡಲಿಲ್ಲ. ನಾನು ಅಕ್ಷರಶಃ ವ್ಯಾಘ್ರನಾಗಿದ್ದೆ. ಈ ಪಾಪಿಗಳನ್ನು ಸುಟ್ಟು ಬಿಡಬೇಕು. ಎಂದೆಲ್ಲಾ ಅರಚಾಡಿದ್ದೆ. ಅಮ್ಮ 'ಪೆನ್ ತಗೋ. ರೋಹಿತ್ ಬಗ್ಗೆ ಏನಾದರೂ ಬರೆ' ಎಂದರು. 'ರೋಹಿತ್ ವೇಮುಲನನ್ನು ಬದುಕಿಸೋಣ' ಲೇಖನ ಬರೆದು ಮುಗಿಸಿದೆ. ಆಶ್ಚರ್ಯವೆಂದರೆ ಅದರಲ್ಲೆಲ್ಲೂ ನಾನು ವ್ಯಾಘ್ರನಾಗಿರಲಿಲ್ಲ. ಕರೆ ಮಾಡಿ ಅಮ್ಮನಿಗೆ 'ಥ್ಯಾಂಕ್ಸ್' ಹೇಳಿದೆ. ಆ ಕಡೆಯಿಂದ `ನಿನ್ನೊಳಗೆ ಯಾವತ್ತೂ ಇನ್ನೊಬ್ಬರನ್ನು ಕೊಲ್ಲುವ ಮಾತೂ ಸಹ ಬರಬಾರದು ಎಂದಿದ್ದರು.

ಅಮ್ಮನ ಜೊತೆ ಗುದ್ದಾಡಿದ್ದೂ ಇದೆ. ಬಡ್ತಿ ಮೀಸಲಾತಿ ವಿರುದ್ಧವಾಗಿ ಬರೆದಿದ್ದರು. ನಾನು, ಉಮಾಶಂಕರ್‌ ಗೌರಮ್ಮನೊಂದಿಗೆ ವಾದಕ್ಕಿಳಿದಿದ್ದವು. ಅಮ್ಮ ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಗೌರಮ್ಮನಂತೋರೆ ಹೀಗೆ ಮಾತಾಡಿದರೆ ಹೇಗೆ? ನಮ್ಮ ಆಪ್ತ ವಲಯದಲ್ಲಿ ಚರ್ಚೆ ಮುಂದುವರೆಯಿತು. ವಾರದ ನಂತರ ತಣ್ಣಗಾಯಿತು. ತಿಂಗಳ ನಂತರ ಒಂದು ಕಾರ್ಯಕ್ರಮದಲ್ಲಿ ಸಿಕ್ಕ ಗೌರಮ್ಮ 'ಮರಿ, ಸಾರಿ ಕಣೋ, ಬಡ್ತಿ ಮೀಸಲಾತಿ ವಿಚಾರದಲ್ಲಿ ನಾನು ಸ್ವಲ್ಪ ತಪ್ಪು ತಿಳಿದಿದ್ದೆ. ಸಮಾನತೆ ಬೇಕೆಂದರೆ ಬಡ್ತಿ ಮೀಸಲಾತೀನೂ ಬೇಕು ಎಂದಿದ್ದರು. ನಾನು “ನೀವಿನ್ನು ಅದನ್ನ ಮರೆತಿಲ್ವ?' ಎಂದೆ. 'ನಾವು ಮಾಡಿದ ಕರೆಕ್ಟ್‌ಗಳನ್ನ ಮರೆಯಬೇಕು ಮರಿ. ಎಡವಟ್ಟನ್ನಲ್ಲ' ಎಂದು ನಕ್ಕಿದ್ದರು. ನಾನೂ ನಕ್ಕಿದ್ದೆ. ಗೌರಮ್ಮ ಎಂದಿಗೂ ತಳಸಮುದಾಯಗಳ ವಿಚಾರಕ್ಕೆ ಬಂದಾಗ ಅದರಲ್ಲಿ ಸಮಂಜಸವಾದುದನ್ನು ಒಪ್ಪಿಕೊಳ್ಳಲು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮ ಅಭಿಪ್ರಾಯಗಳನ್ನು ತಳಸಮುದಾಯದ ಅಭಿಪ್ರಾಯಗಳನ್ನು ಆಲಿಸಿ ತೀರ್ಮಾನಿಸುತ್ತಿದ್ದರು.

ಸಂಘ ಪರಿವಾರದವರು ತಮ್ಮ ಆರ್ಗನೈಸರ್ ಪತ್ರಿಕೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಹಿಂದೂ ಧರ್ಮದ ಸಂತ ಎಂದು ಬಿಂಬಿಸಿದಾಗಂತು ಬಹಳಷ್ಟು ಡಿಸ್ಟರ್ಬ್ ಆಗಿದ್ದರು. ಮೋಹನ್ ಭಾಗವತ್ ಅಂಬೇಡ್ಕರರ ಬಗ್ಗೆ ಅವರು ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸಲು ಬಯಸಿದ್ದರು' ಎಂಬ ಸುಳ್ಳು ಸುಳ್ಳೇ ಹೇಳಿದಾಗ, ಗೌರಮ್ಮ `ಅಂಬೇಡ್ಕರರು ಅಶೋಕ ಸ್ತಂಭವನ್ನು ಈ ದೇಶದ ಲಾಂಛನವಾಗಿಸಿದವರು. ಅದು ಹೇಗೆ ಭಗವಾಧ್ವಜ ಒಪ್ಪಿಕೊಳ್ಳುತ್ತಾರೆ' ಎಂದು ಕೆಂಡಾಮಂಡಲವಾಗಿದ್ದು ನನ್ನ ಕಣ್ಣಿಗೆ ಕಟ್ಟಿದಂತಿದೆ. 'ನನ್ನನ್ನು ನನ್ನವರು ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ಶತ್ರುಗಳು ಚೆನ್ನಾಗಿ ಅರ್ಥ ಮಾಡಿಕೊಂಡರು' ಎಂಬ ಅಂಬೇಡ್ಕರರ ಮಾತನ್ನು ಉದಾಹರಿಸುತ್ತಾ ನೊಂದುಕೊಂಡಿದ್ದರು. ಕಡೆಯ ಉಸಿರಿರುವವರೆಗೂ `ನೀಲಿ-ಕೆಂಪು' ಒಂದಾಗಬೇಕೆಂದೇ ಬಯಸಿದ್ದರು. ಅಂಬೇಡ್ಕರಾದಿ ಮತ್ತು ಕಮ್ಯುನಿಸ್ಟರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು. ಈ ದೇಶದ ಶೋಷಿತರ ವಿಮೋಚನೆ ಪ್ರಗತಿಪರ ಶಕ್ತಿಗಳ ಒಗ್ಗಟ್ಟಿನಲ್ಲಿದೆ ಎಂದು ಅದಮ್ಯವಾಗಿ ನಂಬಿದ್ದರು. ಆ ಕಾರಣಕ್ಕಾಗಿಯೇ ಚಲೋ ಉಡುಪಿ ಚಳುವಳಿಯ ಉದ್ದಕ್ಕೂ ನಮಗೆ ಮಾರ್ಗದರ್ಶನ ಮಾಡುತ್ತಾ ನಮ್ಮೊಂದಿಗಿದ್ದರು. ಅವರು ಬೇಲೂರಿನಲ್ಲಿ ಮಾಡಿದ ಭಾಷಣ ನನ್ನ ಕಿವಿಗಳಲ್ಲಿ ಈಗಲೂ ತಮಟೆನಾದದಂತಿದೆ.

ಕನ್ನಯ್ಯಾ, ಜಿಗ್ನೇಷ್, ಶೆಹ್ಲಾ ರಷೀದ್‌, ಉಮರ್ ಅವರನ್ನು ತಮ್ಮ ಮಕ್ಕಳೆಂದು ಬರೆದುಕೊಂಡಾಗ ನಾನು? ಎಂದು ಪ್ರಶ್ನಿಸುತ್ತಿದ್ದೆ. ನನ್ನಂತೆಯೇ ಉಮಾಶಂಕರ್, ಹುಲಿಕುಂಟೆ ಮೂರ್ತಿ, ಭಾಸ್ಕರ್ ಪ್ರಸಾದ್ ಸಹ. ಲವ್ ಯು ಟೂ' ಕಣೋ ಅಂದು ನಮ್ಮನ್ನು ಸುಮ್ಮನಿರಿಸುತ್ತಿದ್ದದ್ದು ಥೇಟ್ ಅಮ್ಮನ ರೀತಿಯಲ್ಲಿಯೇ. ಒಮ್ಮೆ ಕನ್ನಯ್ಯ-ಜಿಗ್ನೇಷ್ ಗೆ ಬಟ್ಟೆ ತಂದುಕೊಟ್ಟಾಗ ನಾನು ಜಗಳವಾಡಿದ್ದೆ. ಅದಕ್ಕೆ ನನಗೊಂದು ಜೊತೆ ಬಟ್ಟೆ ತಂದಿದ್ದರು. ಆದರೆ ಅಳತೆ ನನಗೆ ಸರಿಹೊಂದಲಿಲ್ಲ. ಪ್ಯಾಂಟನ್ನು ಉಮಾಶಂಕರ್ ಹೊಡೆದುಕೊಂಡರು. ಶರ್ಟ್ ಹುಲಿಕುಂಟೆ ಮೂರ್ತಿ ಪಾಲಾಯಿತು. ನನಗೆ ಇನ್ನೊಂದು ಸಾರಿ ಕೊಡಿಸುತ್ತೀನಿ ಎಂದಿದ್ದರು. ಆದರೆ ಆ ಕಾಲ ಕೂಡಿ ಬರಲೇ ಇಲ್ಲ. ರಚ್ಚೆ ಹಿಡಿಯೋಣವೆಂದರೆ ಅಮ್ಮ ನಮ್ಮೊಂದಿಗಿಲ್ಲ.

ಬಹಿರಂಗವಾಗಿ ಆಗ್ರಹಿಸುವುದೊಂದಿದೆ ಅದು ಗೌರಮ್ಮನನ್ನು ಕೊಂದವರಿಗೆ ಶಿಕ್ಷೆಯಾಗಬೇಕು. ಗಲ್ಲು ಶಿಕ್ಷೆಯಾಗಬೇಕೆಂದು ಕೆಲವರು ಹೇಳುತ್ತಿದ್ದಾರೆ. ಆದರೆ ಸ್ವತಃ ಗೌರಮ್ಮನೇ ಮರಣದಂಡನೆಯ ವಿರುದ್ಧವಿದ್ದವರು. ಅಂತರಂಗದ ಆಗ್ರಹವೊಂದಿದೆ ರೋಹಿತ್‌ ವೇಮುಲ ತನ್ನ ಬಲಿದಾನದ ಮೂಲಕ ನಮಗೇನು ತಿಳಿಸಿದ್ದನೋ ಅದನ್ನೇ ಗೌರಮ್ಮನ ಹತ್ಯೆಯೂ ನಮಗೆ ತಿಳಿಸುತ್ತಿದೆ. ನೀಲಿ ಕೆಂಪು-ಹಸಿರು ಎಲ್ಲಾ ಧಾರೆಗಳೂ ಸೇರಿ ಮಳೆಬಿಲ್ಲಾಗಬೇಕು. ಹೀಗಾದಾಗ ಮಾತ್ರ 'ನಾನೂ ಗೌರಿ, ನಾವೆಲ್ಲ ಗೌರಿ' ಆಗಬಲ್ಲೆವು. ಪದೇ ಪದೇ 'ಅಹಂ' ಮುಂದು ಮಾಡಿಕೊಂಡು ಕುಂತರ ನಾಳೆ 'ನಾನೂ ವಿಕಾಸ್ ಮೌರ್ಯ, ನಾವೆಲ್ಲ ವಿಕಾಸ್‌ ಮೌರ್ಯ' ಎನ್ನಬೇಕಾಗುತ್ತದೆ. ಆಗ ನಾನಿರುವುದಿಲ್ಲ.

- ವಿಕಾಸ್ ಆರ್ ಮೌರ್ಯ

ಕನ್ನಡ ಮಣ್ಣಿನ ಅಸ್ಮಿತೆ ಗೌರಿ ಲಂಕೇಶ್ ಪುಸ್ತಕದಿಂದ
ಸಂಪಾದಕರು: ವಿ.ಆರ್. ಕಾರ್ಪೆಂಟರ್

© Copyright 2022, All Rights Reserved Kannada One News