ಮಾಸ್ತಿ ಪುರಸ್ಕಾರಕ್ಕೆ ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಆಯ್ಕೆ

ಮಾಸ್ತಿ ಪುರಸ್ಕಾರಕ್ಕೆ ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಆಯ್ಕೆ

Updated : 28.09.2022

ಬೆಂಗಳೂರು: ‘ಮಾಸ್ತಿ ಟ್ರಸ್ಟ್’‌ ನೀಡುವ 2022ನೇ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಬೆಂಗಳೂರಿನ ಡಾ. ಗಜಾ ನನ ಶರ್ಮ ಮತ್ತು ಧಾರವಾಡದ ಮಲ್ಲಿ ಕಾರ್ಜುನ ಹಿರೇಮಠ ಹಾಗೂ ಮಾಸ್ತಿ ಕಥಾ ಪುರಸ್ಕಾರಕ್ಕೆ ದಾದಾಪೀರ್‌ ಜೈಮನ್‌ ಆಯ್ಕೆಯಾಗಿದ್ದಾರೆ.

ಕನ್ನಡದ ಕತೆಗಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 131ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಟ್ರಸ್ಟ್, ಸ್ಪರ್ಧೆ ಆಯೋಜಿಸಿತ್ತು.

ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ಗಜಾನನ ಶರ್ಮ ಅವರ ‘ಚೆನ್ನ ಭೈರಾದೇವಿ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಾಶನವು ಪ್ರಕಟಿಸಿದೆ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ. ಆಯ್ಕೆ ಸಮಿತಿ ಮುಂದೆ ಒಟ್ಟು 25 ಕೃತಿಗಳು ಬಂದಿದ್ದವು.

ದಾದಾಪೀರ್‌ ಜೈಮನ್‌ ಅವರ ‘ನೀಲ ಕುರಿಂಜಿ’ ಕೃತಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಯ ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಕಥಾ ಪುರಸ್ಕಾರಕ್ಕೆ 40 ಕೃತಿಗಳು ಬಂದಿದ್ದವು.

ಲೇಖಕರಿಗೆ ತಲಾ ₹ 25 ಸಾವಿರ ಹಾಗೂ ಪ್ರಕಾಶಕರಿಗೆ ತಲಾ ₹ 10 ಸಾವಿರ ನಗದು ಬಹುಮಾನವನ್ನು ಪುರಸ್ಕಾರ ಒಳಗೊಂಡಿದೆ.

ಈಶ್ವರ ಚಂದ್ರ, ಡಾ.ಎಂ.ಎಸ್. ಆಶಾದೇವಿ, ವಿಜಯಶಂಕರ, ಎಚ್‌. ದಂಡಪ್ಪ, ಚ.ಹ. ರಘುನಾಥ, ಡಾ. ಚಿಂತಾಮಣಿ ಕೊಡ್ಲೆಕೆರೆ, ಮಾವಿನಕೆರೆ ರಂಗನಾಥನ್‌ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮಾಸ್ತಿ ಪುರಸ್ಕಾರ ಸಮಾರಂಭವನ್ನು ಅಕ್ಟೋಬರ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ತಿಳಿಸಿದ್ದಾರೆ.

© Copyright 2022, All Rights Reserved Kannada One News