Flash News:
ಮುಳ್ಳು: ದಯಾನಂದ ಅವರ ಕಥೆ

ಮುಳ್ಳು: ದಯಾನಂದ ಅವರ ಕಥೆ

Updated : 02.10.2022

‘ನಾನು ಬೆಂಕಿ ನೋಡಿದೆ. ನಿಮಗಾಗಿ ಅಲ್ಲಿಂದ ಏನಾದರೂ ಸುದ್ದಿ ತರುವೆ,
ಇಲ್ಲವೇ ನಿಮಗೆ ಚಳಿ ಕಾಯಿಸಿಕೊಳ್ಳಲು ಕೆಂಡವನ್ನಾದರೂ ತರುವೆ’
*
‘ಎಲ್ಲರೆದೆಯ ಕಿಚ್ಚೂ ಬೆಳಕಾಗಬಲ್ಲದು,
ಕರುಣೆ ಇದ್ದರೆ ಬೆಂಕಿಗೆ’

1
ಬಾಗೀ ಬಾಗೀ ಬಂಗಾರ ತೂಗಿ ಬೆಳ್ಳಿ ಮೂಡಿ ಪಾಳ್ಯದ ಬಾನೂ ಬೆಳಗಾಗಲು ಶುರುವಾಗಿತ್ತು. ಅಲ್ಲಾ ಕೂಗುವುದಕ್ಕಿಂತ ತಾಸು ಮೊದಲೇ ಎದ್ದಿದ್ದ ಬಷೀರ ಮನೆ ಮುಂದಲ ವಪ್ಪಾರದಲ್ಲಿ ಕುಕ್ಕರುಗಾಲಲ್ಲಿ ಕುಂತು ಬೀಡಿ ಸೇದುತ್ತಿದ್ದ. ಆ ಅರೆಗತ್ತಲ ಮುಂಜಾವಲ್ಲಿ, ಆ ಬೀಡಿ ಕಿಚ್ಚಿನ ಬೆಳಕು ಬಷೀರನ ಮುಖವನ್ನು ಕೆಂಪಗೆ ಮಾಡುತ್ತಿತ್ತು. ಮೂಡಲು ಬೆಳ್ಳಗಾಗುತ್ತಿರುವಷ್ಟರಲ್ಲಿ ಎದ್ದು ಈಚೆಗೆ ಬಂದ ಬಷೀರನ ಹೆಂಡತಿ ಕೈರು, ‘ಯಾಕ್ ಇಷ್ಟ್ ಬ್ಯಾಗ್ನೆ ಎದ್ದ್ ಕುಂತಿದ್ದೀಯಾ’ ಎಂದಂದು, ಬಷೀರ ಅವಳ ಮಾತಿಗೆ ಆ ಊ ಅನ್ನದಿರಲು ಸುಮ್ಮಗೆ ಬಯಲ ಕಡೆಗೆ ನಡೆದಳು.

ಅಷ್ಟೊತ್ತಿಗಾಗಲೆ ಮಸೀದಿಯ ಮೈಕು ಕುಟ್ ಕುಟ್ ಮಾಡಿತು. ‘ಅಲ್ಲಾ ಹೋ ಅಕ್ಬರ್’ ಎನ್ನುವಷ್ಟರಲ್ಲೇ ಹೊಸಳ್ಳಿ ಗೇಟಿನ ಕಡೆ ಆಲ್ಟ್ ಬಸ್ಸು ಡುರ್ರ್ ಎಂದ ಸದ್ದು ಕೇಳಿತು. ಬಯಲಿಂದ ಬಂದು ನೋಡಿದರೂ ಬಷೀರ ಈ ಹಿಂದೆ ಇದ್ದ ಅವಸ್ಥೆಯಲ್ಲೇ ಇದ್ದುದನ್ನು ನೋಡಿ, ‘ಏನಾಯ್ತು ಈವಯ್ಯಂಗೆ’ ಎಂದುಕೊಂಡು ಕಾಲು ತೊಳೆದುಕೊಂಡು ಒಳಕ್ಕೆ ಹೋದ ಕೈರು, ಟೀ ಬೋಸಿಗೆ ನೀರಿಟ್ಟು, ಹಾಲಿನ ಪಾತ್ರೆ ನೋಡಿದಳು. ಒಲೆಯ ಮೇಲೆ ರಾತ್ರಿಯ ಕೆಂಡದ ಬಿಸಿಗೆ ಬೆಚ್ಚಗಿದ್ದ ಹಾಲಿಗೇ ಇರುವೆಗಳು ಸಾಲುಗಟ್ಟಿದ್ದವು. ರಾತ್ರಿಯಿಡೀ ಹರಿದಾಡಿದ್ದ ಇರುವೆಗಳು ಒಲೆಯ ಮೇಲಿನ ಬೂದಿಧೂಳಿನ ಮಧ್ಯೆ ಸಣ್ಣ ದಾರಿ ಮಾಡಿಕೊಂಡಿದ್ದವು. ಹಾಲಿನ ಪಾತ್ರೆಯಲ್ಲಿದ್ದ ಇರುವೆಗಳನ್ನು ಎತ್ತಿ ಹಾಕುವಷ್ಟರಲ್ಲಿ ಕೈರುಗೆ ಸಾಕುಸಾಕಾಯಿತು. ಕೊನೆಗೂ ಟೀ ಮಾಡಿ ತಂದು ಬಷೀರನ ಕೈಗಿಟ್ಟು, ಅವನ ಕುತ್ತಿಗೆ ನೇವರಿಸಿ, ‘ಯಾಕೇ, ಉಷಾರಾಗಿದ್ದೀಯಾ ಯೆಂಗೆ’ ಎಂದಳು.
ಬಷೀರ ಕೈರು ಮುಖ ನೋಡಿದ. ಕಿವಿ, ಕುತ್ತಿಗೆ ಸೇರಿಸಿ ಸುತ್ತಿದ್ದ ದುಪಟ್ಟಾದ ಹಿಂದೆ ಕೈರು ಮುಖ ಚಿಕ್ಕದಾಗಿ ಕಂಡಿತು. ಅವಳ ಮುಖದ ಮೇಲೆ ಸುಕ್ಕುಗಟ್ಟಲು ಶುರುವಾದ ರೇಖೆಗಳನ್ನೇ ದಿಟ್ಟಿಸಿದ ಬಷೀರ. ‘ಯಾಕೆ ಇಸ್ಟ್ ವರ್ಸ್‌ದಿಂದ ನೋಡ್ತಿಲ್ವಾ? ಈಗೇನು ಯಿಂಗೆ ನೋಡ್ತಿದ್ದೀಯಾ’ ಎಂದಳು ಕೈರು ಸಣ್ಣಗೆ ನಕ್ಕು. ಅವಳ ಆ ನಗುವೂ, ಟೀಯ ಬಿಸಿಯೂ ಅವನನ್ನು ಗೆಲುವಾಗಿಸದಿದ್ದುದನ್ನು ಕಂಡ ಕೈರು ಅವನ ಹೆಗಲ ಮೇಲೆ ಕೈ ಇಟ್ಟು, ಕುತ್ತಿಗೆ ಒತ್ತಿ, ‘ಯಾಕಪ್ಪಾ ಏನಾಯ್ತು’ ಎಂದಳು. ಏನೋ ಹೇಳಬೇಕೆಂದು ಬಾಯಿ ತೆರೆದ ಬಷೀರ, ಒಳಗಿಂದ ಗಿಡ್ಡಿ, ಸಲ್ಲೂ, ವಲಿ ಎದ್ದು ಬಂದಿದ್ದಕ್ಕೆ ಸುಮ್ಮನಾಗಿ ಟೀ ಹೀರಿದ. ಕೈರು ಬೇಸರದಲ್ಲೇ ಟೀ ಮುಗಿಸಿ ಒಳಕ್ಕೆ ಹೋದಳು. ಕಣ್ಣುಜ್ಜಿಕೊಳ್ಳುತ್ತಾ ಹೊರಗೆ ಬಂದ ಗಿಡ್ಡಿ, ಸಲ್ಲೂ, ವಲಿ ಮೂವರೂ ಮೂರು ದಿಕ್ಕಾಗಿ, ಒಂದಕ್ಕೆ ಹೋಗಿಬಂದು ವಪ್ಪಾರದ ಚಪ್ಪಡಿಕಲ್ಲ ಜಗಲಿಗೆ ಕಾಲು ಇಳೇ ಬಿಟ್ಟು ಕುಂತು, ಅವ್ವ ಕೈರು ಒಳಗಿಂದ ತರಲಿರುವ ಟೀನೀರಿಗಾಗಿ ಕಾದರು. ಬಷೀರ ಎದ್ದು ಇನ್ನೊಂದು ದಿಕ್ಕಿಗೆ ಸೈಕಲ್‌ ತಳ್ಳಿಕೊಳ್ಳುತ್ತಾ ಹೋದ. ಬಷೀರ ಟೀ ಕುಡಿದು ಇಟ್ಟು ಹೋಗಿದ್ದ ಲೋಟಕ್ಕೆ ಇರುವೆಗಳು ಅದಾಗಲೇ ಮೂತಿ ಇಡುತ್ತಿದ್ದವು. ಹುಂಜ ಕೂಗಿದ ಸದ್ದಿಗೆ ಪಂಜರ ಕೊಡವಿಕೊಂಡು ಹೊರಕ್ಕೆ ಬಂದ ಕೋಳಿ ರೆಕ್ಕೆ ಬಡಿದು ‘ಕೊಕ್ಕೊಕ್ಕೋ’ ಎಂದು ಪಿಳ್ಳೆಗಳೊಂದಿಗೆ ಕೆಂಬಾರಳ್ಳದ ಕಡೆಗೆ ಹಾರಿತು.

ಮಕ್ಕಳಿಗೆ ಟೀ ಕಾಯಿಸಲು ಕೆಂಡಕ್ಕೆ ಪುಳ್ಳೆ ಕೊಟ್ಟು ಬೆಂಕಿ ಮಾಡಲು ಉಸಿರ ತ್ರಾಣವನ್ನೆಲ್ಲಾ ಒತ್ತಿ ಊದುಗೊಳಪೆಗೆ ಹಾಕುತ್ತಿದ್ದ ಕೈರು ಮನಸ್ಸು ಬಷೀರ ಮಂಕಾಗಿದ್ದ ಕಾರಣ ತಿಳಿಯದೆ ಉಸಿರಿಗಿಂತಲೂ ಅತಿಯಾಗಿ ವಿಲವಿಲಗೊಳ್ಳುತ್ತಿತ್ತು. ವ್ಯಾಪಾರದಲ್ಲಿ ಕೈಸುಟ್ಟುಕೊಂಡನೋ, ವಯಸ್ಸಿಗೆ ಬಂದಿರುವ ಮಗಳ ಚಿಂತೆಯೋ ಅಥವಾ ಇವ್ಯಾವೂ ಅಲ್ಲದೆ ಇನ್ನೇನಾದರೂ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದಾನೋ ಹೇಗೋ ಎಂದು ಆ ಕಾಣದ ಚಿಂತೆಯೊಳಗೆ ಚಿಂತೆಯಾದಳು. ಇತ್ತೀಚೆಗೆ ತನಗೆ ಬೀಳುತ್ತಿರುವಂಥ ಕನಸುಗಳು ಇವನಿಗೂ ಬೀಳುತ್ತಿವೆಯೋ ಏನೋ ಎಂದು ಇನ್ನಷ್ಟು ಗಾಬರಿಗೊಂಡಳು. ಗಿಡ್ಡಿ ಬಂದು ಒಲೆ ಮುಂದೆ ಕುಂತು, ಕೈಯುಜ್ಜಿ ಬೆಂಕಿಕಾಯಿಸಿಕೊಳ್ಳುವಾಗ ಅವಳ ಮುಖವನ್ನೇ ನೋಡುತ್ತಾ, ಅವಳ ಮುಖ ತನ್ನ ಮುಖದಂತೆಯೇ ಅನಿಸಿ, ಎದುರಿಗೆ ಕುಂತಿರುವುದು ಗಿಡ್ಡಿಯೋ, ನಾನೋ ಎಂದು ಗೊಂದಲಕ್ಕೆ ಬಿದ್ದಳು.ಅರಸೀಕೆರೆ ಬಸ್ಸು ಹೊಸಳ್ಳಿ ಗೇಟಿಗೆ ಬರುವ ಹನ್ನೊಂದರ ಹೊತ್ತಿಗೆ ಬಷೀರ ಸೈಕಲ್ ತಳ್ಳಿಕೊಂಡು ಬಂದು ಮನೆ ಎದುರಿನ ತೆಂಗಿನಮರಕ್ಕೆ ಒರಗಿಸಿದಾಗ ಅದು ‘ಟಣ್ ಟಣ್.. ಧಡ್ಕ್..’ ಎಂದಿತು. ಪಿಳ್ಳೆಗಳನ್ನು ಕಟ್ಟಿಕೊಂಡು ಸಂಪ್ಲು ಕೆದರುತ್ತಿದ್ದ ಕೋಳಿ ಆ ಸದ್ದಿಗೆ ಬೆಚ್ಚಿ ‘ಕ್ವಕ್ ಕ್ವಕ್’ ಎಂದು ಪಿಳ್ಳೆಗಳ ಕೂಗಿ ಬೇಲಿ ಸಾಲು ಸೇರಿತು. ಜಗಲಿ ಮೇಲೆ ಕುಂತು ಹುಣಸೇಹಣ್ಣು ಬಿಡಿಸುತ್ತಾ, ಹೂಮಾಡಿ ಒಟ್ಟುತ್ತಿದ್ದ ಗಿಡ್ಡಿ ಓಡಿ ಬಷೀರನ ಕೈಯಿಂದ ಚೀಲ ಈಸಿಕೊಂಡು, ‘ಕೈರಮ್ಮೀ, ಮೀನೂ’ ಎಂದು ಕೂಗುತ್ತಾ ನೆರಕೆಗೆ ನಡೆದಳು. ಗಾಳದ ನೂಲ ಸುತ್ತಿ ವಪ್ಪಾರ ತುದಿಗೆ ಸಿಕ್ಕಿಸಿ ಬಷೀರ ಬಚ್ಚಲಿಗೆ ಹೋದ. ಹಿಂದೆಯೇ ಸಲ್ಲೂ, ವಲಿ ಮೀನುಜ್ಜುವ ಕೆಲಸಕ್ಕೆ ನಾ ಮುಂದು, ತಾ ಮುಂದು ಎಂದು ಓಡಿದರು.

ನೆರಕೆಯೊಳಗೆ ಖುಷ್ಬು ಬಾಲ ನೆಟ್ಟಗೆ ಮಾಡಿಕೊಂಡು ಸಲ್ಲೂ, ವಲಿಯರ ಕಾಲನ್ನು ತಿಕ್ಕುತ್ತಾ ಮಿಯಾಂಗುಡುತ್ತಿದ್ದಳು. ಸಲ್ಲು ಕಲ್ಲ ಮೇಲೆ ರಾಗಿ ಹಿಟ್ಟ ಹಾಕಿಕೊಂಡು ಮೀನ ಹುರುಪು ಉಜ್ಜಿಕೊಟ್ಟರೆ, ವಲಿ ಉಜ್ಜಿದ್ದ ಮೀನಿನ ರೆಕ್ಕೆ ಕತ್ತರಿಸಿ, ಕಿವುರು ತೆಗೆದು, ಕಳ್ಳು ಕಸಾಲೆ ಕಿತ್ತು ಅಚ್ಚುಕಟ್ಟಾದ ಮೀನನ್ನು ಬೋಸಿಗೆ ಹಾಕುತ್ತಿದ್ದ. ಬೋಸಿಗೆ ಬಿದ್ದ ಮೀನುಗಳನ್ನು ಗಿಡ್ಡಿ ಮತ್ತೆ ನೀರುಯ್ದುಕೊಂಡು ಉಜ್ಜಿ ತಿಕ್ಕುತ್ತಾ, ನೇರ್ಪು ಮಾಡಿ ಪಾತ್ರೆಗೆ ಹಾಕಿಕೊಳ್ಳುತ್ತಾ, ಎಷ್ಟು ಕಳ್ಳು ಕಸಾಲೆ ಬಿಸಾಕಿದರೂ ಗಬಕ್ಕನೆ ನುಂಗಿ ಬರುತ್ತಿದ್ದ ಖುಷ್ಬು ಪಾತ್ರೆಗೆ ಬಾಯಾಕದಂತೆ ‘ಉಷ್.. ಉಷ್..’ ಎಂದು ಗದರುತ್ತಾ ಕುಂತಿದ್ದಳು.
ಸಲ್ಲೂ, ವಲಿ, ಗಿಡ್ಡಿ ಮೂವರೂ ಇತ್ತ ನೆರಕೆಯಲ್ಲಿ ಮೀನುಜ್ಜುವ ಸಂಭ್ರಮದಲ್ಲಿರಲು, ಅತ್ತ ಸ್ಕೂಲ್‌ಗೆ ಚಕ್ಕರ್ ಹೊಡೆದಿದ್ದ ಸಲ್ಲೂ, ವಲಿಯರನ್ನು ಎಳೆದು ತರಲು ಮೇಸ್ಟ್ರುಗಳು ಅಟ್ಟಿದ್ದ ನಾಲ್ಕು, ಐದನೇ ಕ್ಲಾಸಿನ ಎರಡು ಹೈಕಳು ಅಂಗಳಕ್ಕೆ ಬಂದು, ‘ಬಷೀರಣ್ಣೋ, ಸಲ್ಲೂ, ವಲಿ ಇಸ್ಕೂಲಿಗೆ ಬಂದಿಲ್ಲಾ’ ಎಂದು ಕೂಗಿದ್ದು ಬೀದಿಗೆಲ್ಲಾ ಕೇಳಲಾಗಿ, ಸಲ್ಲೂ, ವಲಿ ನೆರಕೆಯಿಂದಲೇ ಹಿತ್ತಲ ದಾರಿ ಹಿಡಿದು ಕೆಂಬಾರಳ್ಳದ ಪಾಲಾದರು.
‘ಇವು ಅಷ್ಟೋ, ಇಷ್ಟೋ ಓದುದ್ರೆ ಬಂಗ ತಪ್ತದೆ ಅಂದ್ಕಂಡ್ರೆ, ಇವುಕ್ಕೂ ಇಸ್ಕೂಲ್ಗೂ ಎಣ್ಣೆ ಸೀಗೆಕಾಯಿ’ ಎಂದುಕೊಂಡ ಬಷೀರ, ಮುಂದೇನು ಎಂಬಂತೆ ಅಂಗಳದಲ್ಲಿ ನಿಂತಿದ್ದ ಹೈಕಳನ್ನು, ‘ನಾಳಿಕ್ ಕಳುಸ್ತೀನಿ, ನಡ್ರಪ್ಪ’ ಎಂದಂದು ಸಾಗಾಕಿದ. ಓದಿನಲ್ಲಿ ಮುಂದಿದ್ದ ಗಿಡ್ಡಿ ಎರಡು ವರ್ಷದ ಹಿಂದೆ ಪಿಯುಸಿ ಮುಗಿಸಿ ಮುಂದೆ ಓದ್ತೀನಿ ಎಂದು ಹಠ ಹಿಡಿದಾಗ, ‘ತುಮ್ಕೂರ್‌ಗೋಗಿ ಓದಾದು ಸುಲ್ಬುದ್ ಮಾತಲ್ಲ ತಗಿ’ ಎಂದು ಅವಳ ಆಸೆಗೆ ನೀರೆರೆಚಿ ತಾನು ತಪ್ಪು ಮಾಡಿಬಿಟ್ಟೆನೇನೋ ಎಂದು ಬಷೀರನ ಮನಸ್ಸು ಕಳವಳಿಸಿತು.
ಮೀನೆಸರು ಒಲೆಯ ಮೇಲೆ ಕುದಿಯೇಳುವ ಹೊತ್ತಿಗೆ ಕೆಂಬಾರಳ್ಳಕ್ಕೆ ಬಿದ್ದಿದ್ದ ಸಲ್ಲೂ, ವಲಿ ನಿಧಾನಕ್ಕೆ ಮನೆಯ ಹೊಕ್ಕಿ ಅಡುಗೆ ಕೋಣೆ ಸೇರಿದ್ದರು. ಗಿಡ್ಡಿ ಹುಳಿಯನ್ನು ತಟ್ಟೆಗೆ ಹಾಕಿ, ‘ಸರ್ಯಾಗೈತಾ ನೋಡು’ ಎಂದು ಸಲ್ಲೂ ಕಡೆಗೆ ಕೊಟ್ಟಳು. ಅವನು ಮೂರು ಬೆರಳಿಂದ ಹುಳಿ ನೆಕ್ಕಿ, ‘ಉಪ್ಪು ಕಮ್ಮಿ’ ಎಂದಂದು ತಟ್ಟೆಯ ವಲಿಯ ಕಡೆಗೆ ತಳ್ಳಿದ. ಹುಳಿ ಕುಡಿದ ವಲಿ ‘ಸಾಕು ಸರಿಯಾಗೈತೆ’ ಎಂದ. ಅತ್ತ ಅನ್ನದ ಪಾತ್ರೆಯೂ ಉಕ್ಕಲು, ಗಂಜಿ ಬಸಿದು ಊಟಕ್ಕೆ ಅಣಿ ಮಾಡಿದಳು ಕೈರು. ಊಟಕ್ಕೆ ಕುಂತಾಗ ಅಪ್ಪ ಸ್ಕೂಲಿನ ಮಾತು ತೆಗೆದು ಬೈಯ್ಯುತ್ತಾನೇನೋ ಎಂದು ಸಲ್ಲೂ, ವಲಿ ಉಸಿರು ತಗೆಯದೆ ಕುಂತಿದ್ದರು. ಆದರೆ, ಬಷೀರ, ಕೈರು ಕೊನೆಗೆ ಗಿಡ್ಡಿಯೂ ಸ್ಕೂಲಿನ ಮಾತು ತೆಗೆಯಲಿಲ್ಲ. ಮೀನು ತಿನ್ನುವಾಗ ‘ಮುಳ್ಳು ಜಾಸ್ತಿ’ ಎಂದಳು ಗಿಡ್ಡಿ. ‘ನೋಡ್ಕಂಡು ತಿನ್ರೀ’ ಎಂದ ಬಷೀರ. ಅನ್ನ ಉಣ್ಣುವಾಗ ಗಂಟಲಿಗೆ ಮುಳ್ಳು ಚುಚ್ಚಿದಂತಾಯ್ತು ಬಷೀರಿಗೆ. ಎರಡು ಮಿದಿಕೆ ಅನ್ನ ಗಟ್ಟಿಮಾಡಿಕೊಂಡು ನುಂಗಿ ನೀರು ಕುಡಿದ. ಊಟ ಮುಗಿಸಿ ಹೊರಕ್ಕೆ ಹೋಗಿ ಬೀಡಿ ಸೇದಿ ಬಂದು ಹಾಗೇ ಜಗಲಿ ಮೇಲೆ ಒರಗಿಕೊಂಡ.
ಗಂಟಲಲ್ಲಿ ಮುಳ್ಳು ಸಣ್ಣಗೆ ಒತ್ತುತ್ತಲೇ ಇತ್ತು.

2
ವಪ್ಪಾರಲ್ಲಿ ಬಿದ್ದಿದ್ದ ಹುಣಸೇಹಣ್ಣಿನ ರಾಶಿಯ ಮಧ್ಯೆ ಗೋಣೀಚೀಲ ಹಾಸಿಕೊಂಡು ಗಿಡ್ಡಿ ಚಚ್ಚಿಕೊಡುತ್ತಿದ್ದ ಹುಣಸೇಹಣ್ಣ ಬಿಡಿಸಿ ತೆಕ್ಕೆ ಮಾಡುತ್ತಿದ್ದ ಕೈರು ಮನಸಲ್ಲಿ ರಾತ್ರಿ ಬಿದ್ದ ಕನಸುಗಳೇ ಹಗಲಲ್ಲೂ ಕುಣೀತಿದ್ದವು. ತಿಂಗಳ ಹಿಂದೆ ಗಿಡ್ಡಿ ಮೊಬೈಲಿನಲ್ಲಿ ತೋರಿಸಿದ್ದ ವಿಡಿಯೊ, ವಾರದ ಹಿಂದೆ ಟೀವಿಯಲ್ಲಿ ನೋಡಿದ ವಿಡಿಯೊಗಳೂ ಈ ಕನಸಿನ ಜತೆಗೇ ಕೂಡಿಕೊಂಡು ಕೈರು ಮನಸ್ಸು ಮೇಲೆಕೆಳಗಾಗುತ್ತಾ ಬೆವರುತ್ತಿತ್ತು. ಅವಳಿಗೆ ಬಿದ್ದ ಕನಸಲ್ಲಿ ಹತ್ತಾರು ಜನ ಆಗಂತುಕರು ಒಬ್ಬ ಮುದುಕ, ಒಬ್ಬ ಹುಡುಗಿಯ ಬೆನ್ನಟ್ಟಿದ್ದರು. ಆ ಮುದುಕ ಮತ್ತು ಹುಡುಗಿ ಅವರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದರು, ಓಡುತ್ತಿದ್ದರು, ಓಡುತ್ತಲೇ ಇದ್ದರು. ಇನ್ನೊಂದು ಕನಸಲ್ಲಿ ಊರಗಲ ಇದ್ದ ಜೈಲಿನಲ್ಲಿ ಮಕ್ಕಳನ್ನೆಲ್ಲಾ ಕೂಡಿ ಹಾಕಿದ್ದರು. ಅವರ ಕೈಕಾಲುಗಳಿಗೆ ಹೊರಲಾಗದ ಭಾರದ ಕಬ್ಬಿಣದ ಸರಳುಗಳನ್ನು ಹಾಕಲಾಗಿತ್ತು. ಬೆತ್ತಲೆಯಿದ್ದ ಆ ಮಕ್ಕಳು ಅಳುವುದನ್ನೂ ಮರೆತವರಂತೆ ನಿರ್ಜೀವ ಮುಖ ಹೊತ್ತು ನಿಂತಿದ್ದವು. ಆ ಜೈಲಿನ ಹೊರಗೆ ತಲೆ ಕೆದರಿಕೊಂಡು ಅಲೆಯುತ್ತಿದ್ದ ಆ ಮಕ್ಕಳ ಅವ್ವಂದಿರ ಎದೆಯಿಂದ ಹಾಲು ಸೋರೀ, ಸೋರೀ ನೆಲದಲ್ಲೆಲ್ಲಾ ಹರಿಯುತ್ತಿತ್ತು.
ಮತ್ತೊಮ್ಮೆ ಅದೇ ಕನಸುಗಳನ್ನು ಒಟ್ಟಿಗೆ ಕಂಡಂತೆ ಬೆಚ್ಚಿದ ಕೈರು, ಇದು ಕಂಡ ಕನಸೋ, ಗಿಡ್ಡಿ ಮೊಬೈಲ್‌ನಲ್ಲಿ ತೋರಿಸಿದ್ದೋ, ಟೀವಿಯಲ್ಲಿ ನೋಡಿದ್ದೋ ಅಥವಾ ಇದೆಲ್ಲಾ ನಿಜವೋ ಎಂದು ದಿಗಿಲುಗೊಂಡಳು. ಬಷೀರನೂ ಇಂಥದ್ದೇ ಕನಸನ್ನು ಕಂಡು ಮುಂಜಾವಿಗೇ ಎದ್ದು ಕಳವಳಿಸುತ್ತಾ ಜಗಲಿ ಮೇಲೆ ಕೂತಿರುತ್ತಾನೋ ಎಂದು ಆತಂಕಗೊಂಡಳು. ‘ಗೌರ್ಮೆಂಟ್‌ ಲೆಕ್ಕಾಚಾರ ಯಿಂಗೇ ಅಂತ ಯೇಳಕ್ಕಾಗಲ್ಲ, ಒಂದ್‌ ಆಡ್ರು ಪಾಸ್‌ ಮಾಡೀರೆ ಸಾಬ್ರೆಲ್ಲಾ ದೇಸ ಬಿಡ್ಬೇಕಾಯ್ತದೆ’ ಎಂದು ಕಲ್ಲೂರ ಸಂತೆಯ ಗುಂಪಲ್ಲಿ ಯಾರೋ ಹೇಳುತ್ತಿದ್ದುದ್ದು ನಿಜವೇ ಆಗಿಬಿಟ್ಟರೆ ನಾವೆಲ್ಲಾ ಹೋಗುವುದಾದರೂ ಎಲ್ಲಿಗೆ ಎಂದು ಕೈರು ಮನಸ್ಸು ಇನ್ನಿಲ್ಲದ ಹಾಗೆ ಒದ್ದಾಡಿತು. ಮನಸ್ಸಿನ ಒದ್ದಾಟಕ್ಕೆ ಹೊಟ್ಟೆ ಛಳಕು ಹತ್ತಿ ಬಚ್ಚಲಿಗೆ ಹೋಗಬೇಕೆಂದು ಎದ್ದವಳು, ಬೀದಿ ಕೊನೆಯಲ್ಲಿ ಸೈಕಲ್ಲಿನ ಮೇಲೆ ಬಷೀರ ಬರುತ್ತಿರುವುದ ಕಂಡು ಅಲ್ಲೇ ನಿಂತಳು.
‘ಮುಂದಿನ್ವಾರ ಮನೆ ನೋಡಾಕೆ ಗಂಡಿನ್ ಕಡೆವ್ರು ಬತ್ತಾರಂತೆ’ ಎನ್ನುತ್ತಾ ಸೈಕಲ್ಲು ಇಳಿದ ಬಷೀರ, ಕ್ಯಾರಿಯರ್‌ ಮೇಲಿದ್ದ ಸಣ್ಣ ಚೀಲವನ್ನು ಅಂಗಳಕ್ಕೆ ಇಳಿಸಿದ. ಹೊಟ್ಟೆ ಛಳುಕ ಸಾವರಿಸಿಕೊಂಡು ಕೈರು ಒಳಗೆ ಹೋಗಿ ನೀರಿನ ತಂಬಿಗೆ ಹಿಡಿದು ಬಂದಳು. ಹುಣಸೆಹಣ್ಣು ಚಚ್ಚುತ್ತಿದ್ದ ಗಿಡ್ಡಿ ಅಪ್ಪನ ಮಾತಿಗೆ ನಾಚಿಕೊಂಡು ಒಳಕ್ಕೆ ಓಡಬೇಕೆಂದುಕೊಂಡರೂ, ಹುಣಸೆಹಣ್ಣಿನ ರಾಶಿಯ ಕಡೆಗೆ ನಾಚಿಕೆಯನ್ನು ತಿರುವಿದಳು.
ಕೈರು ನೀರಿನ ತಂಬಿಗೆಯ ಬಷೀರನ ಕಡೆಗೆ ಚಾಚಿ, ‘ಏನ್ ಮಾಡ್ಕಂಡೈತೆ ಗಂಡು?’ ಎಂದಿದ್ದಕ್ಕೆ, ಬಷೀರ, ‘ದುಬೈ’ ಎಂದು ಹುಬ್ಬು ಹಾರಿಸಿ ನಕ್ಕು ನೀರು ಕುಡಿದ. ನೀರು ಗಂಟಲಲ್ಲಿಳಿಯುವ ಮುನ್ನವೇ ಬಷೀರಿಗೆ ಕೆಮ್ಮು ಇನ್ನಿಲ್ಲದಂತೆ ಒತ್ತರಿಸಿ ಬಂದು ಕುಸಿದು ಕುಂತ. ಕೈರು ಅವನನ್ನು ಆತುಕೊಂಡಳು, ಗಿಡ್ಡಿ ಅಪ್ಪನ ಎದೆ ನೀವಿದಳು. ಏನು ಮಾಡಿದರೂ ಕಡಿಮೆಯಾಗದ ಅವನ ಕೆಮ್ಮು, ಆ ವಪ್ಪಾರ, ಆ ಅಂಗಳ, ಆ ಬೀದಿಯನ್ನೆಲ್ಲಾ ಬಳಸಿ, ಆ ಪಾಳ್ಯಕ್ಕೆಲ್ಲಾ ಕೇಳುತ್ತಿತ್ತು. ಬಷೀರ ಕೆಮ್ಮೀ ಕೆಮ್ಮೀ ನಿತ್ರಾಣನಾದ. ಕೈರು, ಗಿಡ್ಡಿ ನಿಧಾನಕ್ಕೆ ಬಷೀರನ ಹಿಡಿದು ಜಗಲಿ ಮೇಲೆ ಮಲಗಿಸುವ ಹೊತ್ತಿಗೆ ಆ ಬೀದಿ, ಆ ಪಾಳ್ಯದ ಜನವೆಲ್ಲಾ ಬಷೀರನ ಮನೆಯ ಅಂಗಳದಲ್ಲಿ ನೆರೆದಿತ್ತು. ಕೈರು ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಬಷೀರ ಕೆಮ್ಮುತ್ತಲೇ ಕೈರು ಮುಖವನ್ನೇ ನೋಡುತ್ತಿದ್ದ.
ಹುಣಸೇಹಣ್ಣ ರಾಶಿಯ ಯಾವುದೋ ಮೂಲೆಯೊಳಗೆ ಕಾಣದಂತಿದ್ದ ಗಿಡ್ಡಿಯ ಮೊಬೈಲು ಆ ಜನರ ಗೌಜಲ್ಲೂ ತನ್ನಪಾಡಿಗೆಂಬಂತೆ ಹಾಡುತ್ತಿತ್ತು: ‘ತೇರೆ ಬಿನಾ ಜಿಂದಗಿಸೆ ಕೋಯಿ ಶಿಕವ ತೊ ನಹೀ, ಶಿಕವ ನಹೀ, ಶಿಕವ ನಹೀ ಶಿಕವ ನಹೀ....’
3
ಬಷೀರನ್ನ ತುಮ್ಕೂರಿನ ದೊಡ್ಡಾಸ್ಪತ್ರೆಗೆ ಸೇರಿಸಿದ್ದ ನಾಲ್ಕನೇ ದಿನಕ್ಕೆ ರಿಪೋರ್ಟ್ ಬಂತು.
‘ಇದು ಮೀನಿನ್ ಮುಳ್ಳಿನ ಪ್ರಾಬ್ಲಮ್ ಅಲ್ಲ, ಅವ್ರಿಗೆ ಗಂಟಲಿನ ಕ್ಯಾನ್ಸರ್ ಆಗಿದೆ. ಆಪರೇಷನ್ ಆಗಬೇಕು. ಬೆಂಗ್ಳೂರಿಗೆ ಕರ್ಕೊಂಡು ಹೋಗಿ’ ಕೈ ಚೆಲ್ಲಿದ್ದ ದೊಡ್ಡಾಸ್ಪತ್ರೆಯ ಡಾಕ್ಟರು ಬೆಂಗಳೂರು ಕಡೆಗೆ ಬೆರಳು ಮಾಡಿದ್ದರು.
‘ಬೆಂಗ್ಳೂರ ಆಸ್ಪತ್ರೆಗೋದ್ರೆ ಎಷ್ಟ್ ದುಡ್ಡಾಗ್ತೈತೆ ಡಾಕ್ಕ್ಟ್ರೇ’ ಕಣ್ಣೀರು ಇಂಗಿಸುತ್ತಲೇ ಕೇಳಿದಳು ಕೈರು.
‘ಪ್ರೈವೇಟ್ ಆಸ್ಪತ್ರೆ ಆದ್ರೆ ಏನಿಲ್ಲ ಅಂದ್ರೂ ಐದಾರು ಲಕ್ಷ ಬೇಕು. ಗೌರ್ಮೆಂಟ್ ಆಸ್ಪತ್ರೆದು ಗ್ಯಾರಂಟಿ ಕೊಡಕಾಗಲ್ಲ’ ಎಂದು ಕನ್ನಡಕ ತೆಗೆದು ಬಿಳಿಕೋಟಿನ ಜೇಬಿಗಿಟ್ಟುಕೊಂಡು ಮುಂದಿನ ವಾರ್ಡಿಗೆ ನಡೆದರು ಡಾಕ್ಟರು.
ನಿಧಾನಕ್ಕೆ ಹಾಸಿಗೆ ಮೇಲೆ ಎದ್ದು ಕುಂತ ಬಷೀರ ಇನ್ನೂ ಕೆಮ್ಮುತ್ತಲೇ ಇದ್ದ. ಬೆಂಗಳೂರಿನ ಆಸ್ಪತ್ರೆಯ ಮಾತು ಕೇಳಿಸಿಕೊಂಡ ಬಷೀರ, ‘ಈಗ ಅದೆಲ್ಲಾ ಬ್ಯಾಡ. ಹಣೆಬರ ಇದ್ದಂಗೆ ಆಗ್ತೈತೆ. ಈಗ ಊರಿಗ್ ನಡೀರಿ. ಚೋಣಿ ಯಿಡಿದ ಅಡ್ಕೆ, ಹುಣ್ಸೇಣ್ಣಿನ ಕೆಲಸ ಮುಗುಸ್ಬೇಕು ಮೊದ್ಲು’ ಎಂದ.
‘ಬೆಂಗ್ಳೂರ ಆಸ್ಪತ್ರೆಗೆ’ ಎನ್ನುತ್ತಿದ್ದ ಕೈರು ಮಾತನ್ನು ತಡೆದ ಬಷೀರ ನೋವಿನಲ್ಲೇ ಸಣ್ಣಗೆ ಅವಳ ಕಿವಿಯಲ್ಲಿ, ‘ಮೊದ್ಲು ಗಿಡ್ಡಿ ಮದ್ವೆ ಆಗ್ಲೀ. ಆಮ್ಯಾಲೆ ಜೀವ ಇದ್ರೆ ನೋಡನ ತಗ’ ಎಂದು ಊರಿಗೆ ಹೋಗಲು ಪಟ್ಟು ಹಿಡಿದ. ಕೈರು ಸೆರಗು ಕಚ್ಚಿಕೊಂಡು ಬಿಕ್ಕಿದಳು. ಗಿಡ್ಡಿ, ವಲಿ, ಸಲ್ಲು ಬಿಳಿಚಿಕೊಂಡ ಕಣ್ಣಿಂದ ಅತ್ತು ಅತ್ತು ಸುಸ್ತಾಗಿ ನಿಂತಿದ್ದರು.

ಅತ್ತ ಬಷೀರ ತುಮ್ಕೂರಿನ ದೊಡ್ಡಾಸ್ಪತ್ರೆಯಿಂದ ಪಾಳ್ಯಕ್ಕೆ ಬರುವ ಹೊತ್ತಿಗೆ ಪಾಳ್ಯಕ್ಕೆ ಪಾಳ್ಯವೇ, ‘ಮೀನ್‌ ತಿಂದೂ ತಿಂದೂ ನೋಡು ಆ ಬಷೀರಿಗೆ ಮೀನಿನ್ ಮುಳ್ಳಿಂದ್ಲೇಯ ಕ್ಯಾನ್ಸರ್ ಆಗೈತಂತೆ’ ಎಂದು ಮಾತಾಡಿಕೊಳ್ಳುತ್ತಿತ್ತು.

ಅದೊಂದು ಮುಂಜಾನೆ ಬಷೀರನ ಮನೆ ಅಂಗಳದಲ್ಲಿ ಮೀನುಗಳು ಚೆಲ್ಲಾಡಿ ಹೊಳೆಯುತ್ತಿದ್ದವು. ನಾಯಿ, ಬೆಕ್ಕು, ಕಾಗೆಗಳು ಅರುಚಾಡುತ್ತಾ ಅಂಗಳದಲ್ಲಿ ಹರಡಿ ಎಗರುತ್ತಿದ್ದ ಮೀನುಗಳನ್ನು ಹಿಡಿಯುತ್ತಿದ್ದವು.
ಮುಂಜಾವಿಗೇ ಗಾಳ ಹಿಡಿದು ಅಣೆ ಕಡೆಗೆ ಹೋಗಿದ್ದ ಬಷೀರ ಒಂದು ಸಿಮೆಂಟ್ ಚೀಲದಷ್ಟು ಮೀನು ಬೇಟೆ ಮುಗಿಸಿಕೊಂಡು ಮನೆಗೆ ಬಂದಿದ್ದ. ಇದೇ ಕಾರಣಕ್ಕೆ ಬಷೀರನ ಜತೆಗೆ ಜಗಳ ತೆಗೆದಿದ್ದ ಕೈರು ಅವನು ಮೀನು ತುಂಬಿಕೊಂಡು ತಂದಿದ್ದ ಚೀಲವನ್ನ ವದರಾಡಿ ಹೋಗಿ ಒಳಗೆ ಬಿಕ್ಕುತ್ತಾ ಕುಂತಿದ್ದಳು.
‘ಈಗಾಗಿರದೇ ಸಾಲದ? ಈಗ ಮತ್ತೆ ಮೀನು ತಿನ್ನಾ ತೆವುಲಾ? ನಾನೊಬ್ಳು ಸತ್ತರೆ ಈ ಮನೇಲಿ ಎಲ್ಲ ನೇರ್ಪಾಗ್ತೈತೆ’ ಅಳುತ್ತಾ ಗೋಡೆಗೆ ಒರಗಿದ್ದಳು ಕೈರು.
ಬಷೀರ ಏನೂ ಮಾತಾಡದೆ ಎಂದಿನಂತೆ ವಪ್ಪಾರದ ಜಗಲಿ ಮೇಲೆ ಕಾಲು ಇಳೇ ಬಿಟ್ಟು ಬೀಡಿ ಎಳೆಯುತ್ತಿದ್ದ.

ಅಮ್ಮನ ಕೂಗಿಗೆ, ಅಳುವ ಸದ್ದಿಗೆ ನಿದ್ದೆಯಿಂದೆದ್ದು ಕಣ್ಣುಜ್ಜುತ್ತಾ ಎದ್ದು ಬಂದ ಸಲ್ಲೂ ಅಂಗಳದಲ್ಲಿ ಮೀನು ಚೆಲ್ಲಾಡಿದ್ದನ್ನು ಕಂಡು ಆಕಾಶದ ಕಡೆಗೊಮ್ಮೆ, ನೆಲದ ಕಡೆಗೊಮ್ಮೆ ನೋಡಿದ. ಅಂಗಳಕ್ಕೆ ನಡೆದು ನಾಯಿ, ಬೆಕ್ಕು, ಕಾಗೆಗಳ ಅಟ್ಟಿ ಒಂದೊಂದೇ ಮೀನುಗಳನ್ನು ಆರಿಸಿ ಚೀಲಕ್ಕೆ ತುಂಬಿದ. ಇನ್ನೂ ಜೀವಂತವಿದ್ದ ಮೀನುಗಳು ಅವನು ಮುಟ್ಟುತ್ತಲೇ ನೆಗೆನೆಗೆದು ಜಾರುತ್ತಾ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದವು. ಎಲ್ಲಾ ಮೀನುಗಳನ್ನು ಆಯ್ದುಕೊಂಡ ಸಲ್ಲೂ ಹಿತ್ತಲ ಕಡೆಗೆ ನಡೆದ.
ಒಲೆ ಮೇಲೆ ಮೀನು ಹುಳಿ ಕುದಿಯುತ್ತಿತ್ತು. ಜಗಲಿ ಮೇಲೆ ಕುಕ್ಕರುಗಾಲಲ್ಲಿ ಕುಳಿತಿದ್ದ ಬಷೀರ ಗಾಳ ಸರಿ ಮಾಡುತ್ತಿದ್ದ. ಹೊಲಮಾಳಕ್ಕೆ ಕುರಿ ಬಿಟ್ಟಿದ್ದ ಮಾಲಿಂಗ, ‘ಈಗಿನ್ನೂ ಸುದಾರಿಸ್ಕಂತಿದ್ದೀಯಾ ಮತ್ತೆ ಮೀನೇನ್ಲಾ ಬಷೀರೂ?’ ಎಂದು ಕೂಗಿದ.
‘ಮಾಲಿಂಗೋ, ನಂಗೆ ಕ್ಯಾನ್ಸರೂ ಇಲ್ಲಾ ಎಂಥದ್ದೂ ಇಲ್ಲ ಕಣ್ಲಾ. ಸುಮ್ಕೆ ದುಡ್ಡು ಕೀಳಾಕೆ ಆ ಡಾಕ್ಕ್ಟ್ರು ಅಂಗೆ ಯೇಳಿರದ್ ಅಷ್ಟೆಯಾ. ಈ ಗಟಾ ಇಷ್ಟ್ ಬ್ಯಾಗ ವೋಗಾದಲ್ಲ ತಿಳ್ಕ. ಗಂಟ್ಲಲ್ಲಿ ಸಿಕ್ಕಾಕ್ಕಂಡಿದ್ದ ಮುಳ್ಳು ಯಾವತ್ತೋ ಬಿದ್ದೋಗದೆ’ ಎಂದ.
‘ಏನೋ ನಿನ್ ಹಣ್‌ಪಾಡು, ನಡ್ಸು ನಡ್ಸು’ ಎಂದ ಮಾಲಿಂಗ ಕುರಿ ಮಂದೆ ಹಿಂದೆ  ಹೆಜ್ಜೆಯಾದ.
‘ಹಣ್‌ಪಾಡೂ ನಿಜ ಅನ್ನೂ. ಯಾವ್‌ ಯಾವ್‌ ಮೀನಿಗೆ ಯಾವ್‌ ಯಾವ್‌ ಗಾಳ್ವೋ ಯಾರಿಗ್ ಗೊತ್ತು. ಮುಳ್ಳು ನುಂಗುದ್ ಮ್ಯಾಲ್ ತಾನೆ ನಮ್ಗೂ ಗೊತ್ತಾಗದು ನಾವೂ ಗಾಳಕ್ ಬಿದ್ದಿದ್ದೀವಿ ಅಂತ’ ಎಂದುಕೊಂಡ ಬಷೀರ ಆಕಾಶದ ಕಡೆಗೆ ನೋಡಿ ಕಣ್ಣು ಮುಚ್ಚಿ ಉಗುಳು ನುಂಗಿದ. ಅವನು ಕಣ್ಣು ಮುಚ್ಚುತ್ತಲೇ ಹತ್ತಾರು ಜನ ಆಗಂತುಕರು ಅವನ ಬೆನ್ನಟ್ಟಿದರು. ಅವನು ಜೋರಾಗಿ ಓಡಲು ಶುರು ಮಾಡಿದ, ಹಿಂದೆಯೇ ಗಿಡ್ಡಿಯೂ ಓಡಿ ಬರುತ್ತಿದ್ದಳು. ಓಡುತ್ತಾ ಓಡುತ್ತಾ ಇಬ್ಬರೂ ಊರಗಲದ ಜೈಲಿಗೆ ಹತ್ತಿರಾದರು. ಆ ಜೈಲಲ್ಲಿದ್ದ ಮಕ್ಕಳ ಮಧ್ಯದಲ್ಲಿ ನಿರ್ಜೀವವಾಗಿ ನಿಂತಿದ್ದ ಸಲ್ಲೂ, ವಲಿಯರ ಕೈಕಾಲುಗಳಿಗೂ ಹೊರಲಾಗದ ಭಾರದ ಕಬ್ಬಿಣದ ಸರಳುಗಳನ್ನು ಹಾಕಲಾಗಿತ್ತು. ಜೈಲಿನ ಹೊರಗೆ ತಲೆ ಕೆದರಿಕೊಂಡು ಅಲೆಯುತ್ತಿದ್ದ ಕೈರು ಎದೆಯಿಂದ ರಕ್ತ ಸೋರೀ, ಸೋರೀ ನೆಲದಲ್ಲೆಲ್ಲಾ ಹರಿಯುತ್ತಿತ್ತು. ಇನ್ನು ಓಡಲಾಗದೆ ಬಷೀರ ಕಣ್ಣು ತೆರೆದ.

ಗಂಟಲಲ್ಲಿ ಒತ್ತುತ್ತಿದ್ದ ಮುಳ್ಳು ಈಗ ಎದೆಯಲ್ಲೂ ಒತ್ತುತ್ತಿತ್ತು.

© Copyright 2022, All Rights Reserved Kannada One News