ದೇವಿ ಮೂರ್ತಿ ಕೆತ್ತುವ ಮುನ್ನ: ಮಂಜುಳ ಕಿರುಗಾವಲು ಅವರು ಅನುವಾದಿಸಿರುವ ಕವಿತೆ

ದೇವಿ ಮೂರ್ತಿ ಕೆತ್ತುವ ಮುನ್ನ: ಮಂಜುಳ ಕಿರುಗಾವಲು ಅವರು ಅನುವಾದಿಸಿರುವ ಕವಿತೆ

Updated : 21.08.2022

ಇರಬಹುದು ಎರಡು ಇಲ್ಲವೆ ಆರು
ಅಥವಾ ಹತ್ತೇ ಕೈಗಳು
ಆದರೆ, ಎರಡು ಕಾಲುಗಳ ನಡುವೆ ಮೃದುವಾದ ಬಟ್ಟೆಯನ್ನು ಹೊರತು ಪಡಿಸಿ ಬೇರೇನೂ ಇರಬಾರದು.

ಅವಳ ಕೈಯಲ್ಲಿ ಈಟಿ, ಶಂಖ, ಖಡ್ಗ, ತ್ರಿಶೂಲ
ಅಥವಾ ತುಂಡರಿಸಿದ  
ಅಸುರನ ತಲೆ ಇರಬೇಕು.
ಆದರೆ, ಗುಲಾಬಿ, ಮಾಶ್ಚರೈಜರ್'ನ ಬಾಟಲಿ, ಕಪ್ ಕೇಕ್, ಸ್ಕ್ರೂಡ್ರೈವರ್
ಹಾಗೂ ಮೈಕ್ರೊಫೋನ್ ಅವಳ ಕೈಯಲ್ಲಿ ಎಂದಿಗೂ ಇರಬಾರದು

ಅವಳ ಕೈಯ ಮಣಿಕಟ್ಟು
ವಿಧೇಯ ಪೂರ್ವಕವಾದ
ಅಲೌಕಿಕ ನೃತ್ಯದ ಯಾವುದೋ
ಭಂಗಿಯಲ್ಲಿ ಬಾಗಿರಬೇಕು.
ಆದರದು ಅರ್ಥಹೀನವೆಂದು ತೋರಿದರೆ ನಾಲ್ಕರಲ್ಲೊಂದು
ಮುದ್ರೆ ಆಯ್ದು ತೋರಿಸಿ ಸ್ವರ್ಗದ ಹಾದಿಯತ್ತ ತೋರಿಬಿಡಿ

ಅವಳು ನಗುತ್ತಾ
ಸೌಮ್ಯವಾಗಿ ಅಸಡ್ಡೆ ತೋರತ್ತಾ
ಅನಂತದತ್ತ ದಿಟ್ಟಿಸುತ್ತಾ ಅಸುರನ ಅಸ್ತಿತ್ವವ ಭೇದಿಸಲಿ;
ಆದರೆ, ಎಂದಾದರೂ ವೈನ್ ತುಂಬಿದ ಗ್ಲಾಸ್ ಹಿಡಿದು ಸಂಭ್ರಮಾಚರಿಸುವುದನ್ನೋ, ನಾಗಲೋಟದಲ್ಲಿ ಓಡುತ್ತಿರುವ ಶೇರು ಮಾರುಕಟ್ಟೆ ನೋಡುವುದನ್ನೋ ಅಥವಾ ಕಾಲು ಕಾಣಿಸುವ ಬಟ್ಟೆ ತೊಟ್ಟು ಟ್ವೀಟ್ ಮಾಡುತ್ತಿರುವುದನ್ನಾಗಲಿ ಕೆತ್ತಬಾರದು...

ಕೂದಲನ್ನು ಬಿಗಿದು ಕಟ್ಟಲಿ
ಇಲ್ಲವೇ ಗಾಳಿಗೆ ಹಾರಲು ಬಿಡಲಿ
ಆದರೆ, ಬದುಕು ಹೇಗೋ ಕಳೆದು ಹೋಗಬೇಕು...
ಮಳೆಯಲ್ಲಿ ತೊಯ್ದ ಹೋದ ಹಾದಿಯಲ್ಲಿ ಸಾಗುವ ಗುಂಗುರು ಕೂದಲು ಮತ್ತು ಬಿಳಿಗೂದಲಿ‌ನ ಚಿಂತೆ ಮರೆತು ಬಿಡಬೇಕು..

ಉಬ್ಬಿದ ಎದೆಗಳಿಗೆ ಸಿ ಕಪ್ ಅಥವಾ ಡಿ ಕಪ್ ತೊಡಲಿ ಇಲ್ಲವೇ ತನ್ನ ಕಾಮನೆಗಳನ್ನು ಹೇಗಾದರೂ ಬದುಕಲಿ.. ಆದರೆ, ಕಂದನಿಗೆ ಹಾಲುಣಿಸುವುದಾಗಲಿ, ರವಿಕೆಯಾಗಚೆಗೆ ಇಣುಕುವ ಮೊಲೆ, ನಾಬಿ ಮತ್ತು ಸ್ಟ್ರೆಚ್ ಕಾಣಿಸದಂತೆ ಒಂಬತ್ತು ಮೊಳದ ರೇಷ್ಮೆ ಸೀರೆಯುಟ್ಟಿರಬೇಕು...

ರಕ್ತ ಕಾಣಿಸುವುದೇ ಆದರೆ ಕೇವಲ ಮುಖ, ಕೈಗಳಲ್ಲಿರಬೇಕಷ್ಟೇ...
ಜೊತೆಗೆ ಈ ಕೆಂಪು ಯುದ್ಧ, ಶೌರ್ಯ ಅಥವಾ ಪೌರುಷದ ಗುರುತಾಗಿರಬೇಕು. ಅಸುರನ  ನೆತ್ತರನ್ನೇ ಹೀರುವಾಕೆಗೆ
ಅವಳ ಒಳಗಿಂದ ಜಿನುಗುವ ರಕುತಕ್ಕೆ ಸ್ಯಾನಿಟರಿ ಪ್ಯಾಡ್ ಆಗಲಿ, ಬಿಸಿನೀರಿನ ಬಾಟಲಿಯಾಗಲಿ ಬೇಕಿಲ್ಲ. ರಕ್ತಸ್ರಾವ ಹೆಚ್ಚಾದರೆ‌ ಮಾತ್ರ ವಾರಗಳ ಕಾಲ ದೇವಾಲಯದ ಆವರಣದಿಂದ ಹೊರಗುಳಿಯಬೇಕಷ್ಟೇ.

ಮೂಲ~ ಪರ್ವೀನ್ ಸಾಕೇತ್

ಅನುವಾದ~ ಮಂಜುಳ ಕಿರುಗಾವಲು

© Copyright 2022, All Rights Reserved Kannada One News