ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

Updated : 07.11.2022

ಬಂದವರಿಗೆಲ್ಲ ಪಾನಕದ ಸರಬರಾಜು ನಡೆಯಿತು. ಊಟದ ಸಿದ್ಧತೆ ಗಡಿಬಿಡಿಯಿಂದ ನಡೆಯುತ್ತಲಿತ್ತು. "ಬಂದವರಿಗೆಲ್ಲ ಪಾನಕ ಸಿಕ್ಕಿತೇ...ಊಟ ಸಿಕ್ಕಿತೇ..." ಹತ್ತಾರು ಧ್ವನಿಗಳು ಅತ್ತಲಿತ್ತಲೆಲ್ಲ ಕೇಳಿ ಬರುತ್ತಲಿತ್ತು. " ಇನ್ನು ಬೀಟ್ ಕೂಡ್ರೆರೆ ಸಂಭ್ರಮ(ಮದುಮಗ ಮದುಮಗಳನ್ನು ಭೇಟಿಯಾಗುವ ಶಾಸ್ತ್ರ.) ಎಲ್ಲರು ಸ್ವಲ್ಪ ಜಾಗ ಬಿಡಿ... ದಾರಿ ಬಿಡಿ.." ಎಂಬ ಕೂಗು ಕೇಳುತ್ತಿದ್ದಂತೆ ಹೆಂಗಸರೆಲ್ಲ ಎಚ್ಚೆತ್ತುಕೊಂಡರು. ಅದಕ್ಕೆ ಮೊದಲು ಹುಡುಗ, ಹುಡುಗಿ ಭೇಟಿಯಾಗುವಂತಿಲ್ಲ, ಮುಖಾಮುಖಿಯಾಗುವಂತಿಲ್ಲ. ಮನಸಾರೆ ಪರಸ್ಪರ ಕೇಳುವ ಒಪ್ಪಿಗೆಗೂ ಅನುವು ಮಾಡಿಕೊಡುವಂತಿಲ್ಲ. ಇಷ್ಟಾನಿಷ್ಟಗಳ ಬಗ್ಗೆ ಚರ್ಚಿಸುವಂತಿಲ್ಲ. ಇಂದಿನ ದಿನಗಳಲ್ಲಿ ಎಂಗೇಜ್ಮೆಂಟ್ ಆದ ತಕ್ಷಣ ಕೈಯ್ಯಲ್ಲೊಂದು ಮೊಬೈಲ್ ಕೊಟ್ಟು ಹೋಗ್ತಾರೆ. ಎಂಗೇಜ್ಮೆಂಟಿನ ದಿನ ಹುಡುಗಿಯೂ ಅದೇ ನಿರೀಕ್ಷೆಯಲ್ಲಿರುತ್ತಾಳೆ. ಆ ಗಿಫ್ಟಿಗಾಗಿ ಅವಳ ಕಾತರದ ಕಣ್ಗಳು ಕಾಯುತ್ತಲಿರುತ್ತದೆ. ಅದರಲ್ಲೂ ಹೈ ಫೋನ್ ಸಿಕ್ಕರೆ ಗೆಳತಿಯರ ಮುಂದೆ ಜಂಭ ಕೊಚ್ಚಲು ಮತ್ತೊಂದು ಕಾರಣವೂ ಆಕೆಗೆ ಸಿಗುತ್ತಿತ್ತು. ಹಿಂದೆ ಹಾಗಲ್ಲ. ಮದುವೆ ದಿನವೂ ಗಂಡಿನ ಮುಖ ನೋಡಲು ಬಿಡದ ಕಣ್ಣುಗಳು ಅವಳ ಸುತ್ತ ಕಾವಲು ನಿಂತಿರುತ್ತದೆ. ಅದ್ಯಾವ ಬೇಕೂಫನೋ ಯಾವ ಪುಣ್ಯಾತ್ಮನೋ ತನ್ನ ಕೈ ಹಿಡಿಯುತ್ತಾನೋ ಎಂಬ ಕಲ್ಪನೆಯನ್ನು ಕಲ್ಪಿಸಿಕೊಳ್ಳದ ಜಗತ್ತು ಅವಳದ್ದು.

ಹೆಂಗಸರ ಗಡಿಬಿಡಿ, ಧಾವಂತ ಹೆಚ್ಚಾಗತೊಡಗಿತು. ಹಾಲಿನ ಲೋಟದ ಸಿದ್ಧತೆ, ಮದುಮಗಳ ಮುಖವನ್ನು ಮತ್ತೊಮ್ಮೆ ಸಿಂಗರಿಸುವ ತುರಾತುರಿ. ಮದುಮಗನ ಪ್ರವೇಶದೊಂದಿಗೆ ಹಾಡು, ತಕ್ಬೀರುಗಳ ಧ್ವನಿ ಜೋರಾಯಿತು. ಮದುಮಗ ತನ್ನ ಕೊರಳಲ್ಲಿದ್ದ ಹಾರವನ್ನು ಮದುಮಗಳ ಕುತ್ತಿಗೆ ಧರಿಸಿದ. ಅವಳು ಕೂತಲ್ಲಿಯೇ ತಲೆಬಗ್ಗಿಸಿ ಸ್ವೀಕರಿಸಿದಳು. ಆದರೂ ಅವನನ್ನು ಅವಳು ನೋಡಬಾರದಂತೆ ಹಿಂದಿನಿಂದ ಅವಳ ಕುತ್ತಿಗೆಯನ್ನು ಯಾರೋ ಒಂದಿಬ್ಬರು ಜಗ್ಗುತ್ತಿದ್ದರು. ಮೊದಲೇ ಎಳಸು ಕುತ್ತಿಗೆ. ನೋವಿನ ಮೇಲೆ ನೋವು ತಿನ್ನುವ ಈ ಅಸಾಧ್ಯ ವರ್ತನೆಗೆ ಕಣ್ಣುಮುಚ್ಚಿ ನೋವನ್ನು ನುಂಗಿದಳು.
   

ಬಳಿಯಲ್ಲಿರುವ ಆಸನದಲ್ಲಿ ಕೂತ ಮದುಮಗ ಇವಳ ಕೈ ಬೆರಳಿಗೆ ಸಣ್ಣದಾದ ಉಂಗುರ ತೊಡಿಸಿದ. ಆ ಗುಂಪಿನ ನಡುವೆ " ಹುಡುಗ ಮಹರ್ ತೊಡಿಸಿದ. ಚಂದ ಇದೆ.." ಹೊಗಳಿಕೆಯ ಧ್ವನಿಯಲ್ಲಿ ' ಮಹರ್ ' ಎಂಬ ಶಬ್ದ ಕೇಳಿ ಇವಳಿಗೆ ಸಾರಾಳ ಅಮ್ಮನ ಮಾತುಗಳು ನೆನಪಾದುವು.  ಇಸ್ಲಾಮಿನಲ್ಲಿ ವರದಕ್ಷಿಣೆಗಿಂತ ವಧುದಕ್ಷಿಣೆಗೆ(ಮೆಹರ್) ಮಹತ್ವವಿದೆಯೆಂದು ಸಾರಾಳ ಅಮ್ಮ ಅವಳಮ್ಮನಲ್ಲಿ ಹೇಳಿದನ್ನು ಇವಳೂ ಕೇಳಿಸಿಕೊಂಡಿದ್ದಳು. " ವರದಕ್ಷಿಣೆಯೆಂಬ ಪರಿಕಲ್ಪನೆಯೇ ಇಸ್ಲಾಮಿನಲ್ಲಿಲ್ಲ. ಈಗ ನೋಡಿದರೆ ಕಾಸು, ಬಂಗಾರು ಇಲ್ಲದೆ ಮದುವೆಯಾಗುವ ಹುಡುಗರಿಲ್ಲ. ಮದುವೆಯಾಗುವ ಹುಡುಗನಿಗಿಂತ ಗಂಡಿನ ಹೆತ್ತವರಿಗೆ ಅದರ ಮೇಲೆ ದಾಹ ಹೆಚ್ಚು. ಹೆಣ್ಣಿನ ಅಪ್ಪ ಕಷ್ಟಪಟ್ಟು ದುಡಿದು, ಅಲ್ಲಲ್ಲಿ ಸಾಲಸೋಲ ಮಾಡಿ, ಕಾಡಿ ಬೇಡಿ ಹೇಗೋ ಮಗಳ ಮದುವೆಗೆ ವರದಕ್ಷಿಣೆಯನ್ನು ಹೊಂದಿಸುತ್ತಾನೆ. ಮದುವೆ ದಿನ ಮದುಮಗ ಅವರು ಕೊಟ್ಟ ಅದೇ ವರದಕ್ಷಿಣೆಯಿಂದ ಒಂದು ಸಣ್ಣ ತಗಡಿನಂತಹ ಚಿನ್ನದ ಉಂಗುರವನ್ನು ಮೆಹರೆಂದು ಘೋಷಿಸಿ ಏನೋ ಸಾಧಿಸಿದವನಂತೆ ಮೆರೆಯುತ್ತಾನೆ. ಇಂತಹದಕ್ಕೆಲ್ಲ ಅನುವು ಮಾಡಿ ಕೊಟ್ಟವರು ನಾವು. ಯಾವುದು ನಮಗೆ ಮಾಡಬಾರದೆಂದಿದೆಯೋ ಅದರ ಮೇಲೆ ನಮಗೆ ಆಸಕ್ತಿ ಹೆಚ್ಚು. ಅದವರಿಗೆ ಬೇಡಿಕೆ ಹೆಚ್ಚಾಗಿಸಲು ಕಾರಣವಾಗುತ್ತದೆ." ಸಾರಾಳ ಅಮ್ಮನ ಮಾತಿಗೆ, " ಏನ್ ಮಾಡುವುದು ಫಾತಿಮಾ ? ಹಾಗೆಲ್ಲ ನೋಡಿದರೆ ನಮ್ಮ ಹೆಣ್ಣುಮಕ್ಕಳು ಮನೆಯಲ್ಲಿ ಬಾಕಿಯಾಗಬಹುದು. ಅವರನ್ನು ಅಷ್ಟು ಉದಾರತೆಯಿಂದ ಸ್ವೀಕರಿಸುವವರು ಯಾರು ಇದ್ದಾರೆ ? ಅದೂ ಅಲ್ಲದೆ ನಿಕಾಹ್ ನಡೆಯುವ ಮೊದಲು ವರದಕ್ಷಿಣೆ ಕೊಡದಿದ್ದರೆ ನಮಗೂ ಅವಮಾನ." ಎಂದು ಇವಳಮ್ಮ ಬೇಸರ ವ್ಯಕ್ತಪಡಿಸಿದರು.   

"ಹಾಗಲ್ಲ ಅವ್ವಞ್ಞಾದ... ಮೆಹರಿನ ಮಹತ್ವವನ್ನು ನೀವು ಅರ್ಥ ಮಾಡಬೇಕು. ಅದರ ಅರ್ಥವನ್ನು ಕಳೆದುಕೊಳ್ಳುವುದರಲ್ಲಿ ಇತರರಿಗಿಂತ ನಮ್ಮವರ ಪಾಲು ಹೆಚ್ಚು. ಎಷ್ಟರವರೆಗೆಂದರೆ ಮದುವೆಯಾಗುವವನು ಮೆಹರ್ ಕೊಡದೆ ಹೆಣ್ಣನ್ನು ಮುಟ್ಟುವಂತಿಲ್ಲ. ವರದಕ್ಷಿಣೆಯ ಮೂಲಕ ಅವನನ್ನು ಅವನು ವರದಕ್ಷಿಣೆಯ ಮೂಲಕ ಮಾರಾಟ ಮಾಡುವಂತಿಲ್ಲ. ವರದಕ್ಷಿಣೆಯ ಮುಂದೆ ವಧುದಕ್ಷಿಣೆ ಬೆಲೆ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮನುಷ್ಯನ ಅತಿಯಾಸೆ ತಿಳಿಗೊಳದಂತೆ ಪ್ರಶಾಂತವಾಗಿದ್ದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಮೆಹರನ್ನು ಪ್ರೋತ್ಸಾಹಿಸಿದ ಧರ್ಮ ಅದು ಹೆಣ್ಣಿನ ಹಕ್ಕು ಎಂದು ಒತ್ತಿ ಹೇಳಿದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರಿಗೂ ಇಲ್ಲ. ಒಮ್ಮೆ ಖಲೀಫಾ ಉಮರರು ವಧುದಕ್ಷಿಣೆ ಬೇಡಿಕೆಯ ಆಧಿಕ್ಯದ ವಿಷಯದಲ್ಲಿ ತಡೆ ಹಾಕುತ್ತಿದ್ದ ಪ್ರವಚನದ ಮಧ್ಯದಲ್ಲಿ ಅವರ ಮಾತನ್ನು ತುಂಡರಿಸಿ ಅವರನ್ನೇ ಪ್ರಶ್ನಿಸಿದ ಮಹಿಳೆಯ ಚರಿತ್ರೆ ಇತಿಹಾಸದ ಪುಟದಲ್ಲಿದೆ. ಉನ್ನತ ಸ್ಥಾನದಲ್ಲಿರುವ ನಾಯಕನನ್ನು ಪ್ರಶ್ನಿಸುವ ಹಕ್ಕು ಅಸಾಧಾರಣವಾದುದು. ಪ್ರವಾದಿಯವರ ಕಾಲಘಟ್ಟಕ್ಕೂ ಅದರ ನಂತರದ ಬದಲಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಚರಿತ್ರೆಯ ಈ ಭಾಗಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿರುವುದು ದುರಂತವೇ." ಎನ್ನುತ್ತಾ ಫಾತಿಮಾ ದೀರ್ಘ ನಿಟ್ಟುಸಿರು ಬಿಟ್ಟರು.   

ಪುನಃ ಮುಂದುವರಿಸುತ್ತಾ," ನಿಜವಾಗಿ ಹೆಣ್ಣು ಹೆತ್ತ ನಾವು ಭಾಗ್ಯವಂತರು. ನಾವೇ ಆ ಭಾಗ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಹೆಣ್ಣುಮಗು ಹುಟ್ಟಿತೆಂದರೆ ಮುಖ ಕಪ್ಪಾಗಿಸುತ್ತೇವೆ. ಅದು ಕಲಿತವರಲ್ಲೂ ಕಲಿಯದವರಲ್ಲೂ ವ್ಯಾಪಿಸಿದೆ. ಹೆಣ್ಣುಮಗುವನ್ನು ಭಾರವಾಗಿಯೇ ನೋಡುತ್ತಿದ್ದೇವೆ. ವೇದಿಕೆಯಲ್ಲಿ ಉದ್ದುದ್ದ ಭಾಷಣ ಬಿಗಿಯುವುದು, ದೊಡ್ಡ ದೊಡ್ಡ ಪ್ರವಚನ ನಡೆಸಿದಷ್ಟು ಸುಲಭವಲ್ಲ ಜನರನ್ನು ಸುಧಾರಣೆಯತ್ತ ತೆರೆದುಕೊಳ್ಳುವುದು." ಎಂದು ಸಾರಾಳ ಅಮ್ಮ ಹೇಳಿದ ಮಾತು ಅವಳಿಗಿಂದು ಮದುಮಗ ಉಂಗುರ ತೊಡಿಸುವಾಗ ಅವಳ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತಲಿತ್ತು. ಅಪ್ಪನ ಕಷ್ಟ, ಸಂಕಟ, ನೋವು ಅವಳ ಕಣ್ಣಮುಂದೆ ಸುಳಿಯತೊಡಗಿತು. ನಿದ್ದೆಗೆಟ್ಟ ಅಮ್ಮನ ಕಣ್ಣುಗಳು, ಅಪ್ಪನ ಭಾರವಾದ ಹೆಜ್ಜೆಗಳು ಕಂಡ ಅವಳಿಗೆ ಅವನು ತೊಡಿಸಿದ ಉಂಗುರವನ್ನು ನೋಡುವ ಮನಸ್ಸಾಗಲಿಲ್ಲ. ಅಸಹನೆಯಿಂದ ಬಗ್ಗಿ ಕೂತಲ್ಲಿಂದಲೇ ಮುಖ ಸಿಂಡರಿಸಿದಳು.     

'ಇಂತಹ ಜಿಡ್ಡುಗಟ್ಟಿದ ಕಟ್ಟುಪಾಡುಗಳು ಇವನ ಹುಟ್ಟಿಗೆ ಸಂಭ್ರಮಿಸುತ್ತಿರಬಹುದು... ಅವನ ಗತ್ತು ವೈಭವ ಅವನ ಬಗ್ಗೆ ಕೀಳರಿಮೆ ಹುಟ್ಟಿಸುತ್ತಿದೆ. ಇವರ ವಿಚಿತ್ರ ಬೇಡಿಕೆಗೆ ಹೆಣ್ಣು ಹೆತ್ತವರು ಯಾಕೆ ಕುಣಿಯಬೇಕು? ತುಟಿ ತೆರೆದರೆ ಆಗಲೇ ಮುಚ್ಚಿಸುವ ಪಾಳುಗಾರಿಕೆಯ ಹೆಂಗಳೆಯರ ಸಮೂಹ. ಅದಕ್ಕೆ ಪೂರಕವಾಗಿ ಅದೇ ತಮ್ಮ ಬದುಕೆಂದು ಹೊಂದಿ ನಡೆಯುವ ಹೆಣ್ಣು ಪ್ರಪಂಚ.‌ ಹೆಣ್ಣಿನ ಮಾತು, ನಗು, ಕೇಕೆಯನ್ನು ಅನುಮಾನದ ಕಣ್ಣಿನಿಂದ ನೋಡುವ ಈ ಸಮಾಜ ಬದುಕಿನ ಹುರುಪನ್ನು ನುಂಗುತ್ತಿದೆ. ಹೆಣ್ಣು ಅಕ್ಷರ ಕಲಿಯಬಾರದು, ಪುಸ್ತಕವನ್ನು ಮುಟ್ಟಿಯೂ ನೋಡಬಾರದು. ಯಾವುದು ಸರಿ, ಯಾವುದು ತಪ್ಪು ತಿಳಿಯುವ ಮೊದಲೇ ಕಟ್ಟುಪಾಡುಗಳನ್ನು ಹೇರಿ ಬಂಧಿಸುತ್ತಿದ್ದಾರೆ. ಸ್ವಾತಂತ್ರ್ಯವನ್ನು ಕಿತ್ತು ತೆಗೆಯುವ ಈ ಮಿಥ್ ಗಳ ಜೊತೆ ಬದುಕುವುದು ದೊಡ್ಡ ಸವಾಲು. ಸಾರಾಳ ಕತೆಗಳಲ್ಲಿ ಅದೆಷ್ಡು ಜೀವಂತಿಕೆಯಿತ್ತು. ಅಜ್ಜಿಯ ಕತೆಗಳೆಲ್ಲವು ಮೌಡ್ಯದಿಂದ ತುಂಬಿತು. ಅದು ಅಜ್ಜಿಯ ತಪ್ಪೂ ಅಲ್ಲ. ಅಜ್ಜಿಗೂ ಅದನ್ನೇ ಕಲಿಸಿದ್ದಾರೆ. ಈಗ ನನಗೂ ಅದನ್ನೇ ಕಲಿಸುತ್ತಿದ್ದಾರೆ. ಸಾರಾ ಹೇಳಿದ ಅಂಬೇಡ್ಕರರ ಇತಿಹಾಸವಂತು ಅದ್ಭುತ. ಅಂಬೇಡ್ಕರ್ ಹುಟ್ಟಿ ಬೆಳೆಯುತ್ತಿದ್ದಂತೆ ಒಂದೊಂದೇ ಕೆಡುಕನ್ನು ಬೇರು ಸಮೇತ ಕಿತ್ತೆಸೆದವರು. ತನ್ನ ಅಕ್ಕ ಗಂಗೆಯ ಬದುಕಿನಲ್ಲಿ ನಡೆದ ವರದಕ್ಷಿಣೆಯ ದುರಂತದ ಬದುಕು ಯಾವುದೇ ಹೆಣ್ಣಿಗೆ ಬಾರದಿರಲೆಂದು ಬಯಸಿಯೇ ಹೋರಾಡಿದರು. ಇಂದು ಸಾರಾ ನನ್ನ ಬದುಕಿನಲ್ಲಿ ಬರದಿದ್ದರೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ. ಇನ್ನಷ್ಟು ಕಾಲ ಸಾರಾಳ ಜೊತೆ ಕಳೆಯಬೇಕೆಂದಿದ್ದ ಅವಳ ಪುಟ್ಟ ಮನಸ್ಸಿನ ಬಹುದೊಡ್ಡ ಆಸೆಗೆ ತಣ್ಣೀರೆರಚಿದ ಈ ವ್ಯವಸ್ಥೆಯ ಮೇಲೆ ಅಸಾಧ್ಯವಾದ ಕೋಪ ಅವಳಿಗೆ. ಸತ್ಯ- ಸುಳ್ಳು , ಕೆಡುಕು- ಒಳಿತಿನ ಮಧ್ಯೆ ಸಿಲುಕಿ ಅಡಕತ್ತರಿಯಂತಾಗಿತ್ತು ಅವಳ ಸ್ಥಿತಿ.     

ಈ ಸಂಭ್ರಮದ ಅಬ್ಬರ, ಶಬ್ದಗಳ ಸಂತೆ, ಅಹಂಕಾರದ ದರ್ಪಣ, ತೋರಿಕೆಯ ಪ್ರತಿಷ್ಟೆ, ಢಂಬಾಚಾರದ ಪದ್ಧತಿ ಯಾವುದೂ ಆ ಸಣ್ಣಮೆದುಳಿಗೆ ಆಕರ್ಷಕ ಅನಿಸಲೇ ಇಲ್ಲ. ಅವಳ ರಕ್ತದ ಕಣಕಣಗಳಲ್ಲಿ ಅಡಗಿದ ಒಂದು ಧ್ವನಿ ಪ್ರತಿಧ್ವನಿಸುತ್ತಲೇ ಇತ್ತು. ಮದುಮಗನ ಬರುವಿಕೆಯೊಂದಿಗೆ ಸೇರಿದವರ ಕೇಕೆಯೂ ತಾರಕ್ಕೇರಿತು. ನಗು, ಕಲರವ, ಕುಚೇಷ್ಟೆ, ವ್ಯಂಗ್ಯಗಳ ಶಬ್ದಭಂಡಾರದಲ್ಲಿ ಇವಳಿಗಿನ್ನೂ ಅರ್ಥವಾಗದ ಪದಗಳೂ ಸೇರಿದ್ದವು. ಅಷ್ಟರಲ್ಲಿ ಒಂದೆಡೆ ಗಂಡಿನ ಕಡೆಯವರಿಂದ ಅಪಸ್ವರದ ಧ್ವನಿ ಅದ್ಯಾವುದೋ ಕೊರತೆಯನ್ನು ಎತ್ತಿ ತೋರಿಸಿ ಕಿರುಚಾಡುವ ಆರ್ಭಟದ ಜೋರುಧ್ವನಿ ಕೇಳಿ ಇವಳ ಎದೆ ಹೊಡೆಯತೊಡಗಿತು. ಅಮ್ಮ, ಅಜ್ಜಿಯವರ ಕೈಕಾಲು ನಡುಗುತ್ತಿರುವುದನ್ನು ನೋಡಿ ಮತ್ತೂ ಬೆವೆತಳು.

ಮುಂದುವರಿಯುವುದು

- ಸಿಹಾನ ಬಿ.ಎಂ.

© Copyright 2022, All Rights Reserved Kannada One News