Flash News:
ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನ

ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನ

Updated : 12.08.2022

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ (85) ಅವರು ಶುಕ್ರವಾರ ಮಧ್ಯಾಹ್ನ ನಿಧನರಾದರು. 

ಗಾಯತ್ರಿನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

1937ರ ಜುಲೈ 21ರಂದು ಮೈಸೂರಿನಲ್ಲಿ ಕೃಷ್ಣಯ್ಯ ಜನಿಸಿದ್ದರು. ತಂದೆ ಹುಚ್ಚಯ್ಯ ಹಾಗೂ ತಾಯಿ ಕೆಂಪಮ್ಮ.  ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಪದವಿ ಪಡೆದಿದ್ದ  ಕೃಷ್ಣಯ್ಯ, ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಸೇರಿದಂತೆ ಹಲವು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡಿದ್ದರು.

ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್.ಎಂ. ಹಡಪದ, ರೂಪಶಿಲ್ಪಿ ಬಸವಯ್ಯ, ಶೃಂಗಾರ ಲಹರಿ,  ಕಲಾ ದರ್ಶನ,  ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಕೃಷ್ಣಯ್ಯ ರಚಿಸಿದ್ದರು. ‘ಕುವೆಂಪು ಸಾಹಿತ್ಯ: ಚಿತ್ರ ಸಂಪುಟ’ ಕೃತಿಯನ್ನೂ ಸಂಪಾದಿಸಿದ್ದರು.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್, ಕನ್ನಡ ಪುಸ್ತಕ ಪ್ರಾಧಿಕಾರ, ತಂಜಾವೂರಿನ ದಕ್ಷಿಣ ಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘದಲ್ಲಿ ಕೃಷ್ಣಯ್ಯ ಸಕ್ರಿಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿಯೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದರು.

ಕೃಷ್ಣಯ್ಯ ಅವರ 'ಶೃಂಗಾರ ಲಹರಿ' ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, 'ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಸಂದಿತ್ತು. ಹಂಪಿ ವಿಶ್ವವಿದ್ಯಾಲಯವು ‘ನಾಡೋಜ’ ಪ್ರಶಸ್ತಿ ನೀಡಿತ್ತು. ಮಾಸ್ತಿ ಪ್ರಶಸ್ತಿಯೂ ಕೃಷ್ಣಯ್ಯ ಅವರಿಗೆ ಬಂದಿತ್ತು.

© Copyright 2022, All Rights Reserved Kannada One News