"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

Updated : 14.11.2022

"ನಿಮ್ಮ ಈ ಆತಿಥ್ಯ ಯಾರಿಗೆ ಬೇಕ್ರಿ? ನಾವೇನು ಜುಜುಬಿ ಜನಗಳಾ? ತುಪ್ಪದೂಟದಲ್ಲಿ ತುಪ್ಪಕ್ಕಿಂತ ಹೆಚ್ಚು ಡಾಲ್ಡ ಸುರಿದಿದ್ದೀರಿ...ಆಡಿನ ಸಾರಿನಲ್ಲಿ ಮಾಂಸ ತುಂಡುಗಳಿಲ್ಲ. ಇದೇನ್ರೀ...ಗಂಡಿನ ಮನೆಯವರಿಗೆ ನೀವು ಕೊಡುವ ಸತ್ಕಾರ...ಹೂ?" ಗಂಡಿನ ಹಿರಿಯಕ್ಕ ಅನ್ನುವವಳ ಅರಚಾಟದ ಮುಂದೆ ಅಮ್ಮ, ಅಜ್ಜಿ ಗೋಡೆಯ ಮೂಲೆಗೆ ಒರಗಿ ಭಯದಿಂದ ಮುದುಡಿ ನಿಂತಿದ್ದರು. ಅವರ ಕಣ್ಣುಗಳು ಬೆದರಿದ ಜಿಂಕೆಯಂತಿತ್ತು. ತುಟಿಗಳು ಅದುರುತ್ತಿದ್ದವು. ಕೈ ಕಾಲುಗಳಲ್ಲಿ ಶಕ್ತಿ ಕಳೆದು ಎಡವಿ ಬೀಳುವಂತಿದ್ದರು. ಗದ್ದಲ ತುಂಬಿದ ಮದುವೆ ಮನೆ ಒಮ್ಮೆಲೆ ಮೌನವನ್ನು ಹೊದ್ದುಕೊಂಡಿತು. ಸೂಜಿ ಬಿದ್ದರೂ ಕೇಳಿಸುವಂತಹ ಗಾಢ ಮೌನ. ಈ ಅಸಾಧ್ಯವಾದ ನೋವಿನ ಮೌನದಲ್ಲಿ, ಎಲ್ಲರ ಗಮನವನ್ನು ತನ್ನತ್ತ ಹಿಡಿದಿಟ್ಟ ಒಂದು ಅಹಂಕಾರದ ಕಿರುಚಾಟದಲ್ಲಿ  ಸಮಾಧಾನದ ಮಾತುಗಳನ್ನು ಕೇಳುವ ಕಿವಿಗಳು ಅಲ್ಲಿರಲಿಲ್ಲ.

ನೆರೆದ ಕೆಲವರ ಮುಖದಲ್ಲಿ ಪ್ರಶ್ನೆಯ ನೆರಿಗೆಗಳು. ಇನ್ನೂ ಕೆಲವರು ಮುಖದಲ್ಲಿ ಮುಂದೇನು ನಡೆಯಲಿದೆಯೋ ಎಂಬ ಕುತೂಹಲ. ಆ ಹೆಂಗಸಿನ ಕಿರುಚಾಟವು  ಮೌನವನ್ನು ಭೇದಿಸುತ್ತಾ ಮತ್ತೂ ಜೋರಾಯಿತು. ಕೆಲವು ಹೆಂಗಸರು ಕೋಣೆಯಿಂದ ಹೊರಗೋಡಿ ಗಂಡಸರಿಗೆ ವಿಷಯ ಮುಟ್ಟಿಸುವ ಧಾವಂತದಲ್ಲಿದ್ದರು. ಏನು ಮಾತನಾಡಬೇಕೆಂದು, ಹೇಗೆ ಸಮಾಧಾನಪಡಿಸಬೇಕೆಂದು ಗೊತ್ತಾಗದೆ ತಬ್ಬಿಬ್ಬಾಗಿ ನಿಂತ ಅಮ್ಮ, ಅಜ್ಜಿಯ ಮುಖ ನೋಡುವಾಗ ಹುಡುಗಿಗೆ ಅಯ್ಯೋ ಅನಿಸಿತು. ಜೋರುಬಾಯಿಯ ಅಜ್ಜಿಯ ಬಾಯಿಗೂ ಬೀಗ ಜಡಿದಿರುವುದು ಇದೇ ಮೊದಲ ಬಾರಿಯಾಗಿರಬಹುದು. ಇಷ್ಟು ದಿನ ಅಜ್ಜಿಯೊಂದಿಗಿದ್ದ ಅವಳಿಗೆ ಅಜ್ಜಿಯ ಮೌನ ಹೊತ್ತ ಮುಖ ನೋಡಲು ಯಾವತ್ತೂ ಸಿಗಲೇ ಇಲ್ಲ. ಈ ಮದುವೆ, ಸಂಬಂಧ, ಸಂಭ್ರಮ, ಅಹಂಕಾರದ ಆಟ ಇವೆಲ್ಲಾ ನೋಡುತ್ತಿದ್ದರೆ ಬದುಕಿನ ಬಗ್ಗೆ ಜಿಗುಪ್ಸೆ ಹುಟ್ಟಿಸುವಂತಿತ್ತು. ಈ ಒರಟು ಹೆಂಗಸಿನೊಂದಿಗೆ ಸಂಬಂಧ ಬೆಳೆಸಬೇಕಾದ ದುರಾದೃಷ್ಟದ ಮುಂದೆ ಕುಗ್ಗಿಹೋದಳು.

'ಇವರೇನು ತಿನ್ನಲು ಬಂದ ದನ, ಹೋರಿಗಳೇ...ಸಂಸ್ಕಾರವಿಲ್ಲದ ಮಾತುಗಳನ್ನು ಬಂದಾಗಿನಿಂದ ಆಡುತ್ತಲೇ ಇದ್ದಾರೆ. ನಮಗೂ ಸ್ವಾಭಿಮಾನ ಎಂಬುವುದಿಲ್ಲವೇ..? ಇಂತಹ ಮದುವೆ, ಸಂಬಂಧ ಜೋಡಿಸುವಿಕೆಗಿರುವ ಅರ್ಥವಾದರೂ ಯಾವುದು? ನನ್ನ ಬದುಕು ಇತರರ ಕೈಯಲ್ಲಿ ಆಡುವ ಆಟವಾಗಬೇಕೇ ? ನಾನೇನು ಸೂತ್ರದ ಗೊಂಬೆಯೇ ? ಸಾರಿನಲ್ಲಿ ಮಾಂಸದ ತುಂಡುಗಳಿಲ್ಲ, ಅನ್ನದಲ್ಲಿ ಡಾಲ್ಡ ತುಂಬಿದೆಯೆಂದು ರಂಪಾಟ ಮಾಡುವ ಇವರಿಗೆ ಹೆಣ್ಣಿನ ಮನೆಯವರ ನೋವು ಯಾಕೆ ಕಾಣಿಸುವುದಿಲ್ಲ? ಅಪಮಾನ, ಅವಮಾನಗಳು ಮನುಷ್ಯನ ಬದುಕಿನಲ್ಲಿ ಬರಲೇಬಾರದು. ಭಾವನೆಗಳ ಜೊತೆ ಆಡುವಂತಹ ಪರಿಸ್ಥಿತಿ ಯಾರ ಬದುಕಿನಲ್ಲೂ ಬರಬಾರದು. ಹಸಿದ ಹೊಟ್ಟೆಯೂ ಅವಮಾನವನ್ನು ಸಹಿಸದು. ಸಣ್ಣ ಮೆದುಳಿಗೂ ಭಾವನೆಗಳ ಮೇಲಿನ ಆಟ ಹಿಡಿಸದು. ಅನಿವಾರ್ಯ ಪರಿಸ್ಥಿತಿಗೆ ತುತ್ತಾಗಿ ಬದುಕು ಇಷ್ಟು ಕರಾಳವಾಗಬಾರದಿತ್ತು.' ಪ್ರತಿ ಬಾರಿ ಈ ಮದುವೆ ಅವಳ ಸಣ್ಣ ಮೆದುಳಿನಲ್ಲಿ ಪ್ರಶ್ನೆಗಳ ಗೀಜುಗದ ಗೂಡಾಗಿಸಿತು. ಈಗ ಪ್ರಶ್ನೆಯ ಜೊತೆ ಭಯವೂ ಆವರಿಸಿಬಿಟ್ಟಿದೆ. ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಮೊದಲೇ ಮತ್ತೊಂದು ಸಮಸ್ಯೆ ಎದುರಾಗುವುದು, ಅರ್ಥವಾಗದಂತದ ಬೇಡಿಕೆಯ ಜೊತೆ ನರಳಾಡುವುದು, ಸುತ್ತ ಜನರಿದ್ದರೂ ಒಂಟಿಯೆನಿಸುವುದು, ಚಿಟ್ಟು ಹಿಡಿಯುವ ಗದ್ದಲ- ಸಂಭ್ರಮಗಳ ಮೇಲೆ ತಾತ್ಸಾರ ಮೂಡುವುದು. ಹೀಗೆ ಪ್ರಶ್ನೆ ಮತ್ತು ಸಮಸ್ಯೆಗಳ ನಡುವೆ ಸಿಕ್ಕಿ ಎಳೆದಾಡಬೇಕಾದ ಹಗ್ಗ ಜಗ್ಗಾಟ ಈ ಬದುಕು.‌ ಇಷ್ಟದಂತೆ ಬದುಕುವಂತಿಲ್ಲ. ಇಷ್ಟದವರನ್ನು ಬಳಿ ಸೇರಿಸುವಂತಿಲ್ಲ. ಇಷ್ಟಪಟ್ಟವರ ಮುಂದೆ ಮಾತುಗಳನ್ನು ಹರವುವಂತಿಲ್ಲ. ಹೆಜ್ಜೆ ಇಡಲೂ ಭಯ. ಉತ್ತರ ಕಂಡು ಹಿಡಿಯುವುದೂ ಕಷ್ಟ.

ಬಹುದೊಡ್ಡ ಪಾತ್ರೆಯಲ್ಲಿ ಕುದಿಯುತ್ತಿರುವ ಆಡಿನ ಸಾರಿನ ಘಮ ಮೌನವನ್ನು ಸೀಳಿ ಬರುತ್ತಿತ್ತು. ಬೆಳಗ್ಗಿನಿಂದ ಏನೂ ತಿನ್ನದ ಹೊಟ್ಟೆಗೆ ಆ ಪರಿಮಳ ತಿನ್ನುವ ಉಮೇದು ಹುಟ್ಟಿಸಿತಾದರೂ ಅವಳಿಗೀಗ ಊಟವೇ ರುಚಿಸದ ಸಮಯ. ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ಬೆಂಕಿಯಿಂದ ಹೊರಟ ಹೊಗೆಯು ಕೋಣೆಯ ಕಿಟಕಿಯನ್ನು ಹಾದು ಬರುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕಿಟಕಿಯ ಹೊರಗೆ ಇಣುಕಿ ನೋಡುವ ಹೆಂಗಸರು. ಅವರ ತಕ್ಕೆಯಲ್ಲಿ ಹಸಿವಾಗ್ತಿದೆಯೆಂದು ಕೂಗುತ್ತಿರುವ ಮಕ್ಕಳು. ತುಂಬಿದ ಜನರಿಂದ ಗಿಜಿಗಿಟ್ಟಿದ ವಾತಾವರಣದಿಂದ ಆ ಮಕ್ಕಳಿಗೂ ಬಿಡುಗಡೆ ಬೇಕಿತ್ತು. 

ನಗು, ಕಲರವ, ಮಾತು, ಹರಟೆಯ ಜಗತ್ತನ್ನು ಒಮ್ಮೆಲೆ ಸೀಳಿ ಬಂದ ಸಿಡಿಲೊಂದು ಇದ್ದ ಸಂಭ್ರಮವನ್ನೆಲ್ಲ ಕಸಿದಿತ್ತು. ಆ ಹೆಂಗಸಿನ ವ್ಯಕ್ತಿತ್ವದ ಪರಿಚಯ ಆರ್ಭಟದಲ್ಲಿ ಗುರುತಿಸುವಂತಾಯಿತು. ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ ವ್ಯಕ್ತಿತ್ವವೇ ದೊಡ್ಡ ಸೇತು. ವ್ಯಕ್ತಿತ್ವವನ್ನು ಬೆಳೆಸಿ ಉಳಿಸುವುದು ಕೂಡ ಸಾಧನೆಯೇ. ಹಣ, ವಿದ್ಯೆ ಎಲ್ಲವನ್ನು ಮೀರಿಸುವ ಶಕ್ತಿ ಅದಕ್ಕಿದೆ. ಸರಳತೆ, ಉದಾರತೆ, ವಿನಯತೆ, ದೃಢತೆ, ಪ್ರಾಮಾಣಿಕತೆ, ನೇರ ನಡೆನುಡಿ ಇದೆಲ್ಲವು ಜನ ಮೆಚ್ಚುವ ಗುಣಗಳು. ಈ ಗುಣಗಳಿದ್ದ ವ್ಯಕ್ತಿ ಜನರ ಗೌರವಕ್ಕೂ ಪಾತ್ರನಾಗುತ್ತಾನೆ. ಈ ಹೆಂಗಸು ಬಂದ ಕ್ಷಣದಿಂದಲೇ ವ್ಯಕ್ತಿತ್ವದ ಹಿರಿಮೆಯನ್ನು ಕಳೆದುಕೊಂಡಿತು. "ಮಚುಂಚಿ(ನಾದಿನಿ) ಜೋರು" ಎಂಬ ಲೇಬಲನ್ನು ಹಿಡಿದು ಆಡುತ್ತಿರುವ ಹೆಂಗಸರ ಗುಸುಗುಸು ಶಬ್ದ ಇವಳ ಕಿವಿಗೂ ಬಿದ್ದಿತು. ಅತ್ತು ಕೆಂಪಗಾಗಿದ್ದ ನರಗಳಲ್ಲಿ ಭಯದ ಕಪ್ಪು ಗೆರೆ ಎದ್ದು ಕಾಣುತ್ತಿತ್ತು.

ನಾಲ್ಕೈದು ಹೆಂಗಸರು ಸೇರಿ ಹೇಗೋ ಒಂದು ಅಗಲವಾದ ಪಾತ್ರೆಯಲ್ಲಿ ಮಾಂಸದ ತುಂಡುಗಳನ್ನು ತುಂಬಿಸಿ ಆ ಹೆಂಗಸಿನ ಮುಂದಿಟ್ಟರು. ಬಂದ ಹೆಂಗಸರನ್ನು ಸಾಧ್ಯವಾದಷ್ಟರ ಮಟ್ಟಿಗೆ ತೃಪ್ತಿಗೊಳಿಸಿ ತಣಿಸುವ ಯತ್ನ ಬಿರುಸಿನಿಂದ ನಡೆಯುತ್ತಿತ್ತು. ಹಿರಿಯಕ್ಕನ ಸಿಟ್ಟಿನ ಮೂತಿ ಅನ್ನದ ಪಾತ್ರೆಯ ಸುತ್ತ ಪ್ರತಿಫಲಿಸುತ್ತಿತ್ತು. ಬಾಯಿ, ಮೂಗಿಗೆ ತುಂಬಿಸುವಷ್ಟು ಅಡುಗೆ ಸತ್ಕಾರದ ರಾಶಿಯನ್ನು ಮುಂದಿಟ್ಟರೂ ಆ ಮುಖದಲ್ಲಿ ಕೊನೆವರೆಗೂ ನಗು ಕಾಣಲೇ ಇಲ್ಲ. 

ಬಂದವರ ದರ್ಪದ ನಾಟಕವೂ ನಡೆಯಿತು.  ಹೊಟ್ಟೆಯೂ ತುಂಬಿತು. ಇನ್ನು ಹೊರಡುವ ತಯಾರಿ. ಬಂದವರೊಂದಿಗೆ ಜೊತೆ ಸೇರಿ ಇಲ್ಲಿಂದಲೂ ಒಂದಷ್ಟು ಹೆಂಗಸರು ಮದುಮಗನ ಮನೆಯತ್ತ ಹೊರಟರು. ಮದುಮಗಳಿಗೂ ತಂದಿದ್ದ ದೊಡ್ಡ ವಲ್ಲಿಯನ್ನು ಅದೇ ಹಿರಿಯಕ್ಕ ತೊಡಿಸಿ ಸಂಪ್ರದಾಯದ ಮತ್ತೊಂದು ದೃಶ್ಯವೂ ನೃತ್ಯವಾಡಿತು.

- ಸಿಹಾನ ಬಿ.ಎಂ.

© Copyright 2022, All Rights Reserved Kannada One News