ಭೋಪಾಲ್: ವಿದ್ಯಾರ್ಥಿಗಳೇ ಅಲ್ಲದ 278 ಮಂದಿಗೆ ವೈದ್ಯಕೀಯ ಪದವಿ!

ಭೋಪಾಲ್: ವಿದ್ಯಾರ್ಥಿಗಳೇ ಅಲ್ಲದ 278 ಮಂದಿಗೆ ವೈದ್ಯಕೀಯ ಪದವಿ!

Updated : 09.11.2022

ಭೋಪಾಲ್: ವಿದ್ಯಾರ್ಥಿಗಳೇ ಅಲ್ಲದ 278 ಮಂದಿಗೆ ವೈದ್ಯಕೀಯ ಪದವಿ ನೀಡಿರುವುದು, ಉತ್ತರ ಪತ್ರಿಕೆಗಳನ್ನು ತಿದ್ದಿ ಬರೆದಿರುವುದು ಮತ್ತಿತರ ಅಚ್ಚರಿಯ ಅಂಶಗಳು ಮಧ್ಯಪ್ರದೇಶ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾನಿಲಯದ ಫಲಿತಾಂಶದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್‍ನ ನಿವೃತ್ತ ನಾಯಮೂರ್ತಿ ಕೆ.ಕೆ.ತ್ರಿವೇದಿ  ಅವರ ನೇತೃತ್ವದ ತನಿಖಾ ತಂಡದ ಗಮನಕ್ಕೆ ಬಂದಿದೆ ಎಂದು hindustantimes ವರದಿ ಮಾಡಿದೆ.

ವಿಶ್ವವಿದ್ಯಾನಿಲಯದ ಸಂಲಗ್ನತ್ವ ಹೊಂದಿರುವ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿ 2018-19ರಲ್ಲಿ ನಡೆದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಮಧ್ಯಪ್ರದೇಶ ಹೈಕೋರ್ಟ್‍ನಲ್ಲಿ 2021ರ ಆಗಸ್ಟ್ ನಲ್ಲಿ ಏಳು ಅರ್ಜಿಗಳು ಸಲ್ಲಿಕೆಯಾಗಿದ್ದವು ಹಾಗೂ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಲಾಗಿತ್ತು. ರಾಜ್ಯದ 954 ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್‍ ಹಾಗೂ ಪ್ಯಾರಾಮೆಡಿಕಲ್ ಕಾಲೇಜುಗಳು ಈ ವಿವಿಗೆ ಸಂಲಗ್ನತ್ವ ಹೊಂದಿವೆ.

2021ರ ಅಕ್ಟೋಬರ್ 4ರಂದು ಮುಖ್ಯ ನ್ಯಾಯಮೂರ್ತಿ ರಫೀಕ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ, ಪೊಲೀಸ್ ಅಧಿಕಾರಿ ಹಾಗೂ ಮೂವರು ತಜ್ಞರ ತಂಡ ರಚಿಸುವಂತೆ ಸೂಚಿಸಿತ್ತು. ಏಳು ದಿನಗಳ ಬಳಿಕ ನ್ಯಾಯಮೂರ್ತಿ ತ್ರಿವೇದಿ ನೇತೃತ್ವದ ತಂಡ ರಚಿಸಲಾಗಿತ್ತು.

ತಂಡ ಜುಲೈನಲ್ಲಿ ವರದಿ ಸಲ್ಲಿಸಿದ್ದು, ಇವುಗಳನ್ನು ಪ್ರಕರಣಗಳ ವಿಚಾರಣೆ ದಿನಾಂಕವಾದ 2023ರ ಜನವರಿ 2ರಂದು ಚರ್ಚಿಸುವ ಸಾಧ್ಯತೆ ಇದೆ. ನೋಂದನಿಯಾದ ವಿದ್ಯಾರ್ಥಿಗಳು ಹಾಗೂ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದು, 278 ಮಂದಿ ವಿದ್ಯಾರ್ಥಿಗಳಲ್ಲದವರು ಪದವಿ ಪಡೆದಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಕೆಲ ಅಭ್ಯರ್ಥಿಗಳು ಹಾಗೂ ಸಂಸ್ಥೆಗಳ ವಿರುದ್ಧ ಮಾತ್ರ ವಿವಿ ಕ್ರಮ ಕೈಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

© Copyright 2022, All Rights Reserved Kannada One News