ಮಸಿ: ಶಂಕರ್ ಎನ್. ಕೆಂಚನೂರು ಅವರ ಕವಿತೆ

ಮಸಿ: ಶಂಕರ್ ಎನ್. ಕೆಂಚನೂರು ಅವರ ಕವಿತೆ

Updated : 25.09.2022

ಇಷ್ಟೇ ಉದ್ದದ ಕರಿಯ ತುಂಡು
ಮಸಿ
ಇದ್ದಿಲು
ಏನೆಲ್ಲ ಹೆಸರಿತ್ತು ಅದಕ್ಕೆ
ಸಣ್ಣವನಿದ್ದಾಗ ಗೋಡೆಯ ತುಂಬ ಚಿತ್ರ
ಅದರಲ್ಲೇ ಬರೆದಿದ್ದೆ
ಅಮ್ಮ ಬಿಳಿಯ ಗೋಡೆ
ಕಪ್ಪಗಾಗಿಸಿದೆನೆಂದು ಬರೆ ಹಾಕಿದ್ದಳು

ಇದೊಂದು ಉರಿದು ತಣ್ಣಗಾದ
ಕೆಂಡದ ಅವಶೇಷ
ಅಜ್ಜ ಹಲ್ಲು ಉಜ್ಜಲು ಬಳಸುತ್ತಿದ್ದರು
ಅಜ್ಜಿ ನೆಲಕ್ಕೆ ಸಗಣಿ ಸಾರಿಸುವಾಗ
ಒಂದಿಷ್ಟು ಬೆರೆಸುತ್ತಿದ್ದಳು

ನೀವು ಇದೊಂದು ಮಸಿಯ ತುಂಡೆಂದು
ತೀರಾ ಕಡೆಗಣಿಸಿಬಿಡಬಹುದು
ಆದರೆ
ನಿಮಗೆ ಗೊತ್ತಿರಲಿ
ಇದರೊಳಗೆ ಎಷ್ಟೆಲ್ಲ ಅಡಗಿವೆ
ಚಿಟ್ಟೆ, ಬೆಕ್ಕು, ಹೂವು
ಹೀಗೇ ಏನೆಲ್ಲ ಇವೆ ಇದರಲ್ಲಿ.
ಬಿಳಿಯದೊಂದು ಗೋಡೆ ಇದ್ದು
ಬರೆ ಹಾಕದ ಅಮ್ಮ ಇಲ್ಲದಿದ್ದರೆ
ಎಲ್ಲವನ್ನೂ ತೋರಿಸಬಲ್ಲೆ ನಾನು ನಿಮಗೆ

ಅಮ್ಮ ಅವಳ ಗೆಳತಿಯ ಮಗಳು
ಪಕ್ಕದ ಮನೆಯ ಹುಡುಗನೊಂದಿಗೆ
ಪ್ರೀತಿ ಮಾಡಿ ಪರಾರಿಯಾದಾಗ
ಮನೆಯ ಮರ್ಯಾದೆಗೆ ಮಸಿ ಬಳಿದಳೆಂದು
ಬಯ್ದಾಗಲೇ ನನಗೆ ತಿಳಿದಿದ್ದು
ಮಸಿಯೆಂದರೆ ಅಮ್ಮನಿಗೇಕೆ ಅಷ್ಟು ದ್ವೇಷವೆಂದು

ಆದರೂ
ಮಸಿಯ ನಿಜವಾದ ಶಕ್ತಿ ತಿಳಿದಿದ್ದು
ಮೊನ್ನೆ ಒಬ್ಬ ಮಹನೀಯರಿಗೆ
ಸಾರ್ವಜನಿಕವಾಗಿ ಮಸಿ ಬಳಿದಾಗ
ಅದು ಅವನಿಗಾದ ಅವಮರ್ಯಾದೆಯಂತೆ
ನೋಡಿ ಸಜ್ಜನರ ಮರ್ಯಾದೆ
ಮಸಿಯಲ್ಲಿದೆ
ಈಗಲಾದರೂ ಒಪ್ಪಿಕೊಳ್ಳಿ ಮಸಿಯೆಂದರೆ ಸುಮ್ಮನೆ ಮಾತಲ್ಲ

-ಶಂಕರ್ ಎನ್. ಕೆಂಚನೂರು

© Copyright 2022, All Rights Reserved Kannada One News