ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರು

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರು

Updated : 26.07.2022

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಪಾದಿಸಿ ಮುಂಬೈ ಪೊಲೀಸರಿಗೆ ಎರಡು ದೂರುಗಳನ್ನು ನೀಡಲಾಗಿದೆ. ಈ ಬಗ್ಗೆ ಎಫ್‍ಐಆರ್ ದಾಖಲಿಸುವಂತೆ ಕೋರಲಾಗಿದೆ.

ಮುಂಬೈ ಹೊರವಲಯದ ಒಂದು ಸರ್ಕಾರೇತರ ಸಂಸ್ಥೆಯ ಪದಾಧಿಕಾರಿಯೊಬ್ಬರು ಮತ್ತು ಮಹಿಳಾ ವಕೀಲರೊಬ್ಬರು ಈ ಸಂಬಂಧ ಚೆಂಬೂರ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

ಈ ನಟ ನಗ್ನಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೇ, ಮಹಿಳೆಯರ ಘನತೆಯನ್ನು ಅವಮಾನಿಸಿದ್ದಾರೆ ಎಂದು ಎನ್‍ಜಿಓ ಪದಾಧಿಕಾರಿ ದೂರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಮತ್ತು ಭಾರತೀಯ ದಂಡಸಂಹಿತೆ ಅನ್ವಯ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಕೋರಿದ್ದಾರೆ.

ಮಾಜಿ ಪತ್ರಕರ್ತೆ ಹಾಗೂ ವಕೀಲೆಯೊಬ್ಬರು ಸಲ್ಲಿಸಿದ ಮನವಿಯಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತರುವ ಉದ್ದೇಶಕ್ಕಾಗಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.

ಈ ಬಗ್ಗೆ ತನಿಖೆ ನಡೆದಿದ್ದು, ಇನ್ನೂ ಎಫ್‍ಐಆರ್ ದಾಖಲಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

© Copyright 2022, All Rights Reserved Kannada One News