ಲವ್ ಜಿಹಾದ್: ಉಮರ್ ಫಾರೂಕ್ ಅವರ ಕಥೆ

ಲವ್ ಜಿಹಾದ್: ಉಮರ್ ಫಾರೂಕ್ ಅವರ ಕಥೆ

Updated : 21.08.2022

ನಾನಾಗ ಬೆಂಗಳೂರಿನ ಖಾಸಗಿ ಕೃಷಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಬೆಳಗ್ಗೆ 9 ಗಂಟೆಗೆ ತಯಾರಾಗಿ ರೈತರೊಂದಿಗೆ ಹೊಲಗಳಲ್ಲಿ ಹೆಜ್ಜೆ ಹಾಕಿ, ಅವರ ಆಗು ಹೋಗುಗಳನ್ನೆಲ್ಲಾ ವಿಚಾರಿಸಿ, ಅವರಿಗೆ ಪರಿಹಾರವನ್ನೂ ಸೂಚಿಸಿ ರೂಮಿಗೆ ಮರಳುವಷ್ಟರಲ್ಲಿ ರಾತ್ರಿ ಎಂಟು ಗಂಟೆ ಆಗಿರುತ್ತಿತ್ತು. ಒಂದು ದಿನ ಕೆಲಸದಲ್ಲಿದ್ದಾಗ ಇದ್ದಕ್ಕಿದ್ದಂತೆ ಶ್ರೀಧರ್‌‌ನ ನಂಬರ್ ಇಂದ ಫೋನ್ ಬಂತು. "ಹಲೋ ಉಮರ್ ಎಲ್ಲಿದ್ದೀಯಾ? ಏನ್ ಫೋನ್ ಇಲ್ಲ, ಮೆಸೇಜ್ ಇಲ್ಲ, ಫುಲ್ ಬ್ಯುಸಿಯಾಗ್ಬುಟ್ಟಿದ್ದೀಯಾ?" ನಾನು ಹಲೋ ಎನ್ನುತ್ತಲೇ ಹಾರಿ ಬಂದ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದೆ. ನಂತರ ನನ್ನ ಕಡೆಯಿಂದಲೂ ಕುಶಲೋಪರಿ ಪ್ರಶ್ನೆಗಳು. ಅವನೂ ಉತ್ತರಿಸುತ್ತಾ ಬಂದ. ಹೀಗೆ ಇಬ್ಬರ ಮಧ್ಯೆ ಸ್ವಲ್ಪ ಹೊತ್ತು ಕುಶಲ-ಕ್ಷೇಮ ಮಾತುಕತೆ ಆದೊಡನೆ, "ಉಮರ್, ಇದೇ ಗುರುವಾರ 25 ಕ್ಕೆ ನನ್ನ ಮದುವೆ ಫಿಕ್ಸಾಗಿದೆ. ಎರಡು ದಿನ ಮೊದಲೇ ಬಂದು ಬಿಡು" ಅಂದ. "ಹುಡುಗಿ ಯಾರೋ?" ಅಂತ ಕೇಳಿದೆ. "ಅದೇ ಅವಳೇ... ಇಲ್ಲಿ ಬಂದ ಮೇಲೆ ಎಲ್ಲಾ ಹೇಳ್ತೀನಿ. ನೀ ಎರಡು ದಿನ ಮೊದಲೇ ಬಂದು ಬಿಡು" ಅಂದ. "ಎರಡು ದಿನ ಮುಂಚಿತವಾಗಿ ಬರೋದಿಕ್ಕೆ ಆಗಲ್ಲ. ರಜೆ ಸಿಗೋದು ಡೌಟು. ಮದುವೆ ದಿನವಂತೂ ಹಾಜರಾಗ್ತೀನಿ. ಮಿಸ್ ಮಾಡಲ್ಲ" ಅಂತ ಹೇಳಿದೆ. "ಸರಿ ಯಾವಗಾದ್ರೂ ಬಾ. ಮದುವೆ ದಿನ ಇಲ್ಲಿ ಇರಲಿಲ್ಲ ಅಂದ್ರೆ ಸಾಯ್ತೀಯಾ ಮಗ್ನೆ" ಅಂದು ಫೋನಿಟ್ಟ.

ಜೀವದ ಗೆಳೆಯನಾಗಿದ್ದ ಶ್ರೀಧರ್ ಜೊತೆ ಫೋನಿನಲ್ಲಿ ಮಾತಾಡಿದರೇ ಖುಷಿಯಾಗುತ್ತಿತ್ತು. ಅವನನ್ನು ಭೇಟಿಯಾಗಿ ಮಾತಾಡುವುದೆಂದರೆ ಇನ್ನಷ್ಟು ಖುಷಿ. ಅದೂ ಅವನ ಮದುವೆಯಲ್ಲಿ. ಒಳಗೊಳಗೇ ಹಿರಿ ಹಿರಿ ಹಿಗ್ಗಿದೆ. ಅಂತೂ ಮದುವೆ ದಿನ ಹತ್ತಿರ ಬಂತು. ಸ್ನೇಹಿತರಿಗೆಲ್ಲ ಕರೆ ಮಾಡಿ ಯಾರ‌್ಯಾರು ಮದುವೆಗೆ ಬರ್ತಾರೆ, ಯಾರ‌್ಯಾರು ಬರಲ್ಲ ಅಂತ ವಿಚಾರಿಸಿ, ಸಿಡುಕು ಮೂತಿಯ ಬಾಸ್ ಹತ್ತಿರ ಕಾಡಿ ಬೇಡಿ ಗೋಗರೆದು, ಅವರ ಮನವೊಲಿಸಿ ಮೂರು ದಿನದ ರಜೆ ಪಡೆದುಕೊಂಡೆ. ಗುರುವಾರ ಮದುವೆ ಇದ್ದಿದ್ದರಿಂದ ಮಂಗಳವಾರ ರಾತ್ರಿಯೇ ಶ್ರೀಧರ್‌ನ ಹುಟ್ಟೂರಾದ ಗುಲ್ಬರ್ಗಕ್ಕೆ VRL ಬಸ್ ಟಿಕೆಟ್ ಬುಕ್ ಮಾಡಿಕೊಂಡು ಹೊರಟು ಬಿಟ್ಟೆ.

ಶ್ರೀಧರ್ ನನಗೆ ಆತ್ಮೀಯನಾಗಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಕಾಲೇಜಿನ ದಿನಗಳಲ್ಲಿ ಅವನು ತುಂಬಾ ಸ್ಮಾರ್ಟ್ ಹುಡುಗನಾಗಿದ್ದ. ಉತ್ತಮ ಅಂಗ ಸೌಷ್ಟವ. ಅಷ್ಟೇಕೆ, ವಿದ್ಯಾವಂತ, ಬುದ್ಧಿವಂತನೂ ಆಗಿದ್ದ. ಆದರೆ ಅವನು ದಲಿತ ಸಮುದಾಯದಲ್ಲಿ ಹುಟ್ಟಿದ ಹುಡುಗನಾಗಿದ್ದರಿಂದ ಮೇಲ್ಜಾತಿಯ ಸಹಪಾಠಿಗಳು ಅವನಿಂದ ಕ್ರಮೇಣ ಅಂತರ ಕಾಯ್ದುಕೊಳ್ಳತೊಡಗಿದರು. ಆ ದಿನಗಳಲ್ಲಿ ಕಾಲೇಜುಗಳಲ್ಲಿ ಜಾತಿ ಜಾಡ್ಯದ ಬೇರುಗಳು ಅಷ್ಟೊಂದು ಆಳವಾಗಿ ಬೇರೂರಿರದಿದ್ದಿದ್ದರೂ, ಮೇಲ್ಜಾತಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದಲಿತರನ್ನು ತುಚ್ಛವಾಗಿ ಕಾಣುವ ಹೀನ ಮನಸ್ಥಿತಿ ಒಳಗೊಳಗೇ ಹೊಗೆಯಾಡುತ್ತಿತ್ತು. ಇದರಿಂದ ಮನ ನೊಂದುಕೊಂಡಿದ್ದ ಶ್ರೀಧರ್, ನನ್ನ ರೂಮೇಟ್ ಆಗಿದ್ದ. ತಾರತಮ್ಯ ಆಚರಿಸುವಂತಹ ಅಮಾನವೀಯ ಮನಸ್ಥಿತಿಗಳು ಕಾಲೇಜಿನಲ್ಲಿ ಮೊದಲ ಬಾರಿಗೆ ನನಗೆ ಎದುರಾಗಿದ್ದವು. ಅಲ್ಲಿಂದಲೇ ಶ್ರೀಧರ್ ನನ್ನ ಸ್ನೇಹಿತರಲ್ಲಿಯೇ ಉತ್ತಮ ಸ್ನೇಹಿತನಾಗಿದ್ದ. ಪ್ರತಿದಿನ ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಗಾಢವಾಗಿ ಬೆಳೆದಿತ್ತು ನಮ್ಮ ಸ್ನೇಹ. ನನ್ನ ನೋವಿನಲ್ಲೂ, ನಲಿವಿನಲ್ಲೂ ಶ್ರೀಧರ್ ಭಾಗಿಯಾಗುತ್ತಿದ್ದ. ನಮ್ಮಿಬ್ಬರ ನಡುವೆ ಯಾರೇ ಬಂದು ಹುಳಿ ಹಿಂಡಿದರೂ ನಮ್ಮ ಸ್ನೇಹವನ್ನು ಭೇದಿಸಲಾಗುತ್ತಿರಲಿಲ್ಲ. ನಮ್ಮ ಸ್ನೇಹ ಕಡಲಿನಂತೆ ತೀರ ಕಾಣದಷ್ಟು ವಿಶಾಲವಾಗಿತ್ತು. ಮುಗಿಲಿನಂತೆ ದಟ್ಟವಾಗಿ ಹಬ್ಬಿತ್ತು. ಹೀಗೆ ನನ್ನ ಮತ್ತು ಅವನ ಕಾಲೇಜಿನ ನೆನಪುಗಳನ್ನು ಮೆಲುಕು ಹಾಕುತ್ತಲೇ ಬಸ್ಸಿನ ಸೀಟಿಗೆ ಒರಗಿ ನಿದ್ದೆಯ ಸಾಗರದಲ್ಲಿ ಮುಳುಗಿ ಬಿಟ್ಟೆ. ಎಚ್ಚರವಾಗಿದ್ದು "ಗುಲ್ಬರ್ಗಾ ಬಂತು ಇಳಿಯಪಾ" ಅಂತ ಕಂಡಕ್ಟರ್ ಬೆಳಿಗ್ಗೆ ಏಳು ಗಂಟೆಗೆ ಭುಜ ತಟ್ಟಿ ಎಬ್ಬಿಸಿದಾಗಲೇ. ಅದಾಗಲೇ ನನ್ನ ಬರುವಿಕೆಗಾಗಿ ಕಾಯುತ್ತಿದ್ದ ಶ್ರೀಧರ್, ನಾನು ಬಸ್ಸಿನಿಂದ ಇಳಿಯುತ್ತಿದ್ದಾಗ, ನನ್ನ ಕಂಡೊಡನೆ ಓಡಿ ಬಂದು "ವೆಲ್ಕಮ್ ಉಮರ್ ಭಾಯ್" ಎಂದು ತಬ್ಬಿಕೊಂಡ. ನಂತರ ಬೈಕಿನಲ್ಲಿ ಕೂರಿಸಿಕೊಂಡು, ಅವನ ಮನೆಯ ಕಡೆಗೆ ಕರೆದುಕೊಂಡು ಹೋದ. ಹಾದಿಯಲ್ಲಿ ಹರಟೆ ಹೊಡೆಯುತ್ತಲೇ ಮದುವೆ ಮನೆಗೆ ಬಂದು ಸೇರಿಕೊಂಡೆವು. ದೂರದ ಒಂದು ರೂಮಿನತ್ತ ಕೈ ತೋರಿಸಿ "ಉಮರ್, ಅದು ನಿನ್ನದೇ ರೂಮ್. ಬೇಗ ರೆಡಿಯಾಗಿ ಬಾ" ಅಂದ ಶ್ರೀಧರ್. ಸರಿ ಎಂದು ತಲೆಯಾಡಿಸುತ್ತಾ ರೂಮಿನೊಳಗೆ ಹೊಕ್ಕೊಡನೆ, ಅದಾಗಲೇ ಬಂದಿದ್ದ ಹಲವು ಕಾಲೇಜಿನ ಸ್ನೇಹಿತರು ಕಂಡರು. ಅದರಲ್ಲಿ ಆ ದಿನಗಳಲ್ಲಿ ನನ್ನ ಆತ್ಮೀಯರಾಗಿದ್ದವರೂ, ಜೊತೆಗೆ ನನ್ನೊಂದಿಗೆ ಜಗಳವಾಡಿ ಮುನಿಸಿಕೊಂಡವರೂ ಇದ್ದರು. ಶ್ರೀಧರ್‌ನೊಂದಿಗೆ ಜಗಳವಾಡಿದವರೂ ಇದ್ದರು. ಅವನನ್ನು ಜಾತಿಯಲ್ಲಿ ಹೀನನೆಂದು ದೂರ ಇಟ್ಟವರೂ ಇದ್ದರು. ಎಲ್ಲರನ್ನೂ ಕೈ ಕುಲುಕಿ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಎನ್ನುವುದನ್ನೆಲ್ಲಾ ವಿಚಾರಿಸಿ, ಸ್ನಾನ ಮಾಡಿಕೊಂಡು ಬಂದು ಮತ್ತೆ ಶ್ರೀಧರ್‌ನ ಜೊತೆ ಸೇರಿಕೊಂಡೆ.

ಮದುವೆಯ ಹಿಂದಿನ ದಿನವಾದ್ದರಿಂದ ಮನೆಯ ಗೋಡೆಗಳಿಗೂ ಕಿವಿ ಬರುವಂತಹ ಮಾತಿನ ಆರ್ಭಟವಿತ್ತು. ರಾತ್ರಿಯನ್ನೂ ಹಗಲಾಗಿಸುವಂತಹ ಪಳಪಳ ಹೊಳೆಯುವ ಹೂವಿನ ಸಿಂಗಾರ ಮನೆಯನ್ನು ಮದುವಣಗಿತ್ತಿಯನ್ನಾಗಿಸಿತ್ತು. ಇನ್ನೆಷ್ಟು ಹೊತ್ತು ಕಾಯಬೇಕು ಎಂದು ಚಡಪಡಿಸುತ್ತಿರುವಂತೆ ಮದುವೆ ಮಂಟಪ ಮುಂದಿನ ಸಿಂಗಾರದ ದಿನವ ಕಾಯುತ್ತ ನಿಂತಿತ್ತು. ಮದುವೆಗೆ ಒಂದು ದಿನ ಮಾತ್ರ ಬಾಕಿ ಇದ್ದಿದ್ದರಿಂದ ಶ್ರೀಧರ್‌ಗೆ ಕೆಲಸಗಳ ಒತ್ತಡ ಹೆಚ್ಚಾಗಿತ್ತು. ಅವನು ನನ್ನ ಬಿಟ್ಟು ಹೋಗಲೂ ಚಡಪಡಿಸುತ್ತಿದ್ದ. ಸ್ನೇಹಿತರೆಲ್ಲರನ್ನು ನಾಷ್ಟಾ ಮಾಡಲು ಕರೆದು, ನನ್ನನ್ನು ಒಂದು ಕಡೆ ಕೂರಿಸಿ ಹೊರಟು ಬಿಟ್ಟ. ಸ್ನೇಹಿತರಿನ್ನೂ ರೂಮಿನಿಂದ ಆಚೆ ಬರುತ್ತಿಲ್ಲ. ಒಬ್ಬನೇ ಕೂತು ಬಿಟ್ಟಿದ್ದೇನೆ. ಅಕ್ಕಪಕ್ಕದಲ್ಲಿ ಒಬ್ಬರೂ ಪರಿಚಯದವರಿಲ್ಲ. ಇಂಗು ತಿಂದ ಮಂಗನಂತಾಗಿತ್ತು ನನ್ನ ಸ್ಥಿತಿ. ತಲೆ ಮೇಲಕ್ಕೆತ್ತದೇ ನಾಷ್ಟಾ ತಿನ್ನುತ್ತಾ ಕೂತಿದ್ದೆ. ಇದ್ದಕ್ಕಿದ್ದಂತೆ ಸೀರೆಯುಟ್ಟ ಹುಡುಗಿಯೊಬ್ಬಳು ನನ್ನ ಪಕ್ಕದಲ್ಲಿ ಬಂದು ಕೂತಳು. ಒಮ್ಮೆಲೇ ನೋಡಿದರೆ ತಪ್ಪು ತಿಳಿದುಕೊಂಡಾಳು ಅಂದೆನಿಸಿ ಆಕಡೆ ಈಕಡೆ ನೋಡಿ, ಅತ್ತಿತ್ತ ಮುಖ ತಿರುಗಾಡಿಸಿ ಮೆಲ್ಲಗೆ ಅವಳತ್ತ ಕಣ್ಣು ಹಾಯಿಸಿದೆ. ಆಶ್ಚರ್ಯ! ನನ್ನ ಕಣ್ಣುಗಳನ್ನು ನಾನೇ ನಂಬಲಾರದಾದೆ. ಇದು ಕನಸೋ ನನಸೋ ಒಂದೂ ಅರ್ಥವಾಗುತ್ತಿಲ್ಲ. ಕಾಲೇಜಿನ ದಿನಗಳಲ್ಲಿ ನನ್ನನ್ನು, ನನ್ನ ನಡವಳಿಕೆಯನ್ನು ಹೀನಾಮಾನ ಹೀಯಾಳಿಸಿ, ಅವಮಾನ ಮಾಡಿದ್ದ ಸುಶ್ಮಿತಾ. ನನ್ನ ಕಂಡರೇ ಕೆಂಡದಂತೆ ಉರಿದು ಬೀಳುತ್ತಿದ್ದವಳು ಈಗ ನನ್ನ ಪಕ್ಕದಲ್ಲಿ ಬಂದು ಕುಳಿತಿದ್ದಾಳೆ! ನನಗೆ ನಂಬಲಾಗುತ್ತಿಲ್ಲ. ನಾನವಳತ್ತ ಮೆಲ್ಲಗೆ ವಾರೆಗಣ್ಣಿನಿಂದ ದಿಟ್ಟಿಸಿದಾಗ ಕಿಸಕ್ಕನೆ ನಕ್ಕು ಸುಮ್ಮಳಾದಳು. ಗಡಿಬಿಡಿಯಿಂದ ಕೈ ತೊಳೆದುಕೊಂಡವನೇ ಮದುವೆ ಮನೆಯಿಂದ ಎದ್ದು ಹೊರ ನಡೆದು ಬಂದು ಮರದ ಕೆಳಗೆ ನಿಂತು ಬಿಟ್ಟೆ. "ಉಮರ್... ಉಮರ್...." ಎನ್ನುತ್ತಲೇ ಅವಳು ನನ್ನನ್ನು ಹಿಂಬಾಲಿಸಿಕೊಂಡು ಬಂದಳು

ಮನೆಯ ಹೊರಗೆ ನೆಟ್ಟಿದ್ದ ಮರದ ಕಂಬಕ್ಕೊರಗಿ ಕೈ ಕಟ್ಟಿಕೊಂಡು ನಿಂತುಕೊಂಡಿದ್ದೆ. ಸುಶ್ಮಿತಾ ನನ್ನೆಡೆಗೆ ಆತಂಕದ ಮುಖವನ್ನೊತ್ತು ಬರುತ್ತಿರುವುದನ್ನು ಕಂಡು, ನನ್ನ ಕಣ್ಣುಗಳು ಕೆಂಡ ಕಾರತೊಡಗಿದವು. ಹತ್ತಿರ ಹತ್ತಿರ ಬರುತ್ತಲೇ, ಕಾಲೇಜಿನ ದಿನಗಳಲ್ಲಿ ಅವಳು ನನಗೆ ಮಾಡಿದ್ದ ಎಂದಿಗೂ ಮಾಸದ ಅವಮಾನದ ಆ ದಿನಗಳು ಒಂದೊಂದೇ ನೆನಪಿಗೆ ಬರಲಾರಂಭಿಸಿದವು. ಈ ಸುಶ್ಮಿತಾ ಅಂತಿಂಥವಳಲ್ಲ. ನನ್ನನ್ನು, ನನ್ನ ನಡುವಳಿಕೆಯನ್ನು ನಖ ಶಿಖಾಂತ ವಿರೋಧಿಸುತ್ತಿದ್ದವಳು. ನನ್ನ ಧರ್ಮವನ್ನು, ನನ್ನ ಧಾರ್ಮಿಕ ಆಚರಣೆಗಳನ್ನು ವಾಚಮಾಗೋಚರವಾಗಿ ಅಪಹಾಸ್ಯ ಮಾಡುತ್ತಿದ್ದವಳು. ಹಿಂದಿನದ್ದೆಲ್ಲಾ ನೆನೆಸಿಕೊಂಡೊಡನೆ ನನ್ನ ಕಣ್ಣುಗಳು ಬೆಂಕಿ ಉಗುಳಲು ಪ್ರಾರಂಭಿಸಿದವು. ಅವಳು ಮತ್ತಷ್ಟು ನನ್ನ ಹತ್ತಿರಕ್ಕೆ ಬಂದು, ಗಜ ದೂರದಲ್ಲಿ ನಿಂತು ಕ್ಷೀಣವಾದ ದುಃಖತಪ್ತ ದನಿಯಲ್ಲಿ "ಹೇಗಿದ್ದೀಯಾ ಉಮರ್?" ಅಂದೊಡನೆ ನನ್ನ ಪಿತ್ತ ನೆತ್ತಿಗೇರಿ, ನೆನಪಿದ್ದ ಎಲ್ಲಾ ಬೈಗುಳಗಳನ್ನು ಒಂದೇ ಉಸಿರಿಗೆ ಒದರಿ "ದೂರ ನಿಲ್ಲು, ಇನ್ಮುಂದೆ ನಿನ್ನ ದರಿದ್ರ ಮುಖ ನನಗೆ ತೋರಿಸಬೇಡ" ಅಂತ ಗಟ್ಟಿ ದನಿಯಲ್ಲಿ ಗದರಿದೆ. ಕುದಿಯುವ ಲಾವಾ ರಸದಂತೆ ಹರಿಯತೊಡಗಿದ ನನ್ನ ಆವೇಶವನ್ನು ಕಂಡ ಅವಳು, ನಿಂತ ಜಾಗದಲ್ಲೇ ಹೌಹಾರಿದಳು. ಆ ಕ್ಷಣ ಅದೆಷ್ಟು ಜೋರಾಗಿ ಅವಡುಗಚ್ಚಿದ್ದಳೆಂದರೆ, ಏನನ್ನು ಹೇಳಲು ಬಯಸಿದ್ದಳೋ ಆ ಮಾತುಗಳು ತುಟಿ ಸೀಳಿ ಹೊರ ಹೊಮ್ಮಲೇ ಇಲ್ಲ. ಅವಳ ಕಣ್ಣಂಚಲ್ಲಿ ಮಡುಗಟ್ಟಿದ ಕಣ್ಣೀರು ಕಂಡು, ನನ್ನ ಕಣ್ಣುಗಳು ತಂತಾವೇ ಮುಚ್ಚಿಕೊಂಡವು. ಎರಡೂ ಕೈಗಳಿಂದ ಅವಳು ತನ್ನ ಮುಖವನ್ನು ಗಟ್ಟಿಯಾಗಿ ಮುಚ್ಚಿಕೊಂಡು ನಿಂತಳು. ಕಣ್ರೆಪ್ಪೆ ಮಿಟುಕಿಸದೆ ನಿಂತಿದ್ದ ನನ್ನ ಎಡಗೈಯನ್ನು, ತನ್ನ ಬಲಗೈಯಿಂದ ಹಿಡಿದು "ಉಮರ್, ನಾನು ನಿನಗೆ ಎಷ್ಟೆಲ್ಲಾ ಅವಮಾನ ಮಾಡಿದ್ದೀನಿ ಅಂತ ನನಗಿನ್ನೂ ನೆನಪಿದೆ. ಆ ಘಳಿಗೆಗಳನ್ನು ನೆನೆಸಿಕೊಂಡು ಸಾಕಷ್ಟು ಅತ್ತಿದ್ದೀನಿ ಕೂಡ. ನನ್ನನ್ನು ಕ್ಷಮಿಸಿ ಬಿಡೋ. ಪ್ಲೀಸ್!" ಅಂದಳು. ನಾನು ಅವಡುಗಚ್ಚಿದೆ. ಕೋಪಾವಿಷ್ಟನಾಗಿ "ಯಾರು ನೀನು? ನನ್ನತ್ರ ಮತ್ತೆ ಯಾಕೆ ಬಂದೆ? ನೀನು ನನಗೆ ಮಾಡಿದ ಅವಮಾನಕ್ಕೆ ನಿನ್ನನ್ನು ಕ್ಷಮಿಸುವ ಮಾತೇ ಇಲ್ಲ" ಎಂದವನೇ ಮಿಂಚಿನಂತೆ ಎರಗಿ ಅವಳ ಕಪಾಳಕ್ಕೆ ಬಾರಿಸಿ ಬಿಟ್ಟೆ. ಒಂದೇ ಏಟಿಗೆ ಅವಳು ಪ್ರಚಂಡ ಬಿರುಗಾಳಿಯ ಹೊಡೆತಕ್ಕೆ ಉರುಳಿ ಬಿದ್ದ ಮರದಂತೆ ನೆಲಕ್ಕೊರಗಿದಳು. ದೂರದಲ್ಲಿ ನಿಂತು ನಮ್ಮಿಬ್ಬರನ್ನು ಗಮನಿಸುತ್ತಿದ್ದ ಶ್ರೀಧರ್, ನಾನು ಅವಳ ಮೇಲೆ ಕೈ ಎತ್ತುವುದನ್ನು ನೋಡುತ್ತಲೇ ನನ್ನತ್ತ ಓಡೋಡಿ ಬಂದು ಸಮಾಧಾನಿಸತೊಡಗಿದ. ನನ್ನನ್ನು ಎಳೆದುಕೊಂಡು ಹೋಗಿ ಒಬ್ಬನನ್ನೇ ರೂಮಿನಲ್ಲಿ ಕೂರಿಸಿ ಹೊರಗಿನಿಂದ ಚಿಲಕ ಹಾಕಿದ. ಆ ಕ್ಷಣ ಬಾಣಲೆಯಲ್ಲಿ ಕುದಿಯುತ್ತಿದ್ದ ಎಣ್ಣೆಗೆ ಒಂದು ಹನಿ ನೀರು ಸಿಡಿಸಿದರೆ ಚಟ್ ಪಟ್ ಸದ್ದಾಗುವಂತೆ, ನನ್ನ ನರನಾಡಿಗಳಲ್ಲಿ ರಕ್ತ ಕೊತ ಕೊತ ಕುದಿಯತೊಡಗಿತ್ತು. ಶ್ರೀಧರ್‌ಗೆ ನನ್ನ ಆಕ್ರೋಶದ ಹಿಂದಿದ್ದ ನೋವಿನ ಆಳದ ಅರಿವಿತ್ತು. ಸುಶ್ಮಿತಾ ನನಗೆ ಅವಮಾನಗಳ ಸರಮಾಲೆಯನ್ನೇ ತೊಡಿಸಿದ್ದಳು ಎನ್ನುವುದು ನನಗಿಂತ ಚೆನ್ನಾಗಿ ಅವನಿಗೇ ಗೊತ್ತಿತ್ತು. ಅವನು ಜಾತಿಯ ಕಾರಣಕ್ಕೆ ತಾರತಮ್ಯ ಅನುಭವಿಸಿದ್ದರೆ, ನಾನು ಧಾರ್ಮಿಕ ಕಾರಣಕ್ಕೆ ಅವಮಾನಗಳ ಮಹಾಪರ್ವವನ್ನೇ ಹಾದು ಬಂದಿದ್ದೆ. ಅವನು ತನ್ನದಲ್ಲದ ತಪ್ಪಿಗೆ ಅಸ್ಪೃಶ್ಯ ಎಂದು ದೂರ ತಳ್ಳಲ್ಪಡುತ್ತಿದ್ದರೆ, ನಾನು ನನ್ನದಲ್ಲದ ತಪ್ಪಿಗೆ ಭಯೋತ್ಪಾದಕನಾಗಿಯೋ, ದೇಶದ್ರೋಹಿಯಾಗಿಯೋ, ಪಾಕಿಸ್ತಾನ ಪ್ರೇಮಿಯಾಗಿಯೋ ಕಟಕಟೆಯಲ್ಲಿ ನಿಲ್ಲುತ್ತಿದ್ದೆ. ಹಸಿವಿನಿಂದ ಭಿಕ್ಷೆ ಬೇಡುವ ಭಿಕ್ಷುಕರಿಗಿಂತಲೂ, ತಾರತಮ್ಯದಿಂದ ನಾವು ಎದುರಿಸಿದ್ದ ಮಾನಾಪಮಾನಗಳ ಸರಣಿ ಬಲು ಭೀಕರ.

ಅವಳು ನೆಲದ ಮೇಲೆ ಬೀಳುತ್ತಲೇ ಪ್ರಜ್ಞೆ ಕಳೆದುಕೊಂಡಿದ್ದಳು. ನಾನು ಸುಮಾರು ಒಂದು ತಾಸಿನವರೆಗೆ ಸೇಡು ತೀರಿಸಿಕೊಳ್ಳಬೇಕೆಂದು ಯೋಚಿಸುವುದರಲ್ಲೇ ಮಗ್ನನಾಗಿದ್ದೆ. ಆ ಕ್ಷಣ ಕಾಲೇಜಿನಲ್ಲಿ ಎದುರಿಸಿದ್ದ ಅವಮಾನಗಳು ಕಣ್ಣಿಗೆ ಕಟ್ಟಿದಂತಾಗಿದ್ದವು. ಎಷ್ಟೋ ಹೊತ್ತಿನ ನಂತರ ಹಸಿದ ಹೆಬ್ಬುಲಿಯಂತೆ ಭುಸಗುಡುತ್ತಿದ್ದ ನನ್ನ ಆವೇಶ ತಣ್ಣಗಾಯಿತು. ಹಾಗೇ ನಿದ್ದೆಗೆ ಜಾರಿದೆ. ಎಚ್ಚರವಾದಾಗ ರಾತ್ರಿ ಎಂಟಾಗಿತ್ತು. ಮೈ ಮನಸ್ಸು ಭೂಮಿ ತೂಕದಷ್ಟೇ ಭಾರ ಎನಿಸುತ್ತಿತ್ತು. ಪ್ರಾಣ ಸ್ನೇಹಿತನ ಮದುವೆ ಎಂಬ ಸಂಭ್ರಮ ಕಿಂಚಿತ್ತೂ ಇಲ್ಲದಂತೆ ಹಾಳಾಗಿ ಹೋಗಿತ್ತು. ಸಂಜೆಯ ಸ್ವಾಭಾವಿಕ ತಿಳಿಗಾಳಿ ನನ್ನ ದೇಹದ ರೋಮರೋಮಕ್ಕೂ ಕಾಯಕಲ್ಪವಾಗಿತ್ತು. ಸ್ವಲ್ಪ ಹೊತ್ತಿನ ಮುಂಚೆ ನನ್ನನ್ನು ಭಾದಿಸಿದ್ದ ಆಕ್ರೋಶ ಈಗ ಸಾಕಷ್ಟು ಗುಣಮುಖವಾಗಿತ್ತು. ಆಚೆ ಬರುತ್ತಲೇ ಬೆಳಗ್ಗೆ ನಾವು ಕಲಹವಾಡಿದ ಜಾಗದಲ್ಲೇ ಸುಶ್ಮಿತಾ ಕೂತಿದ್ದನ್ನು ಗಮನಿಸಿದೆ. ಮೊದಲ ಬಾರಿಗೆ ಆಕೆ ಬಲು ಚಿಂತೆಗೀಡಾದದ್ದು ನೋಡಿದೆ. ಸ್ಥಿಮಿತ ಕಳೆದುಕೊಂಡ ಮನಸ್ಸು. ಬಣಗುಡುತ್ತಿರುವ ಕಣ್ಣುಗಳು. ಗಾಳಿಯ ಹೊಡೆತಕ್ಕೆ ಕೆದರಿದ್ದ ಕೂದಲು. ಹಾರಿ ಹೋಗಿದ್ದ ಸೀರೆಯ ಸೆರಗು. ಆಕೆಗೆ ತನ್ನ ಮೈಯ ಪರಿವೆಯೂ ಇರಲಿಲ್ಲ. ಮನಸ್ಸಿನ ಪರಿವೆಯೂ ಇರಲಿಲ್ಲ. ಆಕೆ ಯಾರನ್ನು ಹುಡುಕುತ್ತಿದ್ದಾಳೆ ಎನ್ನುವುದನ್ನು ಆಕೆಯ ಕಣ್ಣುಗಳು ಸಾರಿ ಹೇಳುತ್ತಿದ್ದವು. ಕಾಲೇಜಿನಲ್ಲಿ ಗಂಡುಬೀರಿಯಂತಿದ್ದ ಅವಳು ಈಗ ದೈನ್ಯಾವಸ್ಥೆಯಲ್ಲಿರುವುದನ್ನು ಕಂಡು, ಸ್ವಲ್ಪ ಹೊತ್ತು ಮೌನವಾಗಿ ನಿಂತ ಜಾಗದಲ್ಲೇ ನಿಂತು ಬಿಟ್ಟೆ. ಅವಳಿಗೆ ಹೊಡೆದಿದ್ದು ಘೋರ ತಪ್ಪಾಯಿತೆಂದು ಕೈ ಕೈ ಹಿಸುಕಿಕೊಳ್ಳತೊಡಗಿದೆ. ಮೊದಲ ಬಾರಿಗೆ ಅವಳಿಗಾಗಿ ನನ್ನ ಕಣ್ಣಂಚಲ್ಲಿದ್ದ ಕಣ್ಣೀರು ಕೆನ್ನೆಗಿಳಿದಿತ್ತು. ಸಾವರಿಸಿಕೊಂಡು ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಅವಳೆದುರು ಗರುಡು ಗಂಬದಂತೆ ನಿಂತುಕೊಂಡೆ.

ಇಡೀ ದಿನ ಕುಳಿತ ಜಾಗದಲ್ಲೇ ಕುಳಿತಿದ್ದ ಸುಶ್ಮಿತಾಳಿಗೆ ಗುಲ್ಬರ್ಗಾದ ಮೈ ಸುಡುವ ಧಗೆಯಿಂದ ಬೆಂದು ಬೆಂಡಾಗಿದ್ದ ಅವಳ ದೇಹ ಬೆವರಿನಲ್ಲಿ ಮಿಂದು ಹೋಗಿತ್ತು. ಆಗ ತಾನೇ ಬೀಸಲು ಶುರು ಮಾಡಿದ್ದ ಮಂದವಾದ ಸುಳಿಗಾಳಿಗೆ ತನ್ನನ್ನು ಒಡ್ಡಿಕೊಳ್ಳಲು ಎದ್ದು ಕೂತು ಪ್ರಯಾಸ ಪಡುತ್ತಿದ್ದಳು. ಅವಳೆದುರು ಕಬ್ಬಿಣದ ಕಂಬದಂತೆ ನಿಂತಿದ್ದ ನನ್ನ ಕಂಡೊಡನೆ ಅವಳ ಕೈ ಕಾಲುಗಳು ಕಂಪಿಸತೊಡಗಿದವು. ಗದ್ಗದಿಸುತ್ತಾ ಕೂತಿದ್ದ ಅವಳ ಮೂಗಿನಿಂದ ಹೊರ ಸೂಸುತ್ತಿದ್ದ ಏದುಸಿರಿನಲ್ಲಿ ಬಿಕ್ಕಳಿಕೆ ಹಾಗೂ ಗೋಗರೆತ ಬೆರೆತಿತ್ತು. ನನ್ನ ಪಾದಗಳನ್ನು ನೆಲಕ್ಕಂಟಿಸದೆ ಮೇಲಕ್ಕೆತ್ತಿ, ಮೊಣಕಾಲು ಮುಂದೆ ಚಾಚಿ, ಕಾಲ ಬೆರಳುಗಳ ಮೇಲೆಯೇ ಭಾರ ಹಾಕಿ ಅವಳೆದುರು ಕೂತಾಕ್ಷಣವೇ ಅವಕ್ಕಾಗಿ ಬೆಚ್ಚಿಬಿದ್ದಳು. ಕಂಪಿಸುತ್ತಿದ್ದ ಅವಳ ಕೈಗಳನ್ನು ನನ್ನ ಕೈಗಳಿಂದ ಬಲವಾಗಿ ಹಿಡಿದುಕೊಂಡಾಗ ಬಿಗಿದ ಗಂಟಲಿನಿಂದ ಹೊರ ಬರುತ್ತಿದ್ದ ಆತಂಕದ ಬಿಕ್ಕಳಿಕೆ ಕ್ರಮೇಣ ಗಂಟಲಲ್ಲೇ ಕರಗತೊಡಗಿತು. ಕಂಪಿಸುತ್ತಿದ್ದ ತನ್ನ ತುಟಿಗಳನ್ನು ಬಿಚ್ಚಿದ ಸುಶ್ಮಿತಾ, ಸುಸ್ತಾದ ದನಿಯಲ್ಲಿ "ನನ್ನನ್ನ ಕ್ಷಮಿಸಿ ಬಿಡೋ" ಅನ್ನುತ್ತಾ ಕಪಾಳದಲ್ಲಿ ಸಮ್ಮಿಲನಗೊಂಡಿದ್ದ ಕಣ್ಣೀರು ಹಾಗೂ ಬೆವರಿನ ಹನಿಗಳನ್ನು ಸೆರಗಿನಿಂದ ಒರೆಸಿಕೊಂಡಳು. ದಮ್ಮಿಲ್ಲದ ದನಿಯಲ್ಲಿ ನಾನು ಬರೀ ಹ್ಞೂಗುಟ್ಟಿ ತಲೆಯಾಡಿಸಿದೆ. ಕಣ್ಣೊರೆಸಿಕೊಂಡು ಗದ್ಗದಿತಳಾಗಿ "ಉಮರ್, ಪ್ರೀತಿಸುವಂತೆ ನನ್ನ ಹಿಂದೆ ದುಂಬಾಲು ಬಿದ್ದಿದ್ದ ನಿನ್ನನ್ನು, ನಿನ್ನ ಧರ್ಮದ ಕಾರಣಕ್ಕೆ ತಿರಸ್ಕರಿಸಿ, ಅಪಮಾನಿಸಿ ದೊಡ್ಡ ತಪ್ಪು ಮಾಡಿಬಿಟ್ಟೆ" ಎಂದವಳೇ ನನ್ನ ಮುಖವನ್ನು ಬರಸೆಳೆದು ತನ್ನ ಬಲ ಭುಜಕ್ಕೆ ಅವಚಿಕೊಂಡು ಭೋರಾಡಿ ಅಳತೊಡಗಿದಳು. ಅವಳ ಭುಜದ ಮೇಲಿದ್ದ ಶೀತಲ ಬೆವರು ನನ್ನ ಹಣೆ ಮೇಲೆ ಹರಿದಾಡಿತು. ನನ್ನ ಕಣ್ಣುಗಳಿಗೆ ಮಂಪರು ಕವಿಯತೊಡಗಿದಂತಾಗಿತ್ತು. ಸುಶ್ಮಿತಾಳನ್ನು ನೆನೆಸಿಕೊಂಡಾಗಲೆಲ್ಲ ಧುಮ್ಮಿಕ್ಕುತ್ತಿದ್ದ ಉಕ್ಕಿನಂತ ರೋಷ ಆವಿಯಾಗಿ, ಅವಳ ಬಗ್ಗೆ ಮೊದಲ ಸಲ ಸಹಾನುಭೂತಿ ಮೂಡಿತ್ತು. ಅವಳ ಹಣೆ ಮೇಲೆ ಕೈಯಿಟ್ಟು, ಬಲು ಪ್ರೀತಿಯಿಂದ ತಲೆಗೂದಲನ್ನು ನೇವರಿಸುತ್ತಾ "ಸುಶ್ಮಿತಾ ನಿನಗೇನಾಗಿದೆ?" ಎಂದು ಕೇಳಿ ಸಮಾಧಾನಿಸತೊಡಗಿದೆ. ಅವಳ ದನಿ ಗಂಟಲಿನಿಂದ ಹೊರ ಬೀಳದಾಯಿತು. ಸೀರೆ ಸೆರಗಿನಿಂದ ಮುಖದ ಮೇಲೆ, ಕೊರಳ ಸುತ್ತು ಕೈಯಾಡಿಸಿಕೊಂಡಳು. ಅಲ್ಲಿ ಬಿಸಿ ಬೆವರು ಹರಿಯುತ್ತಿರುವುದು ಅರಿವಿಗೆ ಬಂತು. ಆಸರೆ ಬೇಡುವ ದೃಷ್ಟಿಯಿಂದ ನನ್ನತ್ತ ಮುಖವೆತ್ತಿ ದಿಟ್ಟಿಸಿದಳು. ಅವಳು ಅದೇನನ್ನೋ ಹೇಳಲು ಬಯಸುತ್ತಿದ್ದಳು. ಕಂಪಿಸುತ್ತಿದ್ದ ತುಟಿಗಳನ್ನು ಸೀಳಿ ಹೊರ ಬರುತ್ತಿದ್ದ ಆ ಬಿಕ್ಕಳಿಕೆಯ ಮಾತುಗಳಲ್ಲಿ ಅಪಾರ ನೋವಿತ್ತು. ಹೇಳಲು ಭಯವೋ, ಸಂಕೋಚವೋ ಅಥವಾ ಇರಿಸು ಮುರಿಸು ಉಂಟಾಯಿತೋ ಬಿಚ್ಚಿದ ತುಟಿಗಳನ್ನು ಮತ್ತೆ ಬಿಗಿದುಕೊಂಡಳು. ಅಷ್ಟರಲ್ಲಿ ಶ್ರೀಧರ್ ಹಾಗೂ ನಾಳೆ ಅವನ ಹೆಂಡತಿಯಾಗುವವಳು ನಮ್ಮತ್ತ ಓಡೋಡಿ ಬಂದರು. ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದ ಅವರಿಬ್ಬರೂ, ನಮ್ಮಿಬ್ಬರನ್ನು ಕೆಲಕಾಲ ಒಂದೇ ಸಮನೆ ದಿಟ್ಟಿಸುತ್ತಾ ನಿಂತುಬಿಟ್ಟರು.

ಯಾರ ನಾಲಿಗೆಯಿಂದಲೂ ಮಾತುಗಳು ಹೊರಳುತ್ತಿಲ್ಲ. ಕೆಲಕಾಲ ಒಬ್ಬರ ಮುಖವನ್ನು ಮತ್ತೊಬ್ಬರು ದಿಟ್ಟಿಸುತ್ತಾ ಎಲ್ಲರೂ ಸ್ತಬ್ಧ. ನಮ್ಮ ಹೃದಯ ಬಡಿತ ನಮಗೆ ಕೇಳಿಸುತ್ತಿದೆಯೇನೋ ಎನ್ನುವಷ್ಟರ ಮಟ್ಟಿಗೆ ನೀರವ ಮೌನ. ಒಂದೆಜ್ಜೆ ಮುಂದಿಟ್ಟು ಬಂದ ಶ್ರೀಧರ್‌ನ ಹೆಂಡತಿಯಾಗುವವಳು, ಆತಂಕದಿಂದ ನನ್ನಡೆಗೆ ನೋಡುತ್ತಾ, ಸುಶ್ಮಿತಾಳ ಕೈ ಹಿಡಿದುಕೊಂಡು ತನ್ನ ರೂಮಿನತ್ತ ಹೊರಟರೆ, ಶ್ರೀಧರ್ ನನ್ನನ್ನು ಅವನ ರೂಮಿನತ್ತ ಕರೆದುಕೊಂಡು ಹೋದ. ಶ್ರೀಧರ್‌ನೊಂದಿಗೆ ನಾಳೆ ಹಸೆಮಣೆ ಏರುತ್ತಿರುವ 'ಸ್ಮಿತಾ' ನನಗೆ ಅಪರಿಚಿತಳೇನಲ್ಲ. ಅವಳು ಸಹ ನಮ್ಮ ಸಹಪಾಠಿಯೇ. ಕಾಲೇಜಿನ ದಿನಗಳಲ್ಲಿ ಶ್ರೀಧರ್ ಹಾಗೂ ಸ್ಮಿತಾ ಪರಸ್ಪರ ಪ್ರೀತಿಸುತ್ತಿರುವ ವಿಷಯ ನನಗೆ ಗೊತ್ತಿತ್ತಾದರೂ, ಅವರಿಬ್ಬರ ಪ್ರೀತಿ ಮದುವೆಯವರೆಗೆ ಬರುತ್ತದೆಯೆಂದು ನಾನು ಕನಸು ಮನಸಲ್ಲೂ ಊಹಿಸಿಕೊಂಡಿರಲಿಲ್ಲ. ಕಾರಣ ಸ್ಮಿತಾ ಮೇಲ್ಜಾತಿಯಲ್ಲಿ ಹುಟ್ಟಿದವಳಾಗಿದ್ದಳು. ಅವಳ ಪೋಷಕರು ಮಗಳು ಇಷ್ಟಪಟ್ಟು ಪ್ರೀತಿಸುತ್ತಿರುವ ಶ್ರೀಧರ್‌ನೊಂದಿಗೆ ಮದುವೆ ಮಾಡಿಕೊಡುತ್ತಾರೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಮತ್ತು ಅದು ಹಾಗೆಯೇ ಆಗಿತ್ತು. ಮಗಳ ಇಷ್ಟ-ಕಷ್ಟ, ನೋವು-ನಲಿವುಗಳನ್ನು ಬದಿಗೊತ್ತಿದ ಹೆತ್ತವರು, 'ಹೀನ ಜಾತಿಯ ಹುಡುಗನೊಂದಿಗೆ ಸಂಬಂಧ ಬೆಳೆಸಲು ಆಗುವುದಿಲ್ಲವೆಂದು' ಕಡ್ಡಿ ತುಂಡಾಗುವಂತೆ ಹೇಳಿ, ತಮ್ಮ ಮನಸ್ಸು ಅದೆಷ್ಟು ಹೀನವಾಗಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದರು. ಇತ್ತ ತನ್ನ ಪರಿಶುದ್ಧ ಪ್ರೀತಿಯನ್ನು ಜಾತಿಯೆಂಬ ಘಟಸರ್ಪಕ್ಕೆ ಬಲಿಕೊಡಲು ಬಯಸದ ಸ್ಮಿತಾ, ಶ್ರೀಧರ್‌ಗಾಗಿ ಹೆತ್ತವರನ್ನು ತೊರೆದು ಅವನ ಮನೆ ಸೇರಿಕೊಂಡಿದ್ದಳು. ಕಾಲೇಜಿನಲ್ಲಿ ಓದುತ್ತಿದ್ದಾಗ ಅವರಿಬ್ಬರ ಪ್ರೀತಿ, ನಮ್ಮಿಬ್ಬರ ಸ್ನೇಹ ನಮ್ಮ ಮೂವರ ನಡುವೆ ಆತ್ಮೀಯ ಬೆಸುಗೆ ಬೆಸೆದಿತ್ತು. ಕಾಲೇಜಿನಲ್ಲಿ ಓದುತ್ತಿರುವುದು ನಾವು ಮೂವರು ಮಾತ್ರವೇನೋ ಎಂಬಂತೆ ಓಡಾಡಿದ್ದು ಉಂಟು, ತಿರುಗಾಡಿದ್ದೂ ಉಂಟು. ಈ ಇಡೀ ಕಾಲೇಜಿನಲ್ಲಿ ನಮ್ಮ ಸ್ನೇಹ ಮಾತ್ರ ಉಳಿದವರಿಗಿಂತ ಉತ್ತಮವಾದದ್ದು ಎಂದುಕೊಂಡಿದ್ದೂ ಉಂಟು. ಸುಶ್ಮಿತಾ ನನ್ನನ್ನು ದಿನನಿತ್ಯ ಅವಮಾನಿಸುತ್ತಿದ್ದ ವಿಷಯ ಸ್ಮಿತಾಳಿಗೆ ಚೆನ್ನಾಗೇ ಗೊತ್ತಿತ್ತು. ಎಷ್ಟೋ ಸಾರಿ "ನಿನಗೆ ಈ ಇಡೀ ಕಾಲೇಜಿನಲ್ಲಿ ಅವಳೊಬ್ಬಳೇ ಕಾಣುವುದಾ? ಇನ್ನ್ಯಾರು ಸಿಗಲಿಲ್ಲವಾ ನಿನಗೆ? ಅಂತ ಕೊರಳ ಪಟ್ಟಿ ಹಿಡಿದು ಸಿಡುಕಿನಿಂದ ಗದರಿಸಿದ್ದಳು. ಆದರೆ ಇದೀಗ ಸುಶ್ಮಿತಾಳ ಕುರಿತು ಸ್ಮಿತಾಳ ಅಭಿಪ್ರಾಯ ಬದಲಾಗಿತ್ತು. ಶ್ರೀಧರ್‌ನದ್ದೂ ಬದಲಾಗಿತ್ತು. ನನ್ನದು ಮಾತ್ರ ನಾನೇನು ಅಂದುಕೊಂಡಿದ್ದೇನೋ ಅದೇ ಬದ್ಧತೆಯಿಂದ ಅಭಿಪ್ರಾಯ ಬದಲಾಯಿಸದೆ ಬಲವಾಗಿ ಅವಳನ್ನು ದ್ವೇಷಿಸುತ್ತಿದ್ದೆ.

ಸುಶ್ಮಿತಾಳನ್ನು ತನ್ನ ರೂಮಿನಲ್ಲಿ ಕೂರಿಸಿದ ಸ್ಮಿತಾ, ನಾವು ಕೂತಿದ್ದ ರೂಮಿನ ಬಾಗಿಲನ್ನು ದೂಡಿ ಒಳ ಬಂದಳು. ಕೆಲಕಾಲ ನನ್ನನ್ನೇ ದಿಟ್ಟಿಸುತ್ತಾ, ಶ್ರೀಧರ್‌‌ನ ಪಕ್ಕದಲ್ಲಿ ಕುಳಿತಳು. "ಉಮರ್, ನೀನು ಸುಶ್ಮಿತಾಳ ಪ್ರೀತಿಗಾಗಿ ಹಪಾಹಪಿಸುತ್ತಿದ್ದಾಗ, ಅವಳು ನಿನ್ನನ್ನು ಅದೆಷ್ಟು ಗೋಳು ಹೊಯ್ದುಕೊಂಡಳು, ನಿನ್ನ ಧಾರ್ಮಿಕ ಆಚರಣೆಗಳನ್ನು ಅದೆಷ್ಟು ಕೆಟ್ಟ ಶಬ್ದಗಳಿಂದ ಹೀಯಾಳಿಸಿದಳು ಅನ್ನುವುದು ನನಗೂ ನೆನಪಿದೆ. ಅದಕ್ಕಾಗಿ ಇವತ್ತಿಗೂ ನಿನ್ನ ಮನದಲ್ಲಿ ಆಕ್ರೋಶ ಮಡುಗಟ್ಟಿ ಕೂತಿದೆ ಎನ್ನುವುದು ಗೊತ್ತಿದೆ. ಆದರೆ ಈಗ ಸುಶ್ಮಿತಾ ಮೊದಲಿನ ಹಾಗೆ ಇಲ್ಲ ಕಣೋ. ಅವಳು ತುಂಬಾ ಬದಲಾಗಿದ್ದಾಳೆ. ನಿನ್ನನ್ನು ತಿರಸ್ಕರಿಸಿದ ನಂತರ ಅವಳು ತುಂಬಾ ನೊಂದುಕೊಂಡಿದ್ದಾಳೆ. ಓದು ಮುಗಿದಾಕ್ಷಣವೇ ಅವಳ ಹೆತ್ತವರು ಅವಳಿಗೆ ಮದುವೆ ಮಾಡಿ ಬಿಟ್ಟರು. ಅವಳ ಗಂಡನೋ ಕೆಲಸವಿಲ್ಲದೆ ಅಲೆಯುತ್ತಾ, ದಿನದ ಇಪ್ಪನಾಲ್ಕು ಗಂಟೆಯೂ ಸಾರಾಯಿಯಲ್ಲೇ ಸ್ನಾನ ಮಾಡುವ ಕುಡುಕ. ಅವಳಿಗೆ ದಿನವೂ ಹೊಡೆಯುತ್ತಾನಂತೆ'.
       'ಉಮರ್, ಸುಶ್ಮಿತಾ ಮದುವೆಯಾದ ಬಳಿಕ ಸಾಕಷ್ಟು ನೋವುಂಡಿದ್ದಾಳೆ. ಅವಳು ಈಗ ನಿನ್ನನ್ನು ಬಯಸುತ್ತಿದ್ದಾಳೆ. ನಿನ್ನ ಪ್ರೀತಿಯನ್ನು ಬಯಸುತ್ತಿದ್ದಾಳೆ. ತನ್ನ ಚಿಂದಿಯಾದ ಬದುಕನ್ನು, ನಿನ್ನ ಪ್ರೀತಿ - ಪ್ರೇಮದ ಸೂಜಿ ದಾರಗಳಿಂದ ಹೊಲಿದು ಸರಿಪಡಿಸಿಕೊಳ್ಳಲು ಹಾತೊರೆಯುತ್ತಿದ್ದಾಳೆ'.
       'ಜಾತಿಯ ಕಾರಣಕ್ಕೆ ಶ್ರೀಧರ್‌ಗೆ ಆದ ಅವಮಾನದ ಮುಂದೆ, ನಿನಗಾದ ಅವಮಾನ ಏನೇನೂ ಅಲ್ಲ. ಇವನು ಎದುರಿಸಿದ ಮಾನಾಪಮಾನಗಳ ಸರಣಿ ಸಾಗರದಷ್ಟಾದರೆ, ನಿನ್ನದು ಸಾಸಿವೆ ಕಾಳಿನಷ್ಟು. ಆದರೂ ಶ್ರೀಧರ್ ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದಾನೆ. ನೀನು ಕೂಡ ಅವತ್ತು ಎಲ್ಲವನ್ನೂ ಸಹಿಸಿಕೊಂಡೇ ಇದ್ದೆ. ಈಗಲೂ ಮೊದಲಿದ್ದ ಸಹನೆಯನ್ನು ಮುಂದುವರೆಸಿಕೊಂಡು ಹೋಗು. ಹಾಗಂತ ನೀನು ಸುಶ್ಮಿತಾಳನ್ನು ಮತ್ತೆ ಪ್ರೀತಿಸು ಅಂತ ಹೇಳುತ್ತಿಲ್ಲ. ಪ್ರೀತಿಸುವುದಾದರೆ ಬೇಡ ಅಂತಲೂ ಹೇಳುವುದಿಲ್ಲ. ಆದರೆ ನಿನ್ನ ಸಿಟ್ಟಿನ ಕೈಗೆ ಆಯುಧ ಕೊಟ್ಟು ಅವಳನ್ನು ನೋಯಿಸಬೇಡ. ಅಬ್ಬಬ್ಬಾ ಅಂದ್ರೇ ನಾಳೆ ಸಂಜೆವರೆಗೂ ಮಾತ್ರ ಅವಳು ನಿನ್ನೊಂದಿಗೆ ಇರಬಹುದು. ನೋಡು ನೀನೇ ಯೋಚನೆ ಮಾಡು". ಎಂದು ಸ್ಮಿತಾ ತನ್ನ ಸುದೀರ್ಘ ಗೀತೋಪದೇಶ ಮುಗಿಸಿದಳು. ಕಣ್ರೆಪ್ಪೆ ಮಿಟುಕಿಸದೆ ಅವಳನ್ನೇ ನೋಡುತ್ತಾ, ಕಿವಿ ನಿಮಿರಿಸಿಕೊಂಡು ಅವಳ ಮಾತುಗಳನ್ನೇ ಕೇಳುತ್ತಾ ಕುಳಿತಿದ್ದ ನನ್ನ ಕಣ್ಣುಗಳು ಅರ್ಧ ಮುಚ್ಚಿಕೊಂಡವು. ಮತ್ತೆ ಪೂರ್ತಿ ಕಿಸಿದವು. ಪ್ರಖರವಾದ ಕಣ್ಣುಗಳನ್ನು ಮಿಟುಕಿಸದೆ "ಪ್ರೇಮದ ಲವಶೇಷವೂ ಗೊತ್ತಿಲ್ಲದ ಅವಳೊಂದಿಗೆ ಮತ್ತಿನ್ಯಾಕೆ ಪ್ರೀತಿ?" ಅಂತ ಮಾತು ಶುರು ಮಾಡುತ್ತಿರುವಾಗಲೇ ಅಡ್ಡ ಬಾಯಿ ಹಾಕಿ ಬಂದ ಶ್ರೀಧರ್, ನನ್ನ ಭುಜದ ಮೇಲೆ ತನ್ನ ಕೈಯನ್ನಿಟ್ಟು "ಈಗಲೇ ಯಾವ ತೀರ್ಪನ್ನೂ ಕೊಡ್ಬೇಡ ಉಮರ್ ಭಾಯ್. ನಿಜಕ್ಕೂ ಸುಶ್ಮಿತಾ ತುಂಬಾ ಬದಲಾಗಿದ್ದಾಳೆ. ನಾಳೆವರೆಗೂ ನಮ್ಮ ಜೊತೆಗೆ ಇರ್ತಿಯಾ. ಸುದೀರ್ಘವಾಗಿ ಯೋಚಿಸಿ ನಿನ್ನ ನಿರ್ಧಾರ ಏನು ಅನ್ನುವುದು ಹೇಳು. ಈಗ ನಮ್ಮೊಂದಿಗೆ ಊಟ ಮಾಡು ಬಾ" ಅಂತ ಕರೆದ. "ಇಲ್ಲ ನನಗೆ ಹಸಿವಿಲ್ಲ. ನೀವು ಊಟ ಮಾಡಿ. ನಾನು ನಂತರ ಮಾಡುತ್ತೇನೆ" ಎಂದು ಬಡಬಡಾಯಿಸುತ್ತಾ ಹೇಳಿ ಅವರನ್ನು ರೂಮಿನಿಂದ ಹೊರ ಕಳಿಸಿ, ಮಂಚದ ಮೇಲೆ ಅಂಗಾತ ಮಲಗಿದೆ. ಕಾಲೇಜಿಗೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು, ಕೊನೆಯ ದಿನದವರೆಗಿನ ಆ ನೋವು-ನಲಿವಿನ ನೆನಪುಗಳು, ಒಂದರ ನಂತರ ಮತ್ತೊಂದರಂತೆ ಬಂದು ತಲೆಯೊಳಗೆ ಭೂಮಿಯಂತೆ ನಿಧಾನವಾಗಿ ತಿರುಗಲಾರಂಭಿಸಿದವು.

ನಾನಾಗ ಬಿಜಾಪುರದ ಕೃಷಿ ಮಹಾವಿದ್ಯಾಲಯದಲ್ಲಿ ಓದುತ್ತಿದ್ದೆ. ಯಾರೊಂದಿಗೂ ಬೆರೆಯದ, ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡದ 'ಎಲ್ಲರಂತಿಲ್ಲದ ಹುಡುಗ' ನಾನಾಗಿದ್ದೆ. ಎಲ್ಲರೂ ಓದು, ಆಟೋಟ, ಪ್ರೀತಿ - ಪ್ರೇಮ, ಮೋಜು-ಮಸ್ತಿ, ಡಾನ್ಸ್, ಕುಡಿತ ಅಂತ ಕಾಲೇಜಿನ ದಿನಗಳನ್ನು ಎಂಜಾಯ್ ಮಾಡುತ್ತಿದ್ದರೆ, ಎಲ್ಲರಂತಿಲ್ಲದ ನಾನು, ನನ್ನ ಓದು, ಲೈಬ್ರರಿ, ಮಸೀದಿ ಅಂತ ನನ್ನದೇ ಲೋಕದಲ್ಲಿ ಬಂಧಿಯಾಗಿದ್ದೆ. ಎಲ್ಲರೂ ಚಂದ ಚಂದದ ಬಟ್ಟೆ ತೊಟ್ಟು, ಸ್ಟೈಲು ಸ್ಟೈಲಾಗಿ ತಲೆಗೂದಲು ಬಾಚಿಕೊಂಡು ತಿರುಗಾಡುತ್ತಿದ್ದರೆ, ಎಲ್ಲರಂತಿಲ್ಲದ ನಾನು ಬಡತನದ ಬೇಗೆಯಲ್ಲಿ ಬೆಳೆದಿದ್ದರಿಂದಲೋ, ಧಾರ್ಮಿಕತೆಯನ್ನು ಅತಿಯಾಗಿ ಮೈಗೂಡಿಸಿಕೊಂಡಿದ್ದರಿಂದಲೋ ಹೊಲಿಸಿದ ಸಾದಾ ಬಟ್ಟೆ, ತಲೆಗೆ ಟೋಪಿ ಹಾಕಿಕೊಂಡು ನನ್ನದೆ ಆದ ದಿನಗಳನ್ನು ಉಳಿದವರಿಗಿಂತ ಭಿನ್ನವಾಗಿ ರೂಪಿಸಿಕೊಂಡಿದ್ದೆ. ಕ್ಯಾಂಪಸ್ಸಿನ ಅಷ್ಟ ದಿಕ್ಕುಗಳಲ್ಲಿಯೂ ನಾಲ್ಕೈದು ಜನರಂತೆ ಗುಂಪು ಗುಂಪಾಗಿ ಒಂದು ಕೈಯಲ್ಲಿ ಕೂಲ್ ಡ್ರಿಂಕ್ಸ್, ಇನ್ನೊಂದು ಕೈಯಲ್ಲಿ ಉರಿಯುತ್ತಿರುವ ಸಿಗರೇಟ್ ಹಿಡಿದುಕೊಂಡು ನಿಲ್ಲುತ್ತಿದ್ದರೆ, ನಾನವರ ಮಧ್ಯದಲ್ಲಿ ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ನೆಲವನ್ನೇ ದಿಟ್ಟಿಸಿಕೊಂಡು ಹೋಗುತ್ತಿದ್ದ ಎಲ್ಲರಂತಿಲ್ಲದ ಹುಡುಗನಾಗಿದ್ದೆ.

ಅದೊಂದು ದಿನ ಕೃಷಿ ವಿದ್ಯಾರ್ಥಿಗಳಾದ ನಮಗೆ ಹೊಲದಲ್ಲಿ ಪ್ರಾಯೋಗಿಕ ತರಗತಿ ನಡೆದಿತ್ತು. ಹಿಂದಿನ ದಿನ ಮಳೆಯಾಗಿದ್ದರಿಂದ ಕೆಲವರ ಚಪ್ಪಲಿಗೆ ಮಣ್ಣಿನ ರಾಡಿ ಮುದ್ದೆಯಂತೆ ಮೆತ್ತಿಕೊಳ್ಳುತ್ತಿದ್ದರೆ, ಕೆಲವರ ಚಪ್ಪಲಿಗಳು ಮಂದ ಹಸಿಯ ಮಣ್ಣಿನ ರಾಡಿಯ ಮೇಲೆ ಕಾಲಿಟ್ಟಾಗ ಜಾರುತ್ತಿದ್ದವು. ಕ್ಲಾಸು ಮುಗಿಯುತ್ತಿದ್ದಂತೆ ಎಲ್ಲರೂ ತಮ್ಮ ತಮ್ಮ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಹಾಸ್ಟೆಲಿನತ್ತ ಹೊರಟರು. ನಾನು ಹೆಜ್ಜೆ ಹಾಕಿದೆ. ನಾನು ಮುಂದೆ ಇದ್ದೀನಿ ಅನ್ನುವುದನ್ನು ಗಮನಿಸದೆ, ನನ್ನ ಹಿಂದುಗಡೆ ಅಲ್ಲಲ್ಲಿ ಕಣ್ಣಿಗೆ ಕಾಣುತ್ತಿದ್ದ ಕಲ್ಲುಗಳ ಮೇಲೆ ನಾಜೂಕಿನ ಹೆಜ್ಜೆಗಳನ್ನಿಡುತ್ತಾ ಸುಶ್ಮಿತಾ ಮುನ್ನುಗ್ಗಿ ಬರುತ್ತಿದ್ದಳು. ನನ್ನ ಹತ್ತಿರ ಬರುತ್ತಿದ್ದಂತೆ ಅವಳು ಕಾಲೂರಬೇಕೆಂದಿದ್ದ ಕಲ್ಲು ಸ್ವಲ್ಪ ದೂರದಲ್ಲಿದ್ದತ್ತೇನೋ. ಉದ್ದಕ್ಕೆ ಚಾಚಿದ ಅವಳ ಕಾಲಿನ ಪಾದ, ಬಾಳೆ ಹಣ್ಣಿನ ಮೇಲೆ ಕಾಲಿಟ್ಟಾಗ ಜಾರುವಂತೆ ಮಂದ ಹಸಿಯ ಮಣ್ಣು ಮೆತ್ತಿಕೊಂಡಿದ್ದ ಸಣ್ಣ ಕಲ್ಲಿನ ಮೇಲೆ ಕಾಲಿಟ್ಟಾಗ ಸರಕ್ಕನೇ ಜಾರಿ ಬಿಟ್ಟಿತು. ಕೈಯಲ್ಲಿದ್ದ ಮೊಬೈಲ್ ಜಾರುತ್ತಿದ್ದಂತೆ, ನನ್ನನ್ನು ದಬ್ಬಿಕೊಂಡೇ ಬಂದು ನನ್ನ ಮೈಮೇಲೆ ಬಿದ್ದು ಬಿಟ್ಟಳು. ಇಬ್ಬರ ಮುಖವೂ ರಾಡಿಯಾಗಿದ್ದ ಮಣ್ಣಿಗಪ್ಪಳಿಸಿತ್ತು. ನಾನು ಸಾವರಿಸಿಕೊಳ್ಳುತ್ತಾ ಅವಳತ್ತ ಮುಖ ತಿರುಗಿಸಿದಾಗ, ಅವಳ ಕೈಕಾಲುಗಳಿನ್ನೂ ನನ್ನ ಮೈಗಂಟಿಕೊಂಡಿದ್ದವು. ಬಟ್ಟೆ ಇಲ್ಲದ ಅವಳ ತೋಳುಗಳ ಮೇಲೆ ಅಲ್ಲಲ್ಲಿ ರಾಡಿ ಮೆತ್ತಿಕೊಂಡಿದ್ದ ಕಂದು ಬಣ್ಣದ ಮೋಹಕ ಕೂದಲುಗಳು ಹರಡಿಕೊಂಡಿದ್ದವು. ಮೈಗಂಟಿಕೊಂಡಂತೆ ತೀರ ಬಿಗಿಯಾಗಿ ತೊಟ್ಟುಕೊಂಡಿದ್ದ ಅವಳ ಅಂಗಿ ಹಾಗೂ ಪ್ಯಾಂಟು ಕೆಸರಲ್ಲಿ ಮಿಂದೆದ್ದು ಹೋಗಿದ್ದವು. ಗಟ್ಟಿಯಾದ ರಕ್ತವನ್ನು ನೆನಪಿಸುವಂಥ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದ ಆಕೆಯ ತಪ್ತ ತುಟಿಗಳ ಮೇಲೆ ಅಲ್ಲಲ್ಲಿ ಕೆಸರಿನ ಚುಕ್ಕೆಗಳು ಮಿನುಗುತ್ತಿದ್ದವು. ಮೈ ಮೇಲೆ ಚಾದರದಂತೆ ಒರಗಿಕೊಂಡು ಬಿದ್ದಿದ್ದ ಆಕೆಯಿಂದ ಬಿಡಿಸಿಕೊಂಡು ಎದ್ದೇಳಲು ಪ್ರಯಾಸ ಪಡುತ್ತಿದ್ದ ನಾನು ಗಾಬರಿಗೊಂಡಿದ್ದೆ. ಸುಶ್ಮಿತಾಳ ಬಲೆಯಲ್ಲಿ ಸೆರೆಸಿಕ್ಕಿ ಬಿದ್ದಂತಾಗಿತ್ತು. ಸಾಬೂನಿನಂತೆ ಆಕೆಯ ಇಡೀ ದೇಹದ ಮೇಲೆ ಸಂಚರಿಸಿ ಬಂದಂತೆನಿಸಿತು. ಕಣ್ಣುಗಳಿಗೆ ಅಡ್ಡವಾಗಿ ಜೋತು ಬಿದ್ದಿದ್ದ ಅವಳ ಕೂದಲುಗಳನ್ನು ಕೆಸರು ಮೆತ್ತಿದ ಕೈಗಳಿಂದ ಸರಿಸಿಕೊಂಡು, ನನ್ನಡೆಗೆ ನೋಡುತ್ತಾ ಮುಗುಳ್ನಕ್ಕಳು. ಅವಳೇ ನನ್ನ ಮೇಲೆ ಬಿದ್ದಿದ್ದರೂ ಏದುಸಿರು ಬಿಡುತ್ತಾ ತೀರ ಸಭ್ಯ ರೀತಿಯಲ್ಲಿ ಆಕೆಯ ಕ್ಷಮೆಯಾಚಿಸಿದೆ. ಸುಶ್ಮಿತಾ ತನ್ನ ಬಟ್ಟೆಗಂಟಿದ್ದ ಕೆಸರನ್ನು ಕೈಯಿಂದ ಒರೆಸಿಕೊಳ್ಳುತ್ತಾ ಮುಗುಳ್ನಕ್ಕಳು. ಮಂದ ಹಸಿಯ ಮಣ್ಣಿನ ರಾಡಿಯೋ, ಜಾರುವ ಅವಳ ಚಪ್ಪಲಿಯೋ ಆ ಕ್ಷಣ ನನ್ನನ್ನು ಫಜೀತಿಗೀಡು ಮಾಡಿತ್ತು. ಆಕೆ ಕಳಚಿ ಬಿದ್ದಿದ್ದ ಪಾದರಕ್ಷೆಗಳಲ್ಲಿ ತನ್ನ ಎರಡೂ ಕಾಲಿನ ಹೆಬ್ಬೆರಳು ಹಾಗೂ ಅದರ ಮಗ್ಗುಲಿನ ಬೆರಳುಗಳನ್ನು ಸೇರಿಸಿಕೊಂಡು ನಸುನಗುತ್ತಾ ಹಾಸ್ಟೆಲಿನ ಕಡೆಗೆ ಹೊರಟಳು. ನಾನೂ ನನ್ನ ಹಾಸ್ಟೆಲಿನ ದಾರಿ ಹಿಡಿದೆ.

ನಾನು ಮೊದಲಿನಿಂದಲೂ ಹುಡುಗಿಯರಿಂದ ಅಂತರ ಕಾಯ್ದುಕೊಂಡವನು. ಉಳಿದವರೆಲ್ಲರೂ ಹುಡುಗಿಯರ ಭುಜದ ಮೇಲೆ, ಸೊಂಟದ ಮೇಲೆ ಕೈಯಿಟ್ಟುಕೊಂಡು ತಿರುಗುತ್ತಿದ್ದರೆ, ಎಲ್ಲರಂತಿಲ್ಲದ ನಾನು ಹುಡುಗಿಯರು ಹತ್ತಿರ ಬಂದಾಕ್ಷಣವೇ ಸರಕ್ಕನೆ ಮೂರಡಿ ದೂರ ಸರಿದು ನಿಂತು ಬಿಡುತ್ತಿದ್ದೆ. ಆದರೆ ಸ್ಮಿತಾಳೊಂದಿಗೆ ನಡೆದ ಆ ಒಂದು ಘಟನೆ ನನಗೆ ಗೊತ್ತಿಲ್ಲದ ಏನೋ ಒಂದು ಹೊಸತಾದ ಅನುಭವವನ್ನು ಜೇಡರ ಹುಳುವಿನಂತೆ ಎದೆಯೊಳಗೆ ಹೆಣೆಯತೊಡಗಿತ್ತು. ನಾನು ಹಳ್ಳಿಯಿಂದ ಬಂದ ಗಮಾರನೆಂದಲೋ ಅಥವಾ ಎಲ್ಲರಂತಲ್ಲದ ಹುಡುಗನಾಗಿದ್ದರಿಂದಲೋ ಸುಶ್ಮಿತಾ ನನ್ನ ಜೊತೆ ಸ್ನೇಹ ಬೆಳೆಸುವುದು ಬಹುಷಃ ಕಠಿಣವೆಂದು ಭಾವಿಸಿದ್ದೆ. ಆದರೆ ತೀರ ಅಲ್ಪಾವಧಿಯಲ್ಲಿ ಅವಳು ನನ್ನೊಂದಿಗೆ ಸುಲಭವಾಗಿ ಬೆರೆಯತೊಡಗಿದಳು. ಸುಶ್ಮಿತಾ ಓರ್ವ ವಾಸ್ತವವಾದಿ. ಅವಳಿಗೆ ಓದಿನ ಬಗ್ಗೆಯಾಗಲೀ, ಭವಿಷ್ಯದ ಬಗ್ಗೆಯಾಗಲೀ ಕಿಂಚಿತ್ತೂ ಚಿಂತೆ ಇರಲಿಲ್ಲ. ಈ ಕ್ಷಣ ಏನು ಅನಿಸುತ್ತೋ ಅದನ್ನೇ ಮಾಡುವವಳು. ಹಾಗೇ ಬದುಕುವವಳು. ಇಷ್ಟ ಪಟ್ಟ ಬಟ್ಟೆಯೇ ಹಾಕಿಕೊಳ್ಳುತ್ತಿದಳು, ಇಷ್ಟ ಪಟ್ಟ ಆಹಾರವನ್ನೇ ತಿನ್ನುತ್ತಿದ್ದಳು. ಆ ಬಟ್ಟೆ ಅವಳ ದೇಹದ ಉಬ್ಬು ತಗ್ಗುಗಳನ್ನು ಎತ್ತಿ ಜಗತ್ತಿಗೆ ತೋರಿಸಿದರೂ ಅವಳಿಗೆ ಪರಿವೆ ಇರುತ್ತಿರಲಿಲ್ಲ. ನನ್ನ ಜೀವನ ನನ್ನಿಷ್ಟ ಎನ್ನುತ್ತಿದ್ದಳು. ಧಾರ್ಮಿಕತೆಯನ್ನು ಅತಿಯಾಗಿ ಮೈಗೂಡಿಸಿಕೊಂಡಿದ್ದ ನನಗೆ ಮೊದಮೊದಲು ಅವಳ ನಡುವಳಿಕೆಯಾಗಲೀ, ಒರಟು ನುಡಿಯಾಗಲೀ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. "ಸ್ವಲ್ಪ ತಗ್ಗಿ-ಬಗ್ಗಿ ನಡಿ" ಅಂತ ಏನಾದರು ಹೇಳೋಣವೆಂದರೆ ಅವಳ ಬೆದರಿಕೆಯಿಂದ ನನ್ನೆಲ್ಲ ಮಾತುಗಳು ಮೀಸೆ ಮತ್ತು ಗಡ್ಡದಲ್ಲೇ ಗಿರಕಿ ಹೊಡೆಯುತ್ತಿದ್ದವು.

ಅವಳೊಂದಿಗಿನ ನನ್ನ ಸ್ನೇಹ ದಿನದಿಂದ ದಿನಕ್ಕೆ ಗಾಢವಾಗಿ ಬೆಳೆಯತೊಡಗಿತು. ಕೇವಲ ಹಾಸ್ಟೆಲು, ಕಾಲೇಜು, ಲೈಬ್ರರಿ, ಮಸೀದಿಗೆ ಮಾತ್ರ ಸೀಮಿತನಾಗಿದ್ದ ನಾನು, ಅವಳೊಂದಿಗೆ 567 ಎಕರೆಯಷ್ಟು ಬೃಹತ್ತಾದ ಕ್ಯಾಂಪಸ್ಸನ್ನು ಮೊದಲ ಸಲ ನೋಡಿದ್ದೆ. ಸುಶ್ಮಿತಾಳೊಂದಿಗೆ ಊಟ ಮಾಡುತ್ತಿದ್ದೆ. ಕುಣಿಯುತ್ತಿದ್ದೆ. ಸಿನಿಮಾ ನೋಡಲೂ ಹೋಗತೊಡಗಿದೆ. ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಅವಳೊಂದಿಗೆ ಸೇರಿ ಸಿಗರೇಟ್ ಸೇದುವುದನ್ನೂ ಕಲಿತು ಬಿಟ್ಟಿದ್ದೆ. ಕ್ಲಾಸ್ ರೂಮಿನಲ್ಲಿದ್ದರೂ, ಲೈಬ್ರರಿಯಲ್ಲಿದ್ದರೂ, ಹೊಲಗಳಲ್ಲಿದ್ದರೂ ಅವಳೊಂದಿಗೆಯೇ ಇರುತ್ತಿದ್ದೆ. ಪ್ರೇಮದ ಲವಶೇಷವೂ ಗೊತ್ತಿಲ್ಲದ ನಾನು, ಬಲು ಜಂಭದ ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕುತ್ತೇನೆಂದು ಕನಸಲ್ಲೂ ಯೋಚಿಸಿರಲಿಲ್ಲ. ದಿನದಿಂದ ದಿನಕ್ಕೆ ಅವಳೊಂದಿಗಿನ ಒಡನಾಟ, ನನ್ನೊಳಗಿನ ಧಾರ್ಮಿಕತೆಯನ್ನೂ, ಗಮಾರತನವನ್ನೂ ತೊಡೆದು ಹಾಕಿ, ಮನದೊಳಗೆ ಹೊಸ ಹುರುಪು, ಹುಮ್ಮಸ್ಸು ಮನೆ ಮಾಡತೊಡಗಿತು. ಅಕ್ಷರಶಃ ಅವಳ ಪ್ರೇಮ ಸಾಗರದಲ್ಲಿ ಮುಳುಗಿ ಹೋಗಿದ್ದೆ. ಆದರೆ ಸ್ನೇಹದಿಂದ ಮುಂದುವರೆದು ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಹೇಳಿಕೊಳ್ಳಲೂ ಆಗುತ್ತಿರಲಿಲ್ಲ. ಪ್ರೇಮ ನಿವೇದನೆಯ ಅನುಭವವೇ ನನಗಿರಲಿಲ್ಲ.

ಅದೊಂದು ದಿನ ದೃಢ ನಿರ್ಧಾರ ಮಾಡಿದೆ. ಪ್ರೀತಿಸುತ್ತಿರುವ ವಿಚಾರ ಅವಳಿಗೆ ಹೇಳಿಯೇ ತೀರಬೇಕೆಂದು ತೀರ್ಮಾನಿಸಿದೆ. ರಾತ್ರಿ ಇನ್ನಿಲ್ಲದ ಚಡಪಡಿಕೆಯಾಗಿ ನಿದ್ರೆಯೇ ಬರಲಿಲ್ಲ. ಅವಳೊಂಥರ ಒರಟು ಹುಡುಗಿ. ಪ್ರೇಮ ನಿವೇದನೆ ಮಾಡಿದರೆ ಏನೆನ್ನಬಹುದು? ಒಪ್ಪಿಕೊಳ್ಳಬಹುದೇ? ಒಪ್ಪದಿದ್ದರೆ ಮೊದಲಿನಂತೆ ಸ್ನೇಹವನ್ನು ಸಲುಗೆಯಿಂದ ಮುಂದುವರೆಸುತ್ತಾಳಾ? ಹೀಗೆ ಒಂದರ ಮೇಲೊಂದು ಯೋಚನೆಗಳು ಮುತ್ತಿ, ಮುಂಜಾವದವರೆಗೂ ನಿದ್ರೆಯಿರದೇ ಮುಖ ತೊಳೆದು ಕನ್ನಡಿ ನೋಡಿದರೆ, ಮುಖ ಎಂದಿಗಿಂತ ಹೆಚ್ಚು ಬಾಡಿ ಹೋದಂತೆ ಕಾಣಿಸಿತು. ಆದರೆ ಮನದಲ್ಲಿರುವ ಉಲ್ಲಾಸ ಕಡಿಮೆಯಾಗಿರಲಿಲ್ಲ. ಹೀಗಾಗಿ ಉಲ್ಲಾಸದ ಆಹ್ಲಾದಕರ ನಗು ನನ್ನ ಬಾಡಿಹೋದ ಮುಖದ ಆತಂಕವನ್ನು ಮುಚ್ಚಿ ಹಾಕುತ್ತಿತ್ತು. ಅವಳಿಗೆ ಫೋನಾಯಿಸಿ ಲೈಬ್ರರಿಗೆ ಬರುವಂತೆ ತಿಳಿಸಿದೆ.

ಎಂದಿನಂತೆ ಲೈಬ್ರರಿಯಲ್ಲಿ ಓದುತ್ತಾ ಕುಳಿತಿದ್ದೆ. ನನ್ನ ಪಕ್ಕದಲ್ಲಿ ಕೂತಿದ್ದ ಸುಶ್ಮಿತಾ, ಪುಸ್ತಕದ ಕಡೆ ಗಮನ ಕೊಡದೆ ಅತ್ತಿತ್ತ ಗಮನ ಹರಿಸುತ್ತಿದ್ದಳು. ಯಾರಾದರೂ ಹಲ್ಲು ಕಿಸಿದು ಕೈ ಬೀಸಿದರೆ ಅವರತ್ತ ಹೋಗಿ ಬಗಲಲ್ಲಿ ಕೂತು ಬಿಡುತ್ತಿದ್ದಳು. ಸುಶ್ಮಿತಾಳಿಗೆ ಇವತ್ತು ಪ್ರೀತಿಸುತ್ತಿರುವ ವಿಷಯ ಹೇಳಿಯೇ ತೀರಬೇಕೆಂದು ತೀರ್ಮಾನಿಸಿದ್ದೆ. ಆದರೆ ಒಳಗಿನಿಂದ ಅಳುಕೊಂದು ಗಟ್ಟಿಯಾಗಿ ಗುದ್ದಲು ಶುರು ಮಾಡಿತು. "ಸುಶ್ಮಿತಾ ನನ್ನ ಪ್ರೀತಿಯನ್ನು ನಿರಾಕರಿಸಿ ಬಿಟ್ಟರೆ? ಆ ಕ್ಷಣ ಅದೆಷ್ಟು ವಿಚಲಿತಗೊಂಡಿದ್ದೇನೆಂದರೆ, ಚಳಿಗಾಲವಲ್ಲದಿದ್ದರೂ ಹಲ್ಲುಗಳು ಖಟ್ ಖಟ್ ಸದ್ದು ಮಾಡುತ್ತಾ ಕಂಪಿಸತೊಡಗಿದವು. ಕಣ್ಣುಗಳು ಕಳಾಹೀನಗೊಂಡಿದ್ದವು. "ಇಲ್ಲ, ಹಾಗೇನೂ ಆಗಲಿಕ್ಕಿಲ್ಲ. ಸುಶ್ಮಿತಾ ಇಷ್ಟೊಂದು ದಿನ ನನ್ನ ಜೊತೆ ಆತ್ಮೀಯವಾಗಿ ಬೆರೆತವಳು. ಪ್ರೀತಿ ಇದ್ದಿದ್ದಕ್ಕೆ ಅಲ್ಲವೇ ಎಲ್ಲರಂತಿಲ್ಲದ ನನ್ನಂತವನೊಂದಿಗೂ ಸಲಿಗೆಯಿಂದ ಇದ್ದಿದ್ದು? ನನಗೆ ನಾನೇ ಧೈರ್ಯ ತುಂಬಿಕೊಂಡೆ. ಗಟ್ಟಿ ದನಿಯಿಂದ "ಸುಶ್ಮಿತಾ ನಿನ್ನೊಂದಿಗೆ ಮಾತಾಡಬೇಕು" ಅಂದೆ. ಕ್ಷೀಣವಾದ ದನಿಯಲ್ಲಿ "ಹ್ಞೂಂ ಹೇಳು" ಪಿಸುಗುಟ್ಟಿದಳು. "ಇಲ್ಲ, ಇಲ್ಲಿ ಆಗಲ್ಲ. ಕ್ಯಾಂಟೀನ್‌ಗೆ ಹೋಗೋಣ ಬಾ" ಅಂತ ಬಡಬಡಿಸುತ್ತಾ ಹೇಳಿ ಅವಳ ಕೈ ಹಿಡಿದು ಎಳೆದುಕೊಂಡು ಲೈಬ್ರರಿಯಿಂದ ಆಚೆ ಬಂದೆ. ಹುಸಿ ಮುನಿಸಿನಿಂದ ನನ್ನ ಕೈಯನ್ನು ಆಚೆ ದೂಡಿ "ಇಲ್ಲೇ ಹೇಳು ಮಾರಾಯ. ನಿನ್ನ ಮಾತುಗಳನ್ನು ಕೇಳಿಸಿಕೊಳ್ಳಲಿಕ್ಕಾಗಿ ನಾನು ಅಲ್ಲಿವರೆಗೂ ಬರಬೇಕಾ? ಅಂದಳು. ನನಗೆ ಏನು ಮಾತಾಡಬೇಕೋ ತೋಚದಾಯಿತು. ಸಿಡಿಮಿಡಿಗೊಂಡ ಅವಳ ಮುಖವನ್ನು ಕಂಡು ತುಂಬಾ ಭಯ ಭೀತನಾಗಿದ್ದೆ. ಒಂದು ಎಲೆ ಫಡಗುಟ್ಟಿದರೂ ನನ್ನ ಎದೆ ಡವಗುಡುತ್ತಿತ್ತು. ಪಿಟ್ಟೆನ್ನದೆ ಕಲ್ಲಿನಂತೆ ಸ್ತಬ್ಧವಾಗಿ ನಿಂತು ಬಿಟ್ಟೆ. ಸುಶ್ಮಿತಾಳಿಗೆ ಕಡು ಕೋಪ ಬಂತು. "ಉಮರ್ ಈಗೇನು? ಮಾತಾಡ್ತೀಯಾ ಇಲ್ಲ ನಾನು ಹೋಗ್ಲಾ? ಎಂದಳು. ಬಿಗಿದಪ್ಪಿದ ನನ್ನ ತುಟಿಗಳನ್ನು ಒಮ್ಮೆಗೇ ಬಿಚ್ಚಿ "ಸುಶ್ಮಿತಾ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನ ಪ್ರೀತಿಸುತ್ತೀಯಾ? ಅಂತ ಒಂದೇ ಉಸಿರಿಗೆ ಕೇಳಿಬಿಟ್ಟೆ. ಸುಶ್ಮಿತಾ ಬಿದ್ದುಬಿದ್ದು ನಗತೊಡಗಿದಳು. ನಾನು ಕಕ್ಕಾಬಿಕ್ಕಿಯಾಗಿ ಅವಳನ್ನೇ ದಿಟ್ಟಿಸುತ್ತಿದ್ದೆ. ತನ್ನ ದೊಡ್ಡ ಕಣ್ಣುಗಳನ್ನೆತ್ತಿ ದಟ್ಟವಾದ ರೆಪ್ಪೆಗಳನ್ನು ಬಡಿಯುತ್ತಾ "ಏನು? ನಾನು ನಿನ್ನನ್ನು ಪ್ರೀತಿಸುವುದಾ? ನನ್ನಂಥವಳು ನಿನ್ನಂಥವನೊಂದಿಗೆ ಸ್ನೇಹ ಮಾಡಿದ್ದೇ ಹೆಚ್ಚು. ಎಂದು ಗಹಗಹಿಸಿ ನಗತೊಡಗಿದಳು. ಕೆಲಕ್ಷಣಗಳ ನಂತರ "ನಾನು ತೂತು ಟೊಪ್ಪಿಗೆ ಹಾಕಿ ವಿಕಾರವಾಗಿ ಕಾಣುವ ನಿನ್ನಂಥ ಮುಸಲ್ಮಾನರನ್ನು ಯಾವತ್ತೂ ಪ್ರೀತಿಸಲಾರೆ" ಅಂದು ಬಿಟ್ಟಳು. ನನ್ನ ಟೋಪಿಯೊಳಗೆ ಯಾರೋ ಉರಿಯುವ ಕೆಂಡಗಳನ್ನೀಟ್ಟರೇನೋ ಅನ್ನಿಸಿತು. ನನ್ನ ತನು-ಮನಗಳಿಗೆ ಬೆಂಕಿ ಬಿದ್ದಿದೆಯೇನೋ ಅನಿಸಿತು. "ಸುಶ್ಮಿತಾ, ನೀನು ನನ್ನನ್ನಾಗಲಿ, ನನ್ನ ಧಾರ್ಮಿಕ ಆಚರಣೆಯನ್ನಾಗಲಿ ಅಪಹಾಸ್ಯ ಮಾಡುತ್ತಿಲ್ಲ. ನನ್ನ ನಿಷ್ಕಲ್ಮಶ ಪ್ರೇಮವನ್ನು ಅಪಹಾಸ್ಯ ಮಾಡುತ್ತಿದ್ದೀಯಾ" ಎಂದು ಕಿಡಿಕಾರಿದೆ. ಅದಕ್ಕವಳು "ಥೂ, ದೂರ ಹೋಗು ಮುಸಲ್ಮಾನನೇ, ನಿಮಗೆ ಪ್ರೇಮದ ಅರ್ಥವೂ ಗೊತ್ತಿರಲ್ಲ. ಆದರೂ ನಿಮ್ಮ ಧರ್ಮವನ್ನು ಬೆಳೆಸುವುದಕ್ಕಾಗಿ ಹುಡುಗಿಯರ ಜೀವನದಲ್ಲಿ ಪ್ರೀತಿಯ ನಾಟಕವಾಡುವ ಹರಾಮಿ ಜಿಹಾದಿಗಳು ನೀವು" ಎನ್ನುತ್ತಾ ತನ್ನ ಕಂದುಬಣ್ಣದ ಕೇಶರಾಶಿಯನ್ನು ಗಿರ್ರನೇ ತಿರುವಿದಳು. ಅವಳ ಪ್ರೀತಿಗಾಗಿ ತಣ್ಣಗಿದ್ದ ನನ್ನ ಕ್ರೋಧ ಪರಾಕಾಷ್ಠೆ ತಲುಪಿತು. "ನಾನು ಇಲ್ಲಿ ತನಕ ನಿನ್ನ ಧರ್ಮವನ್ನು ಅಪಹಾಸ್ಯ ಮಾಡಿಲ್ಲ. ನೀನೇಕೆ ಇಂಥ ಕೆಲಸ ಮಾಡುವೆ? ಲವ್ ಜಿಹಾದ್ ಅಂದ್ರೆ ಏನು ಅಂತ ಗೊತ್ತಾ? ಇಲ್ಲಿಯವರೆಗೆ ಎಷ್ಟು ಜನ ಮುಸ್ಲಿಮರು ಪ್ರೀತಿಯ ಹೆಸರಲ್ಲಿ ಮುಸ್ಲಿಮೇತರ ಹುಡುಗಿಯರ ಬದುಕನ್ನು ಬರಡು ಮಾಡಿದ್ದಾರೆ? ಅದಕ್ಕೆ ಒಂದೇ ಒಂದು ಆಧಾರ ನಿನ್ನಲ್ಲಿ ಉಂಟಾ? ಪ್ರೀತಿ ಯಾವುದೇ ಜಾತಿ ಧರ್ಮ ನೋಡಿ ಹುಟ್ಟಲ್ಲ. ಅದು ಹುಟ್ಟುವುದು ಮನುಷ್ಯನ ಮನಸ್ಸಿನಿಂದ. ನೋಡು, ನಿನಗೆ ಇಷ್ಟವಿಲ್ಲದಿದ್ದರೆ ನೇರಾನೇರ ಹೇಳಿಬಿಡು. ಅದು ಬಿಟ್ಟು ಒಬ್ಬ ವ್ಯಕ್ತಿಯ ಧಾರ್ಮಿಕ ಭಾವನೆಗಳ ಜೊತೆ ಹುಡುಗಾಟ ಸರಿಯಲ್ಲ. ನಾನು ಇದನ್ನು ಎಂದೂ ಸಹಿಸಿಕೊಂಡವನಲ್ಲ. ಈಗ ಸಹಿಸಿಕೊಂಡಿರಲು ಏಕೈಕ ಕಾರಣವೆಂದರೆ ನಾನು ನಿನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದೇನೆ. ಇದು ನಿನಗೂ ಗೊತ್ತು ಅಲ್ಲವಾ? ನೀನೂ ನನ್ನನ್ನು ಪ್ರೀತಿಸುತ್ತೀಯಾ ಅಲ್ಲವಾ?" ಅಂತ ದುಃಖತಪ್ತ ದನಿಯಲ್ಲಿ ಬೇಡಿಕೊಂಡೆ. ಸುಶ್ಮಿತಾ ಮತ್ತಷ್ಟು ಸಿಡಿಮಿಡಿಗೊಂಡಳು. ಒಣಗಿದ ತುಟಿಗಳ ಮೇಲೆ ನಾಲಗೆಯಾಡಿಸುತ್ತಾ "ನೀನು ನಿಜವಾಗಿಯೂ ಮುಸಲ್ಮಾನನೇ. ಚೆನ್ನಾಗಿಯೇ ಮೊಸಳೆ ಕಣ್ಣೀರು ಸುರಿಸಿ ನಾಟಕ ಮಾಡುತ್ತಿದ್ದೀಯಾ. ಹೌದು, ನನ್ನ ಪ್ರೀತಿಸು ಅಂತ ನಿನಗೆ ಯಾರು ಹೇಳಿದ್ದು? ನಾನೇನಾದರೂ ಹೇಳಿದ್ನಾ? ಹೋಗು ನಿನ್ನ ಧರ್ಮದ ಹುಡುಗಿಯನ್ನು ಪ್ರೀತಿಸಿ, ಅವಳೊಂದಿಗೆ ನಿನ್ನ ದೇವರಿಗೆ ನಮಾಜು ಮಾಡು. ನಿನ್ನ ದರಿದ್ರ ಮುಖವನ್ನು ಮತ್ತೊಮ್ಮೆ ನನಗೆ ತೋರಿಸಬೇಡ" ಎಂದು ಅಲ್ಲಿಂದ ಕಾಲ್ಕಿತ್ತಳು.

ಕಣ್ಣೊರೆಸಿಕೊಂಡ ನಾನು ರೂಮಿಗೆ ಬಂದು ಗದ್ಗಗದಿತನಾಗಿ ಒರಗಿದೆ. ನಾನು ನನ್ನ ಧಾರ್ಮಿಕ ಕರ್ತವ್ಯಗಳನ್ನು ಪಾಲಿಸುವ ಸಂಪನ್ನ ಹುಡುಗ. ಎಲ್ಲಾ ಧರ್ಮಗಳ ಬಗ್ಗೆ ನನ್ನ ಮನಸ್ಸಿನಲ್ಲಿ ಗೌರವವಿತ್ತು. ಈಗಲೂ ಇದೆ. ನನ್ನ ಧರ್ಮದಲ್ಲಿ ಕುರುಹುಗಳಾಗಿದ್ದ ಆಚಾರ-ವಿಚಾರಗಳನ್ನು ಕೈ ಬಿಡಲು ಎಂದು ಬಯಸಿದವನಲ್ಲ. ಸೂರ್ಯ ಅಸ್ತಂಗತನಾಗಿ, ಚಂದ್ರ ಮೋಡದ ಮರೆಯಿಂದ ಇಣುಕತೊಡಗಿದ್ದ. ಹೊಟ್ಟೆ ಹಸಿವಿರಲಿಲ್ಲ. ದೇಹದ ತುಂಬೆಲ್ಲಾ ಸುಶ್ಮಿತಾಳ ಅವಮಾನದ ಮಾತುಗಳೇ ತುಂಬಿಕೊಂಡಿದ್ದವು. ಆ ಮಾತುಗಳು ನನ್ನ ಸ್ಮೃತಿ ಪಟಲವನ್ನು ಕೆಣಕಿದಾಗಲೆಲ್ಲಾ, ಯಾರೋ ನನ್ನ ಅಸ್ತಿತ್ವವನ್ನು ಒರಳಲ್ಲಿ ಹಾಕಿ ಕುಟ್ಟುತ್ತಿದ್ದಾರೇನೋ ಅನ್ನಿಸುತ್ತಿತ್ತು. ದಿನವೂ ರೂಮಿನಲ್ಲಿಯೇ ಮಲಗುತ್ತಿದ್ದ ನಾನು, ಆ ದಿನ ಭಾರದ ಮನಸ್ಸಿನಿಂದ ಹಾಸ್ಟೆಲಿನ ಮಾಳಿಗೆ ಮೇಲೆ ಬಂದು ಚಾಪೆ ಹಾಸಿ, ಆಕಾಶದ ಕಡೆ ಮುಖ ಮಾಡಿಕೊಂಡು ಮಲಗಿದೆ. ನೀಲಿ ಆಕಾಶ ಸಂಪೂರ್ಣ ಸ್ವಚ್ಛವಾಗಿತ್ತು. ಒಂದು ತುಣುಕು ಮೋಡವೂ ಇರಲಿಲ್ಲ. ಆಕಾಶದಿಂದ ಉದುರಿದ ಚುಕ್ಕೆಗಳು, ರಾತ್ರಿ ಕತ್ತಲಲ್ಲಿ ಮಿಂಚು ಹುಳುಗಳಂತೆ ಮಿನುಗುತ್ತಿದ್ದವು. ಸುಶ್ಮಿತಾಳ ಗುಂಗಿನಲ್ಲಿ ನಿದ್ರೆ ಬರದ ಆ ರಾತ್ರಿ ನಕ್ಷತ್ರಗಳನ್ನು ಎನಿಸುತ್ತಲೇ ಕಾಲ ಕಳೆದೆ.

ಬೆಳಗಿನ ಜಾವ ಐದು ಘಂಟೆ ಸಮಯ ಆಗಿತ್ತೇನೋ. ಸಮೀಪದ ಮಸೀದಿಯಿಂದ ಆಜಾನಿನ ಕೂಗು ಕೇಳಿ ಬರುತ್ತಿತ್ತು. ಮಂದ ಮಾರುತ ಬೀಸುತ್ತಿತ್ತು. ದಿನನಿತ್ಯ ರೂಮಿನ ಬಾಗಿಲು ಹಾಕಿಕೊಂಡು ಮಲಗುತ್ತಿದ್ದ ನಾನು, ಫ್ಯಾನಿನ ಕೃತ್ರಿಮ ಗಾಳಿಗೆ ಒಗ್ಗಿ ಹೋಗಿದ್ದೆ. ಆ ಗಾಳಿ ನನ್ನ ದೇಹವನ್ನು ಸಂಪೂರ್ಣ ಜಡಗೊಳಿಸುತ್ತಿತ್ತು. ಪ್ರತಿದಿನ ಬೆಳಿಗ್ಗೆ ಎದ್ದೊಡನೆ ರಾತ್ರಿಯಿಡಿ ಯಾರೋ ಚೆನ್ನಾಗಿ ಥಳಿಸಿದ್ದಾರೇನೋ ಅನ್ನಿಸುತ್ತಿತ್ತು. ಆದರೆ ಈಗ ಬಯಲು ಆಕಾಶದ ಕೆಳಗೆ ಮಲಗಿದ್ದರಿಂದ ಬೆಳಗಿನ ಸ್ವಾಭಾವಿಕ ಗಾಳಿ, ನನ್ನ ದೇಹದ ಅಂಗಾಂಗಗಳೆಲ್ಲದಕ್ಕೂ ಕಾಯಕಲ್ಪವಾಗಿತ್ತು. ಆ ತಿಳಿಗಾಳಿ ನನ್ನ ಕೂದಲಿಗೆ ತಾಗಿದಷ್ಟೂ ನನ್ನ ಮನ ಆಹ್ಲಾದಗೊಳ್ಳುತ್ತಿತ್ತು.

ಗಾಳಿ ತಣ್ಣಗೆ ಮಂದವಾಗಿತ್ತು. ಎದ್ದೇಳಬೇಕೆನ್ನುವಷ್ಟರಲ್ಲಿ ಪಾದರಕ್ಷೆಗಳ ಖಟ್ ಖಟ್ ಸದ್ದು ಕೇಳಿಸಿತು. ಯಾರಿರಬಹುದು ಅಂತ ಯೋಚಿಸಿ ಅತ್ತಿತ್ತ ನೋಡಿದೆ. ಆಶ್ಚರ್ಯವೆಂಬಂತೆ ಬಿಲ್ಡಿಂಗ್ ಮೇಲಿನ ಸಿಂಟೆಕ್ಸ್ ಬಳಿಯಿಂದ ಸುಶ್ಮಿತಾ ಬರುತ್ತಿದ್ದಳು. ಇದ್ದಕ್ಕಿದ್ದಂತೆ ಚಾಪೆಯಿಂದ ಎದ್ದು "ಇವಳು ಈ ವೇಳೆಯಲ್ಲಿ ಇಲ್ಲಿಗ್ಯಾಕೆ ಬಂದಳು? ಬಾಯ್ಸ್ ಹಾಸ್ಟೆಲ್ ಇದು. ನನ್ನೊಂದಿಗೆ ಅವಳನ್ನು ಯಾರಾದರೂ ನೋಡಿದರೆ ತಪ್ಪು ತಿಳಿದುಕೊಳ್ಳಬಹುದು." ನನ್ನ ಎಲುಬುಗಳು ಕಿರುಗುಟ್ಟಿದವೇನೋ ಎನ್ನುವಷ್ಟು ಆತಂಕಗೊಂಡೆ. ಆಕೆ ತನ್ನ ಪಾದರಕ್ಷೆಗಳನ್ನು ಎಳೆಯುತ್ತಾ ನನ್ನ ಬಳಿ ಬಂದು ನಿಂತಳು. ನನ್ನ ಭುಜ ಚಿವುಟುತ್ತಾ "ಏನೋ ನೀನು ನನ್ನನ್ನು ಪ್ರೀತಿಸುತ್ತೀಯಾ?" ಅಂದಳು. ಅವಳ ದೊಡ್ಡ ದೊಡ್ಡ ತುಟಿಗಳು ಮುಗುಳ್ನಗೆಯೊಂದಿಗೆ ಬಿಚ್ಚಿಕೊಂಡವು. ನಾನು ಗತ್ತಿಲ್ಲದ ದನಿಯಲ್ಲಿ ಹ್ಞೂಗುಟ್ಟಿ "ಅದು ನಿನಗೆ ಗೊತ್ತಿಲ್ವಾ? ಅಂತ ಕೇಳಿದೆ. "ನನಗೆ ಮುಸಲ್ಮಾನರೆಂದರೆ ಅಲರ್ಜಿ. ನೀವುಗಳು ಭಯೋತ್ಪಾದಕರ ಬೆಂಬಲಿಗರು, ಪಾಕಿಸ್ತಾನ ಪ್ರೇಮಿಗಳು ನಿಮ್ಮೊಂದಿಗೆ ಸ್ನೇಹ ಮಾಡುವುದೇ ನನಗೆ ಅಸಹ್ಯ." ಎಂದು ಮುಖ ಕೆಂಪು ಮಾಡಿಕೊಂಡಳು. ನಾನು ಅಂಜುಬುರುಕನೇನಲ್ಲ. ಆ ಕ್ಷಣ ಅವಳ ಪ್ರೀತಿಗಾಗಿ ಅಂಜುಬುರುಕನಿಗಿಂತಲೂ ಕೆಟ್ಟ ಸ್ಥಿತಿ ನನ್ನದಾಗಿತ್ತು. ಇನ್ನೂ ಅಲ್ಲಿ ನಿಲ್ಲಬಾರದೆಂದುಕೊಂಡರೂ, ನನ್ನ ಕಾಲು ನಿಂತುಕೊಂಡವು. ಅವಳ ತೋಳುಗಳನ್ನು ಹಿಡಿದು ಬರಸೆಳೆದು "ಹಾಗಾದರೆ ನನ್ನೊಂದಿಗೆ ಯಾಕೆ ಸ್ನೇಹ ಮಾಡಿದೆ? ಮುಸಲ್ಮಾನರು ನಿನಗೆ ಅಲರ್ಜಿಯಾಗುವುದಾದರೆ, ನನ್ನೊಂದಿಗೆ ಸಲುಗೆಯಿಂದ ಯಾಕೆ ವರ್ತಿಸಿದೆ? ಎಂದು ಗದ್ಗದಿತನಾಗಿಯೇ ಕೇಳಿದೆ. ಅದಕ್ಕವಳು "ಇಷ್ಟು ದಿನ ನೀವು ಮುಸಲ್ಮಾನರು ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಿದ್ದೀರಲ್ಲ, ಈಗ ನಮ್ಮ ಸರದಿ. ಅದಕ್ಕಂತಾನೇ ನಿನ್ನ ಸ್ನೇಹ ಮಾಡಿದ್ದು, ಸಲುಗೆಯಿಂದ ವರ್ತಿಸಿದ್ದು. ನಿನ್ನನ್ನು ಪ್ರೀತಿಯಲ್ಲಿ ಹುಚ್ಚನಾಗುವಂತೆ ಮಾಡಿದ್ದು. ಈಗ ನೋಡು ನಾನು ಇಷ್ಟೆಲ್ಲಾ ನಿನ್ನನ್ನ ಅವಮಾನ ಮಾಡಿದರೂ ನಾಚಿಕೆ ಬಿಟ್ಟು ಹೇಗೆ ನಿಂತಿದ್ದೀಯಾ ಅಂತ. ಇದೇ ನನಗೂ ಬೇಕಾಗಿದ್ದು" ಎಂದವಳೇ ತನ್ನ ಕೂದಲನ್ನು ಗಿರ್ರನೆ ತಿರುವಿಕೊಂಡು ಹೊರಟು ಹೋದಳು. ನನಗೋ ಹೃದಯದಲ್ಲಿ ಚೂರಿ ಆಡಿಸಿದಂತಾಯಿತು. ನನ್ನ ಮಾನಸಿಕ ಸಮತೋಲನ ತಪ್ಪಿತು. ಸುಶ್ಮಿತಾಳ ಗಂಟಲಿನಿಂದ ಹೊರ ಹೊಮ್ಮಿದ ಅಟ್ಟಹಾಸ ಅಲೆಗಳು ಎಷ್ಟು ಭರಾಟೆಯಿಂದ ಚದುರಿದವೆಂದರೆ, ನನ್ನ ನಾಲಿಗೆ ಹೊರ ನುಗ್ಗಿ ನೆಲ ನೆಕ್ಕತೊಡಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ಮತಿಭ್ರಮಣೆಯಾಗತೊಡಗಿತು. ನೋಡ ನೋಡುತ್ತಿದ್ದಂತೆ ಸೂರ್ಯನ ಕಿರಣಗಳು ಪಸರಿಸತೊಡಗಿದವು. ಇನ್ನೂ ಸುಶ್ಮಿತಾಳ ಪ್ರೀತಿಯೇ ಬೇಡ ಅಂತ ಗಟ್ಟಿ ನಿರ್ಧಾರ ಮಾಡಿದೆ.

ದಿನಗಳು ಕಳೆದಂತೆ ನನ್ನ ಮನಸ್ಸು ದಿನದಿಂದ ದಿನಕ್ಕೆ ಖಿನ್ನವಾಗತೊಡಗಿತ್ತು. ದಿನನಿತ್ಯ ನಾನು ಎದುರು ಸಿಕ್ಕಾಗಲೆಲ್ಲಾ "ಏನೋ ಮುಸಲ್ಮಾನನೇ, ಏನೋ ಭಯೋತ್ಪಾದಕನೇ, ಏನೋ ಪಾಕಿಸ್ತಾನಿಯೇ ನೀನು ನನ್ನನ್ನು ಪ್ರೀತಿಸುತ್ತೀಯಾ? ಅಂತ ಗಹಗಹಿಸಿ ನಗುತ್ತಾ ಅಪಮಾನ ಮಾಡುತ್ತಿದ್ದಳು. ಅವಳ ಮಾತುಗಳನ್ನು ಕೇಳಿ ಮೆತ್ತಗಾಗಿ ಬಿಡುತ್ತಿದ್ದೆ. ವಾಸ್ತವದಲ್ಲಿ ಸುಶ್ಮಿತಾ ನನ್ನ ದೌರ್ಬಲ್ಯವಾಗಿ ಬಿಟ್ಟಿದ್ದಳು. ಅದೆಷ್ಟೇ ಅವಮಾನ ಮಾಡಿದರೂ, ಹೃದಯ ಕೊಟ್ಟ ತಪ್ಪಿಗಾಗಿ ಈಗಲೂ ಅವಳ ಪ್ರೀತಿಗಾಗಿ ಚಾತಕ ಪಕ್ಷಿಯಂತೆ ಹಾತೊರೆಯುತ್ತಿದ್ದೆ. ಆ ಕಾರಣಕ್ಕಾಗಿಯೇ ಕಾಲೇಜಿನಲ್ಲಿ ಎಲ್ಲರೆದರೂ ನನಗೆ ಅವಮಾನವಾಗುತ್ತಿತ್ತು. ಆಗೆಲ್ಲಾ ಸಂತೆಯಲ್ಲಿನ ಚಿಲ್ಲರೆ ವ್ಯಕ್ತಿಯಾಗಿ ಬಿಡುತ್ತಿದ್ದೆ. ಅವಳು ನನ್ನನ್ನು ಅಪಹಾಸ್ಯ ಮಾಡಿದ್ದು ಕಡಿಮೆ ಏನಲ್ಲ. ಪ್ರತಿ ಬಾರಿ ಅಪಹಾಸ್ಯ ಮಾಡಿದಾಗಲೆಲ್ಲ ನಾನೇ ಸೋತು ಪ್ರೀತಿಯ ಗೂಡಿಗೆ ಬಂದು ಸೇರುತ್ತಿದ್ದೆ. ಆದರೆ ಎಲ್ಲರೆದುರು ಅಪಹಾಸ್ಯ ಮಾಡುತ್ತಿದ್ದಾಗ, ನನಗಾಗುತ್ತಿದ್ದ ಅವಮಾನ ವಿಪರೀತವಾಗಿತ್ತು. ಅವಳ ದೃಷ್ಟಿಯಲ್ಲಿ ನನ್ನದಲ್ಲದ ತಪ್ಪಿಗೆ ನಾ ಅಪರಾಧಿಯಾಗಿದ್ದೆ. ನಾನು ಮುಸಲ್ಮಾನನಾಗಿದ್ದೆ ಅಪರಾಧವಾಗಿತ್ತು. ಹೃದಯದ ದೌರ್ಬಲ್ಯದಿಂದಾಗಿ ನಾನು ಎಲ್ಲವನ್ನು ಸಹಿಸಿಕೊಳ್ಳಲು ನಿರ್ಧರಿಸಿದ್ದೆ. ಸಾಮಾನ್ಯವಾಗಿ ಅವಮಾನದ ಪರಿಣಾಮ ಆತ್ಮಹತ್ಯೆಯಾಗಿರುತ್ತದೆ. ನನ್ನ ಮಟ್ಟಿಗೆ ಮಾತ್ರ ಹೀಗೇನಾಗಲಿಲ್ಲ. ನನ್ನ ಹೃದಯ ಮತ್ತು ಮನಸ್ಸಿನ ಅನೇಕ ಕಣ್ಣುಗಳನ್ನು ಮುಚ್ಚಿಕೊಂಡು ಬಿಟ್ಟಿದ್ದೆ. ಕಿವಿಯಲ್ಲಿ ಹತ್ತಿ ತುರುಕಿಕೊಂಡು ಬಿಟ್ಟಿದ್ದೆ. ನನಗೆ ಸುಶ್ಮಿತಾ ಇಷ್ಟವಾಗಿದ್ದಳು. ಬರೀ ಇಷ್ಟವಾಗಿದ್ದಳಷ್ಟೇ ಅಲ್ಲ, ಅವಳ ಪ್ರೇಮ ಸಾಗರದಲ್ಲಿ ಮುಳುಗಿ ಹೋಗಿದ್ದೆ. ಆದರೆ ಹಂತ ಹಂತವಾಗಿ ಅವಳ ಅವಮಾನ ಸಹಿಸದೇ ನನ್ನ ಪ್ರೀತಿ ಅವಳ ಪ್ರೀತಿಯ ಕೆಸರಲ್ಲಿ ಮುಳುಗಿ ಸತ್ತು ಹೋಗತೊಡಗಿತ್ತು. ಆದರೆ ದಿನನಿತ್ಯ ಮಾನಾಪಮಾನಗಳ ಸರಣಿ ಮುಂದುವರೆದೇ ಇತ್ತು. ಸುಶ್ಮಿತಾಳ ಅವಮಾನದ ಮಾತುಗಳಿಂದ ನನ್ನ ಪ್ರೀತಿ ನುಚ್ಚು ನೂರಾಗಿ ಮನಸ್ಸು ಮೊದಲೇ ಪರಿತಪಿಸುತ್ತಿತ್ತು. ಮುಂದಿನ ದಿನಗಳಲ್ಲಿ ಅವಳು ಸರಿ ಹೋಗಬಹುದು, ನನ್ನ ಪ್ರೀತಿಯ ಬೆಲೆ ಅರಿವಾಗಿ ಮತ್ತೆ ಬಂದು ನನ್ನ ಸೇರಬಹುದು ಎಂಬ ಬಯಕೆ ನನ್ನ ನೊಂದ ಮನಸ್ಸನ್ನು ಸಮಾಧಾನಪಡಿಸುತ್ತಿತ್ತು. ಎರಡು ವರ್ಷಗಳ ಕಾಲ ನಾನು ಇದೇ ರೀತಿ ಅವಮಾನದ ಬದುಕನ್ನು ಬದುಕಿದೆ.

ಕಾಲೇಜಿನ ಕೊನೆಯ ದಿನಗಳ ಅದೊಂದು ದಿನ. ಮನಸ್ಸೇಕೋ ಭಾರವಾಗಿತ್ತು. ಸಂಜೆಯ ತಿಳಿಗಾಳಿಗಾಗಿ ಹಂಬಲಿಸುತ್ತಾ ಕ್ಯಾಂಪಸ್ಸನ್ನು ಸುತ್ತಲಿಕ್ಕೆ ಹೆಜ್ಜೆ ಹಾಕಿದ್ದೆ. ವಾತಾವರಣ ತುಂಬಾ ಅಹ್ಲಾದಕರವಾಗಿತ್ತು. ಸಂಜೆಯ ತಿಳಿಗಾಳಿ ಕೂಡ ಹೂವು, ಹಣ್ಣು, ತರಕಾರಿಯ ಪರಿಮಳದ ಸಂಗದಲ್ಲಿ ನೆಮ್ಮದಿ ಕಂಡಿತ್ತು. ಎಂದಿನಂತೆ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತಿದ್ದರೆ, ಹೂಗಳು ತಮ್ಮ ನಿತ್ಯ ಕರ್ಮದಂತೆ ಮುಗುಳ್ನಗುತ್ತಿದ್ದವು. ದುಂಬಿಗಳು ಝೇಂಕಾರ‍ದೊಂದಿಗೆ ಹೂಗಳನ್ನು ಮುತ್ತಿ ಮಕರಂದ ಹೀರುತ್ತಿದ್ದವು. ಎಲ್ಲವನ್ನು ಆಸ್ವಾದಿಸುತ್ತಾ ಹೆಜ್ಜೆ ಇಡುತ್ತಿದ್ದೆ. ಪಕ್ಕದ ತೊಗರಿ ತೋಟದ ಸಾಲುಗಳ ನಡುವೆ ಅದ್ಯಾರೋ ನಗುವ ಸದ್ದು ನನ್ನ ಕಿವಿಗಪ್ಪಳಿಸಿ ಎಚ್ಚರಿಸಿತ್ತು. ಅವರ ಮುಖಗಳು ನನಗೆ ಅಸ್ಪಷ್ಟವಾಗಿ ಕಂಡರೂ, ತುಸು ದೂರದಲ್ಲಿದ್ದ ಇಬ್ಬರು ಪ್ರೇಮಿಗಳು ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಾ, ತರ್ಲೆ ತುಂಟಾಟ ಮಾಡುತ್ತಾ, ಪ್ರೀತಿಯ ರಸನಿಮಿಷಗಳನ್ನು ಆಹ್ಲಾದಿಸುತ್ತಿದ್ದರು. ಕಾಣದ ಅವರ ಅಸ್ಪಷ್ಟ ಮುಖಗಳನ್ನು ಕಂಡ ನಾನು ಮುಗುಳ್ನಗುತ್ತಾ ಸುತ್ತಾಡತೊಡಗಿದೆ.

ಅದಾಗಲೇ ನಾ ಬಂದು ತುಂಬಾ ಹೊತ್ತಾಗಿತ್ತು. ಬಿಸಿಗಾಳಿಯೂ ತನ್ನ ಶಾಖವನ್ನೆಲ್ಲಾ ಕರಗಿಸಿ ಇಳಿಸಂಜೆಗೆ ತಂಪೆರೆಯುತ್ತಿದ್ದರೆ, ಸೂರ್ಯ ಅಸ್ತಂಗತನಾಗಲಿಕ್ಕೆ ತಯಾರಿ ನಡೆಸಿದ್ದ. ಆ ವಾತಾವರಣ ಮನಸ್ಸಿಗೆ ತುಂಬಾ ಮುದ ನೀಡುತ್ತಿತ್ತು. ಅದೇನೋ ಒಂದು ಧನಾತ್ಮಕ ಭಾವನೆ ಮೂಡಿಸುತ್ತಿತ್ತು. ಮಂದವಾಗಿ ಕತ್ತಲಾಗಿತ್ತು. ನನ್ನ ಹೆಜ್ಜೆಗಳು ಹಾಸ್ಟೆಲಿನತ್ತ ಸಾಗತೊಡಗಿದವು. ಆದರೆ ಆ ಪ್ರೇಮಿಗಳ ತುಂಟಾಟ ಇನ್ನೂ ಜಾರಿಯಲ್ಲಿತ್ತು. ನಾ ಅವರ ಸನಿಹ ಸಮೀಪಿಸುತ್ತಿದ್ದಂತೆ ವಿಚಿತ್ರ ಧ್ವನಿ ಕೇಳಿಸತೊಡಗಿತು. ಅವರಿಬ್ಬರ ಮುಖ ಕಾಣುತ್ತಲೇ ಯಾರೋ ಬಂದು ನನ್ನ ಮರ್ಮಾಂಗಕ್ಕೆ ಜಾಡಿಸಿ ಒದ್ದಂತಾಯಿತು. ನನ್ನ ಕಣ್ಣ ಹನಿ ಧರೆ ಸೇರಿತು. ಮನಸ್ಸು ಮರಗಟ್ಟಿ ಹೋಯಿತು. ಆ ಹುಡುಗಿ ಹುಡುಗನ ತುಟಿಗಳಿಗೆ ತನ್ನ ತುಟಿಗಳನ್ನೊತ್ತಿ ಚುಂಬಿಸುತ್ತಿದ್ದಳು. ಆ ಹುಡುಗ ಹುಡುಗಿಯ ದೇಹದ ಯಾವುದ್ಯಾವುದೋ ಭಾಗಗಳಲ್ಲೆಲ್ಲಾ ಸಾಬೂನು ಹಚ್ಚುತ್ತಿರುವಂತೆ ಕೈಯಾಡಿಸುತಿದ್ದ. ಆ ಹುಡುಗಿ ಬೇರೆ ಯಾರು ಅಲ್ಲ, ನನ್ನ ಪ್ರೀತಿಯನ್ನು, ನನ್ನ ಧರ್ಮದ ಕಾರಣಕ್ಕೆ ತಿರಸ್ಕರಿಸಿದ್ದಾ ಸುಶ್ಮಿತಾ! ಮಾತು ಬಾರದೆ ನನ್ನ ಗಂಟಲು ಕಟ್ಟಿ ಹೋಯಿತು. ಮೌನಿಯಾಗಿಯೇ ನಾ ಅಲ್ಲಿಂದ ಹೊರಟು ಬಂದೆ. ಈಗಲೂ ನನ್ನ ಹೃದಯದರಸಿಯಾದ ಅವಳ ಆ ದೃಶ್ಯವನ್ನು ನನ್ನ ಕಣ್ಣುಗಳು ಪ್ರತ್ಯಕ್ಷವಾಗಿ ಕಂಡರೂ, ಅದೇಕೋ ಮನಸ್ಸು ಒಪ್ಪಲು ನಿರಾಕರಿಸುತ್ತಿತ್ತು. ಅದೇನೋ ಹೇಳಲಾಗದ ಸಂಕಟ ತಾಂಡವವಾಡತೊಡಗಿತು. ಅವಳು ನನ್ನ ಪ್ರೀತಿ ನಿರಾಕರಿಸಿದ ಘಳಿಗೆಗಳನ್ನು ನೆನೆಸಿಕೊಂಡಾಗಲೇ ಕಣ್ಣುಗಳು ಒದ್ದೆಯಾಗುತ್ತಿದ್ದವು, ಇನ್ನು ಅವಳು ಬೇರೊಬ್ಬನ ಮೈಗೆ ಮೈ ತಾಗಿಕೊಂಡು ಚುಂಬಿಸುವ ದೃಶ್ಯ ನೆನೆಸಿಕೊಂಡಾಗಲಂತೂ ಕಣ್ಣ ಹನಿಗಳಿಗೆ ಬಿಡುವೇ ಇರಲಿಲ್ಲ. ಅವಳು ಬದಲಾಗುತ್ತಾಳೆ, ನನ್ನ ಪ್ರೀತಿಯನ್ನು ಒಂದಲ್ಲ ಒಂದು ದಿನ ಒಪ್ಪಿಕೊಳ್ಳುತ್ತಾಳೆ ಎಂಬ ಭ್ರಮೆಯಲ್ಲಿ ನನ್ನ ಹೃದಯ ಕೊರಗಿ ಸೊರಗಿ ಹೋಗತೊಡಗಿತು.

ಭಾವನೆಗಳು ಸತ್ತು ಹೋಗಿದ್ದಕ್ಕೆ ಮನಸ್ಸಿಗೆ ತುಂಬಾ ಘಾಸಿಯಾಗಿತ್ತು. ಹಗಲು ರಾತ್ರಿಗಳು ಒಂದೇ ಆಗಿತ್ತು. ಹಗಲಿನ ನಗುವ ನಾಟಕದಲ್ಲಿ ಕಣ್ಣೀರು ಹೊರ ಬರಲು ಪರಿತಪಿಸುತ್ತಿತ್ತು. ಅದಕ್ಕೆ ರಾತ್ರಿಯೇ ಆಸರೆಯಾಗಿತ್ತು. ದಿನನಿತ್ಯ ಹಾಸ್ಟೆಲಿನ ಮಾಳಿಗೆಯ ಮೇಲೆ ಮಲಗಿ ಅಳುತ್ತಿದ್ದಾಗ ನನ್ನ ವಿಫಲ ಪ್ರೇಮದ ಕಣ್ಣೀರಿನ ಭಾಷೆಗೆ ಚಂದ್ರನೇ ಸಾಕ್ಷಿಯಾಗಿದ್ದ. ಅದೆಷ್ಟೋ ದಿನ ನನ್ನ ಕಣ್ಣುಗಳು ಕಣ್ಣೀರಿಗೆ ಕಂದಾಯ ಕಟ್ಟಿದ್ದವು. ಹೀಗಿರುವಾಗ ಅದೊಂದು ಮುಂಜಾನೆ ದಿನಕರನ ನೋಡಿ ನನಗೆ ಒಂದು ವಿಷಯ ಅರ್ಥವಾಯಿತು. ಸಾಯಂಕಾಲ ಕತ್ತಲಿನೊಂದಿಗೆ ಮುಳುಗುವ ಸೂರ್ಯ ಮತ್ತೆ ಅದೇ ಪ್ರಖರತೆಯೊಂದಿಗೆ ಮರಳಿ ಬರುವಾಗ ನನ್ನಿಂದ ಯಾಕೆ ಇದು ಅಸಾಧ್ಯ? ಅವಳ ನೆನಪಲ್ಲೇ ನಾನೇಕೆ ಕೊರಗಬೇಕು? ಎಂಬ ಸಕಾರಾತ್ಮಕ ಪ್ರಶ್ನೆಗಳು ಪುಟಿದೇಳತೊಡಗಿದವು. ಇನ್ನೂ ಮುಂದೆ ಹೊಸ ಕನಸುಗಳ ಭರವಸೆಯಲ್ಲಿ ಹೊಸ ರೀತಿ ಜೀವಿಸಬೇಕೆಂಬ ಆಶಯ ಮೂಡಿತು. ಆ ದಿನವೇ ಅವಳ ಮೇಲಿನ ಪ್ರೀತಿಯ ಭಾವುಕತೆಗೆ ಶ್ರದ್ಧಾಂಜಲಿ ಹೇಳಿ ಮುಗಿಸಿದೆ. ನನ್ನ ಜೀವನದಿಂದ ಸುಶ್ಮಿತಾ ಬಹುತೇಕ ದೂರ ಹೋಗಿದ್ದಳು. ಇನ್ನೂ ಅವಳ ಹಾಗೂ ನನ್ನ ದಾರಿ ಬೇರೆ ಬೇರೆ. ಅವಳನ್ನು ಒಮ್ಮೆಗೆ ಮರೆಯಲು ನನಗೂ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯವಂತೂ ಹಿಡಿತು. ನನ್ನ ಹೃದಯ ಮೊದಲಿಗಿಂತಲೂ ಮತ್ತಷ್ಟು ಗಟ್ಟಿಯಾಯಿತು. ಗಟ್ಟಿಯಾಗಿ ರೂಪುಗೊಳ್ಳಲು ಅವಳು ನನ್ನ ಹೃದಯ ಒಡೆದು ಹೋಗಿರುವುದೇ ಕಾರಣ. ಆ ದಿನದಿಂದ ಹಗಲು-ರಾತ್ರಿ ನಿದ್ದೆಗೆಟ್ಟು ಓದಿದೆ. ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ನೌಕರಿಯನ್ನೂ ಗಿಟ್ಟಿಸಿಕೊಂಡೆ. ಇಲ್ಲಿ ಪ್ರೀತಿ-ಪ್ರೇಮ, ಕಷ್ಟ-ಸುಖ ಹಾಗೆಯೇ ಜೀವನ ಕೂಡ ತಾತ್ಕಾಲಿಕ. ಜೀವನದಲ್ಲಿ ಯಾರು ಬರುತ್ತಾರೋ ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಯಾರು ಹೋಗುತ್ತಾರೋ ಅವರನ್ನು ಖುಷಿಯಿಂದ ಬೀಳ್ಕೊಡುತ್ತಾ, ಯಾರ ಮೇಲೂ ನಮ್ಮ ಜೀವನ ನಿಂತಿಲ್ಲ, ಜೀವನ ನಿಂತ ನೀರಲ್ಲ ಎಂದುಕೊಂಡು ನನ್ನ ಬದುಕಿಗಾಗಿ, ನನ್ನ ಹೆತ್ತವರಿಗಾಗಿ, ಶ್ರಮಿಸತೊಡಗಿದೆ.

ಅಷ್ಟರಲ್ಲಿ ಯಾರೋ ಬಂದು ರೂಮಿನ ಬಾಗಿಲನ್ನು ಡಬ್ ಡಬ್ ಅಂತ ಬಡಿದರು. ಆ ಕರ್ಕಶ ಧ್ವನಿಯಿಂದ ಗಲಿಬಿಲಿಗೊಂಡವನಂತೆ ಎದ್ದು ಕುಳಿತೆ. ಕಾಲೇಜಿನ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಒಂದು ರಾತ್ರಿಯೆ ಕಳೆದುಹೋಗಿದ್ದು ಅನುಭವಕ್ಕೆ ಬಂತು. ಎದ್ದು ಹೋಗಿ ರೂಮಿನ ಬಾಗಿಲನ್ನು ತೆಗೆದಾಕ್ಷಣ "ಜಲ್ದಿ ರೆಡಿಯಾಗಲೇ, ಆಲ್ರೆಡಿ ಟೈಮು ಎಂಟಾಯ್ತು. ಇನ್ನೂ ಯಾವಾಗ ನನ್ನ ಮದುವೆ ಮಾಡಿಸ್ತೀ? ಎಂದು ನಸುನಕ್ಕು ಹೇಳಿದ ಶ್ರೀಧರ್ ನಿಲ್ಲದೇ ಅಲ್ಲಿಂದ ಕಾಲ್ಕಿತ್ತ. ರಾತ್ರಿ ಇಡೀ ಕಹಿ ನೆನಪುಗಳಲ್ಲೇ ತೇಲಾಡಿದ್ದಕ್ಕೆ ಮೈ ಮನ ಭಾರವೆನಿಸುತ್ತಿತ್ತು. ಆದ್ಯಾಗೂ, ಪ್ರಾಣ ಸ್ನೇಹಿತನ ಮದುವೆಯಲ್ಲಿ ನನ್ನ ಮುಖದ ಮಂದಹಾಸ ಕಳೆಗುಂದಬಾರದೆಂದು ನಿರ್ಧರಿಸಿದೆ. ಲಗುಬಗೆಯಿಂದ ಸ್ನಾನ ಮುಗಿಸಿ, ರೂಮಿನಿಂದ ಹೊರ ಬಿದ್ದು, ಮದುವೆ ಮಂಟಪ ಸೇರಿಕೊಂಡೆ. ಜೀವದ ಗೆಳೆಯ ಶ್ರೀಧರ್ ಹಾಗೂ ಗೆಳತಿ ಸುಶ್ಮಿತಾ ಶೃಂಗರಿಸಿಕೊಂಡು ವಧು-ವರರಾಗಿ ಮಂಟಪದಲ್ಲಿ ಕುಳಿತಿದ್ದರು. ಆ ಕ್ಷಣ ನನಗಾದ ಸಂತೋಷವನ್ನು ಇಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಬ್ಬರು ನನ್ನತ್ತ ನೋಡಿ ಮಂದಹಾಸ ಬೀರಿದಾಗಲಂತೂ ನನಗಾದ ಆನಂದ ವರ್ಣಿಸಲಸಾಧ್ಯ. ಅವರನ್ನೇ ನೋಡುತ್ತಿದ್ದ ನನ್ನ ಕಣ್ಣುಗಳು ಆಗೊಮ್ಮೆ-ಈಗೊಮ್ಮೆ ಸುಶ್ಮಿತಾಳಿಗಾಗಿ ಹುಡುಕಾಟ ನಡೆಸುತ್ತಿದ್ದವು. ನಾನು ಬಂದು ಕುಳಿತ ಸುಮಾರು ಕ್ಷಣಗಳವರೆಗೆ ಅವಳು ಕಣ್ಣಿಗೆ ಬಿದ್ದಿರಲಿಲ್ಲ. ನಾನು ಅತ್ತಿತ್ತ ಮುಖ ತಿರುಗಿಸುತ್ತಿರುವಾಗಲೇ ಅವಳು ಬಂದು ನನ್ನ ಪಕ್ಕದಲ್ಲಿ ಕೂತು ಮುಗುಳ್ನಕ್ಕಳು. ಅವಳನ್ನು ಕಂಡು, ನಾನು ನಸುನಕ್ಕೆ. ಅದು-ಇದೂ ಅಂತ ಪೂರ್ವಾಪರ ಕೇಳತೊಡಗಿದಳು. ನಾನು ಉತ್ತರಿಸುತ್ತಾ ಹೋದೆ. ಹಲವು ಗಂಟೆಗಳವರೆಗೆ ಇಬ್ಬರ ನಡುವೆ ನಾನ್ ಸ್ಟಾಪ್ ಮಾತಾಯಿತು. ಸ್ನೇಹಿತನ ಮದುವೆಯೂ ಆಯಿತು, ನವದಂಪತಿಗಳೊಂದಿಗೆ ಫೋಟೋ ತೆಗೆದುಕೊಂಡಿದ್ದು ಆಯ್ತು, ಮದುವೆ ಊಟವೂ ಮಾಡಿದ್ದಾಯ್ತು.

ಜನಜಂಗುಳಿ ಕಡಿಮೆಯಾಗಿ ಮದುವೆ ಮಂಟಪ ಶಾಂತವಾಗತೊಡಗಿತ್ತು. ಮಂದವಾಗಿ ಕತ್ತಲಾಗುತ್ತಿತ್ತು. ತಿರಸ್ಕಾರದ ಪ್ರೀತಿ ಮತ್ತೆ ಸ್ವೀಕಾರದ ಅನುಮೋದನೆ ಹೊತ್ತು ಬರುವುದೇನೋ ಎಂಬ ನಿರೀಕ್ಷೆ ಆ ಕ್ಷಣ ಸುಶ್ಮಿತಾಳಲ್ಲಿ ಚಿಗುರಿತ್ತೇನೋ ಅವಳು ಆಸೆಗಣ್ಣಿನಿಂದ ಆತಂಕಗೊಂಡು ನನ್ನೆಡೆಗೆ ನೋಡುತ್ತಿದ್ದಳು. ಅವಳತ್ತ ಹೆಜ್ಜೆ ಹಾಕಿದ ನಾನು, ಅವಳೆದುರು ನಿಂತುಕೊಂಡಾಗ ಗದ್ಗದಿತನಾಗಿದ್ದೆ. ಬಿಗಿದ ಗಂಟಲಿನಲ್ಲಿಯೇ "ಮುಂದಿನ ತಿಂಗಳು ನನ್ನದೂ ಮದುವೆ ಇದೆ. ಡೇಟ್ ಮತ್ತು ಲೊಕೇಶನ್ ಹೇಳ್ತೀನಿ. ಸಾಧ್ಯವಾದ್ರೆ ಬಾ" ಅಂತ ಹೇಳಿ ಕಣ್ಣೊರೆಸಿಕೊಂಡು ಮುಖ ತಿರುಗಿಸಿ ಬಂದು ಬಿಟ್ಟೆ. ಹೋಗುವ ದಾರಿಯಲ್ಲಿ ಒಮ್ಮೆ ಅವಳತ್ತ ಮುಖ ತಿರುಗಿಸಿದಾಗ, ಅವಳು ನಿಂತ ಜಾಗದಲ್ಲೇ ಕಣ್ಣೀರು ಇಡುತ್ತಿದ್ದಿದ್ದನ್ನು ಕಂಡು, ಒಂದಿಷ್ಟು ಕಣ್ಣೀರಿನ ದಾಸ್ತಾನು ಇರಲಿ ಎಂದುಕೊಂಡು ಸೀದಾ ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರಿನ ಬಸ್ ಹತ್ತಿ ಹೊರಟು ಬಿಟ್ಟೆ.

-ಉಮರ್ ಫಾರೂಕ್

© Copyright 2022, All Rights Reserved Kannada One News