ಮೈದಾನದ ಆಸುಪಾಸಿನಲ್ಲಿ: ಗುರು ಸುಳ್ಯ ಅವರ ಕಥೆ

ಮೈದಾನದ ಆಸುಪಾಸಿನಲ್ಲಿ: ಗುರು ಸುಳ್ಯ ಅವರ ಕಥೆ

Updated : 25.09.2022

ಪೇಟೆಯ ನಡುವನ್ನು ಸೀಳಿಕೊಂಡು ಹೋಗುವ ಆ ದಾರಿಯುದ್ದಕ್ಕೂ ಡಾಂಬರಿಗಿಂತ ಮೊದಲು ಹಾಕುವ ಜಲ್ಲಿಕಲ್ಲು ಹಾಗೇ ಇತ್ತು. ಕಲ್ಲು ಹಾಕಿ ಹಲವು ವರ್ಷಗಳಾದರೂ ಡಾಂಬರು ಮೈನ್ ರೋಡಿಂದ ಒಳದಾರಿಗೆ ತಲುಪಿಯೇ ಇರಲಿಲ್ಲ. ವರ್ಷಗಳಿಂದ ಅದೇ ದಾರಿಯಲ್ಲಿ ನಡೆಯುತ್ತ ಅಭ್ಯಾಸವಾಗಿದ್ದ ಅಲ್ಲಿನ ಜನಕ್ಕೆ ಆ ರೋಡಿನ ಬಗ್ಗೆ ಯಾವುದೇ ಕಂಪ್ಲೇಟುಗಳು ಇರಲಿಲ್ಲ. ಪೇಟೆಯಿಂದ ಆ ದಾರಿ ಹೊಕ್ಕು ಸ್ವಲ್ಪು ದೂರ ನಡೆಯುವಷ್ಟರಲ್ಲೇ ಆ ‘ಮೈದಾನ’, ಮತ್ತದರ ದೂಳು ಕಣ್ತುಂಬುತ್ತದೆ. ಮೈದಾನಕ್ಕೆ ಅಂಟಿಕೊಂಡಿರುವ ಬಣ್ಣ ಮಾಸಿದ ಶಾಲೆ ಅಂಗಿಚಡ್ಡಿ ಹಾಕಿ ನಿಂತ ಬಾಲ್ಯವನ್ನು, ದೂರಾದ ಕಾಲವನ್ನು ದೂರದಿಂದಲೇ ನೆನಪಿಸುತ್ತದೆ. ಮೈದಾನವನ್ನು ದಾಟಿ, ಶಾಲೆಯ ಬದಿಯಲ್ಲಾಗಿ ನಡೆದು ಶಾಲೆಯ ಹಿಂಬದಿಯ ಇಳಿಜಾರು ರಸ್ತೆಯಲ್ಲಿ ಇಳಿದು ಹಸಿರಿನ ದಾರಿಗೆ ಹೆಜ್ಜೆಯಿಡುವಾಗ ಮಕ್ಕಳು ಶಾಲೆಯ ಗೋಡೆಯ ನಡುವಿಂದ ಆಟದ ಬಯಲಿಗೆ ಬಿದ್ದು ಖುಷಿಪಡುವಂತೆ, ಪೇಟೆಯ ಯಂತ್ರದ ತಿರುಗಣಿಕೆಯಿಂದ ಬಿಡಿಸಿಕೊಂಡು ನಿರಾಳವಾಗುತ್ತದೆ ಜರ್ಜರಿತವಾದ ಮನಸ್ಸು. ರಸ್ತೆಯಿಳಿದು ಅಡ್ಡಲಾಗಿ ಹರಿಯುವ ತೋಡು ದಾಟಲು ಹಾಕಿದ್ದ ಕಂಗಿನ ಅಡ್ಡಪಾಲ ದಾಟಿದರೆ ಕಿರುದಾರಿಯೊಂದು ತೆರೆದುಕೊಳ್ಳುತ್ತದೆ. ಒಂದು ಬದಿಗೆ ಅಡಿಕೆ, ಬಾಳೆ ಮತ್ತು ತೆಂಗಿನ ತೋಟ, ಇನ್ನೊಂದು ಬದಿಗೆ ಖೊಕ್ಕೊ ಮತ್ತು ಗೇರು ಹಣ್ಣಿನ ತೋಟ, ನಡುವಲ್ಲಿ ಒಬ್ಬರಷ್ಟೇ ನಡೆಯಬಹುದಾದ ಕಿರು ಕಾಲ್ದಾರಿ. ಮುಂದಿನಿಂದ ಯಾರಾದರೂ ಬಂದರೆ ಯಾವುದಾದರೊಂದು ಬದಿಯ ತೋಟದ ಬೇಲಿಯ ಬುಡಕ್ಕೆ ಒಂದು ಕಾಲು ಕೊಟ್ಟು ಯಾರಾದರೊಬ್ಬರು ದಾರಿ ನೀಡಬೇಕಾಗಿತ್ತು.

ಡೈಲಿ ಹೋಗಿ ಬರೋ ಆ ಊರ ಮಂದಿಗೆ ಅದು ಕಷ್ಟವೆನಿಸದ ಮೂಮೂಲಿ ದಾರಿಯಾಗಿತ್ತು. ಆ ಕಾಲು ದಾರಿಯುದ್ದಕ್ಕೂ ಅಲ್ಲಲ್ಲಿ ತೋಟದ ಬದಿಯಲ್ಲಿ ಕೊಳದಂತಿರುವ ಬಾವಿಯೊಳಗೆ ಮರದ ನೆರಳು ಮತ್ತು ಮರದ ಎಲೆಗಳು ಮಲಗಿರುತ್ತಿದ್ದವು. ಎಲೆಗಳಿಗಿಂತಲೂ ಹಸಿರಾದ ಬಾವಿಯ ನೀರು ತೊಯ್ದಾಡುತ್ತಿರಲು ಅವುಗಳ ನಡುವೇ ತನ್ನನ್ನೇ ತಿಳಿಯಾಗಿಸುತ್ತಿದ್ದ ತನ್ನದೇ ಬಿಂಬವ ನೋಡುತ್ತಾ ನಡೆಯುತ್ತಿದ್ದ “ಮೊಯ್ದೀನ್” ಕಾಕ. ತೋಟದೊಳಗಿನ ಕಾಲ್ದಾರಿ ಮುಗಿದರೆ ಸುತ್ತಲೂ ಕಟ್ಟು ಕಟ್ಟಿ ಚೌಕಾಕರವಾಗಿ ಕಾಣುವ ಗದ್ದೆಗಳ ಸಮೂಹ. ಗದ್ದೆಗಳ ಮೂಲೆಯಲ್ಲಿ ವರ್ಷಂಪ್ರತಿ ‘ಜಾಲಾಟ’ ನಡೆಯುವ ಭೂತದ ಸ್ಥಾನ ಸಿಗುತ್ತದೆ. ಭೂತದ ಸ್ಥಾನದಿಂದ ಅರ್ಧ ಮೈಲು ದೂರದಲ್ಲಿ ದೇವಸ್ಥಾನವೊಂದು ಎದ್ದು ನಿಂತು ಕೆಲವು ವರ್ಷಗಳಾದರೂ, ಇವಾಗ ಅಲ್ಲಿ ಖಾಕಿ ಚಡ್ಡಿ ಹಾಕಿ, ಖಾಕಿ ಕೋಲು ಹಿಡಿದುಕೊಂಡು ಪ್ರತಿದಿನ ಬೆಳಿಗ್ಗೆ ವ್ಯಾಯಾಮ, ಆಟಗಳನ್ನಾಡಲು  ಕೆಲವು ಹುಡುಗರು ಸೇರುತ್ತಾರೆ. ಪ್ರತಿ ವರ್ಷದಂತೆ ಮಾಸದ ಗಾಯವೊಂದರ ನೆನಪಿಗಾಗಿ ಭೂತಕ್ಕೆ ಹರಕೆ ಕೊಡಲು ‘ಕೆಂಚಲು’ ಕೊಟ್ಟ ಒಂದು ಹಿಡಿಸೂಡಿ, ಕಾಣಿಕೆ ಹಾಕಲು ಮತ್ತು ಭೂತದ ನೆತ್ತಿಗೆ ಅಂಟಿಸಲು ನಾಣ್ಯಗಳನ್ನು ಹಿಡಿದು ಹೋಗುತ್ತಿದ್ದ ಕಾಕ. ಪಂಜುರ್ಲಿ,ಉಳ್ಳಾಲ್ತಿ, ನೆತ್ತರಮುಗುಳಿ ಹೀಗೇ ಕೆಲವು ಭೂತಗಳ ಹೆಸರುಗಳನ್ನು ಕೆಂಚಲು ಬಾಯಲ್ಲಿ ಕೇಳಿ ಗೊತ್ತಿತ್ತಾದರೂ, ಜಾಲಾಟದಲ್ಲಿ ಕುಣಿಯುವ ಭೂತಗಳನ್ನು ಗುರುತು ಹಿಡಿಯುವುದಾಗಲಿ, ಭೂತಗಳ ಕಾರಣಿಕದ ಬಗ್ಗೆಯಾಗಲಿ ಅವನಿಗೆ ಏನೇನೂ ಗೊತ್ತಿರಲಿಲ್ಲ. ಅಸಲಿಗೆ ಜಾಲಾಟ ಮುಗಿಯುವವರೆಗೆ ಕಾಕ ಅಲ್ಲಿ ನಿಲ್ಲುತ್ತಲೂ ಇರಲಿಲ್ಲ. ಇದೇ ಜಾಲಾಟ ನಡೆಯುವ ಸ್ಥಳಕ್ಕೆ “ಅದ್ದು” ಐಸ್ ಕ್ಯಾಂಡಿ ಮಾರುವ ನೆಪದಲ್ಲಿ “ಚನಿಯಾರು” ವನ್ನು ಭೇಟಿಯಾಗಲು ಹೋಗುತ್ತಿದ್ದುದು. ಅವರ ಭೇಟಿ ಮತ್ತದರ ಮುಂದುವರಿಕೆಯಾದ ಅನಾಹುತಗಳ ಕಹಿ ನೆನಪುಗಳು ಅವನನ್ನು ಅಲ್ಲಿ ನಿಲ್ಲಲು ಬಿಡುತ್ತಿರಲಿಲ್ಲ. ಗಾಯಗಳನ್ನು ಸವರುತ್ತಲೇ ಮೈದಾನದೆಡಗೆ, ಬದುಕಿನೆಡೆಗೆ ಅದೇ ದಾರಿಯಲ್ಲಿ ಹಿಂತಿರುಗುತ್ತಾನೆ. ಸಂಜೆಯಾಗುತ್ತಲೇ ತನ್ನ ಗುಜುರಿ ಅಂಗಡಿ ತಲುಪಲೇಬೇಕು ಅವನಿಗೆ. ಮೈದಾನ ತುಂಬ ಹರಡುವ ಮಕ್ಕಳ ಕಲರವವನ್ನು ಕೇಳಲೇ ಬೇಕು.

ಸಂಜೆ ನಾಲ್ಕು ಗಂಟೆಗೆಯವರೆಗೆ ಸೂರ್ಯನೊಂದಿಗೆ ಮಾತನಾಡುತ್ತಾ ಕೆಂಪಾಗಿ ನುಲಿಯುವ ಮೈದಾನ, ನಾಲ್ಕು ಗಂಟೆಗೆ ಆಟದ ಬೆಲ್ಲು ಹೊಡೆಯುತ್ತಿದ್ದಂತೆ ಪ್ರೈಮರಿ ಸ್ಕೂಲಿನ ಪುಟ್ಟ ಪಾದಗಳಿಂದ ಒದೆತ ತಿನ್ನಲು ಅನುವಾಗುತ್ತಿದ್ದವು. ಬೆಲ್ಲು ಹೊಡೆದ ತಕ್ಷಣ ಪಾಠದ ಜೈಲಿನಿಂದ ಆಟದ ಮೈದಾನಕ್ಕಿಳಿಯುವ ಮಕ್ಕಳು ಗೊಂಚಲು ಗೊಂಚಲು ನಕ್ಷತ್ರಗಳಂತೆ ಓಡಾಡುತ್ತಾ ಭೂಮಿಯನ್ನು ಅಗಸವಾಗಿಸುತ್ತಿದ್ದರು, ಗಾಳಿ ದೂಳ ಮೋಡವಾಗುತ್ತಿತ್ತು. ಮೈದಾನ ತನ್ನ ಮೈಕೊಡವಿದ ದೂಳು ಮಕ್ಕಳ ಪಾದ, ಸಮವಸ್ತ್ರಗಳನ್ನು ಮುತ್ತಿಕ್ಕಿ, ಅಮ್ಮಂದಿರ ಬೈಗುಳಕ್ಕೆ ಸಾಕ್ಷಿಭೂತವಾಗುತ್ತಿತ್ತು. ಪುಟ್ಟ ಕ್ಷಣಗಳಿಂದ ದಟ್ಟ ಬದುಕುಗಳಿಗೆ ತೆರೆದುಕೊಂಡಿರೋ ಸುತ್ತಲ ಸಮಾಜದ ಅದೆಷ್ಟೋ ಘಟನೆಗಳಿಗೆ ಸಾಕ್ಷಿ ಈ ನಿರ್ಭೀತ, ನಿರ್ಲಿಪ್ತ ಮೈದಾನ. ಯಕ್ಷಗಾನ ನಡೆಯುತ್ತಿದ್ದ ರಾತ್ರಿಗಳಲ್ಲಿ ಬಯಲಾಟದ ಬಯಲು, ಭಾನುವಾರವಾಯಿತೆಂದರೆ ವಯಸ್ಸಿನ ಅಂತರವಿಲ್ಲದೆ ಕ್ರಿಕೆಟ್ಟು, ಕಬಡ್ಡಿ, ವಾಲಿಬಾಲ್ ಗಳನ್ನಾಡುವ ಊರ ಮಂದಿಯ ಆಟದ ಮನೆಯಾಗಿರುತ್ತಿದ್ದ ಮೈದಾನದ ಆಸುಪಾಸಿನ ಮನೆಗಳು ಆಟವಾಡುತ್ತಿದ್ದವರ ಬಾಯಾರಿಕೆ ತಣಿಸುತ್ತಿದ್ದವು. ಶಾಲೆಯ ಎದುರುಗಡೆ ಗ್ರೌಂಡಿನಿಂದಾಚೆಗೆ ಸಾಲಾಗಿ ಅಂಗಡಿಗಳಿದ್ದು, ‘ಮೊಯ್ದಿನ್ ಕಾಕ’ನ ಗುಜುರಿ ಅಂಗಡಿಯು ಅವುಗಳಲ್ಲೊಂದು. ಆ ಅಂಗಡಿ ಸಾಲುಗಳ ಹಿಂದುಗಡೆ ಇರುವುದೇ ದಲಿತ ಕೇರಿ. ಅಲ್ಲಿನ ದಲಿತರ ಮನೆಗಳಲ್ಲೊಂದು ‘ಕೆಂಚಲು’ವಿನ ಮನೆ. ಆ ಮನೆಯ ಅಂಗಳ, ಹಿತ್ತಲು ಎಲ್ಲಾ ಬ್ಯಾಟರಿಯ ಕರಿ ಮಿಶ್ರಣದ ಸಗಣಿ ಗುಡಿಸಿದ ನೆಲ ಕೆಂಚಲುವಿನ ಮೈಯಂತೆಯೇ ಕಪ್ಪಗೆ ಮಿನುಗುತ್ತಿತ್ತು. ನೆಲದ ಜೊತೆಗೆ ಹಿತ್ತಲ ಮೂಲೆಯಲ್ಲಿ ಮಣ್ಣು ಮುಚ್ಚಿದ ಗೋರಿಗೂ ಸಗಣಿ ಸಾರಿಸಲಾಗಿತ್ತು. ಗೋರಿಯ ಸುತ್ತ, ಅಕ್ಕ ಪಕ್ಕದಲ್ಲೆಲ್ಲಾ ಪಪ್ಪಾಯಿ ಮರ-ಗಿಡಗಳಿದ್ದವು. ಅದರಲ್ಲಿ ಆಗಷ್ಟೆ ಮೊಳೆತ ಪಪ್ಪಾಯಿ ಕಾಯಿಗಳನ್ನು ನೋಡುವಾಗಲೆಲ್ಲ, ಪಪ್ಪಾಯಿ ಹಣ್ಣು ತಿಂದರೆ ಗರ್ಭ ಕರಗುತ್ತದೆಯೆಂದುಕೊಂಡು ತಿಂದ ಮೇಲೂ ಸಾಯದೇ ಅಂದಿನ ಜೌವ್ವನೆಯ ಹೊಟ್ಟೆಯಲ್ಲಿ ಮೊಳೆತ ಮಗು ನೆನಪಾಗುತ್ತಿತ್ತು ಕೆಂಚಲುವಿಗೆ. ಈವಾಗ ಪಪ್ಪಾಯಿ ಹಣ್ಣು ಕೀಳುವಾಗಲೆಲ್ಲಾ ಹಣ್ಣಿನ ತೊಟ್ಟಿನ ಸೊನೆಯೊಂದಿಗೆ ಕೆಂಚಲುವಿನ ಕಣ್ಣ ಹನಿಗಳು ಆ ಗೋರಿಯನ್ನು ಸೋಕುತ್ತಿದ್ದವು.

ಒಂದಾನೊಂದು ಕಾಲವಿತ್ತು. ಅದ್ದು ಮತ್ತು ಚನಿಯಾರು ಅದೇ ಮೈದಾನದಂಚಿನ ಶಾಲೆಯಲ್ಲಿ ಜೊತೆಗೇ ಓದುತ್ತಿದ್ದರು. ಅದೇ ಮೈದಾನದಲ್ಲಿ ಜೊತೆಗೆ ಆಡುತ್ತಿದ್ದರು. ಮೊದ ಮೊದಲು ಮನೆ ಮನೆಗೆ ಹೋಗಿ ಗುಜುರಿ ವ್ಯಾಪಾರ ಮಾಡುತ್ತಿದ್ದ ಕಾಕ, ಹೆಂಡತಿ ತೀರಿದ ನಂತರ ಮೈದಾನದ ಪಕ್ಕದ ತನ್ನ ಮನೆಯ ಮುಂಬಾಗದಲ್ಲೇ ಗುಜುರಿ ಅಂಗಡಿ ತೆರೆದಿದ್ದ. ಸಂಜೆಯಾಯಿತೆಂದರೆ ಮೊಯ್ದೀನ್ ಕಾಕನ ಗುಜುರಿ ಅಂಗಡಿಯ ಪಕ್ಕದಲ್ಲೇ ತಾನು ಸೌದೆ ತರಲು ಕಾಡಿಗೆ ಹೋಗಿ ಬರುವಾಗ ಸಿಗೋ ಒಂದಿಷ್ಟು ಮಾವಿನಹಣ್ಣು, ಪೇರಲ, ನೆಲ್ಲಿಕಾಯಿ ಮತ್ತು ತನ್ನ ಮನೆಯಲ್ಲೇ ಬೆಳೆದ ಪಪ್ಪಾಯಿ ಹಣ್ಣನ್ನು ಇಟ್ಟು ಕಾಕನ ಜೊತೆ ಪಟ್ಟಾಂಗ ಹೊಡೆಯುತ್ತಾ ಮಾರುತ್ತಿದ್ದಳು ಕೆಂಚಲು. ಕೆಂಚಲು ದಲಿತರ ಕೇರಿಯ ದೊಡ್ಡ ಬಾಯಿಯ ಹೆಣ್ಣು. ಮದುವೆಯಾಗದೆ ಮಗುವನ್ನು ಹೆತ್ತು ಕಂಗಾಲಾಗಿ, ಕೇರಿಯವರ ಅಸಹ್ಯದ ಮಾತುಗಳಿಗೆ ತುತ್ತಾಗಿದ್ದರೂ ತನ್ನ ಧೈರ್ಯದಿಂದ, ಏರುದನಿಯ ಮಾತಿನಿಂದಲೇ ಬದುಕುಳಿದವಳು. ಅವರಿಬ್ಬರು ಮಾತಾಡುತ್ತಿದ್ದರೆ ಗುಜುರಿ ಸಾಮಾನುಗಳ ನಡುವೆ ಆಡುತ್ತಾ , ಆ ಮೈದಾನದಲ್ಲಿ ಹಳೇ ಸೈಕಲ್ ಟೈರುಗಳನ್ನು ಓಡಿಸುತ್ತಾ ಮೈದಾನದ ಆಸುಪಾಸಿನಲ್ಲೇ ಬೆಳೆದವರು ಮೊಯ್ದೀನ್ ಕಾಕನ ಮಗ ಅದ್ದು ಮತ್ತು ಕೆಂಚಲುವಿನ ಮಗಳು ಚನಿಯಾರು.

ಐದನೇ ಕ್ಲಾಸಿಗೆ ಶಾಲೆ ಬಿಟ್ಟು ಬೀದಿ ಸುತ್ತುತ್ತಿದ್ದ ಅದ್ದು ಸ್ವಲ್ಪ ದೊಡ್ಡವನಾಗುತ್ತಲೇ ಮೀನು ಮಾರೋದು, ತರಕಾರಿ ಮಾರೋದು, ಐಸ್ಕ್ಯಾಂಡಿ ಮಾರೋದು ಮಾಡುತ್ತಿದ್ದ. ಇಷ್ಟು ಓದಿದ್ದೆ ಹೆಚ್ಚು ಎಂಬಂತೆ ಪ್ರೈಮರಿ ಶಾಲೆ ಮುಗಿಯುತ್ತಲೇ ಚನಿಯಾರುವನ್ನು ಶಾಲೆ ಬಿಡಿಸಿದ್ದ ಕೆಂಚಲು ತನ್ನೊಂದಿಗೆ ಕಟ್ಟಿಗೆ ತರಲು ಕರೆದೊಯ್ಯತ್ತಿದ್ದಳು. ವರ್ಷಗಳು ಕಳೆದಂತೆ ತುಂಬು ದೇಹದ ಕಪ್ಪು ಹುಡುಗಿ ಚನಿಯಾರು ಮತ್ತು ಬೂದಿಯಿಂದೆದ್ದು ಬಂದಂತೆ ಕಾಣುತ್ತಿದ್ದ ಬ್ಯಾರಿ ಹುಡುಗ ಅದ್ದುವಿನ ಮಧ್ಯೆ ಹರೆಯದ ಸೆಳೆತ ಮಿತಿಮೀರಿದ್ದು ಯಾರಿಗೂ ಗೊತ್ತೇ ಆಗಿರಲಿಲ್ಲ. ಹಗಲಿನಲ್ಲಿ ಮೈದಾನದ ದೂಳಿನಲ್ಲಿ ಒಂದಾಗಿ ಸೇರುತ್ತಿದ್ದುವು ಕಣ್ಣುಗಳು. ಶಾಲೆಯ ಮೈದಾನದಲ್ಲಿ ಯಕ್ಷಗಾನ ನಡೆಯುವಾಗಲೋ, ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲೋ ಅಥವಾ ವರ್ಷದ ಜಾಲಾಟದ ಸಂದರ್ಭದಲ್ಲೋ ಹೀಗೆ ಅವಕಾಶ ಸಿಗುವ ರಾತ್ರಿಗಳಲ್ಲಿ ಅದೇ ಮೈದಾನದ ಆಸುಪಾಸಿನ ಪೊದೆಗಳಲ್ಲಿ ಅದ್ದುವಿನ ಅಗಲ ಎದೆ ಚನಿಯಾರುವಿನ ತುಂಬು ಮೊಲೆಗಳು ಅಂಟಿಕೊಳ್ಳತ್ತಿದ್ದವು. ಕಿರುಮೀಸೆಯಡಿಯಿಂದ ಉಕ್ಕುವ ಆಸೆಯ ಜೇನು ಕರಿ ತುಟಿಯೊಂದಿಗೆ ಬೆಸೆಯುತ್ತಿತ್ತು. ತೊಡೆಗಳು ಒರೆಸಿಕೊಳ್ಳುತ್ತಿದ್ದವು. ಕಪ್ಪು-ಬೂದು ದೇಹ ಒಂದಾಗುತ್ತಿದ್ದವು.

ಎಲ್ಲಾ ಪ್ರೇಮಿಗಳಂತೆ, ಯಾರಿಗೂ ಗೊತ್ತಿಲ್ಲ ಎಂಬಂತೆ ತಮ್ಮೊಳಗೆ ಕಳೆದು ಹೋಗುತ್ತಿದ್ದರು ಅವರಿಬ್ಬರು. ಮುಚ್ಚಿಟ್ಟಷ್ಟು ತೆರೆದುಕೊಳ್ಳುವ ಎಲ್ಲಾ ಪ್ರೇಮಕಥೆಗಳಂತೆಯೇ ಮುಸಲರ ಹುಡುಗ ಮತ್ತು ಗಿರಿಜನರ ಹುಡುಗಿಯ ಪ್ರಣಯ ಕಥೆ ಮೈದಾನದ ಆಸುಪಾಸಿನ ಜನರಿಗೆ ಗೊತ್ತಾಗತೊಡಗಿತ್ತು. ದಲಿತರು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವಾದರೂ ಅಕ್ಕಪಕ್ಕದ ಮುಸಲ್ಮಾನರು, ಪಳ್ಳಿಯ ಮೊಯ್ಲಾರರು ಮೊಯ್ದೀನ್ ಕಾಕನಿಗೆ ಎಚ್ಚರಿಕೆ ಕೊಟ್ಟಿದ್ದರು. ಇದ್ಯಾವುದಕ್ಕು ಸೊಪ್ಪು ಹಾಕದ ಅದ್ದು ಮತ್ತು ಚನಿಯಾರು ತಮ್ಮದೇ ಲೋಕದಲ್ಲಿದ್ದರು. ಅದೇ ವರ್ಷದ ಜಾಲಾಟದ ರಾತ್ರಿ ಶಾಲೆಯ ಹಿಂದಿನ ತೋಟದಲ್ಲಿ ಕೂಡಿದ್ದರು. ಆ ರಾತ್ರಿ ಹಠಾತ್ತನೆ ಅವರ ಸುತ್ತಲೂ ಬೆಳಕು ಕಾಣಿಸಿಕೊಂಡಿತು. ಯಾವಗಲೂ ಆತಂಕಕ್ಕೆ ಕಾರಣವಾಗುವ ಬೆಳಕು ಆ ದಿನ ಅನಾಹುತಕ್ಕೆ ಮುನ್ನುಡಿಯಾಗಿತ್ತು. ಸುತ್ತಲು ದೊಂದಿ ಹಿಡಿದ ಹುಡುಗರು ಕಾಣಿಸಿಕೊಂಡರು. ಹುಡುಗರು ಸೇರಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡಿದ್ದ ಚನಿಯಾರುವನ್ನು ತೋಟದಿಂದ ಎಳೆದು ತಂದು ಮೈದಾನದ ಮಧ್ಯದಲ್ಲಿ ಹಾಕಿ ಮೈಮುರಿಯುವಂತೆ ಬಡಿದು ಹಾಕಿ, ಅದ್ದುವನ್ನ ಕರೆದುಕೊಂಡು ಹೋಗಿದ್ದರು. ಅದ್ದುವಿಗು ಚೆನ್ನಾಗಿ ಬಡಿದು ಮನೆಗೆ ಸೇರಿಸಿದ್ದರು. ಆ ರಾತ್ರಿ ಅವರಿಬ್ಬರನ್ನು ಹೊಡೆದವರ ಹೆಜ್ಜೆ ಸದ್ದುಗಳು ದೇವಸ್ಥಾನದ ಅಂಗಳದಿಂದ ಪಳ್ಳಿಯ ಅಂಗಳದ ನಡುವೆ ಹೊಯ್ದಾಡುತ್ತಿತ್ತು. ಮಾನ ಮಾರ್ಯಾದೆ ಬೀದಿ ಪಾಲಾದ ಪೆಟ್ಟಿಗೆ ಮೊಯ್ದೀನ್ ಕಾಕ ಆ ರಾತ್ರಿ ನಿದ್ದೆ ಮಾಡಿರಲಿಲ್ಲ. ಮುಂದೆ ಅದೆಷ್ಟೋ ರಾತ್ರಿಗಳು ಕಾಕನಿಗೆ ನಿದ್ರಿಸಲು ಆಗದಿರುವ ಸುದ್ದಿ ಮರುದಿನವಷ್ಟೇ ಗೊತ್ತಾಗಲಿತ್ತು. ಬೆಳಗ್ಗೆ ಎದ್ದರೆ ಮೈದಾನದ ಬದಿಯಲ್ಲಿದ್ದ ಸಿಂಬಳದ ಕಾಯಿಯ ಮರದ ಕೊಂಬೆಯೊಂದರಲ್ಲಿ ಚನಿಯಾರುವಿನ ಹೆಣ ನೇತಾಡುತ್ತಿತ್ತು. ಅಂದಿನಿಂದ ಕೆಂಚಲುವಿನ ದೊಡ್ಡ ಬಾಯಿ ಬಂದಾಗಿತ್ತು. ಅಂದು ಗರ್ಭ ಹೋಗಲೆಂದು ಕೊಯ್ದು ತಿನ್ನುತ್ತಿದ್ದ ಪಪ್ಪಾಯಿ ಮರದ ಬುಡದಲ್ಲಿನ ಗೋರಿಯಲ್ಲೀಗ ತನ್ನ ಗರ್ಭದಲ್ಲರಳಿದ ಚನಿಯಾರು ಮಲಗಿದ್ದಳು.

ಅಂದಿನಿಂದ ಮೌನಿಯಾದ ಕೆಂಚಲು ಮೌನವಾಗಿಯೇ ಹಣ್ಣಾಗಿದ್ದಾಳೆ. ಕಾಕ ಮತ್ತು ಕೆಂಚಲು ಜಗತ್ತಿನ ಸದ್ದಿಗೆ ಕಿವುಡಾಗಿ ತಮ್ಮ ನೋವುಗಳನ್ನು ಮೆದುವಾಗಿ ಹಂಚಿಕೊಳ್ಳತ್ತಾರೀಗ. ಅದ್ದುವಿಗೆ ಅಂದಿನಿಂದ ಪ್ರೇಮದ ಹುಚ್ಚು ಬಿಟ್ಟು, ಹುಚ್ಚು ಹಿಡಿದಿತ್ತು. ಬೆಳಗ್ಗೆ ಅವನಿಗೆ ಸ್ನಾನ ಮಾಡಿಸಿ ಕಾಕ ಹಾಕಿಸುತ್ತಿದ್ದ ಬಟ್ಟೆ ರಾತ್ರಿಯಾಗುತ್ತಲೇ ಅರ್ಧಂಬರ್ಧವಾಗಿರುತ್ತಿತ್ತು. ಹಸಿವಾದಾಗ ಹೊಟ್ಟಬಿರಿಯೇ ಸಿಕ್ಕಿದ್ದನ್ನು ತಿನ್ನುತ್ತಾ, ನೇತಾಡುವ ಮರದ ಕೊಂಬೆಗಳನ್ನು ಕಂಡರೆ ಸಿಟ್ಟಿನಿಂದ ಮುರಿದು ಬಿಸಾಕುತ್ತಾ, ಗುಜುರಿ ಮನೆಯ ಹಿಂಬದಿಯ ಮೂಲೆಯಲ್ಲಿ ಹಸ್ತಮೈಥುನ ಮಾಡುತ್ತಾ, ಅರಿವೆಯ ಚಿಂತೆಯಿಲ್ಲದೆ ಆ ಮೈದಾನದ ಆಸುಪಾಸಿನಲ್ಲೇ ಸುತ್ತಾಡುತ್ತಾ ಇರುವ ಅದ್ದುವಿಗೆ ಲೋಕದ ಪರಿವೆಯು ಇಲ್ಲವೀಗ.

ಬದುಕನ್ನೇ ಕುಡಿದು ಖಾಲಿಯಾದ ಬ್ರಾಂಡಿ ಕುಪ್ಪಿಗಳು, ನಾಲಗೆಗೆ ಬಿದ್ದು ಸಮಾಜದೆಲ್ಲೆಡೆ ಚದುರಿ ಹೋದ ಅಕ್ಷರ ರಾಶಿ ಹೊತ್ತ ನ್ಯೂಸ್ ಪೇಪರ್ಗಳು, ತಳ ಹಿಡಿದ ಹೊಟ್ಟೆಗಳನ್ನೇ ಹೊತ್ತು ಬಿದ್ದಿರುವ ಹಳೇ ಪಾತ್ರೆ ಪಗಡೆಗಳು, ತಿವಿಯುವ ತುಕ್ಕು ಹಿಡಿದ ಕಬ್ಬಿಣ, ಕರಗದಂತೆ ಮೆತ್ತಿಕೊಂಡಿರುವ ಪ್ಲಾಸ್ಟಿಕ್. ಗುಜುರಿಗಳನ್ನು ಹೊತ್ತು ತಂದವರ ನಿಟ್ಟುಸಿರಿನೊಂದಿಗೆ ಹಳೆಯದನ್ನೆಲ್ಲಾ ತೂಕಕ್ಕೆ ಹಾಕಿ ಹೊಸ ನೋಟದೊಂದಿಗೆ ಆ ಮೈದಾನದೆಡೆಗೆ ನೋಡುತ್ತಾನೆ ಕಾಕ. ಸಂಗೀತದೆಲ್ಲಾ ಪರಿಕರಗಳ ಮಿಶ್ರಣದ ತಂತಿಯಲ್ಲಿ ಜೋತುಬಿದ್ದ ಕಾಂತದಂತೆ ಮೈದಾನದ ಮಕ್ಕಳ ಗಲಿಬಿಲಿಯನ್ನು ಆಲಿಸುತ್ತಲೇ ಇರುತ್ತಾನೆ.

- ಗುರು ಸುಳ್ಯ


© Copyright 2022, All Rights Reserved Kannada One News