ಭಾರತದ ಮೊದಲ ಮಂಕಿಪಾಕ್ಸ್ ರೋಗಿ ‘ಸಂಪೂರ್ಣ ಗುಣಮುಖ’: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

ಭಾರತದ ಮೊದಲ ಮಂಕಿಪಾಕ್ಸ್ ರೋಗಿ ‘ಸಂಪೂರ್ಣ ಗುಣಮುಖ’: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

Updated : 30.07.2022

ಕೇರಳದ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ಮೊದಲ ಮಂಕಿಪಾಕ್ಸ್ (ಮಂಗನ ಕಾಯಿಲೆ) ರೋಗಿ ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ. ಸೋಂಕಿಗೆ ಒಳಗಾಗಿದ್ದ 35 ವರ್ಷದ ವ್ಯಕ್ತಿಯು ರಾಜ್ಯದ ಕೊಲ್ಲಂ ನಿವಾಸಿಯಾಗಿದ್ದು, ಅವರನ್ನು ಒಂದು ದಿನದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದು ದೇಶದಲ್ಲಿ ಪತ್ತೆಯಾದ ಮೊದಲ ಮಂಗನ ಕಾಯಿಲೆ ಪ್ರಕರಣವಾಗಿರುವುದರಿಂದ, ರಾಷ್ಟ್ರೀಯ ವೈರಾಲಜಿ ಸಂಸ್ಥೆ(ಎನ್‌ಐವಿ)ಯ ಸೂಚನೆಯಂತೆ 72 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಎಲ್ಲಾ ಪರಿಕ್ಷೆಯಲ್ಲೂ ನೆಗೆಟಿವ್‌ ವರದಿ ಬಂದಿದೆ. ರೋಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಗುಳ್ಳೆಗಳು ಸಂಪೂರ್ಣವಾಗಿ ಗುಣಮುಖವಾಗಿವೆ. ಇಂದು ಅವರನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಸಚಿವೆ ವೀಣಾ ಹೇಳಿದ್ದಾರೆ. ಅವರೊಂದಿಗೆ ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿದ್ದ ಅವರ ಕುಟುಂಬದ ಸದಸ್ಯರ ಪರೀಕ್ಷೆಯ ಫಲಿತಾಂಶವೂ ನೆಗೆಟಿವ್‌ ಬಂದಿದೆ ಎಂದು ಸಚಿವರು ಹೇಳಿದ್ದಾರೆ.

ಅದೇ ರೀತಿ ಸೋಂಕಿಗೆ ಒಳಪಟ್ಟ ಇನ್ನಿಬ್ಬರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು, ತಡೆಗಟ್ಟುವಿಕೆ ಮತ್ತು ಕಣ್ಗಾವಲು ಕ್ರಮಗಳನ್ನು ಅದೇ ಹುರುಪಿನೊಂದಿಗೆ ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.


© Copyright 2022, All Rights Reserved Kannada One News