ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಪೋಸ್ಟರ್‌ ಬಿಡುಗಡೆ

ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಪೋಸ್ಟರ್‌ ಬಿಡುಗಡೆ

Updated : 15.08.2022

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾದ ವ್ಯಕ್ತಿಯ ಜೀವನದ ನೈಜ ಘಟನೆಗಳನ್ನು ಸಿನಿಮಾ ಪ್ರೇಕ್ಷಕರ ಎದುರಿಗಿರಿಸಲಿದ್ದಾರೆ. 

2018ರಿಂದ 2022ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(ಯುಎಪಿಎ) ಬಂಧಿತರಾದ 4690 ಮಂದಿ ಆರೋಪಿಗಳಲ್ಲಿ 149 ಮಂದಿ ಮಾತ್ರ ಅಪರಾಧಿಗಳು’– ಹೀಗೊಂದು ದಾಖಲೆಯನ್ನು ಮುಂದಿಡುತ್ತಾ ಮಂಸೋರೆ ಸ್ವಾತಂತ್ರ್ಯ ದಿನದಂದೇ ತಮ್ಮ ಹೊಸ ಚಿತ್ರ ‘19.20.21’ರ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ.

‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್‌–1978’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ವ್ಯಾಖ್ಯಾನ ಬರೆದಿದ್ದ ಅವರು ಈ ಮೂಲಕ ಯುಎಪಿಎ ಕಾಯ್ದೆಯ ಕುರಿತು ತಿಳಿಸುತ್ತಾ ಪ್ರೇಕ್ಷಕರನ್ನು ಎದುರಾಗಲಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ. ‘ನಿಜವಾದ ‘ಸ್ವಾತಂತ್ರ್ಯ’ವೆಂದರೆ, ಆ ದೇಶದ ಪ್ರತಿಯೊಬ್ಬ ನಾಗರಿಕನ ಬದುಕು, ಜೀವನ ವಿಧಾನ, ನಡವಳಿಕೆ ಅಥವಾ ರಾಜಕೀಯ ದೃಷ್ಟಿಕೋನಗಳ ಮೇಲೆ ಅಧಿಕಾರದಿಂದ ಹೇರಲಾದ ‘ದಬ್ಬಾಳಿಕೆ-ದೌರ್ಜನ್ಯದ’ ನಿರ್ಬಂಧಗಳಿಂದ ಸಮಾಜದೊಳಗೆ ‘ಮುಕ್ತ’ವಾಗಿರುವ ಸ್ಥಿತಿ’ ಎಂದು ಪೋಸ್ಟರ್‌ ಜೊತೆಗೆ ಮಂಸೋರೆ ಉಲ್ಲೇಖಿಸಿದ್ದಾರೆ.

ಈ ಸಿನಿಮಾವನ್ನು, ‘ಆ್ಯಕ್ಟ್-1978’ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕ ದೇವರಾಜ್ ಆರ್. ಅವರು, ತಮ್ಮ ‘ಡಿ ಕ್ರಿಯೇಷನ್ಸ್’ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಕಾಣಿಸಿಕೊಂಡಿದ್ದು, ಸಿನಿಮಾ ಹಾಗೂ ರಂಗಭೂಮಿಯ ಹಲವು ಕಲಾವಿದರು ನಟಿಸಿದ್ದಾರೆ.

© Copyright 2022, All Rights Reserved Kannada One News