ಜಾಗತಿಕವಾಗಿ 50 ಸಾವಿರ 'ಮಂಕಿಪಾಕ್ಸ್' ಪ್ರಕರಣ ದೃಢ : ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕವಾಗಿ 50 ಸಾವಿರ 'ಮಂಕಿಪಾಕ್ಸ್' ಪ್ರಕರಣ ದೃಢ : ವಿಶ್ವ ಆರೋಗ್ಯ ಸಂಸ್ಥೆ

Updated : 01.09.2022

ಜಿನಿವಾ: ಜಾಗತಿಕವಾಗಿ ಈ ವರ್ಷ 'ಮಂಕಿಪಾಕ್ಸ್‌' ದೃಢಪಟ್ಟ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ ಈ ಸೋಂಕು ಹೆಚ್ಚಾಗಿ ಪತ್ತೆಯಾಗಿರುವ ಯುರೋಪ್‌ನಲ್ಲಿ ಹರಡುವಿಕೆ ಪ್ರಮಾಣ ಇಳಿಕೆಯಾಗುತ್ತಿದೆ ಎಂಬುದು ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮಂಕಿಪಾಕ್ಸ್‌ ಅನ್ನು ಡಬ್ಲ್ಯುಎಚ್‌ಒ ಜುಲೈನಲ್ಲಿ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು. ಡಬ್ಲ್ಯುಎಚ್‌ಒ ಮಾಹಿತಿ ಪ್ರಕಾರ ಈ ವರ್ಷ ಪ್ರಪಂಚದಾದ್ಯಂತ ಒಟ್ಟು 50,496 ಜನರಿಗೆ ಮಂಕಿಪಾಕ್ಸ್‌ ತಗುಲಿದ್ದು, 16 ಮಂದಿ ಮೃತಪಟ್ಟಿದ್ದಾರೆ.

'ಅರ್ಧಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಹಾಗೂ ಇತರ ಹಲವು ದೇಶಗಳಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದಾಗ್ಯೂ, ಕೆನಡಾದಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವುದು ಉತ್ತೇಜನಕಾರಿಯಾಗಿದೆ' ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್‌ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಜರ್ಮನಿ, ನೆದರ್‌ಲೆಂಡ್ ಸೇರಿದಂತೆ ಯುರೋಪಿನ ಕೆಲವು ದೇಶಗಳಲ್ಲಿ ಹೊಸ ಪ್ರಕರಣಗಳ ಪ್ರಮಾಣ ಏಕಾಏಕಿ ಕುಸಿದಿರುವುದು ಕಂಡುಬರುತ್ತಿದೆ. ಇದು ಸೋಂಕು ಪತ್ತೆ ಹಾಗೂ ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ಆರೋಗ್ಯ ಆಡಳಿತದ ಮಧ್ಯಸ್ಥಿಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಫಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಸೂಕ್ತ ಕ್ರಮಗಳನ್ನು ಕೈಗೊಂಡರೆ, ಸೋಂಕು ಹರಡುವಿಕೆಯನ್ನು ತಡೆಯಬಹುದು ಎಂದು ನಾವು ಆರಂಭದಿಂದಲೂ ಹೇಳುತ್ತಿರುವುದನ್ನು ಈ ಬೆಳವಣಿಗೆಯೂ ಖಚಿತಪಡಿಸುತ್ತಿದೆ' ಎಂದೂ ಹೇಳಿದ್ದಾರೆ.

© Copyright 2022, All Rights Reserved Kannada One News