ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರ ಸಹಾಯವಾಣಿ: ಡಾ.ಕೆ.ಸುಧಾಕರ್

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಶೀಘ್ರ ಸಹಾಯವಾಣಿ: ಡಾ.ಕೆ.ಸುಧಾಕರ್

Updated : 17.11.2022

ತುಮಕೂರು: ‘ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 24X7 ಕಾರ್ಯ ನಿರ್ವಹಿಸುವ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ‘ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಸಹಾಯವಾಣಿಗೆ ನಾಲ್ವರು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪ್ರತಿ ಪಾಳಿಯಲ್ಲಿ ಇಬ್ಬರು ಕೆಲಸ ನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹೆರಿಗೆ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ಅದಕ್ಕಾಗಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಾಲ್ಲೂಕುವೈದ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯಲ್ಲಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರು, ಅರಿವಳಿಕೆ ವೈದ್ಯ ರನ್ನು ಒಳಗೊಂಡ ತಂಡ ಇರುತ್ತದೆ. ಈ ಸಮಿತಿ ಸಿಜೇರಿಯನ್ ಹೆರಿಗೆ ಮಾಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಿದೆ’ ಎಂದರು.

‘ಕೆಲ ಆಸ್ಪತ್ರೆಗಳಲ್ಲಿ ಶೇ 40 ರಿಂದ ಶೇ 50ರಷ್ಟು ಸಿಜೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ. ಈ ಪ್ರಮಾಣವನ್ನು ಶೇ.20–40ಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಸಮಿತಿ ರಚಿಸಲಾಗಿದೆ. ಜತೆಗೆ ಕಾನೂನು ರೂಪಿಸಿ, ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡಿಸುವುದಕ್ಕೂ ಕಡಿವಾಣ ಹಾಕಲಾಗುವುದು’ ಎಂದರು.


© Copyright 2022, All Rights Reserved Kannada One News